ಉಪ್ಪು ಸಕ್ಕರೆ ಬಳಿಕ ಈಗ ಅಡುಗೆ ಎಣ್ಣೆ ಸರದಿ: ಮರುಬಳಕೆಯ ಎಣ್ಣೆಯಿಂದ ಅಪಾಯ ತಡೆಯಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್!
ಉಪ್ಪು ಮತ್ತು ಸಕ್ಕರೆಯ ನಂತರ ಇದೀಗ ಅಡುಗೆ ಎಣ್ಣೆಯ ಮರುಬಳಕೆಗೆ ತಡೆ ಒಡ್ಡಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ರೂಪಿಸುತ್ತಿದೆ. 3 ಬಾರಿಗಿಂತ ಹೆಚ್ಚು ಬಿಸಿ ಮಾಡಿದ ಎಣ್ಣೆ ಬಳಕೆಯಿಂದ ಕ್ಯಾನ್ಸರ್ ಹಾಗೂ ಹೃದಯ ಕಾಯಿಲೆಯ ಅಪಾಯವಿದೆ. ಮನೆ ಹಾಗೂ ಹೋಟೆಲ್‌ಗಳಲ್ಲಿ ಉಳಿಯುವ ಬಳಸಿದ ಎಣ್ಣೆಯನ್ನು ಸಂಗ್ರಹಿಸಿ ಬಯೋಡೀಸೆಲ್ ಉತ್ಪಾದನೆಗೆ ಬಳಸುವ 'RUCO' ಯೋಜನೆ ಜಾರಿಗೆ ಬರಲಿದೆ.

ಮುಖ್ಯಾಂಶಗಳು
- ಉಪ್ಪು, ಸಕ್ಕರೆ ಬಳಿಕ ಅಡುಗೆ ಎಣ್ಣೆ ಬಳಕೆಗೆ ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿ.
- ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿದ ಎಣ್ಣೆ ಬಳಸುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ.
- ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಿ ಬಯೋಡೀಸೆಲ್ ಉತ್ಪಾದನೆಗೆ ನೀಡಲು ಸರ್ಕಾರದ ಮಾಸ್ಟರ್ ಪ್ಲಾನ್.
ಬೆಂಗಳೂರು, ಸೆಪ್ಟೆಂಬರ್ 30: ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆಯ ಬಳಕೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಜಂಟಿಯಾಗಿ ಹೊಸ ಮಾರ್ಗಸೂಚಿಯನ್ನು ರೂಪಿಸುತ್ತಿವೆ. ಉಪ್ಪು ಮತ್ತು ಸಕ್ಕರೆಯ ಮಿತಿಮೀರಿದ ಬಳಕೆಯ ತಡೆ ನಂತರ, ಇದೀಗ ಅಡುಗೆ ಎಣ್ಣೆಯ ಮರುಬಳಕೆಯಿಂದ ಆರೋಗ್ಯದ ಮೇಲಾಗುವ ಭೀಕರ ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಹೋಟೆಲ್, ಬೇಕರಿ ಹಾಗೂ ಮನೆಗಳಲ್ಲಿ ಒಂದೇ ಎಣ್ಣೆಯನ್ನು ಪದೇಪದೇ ಕರಿಯಲು ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಹೊಸ ಮಾರ್ಗಸೂಚಿ ರೂಪಿಸುತ್ತಿದೆ.
ಹೊಸ ಮಾರ್ಗಸೂಚಿಯಲ್ಲೇನಿದೆ?
ಹೊಸ ಮಾರ್ಗಸೂಚಿಯ ಪ್ರಕಾರ, ಯಾವುದೇ ಕಾರಣಕ್ಕೂ ಅಡುಗೆ ಎಣ್ಣೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ಬಳಸಬಾರದು. ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಅದರಲ್ಲಿ ‘ಟೋಟಲ್ ಪೋಲಾರ್ ಕಾಂಪೌಂಡ್ಸ್’ (TPC) ಪ್ರಮಾಣ ಹೆಚ್ಚಾಗುತ್ತದೆ. TPC ಪ್ರಮಾಣ ಶೇಕಡಾ 25ಕ್ಕಿಂತ ಹೆಚ್ಚಾದರೆ ಅಂತಹ ಎಣ್ಣೆ ಮಾನವ ಬಳಕೆಗೆ ತೀವ್ರ ಅಪಾಯಕಾರಿಯಾಗಿದ್ದು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೊಲೆಸ್ಟ್ರಾಲ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.
