Hijab Row: ವಿಚಾರಣೆ ಮುಂದೂಡಿದ ಹೈಕೋರ್ಟ್, ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳ ಮನವಿ; ಇಲ್ಲಿದೆ ಮುಖ್ಯಾಂಶಗಳು
ಇಂದು (ಫೆಬ್ರವರಿ 23) ಹಿಜಾಬ್ ಹೋರಾಟಗಾರ್ತಿಯರು, ಉಡುಪಿಯ 6 ಮಂದಿ ವಿದ್ಯಾರ್ಥಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ಕೋರ್ಟ್ನಲ್ಲಿ ಹಿಜಾಬ್ ವಿಚಾರಣೆ ಕೂಡ ನಡೆದಿದೆ. ಈ ಎಲ್ಲಾ ವಿಚಾರಗಳು, ಹಿಜಾಬ್ ವಿವಾದ ಇಂದಿನ ಬೆಳವಣಿಗೆಗಳ ಮುಖ್ಯಾಂಶಗಳೇನು? ಈ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.
ಪ್ರಾತಿನಿಧಿಕ ಚಿತ್ರ
Follow us on
ಬೆಂಗಳೂರು: ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ (Hijab Controversy) ಬಳಿಕ ಕರ್ನಾಟಕದಾದ್ಯಂತ ಹಬ್ಬಿ ಇದೀಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡಿದೆ. ಹಿಜಾಬ್ ವಿವಾದ ಹಿನ್ನೆಲೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಕೋರ್ಟ್ ವಿಚಾರಣೆಯನ್ನು ಮತ್ತೆ ನಾಳೆಗೆ (ಫೆಬ್ರವರಿ 23) ಮುಂದೂಡಿ ಕೋರ್ಟ್ ಆದೇಶಿಸಿದೆ. ಈ ಮಧ್ಯೆ, ಕರ್ನಾಟಕದಲ್ಲಿ ಪಿಯು ಪರೀಕ್ಷೆಗಳ ವೇಳಾಪಟ್ಟಿ (PU Exams) ಪ್ರಕಟ ಮಾಡಲಾಗಿದೆ. ಹಿಜಾಬ್ ತೆಗೆದು ತರಗತಿಗೆ ಬಾರದ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆಯೂ ಕೈ ತಪ್ಪುವ ಸಾಧ್ಯತೆಯಿದೆ. ಸದ್ಯ ಕೋರ್ಟ್ (Karnataka High Court) ಆದೇಶಕ್ಕೆ ಎಲ್ಲರು ಕಾದು ಕುಳಿತಿದ್ದಾರೆ. ಹಿಜಾಬ್ (Hijab Row) ಧರಿಸಿ ಬಂದವರಿಗೆ ತರಗತಿಗೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಮಾರ್ಚ್, ಏಪ್ರಿಲ್ನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ನಡೆಲಿದೆ. ಈಗಾಗಲೇ ಪರೀಕ್ಷೆಗೆ ಸಂಬಂಧಿಸಿದಂತೆ ಹಾಲ್ ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಹಾಲ್ ಟಿಕೆಟ್ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಶಿಕ್ಷಣ ಇಲಾಖೆ ಮರು ಪರೀಕ್ಷೆ ನೀಡದಿರಲು ನಿರ್ಧಾರ ಮಾಡಿದೆ.
ಇಂದು (ಫೆಬ್ರವರಿ 23) ಹಿಜಾಬ್ ಹೋರಾಟಗಾರ್ತಿಯರು, ಉಡುಪಿಯ 6 ಮಂದಿ ವಿದ್ಯಾರ್ಥಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ಕೋರ್ಟ್ನಲ್ಲಿ ಹಿಜಾಬ್ ವಿಚಾರಣೆ ಕೂಡ ನಡೆದಿದೆ. ಈ ಎಲ್ಲಾ ವಿಚಾರಗಳು, ಹಿಜಾಬ್ ವಿವಾದ ಇಂದಿನ ಬೆಳವಣಿಗೆಗಳ ಮುಖ್ಯಾಂಶಗಳೇನು? ಈ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.
