ಬೆಂಗಳೂರು: ಹಿಜಾಬ್ ವಿವಾದ ಸಂಬಂಧಿಸಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ಫೆ 9) ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ಬುಧವಾರ ಸರ್ಕಾರ ಹಾಗೂ ಮಧ್ಯಂತರ ಅರ್ಜಿದಾರರ ವಾದವನ್ನು ಹೈಕೋರ್ಟ್ ಆಲಿಸಲಿದೆ. ಅರ್ಜಿದಾರರ ಸಂಪೂರ್ಣ ವಾದ ಕೇಳಿದ್ದೇನೆ. ಎಲ್ಲ ಜನರೂ ಒಳ್ಳೆಯ ಜನರೆಂದೇ ಭಾವಿಸಿದ್ದೇನೆ. ಕೆಲವರಷ್ಟೇ ಶಾಂತಿಗೆ ಭಂಗ ತರುವವರು. ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗುವುದು ಸರಿಯಲ್ಲ. ಶಾಂತಿ ಭಂಗದ ಚಟುವಟಿಕೆಯಲ್ಲಿ ತೊಡಗದಂತೆ ಮನವಿ ಮಾಡುತ್ತೇನೆ ಎಂದು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಮನವಿ ಮಾಡಿಕೊಂಡಿದ್ದಾರೆ. ಅರ್ಜಿದಾರರ ಪರವಾಗಿ ದೇವದತ್ ಕಾಮತ್ ಹಾಗೂ ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದಾರೆ.
ವಾದ ವಿವಾದದ ವೇಳೆ, ಸರ್ಕಾರದ ಕ್ರಮ ಸಂವಿಧಾನದ 25(1) ರ ವಿಧಿಗೆ ವಿರುದ್ಧವಾಗಿದೆ. ಹಿಜಾಬ್ ಮುಸ್ಲಿಂ ಹೆಣ್ಣುಮಕ್ಕಳ ಅತ್ಯಗತ್ಯ ಭಾಗವಾಗಿದೆ. ಕಾನೂನು ಸುವ್ಯವಸ್ಥೆಯ ಹೆಸರಲ್ಲಿ ನಿರ್ಬಂಧ ಸರಿಯಲ್ಲ. ಸರ್ಕಾರಕ್ಕೆ ಈ ಆದೇಶ ಹೊರಡಿಸುವ ಅಧಿಕಾರವಿಲ್ಲ. ವಿಚಾರಣೆ ಇನ್ನಷ್ಟು ಕಾಲ ಹಿಡಿಯುವ ಸಾಧ್ಯತೆಯಿದೆ. ಹೀಗಾಗಿ ಹಿಜಾಬ್ ನೊಂದಿಗೆ ಕಾಲೇಜಿಗೆ ತೆರಳಲು ಅನುಮತಿ ನೀಡಿ. ಹೈಕೋರ್ಟ್ ತೀರ್ಪಿನವರೆಗೆ ಅನುಮತಿ ನೀಡಿ ಎಂದು ಅರ್ಜಿದಾರರು ಇಂದು ಕೇಳಿದ್ದರು.
ಬೇರೆ ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯಾತೀತತೆ. ನಾಮ, ಕ್ರಾಸ್, ಹಿಜಾಬ್ ಧರಿಸುವುದು ಜಾತ್ಯಾತೀತತೆಗೆ ಪೂರಕವಾಗಿದೆ. ಧಾರ್ಮಿಕ ಅಸ್ಪೃಶ್ಯತೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಿನ್ನೆ ಹಿಜಾಬ್ ಧರಿಸಿದ್ದವರನ್ನು ಪ್ರತ್ಯೇಕವಾಗಿ ಕೂರಿಸಿದ್ದರು ಎಂಬ ದೇವದತ್ ಕಾಮತ್ ವಾದಕ್ಕೆ ಎಜಿ ಪ್ರಭುಲಿಂಗ್ ನಾವದಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ನಾನು ವಾದ ಮುಗಿಸಿದ ನಂತರ ನಿಮ್ಮದು ಹೇಳಿ ಎಂದು ದೇವದತ್ ಕಾಮತ್ ಹೇಳಿದ್ದಾರೆ. ದೆಹಲಿಯಲ್ಲಿ ಈಗ ಬಿಸಿಲು ಜೋರಿದೆಯೇ ಎಂದು ಕೋರ್ಟ್ ಪ್ರಶ್ನಿಸಿದೆ. ನ್ಯಾ.ಕೃಷ್ಣ ದೀಕ್ಷಿತ್ ವಾತಾವರಣ ತಿಳಿಗೊಳಿಸಿದ್ದರು.
