Hijab Row Hearing Highlights: ವಿಚಾರಣೆ ಮುಂದೂಡಿದ ಹೈಕೋರ್ಟ್; 3 ದಿನ ಕಾಲೇಜುಗಳಿಗೆ ರಜೆ ಘೋಷಣೆ
Karnataka High Court Hearing The Hijab Case Updates: ಇಂದು (ಫೆಬ್ರವರಿ 08) ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರಿಟ್ ವಿಚಾರಣೆ ನಡೆಯಲಿದೆ. ಈ ಕುರಿತು ಫೆಬ್ರವರಿ 3 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಾಲಾವಕಾಶ ನೀಡಲು ಸರ್ಕಾರಿ ವಕೀಲರ ಮನವಿ ಹಿನ್ನೆಲೆ ಇಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಪಡಿಸಿತ್ತು.
ಹಿಜಾಬ್ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು(Students) ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಹಿಜಾಬ್ ವಿವಾದ (Hijab controversy) ಹೈಕೋರ್ಟ್ ಮೆಟ್ಟಿಲೇರಿದೆ. ಹಿಜಾಬ್ ಧರಿಸಲು ಅನುಮತಿಗೆ ಕೋರಿ ಮುಸ್ಲಿಂ ಯುವತಿಯರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ, ಹಿಜಾಬ್ ವಿವಾದ ಸಂಬಂಧಿಸಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಾಳೆ (ಫೆಬ್ರವರಿ 8) ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ಬುಧವಾರ ಸರ್ಕಾರ ಹಾಗೂ ಮಧ್ಯಂತರ ಅರ್ಜಿದಾರರ ವಾದವನ್ನು ಹೈಕೋರ್ಟ್ ಆಲಿಸಲಿದೆ. ಈ ಮಧ್ಯೆ, ಕರ್ನಾಟಕದಲ್ಲಿ ಕಾಲೇಜುಗಳಿಗೆ 3 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.
LIVE NEWS & UPDATES
-
ಹಿಜಾಬ್ ವಿವಾದ: ವಿಚಾರಣೆ ಮುಂದೂಡಿದ ಹೈಕೋರ್ಟ್
ಹಿಜಾಬ್ ವಿವಾದ ಸಂಬಂಧಿಸಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಾಳೆ (ಫೆಬ್ರವರಿ 8) ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ಬುಧವಾರ ಸರ್ಕಾರ ಹಾಗೂ ಮಧ್ಯಂತರ ಅರ್ಜಿದಾರರ ವಾದವನ್ನು ಹೈಕೋರ್ಟ್ ಆಲಿಸಲಿದೆ.
-
ಕಾಲೇಜುಗಳಿಗೆ 3 ದಿನ ರಜೆ ಘೋಷಣೆ
ಕರ್ನಾಟಕದಲ್ಲಿ ನಾಳೆಯಿಂದ 3 ದಿನ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 1 ರಿಂದ 7ನೇ ತರಗತಿಯ ಮಕ್ಕಳಿಗೆ ಎಂದಿನಂತೆ ಶಾಲೆ, ತರಗತಿಗಳು ನಡೆಯಲಿದೆ. ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರ ವಿವಾದ ಹಿನ್ನೆಲೆಯಲ್ಲಿ ರಜೆ ನೀಡಲಾಗಿದೆ ಎಂದು ಅಶ್ವತ್ಥ ನಾರಾಯಣ, ಬಿಸಿ ನಾಗೇಶ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾಹಿತಿ ನೀಡಿದ್ದಾರೆ.
-
ಎಬಿವಿಪಿ ಕಾರ್ಯಕರ್ತರು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ
ಹಿಜಾಬ್ ಗಲಾಟೆ ವಿಚಾರವಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಮತ್ತು ರಾಜ್ಯಾದ್ಯಂತ ಕಾಲೇಜುಗಳಲ್ಲಿ ಅಶಾಂತಿ ಆರೋಪಿಸಿ, ಎಬಿವಿಪಿ ಗಲಾಟೆಕೋರರನ್ನ ಶೀಘ್ರ ಬಂಧಿಸುವಂತೆ ಆಗ್ರಹಿಸಿ ಪ್ರೆಸ್ ಕ್ಲಬ್ ನಲ್ಲಿ ಕ್ಯಾಂಪಸ್ ಫ್ರಂಟ್ ನಿಂದ ಪತ್ರಿಕಾಗೋಷ್ಠಿ ನಡೆಸಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಶ್ ಕುಂಬ್ರಾ ಕ್ಯಾಂಪಸ್ ಫಂಟ್ರ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ. ರಾಜ್ಯಧ್ವಜಕ್ಕೆ ಅವಮಾನ ಮಾಡೀರುವವರನ್ನು ಕೂಡಲೇ ಅರೆಸ್ಟ್ ಮಾಡಬೇಕು. ಹಿಜಾಬ್ ಅನ್ನೊ ವಿಚಾರ ರಾಜ್ಯದ್ಯಂದ ಹರಡಿದೆ. ಇವತ್ತಿನ ಹಲ್ಲೆಯನ್ನ ಕ್ಯಾಂಪಸ್ ಫ್ರಂಟ್ ಖಂಡಿಸುತ್ತೆ. ಕಲ್ಲುತೂರಾಟ ಮಾಡಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಲಾಗ್ತಿದೆ. ಹೈಕೋರ್ಟ್ ತೀರ್ಫು ನಡುವೇಯೇ ಅಶಾಂತಿ ಸೃಷ್ಠಿಮಾಡಲಾಗ್ತಿದೆ. ಎಬಿವಿಪಿ ಕಾರ್ಯಕರ್ತರು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ದೇಶದ್ರೋಹದ ಕೆಲಸ ಮಾಡಲಾಗ್ತಿದೆ. ಧ್ವಜ ಸ್ಥಂಭಕ್ಕೆ ಅವಮಾನ ಮಾಡಲಾಗಿದೆ. ಅವಮಾನಿಸಿದವರನ್ನ ಕೂಡಲೇ ಬಂಧಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಹೇಳಿದೆ.
ಶಾಂತಿ ಭಂಗದ ಚಟುವಟಿಕೆಯಲ್ಲಿ ತೊಡಗದಂತೆ ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಮನವಿ
ಸರ್ಕಾರದ ಕ್ರಮ ಸಂವಿಧಾನದ 25(1) ರ ವಿಧಿಗೆ ವಿರುದ್ಧವಾಗಿದೆ. ಹಿಜಾಬ್ ಮುಸ್ಲಿಂ ಹೆಣ್ಣುಮಕ್ಕಳ ಅತ್ಯಗತ್ಯ ಭಾಗವಾಗಿದೆ. ಕಾನೂನು ಸುವ್ಯವಸ್ಥೆಯ ಹೆಸರಲ್ಲಿ ನಿರ್ಬಂಧ ಸರಿಯಲ್ಲ. ಸರ್ಕಾರಕ್ಕೆ ಈ ಆದೇಶ ಹೊರಡಿಸುವ ಅಧಿಕಾರವಿಲ್ಲ. ವಿಚಾರಣೆ ಇನ್ನಷ್ಟು ಕಾಲ ಹಿಡಿಯುವ ಸಾಧ್ಯತೆಯಿದೆ. ಹೀಗಾಗಿ ಹಿಜಾಬ್ ನೊಂದಿಗೆ ಕಾಲೇಜಿಗೆ ತೆರಳಲು ಅನುಮತಿ ನೀಡಿ. ಹೈಕೋರ್ಟ್ ತೀರ್ಪಿನವರೆಗೆ ಅನುಮತಿ ನೀಡಿ ಎಂದು ಕೇಳಲಾಗಿದೆ. ಅರ್ಜಿದಾರರ ಸಂಪೂರ್ಣ ವಾದ ಕೇಳಿದ್ದೇನೆ. ಎಲ್ಲ ಜನರೂ ಒಳ್ಳೆಯ ಜನರೆಂದೇ ಭಾವಿಸಿದ್ದೇನೆ. ಕೆಲವರಷ್ಟೇ ಶಾಂತಿಗೆ ಭಂಗ ತರುವವರು. ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗುವುದು ಸರಿಯಲ್ಲ. ಶಾಂತಿ ಭಂಗದ ಚಟುವಟಿಕೆಯಲ್ಲಿ ತೊಡಗದಂತೆ ಮನವಿ ಮಾಡುತ್ತೇನೆ ಎಂದು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಮನವಿ ಮಾಡಿಕೊಂಡಿದ್ದಾರೆ.
ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಲಾಠಿಚಾರ್ಜ್
ಹಿಜಾಬ್ ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆದಿದ್ದು ಮಾಜಿ ಸಂಸದ ಐಜಿ ಸನದಿ, ನೂರಾರು ಮಹಿಳೆಯರು, ಮುಸ್ಲಿಂ ಸಂಘಟನೆಗಳ ನೂರಾರು ಮುಖಂಡರು ಭಾಗಿ ಆಗಿದ್ದಾರೆ. ಇತ್ತ ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಲಾಠಿಚಾರ್ಜ್ ನಡೆಸಲಾಗಿದೆ. ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಎಸ್ಪಿ ರಿಷ್ಯಂತ್ ಹೇಳಿಕೆ ನೀಡಿದ್ದಾರೆ. ಕಾಲೇಜಿನಲ್ಲಿ ಇನ್ನೂ ಸುಮಾರು 200 ವಿದ್ಯಾರ್ಥಿಗಳಿದ್ದಾರೆ. ಅವರನ್ನ ವಾಹನದಲ್ಲಿ ಮನೆಗಳಿಗೆ ಕಳುಹಿಸಲಾಗುವುದು. ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ. ವಿಡಿಯೋಗಳನ್ನ ಪರಿಶೀಲಿಸಿ ಆರೋಪಿಗಳನ್ನ ಬಂಧಿಸ್ತೇವೆ. ಎರಡೂ ಕಡೆಗಳಿಂದ ದೂರುಗಳು ಬಂದಿವೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಎಸ್ಪಿ ರಿಷ್ಯಂತ್ ಹೇಳಿದ್ದಾರೆ.
ಸಂವಿಧಾನದ 19(1) ರಡಿ ಇಚ್ಛೆಯಂತೆ ಬಟ್ಟೆ ಧರಿಸುವ ಹಕ್ಕಿದೆ: ದೇವದತ್ ಕಾಮತ್ ವಾದ
ದೇವದಾಸ್ ಕಾಮತ್ರ ಆರೋಪ ದಾಖಲಿಸದಂತೆ ಎಜಿ ಮನವಿ ಮಾಡಿದ್ದಾರೆ. ಎಜಿ ಮನವಿ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. ಅರ್ಜಿದಾರರು ಹೇಳಿದ್ದನ್ನು ದಾಖಲಿಸುತ್ತೇವೆ. ನಿಮ್ಮ ಆಕ್ಷೇಪಣೆಗಳನ್ನೂ ದಪ್ಪ ಅಕ್ಷರದಲ್ಲಿ ದಾಖಲಿಸುತ್ತೇವೆ ಎಂದು ಎಜಿ ಪ್ರಭುಲಿಂಗ್ ನಾವದಗಿ ರಿಗೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ. ಇಚ್ಛೆಯಂತೆ ಬಟ್ಟೆ ಧರಿಸುವುದೂ ಅಭಿವ್ಯಕ್ತಿ ಸ್ವಾತಂತ್ರ್ಯ. ಸಂವಿಧಾನದ 19(1) ರಡಿ ಇಚ್ಛೆಯಂತೆ ಬಟ್ಟೆ ಧರಿಸುವ ಹಕ್ಕಿದೆ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡಿಸಿದ್ದಾರೆ.
ಬಾಗಲಕೋಟೆ, ಶಿವಮೊಗ್ಗದಲ್ಲಿ ವಿಕೋಪಕ್ಕೆ ತಿರುಗಿದ ಹಿಜಾಬ್- ಕೇಸರಿ ಶಾಲು ವಿವಾದ
ಹಿಜಾಬ್ ಕೇಸರಿ ಗಲಾಟೆ ವೇಳೆ ಕಲ್ಲು ತೂರಾಟ ನಡೆದು ಓರ್ವ ಶಿಕ್ಷಕ ನಾಲ್ಕು ಜನ ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ನಡೆದಿದೆ. ನಾಯಕ್ ಎಂಬ ಶಿಕ್ಷಕನ ತಲೆಗೆ ಕಲ್ಲು ಬಿದ್ದು ರಕ್ತಸ್ರಾವ ಉಂಟಾಗಿದೆ. ರಬಕವಿಬನಹಟ್ಟಿ ಪಟ್ಟಣದ ಸರಕಾರಿ ಪಿಯುಸಿ ಕಾಲೇಜು ಬಳಿ ಘಟನೆ ನಡೆದಿದೆ. ಗಾಯಾಳುಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಶಿವಮೊಗ್ಗ ಸಾಗರ ನಗರದಲ್ಲಿ ನಡೆದ ಗಲಾಟೆಯಲ್ಲಿ ಗುಂಪು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದೆ. ಪರಸ್ಪರ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ. ಸಾಗರ ನಗರದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ವಿಕೋಪಕ್ಕೆ ತಿರುಗಿದೆ. ಗಲಾಟೆಯಲ್ಲಿ ಓರ್ವ ಯುವಕನಿಗೆ ಗಂಭೀರ ಗಾಯವಾಗಿದೆ.
