ಬೆಂಗಳೂರಿನಲ್ಲೂ SIR ಫಾರ್ಮ್-7 ವಿವಾದ: ಮಲ್ಲೇಶ್ವರಂನಲ್ಲಿ ಅಕ್ರಮ ಆರೋಪ, ಇಬ್ಬರ ವಿರುದ್ಧ ಎಫ್‌ಐಆರ್
ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಮಲ್ಲೇಶ್ವರಂನ ವಾರ್ಡ್ ನಂ. 64ರಲ್ಲಿ 778 ಸುಳ್ಳು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಅಕ್ರಮವೆಸಗಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ದೂರಿನನ್ವಯ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು
- SIR ವೇಳೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ
- ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
- ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ದೂರಿನನ್ವಯ FIR
ಬೆಂಗಳೂರು, ಅಕ್ಟೋಬರ್ 04: ರಾಜ್ಯ ರಾಜಕಾರಣದಲ್ಲಿ ಇದೀಗ ವೋಟರ್ ಲಿಸ್ಟ್ ಡಿಲೀಟ್ ಜಟಾಪಟಿ ತಾರಕಕ್ಕೇರಿದೆ. ಎಸ್ಐಆರ್ ವೇಳೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ಹಿನ್ನೆಲೆ ರಾಜ್ಯದಲ್ಲಿ ಎಫ್ಐಆರ್ಗಳು ದಾಖಲಾಗುತ್ತಿವೆ. ಇದೀಗ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ದೂರಿನನ್ವಯ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಸಂತಲಕ್ಷ್ಮೀ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು
ಮಲ್ಲೇಶ್ವರಂ ಕ್ಷೇತ್ರದ ವಾರ್ಡ್ ನಂ.64ರಲ್ಲಿ ಅಕ್ರಮ ಎಸಗಿರುವ ಆರೋಪ ಹಿನ್ನೆಲೆ ಬೂತ್ ಏಜೆಂಟ್ ವಸಂತಲಕ್ಷ್ಮೀ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮತದಾರರು ಕ್ಷೇತ್ರದಲ್ಲಿ ಇದ್ದರೂ ಗೈರು ಹಾಜರಿ ಅಥವಾ ಶಾಶ್ವತ ಸ್ಥಳಾಂತರ ಎಂದು ಫಾರ್ಮ್-7 ಸಲ್ಲಿಸಲಾಗಿದೆ. 64ರಲ್ಲಿನ ಮತಗಟ್ಟೆ ನಂಬರ್ 157ರಲ್ಲಿ 122 ಅರ್ಜಿಗಳು, 155ರಲ್ಲಿ 233 ಅರ್ಜಿಗಳು, 156ರಲ್ಲಿ 28, 158ರಲ್ಲಿ 5, 154ರಲ್ಲಿ 47, 205ರಲ್ಲಿ 171, 203ರಲ್ಲಿ 88, 153ರಲ್ಲಿ 14 ಅರ್ಜಿಗಳು ಹೀಗೆ ಒಟ್ಟು 778 ಅರ್ಜಿಗಳು ಮತದಾರರು ಮತಕ್ಷೇತ್ರಗಳಲ್ಲಿ ವಾಸವಿದ್ದರೂ ಸಹಿತ ಅವರನ್ನು ಗೈರುಹಾಜರಿದ್ದಾರೆಂದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆಂದು ಫಾರ್ಮ್-7ರನ್ನು ಭರ್ತಿ ಮಾಡಿ ಸುಳ್ಳು ದಾಖಲೆಯನ್ನು ಸಲ್ಲಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿ ಅಕ್ರಮ
ಅಷ್ಟೇ ಅಲ್ಲದೆ ಬಿಜೆಪಿ ಹಾಗೂ ಆರ್ಎಸ್ಎಸ್ ಜೊತೆಗೆ ಸಂಬಂಧ ಇರುವ ವ್ಯಕ್ತಿಗಳು, ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಕಾನೂನುಬದ್ಧ ಮತದಾರರನ್ನು ಮತದಾರರ ಪಟ್ಟಿಯಿಂದ ವಂಚಿಸುವ ದುರುದ್ದೇಶದಿಂದ ಒಳಸಂಚು ಮಾಡಿ ಗಣನೀಯ ಸಂಖ್ಯೆಯ ಅರ್ಜಿಗಳನ್ನು ಬಿಜೆಪಿ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಬೂತ್ ಮಟ್ಟದ ಏಜೆಂಟ್ ಎಂದು ಪ್ರತಿನಿಧಿಸುವ ಜಿ.ಎಸ್. ವಸಂತಲಕ್ಷ್ಮೀ ಹೆಸರಿನಲ್ಲಿ ಹೆಸರಲ್ಲಿ ಫಾರ್ಮ್-7 ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ: ಹಿಂದೂಗಳಲ್ಲ, ಮುಸ್ಲಿಮರೇ ಬೋಗಸ್ ವೋಟು ಹಾಕ್ತಾರೆ: ಯತ್ನಾಳ್ ಗಂಭೀರ ಆರೋಪ
ಇನ್ನು ಫಾರ್ಮ್ಗಳಲ್ಲಿ ಇರುವ ಸಹಿ ಪರಸ್ಪರ ಭಿನ್ನವಾಗಿದ್ದು, ಗಮನಾರ್ಹ ವ್ಯತ್ಯಾಸವಿದೆ. ಅವರ ಹೆಸರಿನಲ್ಲಿ ಯಾರೋ ಸಹಿಯನ್ನು ಪೋರ್ಜರಿ ಮಾಡಿ ಸಲ್ಲಿಸಿರುವ ಸಾಧ್ಯತೆಗಳಿವೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಸದ್ಯ ಎಫ್‌ಐಆರ್ ದಾಖಲಿಸಿರುವ ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




