ಕನಿಷ್ಠ ತನಿಖಾ ವಿಧಾನದ ABCಗಳನ್ನೂ ACB ಪಾಲಿಸುತ್ತಿಲ್ಲ ಎಂದು ಹೈಕೋರ್ಟ್ ತೀವ್ರ ತರಾಟೆ
ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಲೋಪವನ್ನು ನೋಡಿ ಕಣ್ಮುಚ್ಚಿ ಕೂರಲಾಗುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಅಸಮಾಧಾನ ಹೊರ ಹಾಕಿದೆ.
ಬೆಂಗಳೂರು: ಎಸಿಬಿ ಮೇಲೆ ಹೈಕೋರ್ಟ್(Karnataka High Court) ಗರಂ ಆಗಿದೆ. ತನಿಖಾ ಪ್ರಕ್ರಿಯೆಯ ಎಬಿಸಿಯನ್ನೂ ಎಸಿಬಿ(ACB) ಪಾಲಿಸುತ್ತಿಲ್ಲ ಎಂದು ಎಸಿಬಿ ತನಿಖಾ ವಿಧಾನಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೆಪಿಟಿಸಿಎಲ್ ಇಇ ಕುಮಾರ್‌ನಾಯ್ಕ್ ವಿರುದ್ಧದ ಆದಾಯ ಮೀರಿ ಆಸ್ತಿ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ತರಾತುರಿಯಲ್ಲಿ ಮೂಲ ವರದಿಯನ್ನು ತಯಾರಿಸಲಾಗಿದೆ. ಒಂದೇ ದಿನ ಮೂಲ ವರದಿ ಹಾಗೂ FIR ಸಿದ್ದಪಡಿಸಲಾಗಿದೆ. ಅಧಿಕಾರಿಯ ಸೇವಾವಧಿಯ ವಿವರವನ್ನೂ ನಮೂದಿಸಿಲ್ಲ. ಎಫ್ಐಆರ್‌ಗೆ ಮೊದಲು ವಾರ್ಷಿಕ ಸಂಬಳವನ್ನೂ ಪರಿಶೀಲಿಸಿಲ್ಲ. ಆಸ್ತಿಯ ವಾರ್ಷಿಕ ವರದಿಯನ್ನೂ ಪರಾಮರ್ಶಿಸಿಲ್ಲ. ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಲೋಪವನ್ನು ನೋಡಿ ಕಣ್ಮುಚ್ಚಿ ಕೂರಲಾಗುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಅಸಮಾಧಾನ ಹೊರ ಹಾಕಿದೆ.
ಹಿನ್ನೆಲೆ ಆರ್ ಟಿಒ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ವಿರುದ್ಧ ಎಸಿಬಿ ದಾಳಿ ನಡೆಸಿದ ವೇಳೆ ಮುನಾವರ್ ಪಾಷಾ ಎಂಬುವರ ಮನೆಯನ್ನೂ ಶೋಧಿಸಲಾಗಿತ್ತು. ಈ ವೇಳೆ ಸಿಕ್ಕ ಮಾಹಿತಿ ಆಧರಿಸಿ ಕೆಪಿಟಿಸಿಎಲ್ ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕೆ.ಆರ್.ಕುಮಾರ್ ನಾಯ್ಕ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ದಾಖಲಿಸಲಾಗಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಗಳಲ್ಲಿ ಮೊದಲು ಮೂಲ ವರದಿ ಅಥವಾ source report ತಯಾರಿಸಬೇಕು. ನಂತರ ಅದನ್ನು ಆಧರಿಸಿ ಎಫ್ಐಆರ್ ದಾಖಲಿಸಬೇಕು. ಆದರೆ ಎಸಿಬಿ ಸಮರ್ಪಕ ಮೂಲ ವರದಿ ತಯಾರಿಸದೇ ಎಫ್ಐಆರ್ ದಾಖಲಿಸಿದ್ದರು. 16.3.2022 ರಂದೇ ಮೂಲ ವರದಿ ಹಾಗೂ ಎಫ್ಐಆರ್ ದಾಖಲಿಸಿತ್ತು. ಎಸಿಬಿ ಕ್ರಮ ಕಾನೂನುಬಾಹಿರವೆಂದು ಕೆ.ಆರ್.ಕುಮಾರ್ ನಾಯ್ಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಾದಿಸಿದ ವಕೀಲ ಕೆ.ಸತೀಶ್ ಕಾನೂನು ಬಾಹಿರವಾಗಿ ಎಸಿಬಿ ತನಿಖಾ ಪ್ರಕ್ರಿಯೆ ನಡೆಸಿದೆ ಎಂದು ವಾದಿಸಿದ್ದರು. ಎಫ್ಐಆರ್ ಗೂ ಮೊದಲು ಎಸಿಬಿ ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ, ಮೂಲ ವರದಿಯನ್ನೂ ತಯಾರಿಸಿಲ್ಲ. ಆದರೂ ಎಸಿಬಿ ದಾಳಿ ನಡೆಸಿ ಮಾನಸಿಕ ಹಿಂಸೆ ನೀಡಲಾಗಿದೆ ವೆಂದು ವಾದಿಸಿದ್ದರು. ವಾದ ಪರಿಗಣಿಸಿದ ಹೈಕೋರ್ಟ್ ಎಸಿಬಿ ದಾಖಲಿಸಿದ್ದ ಪ್ರಕರಣ ರದ್ದುಪಡಿಸಿದೆ, ಎಸಿಬಿ ತನಿಖಾ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
Published On - 8:10 pm, Wed, 27 July 22