ಧಾರ್ಮಿಕ ಅಸ್ಪೃಶ್ಯತೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ: ದೇವದತ್ ಕಾಮತ್ ವಾದ
ಬೇರೆ ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯಾತೀತತೆ. ನಾಮ, ಕ್ರಾಸ್, ಹಿಜಾಬ್ ಧರಿಸುವುದು ಜಾತ್ಯಾತೀತತೆಗೆ ಪೂರಕವಾಗಿದೆ. ಧಾರ್ಮಿಕ ಅಸ್ಪೃಶ್ಯತೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಿನ್ನೆ ಹಿಜಾಬ್ ಧರಿಸಿದ್ದವರನ್ನು ಪ್ರತ್ಯೇಕವಾಗಿ ಕೂರಿಸಿದ್ದರು ಎಂಬ ದೇವದತ್ ಕಾಮತ್ ವಾದಕ್ಕೆ ಎಜಿ ಪ್ರಭುಲಿಂಗ್ ನಾವದಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ನಾನು ವಾದ ಮುಗಿಸಿದ ನಂತರ ನಿಮ್ಮದು ಹೇಳಿ ಎಂದು ದೇವದತ್ ಕಾಮತ್ ಹೇಳಿದ್ದಾರೆ. ದೆಹಲಿಯಲ್ಲಿ ಈಗ ಬಿಸಿಲು ಜೋರಿದೆಯೇ ಎಂದು ಕೋರ್ಟ್ ಪ್ರಶ್ನಿಸಿದೆ. ನ್ಯಾ.ಕೃಷ್ಣ ದೀಕ್ಷಿತ್ ವಾತಾವರಣ ತಿಳಿಗೊಳಿಸಿದ್ದಾರೆ.
ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಪೊಲೀಸರಿಂದ ಎಡವಟ್ಟು
ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಪೊಲೀಸರಿಂದ ಎಡವಟ್ಟಾಗಿದೆ. ಶಿವಮೊಗ್ಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಗಲಾಟೆ ಪ್ರಕರಣದಲ್ಲಿ ಕಲ್ಲು ತೂರಾಟ ನಡೆಸಿದ್ದ ಐವರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಐವರನ್ನು ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಈ ವೇಳೆ ಪೊಲೀಸ್ ಜೀಪ್ನಿಂದ ಐವರು ಎಸ್ಕೇಪ್ ಆಗಿದ್ದಾರೆ. ಇದೀಗ ವಿದ್ಯಾರ್ಥಿಗಳ ಪತ್ತೆಗಾಗಿ ಕೋಟೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲೂ ಲಾಠಿ ಪ್ರಹಾರ
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲೂ ಲಾಠಿ ಪ್ರಹಾರ ನಡೆಸಲಾಗಿದೆ. ಘರ್ಷಣೆಗೆ ಮುಂದಾದ ವಿದ್ಯಾರ್ಥಿಗಳನ್ನು ಪೊಲೀಸರು ಓಡಿಸಿದ್ದಾರೆ. ನಿರಂತರ ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಯ ಪ್ರತಿನಿಧಿಗಳ ಪರಿಸ್ಥಿತಿ ಅರಿತು ಪೊಲೀಸರಿಂದ ಲಾಠಿ ಪ್ರಹಾರ ಮಾಡಲಾಗಿದೆ. ಕಾಲೇಜಿಗೆ ರಜೆ ನೀಡಲಾಗಿದ್ದು ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಗೇಟ್ ಹಾಕಿದ್ದಾರೆ.
ಮಂಡ್ಯ: ಕೇಸರಿ ಶಾಲು ತೆಗೆಸಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಧರಣಿ
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಠಾಣೆ ಮುಂದೆ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರೆ ಒಳಗೆ ಬಿಡುತ್ತಿಲ್ಲ. ಹಿಜಬ್ ಧರಿಸಿ ಕಾಲೇಜಿಗೆ ಬರುವವರಿಗೆ ಒಳಗೆ ಬಿಡುತ್ತಿದ್ದಾರೆ ಎಂದು ಕೇಸರಿ ಶಾಲು ತೆಗೆಸಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಧರಣಿ ನಡೆಸಲಾಗಿದೆ. ಕಾಲೇಜು ಆಡಳಿತ ಮಂಡಳಿ, ಪೊಲೀಸರು ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ
ಹೊಸದುರ್ಗದಲ್ಲಿ ಪದವಿ ವಿದ್ಯಾರ್ಥಿಗಳು, ಕೇಸರಿ ಶಾಲು ಹಾಗೂ ನೀಲಿ ಶಾಲು ಧರಿಸಿ ಪ್ರತಿಭಟನಾ ಮೆರವಣಿಗೆಗೆ ನಡೆಸಿದ್ದಾರೆ. ಹೊಸದುರ್ಗ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿದ್ಯಾರ್ಥಿಗಳು ಜಮಾವಣೆಯಾಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.
ದೇವಾಲಯ, ಚರ್ಚ್, ಮಸೀದಿಗೆ ಹಂದಿ ಕೊಂಡೊಯ್ದರೆ ಸಮಸ್ಯೆ: ನ್ಯಾ.ಕೃಷ್ಣ ದೀಕ್ಷಿತ್
ಹಿಜಾಬ್ ಕೂಡಾ ಅತ್ಯಗತ್ಯ ಧಾರ್ಮಿಕ ಆಚರಣೆ. ಸಾರ್ವಜನಿಕ ಸುವ್ಯವಸ್ಥೆಯ ನೆಪದಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿ ಮಾಡಲಾಗುತ್ತಿದೆ. ಹಿಜಾಬ್ ಧರಿಸಿ ಹೋದರೆ ಯಾರಿಗೂ ತೊಂದರೆ ಇಲ್ಲ. ಹಂದಿಮರಿಯೊಂದಿಗೆ ಮಾರುಕಟ್ಟೆಗೆ ಹೋದರೆ ಸಮಸ್ಯೆ ಇಲ್ಲ. ಹೆಚ್ಚೆಂದರೆ ಕೆಲವರು ನಗಬಹುದು. ಆದರೆ ದೇವಾಲಯ, ಚರ್ಚ್, ಮಸೀದಿಗೆ ಕೊಂಡೊಯ್ದರೆ ಸಮಸ್ಯೆ ಎಂದು ಲಘುದಾಟಿಯಲ್ಲಿ ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಹೈಕೊರ್ಟ್ ತೀರ್ಪು ಬಾರದೇ ಹೋದ್ರೆ ಶಾಲಾ ಕಾಲೇಜು ರಜೆ ಸಾಧ್ಯತೆ
ಜಿಲ್ಲೆಗಳಲ್ಲಿ ಹಿಜಾಬ್ ಸಂಘರ್ಷ ಹಿನ್ನಲೆ ಇಂದು ಹೈಕೊರ್ಟ್ ತೀರ್ಪು ಬಾರದೇ ಹೋದ್ರೆ ಶಾಲಾ ಕಾಲೇಜು ರಜೆ ಸಾಧ್ಯತೆ ಇದೆ. ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಪಡೆಯುತ್ತಿರುವ ಶಿಕ್ಷಣ ಇಲಾಖೆ, ಯಾವ ಯಾವ ಜಿಲ್ಲೆಗಳಲ್ಲಿ ಹಿಜಾಬ್ -ಕೇಸರಿ ಸಂಘರ್ಷ ಹೆಚ್ಚಾಗಿದೆ ಮಾಹಿತಿ ಪಡೆಯುತ್ತಿದೆ. ಹಿಜಾಬ್ ಸಂಘರ್ಷ ಹೆಚ್ಚಾಗಿರುವ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಚಿಂತನೆ ನಡೆಸಿದೆ. ತೀರ್ಪು ಹೊರ ಬೀಳದೀದ್ದರೆ ಎರಡು ದಿನಗಳ ರಜೆ ನೀಡಲು ಚಿಂತನೆ ನಡೆಸಿದೆ. ರಜೆ ನೀಡಲು ಜಿಲ್ಲೆಗಳ ಡಿಡಿಪಿಐ ಹಾಗೂ ಡಿಸಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಹಿಜಾಬ್ ಕೂಡಾ ಅತ್ಯಗತ್ಯ ಧಾರ್ಮಿಕ ಆಚರಣೆಯೇ: ಅರ್ಜಿದಾರರಿಗೆ ನ್ಯಾ.ಕೃಷ್ಣ ಎಸ್ ದೀಕ್ಷಿತ್ ಪ್ರಶ್ನೆ
ಸಿಖ್ಖರಿಗೆ ಪಂಚಕಗಳನ್ನು ಕಡ್ಡಾಯ ಮಾಡಲಾಗಿದೆ. ಗುರು ಗ್ರಂಥ ಸಾಹೀಬದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಕೇಶ್, ಕಂಗನ್, ಖಡಾ, ಕಚ್ಚಾ, ಕೃಪಾನ್ ಕಡ್ಡಾಯ ಇದು ಸಿಖ್ಖರ ಅತ್ಯಗತ್ಯ ಧಾರ್ಮಿಕ ಆಚರಣೆ. ಇದೇ ರೀತಿ ಹಿಜಾಬ್ ಕೂಡಾ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂದು ಅರ್ಜಿದಾರರಿಗೆ ನ್ಯಾ.ಕೃಷ್ಣ ಎಸ್ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಕಾಲೇಜ್ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ
ದಾವಣಗೆರೆ ಜಿಲ್ಲೆಯ ಹರಿಹರ ಕಾಲೇಜಿನಲ್ಲಿ ವ್ಯಾಪ್ತಿಯಲ್ಲಿ ಹಿಜಾಬ್, ಕೇಸರಿ ಜಗಳ ವಿಕೋಪಕ್ಕೆ ಹೋಗಿದೆ. ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ನಿಯಂತ್ರಣಕ್ಕೆ ತರಲು ಪೊಲೀಸರು ಮುಂದಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾಲೇಜು ಪ್ರದೇಶದ ವ್ಯಾಪ್ತಿಯಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ.
ಹಿಜಾಬ್, ಕೇಸರಿ ಸಂಘರ್ಷದ ಬಗ್ಗೆ ತನಿಖೆಯಾಗಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ, ಬೆಂಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ 3 ಪದ್ಧತಿಗಳಿವೆ. ಬುರ್ಕಾ, ನಕಾಬ್, ಹಿಜಾಬ್. ನೂರಾರು ವರ್ಷಗಳಿಂದ ಈ ಪದ್ಧತಿಗಳನ್ನ ಪಾಲಿಸ್ತಿದ್ದೇವೆ. ಹಿಜಾಬ್, ಕೇಸರಿ ಸಂಘರ್ಷದ ಬಗ್ಗೆ ತನಿಖೆಯಾಗಬೇಕು. ಕೆಲವು ಕಾಣದ ಕೈಗಳು ಈ ಘಟನೆಯ ಹಿಂದೆ ಅಡಗಿವೆ. ಸರ್ಕಾರ ವಿಳಂಬ ಮಾಡಿದ್ದಕ್ಕೆ ಈ ಸಮಸ್ಯೆಗಳು ಆಗಿವೆ. ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ರಾಷ್ಟ್ರಗೀತೆ ಹಾಡದಿರುವುದು ರಾಷ್ಟ್ರಗೀತೆಗೆ ಅಗೌರವವಲ್ಲ ಎಂದು ತೀರ್ಪು: ಅರ್ಜಿದಾರರು
ರಾಷ್ಟ್ರಗೀತೆ ಸಂಬಂಧ ಚಿನ್ನಪ್ಪ ರೆಡ್ಡಿಯವರ ತೀರ್ಪು ಉಲ್ಲೇಖ ಮಾಡಿದ ಅರ್ಜಿದಾರರು, ರಾಷ್ಟ್ರಗೀತೆ ಓದುವಾಗ ಸುಮ್ಮನೇ ನಿಂತುಕೊಂಡಿದ್ದ 3 ಬಾಲಕರ ಪರ ಕೋರ್ಟ್ ತೀರ್ಪು ನೀಡಿತ್ತು. ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತದ್ದೂ ಗೌರವ ಸೂಚಕ. ಹಾಡದಿರುವುದು ರಾಷ್ಟ್ರಗೀತೆಗೆ ಅಗೌರವವಲ್ಲ ಎಂದು ತೀರ್ಪು ನೀಡಿದೆ. ಬಳಿಕ ಕೇರಳದ ಬಿಜಾಯ್ ಎಮ್ಯಾನುಯಲ್ ಕೇಸ್ ಉಲ್ಲೇಖ ಮಾಡಿದ್ದು, ಸುಪ್ರೀಂಕೋರ್ಟ್ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು ಎಂದು ಅರ್ಜಿದಾರರು ತಿಳಿಸಿದ್ದಾರೆ.
ಹಿಜಾಬ್, ಕೇಸರಿ ವಿವಾದ: ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ
ಹಿಜಾಬ್, ಕೇಸರಿ ವಿವಾದ ಹೆಚ್ಚಾದ ಹಿನ್ನಿಲೆ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಇದ್ದು, ನಗರದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನಚ್ಚರಿಕೆ ವಹಿಸಿದೆ.
ಮಲೇಷಿಯಾ ಸುಪ್ರೀಂ ಕೋರ್ಟ್ ಹಿಜಾಬ್ ಪರವಾಗಿ ತೀರ್ಪು ನೀಡಿದೆ: ಅರ್ಜಿದಾರರು
ಕೇಸರಿ ಶಾಲು, ಹೀಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಮಲೇಷಿಯಾ ಕೋರ್ಟ್ ತೀರ್ಪು ಉಲ್ಲೇಖಿಸಿದ ಅರ್ಜಿದಾರರು, ಮಲೇಷಿಯಾ ಸುಪ್ರೀಂ ಕೋರ್ಟ್ ಹಿಜಾಬ್ ಪರವಾಗಿ ತೀರ್ಪು ನೀಡಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಸಮವಸ್ತ್ರ ಆದೇಶ ಸಮರ್ಪಕವಾಗಿಲ್ಲ: ಅರ್ಜಿದಾರರ ಪರ ವಕೀಲರ ವಾದ
ಕೇವಲ ಸೀರೆ ಉಡಬಹುದೇ ಎಂಬ ಉಡುಪಿನ ವಿವಾದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ನಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಧಾರ್ಮಿಕ ವಿಚಾರದ ಬಗ್ಗೆ ಯಾವುದೇ ವಿಶ್ಲೇಷಣೆ ಆಗಿಲ್ಲ. ಹೀಗಾಗಿ ಸರ್ಕಾರದ ಸಮವಸ್ತ್ರ ಆದೇಶ ಸಮರ್ಪಕವಾಗಿಲ್ಲ.