ನ್ಯಾಯಾಲಯವು ತೀರ್ಪು ನೀಡುವವರೆಗೆ ನಮ್ಮ ಪರೀಕ್ಷೆಗಳನ್ನು ಮುಂದಕ್ಕೆ ಹಾಕಬೇಕು ಎಂದು ನಗರದ ಹಿಜಾಬ್ ಹೋರಾಟಗಾರ್ತಿಯರು (Hijab Activists) ಒತ್ತಾಯಿಸಿದ್ದಾರೆ. ಮಾಧ್ಯಮಗಳ ಮುಂದೆ ಬಂದು ಮಾತನಾಡಿದ ಐವರು ಹಿಜಾಬ್ ಹೋರಾಟಗಾರ್ತಿಯರು ಹಿಜಾಬ್ ವಿವಾದವನ್ನು ರಾಜಕೀಯ ಹುನ್ನಾರ ಎಂದು ಬಣ್ಣಿಸಿದ್ದಾರೆ.
ನಮ್ಮ ಮೇಲೆ ಮಾಡಿರುವ ಆರೋಪಗಳಿಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಜಾಬ್ ವಿವಾದ ಒಂದು ರಾಜಕೀಯ ಆಟ. ಎಲ್ಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಗಿದ್ದಾರೆ. ಹೀಗಾಗಿ ನ್ಯಾಯಾಲಯದ ತೀರ್ಪು ಬರುವವರೆಗೆ ಪ್ರಮುಖ ಪರೀಕ್ಷೆಗಳನ್ನು ನಡೆಸದಂತೆ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಕೋರಿದ್ದಾರೆ.
ಉಗ್ರರ ಜತೆ ಸಂಪರ್ಕದ ಕುರಿತು ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಮ್ಮ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಹಿಜಾಬ್ ಪ್ರಕರಣದ ಬಳಿಕ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ಮನೆಯವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಜಾಬ್ ವಿವಾದ ಒಂದು ಪೊಲಿಟಿಕಲ್ ಗೇಮ್ ಆಗಿದೆ ಎಂದು ಹೇಳಿದ್ದಾರೆ.
ಈ ವಿವಾದದಲ್ಲಿ ನಮ್ಮ ಕುಟುಂಬವನ್ನು ಮಧ್ಯೆ ತರಬೇಡಿ ಎಂದು ವಿನಂತಿಸಿದ್ದಾರೆ. ಪರೀಕ್ಷೆ ಮುಂದೂಡುವ ವಿಚಾರದಲ್ಲಿ ಸರ್ಕಾರದ ಜೊತೆಗೆ ಮಾತಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಷ್ಟೂ ಬೇಗ ಕೋರ್ಟ್ ತೀರ್ಪು ಬರಬೇಕಿದೆ. ಹಿಜಾಬ್ಗೆ ಅವಕಾಶ ನೀಡಬೇಕು ಎಂದು ಈ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಅರ್ಜಿ ವಿಚಾರ ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ವಿಚಾರಣೆ ಮುಂದೂಡಲಾಗಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ಮುಂದೂಡಿದೆ. ಹಲವಾರು ಮಂದಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರಿಗೂ ವಾದಮಂಡನೆಗೆ ಅವಕಾಶ ಸಾಧ್ಯವಿಲ್ಲ. ಹೀಗಾಗಿ ಲಿಖಿತ ವಾದಗಳಿದ್ದರೆ ಸಲ್ಲಿಸಿ ಎಂದು ಸಿಜೆ ಹೇಳಿದ್ದಾರೆ.