ಬಳಸಿದ ಎಣ್ಣೆಯ ನಿರ್ವಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಆದ್ಯತೆ
ಎಣ್ಣೆಯಲ್ಲಿ ನೀಲಿ-ಬೂದು ಬಣ್ಣದ ಹೊಗೆ ಅಥವಾ ನೊರೆ ಕಾಣಿಸಿಕೊಂಡರೆ, ಹಾಗೂ ಎಣ್ಣೆ ಕಪ್ಪಾಗಿ ಅದರ ಗಾಢತೆ ಬದಲಾದರೆ ಅದನ್ನು ತಕ್ಷಣವೇ ತ್ಯಜಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಒಮ್ಮೆ ಬಳಸಿದ ಎಣ್ಣೆಯನ್ನು ಕೇವಲ 1-2 ದಿನಗಳಲ್ಲಿ ಮುಗಿಸಬೇಕು ಹೊರತು ದೀರ್ಘಕಾಲ ಸಂಗ್ರಹಿಸಿಡಬಾರದು. ಇನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಬೇಕರಿಗಳು ಬಳಸಿದ ಎಣ್ಣೆಯ ಸೂಕ್ತ ನಿರ್ವಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮುಂದಿನ ದಿನಗಳಲ್ಲಿ ತಪಾಸಣೆಗಾಗಿ ಎಣ್ಣೆಯ ಬಳಕೆಯ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯವಾಗುವ ಸಾಧ್ಯತೆಯಿದೆ.
ಬಳಸಿದ ಎಣ್ಣೆಯಿಂದ ‘ಬಯೋಡೀಸೆಲ್’ ಉತ್ಪಾದನೆ
ಬಳಸಿದ ಅಡುಗೆ ಎಣ್ಣೆಯನ್ನು ಚರಂಡಿ ಅಥವಾ ಡ್ರೈನೇಜ್‌ಗೆ ಸುರಿದು ಪರಿಸರ ಹಾಳು ಮಾಡುವುದನ್ನು ತಡೆಯಲು RUCO (Repurpose Used Cooking Oil) ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಹೋಟೆಲ್‌ಗಳು ಮಾತ್ರವಲ್ಲದೆ, ಮನೆಗಳಲ್ಲಿ ಉಳಿಯುವ ಬಳಸಿದ ಎಣ್ಣೆಯನ್ನು ವಾರ್ಡ್ ಮಟ್ಟದಲ್ಲಿ ಸಂಗ್ರಹಿಸಿ ಬಯೋಗ್ಯಾಸ್ ಹಾಗೂ ಬಯೋಡೀಸೆಲ್ ಕಂಪನಿಗಳಿಗೆ ತಲುಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
- ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ತಯಾರಕರು ಬಳಸಿದ ಎಣ್ಣೆಯನ್ನು ಅಧಿಕೃತ RUCO ಸಂಗ್ರಹಾ ಸಂಸ್ಥೆಗಳಿಗೆ ನೀಡಬೇಕು.
- ಗೃಹಿಣಿಯರು ಮನೆಯಲ್ಲಿ ಉಳಿಯುವ ಎಣ್ಣೆಯನ್ನು ಚರಂಡಿಗೆ ಹಾಕದೆ, ಸ್ಥಳೀಯ ವಾರ್ಡ್ ಮಟ್ಟದ ಸಂಗ್ರಹಣಾ ವ್ಯವಸ್ಥೆ ಮೂಲಕ ಬಯೋಗ್ಯಾಸ್/ಬಯೋಫ್ಯುಯೆಲ್ ಕಂಪನಿಗಳಿಗೆ ತಲುಪಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ.
- ಹೋಟೆಲ್‌ಗಳಲ್ಲಿ ಎಣ್ಣೆ ಎಷ್ಟು ಬಾರಿ ಮರುಬಳಕೆಯಾಗಿದೆ ಹಾಗೂ ಹೇಗೆ ವಿಲೇವಾರಿ ಮಾಡಲಾಗುತ್ತಿದೆ ಎಂಬುದರ ದಾಖಲೆ ನಿರ್ವಹಿಸುವುದು ಕಡ್ಡಾಯವಾಗಲಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ನಡೆಯಲಿದೆ.
ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದಲ್ಲಿ ಈಗಾಗಲೇ 2024–25 ಮತ್ತು 2025–26ನೇ ಸಾಲಿನಲ್ಲಿ ಬರೋಬ್ಬರಿ 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಪುನರ್ಬಳಕೆಗೆ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