ಕೊಡಗಿನಲ್ಲಿ ಹಿಜಬ್ ಪರ ವಿರೋಧ ಪ್ರತಿಭಟನೆ; ಎರಡೂ ಗುಂಪುಗಳನ್ನ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
ಕುಶಾಲನಗರ ಪಟ್ಟಣದಲ್ಲಿ ಎರಡೂ ಬಣಗಳಿಂದ ಹಿಜಾಬ್ ಪರ, ವಿರೋಧ ಘೋಷಣೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಎರಡು ಗುಂಪುಗಳು ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶಾಲು ಧರಿಸಿ ಪ್ರತಿಭಟನೆಗೆ ಹಾಜರಾಗಿದ್ದರು. ಮತ್ತೊಂದೆಡೆ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಜಾಬ್ ಪರ ಜೈಕಾರ ಕೇಳಿಬಂದಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ಕುಶಾಲನಗರ ಪೊಲೀಸರು, ಎರಡೂ ಗುಂಪುಗಳನ್ನ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಚದುರಿಸಲು ಅಶ್ರುವಾಯು ಪ್ರಯೋಗ
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಧರಣಿ ವೇಳೆ ಗಲಾಟೆ: ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಎಸ್ಪಿಗೆ ಸೂಚನೆ
ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಧರಣಿ ವೇಳೆ ಗಲಾಟೆ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಸಚಿವ ನಾರಾಯಣಗೌಡ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಎಸ್ಪಿಗೆ ಸೂಚನೆ ನೀಡಿದೆ. ಡಿಸಿ, ಎಸ್ಪಿ, ಶಾಸಕರ ಜೊತೆ ಸಚಿವರು ನಿರಂತರ ಸಂಪರ್ಕದಲ್ಲಿದ್ದು, ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.
ಹೈಕೋರ್ಟ್ನಲ್ಲಿ ಬಾಂಬೆಯ ಫಾತಿಮಾ ಹುಸೇನ್ ಕೇಸ್ ಉಲ್ಲೇಖ
ಬಾಂಬೆಯ ಫಾತಿಮಾ ಹುಸೇನ್ ಕೇಸ್ ಉಲ್ಲೇಖ ಮಾಡಿದ ವಕೀಲ ದೇವದತ್ ಕಾಮತ್, ಬಾಲಕಿಯರೇ ಓದುವ ಶಾಲೆಗೆ ಹಿಜಾಬ್ ನಿರ್ಬಂಧಿಸಲಾಗಿತ್ತು. ಇದನ್ನು ಫಾತಿಮಾ ಹುಸೇನ್ ಸೈಯದ್ ಪ್ರಶ್ನಿಸಿದ್ದರು. ಬಾಲಕಿಯರೇ ಇರುವ ಶಾಲೆಗೆ ಹಿಜಾಬ್ ಅಗತ್ಯವಿಲ್ಲ ಎಂದಿತ್ತು. ಆದರೆ ಕರ್ನಾಟಕದ ಆದೇಶ ಇದಕ್ಕೆ ವಿರುದ್ಧವಾಗಿದೆ. ಎಲ್ಲಾ ಶಾಲೆಗಳಲ್ಲೂ ಹಿಜಾಬ್ ನಿರ್ಬಂಧಿಸಲಾಗಿದೆ ಎಂದು ವಾದ ಮಂಡನೆ ಮಾಡಿದ್ದಾರೆ.
ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹಕ್ಕಿದೆ: ವಕೀಲ ದೇವದತ್ ಕಾಮತ್
ಕೇರಳ ಹೈಕೋರ್ಟ್ನ ಮತ್ತೊಂದು ತೀರ್ಪಿನ ಉಲ್ಲೇಖ ಮಾಡಲಾಗಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹಿಜಾಬ್ ನಿರ್ಬಂಧಿಸಿತ್ತು. ಹಿಜಾಬ್ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹಕ್ಕಿದೆ. ಹೈಕೋರ್ಟ್ ತೀರ್ಪು ಸರ್ಕಾರಕ್ಕೆ ಅನುಕೂಲಕರವಾಗಿಲ್ಲ. ಸರ್ಕಾರ ಹಾಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ವ್ಯತ್ಯಾಸವಿದೆ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮುಂದುವರಿಸಿದ್ದಾರೆ.
ಧರ್ಮವನ್ನು ಮನೆಯೊಳಗೆ ಇಟ್ಟು ಬರಬೇಕು: ಯುವ ಕಾಂಗ್ರೇಸ್ ವಕ್ತಾರೆ ಸುರೈಯ್ಯ ಅಂಜುಮ್
ಧರ್ಮಕ್ಕಿಂತ ದೇಶ ಮುಖ್ಯ. ಶಿಕ್ಷಣ ಸಂಸ್ಥೆ ಯೊಳಗೆ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಿ. ಹಿಜಾಬ್ ಮುಸ್ಲಿಂ ಧರ್ಮದ ಪ್ರತೀಕ ಅದರ ಬಗ್ಗೆ ನಮ್ಮಗೆ ಹೆಮ್ಮೆ ಇದೆ. ದೇಶದ ಸಂವಿಧಾನ ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಟ್ಟಿದೆ. ನಮ್ಮ ಧರ್ಮದ ಆಚರಣೆ ಮುಕ್ತ ಅವಕಾಶ ಕೊಟ್ಟಿದೆ. ಸಂವಿಧಾನ ಕೊಟ್ಟ ಅವಕಾಶವನ್ನು ದುರುಪಯೋಗಪಡಿಸಿವುದು ಸರಿಯಲ್ಲ. ಧರ್ಮವನ್ನು ಮನೆಯೊಳಗೆ ಇಟ್ಟು ಬರಬೇಕು. ಮನೆಯಿಂದ ಹೊರಗೆ ಬಂದಾಗ ನಾವು ಮೊದಲು ಭಾರತೀಯರು. ದೇಶವನ್ನು ಪ್ರೀತಿ, ಧರ್ಮದ ಆಚರಣೆ ಮಾಡಬೇಕು ಎಂದು ಯುವ ಕಾಂಗ್ರೇಸ್ ವಕ್ತಾರೆ ಸುರೈಯ್ಯ ಅಂಜುಮ್ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಪುನಾರಂಭ
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ವಿಚಾರಣೆ ಪುನಾರಂಭಗೊಂಡಿದೆ. ವಿಚಾರಣೆಗೆ ಅಡ್ವೊಕೇಟ್ ಜನರಲ್ ಹಾಜರಾಗಿದ್ದಾರೆ.
ನಾಳೆ ಹಿಜಾಬ್ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಲಾಗುವುದು: ಸಚಿವ ಮಾಧುಸ್ವಾಮಿ
ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ. ಪಿಯು ಮಕ್ಕಳಲ್ಲಿ ಈ ಪ್ರಮಾಣದ ಬುದ್ಧಿ ಶಕ್ತಿ ಇರುವುದಿಲ್ಲ. ಇವರಿಗೆ ಪ್ರತಿಭಟನೆಗೆ ಪ್ರೇರೆಪಿಸಲಾಗುತ್ತಿದೆ. ಚುನಾವಣೆ ಹಿನ್ನಲೆ ಈ ರೀತಿಯಾಗಿ ಪ್ರೇರೆಪಿಸಲಾಗುತ್ತಿದೆ. ನಾಳೆ ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಲಾಗುವುದು. ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ನಿಯಮಗಳನ್ನು ರೂಪಿಸುವಾಗ ವಿರೋಧ, ಪ್ರತಿಭಟನೆಗಳು ಸಹಜ. ಸಮವಸ್ತ್ರ ಜೊತೆಗೆ ಹಿಜಾಬ್ ಹಾಕ್ತಿವಿ ಎಂದು ಕೆಲವು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. 90% ರಷ್ಟು ಈ ವಿವಾದ ಚುನಾವಣೆಗಾಗಿ ನಡೆಯುತ್ತಿದೆ. ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಎಸ್ಡಿಪಿಐ ಸಂಘಟನೆ ಇದರ ಹಿಂದೆ ಕೆಲಸ ಮಾಡಿದೆ ಎಂದು ಕೆಲ ವರದಿಯಿಂದ ತಿಳಿದಿದೆ: ಸಚಿವ ಬಿಸಿ ನಾಗೇಶ್
ಕೆಲವು ರಾಜಕೀಯ ನಾಯಕರು ಈ ಘಟನೆಗೆ ತುಪ್ಪ ಸುರಿದು ಶಕ್ತಿ ತುಂಬಿದರು. ಇದರಿಂದ ಎಲ್ಲ ಕಡೆ ಹರಡಿದೆ. ಪಾಕಿಸ್ತಾನ ಆ ತರದ ಪ್ರಚೋದನಾತ್ಮಕ ವಿಚಾರ ಯಾರೂ ಹೇಳ ಬಾರದು ನಿಜ. ಆದರೆ ಇಂಥದ್ದು ಸಂವಿಧಾನದಲ್ಲಿ ಇದೆ ಎನ್ನುವುದನ್ನು ಕೂಡ ಯಾರೂ ಹೇಳಬಾರದು. ಎಸ್.ಡಿ.ಪಿ ಐ ಸಂಘಟನೆ ಇದರ ಹಿಂದೆ ಕೆಲಸ ಮಾಡಿದೆ ಎನ್ನೋದು ಕೆಲ ವರದಿಯಿಂದ ತಿಳಿದಿದೆ. ಆದರೆ ಇದರ ಬಗ್ಗೆ ತನಿಖೆ ಆಗಬೇಕು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ಶಾಲಾ-ಕಾಲೇಜುಗಳೇ ಕದನಕಣಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ: ಸಿದ್ದರಾಮಯ್ಯ
ಹಿಜಾಬ್-ಕೇಸರಿ ಶಾಲು ಸಂಘರ್ಷ ನಡೆಯುತ್ತಿರುವ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣ ರಜೆ ಘೋಷಿಸಿ ಆನ್ ಲೈನ್ ತರಗತಿಗಳನ್ನು ಶುರು ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ. ಹಿಜಾಬ್-ಕೇಸರಿ ಶಾಲು ನಡುವಿನ ಸಂಘರ್ಷ ಅತಿರೇಕಕ್ಕೆ ತಲುಪಿ ವಿದ್ಯಾರ್ಥಿಗಳು ಪರಸ್ಪರ ಕಾದಾಟಕ್ಕೆ ಇಳಿದು ಶಾಲಾ-ಕಾಲೇಜುಗಳೇ ಕದನಕಣಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಅಂತ ಕೆಲ ಮಕ್ಕಳು ಮುಂದಕ್ಕೋಗಿ ಹೇಳಿದ್ದಾರೆ: ಸಚಿವ ಬಿಸಿ ನಾಗೇಶ್
ಕೇವಲ ಹಿಜಾಬ್ ಮಾತ್ರ ಮಕ್ಕಳು ಬೇಡಿಕೆ ನೀಡಿಲ್ಲ. ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಅಂತ ಕೆಲ ಮಕ್ಕಳು ಮುಂದಕ್ಕೋಗಿ ಹೇಳಿದ್ದಾರೆ. ಕೆಲ ಮಕ್ಕಳು ಐದು ಬಾರಿ ನಮಾಜ್ ಮಾಡುವುದಕ್ಕೆ ಶಾಲೆಗಳಲ್ಲಿ ಅವಕಾಶ ಮಾಡಿಕೊಡಿ ಅಂದಿದ್ದಾರೆ. ಯಾವ ರಿಯಾಕ್ಷನ್ ಕೂಡ ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್
ಜಿಲ್ಲೆಗಳ ಸ್ಥಿತಿಗತಿ ನೋಡಿಕೊಂಡು ಎರಡು ಮೂರು ದಿನ ರಜೆ ನೀಡುವಂತೆ ಸೂಚನೆ: ಸಚಿವ ಬಿಸಿ ನಾಗೇಶ್
5 ಸಾವಿರ ಪಿಯು ಕಾಲೇಜುಗಳಲ್ಲಿ 10 ರಿಂದ 12 ಕಾಲೇಜುಗಳಲ್ಲಿ ಸಂಘರ್ಷ ಉಂಟಾಗಿದೆ. ಎಲ್ಲೆಲ್ಲಿ ಲಾ ಅ್ಯಂಡ್ ಅರ್ಡರ್ ತೊಂದರೆಯಾಗಿದೆ. ಆಯಾ ಆಯಾ ಜಿಲ್ಲಾಧಿಕಾರಗಳು ರಜೆ ನೀಡುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಇತಂಹ ಸ್ಥಿತಿ ಇರಲಿಲ್ಲ. ರಾಜ್ಯದಲ್ಲಿ ಈಗಾಗಲೇ ಕೆಲವು ಕಡೆ ಶಾಲಾ ಕಾಲೇಜು ನಡೆಯುತ್ತೀವೆ. ಕೆಲವು ಕಡೆ ಸಮವಸ್ತ್ರ ಹಾಕಿಕೊಂಡು ಕಾಲೆಜುಗಳಿಗೆ ಬರುತ್ತಿದ್ದಾರೆ ಅಲ್ಲಿ ಯಾವ ಸಮಸ್ಯೆ ಇಲ್ಲ. ಬಿಜಾಪುರ, ಶಿವಮೊಗ್ಗ, ಬಾಗಲಕೋಟೆ ಕೆಲವು ಕಡೆ ಸಂಘರ್ಷ ಉಂಟಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರಣಿ
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರಣಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಹಾಸನ ಹಾಸನದಲ್ಲಿ ತಾರಕ್ಕೇರಿದ ಹಿಜಾಬ್, ಕೇಸರಿ ಹೋರಾಟ!
