KSRTC: ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಆದೇಶ

|

Updated on: Mar 17, 2023 | 9:36 PM

2023ರ ಮಾರ್ಚ್ 1ರಿಂದ ಅನ್ವಯವಾಗುವಂತೆ ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ ಸೆಕ್ಷನ್​ 34/1ರ ಅನ್ವಯ ಸಾರಿಗೆ ನೌಕರರ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರದಿಂದ ಆದೇಶಿಸಲಾಗಿದೆ.

KSRTC: ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಆದೇಶ
ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಆದೇಶ
Follow us on

ಬೆಂಗಳೂರು: ಸಾರಿಗೆ ನೌಕರರ (Karnataka Transport Employees) ವೇತನ ಶೇಕಡಾ 15ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ (Karnataka Govt) ಆದೇಶ ಹೊರಡಿಸಿದೆ. ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ ಸೆಕ್ಷನ್​ 34/1ರ ಅನ್ವಯ ಸಾರಿಗೆ ನೌಕರರ ವೇತನ ಪರಿಷ್ಕರಿಸಿ (Wage revision) ಮಾರ್ಚ್ 1 2023 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದಿಂದ ಆದೇಶಿಸಲಾಗಿದೆ. 4 ನಿಗಮದ ನೌಕರರಿಗೂ ಅನ್ವಯವಾಗುವಂತೆ ಕೆಲವೊಂದು ನಿಬಂಧನೆಗೊಳಪಡಿಸಿ ಆದೇಶಿಸಲಾಗಿದೆ. ಅರಿಯರ್ಸ್ ಹಾಗೂ ಇತರೆ ಬಾಕಿ ಇತ್ಯರ್ಥಕ್ಕೆ ಒಂದು ತಿಂಗಳ ಕಾಲಮಿತಿ ಕೇಳಿದ್ದು, ಕಾರ್ಮಿಕ ಸಂಘಟನೆ ಹಾಗೂ ಆರ್ಥಿಕ ಇಲಾಖೆ ಜೊತೆಗೆ ಚರ್ಚಿಸಿ ವರದಿ ಸಲ್ಲಿಸಲು ನಾಲ್ಕು ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿದ ಏಕಸದಸ್ಯ ಸಮಿತಿಗೆ ಸೂಚನೆ ನೀಡಲಾಗಿದೆ.

ಈ ಹಿಂದೆ ಟ್ವೀಟ್ ಮಾಡಿದ್ದ ಸಾರಿಗೆ ಸಚಿವ ಬಿ.ಶ್ರೀರಾಮುಲು 15% ಶೇಕಡಾ ಸಂಬಳ ಏರಿಕೆ ಬಗ್ಗೆ ತಿಳಿಸಿದ್ದರು. ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15% ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆ ನಮ್ಮ ಸರ್ಕಾರ ಮಾಡಿದೆ ಎಂದಿದ್ದರು. ಆದರೆ ಇದಕ್ಕೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಒಪ್ಪಿಗೆ ಸೂಚಿಸಿರಲಿಲ್ಲ. ಇದೆಲ್ಲದರ ನಡುವೆ ಸಾರಿಗೆ ನೌಕರರ ವೇತನ ಶೇ 15ರಷ್ಟು ಹೆಚ್ಚಳ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಕೆಲವೊಂದು ನಿಬಂಧನೆಗಳು ಕೂಡ ಒಳಗೊಂಡಿದ್ದು, ಅವುಗಳು ಹೀಗಿವೆ:

  1. ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳು, ನೌಕರರು, ಪೂರ್ವ ಕಿಂಕೋ ಅಧಿಕಾರಿಗಳು 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15% ಹೆಚ್ಚಿಸಿ ಅದರಂತೆ ವೇತನ ಶ್ರೇಣಿಯನ್ನು ಪರಿಷ್ಕರಿಸಬೇಕು.
  2. ಪೂರ್ವ ಕಿಂಕೋ ನೌಕರರೂ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಅರ್ಹ ನೌಕರರ ಉನ್ನತ ವೇತನ ಶ್ರೇಣಿಗಳನ್ನು ಮತ್ತು ಮಧ್ಯಂತರ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳನ್ನು ಶೇ.15 ಹೆಚ್ಚಳ ಮಾಡಿ ಪರಿಷ್ಕರಿಸಬೇಕು.
  3. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿಯು 4 ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಜೊತೆಗೆ ಸರ್ಕಾರದಿಂದ ಎಷ್ಟು ಪ್ರಮಾಣದ ಅನುದಾನದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಸಂಭಂದಪಟ್ಟವರೊಂದಿಗೆ ಚರ್ಚಿಸಿ ಯಾವ ದಿನಾಂಕದಿಂದ ವೇತನ ಮತ್ತಿತರ ಬಾಕಿಗಳನ್ನ ಪಾವತಿಸಬೇಕೆಂದು ಒಂದು ತಿಂಗಳ ಅವಧಿಯಲ್ಲಿ ತಿಳಿಸಿಬೇಕು.

ಇದನ್ನೂ ಓದಿ: Viral News: ಆಕೆ ನೀಡಿದ ಸೇವೆ, ಪ್ರೀತಿ, ಶಕ್ತಿಗಾಗಿ 1.75 ಕೋಟಿ ರೂ. ವಿಚ್ಛೇದನ ಪರಿಹಾರ ನೀಡಿ, ಕೋರ್ಟ್ ಖಡಕ್ ಆದೇಶ

ಜನರಿಗೆ ಯಾವುದೇ ವ್ಯತ್ಯಯ ಆಗಲು ಬಿಡುವುದು ಬೇಡ. ಮುಂದೆ ಇನ್ನಷ್ಟು ಒಳ್ಳೆಯ ಕಾಲ ಬರಲಿದೆ ಅಂತ ಹೇಳುತ್ತೇನೆ. ಸಾರಿಗೆ ನೌಕರರಿಗೆ ವೇತನ ಕಾಲ ಕಾಲಕ್ಕೆ ಪರಿಷ್ಕರಣೆಯಾಗುತ್ತಿದೆ ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದರು. ಅಲ್ಲದೆ, ಈ ಹಿಂದೆ ಕಾಲಕಾಲಕ್ಕೆ ನಡೆದ ವೇತನ ಪರಿಷ್ಕರಣೆಗಳ ಬಗ್ಗೆ ಮಾಹಿತಿಯೂ ಹಂಚಿಕೊಂಡಿದ್ದರು. 1996 ರಲ್ಲಿ ಶೇ 11ರಷ್ಟು, 2000 ರಲ್ಲಿ ಶೇ. 10 ರಷ್ಟು, 2004ರಲ್ಲಿ ಶೇ. 5 ರಷ್ಟು, 2008 ರಲ್ಲಿ ಶೇ. 6ರಷ್ಟು, 2012 ರಲ್ಲಿ ಶೇ.10ರಷ್ಟು, 2016 ರಲ್ಲಿ ಶೇ. 12.50ರಷ್ಟು, ಪ್ರಸ್ತುತ (2023) ಶೇ. 15ರಷ್ಟು ವೇತನ ಹೆಚ್ಚಳವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Fri, 17 March 23