ಧರ್ಮದ ಪ್ರಚಾರಕ್ಕಾಗಿ ಧ್ವನಿವರ್ಧಕ ಬಳಸುವುದು ಹಕ್ಕಲ್ಲ. ಬೇರೆಯವರಿಗೆ ಆ ಧಾರ್ಮಿಕ ಪ್ರಚಾರ ಇಷ್ಟವಾಗದಿರಬಹುದು. ಧ್ವನಿವರ್ಧಕದ ಮೂಲಕ ಅದನ್ನು ಹೇರುವುದು ತಪ್ಪೆಂದು ಹೇಳಿದೆ. ಶಿಕ್ಷಣಕ್ಕಾಗಿ ಕಾಲೇಜಿಗೆ ಬಂದಾಗ ಧಾರ್ಮಿಕ ಗುರುತು ಏಕೆ ಎಂದು ಪಿಯು ಕಾಲೇಜು ಪರ ಎಸ್.ಎಸ್.ನಾಗಾನಂದ್ ವಾದ ಮಂಡನೆ ಮಾಡಿದ್ದಾರೆ.
ಸಮವಸ್ತ್ರ ಸಂಹಿತೆಯನ್ನು ಹೊಸದಾಗಿ ಕಾಲೇಜು ಜಾರಿಗೊಳಿಸಿಲ್ಲ. 2018ರಲ್ಲೂ ಹಿಂದಿನಂತೆಯೇ ಸಮವಸ್ತ್ರದ ಬಗ್ಗೆ ನಿರ್ಧರಿಸಲಾಗಿದೆ. 2021ರ ಡಿಸೆಂಬರ್ನಲ್ಲಿ ಹಿಜಾಬ್ಗೆ ಅನುಮತಿ ಕೋರಿದ್ದರು. ಸಿಎಫ್ಐನವರು ಗಲಾಟೆ ಆರಂಭಿಸಿ, ಪ್ರತಿಭಟನೆ ಮಾಡಿದ್ದರು. ಸಿಎಫ್ಐ ಎಂದರೇನು, ಯಾವ ರೀತಿಯ ಸಂಘಟನೆ ಇದು. CFI ಅಂದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ. ಇವರೇ ಡೋಲು ಬಾರಿಸಿ, ಹಿಜಾಬ್ ಬೇಕೆಂದು ಪ್ರತಿಭಟಿಸುತ್ತಿದ್ದಾರೆ/ ಸಿಎಫ್ಐನವರೇ ಕಾಲೇಜಿನಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ನಾಗಾನಂದ್ ಹೇಳಿದ್ದಾರೆ.
ಸಿಎಫ್ಐ ಸಂಘಟನೆ ಎಬಿವಿಪಿಯಂತೆಯೇ ವಿದ್ಯಾರ್ಥಿ ಸಂಘಟನೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ವಾದ ಮಂಡಿಸಿದ್ದಾರೆ. ಕೆಲ ಶಾಸಕರು, ಸಚಿವರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನೀಡಿದ್ದಾರೆ. ಕೇಸರಿ ಶಾಲಿನ ಬಗ್ಗೆಯೂ ವರದಿ ತರಿಸಿಕೊಳ್ಳಬೇಕು ಎಂದು ವಕೀಲ ತಾಹೀರ್ ವಾದಿಸಿದ್ದಾರೆ. ನೋಡೋಣ ಯಾವುದೆಲ್ಲಾ ಅಗತ್ಯವಿದೆಯೋ ಪರಿಶೀಲಿಸೋಣ ಎಂದು ಸಿಜೆ ಹೇಳಿದ್ದಾರೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ಆರಂಭಿಸಿದೆ. ಕೆಲ ಮಾಧ್ಯಮಗಳು ಈ ವಾರವೇ ತೀರ್ಪು ಎಂದು ತಪ್ಪಾಗಿ ಹೇಳಿವೆ. ಈ ವಾರವೇ ತೀರ್ಪು ಕೊಡುವುದಾಗಿ ತಪ್ಪಾಗಿ ಹೇಳಿವೆ ಎಂದು ಸಿಜೆ ತಿಳಿಸಿದ್ದಾರೆ. ಇನ್ನೂ ವಿಚಾರಣೆಯೇ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.