ಹಾಸನ ಹಾಸನದಲ್ಲಿ ಹಿಜಾಬ್, ಕೇಸರಿ ಹೋರಾಟ ತಾರಕ್ಕೇರಿದೆ. ಹಿಜಾಬ್ ಪರ ಕೋರ್ಟ್ ತೀರ್ಪು ಬಂದರೆ ನಾವು ಹೋರಟ ನಿಲ್ಲಿಸಲ್ಲ. ಯೂನಿಫಾರ್ಮ್ ಎಂದರೆ ಎಲ್ಲರೂ ಒಂದೇ. ಎಲ್ಲರಿಗೂ ಯೂನಿಫಾರ್ಮ್ ಕಡ್ಡಾಯ ಆಗಬೇಕು. ಅವರು ಹಿಜಾಬ್ ಧರಿಸಿದರೆ ನಾವು ಸೀರೆ ಹಾಕಿ ಬರುತ್ತೇವೆ. ಈ ಎಲ್ಲಾ ಗೊಂದಲಗಳ ಬದಲು ಯೂನಿಫಾರ್ಮ್ ಕಡ್ಡಾಯ ಮಾಡಿ. ಇದುವರೆಗೆ ಹಿಜಾಬ್ ಬುರ್ಕಾ ಹಾಕದ ಸಂಕಷ್ಟ ವಿದ್ಯಾರ್ಥಿಗಳು ದರಿಸೋಕೆ ಶುರುಮಾಡಿಸಿದ್ದಾರೆ. ಹಿಜಾಬ್, ಬುರ್ಕಾ ಧರಿಸಬೇಡಿ ಎಂದು ನಾವು ಹೇಳುತ್ತಿಲ್ಲ. ಅವರು ಅದನ್ನು ಕಾಲೇಜಿನ ಹೊರಗೆ ಧರಿಸಲಿ, ಕಾಲೇಜಿನಲ್ಲಿ ಎಲ್ಲರಂತೆ ಇರಲಿ ಅಂತ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
ಶಿವಮೊಗ್ಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದ ಕೆಲವು ಕಡೆ ಕಲ್ಲುತೂರಾಟ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಶಿವಮೊಗ್ಗ ನಗರದಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಅಂತ ಟಿವಿ9ಗೆ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಮಾಹಿತಿ ನೀಡಿದ್ದಾರೆ.
ಆರ್ಎಸ್ಎಸ್ ಜಾತಿ ವಿಷ ಬೀಜ ಬಿತ್ತುತ್ತಿದೆ ಎಂದು ಆಕ್ರೋಶ; ಎನ್ಎಸ್ಯುಐ ವಿದ್ಯಾರ್ಥಿಗಳಿಂದ ಬಳ್ಳಾರಿಯಲ್ಲಿ ದಿಢೀರ್ ಪ್ರತಿಭಟನೆ
ಬಳ್ಳಾರಿಯಲ್ಲಿ ಎನ್ಎಸ್ಯುಐ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಹಿಜಾಬ್ ಮತ್ತು ಕೇಸರಿ ಶಾಲು ಹೆಸರಲ್ಲಿ ಸರ್ಕಾರದಿಂದ ರಾಜಕೀಯ ಮಾಡಲಾಗುತ್ತಿದೆ. ಶಾಲೆ ಕಾಲೇಜಿನಲ್ಲಿ ಪಾಠ ಪ್ರವಚನ ಬಿಟ್ಟು ಧರ್ಮ ರಾಜಕಾರಣ ಮಾಡಲಾಗ್ತಿದೆ. ಆರ್ಎಸ್ಎಸ್ ಜಾತಿ ವಿಷ ಬೀಜ ಬಿತ್ತುತ್ತಿದೆ. ಸಂಘದ ಹೆಸರಲ್ಲಿ ಪ್ರಚೋದನೆ ಮಾಡುವವರನ್ನು ಬಂಧಿಸುವಂತೆ ಎಂದು ಎನ್ಎಸ್ಯುಐ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರಿಹರ: ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರಿಂದ ಲಾಠಿ ಪ್ರಹಾರ
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ದಾವಣಗೆರೆ ಜಿಲ್ಲೆ ಹರಿಹರ ಸರ್ಕಾರಿ ಕಾಲೇಜಿನಲ್ಲಿ ಸಂಘರ್ಷ ಉಂಟಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಕೇಸರಿ, ನೀಲಿ ಶಾಲು ಮಧ್ಯೆ ವಾಗ್ವಾದ; ಪರಸ್ಪರ ಘೋಷಣೆ ಕೂಗಿದ 18 ವಿದ್ಯಾರ್ಥಿಗಳನ್ನು ಕರೆದೊಯ್ದು ಪೊಲೀಸರು
ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಕೇಸರಿ-ನೀಲಿ ಶಾಲು ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಪರಸ್ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಶಾಂತಗೊಳಿಸಲು ಸಿಂಧನೂರು ನಗರ ಪೊಲೀಸರು ಆಗಮಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಜೈ ಶ್ರೀರಾಮ್ ಹಾಗೂ ಜೈ ಭೀಮ್ ಎಂದು ಪರಸ್ಪರ ಘೋಷಣೆ ಕೂಗಿದ 18 ವಿದ್ಯಾರ್ಥಿಗಳನ್ನು ಪೊಲೀಸರು ಕರೆದೊಯ್ದಿದ್ದಾರೆ.
ಶಿವಮೊಗ್ಗದ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ಪ್ರಕರಣ: ಕಾಲೇಜಿನ 6 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ
ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಪ್ರತಿಭಟನೆ ನಡೆದಿದ್ದು, ಶಿವಮೊಗ್ಗದ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಲೇಜಿನ 6 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ನಡೆಗೆ ವಿದ್ಯಾರ್ಥಿಗಳು, ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ
ಶಿವಮೊಗ್ಗದ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ಪ್ರಕರಣ ತಾರಕಕ್ಕೇರಿದೆ. ಹೀಜಾಬ್ ಮತ್ತು ಕೇಸರಿ ಶಾಲಿನ ನಡುವೆ ಸಂಘರ್ಷ ಜೋರಾಗಿದ್ದು, ಶಿವಮೊಗ್ಗದಲ್ಲಿ ತಹಶೀಲ್ದಾರ್ ನಾಗರಾಜ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರಾವಳಿ ಪ್ರದೇಶದಲ್ಲೇ ಈ ರೀತಿಯ ಸಮಸ್ಯೆಗಳ ಮೂಲ ಪ್ರಾರಂಭವಾಗುವುದು: ಹೆಚ್ಡಿ ಕುಮಾರಸ್ವಾಮಿ
ಇದು ಆರಂಭವಾಗಿರುವುದು ರಾಜ್ಯದಲ್ಲಿ ಅಶಾಂತಿ ವಾತವರಣ ಉಂಟು ಮಾಡಲು. ಕೆಲವು ಸಂಘಟನೆಗಳು ಇದಕ್ಕೆ ಪ್ರೋತ್ಸಹ ಕೊಟ್ಟಿದ್ದಾರೆ. ಇದನ್ನು ಮುಂದೆ ಎಲ್ಲಿ ತೆಗೆದುಕೊಂಡು ಹೋಗುತ್ತಾರೆ ಗೊತ್ತಿಲ್ಲ. ಯಾವುದೇ ಸಂಘಟನೆ ಇದ್ದರು ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ರಾಷ್ಟ್ರೀಯ ಪಕ್ಷಗಳ ಅಧೀನದಲ್ಲಿ ಕೆಲವು ಸಂಘ ಸಂಸ್ಥೆಗಳ ಹಿಡನ್ ಅಜೆಂಡ್ ಇದೆ. ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಸಂಘಟನೆಗಳು ಇವೆ. ಆ ಸಂಘಟನೆಗಳಿಂದ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಕರಾವಳಿ ಪ್ರದೇಶದಲ್ಲೇ ಈ ರೀತಿಯ ಸಮಸ್ಯೆಗಳ ಮೂಲ ಪ್ರಾರಂಭವಾಗುವುದು. ಪ್ರಾರಂಭದಲ್ಲೇ ಸರ್ಕಾರ ಇಂತಹ ವಿಚಾರವನ್ನು ಮೊಟಕುಗೊಳಿಸಬೇಕು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಒಂದು ವಾರಗಳ ಕಾಲ ಕಾಲೇಜುಗಳಿಗೆ ರಜೆ ನೀಡಬೇಕು: ಯತ್ನಾಳ್
ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಹೊರ ಬೀಳಲಿರುವ ಸಾಧ್ಯತೆ ಇದೆ. ನ್ಯಾಯಾಲಯದ ತೀರ್ಪು ಹೊರ ಬೀಳೋವರೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಿ. ಒಂದು ವಾರಗಳ ಕಾಲ ಕಾಲೇಜುಗಳಿಗೆ ರಜೆ ನೀಡಬೇಕು. ಉದ್ದೇಶಪೂರ್ವಕವಾಗಿ ಗಲಾಟೆ ನಡೆಸುತ್ತಾರೆ. ಹಿಜಾಬ್ ಬೆಂಬಲಿಸೋರ ಉದ್ದೇಶವೇ ಗಲಾಟೆಯಾಗಿದೆ. ಅಶಾಂತಿ ಮೂಡಿಸೋದು ಅವರ ಉದ್ದೇಶ. ಕೋರ್ಟ್ ಶೀಘ್ರದಲ್ಲೇ ನ್ಯಾಯ ಕೊಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.
ನಮಗೆ ಹಿಜಾಬ್ ಬೇಕೆ ಬೇಕು: ಕೇಸರಿ, ಬಿಳಿ, ಹಸಿರು ಬಣ್ಣದ ಹಿಜಾಬ್ ಧರಿಸಿ ಆಕ್ರೋಶ
ರಾಯಚೂರು ಜಿಲ್ಲೆಯಲ್ಲಿ ಹಿಜಾಬ್ ಪರ ವಿದ್ಯಾರ್ಥಿನಿಯರು ಕೇಸರಿ, ಬಿಳಿ, ಹಸಿರು ಬಣ್ಣದ ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ಹಿಜಾಬ್ ಬೇಕೆ ಬೇಕು. ಇದು ನಮ್ಮ ಮೂಲಭೂತ ಹಕ್ಕು. ಸರ್ಕಾರ ಏನೇ ಹೇಳಲಿ, ನಾವೂ ಹಿಜಾಬ್ ಧರಿಸಿಯೇ ತೀರುತ್ತೇವೆ. ನಮ್ಮ ಸೇಫ್ಟಿಗೆ ಹಿಜಾಬ್ ಹಾಕಿದರೇ ತಪ್ಪೇನು? ನಿಮ್ಮ ಕೇಸರಿ ಶಾಲ್ ನಮ್ಮ ವಿರೋಧವಿಲ್ಲ ಎಂದು ವಿದ್ಯಾರ್ಥಿನಿಯರು ಧರಣಿ ನಡೆಸಿದ್ದಾರೆ.
ಯೋಧನ ರಕ್ತಕ್ಕಿಂತ ವಿದ್ವಾಂಸನ ಶಾಹಿಗೆ ಬೆೆಲೆಯಿದೆ: ಪ್ರವಾದಿಗಳ ಹೇಳಿಕೆ ಉಲ್ಲೇಖಿಸಿದ ನ್ಯಾ. ಕೃಷ್ಣ ದೀಕ್ಷಿತ್
ಯೋಧನ ರಕ್ತಕ್ಕಿಂತ ವಿದ್ವಾಂಸನ ಶಾಹಿಗೆ ಬೆೆಲೆಯಿದೆ. ಜ್ಞಾನ ಯಾವುದೇ ಮೂಲೆಯಿಂದ ಬಂದರೂ ಸ್ವೀಕರಿಸಬೇಕು ಎಂದು ಪ್ರವಾದಿಗಳ ಹೇಳಿಕೆಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಉಲ್ಲೇಖಿಸಿದ್ದಾರೆ. ಬಳಿಕ ಕೇರಳದ ವ್ಯಕ್ತಿಯ ವಾದವನ್ನೂ ಆಲಿಸಲು ಕೋರ್ಟ್ ಸಮ್ಮತಿ ನೀಡಿದೆ.
ಸರ್ಕಾರದ ಮೌನವೇ ಇವತ್ತಿನ ಪರಿಸ್ಥಿತಿಗೆ ಕಾರಣ: ಯುಟಿ ಖಾದರ್
ನೋಡಿ ಸರ್ಕಾರ ಇವತ್ತು ಮೌನದಿಂದ ನೋಡಿಕೊಂಡಿದೆ. ಇದು ಅತ್ಯಂತ ಖಂಡನೀಯ ಮತ್ತು ಶೋಚನೀಯ. ಸರ್ಕಾರ ಇವತ್ತು ಜವಾಬ್ದಾರಿಯುತವಾಗಿ ಆಲೋಚನೆ ಮಾಡಬೇಕು. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಹೊಸ ಯೂನಿಫಾರ್ಮ್ ಮಾಡಿರೋದ್ನನು ಹಿಂತೆಗೆಯಬೇಕು. ಹಿಂದೆ ಇರುವ ರೀತಿಯಲ್ಲೇ ಮುಂದುವರಿಸಬೇಕು. ಸರ್ಕಾರದ ಮೌನವೇ ಇವತ್ತಿನ ಪರಿಸ್ಥಿತಿಗೆ ಕಾರಣ. ಕೋರ್ಟ್ ತೀರ್ಪು ಇನ್ನು ಎರಡ್ಮೂರು ದಿನ ಆಗಬಹುದು. ಹೀಗಾಗಿ ಹಿಂದೆ ಇದ್ದ ಪದ್ದತಿಯನ್ನೇ ಸರ್ಕಾರ ಮುಂದುವರಿಸಿಕೊಂಡೇ ಹೋಗಬೇಕು ಎಂದು ಯುಟಿ ಖಾದರ್ ಹೇಳಿದ್ದಾರೆ.
