AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಕರ್ನಾಟಕ ಹೈಕೋರ್ಟ್​

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ತನಿಖೆ ವಿಳಂಬವಾದರೂ ಆರೋಪಿಗಳಿಗೆ ಶಾಸನಬದ್ಧ ಜಾಮೀನು ಲಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬಿಎನ್‌ಎಸ್‌ಎಸ್ 193(2) ರ ಅಡಿಯಲ್ಲಿ ಈ ರಕ್ಷಣೆಗೆ ಆರೋಪಿಗಳು ಅರ್ಹರಲ್ಲ. ಅಪೂರ್ಣ ಚಾರ್ಜ್‌ಶೀಟ್ ಕೂಡ ಜಾಮೀನಿಗೆ ಕಾರಣವಾಗುವುದಿಲ್ಲ. ಪೋಕ್ಸೋ ಕಾನೂನು ಸಂತ್ರಸ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ ಹೊರತು, ಆರೋಪಿಗಳಿಗೆ ಲಾಭವಾಗಲಿಕ್ಕಲ್ಲ ಎಂದು ನ್ಯಾಯಾಲಯ ಹೇಳಿದೆ.

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು 'ಡಿಫಾಲ್ಟ್ ಜಾಮೀನು': ಕರ್ನಾಟಕ ಹೈಕೋರ್ಟ್​
ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು 'ಡಿಫಾಲ್ಟ್ ಜಾಮೀನು': ಹೈ ಕೋರ್ಟ್​ Image Credit source: istockphoto.com
ಭಾವನಾ ಹೆಗಡೆ
|

Updated on:Apr 17, 2026 | 1:19 PM

Share

ಬೆಂಗಳೂರು, ಏಪ್ರಿಲ್ 17: ಬಿಎನ್‌ಎಸ್‌ಎಸ್‌ನ ಸೆಕ್ಷನ್ 193(2) ರ ಪ್ರಕಾರ, ಪೋಕ್ಸೊ (POCSO) ಕಾಯ್ದೆಯಡಿಯಲ್ಲಿ ಆರೋಪಿಯು 60 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಶಾಸನಬದ್ಧ ಜಾಮೀನಿಗೆ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನುಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳ್ಳದ ಕಾರಣ ಗೋವಿಂದ ಎಂಬವರು ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ.

ಕೋರ್ಟ್​ ಹೇಳಿದ್ದೇನು?

ಪೋಕ್ಸೋ (POCSO) ಕಾಯಿದೆಯಂತಹ ವಿಶೇಷ ಕಾನೂನುಗಳ ಅಡಿಯಲ್ಲಿನ ಕಾಲಮಿತಿಗಳು ಸಂತ್ರಸ್ತ-ಕೇಂದ್ರಿತವಾಗಿವೆ. ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆಯೇ ಹೊರತು, ಆರೋಪಿಗಳು ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡಲು ಅಲ್ಲ ಎಂದು ನ್ಯಾಯಶಾಸ್ತ್ರವು ನಿರಂತರವಾಗಿ ಒತ್ತಿಹೇಳುತ್ತದೆ. ಶಾಸನಬದ್ಧ ಜಾಮೀನು ಪಡೆಯಲು ಅರ್ಜಿದಾರರು ಬಿಎನ್‌ಎಸ್‌ಎಸ್ (BNSS) ನ ಕಲಂ 193(2) ರ ಸಹಾಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಎಫ್‌ಎಸ್‌ಎಲ್ ಅಥವಾ ಸಿಡಿಆರ್‌ನ ವರದಿಗಳಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸುವುದರಿಂದ ಕಾನೂನಿನ ದೃಷ್ಟಿಯಲ್ಲಿ ಅಂತಿಮ ವರದಿಯಾಗಿ ಆರೋಪಿಗೆ ಶಾಸನಬದ್ಧ ಜಾಮೀನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು 60 ದಿನಗಳ ಕಾಲಮಿತಿ ಮತ್ತು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ಇರುವ ಪ್ರಕರಣಗಳಲ್ಲಿ 90 ದಿನಗಳ ಕಾಲಮಿತಿ ಇರುವುದನ್ನು ಉಲ್ಲೇಖಿಸಿದ ನ್ಯಾಯಾಲಯವು, ಗೋವಿಂದ ಎನ್ನುವವರ ಪ್ರಕರಣದಲ್ಲಿ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗಿರುವುದರಿಂದ ಮತ್ತು ಅದು ಅಪೂರ್ಣವಾಗಿದೆ ಎಂಬ ಅಂಶವು ‘ಡಿಫಾಲ್ಟ್ ಜಾಮೀನು’ ಪಡೆಯಲು ಕಾನೂನುಬದ್ಧವಾಗಿ ಯಾವುದೇ ಪರಿಣಾಮ ಬೀರದ ಕಾರಣ ಸದರಿ ಆಧಾರದ ಮೇಲೆ ಅರ್ಜಿದಾರರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದೇ ಪ್ರಕರಣದ ಹಿನ್ನೆಲೆ ಈ ಆದೇಶ

ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಎರಡು ಸಂದರ್ಭಗಳಲ್ಲಿ ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ ಪೋಕ್ಸೋ ಪ್ರಕರಣಗಳನ್ನು ತಕ್ಷಣ ವರದಿ ಮಾಡಬೇಕು; ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ!

ದೂರುದಾರರ ಮಗಳು ಸುಮಾರು ಒಂದು ವರ್ಷ ಆಸ್ಪತ್ರೆಯಲ್ಲಿ ಮನೆಗೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಆರೋಪಿಯು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಎಂದು ಆರೋಪಿಸಲಾಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಆಕೆ ಅಪ್ರಾಪ್ತೆ ಎಂದು ತಿಳಿದಿದ್ದೂ ಸಹ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ನಂತರ ಅಕ್ಟೋಬರ್ 2025 ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಆಕೆ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಆದ್ದರಿಂದ, ದೂರಿನ ನಂತರ ಆರೋಪಿಯನ್ನು ಬಂಧಿಸಿ 2025 ರ ಅಕ್ಟೋಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Fri, 17 April 26

Follow Us