ಸಿಖ್ಖರಿಗೆ ಪಂಚಕಗಳನ್ನು ಕಡ್ಡಾಯ ಮಾಡಲಾಗಿದೆ. ಗುರು ಗ್ರಂಥ ಸಾಹೀಬದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಕೇಶ್, ಕಂಗನ್, ಖಡಾ, ಕಚ್ಚಾ, ಕೃಪಾನ್ ಕಡ್ಡಾಯ ಇದು ಸಿಖ್ಖರ ಅತ್ಯಗತ್ಯ ಧಾರ್ಮಿಕ ಆಚರಣೆ. ಇದೇ ರೀತಿ ಹಿಜಾಬ್ ಕೂಡಾ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂದು ಅರ್ಜಿದಾರರಿಗೆ ನ್ಯಾ.ಕೃಷ್ಣ ಎಸ್ ದೀಕ್ಷಿತ್ ಪ್ರಶ್ನೆ ಮಾಡಿದ್ದರು.
ಕೇರಳ ಹೈಕೋರ್ಟ್ನ ಮತ್ತೊಂದು ತೀರ್ಪಿನ ಉಲ್ಲೇಖ ಮಾಡಲಾಗಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹಿಜಾಬ್ ನಿರ್ಬಂಧಿಸಿತ್ತು. ಹಿಜಾಬ್ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹಕ್ಕಿದೆ. ಹೈಕೋರ್ಟ್ ತೀರ್ಪು ಸರ್ಕಾರಕ್ಕೆ ಅನುಕೂಲಕರವಾಗಿಲ್ಲ. ಸರ್ಕಾರ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ವ್ಯತ್ಯಾಸವಿದೆ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದ ನಡೆಸಿದ್ದರು.
ಕಾನೂನು ಪ್ರಕಾರ ವಿಚಾರಣೆ ನಡೆಸೋಣ. ಎಲ್ಲಾ ಭಾವನೆಗಳನ್ನು ಹೊರಗಿಡಿ. ಸಂವಿಧಾನವೇ ಭಗವದ್ಗೀತೆ ಇದ್ದಂತೆ. ಹೀಗಾಗಿ ಸಂವಿಧಾನದ ಪ್ರಕಾರ ವಿಚಾರಣೆ ನಡೆಸೋಣ ಎಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯಪಟ್ಟಿದ್ದರು. ಇದೀಗ, ಹಿಜಾಬ್ ವಿವಾದ ಸಂಬಂಧಿಸಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ಫೆಬ್ರವರಿ 9) ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ಸರ್ಕಾರ ಹಾಗೂ ಮಧ್ಯಂತರ ಅರ್ಜಿದಾರರ ವಾದವನ್ನು ಬುಧವಾರ ಮತ್ತೆ ಹೈಕೋರ್ಟ್ ಆಲಿಸಲಿದೆ. ಮುಂದಿನ ತೀರ್ಪಿಗಾಗಿ ಕಾದುನೋಡಬೇಕಿದೆ.
ಇದನ್ನೂ ಓದಿ: Hijab Row Hearing Live: ವಿಚಾರಣೆ ಮುಂದೂಡಿದ ಹೈಕೋರ್ಟ್; 3 ದಿನ ಕಾಲೇಜುಗಳಿಗೆ ರಜೆ ಘೋಷಣೆ
Published On - 4:40 pm, Tue, 8 February 22