ಒಂದು ತಾಯಿ ಮಕ್ಕಳಂತೆ ಶಾಲೆಯಲ್ಲಿ ಇರಬೇಕು: ಸಚಿವ ಮುನಿರತ್ನ
ಹಿಜಬ್ ಹಾಗೂ ಕೇಸರಿ ಶಾಲು ವಿವಾದ. ಇದು ದೇಶದಲ್ಲಿ ಮಕ್ಕಳ ಮನಸ್ಸನ್ನು ಒಡೆಯುವ ಕೆಲಸ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕಾರ್ಯಕ್ರಮ ಆರಂಭವಾಗಿದೆ. ಕೆಲಸ ಇದು ದೇಶ ದ್ರೋಹದ ಕೆಲಸ. ಶಾಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಕೆಲಸ ನಡೆಯುತ್ತಿದೆ. ಒಂದು ತಾಯಿ ಮಕ್ಕಳಂತೆ ಶಾಲೆಯಲ್ಲಿ ಇರಬೇಕು. ಶಾಲೆಯಲ್ಲಿ ಕಾನೂನಿನಂತೆ ಎಲ್ಲರೂ ಪಾಲಿಸಬೇಕು. ಸಮವಸ್ತ್ರ ಧರಿಸಿ ಶಾಲೆಗೆ ಬರಬೇಕು. ಇದರ ಹಿಂದೆ ರಾಜಕೀಯ ಇದೆ. ಇದರ ಬಗ್ಗೆ ಕೆಟ್ಟ ಸಂದೇಶ ಕೊಡಲಾಗುತ್ತಿದೆ. ಪೋಷಕರು ರಾಜಕಾರಣಿಗಳ ಕೈಗೆ ಮಕ್ಕಳ ಭವಿಷ್ಯ ಕೊಡಬೇಡಿ ಎಂದು ಕೋಲಾರದಲ್ಲಿ ಟಿವಿ9ಗೆ ಸಚಿವ ಮುನಿರತ್ನ ಹೇಳಿಕೆ ನೀಡಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಹಿಜಾಬ್ನ ತಪಾಸಣೆ ನಡೆಸಲು ಹೈಕೋರ್ಟ್ ಅನುಮತಿ
ಪರೀಕ್ಷೆಯಲ್ಲಿ ಅಕ್ರಮ ನಡೆಯಬಾರದೆಂದು ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಪರೀಕ್ಷೆಯಲ್ಲಿ ಹಿಜಾಬ್ನ ತಪಾಸಣೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.
ಹದೀಸ್ ಪ್ರಕಾರ ಫರ್ಜ್ ಪಾಲಿಸದಿರುವುದು ಹರಾಮ್ ಎಂದು ಪರಿಗಣಿಸಲಾಗುವುದು
ಖುರಾನ್, ಹದೀಸ್ ವಸ್ತ್ರಸಂಹಿತೆ ಗುರುತಿಸಿದೆ. ಮುಖ ಹೊರತುಪಡಿಸಿ ಉಳಿದ ಭಾಗ ಪ್ರದರ್ಶಿಸಬಾರದು. ಈ ಸೂಚನೆ ಪಾಲಿಸುವುದು ಹದೀಸ್ ಪ್ರಕಾರ, ಫರ್ಜ್ ಪಾಲಿಸದಿರುವುದು ಹರಾಮ್ ಎಂದು ಪರಿಗಣಿಸಲಾಗುವುದು ಎಂದು ವಕೀಲರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸರಕಾರದ 70 ವರ್ಷಗಳ ಆಡಳಿತದಲ್ಲಿ ಇಂತಹ ಘಟನೆ ಎಂದೂ ನಡೆದಿಲ್ಲ: ಸತೀಶ ಜಾರಕಿಹೊಳಿ
ಶಾಲಾ-ಕಾಲೇಜುಗಳಲ್ಲಿ ಬಣ್ಣ ಬಣ್ಣಗಳ ಮಧ್ಯೆ ಗಲಾಟೆ ಪ್ರಾರಂಭವಾಗಿದೆ. ಕೇಸರಿ ಹಾಗೂ ಅದರ ವಿರುದ್ಧ ಹಲವು ಬಣಗಳ ಮಧ್ಯೆ ಘರ್ಷಣೆ ನಡೆಯುತ್ತಿದೆ. ಘರ್ಷಣೆ ತಪ್ಪಿಸಲು ಸರಕಾರ, ಶಾಲಾ ಆಡಳಿತ ಮಂಡಳಿ ಮುಂದಾಗಬೇಕು. ಈ ವಿವಾದ ರಾಜಕೀಯ ಆಗಿದೆ. ಹೀಗಾಗಬಾರದಿತ್ತು. ಕಾಂಗ್ರೆಸ್ ಸರಕಾರದ 70 ವರ್ಷಗಳ ಆಡಳಿತದಲ್ಲಿ ಇಂತಹ ಘಟನೆ ಎಂದೂ ನಡೆದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ರೀತಿ ಆಗುತ್ತಿರುವುದು ದುರದೃಷ್ಟಕರ. ತಕ್ಷಣವೇ ವಿವಾದ ತಣ್ಣಗಾಗಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಹದೀಸ್, ಸುರಾಗಳಲ್ಲಿನ ವಚನಗಳನ್ನು ಉಲ್ಲೇಖಿಸುತ್ತಿರುವ ವಕೀಲರು
ಧರ್ಮದ ಮೂಲಭೂತ ಅಂಶಗಳಿಗೆ ಪೂರಕವಾದ ಆಚರಣೆಗಳು ಧರ್ಮದ ಅತ್ಯಗತ್ಯ ಭಾಗವಾಗಿದೆ ಎಂದು ಹದೀಸ್, ಸುರಾಗಳಲ್ಲಿನ ವಚನಗಳನ್ನು ವಕೀಲರು ಉಲ್ಲೇಖಿಸುತ್ತಿದ್ದಾರೆ. ಹಿಜಾಬ್ ಕೂದಲು, ಕುತ್ತಿಗೆ ಮುಚ್ಚಬೇಕು.ಕೈ, ಮುಖ ಬಿಟ್ಟು ಉಳಿದುದನ್ನು ಅಪರಿಚಿತರಿಗೆ ತೋರಿಸಬಾರದು. ಸಡಿಲವಾದ ಉದ್ದನೆಯ ಬಟ್ಟೆಯನ್ನು ತೊಡಬೇಕು. ಮುಸ್ಲಿಂ ವಸ್ತ್ರ ಸಂಹಿತೆಯ ಉಲ್ಲಂಘನೆಯಾದರೆ ಶಿಕ್ಷೆಯಿದೆ. ಹದೀಸ್ನಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆ ಬಗ್ಗೆ ತಿಳಿಸಲಾಗಿದೆ ಎಂದು ವಕೀಲರು ಉಲ್ಲೇಖಿಸಿದ್ದಾರೆ.
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಬೆಂಬಲಿಸಿ ಹುಕ್ಕೇರಿ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಬೆಂಬಲಿಸಿ ಹುಕ್ಕೇರಿ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಘೋಷಣೆ ಕೂಗುತ್ತಿದ್ದು, ಹುಕ್ಕೇರಿ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿದೆ. ಹಿಜಾಬ್ ನಮ್ಮ ಹಕ್ಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ.
ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ: ಡಿಕೆ ಶಿವಕುಮಾರ್
ವಿವಾದದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಸಚಿವರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವ ಸಚಿವರಿಗೂ ಉತ್ತರ ಕೊಡಲು ಹೋಗುವುದಿಲ್ಲ. ಯಾರ್ ಯಾರ್ ರಾಜಕಾರಣ ಮಾಡಕೋಬೇಕು. ಯಾರ್ ಯಾರ್ ಸೀಮೆ ಎಣ್ಣೆ ಹಾಕೋಬೇಕು. ಯಾರ್ ಯಾರ್ ಎಷ್ಟೆಷ್ಟು ಶಾಲುಗಳಿಗೆ ಆರ್ಡರ್ ಕೊಟ್ಟಿದ್ದಾರೆ ಎಂದು ಗೊತ್ತಿದೆ.ಸಚಿವರ ರಾಜಕೀಯ, ಬಿಜೆಪಿ ರಾಜಕೀಯ, ಸಂಘಪರಿವಾರದ ರಾಜಕೀಯ, ಕಾಂಗ್ರೆಸ್ ರಾಜಕೀಯ, ಎಸ್ಡಿಪಿಐ ರಾಜಕೀಯ ಇವೆಲ್ಲ ಈಗ ಬೇಡ. ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ. ಕೋರ್ಟ್ ಕೊಟ್ಟ ಆದೇಶಕ್ಕೆ ತಲೆ ಬಾಗಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಕೇರಳ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸುತ್ತೇನೆ: ವಕೀಲ ದೇವದತ್ ಕಾಮತ್
ಈ ಬಗ್ಗೆ ಕೇರಳ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸುತ್ತೇನೆ ಎಂದು ಹಿಜಾಬ್ ಬಗೆಗಿನ ಕೇರಳ ಹೈಕೋರ್ಟ್ ತೀರ್ಪನ್ನು ಹಿರಿಯ ವಕೀಲರಾದ ದೇವದತ್ ಕಾಮತ್ ಓದುತ್ತಿದ್ದಾರೆ. ಧಾರ್ಮಿಕ ಆಚರಣೆ, ಸರ್ಕಾರದ ನಿಯಮದ ನಡುವೆ ಗೊಂದಲವಿದ್ದಾಗ ಕೋರ್ಟ್ ಇದನ್ನು ತೀರ್ಮಾನಿಸಬೇಕು. ಲಕ್ಷ್ಮಿಂದ್ರ ತೀರ್ಥ ಸ್ವಾಮಿಯರ್ vs ರಾಜ್ಯ, ಅಮೆರಿಕಾ ಸಂವಿಧಾನ, ಹಳೆಯ ತೀರ್ಪು ಉಲ್ಲೇಖಿಸಲಾಗಿದೆ.
ಇಸ್ಲಾಂನ ಎಲ್ಲಾ ಸೂಚನೆಗಳೂ ಕಡ್ಡಾಯವಾಗಿ ಪಾಲಿಸಬೇಕೇ: ಅರ್ಜಿದಾರರಿಗೆ ಹೈಕೋರ್ಟ್ ಪ್ರಶ್ನೆ
ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ ಮುಂದುವರಿಸಿದ್ದಾರೆ. ಅರ್ಜಿದಾರರು ಕೇರಳದ ಹೈಕೋರ್ಟ್ ತೀರ್ಪು ಉಲ್ಲೇಖಿಸುತ್ತಿದ್ದು, ಎದೆಯ ಮೇಲೆ ಶಿರದ ಮೇಲೆ ವಸ್ತ್ರ ಧರಿಸಬೇಕು. ಖಾಸಗಿ ಅಂಗಗಳ ಮೇಲೆ ವಸ್ತ್ರ ಧರಿಸಬೇಕು. ಪತಿ, ಮಕ್ಕಳು, ಸಖಿಯರ ಮುಂದೆ ಮಾತ್ರ ವಿನಾಯಿತಿಯಿದೆ. ಆಪ್ತವರ್ಗದ ಮುಂದೆ ಮಾತ್ರ ಹಿಜಾಬ್ಗೆ ವಿನಾಯಿತಿ ಇದೆ ಎಂದು ತಿಳಿಸಿದ್ದಾರೆ. ಈ ವೇಳೆ ಅರ್ಜಿದಾರರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದ್ದು, ಇಸ್ಲಾಂನ ಎಲ್ಲಾ ಸೂಚನೆಗಳೂ ಕಡ್ಡಾಯವಾಗಿ ಪಾಲಿಸಬೇಕೇ ಎಂದು ಕೇಳಿದೆ.
ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿಧ್ವಜ ಹಾರಿಸುವ ಅಗತ್ಯವೇನಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಇಂದು ಅತ್ಯಂತ ದುಃಖದ ದಿನ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದ ಹಿಡಿದು ನನ್ನ 44 ವರ್ಷದ ಜೀವನದಲ್ಲಿ ಇಂದು ದುಃಖದ ದಿನ. ಶಿವಮೊಗ್ಗದಲ್ಲಿ ರಾಷ್ಟ್ರದ ಧ್ವಜ ಕೆಳಗೆ ಇಳಿಸಿ ಕೇಸರಿ ಧ್ವಜ ಹಾರಿಸ್ತಾರೆ. ನಮ್ಮ ರಾಷ್ಟ್ರಧ್ವಜ ಕೆಳೆಗೆ ಇಳಿಯುವುದನ್ನ ನೋಡಿ ನನಗೆ ಸಹಿಸಲಾಗಲಿಲ್ಲ. ಕೇಸರಿ ಬಗ್ಗೆ ಎಲ್ಲರಿಗೂ ಗೌರವ ಇದೆ. ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ. ಹೀಗಿರುವಾಗ ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿಧ್ವಜ ಹಾರಿಸುವ ಅಗತ್ಯವೇನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬನಹಟ್ಟಿಯಲ್ಲಿ ಮತ್ತೆ ಲಾಠಿ ಬೀಸಿದ ಪೊಲೀಸರು
ಹಿಜಾಬ್ ಕಲಹ ಹಿನ್ನೆಲೆ ಬನಹಟ್ಟಿಯಲ್ಲಿ ಪೊಲೀಸರು ಮತ್ತೆ ಲಾಠಿ ಬೀಸಿದ್ದಾರೆ. ಗಲಾಟೆ ಹಿನ್ನಲೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಳುಹಿಸಲು ಕೆಲ ಕಿಡಿಗೇಡಿಗಳು ಅಡ್ಡಿ ಮಾಡಿದ್ದರು. ಹೀಗಾಗಿ ಕಿಡಿಗೇಡಿಗಳಿಗೆ ಬೆತ್ತದ ರುಚಿ ಕೊಟ್ಟು ಪೊಲೀಸರು ಚದುರಿಸುತ್ತಿದ್ದಾರೆ.
ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುವಾಗ ಮೂಲ ಹೆಸರಿಸಬೇಕು: ನ್ಯಾ.ಕೃಷ್ಣ ದೀಕ್ಷಿತ್
ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುವಾಗ ಭಾಷಾಂತರಿಸಿದವರ ಹೆಸರನ್ನು ಉಲ್ಲೇಖಿಸಬೇಕು. ಹೀಗೆಂದು ಖ್ಯಾತ ಕಾನೂನು ಪುಸ್ತಕಗಳ ಸಂಪಾದಕ ಮುಲ್ಲಾ ಹೇಳಿದ್ದಾರೆ ಎಂದು ನ್ಯಾ.ಕೃಷ್ಣ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.
