SIR ಫಾರಂ 7 ಸಲ್ಲಿಕೆ ಕೇಸ್: ಬಿಜೆಪಿ ಎಂಎಲ್ಎ ವಿರುದ್ಧದ ತನಿಖೆ ತಡೆಗೆ ಹೈಕೋರ್ಟ್ ನಕಾರ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಬಿಜೆಪಿ ಶಾಸಕರ ವಿರುದ್ಧದ ತನಿಖೆ ತಡೆಗೆ ಹೈಕೋರ್ಟ್ ನಕಾರ ಎತ್ತಿದೆ. ತನಿಖೆಗೆ ಸಹಕರಿಸಲು ಅರ್ಜಿದಾರರಿಗೆ ಹೈಕೋರ್ಟ್ ತಿಳಿಸಿದ್ದು, ಆದರೆ ಅರ್ಜಿದಾರರನ್ನು ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ.

ಮುಖ್ಯಾಂಶಗಳು
- ಎಸ್‌ಐಆರ್ ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಕೇಸ್
- ಜಯನಗರ ಶಾಸಕರ ವಿರುದ್ಧದ ತನಿಖೆ ತಡೆಗೆ ಹೈಕೋರ್ಟ್ ನಕಾರ
- ತನಿಖೆಗೆ ಸಹಕರಿಸಲು ಅರ್ಜಿದಾರರಿಗೆ ಸೂಚನೆ
ಬೆಂಗಳೂರು, ನವೆಂಬರ್ 20: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಯನಗರ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣದ ತನಿಖೆಗೆ ಸಹಕರಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ನಾಲ್ವರರಿಂದ ರಿಟ್ ಅರ್ಜಿ ಸಲ್ಲಿಕೆ
ಶಾಸಕ ಸಿಕೆ ರಾಮಮೂರ್ತಿ ಸೇರಿದಂತೆ ನಾಲ್ವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ತನಿಖೆಗೆ ತಡೆ ನೀಡದಂತೆ ಹೆಚ್ಚುವರಿ ಎಸ್‌ಪಿಪಿ ವಾದ
ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಬಾರದು ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಅನೂಪ್ ಕುಮಾರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಬಂಧಿಸದಂತೆ ಪೊಲೀಸರಿಗೆ ಸೂಚನೆ
ತನಿಖೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರನ್ನು ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಇದನ್ನೂ ಓದಿ: SIR ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಕೇಸ್: 12 ಜನರ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ
ಇನ್ನು ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ತನಿಖೆಗೆ ಸಹಕರಿಸುವಂತೆ ಅರ್ಜಿದಾರರಿಗೆ ಸೂಚಿಸಿರುವ ಹೈಕೋರ್ಟ್, ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಪ್ರಕರಣ ಹಿನ್ನೆಲೆ
ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ದೊಡ್ಡ ಪ್ರಮಾಣದಲ್ಲಿ ನಮೂನೆ-7 ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಂದಿರುವ ದೂರುಗಳ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಕೆಲವು ಪ್ರಕರಣಗಳಲ್ಲಿ ಮುಸ್ಲಿಂ ಸಮುದಾಯದ ಮತದಾರರನ್ನೇ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಮಲ್ಲೇಶ್ವರಂ ವ್ಯಾಪ್ತಿಯ ಎಂಟು ಮತಗಟ್ಟೆಗಳಲ್ಲಿ 778 ನಮೂನೆ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲೂ SIR ಫಾರ್ಮ್-7 ವಿವಾದ: ಮಲ್ಲೇಶ್ವರಂನಲ್ಲಿ ಅಕ್ರಮ ಆರೋಪ, ಇಬ್ಬರ ವಿರುದ್ಧ ಎಫ್‌ಐಆರ್
ಇನ್ನು ಜಯನಗರಕ್ಕೆ ಸಂಬಂಧಿಸಿದ ದೂರಿನಲ್ಲಿ ಒಟ್ಟು 5,698 ಅರ್ಜಿಗಳ ಪ್ರಸ್ತಾಪವಿದ್ದು, ಈ ಪೈಕಿ 4,327 ಅರ್ಜಿಗಳು ಗುರಪ್ಪನಪಾಳ್ಯ ವಾರ್ಡ್‌ಗೆ ಸೇರಿವೆ. ಇದರ ಜೊತೆಗೆ ಯಶವಂತಪುರದ 136 ಮತದಾರರು, ಕೊಡಗಿನ 64 ಮತದಾರರು ಹಾಗೂ ಮೈಸೂರಿನ ಮತದಾರರಿಗೆ ಸಂಬಂಧಿಸಿದ ಅರ್ಜಿಗಳ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಗಳ ಸಲ್ಲಿಕೆ ವೇಳೆ ಸುಳ್ಳು ಮಾಹಿತಿಯನ್ನು ನೀಡಿರುವುದು, ನಕಲಿ ಸಹಿಗಳನ್ನು ಬಳಸಿರುವುದು ಹಾಗೂ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿ ವಂಚನೆ ಎಸಗಿರುವುದು ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂಬುದು ದೂರುದಾರರ ಆರೋಪವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