ಬುರ್ಕಾ ತೆಗೆಯಿರಿ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ; ವಿದ್ಯಾರ್ಥಿನಿಯಿಂದ ಸಚಿವರಿಗೆ ದೂರು
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಸರ್ಕಾರಿ ಕಾಲೇಜಿನಲ್ಲಿ ಬುರ್ಕಾ ತೆಗೆಯಿರಿ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ ಎಂದು ಸಚಿವ ನಾರಾಯಣ ಗೌಡರಿಗೆ ಬುರ್ಕಾ ತೊಟ್ಟ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ನಮಗೆ ತೊಂದರೆಯಾಗುತ್ತಿದೆ. ಬುರ್ಕಾ ತೆಗೆದು ಬನ್ನಿ ಎಂದು ಹೇಳಿದ್ರು. ಈಗ ಹಿಜಬ್ ತೆಗೆಯಿರಿ ಅಂತಿದ್ದಾರೆ. ಹೊರಗಿನವರನ್ನು ಕಾಲೇಜಿನ ಪ್ರಾಂಶುಪಾಲರು ಕರೆದುಕೊಂಡು ಬರುತ್ತಿದ್ದಾರೆ. ತೆಗೆಯಲಿಲ್ಲ ಅಂದರೆ ಕಾಲೇಜಿನ ಹೊರಗೆ ಹೋಗಿ ಅಂತ ಕಳುಹಿಸಿದ್ರು ಎಂದು ದೂರು ನೀಡಿದ್ದಾರೆ.
ಸರ್ಕಾರ ವಿದ್ಯಾರ್ಥಿನಿಯರ ಹಕ್ಕು ಉಲ್ಲಂಘಿಸಿದೆ: ಹಿರಿಯ ವಕೀಲ ದೇವದತ್ ಕಾಮತ್ ವಾದ
ಕನ್ನಡದಲ್ಲಿರುವ ವಕೀಲರು ಸರ್ಕಾರಿ ಆದೇಶ ಓದಿದ್ದಾರೆ. ಬೇರೆ ಹೈಕೋರ್ಟ್ ತೀರ್ಪು ಆಧರಿಸಿ ಸರ್ಕಾರ ಆದೇಶಿಸಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ. ಪವಿತ್ರ ಕುರಾನ್ನಲ್ಲಿ ಹೀಗೆಂದು ಉಲ್ಲೇಖವಾಗಿದೆ. ಹೀಗಾಗಿ ಸರ್ಕಾರ ವಿದ್ಯಾರ್ಥಿನಿಯರ ಹಕ್ಕು ಉಲ್ಲಂಘಿಸಿದೆ. ಸಂವಿಧಾನದ 19(1) A ಅಡಿಯಲ್ಲಿ ಇಚ್ಚೆಯ ಬಟ್ಟೆ ಧರಿಸುವುದು ಹಕ್ಕು ಸಂವಿಧಾನದ 21 ನೇ ವಿಧಿಯಡಿಯೂ ಇಚ್ಚಿಸುವ ಬಟ್ಟೆ ಧರಿಸುವ ಹಕ್ಕಿದೆ ಎಂದು ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದಾರೆ. ಹೈಕೋರ್ಟ್ ಲೈಬ್ರರಿಯಿಂದ ಕುರಾನ್ ಪ್ರತಿ ತರಿಸಲು ಸೂಚನೆ ನೀಟಲಾಗಿದೆ. ಬಳಿಕ ಶಾಂತಿ ಪ್ರಕಾಶನದ ಕುರಾನ್ ಅಧಿಕೃತವೆಂದು ಪರಿಗಣಿಸಬಹುದೇ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಬಿಜೆಪಿಯವರು ಯಾವುದೆ ಜಾತಿಯ ಪರ ಇಲ್ಲ: ಸಚಿವ ಎನ್. ನಾಗರಾಜ್
ಭಾರತ ಜಾತ್ಯಾತೀತ ರಾಷ್ಟ್ರ. ಈ ನೆಲದ ಕಾನೂನು ಎಲ್ಲರಿಗೂ ಒಂದೆ. ಎಲ್ಲರೂ ಕಾನೂನು ಪಾಲಿಸಬೇಕು. ಆಯಾ ಸಮುದಾಯದವರು ಬೇರೆ ಬೇರೆ ರಾಜಕಾರಣದ ಜೊತೆ ಸಮ್ಮೀಲನವಾಗಬಾರದು. ಇನ್ನೇನು ಅಧಿವೇಶನ ಆರಂಭವಾಗುತ್ತದೆ. ಇಂಥ ವಿಚಾರಗಳನ್ನು ಸಮನ್ವಯದಿಂದ ಬಗೆಯರಿಸಬೇಕು. ಇದನ್ನು ಯಾರು ಸೃಷ್ಟಿ ಮಾಡಿದ್ದಾರೆ ಅಂತ ಹೇಳೋಕೆ ಆಗಲ್ಲ. ಈ ಸಮಸ್ಯೆಯಿಂದ ಕೆಲವು ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕೆಲವರಿಂದ ಹಿಜಾಬ್ ಬೆಂಬಲವಿದೆ. ಬಿಜೆಪಿಯವರು ಯಾವುದೆ ಜಾತಿಯ ಪರ ಇಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಪೌರಾಡಳಿತ ಸಚಿವ ಎನ್. ನಾಗರಾಜ್ ಹೇಳಿಕೆ ನೀಡಿದ್ದಾರೆ.
ಹಿಜಾಬ್ ನಮ್ಮ ಹಕ್ಕು ನಾವು ಧರಿಸುತ್ತೇವೆ: ಎಸ್ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್
ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಚೀಪ್ ಮೆಂಟಲಿಟಿಯಿಂದ ಪ್ರಚಾರಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ. ನಿಷ್ಠಾವಂತರಾಗಿ ದುಡಿದು ಹೋರಾಟ ಮಾಡುವವರು ಇದಕ್ಕೆ ಬೆಂಬಲ ನೀಡಿಲ್ಲ. ಪ್ರಮೋದ್ ಮುತಾಲಿಕ್ ಆಗಲಿ ರಿಷಿ ಕುಮಾರ ಸ್ವಾಮೀಜಿ ಕೊಡುಗೆ ಏನು? ಹೆಣ್ಣು ಮಕ್ಕಳಿಗೆ ಹೊಡೆಯುವುದು ಬೇರೆ ಸಮಾಜದವರಿಗೆ ಬೆದರಿಸುವುದು ಇವರ ಕೊಡುಗೆ. ಎಸ್ಡಿಪಿಐ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದೆ. ಹಲವು ಸ್ವಾಮೀಜಿಗಳು ತಮ್ಮ ಪಾಡಿಗೆ ತಾವಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ: ಶಾಸಕ ಎಂ.ಪಿ.ರೇಣುಕಾಚಾರ್ಯ
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಸಂಘರ್ಷದ ಬದಲು ಸಾಮರಸ್ಯ ಕಾಪಾಡಿಕೊಳ್ಳಬೇಕು. ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಹೈಕೋರ್ಟ್ ಹೇಳುವುದನ್ನು ನಾವು ಕೇಳಬೇಕು. ಕಾಂಗ್ರೆಸ್ ನಾಯಕರಿಂದ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ ಎಂದು ದೆಹಲಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೊಹಮ್ಮದ್ ತಾಹಿರ್ ವಾದ ಮಂಡನೆ
ಹಲವು ಕಾಲೇಜುಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ಹಿಜಾಬ್ ಧರಿಸಲು ಅವಕಾಶಕ್ಕೆ ಮನವಿ ಸಲ್ಲಿಸಿದ್ದಾರೆ. ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದೆ. ಕನಿಷ್ಟ 2 ತಿಂಗಳು ಹಿಜಾಬ್ ಧರಿಸಲು ಅವಕಾಶ ನೀಡಿ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸರ್ಕಾರ ಹೊಸ ನೀತಿ ರೂಪಿಸಲಿ. ಅಲ್ಲಿಯವರೆಗೆ ಹಿಜಾಬ್ ಧರಿಸಲು ಅವಕಾಶ ನೀಡಿ. ಹೊಸ ನೀತಿ ರೂಪಿಸುವವರೆಗೆ ಹಿಜಾಬ್ಗೆ ಅವಕಾಶ ನೀಡಿ ಎಂದು ಮೊಹಮ್ಮದ್ ತಾಹಿರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಕಾನೂನು ಪ್ರಕಾರ ವಿಚಾರಣೆ ನಡೆಸೋಣ: ಹೈಕೋರ್ಟ್
ಕಾನೂನು ಪ್ರಕಾರ ವಿಚಾರಣೆ ನಡೆಸೋಣ. ಎಲ್ಲಾ ಭಾವನೆಗಳನ್ನು ಹೊರಗಿಡಿ. ಸಂವಿಧಾನವೇ ಭಗವದ್ಗೀತೆ ಇದ್ದಂತೆ. ಹೀಗಾಗಿ ಸಂವಿಧಾನದ ಪ್ರಕಾರ ವಿಚಾರಣೆ ನಡೆಸೋಣ ಎಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.
ಹಿಜಾಬ್ ಪರ ಮಾತನಾಡಲು ಬಂದ ಮುಖಂಡನಿಗೆ ಪ್ರಿನ್ಸಿಪಾಲ್ ಫುಲ್ ಕ್ಲಾಸ್
ನಿಮ್ಮ ಪ್ರಕಾರ ನಾನು ಚಿಲ್ಲರೆ ಮನುಷ್ಯನಾ? ಯಾರೋ ನಾಲ್ಕು ಜನ ಕಿಡಿಗೇಡಿಗಳ ಮಾತಿನಂತೆ ನಡೆದುಕೊಳ್ತಿದ್ದೀರಾ ಎಂದು ಮುಸ್ಲಿಂ ಧರ್ಮದ ಮುಖಂಡ ಪ್ರಾಂಶುಪಾಲರ ಬಳಿ ಹಿಜಾಬ್ ಪರ ಮಾತನಾಡಿದ್ದಾರೆ. ಇದರಿಂದ ಕೆಂಡಕಾರಿದ ಗದಗ ಹಳೇ ಕೋರ್ಟ್ ಆವರಣದಲ್ಲಿ ಇರುವ ಕಾಲೇಜಿನ ಪ್ರಾಂಶುಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಂಶುಪಾಲರು ಮತ್ತು ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಪೋಷಕರ ನಡುವೆ ಮಾತಿನ ಚಕಮಕಿಯಾಗಿದೆ.
ನೀಲಿ ಶಾಲು ಧರಿಸಿ ಕಾಲೇಜಿಗೆ ಬರಲು ಅನುಮತಿ ನೀಡಿ: ವಿದ್ಯಾರ್ಥಿಗಳಿಂದ ಮನವಿ
ನೀಲಿ ಶಾಲು ಧರಿಸಿ ಕಾಲೇಜು ಬಳಿಗೆ ಬಂದ ಕೆಲ ವಿದ್ಯಾರ್ಥಿಗಳು, ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದು, ಕಾಲೇಜಿಗೆ ನೀಲಿ ಶಾಲು ಧರಿಸಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ. ಚಿತ್ರದುರ್ಗದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಶಿಕಾರಿಪುರ ಪಟ್ಟಣದಲ್ಲಿ ಬಸ್ ಮೇಲೆ ಕಲ್ಲು ತೂರಾಟ
ಹಿಜಾಬ್ ವಿವಾದವು ಮಲೆನಾಡಿನಲ್ಲಿ ಕೂಡ ಹಿಂಸಾರೂಪ ಪಡೆದುಕೊಳ್ಳುತ್ತಿದೆ. ಶಿಕಾರಿಪುರ ಪಟ್ಟಣದಲ್ಲಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ತರಗತಿ ಬಹಿಷ್ಕಾರ ಮಾಡಿ ಹೋರಾಟಕ್ಕಿಳಿದ ನೂರಾರು ವಿದ್ಯಾರ್ಥಿಗಳು
ಹಾಸನ ಜಿಲ್ಲೆಯಲ್ಲಿ ಹಿಜಾಬ್ ಕೇಸರಿ ವಿವಾದ ತಾರಕಕ್ಕೇರಿದೆ. ತರಗತಿ ಬಹಿಷ್ಕಾರ ಮಾಡಿ ನೂರಾರು ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೆ. ವಿದ್ಯಾರ್ಥಿಗಳ ಹೋರಾಟದ ಹಿನ್ನೆಲೆಯಲ್ಲಿ ತರಗತಿಗಳನ್ನು ಬಂದ್ ಮಾಡಲಾಗಿದೆ. ಹಾಸನದ ಗೃಹ ವಿಜ್ಞಾನ ಕಾಲೇಜಿನಲ್ಲಿ ಅಘೋಷಿತವಾಗಿ ಬಂದ್ ಮಾಡಲಾಗಿದೆ.
ಕಲಬುರಗಿ ಜಿಲ್ಲೆಗೂ ಕಾಲಿಟ್ಟ ಹಿಜಾಬ್ ವಿವಾದ; ಬಡಿಗೆ ಹಿಡಿದು ನಿಂತ ಉಪನ್ಯಾಸಕರು
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಶ್ರೀರಾಮ ಸೇನೆ ಬೆಂಬಲಿತ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜು ಉಪನ್ಯಾಸಕರು ಬಡಿಗೆ ಹಿಡಿದು ನಿಂತು ತಡೆದಿದ್ದಾರೆ. ಈ ವೇಳೆ ಉಪನ್ಯಾಸಕ ಕರಿಗೂಳೇಸ್ವರ್ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಉತ್ತರ ಕನ್ನಡ: ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ
ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿರುವ ಶಿವಾಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಕೇಸರಿ ಶಾಲು ಧರಿಸಿ ತೊಟ್ಟು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗುತ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಸರಿ ಶಾಲನ್ನು ತಿರುಗಿಸುತ್ತ ವಿದ್ಯಾರ್ಥಿಗಳು ಧರಣಿ ನಡಿಸಿದ್ದಾರೆ.
ಸರ್ಕಾರದ ಸಮವಸ್ತ್ರ ನೀತಿ ಪ್ರಶ್ನಿಸಿ ಮತ್ತೊಂದು ರಿಟ್
ಹಿಜಾಬ್ ಧರಿಸಿದವರಿಗೆ ಶಾಲಾ ಕಾಲೇಜುಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಸಮವಸ್ತ್ರ ನೀತಿ ಪ್ರಶ್ನಿಸಿ ಮತ್ತೊಂದು ರಿಟ್ ಸಲ್ಲಿಸಲಾಗಿದೆ. ಈ ಕುರಿತು ಇಂದೇ ವಿಚಾರಣೆ ನಡೆಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಹೀಗಾಗಿ ಇಂದೇ ವಿಚಾರಣೆ ನಡೆಸಲು ಹೈಕೋರ್ಟ್ ಸಮ್ಮತಿ ಸೂಚಿಸಿದೆ. ಈಗಾಗಲೇ ಹಿಜಾಬ್‌ಗೆ ಅನುಮತಿ ಕೋರಿ 2 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇಂದು ಒಟ್ಟು ಮೂರು ಅರ್ಜಿಗಳ ವಿಚಾರಣೆ ನಡೆಯಲಿದೆ.
ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿಗೆ ಕಾರಣರಾದರೆ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿಗೆ ಕಾರಣರಾದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆ ಕೇಂದ್ರಬಿಂದು. ರಾಷ್ಟ್ರದ ಆಸ್ತಿಯಾಗಬೇಕಾದ ವಿದ್ಯಾರ್ಥಿಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಅಸ್ತ್ರಗಳಾಗದಂತೆ ಎಚ್ಚರವಹಿಸಿ. ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಹಿಜಾಬ್ಗೆ ನಿರ್ಬಂಧ; ಈ ಬಗ್ಗೆ ದಾಖಲಾಗಿರುವ ಮತ್ತೊಂದು ಅರ್ಜಿ
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಹಿಜಾಬ್ಗೆ ನಿರ್ಬಂಧ ಇರುವ ಹಿನ್ನೆಲೆ ಈ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ. ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಹಿಜಾಬ್ಗೆ ನಿರ್ಬಂಧ ಇರುವ ಹಿನ್ನೆಲೆ ಈ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ. ಪದವಿ ಕಾಲೇಜುಗಳಿಗೆ ಸರ್ಕಾರದ ಆದೇಶ ಅನ್ವಯವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ ಶಾಲೆ, ಪಿಯು ಕಾಲೇಜಿಗೆ ಮಾತ್ರ. ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹಿರ್ ವಾದ ಮಂಡನೆ ಮಾಡಿದ್ದಾರೆ.
ಕೋಲಾರದಲ್ಲಿ ಮುಂದುವರಿದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ
ಕೋಲಾರ ಜಿಲ್ಲೆಯ ಬಂಗಾರಪೇಟೆ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುಂದುವರೆದಿದೆ. ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ತರಗತಿಗಳಿಗೆ ಬಂದಿದ್ದಾರೆ. ಹಿಜಾಬ್ ಪರವಾಗಿ ಒಂದಷ್ಟು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಜಮಾವಣೆ ಮಾಡಿದರೆ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹಾಜರಾದ ಹಿನ್ನೆಲೆ, ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಬಂದಿದ್ದಾರೆ.
ದಾವಣಗೆರೆಯ ಬಿಎಸ್ಸಿ ಕಾಲೇಜಿನ ಬಳಿ ಸಮವಸ್ತ್ರ ವಿವಾದ
ಕೇಸರಿ ಶಾಲು ಧರಿಸಿ ದಾವಣಗೆರೆಯ ಬಿಎಸ್ಸಿ ಕಾಲೇಜಿನ ಬಳಿ ವಿದ್ಯಾರ್ಥಿಗಳು ಬಂದಿದ್ದಾರೆ. ಕೇಸರಿ ಶಾಲು ಧರಿಸಿ ಬಂದವರಿಗೆ ಪ್ರಾಂಶುಪಾಲರು ತಡೆದಿದ್ದು, ಹಿಜಾಬ್ ಧರಿಸಿ ಬಂದವರನ್ನೂ ಹೊರಗೆ ಕಳಿಸುವಂತೆ ಪಟ್ಟು ಹಿಡಿದಿದ್ದಾರೆ. ಕೋರ್ಟ್ ತೀರ್ಪು ಬರುವವರೆಗೆ ತೀರ್ಮಾನ ತೆಗೆದುಕೊಳ್ಳಲ್ಲ. ವಿದ್ಯಾರ್ಥಿಗಳು ಶಾಲು ತೆಗೆದಿಟ್ಟು ತರಗತಿಗೆ ತೆರಳಲು ಸೂಚನೆ ನೀಡಿದ್ದಾರೆ. ಪ್ರಾಂಶುಪಾಲರ ಸೂಚನೆ ಬಳಿಕ ವಿದ್ಯಾರ್ಥಿಗಳು ತರಗತಿಗೆ ಕೇಸರಿ ಶಾಲು ತೆಗೆದು ಬಂದಿದ್ದಾರೆ.
ಹಾಸನದಲ್ಲಿ ತಾರಕಕ್ಕೇರಿದ ವಿವಾದ; ಹಿಜಾಬ್, ಕೇಸರಿ ಶಾಲು ನಡುವೆ ನೀಲಿ ಶಾಲು
ಕೇಸರಿ, ಹಿಜಾಬ್ ವಿವಾದ ನಡುವೆಯೇ ನೀಲಿ ಶಾಲು ವಿವಾದ ತಲೆ ಎತ್ತಿದೆ. ಹಾಸನದ ಗೃಹ ವಿಜ್ಞಾನ ಕಾಲೇಜಿನ ಬಳಿ ಹಿಜಾಬ್ ವಿರೋಧಿಸಿ ನೂರಾರು ವಿದ್ಯಾರ್ಥಿಗಳು ನೀಲಿ ಶಾಲು ಹಾಕಿ ಧರಣಿ ನಡೆಸಿದ್ದಾರೆ. ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೆ. ಕಾಲೇಜು ಆವರಣದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಕಾಲೇಜು ಉಪನ್ಯಾಸಕರ ಜತೆಗೂ ವಿದ್ಯಾರ್ಥಿಗಳು ವಾದಕ್ಕಿಳಿದಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗುವುದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ್ಯವಿದೆ: ರಾಜ್ಯ ಬಿಜೆಪಿ ಟ್ವೀಟ್
ಉಡುಪಿ, ಕುಂದಾಪುರದ ವಿದ್ಯಾರ್ಥಿನಿಯರನ್ನು ಈ ವಿವಾದಕ್ಕೆ ಬಳಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗುವುದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ್ಯವಿದೆ. ಈಗ ರಾಜ್ಯಕ್ಕೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮೂಲಭೂತವಾದದ ಪ್ರವೇಶ ಎಷ್ಟು ಸರಿ? ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಿಜಬ್ ಕೇಸರಿ ಫೈಟ್; ರಜೆ ಘೋಷಿಸಿದ ಪ್ರಾಂಶುಪಾಲರು
ಎಂಜಿಎಂ ಕಾಲೇಜಿಗೆ ರಜೆ ಘೋಷಿಸಿದ ಪ್ರಾಂಶುಪಾಲರು, ಮುಂದಿನ ನಿರ್ಧಾರ ದವರೆಗೆ ಕಾಲೇಜಿಗೆ ರಜೆ ಎಂದು ತಿಳಿಸಿದ್ದಾರೆ. ಎಂಜಿಎಂ ಪ್ರಾಂಶುಪಾಲ ಡಾ. ದೇವಿದಾಸ ನಾಯಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಂಶುಪಾಲರು ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿಂದ ಹೊರಗೆ ಕಳುಹಿಸುತ್ತಿದ್ದಾರೆ. ಉಡುಪಿ ತಾಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಡುಪಿ ಇನ್ಸ್ಪೆಕ್ಟರ್ ಪ್ರಮೋದ್ ಕಾಲೇಜಿಗೆ ಆಗಮಿಸಿದ್ದಾರೆ. ಜತೆಗೆ ಕಾಲೇಜಿನ ಮುಂದೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಉಡುಪಿಯ ಎಂಜಿಎಂ ಕಾಲೇಜು ಮುಂದೆ ಹೈಡ್ರಾಮಾ
ಹಿಜಾಬ್ ತೊಟ್ಟು ಬಂದ ವಿದ್ಯಾರ್ಥಿನಿಯರಿಗೆ ತಡೆ ಹಿನ್ನೆಲೆ ಒಳಗಡೆ ಬಿಡಬೇಕೆಂದು ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಮತ್ತೊಂದೆಡೆ ಕೇಸರಿ ಪೇಟ ಧರಿಸಿ ಬಂದ ವಿದ್ಯಾರ್ಥಿಗಳು, ಕಾಲೇಜಿನ ಮುಂದೆ ಪರಸ್ಪರ ಪರ-ವಿರೋಧ ಘೋಷಣೆ ಕೂಗಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಮಂಡ್ಯ: ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ನಡುವೆ ವಾಕ್ ಸಮರ
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ನಡುವೆ ವಾಕ್ ಸಮರ ನಡೆದಿದೆ. ನಾವು ನಿಮಗೆ ತೊಂದರೆ ಮಾಡಿಲ್ಲ, ಹಿಜಾಬ್ ತೆಗೆಯಿರಿ ಎಂದು ಹೇಳಿಲ್ಲ. ನೀವು ಕ್ಲಾಸ್‌ಗೆ ಹೋಗಿ ಎಂದು ಆಡಳಿತ ಮಂಡಳಿ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮುಸ್ಲಿಂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಅವರು ಯಾಕೆ ಪ್ರೊಟೆಸ್ಟ್ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಇರಲು ಹೇಳಿ ಎಂದು ಮುಸ್ಲಿಂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಪಟೂರು ಪದವಿ ಕಾಲೇಜಿನ ಹಿಜಾಬ್ ವಿವಾದ; ಕಾಲೇಜಿನ ಎದುರು ಜನರ ಜಮಾವಣೆ
ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಬೆಂಬಲಕ್ಕೆ ಮುಸ್ಲಿಂ ಸಮುದಾಯದ ಯುವಕರು ನಿಂತಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಸರ್ಕಾರಿ ಪದವಿ ಕಾಲೇಜು ಎದುರು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಾಲೇಜು ಬಳಿ ಜನರು ಜಮಾವಣೆಯಾಗಿದ್ದಾರೆ.
ಧರಣಿಗೆ ಹೋದ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಸಮವಸ್ತ್ರ ವಿಚಾರದಲ್ಲಿ ಪೈಟ್ಗೆ ಇಳಿದಿರುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಸಮವಸ್ತ್ರ ವಿಚಾರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮತ್ತು ಧರಣಿಗೆ ಹೋದ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡಲ್ಲ. ಜತೆಗೆ ಹಾಜರಾತಿ ಇಲ್ಲದ ಮಕ್ಕಳಿಗೆ ಪಿಯು ಮುಖ್ಯ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಟಿವಿ9ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.
ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳು
ಮಂಡ್ಯದಲ್ಲಿ ವಿದ್ಯಾರ್ಥಿನಿ ಕಾಲೇಜು ಒಳಗೆ ಪ್ರವೇಶ ಮಾಡುತ್ತಿದ್ದಂತೆ ಜೈ ಶ್ರೀರಾಮ್ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಅಲ್ಲಾವು ಅಕ್ಬರ್ ಎಂದು ವಿದ್ಯಾರ್ಥಿನಿ ಘೋಷಣೆ ಕೂಗಿದ್ದಾಳೆ.
61 ನೇ ನಂಬರಾಗಿ ಹಿಜಾಬ್ ಕೇಸ್; ಮಧ್ಯಾಹ್ನದ ವೇಳೆಗೆ ವಿಚಾರಣೆ ಸಾಧ್ಯತೆ
ಸದ್ಯ ಬೇರೆ ಪ್ರಕರಣಗಳ ವಿಚಾರಣೆ ಆರಂಭವಾಗಿದೆ. ಪ್ರಕರಣ ಪಟ್ಟಿಯಲ್ಲಿ 61 ನೇ ನಂಬರಾಗಿ ಹಿಜಾಬ್ ಪ್ರಕರಣ ಇದೆ. ಹೀಗಾಗಿ ಮಧ್ಯಾಹ್ನದ ವೇಳೆಗೆ ವಿಚಾರಣೆ ಸಾಧ್ಯತೆ ಇದೆ.
ಸಮವಸ್ತ್ರದ ಗಲಾಟೆಯಲ್ಲಿ ಶಾಲೆ ತರಗತಿಯಿಂದ ಹೊರಗುಳಿದ ಮಕ್ಕಳಿಗಿಲ್ಲ ಹಾಜರಾತಿ
ಸಮವಸ್ತ್ರ ವಿಚಾರದಲ್ಲಿ ಫೈಟ್ಗೆ ಇಳಿದಿರುವ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಸಮವಸ್ತ್ರದ ಗಲಾಟೆಯಲ್ಲಿ ಶಾಲೆ ತರಗತಿಯಿಂದ ಹೊರಗುಳಿದ ಮಕ್ಕಳಿಗೆ ಹಾಜರಾತಿ ಇಲ್ಲ.
ಎಷ್ಟೇ ಕೇಸ್ ಸಲ್ಲಿಸಿದರೂ ಒಂದೇ ವಿಚಾರಣೆ ಎಂದ ನ್ಯಾಯಾಧೀಶರು
ಎಷ್ಟೇ ಕೇಸ್ ಸಲ್ಲಿಸಿದರೂ ಒಂದೇ ವಿಚಾರಣೆ ನಡೆಯಲಿದೆ. ನೀಡುವ ತೀರ್ಪು ಎಲ್ಲಾ ಕೇಸ್‌ಗೂ ಅನ್ವಯವಾಗಲಿದೆ ಎಂದು ನ್ಯಾ.ಕೃಷ್ಣ, ಎಸ್.ದೀಕ್ಷಿತ್ ಕೇಶವಾನಂದ ಭಾರತಿ ಪ್ರಕರಣ ಉಲ್ಲೇಖಿಸಿದ್ದಾರೆ.
ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ
ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾವಾಗಿದೆ. ತರಗತಿಗಳಿಗೆ ತೆರಳದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳುಕಾಲೇಜಿನ ಮುಂದೆ ಕೇಸರಿ ಧ್ವಜ ಕಟ್ಟಿದ್ದಾರೆ. ಕಾಲೇಜು ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೇಸರಿ ಶಾಲು ಹಾಕಿ ವಿದ್ಯಾರ್ಥಿಗಳು ಆಗಮನ; ಮಡಿಕೇರಿ ನಗರದ ಎಫ್ಎಂಸಿ ಕಾಲೇಜಿಗೆ ರಜೆ ಘೋಷಣೆ
ಕೇಸರಿ ಶಾಲು ಹಾಕಿ ವಿದ್ಯಾರ್ಥಿಗಳು ಆಗಮನ ಹಿನ್ನೆಲೆ ಮಡಿಕೇರಿ ನಗರದ ಎಫ್ಎಂಸಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಆನ್ಲೈನ್ ಕ್ಲಾಸ್ ಮಾಡುವುದಾಗಿ ಕಾಲೇಜು ಪ್ರಾಂಶುಪಾಲರು ಘೋಷಣೆ ಮಾಡಿದ್ದಾರೆ. ನಿನ್ನೆಯಿಂದ ಹಿಜಬ್-ಕೇಸರಿ ಶಾಲು ವಿವಾದ ಆರಂಭವಾಗಿದೆ. ಹೀಗಾಗಿ ರಜೆ ಘೋಷಣೆ ಮಾಡಲಾಗಿದೆ. ಸದ್ಯ ಕಾಲೇಜು ಆವರಣದಿಂದ ವಿದ್ಯಾರ್ಥಿಗಳು ಹೊರನಡೆದಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ; ರಾಜ್ಯ ಸರ್ಕಾರದ ಪರ ಎಜಿ ಪ್ರಭುಲಿಂಗ್ ಹಾಜರ್
ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಹಿನ್ನೆಲೆ ಇಂದು ರಿಟ್ ವಿಚಾರಣೆ ನಡೆಯಲಿದೆ. ವಾದಮಂಡನೆಗೆ ಸಿದ್ಧವಿರುವುದಾಗಿ ರಾಜ್ಯ ಸರ್ಕಾರದ ಪರ ಎಜಿ ಪ್ರಭುಲಿಂಗ್ ಹೇಳಿಕೆ ನೀಡಿದ್ದಾರೆ. ಲಿಖಿತ ಹೇಳಿಕೆಯನ್ನೂ ಕೋರ್ಟ್ಗೆ ಸಲ್ಲಿಸಲಾಗಿದ್ದು, ಇನ್ನೂ ಕೆಲವರು ಅರ್ಜಿ ಸಲ್ಲಿಸುತ್ತಿದ್ದಾರೆ. ಕಾಲಾವಕಾಶ ನೀಡುವಂತೆ ಓರ್ವ ಅರ್ಜಿದಾರರು ಮನವಿ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ಪರ ಎಜಿ ಪ್ರಭುಲಿಂಗ್ ಹೇಳಿದ್ದಾರೆ.
ಸರ್ಕಾರಿ ಪಿಯು ಕಾಲೇಜಿನ ಮೇಲೆ ಕಲ್ಲು ತೂರಾಟ
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿಯ ಸರ್ಕಾರಿ ಪಿಯು ಕಾಲೇಜಿನ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ಮಾಡಿದ್ದಾರೆ. ಒಂದೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಧರಣಿ ಮಾಡುತ್ತಿದ್ದಾರೆ. ಈ ವೇಳೆ ಕೆಲ ಕಿಡಿಗೇಡಿಗಳು ಕಾಲೇಜು ಮೇಲೆ ಕಲ್ಲೆಸಿದ್ದಾರೆ.
ಬಾಗಲಕೋಟೆ: ಸರ್ಕಾರಿ ಪಿಯು ಕಾಲೇಜಿನ ಮೇಲೆ ಕಲ್ಲು ತೂರಾಟ
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿಯ ಕಾಲೇಜು ಮೇಲೆ ಕಲ್ಲು ಎಸೆದಿದ್ದಾರೆ. ಸರ್ಕಾರಿ ಪಿಯು ಕಾಲೇಜಿನ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಾಲೇಜಿನೊಳಗೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದು, ಒಂದೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಪ್ರತಿಭಟನೆ ನಡೆದರೆ ಮತ್ತೊಂದೆಡೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ಧರಣಿ ನಡೆಯುತ್ತಿದೆ. ಈ ವೇಳೆ ಕೆಲ ಕಿಡಿಗೇಡಿಗಳು ಕಾಲೇಜು ಮೇಲೆ ಕಲ್ಲೆಸೆದಿದ್ದಾರೆ.
ಗದಗ: ಹಿಜಾಬ್ ಧರಿಸಿಕೊಂಡ ವಿದ್ಯಾರ್ಥಿನಿಯರ ಪ್ರತಿಭಟನೆ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಣಿ ನಡೆಸಿದ್ದಾರೆ. ಬೇಕೇ ಬೇಕು ನ್ಯಾಯಾ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್ ನಮ್ಮ ಹಕ್ಕು ಅಂತ ವಿದ್ಯಾರ್ಥಿನಿಯರು ಘೋಷಣೆ ಕೂಗಿದ್ದಾರೆ. ಸದ್ಯ ಗದಗ ಮಹಿಳಾ ಕಾಲೇಜ್ ಆವರಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಪೊಲೀಸರು ಕಾಲೇಜು ಆವರಣದಲ್ಲಿ ಬಿಡುಬಿಟ್ಟಿದ್ದಾರೆ.
ಬೇಕೇ ಬೇಕು ನ್ಯಾಯಾ ಬೇಕು ಅಂತ ಘೋಷಣೆ ಕೂಗಿ ಆಕ್ರೋಶ
ಗದಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಆವರಣದಲ್ಲಿ ಹಿಜಾಬ್ ಧರಿಸಿಕೊಂಡ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಕೇ ಬೇಕು ನ್ಯಾಯಾ ಬೇಕು ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಹಿಜಾಬ್ ನಮ್ಮ ಹಕ್ಕು ಅಂತ ವಿದ್ಯಾರ್ಥಿನಿಯರು ಘೋಷಣೆ ಕೂಗುತ್ತಿದ್ದಾರೆ. ಗದಗ ಮಹಿಳಾ ಕಾಲೇಜ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕಾಲೇಜ್ ಆವರಣದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.
ಶಿವಮೊಗ್ಗ: ಹಿಜಾಬ್ ಧರಿಸಿ ಒಳಗೆ ಹೋಗಲು ಅವಕಾಶ ನಿರಾಕರಣೆ; ವಿದ್ಯಾರ್ಥಿಗಳ ಆಕ್ರೋಶ
ಶಿವಮೊಗ್ಗ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕಾಲೇಜ್ ಒಳಗೆ ಹೋಗಲು ಮುಸ್ಲಿಂ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಈ ವೇಳೆ ಕಾಲೇಜು ಪ್ರಾಂಶುಪಾಲರು ಮತ್ತು ಸಿಬ್ಬಂದಿ ತಡೆದಿದ್ದಾರೆ. ಹಿಜಾಬ್ ಧರಿಸಿ ಒಳಗೆ ಹೋಗಲು ಅವಕಾಶ ನಿರಾಕರಣೆ ಬೆನ್ನೆಲ್ಲೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಪರ ವಿದ್ಯಾರ್ಥಿಗಳ ಜೊತೆ ಪೋಷಕರು ಪ್ರತಿಭಟನೆಯಲ್ಲಿ ಸಾತ್
ಬಾಗಲಕೋಟೆಯಲ್ಲಿ ಹಿಜಾಬ್ ಪರ ವಿದ್ಯಾರ್ಥಿಗಳ ಜೊತೆ ಪೋಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕಲ್ಲೆಸೆತ ವೇಳೆ ಓರ್ವನಿಗೆ ಗಾಯವಾಗಿದೆ.
ಹಿಜಾಬ್ ಕೇಸರಿ ಶಾಲು ವಿವಾದ; ರಬಕವಿಬನಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ಪಟ್ಟಣದ ಪಿಯು ಕಾಲೇಜು ಮುಂದೆ ನೂರಾರು ಜನರು ಜಮಾಯಿಸಿದ್ದಾರೆ. ಕಾಲೇಜು ಒಳಗಡೆ ಮುಸ್ಲಿಂ ವಿದ್ಯಾರ್ಥಿನಿಯರು ಧರಣಿ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ. ಕಾಲೇಜು ಒಳಗೆ ಹಾಗೂ ಹೊರಗಡೆ ಪರ ವಿರೋಧದ ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಪೊಲೀಸರಿಂದ ವಿದ್ಯಾರ್ಥಿಗಳ ಚದುರಿಸಲು ಯತ್ನ ಹಿನ್ನೆಲೆ, ಕಾಲೇಜು ಮುಂದೆ ಒಡೋಡಿ ವಿದ್ಯಾರ್ಥಿಗಳು ಹೊರನಡೆದಿದ್ದಾರೆ.
ಬಾಗಲಕೋಟೆ ಖಾಸಗಿ ಎಂಬಿಎ ಕಾಲೇಜಿನಲ್ಲಿ ಹಿಜಾಬ್ ತೆಗೆಯಲು ಒಪ್ಪಿದ ವಿದ್ಯಾರ್ಥಿನಿಯರು
ಕಾಲೇಜು ಪ್ರಾಧ್ಯಾಪಕರ ಮನವೊಲಿಕೆ ಬಳಿಕ ಹಿಜಾಬ್ ತೆಗೆಯಲು ಮುಸ್ಲಿಂ ವಿದ್ಯಾರ್ಥಿನಿಯರು ಒಪ್ಪಿಗೆ ನೀಡಿದ್ದಾರೆ. ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಖಾಸಗಿ ಎಂಬಿಎ ಕಾಲೇಜಿನಲ್ಲಿ ಹಿಜಾಬ್ ತೆಗೆಯಲು ಒಪ್ಪಿಗೆ ನೀಡಿದ ಬಳಿಕ ಕೇಸರಿ ಶಾಲು ತೆಗೆದು ಶಾಲೆ ಒಳ ಪ್ರವೇಶ ಮಾಡಿದ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿ.ವೈ.ವಿಜಯೇಂದ್ರ
ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದು ಬಹಳ ದುರದೃಷ್ಟಕರ ಸಂಗತಿ. ಶಾಲಾ ಕಾಲೇಜುಗಳಿಗೆ ಸಮವಸ್ತ್ರದಲ್ಲಿ ಹೋಗೋದು ಮುಂಚೆಯಿಂದ ಬಂದ ಪದ್ಧತಿ. ಸಮವಸ್ತ್ರ ಅಂದ್ರೆ ಏನು ಎಂಬುದು ಹೆಸರಲ್ಲೇ ಗೊತ್ತಾಗುತ್ತದೆ. ಶಾಲೆಗಳಲ್ಲಿ ಎಲ್ಲರೂ ಸಮಾನವಾಗಿ ಯೋಚನೆ ಮಾಡಬೇಕು. ಜಾತಿ ವಿಚಾರ, ಹಿಂದೂ – ಮುಸ್ಲಿಂ ಅನ್ನೋದು ಬರಬಾರದು ಎಂದು ತಿಳಿಸಿದ್ದಾರೆ.
ಹಿಜಾಬ್ ವಿರೋಧ ಖಂಡಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ವಿರೋಧ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ವಿಜಯನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಹಿಳಾ ನಾಗರಿಕ ಹಕ್ಕು ಸಮಿತಿ ಸದಸ್ಯರು ಸಾಥ್ ನೀಡಿದ್ದಾರೆ.
ಗದಗ: ಹಿಜಾಬ್ ತೆಗೆದು ತರಗತಿಗೆ ಬರಲು ವಿದ್ಯಾರ್ಥಿನಿಯರು ಹಿಂದೇಟು
ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇವೆ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇತ್ತ ಹಿಜಾಬ್ ಧರಿಸಿಕೊಂಡು ಬಂದರೆ ತರಗತಿಗೆ ಅವಕಾಶ ಇಲ್ಲ ಎಂದು ಪ್ರಾಚಾರ್ಯರು, ಸಿಬ್ಬಂದಿಗಳು ತಿಳಿಸಿದ್ದಾರೆ. ಜತೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕೊಠಡಿಯಲ್ಲಿ ಕೂರಿಸಿ ಉಪನ್ಯಾಸಕರು ಕೌನ್ಸಿಲಿಂಗ್ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯಲ್ಲೂ ಶುರುವಾದ ಹಿಜಾಬ್ ವಿವಾದ
ವಿಜಯನಗರ ಜಿಲ್ಲೆಯ ಕೊಟ್ಟರು ಪಟ್ಟಣದಲ್ಲಿರುವ ಕೊಟ್ಟೂರೇಶ್ವರ ಕಾಲೇಜ್‌ಗೆ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದ ಹಿನ್ನೆಲೆ, ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಪ್ರಾರ್ಚಾರ್ಯರು ಸದ್ಯ ತಡೆದಿದ್ದಾರೆ.
ಹಿಜಾಬ್ ವಿವಾದ ಹಿನ್ನೆಲೆ ರಾಯಚೂರಿನ ಬಸವೇಶ್ವರ ಪದವಿ ಕಾಲೇಜಿಗೆ ರಜೆ ಘೋಷಣೆ
ಹಿಜಾಬ್ ವಿವಾದ ಹಿನ್ನೆಲೆ ರಾಯಚೂರಿನ ಬಸವೇಶ್ವರ ಪದವಿ ಕಾಲೇಜಿಗೆ ಒಂದು ದಿನದ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲರಾದ ವೀರೇಶ್ ಪವಾರ್ ಟಿವಿ9ಗೆ ಮಾಹಿತಿ ನೀಡಿದ್ದು, ಕಾಲೇಜಿನಲ್ಲಿ ತರಗತಿ ಮುಗಿದ ಬಳಿಕ ಕೇಸರಿ ಶಾಲು ಹಾಕಿಕೊಂಡಿದ್ದ ಫೋಟೋ ತೆಗೆದಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋಟೋ ವೈರಲ್ ಆದ ಹಿನ್ನೆಲೆ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಇಂದು 7-8 ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಬಂದಿದ್ದರು. ಆಡಳಿತ ಮಂಡಳಿ ಸೂಚನೆ ಮೇರೆಗೆ ಬುರ್ಕಾ ತೆಗೆದಿದ್ದಾರೆ. ಹೀಗಾಗಿ ಪರಿಸ್ಥಿತಿ ಶಾಂತವಾಗಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
Published On - Feb 08,2022 9:56 AM