ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ರಾಬರಿ: ಮನೆಗೆಲಸದಾಕೆಯ ನಂಬಿ 1 ಕೋಟಿ ರೂ ಕಳೆದುಕೊಂಡ ಕುಟುಂಬ!
ಮನೆಗೆಲಸದ ಅನು ಹಾಗೂ ಗ್ಯಾಂಗ್ ಮನೆಯಲ್ಲಿದ್ದಂತೆ ಮನೆಯಾಕೆ ವಿಘ್ನೇಶ್ವರಿ ವಾಪಸ್ಸು ಮನೆಗೆ ಬಂದಿದ್ದಾರೆ. ಹತ್ತು ನಿಮಿಷ ಬೆಲ್ ಮಾಡಿದರೂ ಅನು ಬಾಗಿಲು ತೆರೆದಿಲ್ಲ. ಕೇಳಿದಾಗ ವಾಶ್ ರೂಂ ನಲ್ಲಿದ್ದೆ ಎಂದು ಕಥೆ ಕಟ್ಟಿದ್ದಳು.
ಬೆಂಗಳೂರು: ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ನಿಂದ ರಾಬರಿ ಆಗಿದೆ. ಮನೆ ಕೆಲಸದಾಕೆಯನ್ನ ನಂಬಿದ ಕುಟುಂಬ 1 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದೆ. ಬಸವೇಶ್ವರ ನಗರದ ಗೃಹಲಕ್ಷ್ಮಿ ಲೇಔಟ್ ನಲ್ಲಿ ಘಟನೆ ನಡೆದಿದೆ. ವಿಘ್ನೇಶ್ವರಿ ಎಂಬ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ರಾಬರಿ ಮಾಡಲಾಗಿದೆ.
ವಿಘ್ನೇಶ್ವರಿ ಅವರ ಮಗ ನಂದೀಶ್ ಕಾಲೇಜಿಗೆ ಹೋಗಿದ್ದ ಮತ್ತು ಪತಿ ಕಚೇರಿಗೆ ತೆರಳಿದ್ದರು. ಈ ಸಂದರ್ಭ ನೋಡಿಕೊಂಡು ಕುಕೃತ್ಯವೆಸಗಲಾಗಿದೆ. ಒಬ್ಬಂಟಿಯಾಗಿದ್ದ ವಿಘ್ನೇಶ್ವರಿ ಅವರು ಮನೆಗೆ ಬಾಗಿಲು ಹಾಕಿಕೊಂಡು ದೇವಸ್ಥಾನಕ್ಕೆ ತೆರಳಿದ್ದರು. ಮನೆ ಕೆಲಸಕ್ಕೆ ಅಂತಾ ಬಂದ ಅನು ಎಂಬ ಮಹಿಳೆ ಮತ್ತು ಆಕೆಯ ಪತಿ ರಾಜೇಂದ್ರ ಹಾಗೂ ಇಡೀ ಟೀಂ ಅನ್ನು ಕರೆದುಕೊಂಡು ವಿಘ್ನೇಶ್ವರಿ ಮನೆಯೊಳಗೆ ಬಂದಿದ್ದಳು. ಮನೆಯಲ್ಲಿದ್ದ 94 ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಚಿನ್ನ, 10 ಲಕ್ಷ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ.
ಮನೆಗೆಲಸದ ಅನು ಹಾಗೂ ಗ್ಯಾಂಗ್ ಮನೆಯಲ್ಲಿದ್ದಂತೆ ಮನೆಯಾಕೆ ವಿಘ್ನೇಶ್ವರಿ ವಾಪಸ್ಸು ಮನೆಗೆ ಬಂದಿದ್ದಾರೆ. ಹತ್ತು ನಿಮಿಷ ಬೆಲ್ ಮಾಡಿದರೂ ಅನು ಬಾಗಿಲು ತೆರೆದಿಲ್ಲ. ಕೇಳಿದಾಗ ವಾಶ್ ರೂಂ ನಲ್ಲಿದ್ದೆ ಎಂದು ಕಥೆ ಕಟ್ಟಿದ್ದಳು. ವಿಘ್ನೇಶ್ವರಿ ಬಾಗಿಲು ತೆಗೆದು ಒಳ ಹೋಗುತ್ತಿದ್ದಂತೆ ಹಿಂದೆ ಅವಿತಿದ್ದ ಗ್ಯಾಂಗ್ ಬಟ್ಟೆಯಿಂದ ಕೈಕಾಲು ಕಟ್ಟಿದೆ. ಅದಾಗಲೇ ಪ್ಯಾಕ್ ಮಾಡಿಟ್ಟಿದ್ದ ಚಿನ್ನಾಭರಣ ಹೊತ್ತು ಪರಾರಿಯಾಗಿದೆ. ಘಟನೆಯ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ಎರಡು ಟೀಂ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜ್ಙಾನಭಾರತಿ ಠಾಣೆ ವೃದ್ಧೆಯಿಂದ ಚಿನ್ನಾಭರಣ ಸುಲಿಗೆ ಪ್ರಕರಣ: ಓರ್ವನ ಬಂಧನ ಬೆಂಗಳೂರು: ಜ್ಙಾನಭಾರತಿ ಠಾಣೆ ವೃದ್ಧೆಯಿಂದ ಚಿನ್ನಾಭರಣ ಸುಲಿಗೆ ಪ್ರಕರಣದಲ್ಲಿ ಜ್ಙಾನಭಾರತಿ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಚಿನ್ನಾಭರಣ ಸುಲಿಗೆಗೆ ಒಳಗಾಗಿದ್ದ ವೃದ್ಧೆ ಕೊಟ್ಟ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯ ರೇಖಾಚಿತ್ರ ರಚಿಸಿಕೊಂಡಿದ್ದರು. ರೇಖಾಚಿತ್ರದ ಆಧಾರದ ಮೇಲೆ ಸುತ್ತಮುತ್ತಲ ಏರಿಯಾದಲ್ಲಿ ಹುಡುಕಾಡಿ ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಪತಿ ಕೊಡಿಸಿದ್ದ ಚಿನ್ನ ಕಳೆದು ಕಂಗಾಲಾಗಿದ್ದ ವೃದ್ಧೆ: ಏನಿದು ಪ್ರಕರಣ: ಶಾಂತಮ್ಮ ಮತ್ತು ಸತ್ಯನಾರಾಯಣ ದಂಪತಿ ಜೋಡಿ ಜ್ಙಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದಾರೆ. ಶಾಂತಮ್ಮ ಆನೇಕಲ್ ನಿವೃತ್ತ ಹೆಲ್ತ್ ಅಸಿಸ್ಟೆಂಟ್ ಆಫೀಸರ್. 9 ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ಸತ್ಯನಾರಾಯಣ ಕೂಡ ಮುಳಬಾಗಿಲು ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ರು. 15 ವರ್ಷದ ಹಿಂದೆ ನಿವೃತ್ತಿಯಾಗಿದ್ದಾರೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದರಿಂದ ಕಷ್ಟ ಪಟ್ಟು ಬದುಕ್ತಿದ್ರು. ನಿವೃತ್ತರಾದ ಮೇಲೆ ಬಂದ ಪಿಂಚಣಿ ಹಣದಲ್ಲಿ ಸತ್ಯನಾರಾಯಣ ಅವರು ಹೆಂಡತಿಗೆ ಚಿನ್ನ ಕೊಡಿಸಿದ್ದರು. ಆರು ಬಳೆ, ಕಿವಿಯೋಲೆ ಮತ್ತು ಚಿನ್ನದ ಸರ ಕೊಡಿಸಿದ್ದರು. ಒಟ್ಟು 175 ಗ್ರಾಂ ಗೋಲ್ಡ್ ಕೊಡಿಸಿದ್ದರು. ದಂಪತಿಗೆ ಒಂದು ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಮಗ ಕದಿರೇನಹಳ್ಳಿಯಲ್ಲಿ ವಾಸವಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ಫೆಬ್ರವರಿ 7 ಕ್ಕೆ ಮನೆ ಕೇಳಿಕೊಂಡು ಬಂದ ಆಸಾಮಿಯೊಬ್ಬ ದರೋಡೆ ಕೃತ್ಯವೆಸಗಿದ್ದ. ಆದಕ್ಕೂ ಮುಂಚೆ ಮಹಿಳೆಯ ಜೊತೆಗೆ ಮನೆಗೆ ಬಂದಿದ್ದ ಆಸಾಮಿ ಮನೆ ನೋಡಿ ಹೋಗಿದ್ದ. ಆಗ ವೃದ್ಧೆ ಚಿನ್ನಾಭರಣ ಹಾಕಿಕೊಂಡಿದನ್ನ ನೋಡಿಕೊಂಡಿದ್ದ. ಮತ್ತೆ 7ನೇ ತಾರೀಕು ಬಂದು ವೃದ್ಧೆಗೆ ಮನೆ ತೋರಿಸಿ ಎಂದು ಕರೆದುಕೊಂಡು ಹೋಗಿದ್ದ. ಮೊದಲ ಮಹಡಿಯಲ್ಲಿ ಮನೆ ಖಾಲಿ ಇತ್ತು.
ವೃದ್ಧ ಶಾಂತಮ್ಮಗೆ ಕಿವಿ ಕೇಳಿಸುವುದಿಲ್ಲ. ಮನೆ ನೋಡಲು ಬಂದ ಆಸಾಮಿ ವೃದ್ಧೆಯನ್ನು ಗೋಡೆಗೆ ತಳ್ಳಿ ಕೆಳಗೆ ಬೀಳಿಸಿದ್ದ. ನಂತರ ಕೂಗಿ ಕೊಂಡ್ರು ಅಕ್ಕಪಕ್ಕದವರು ಯಾರಿಗೂ ಕೇಳಿಸಿರಲಿಲ್ಲ. ಶಾಂತಮ್ಮ ಕೈ ಕಟ್ಟಿ 6 ಬಳೆ, ಚಿನ್ನದ ಸರ, ಕಿವಿಯೋಲೆ ಕದ್ದು ಪರಾರಿಯಾಗಿದ್ದ.
ಮಂಡ್ಯ ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ IT ದಾಳಿ ಮಂಡ್ಯ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತಿದ್ದಾರೆ. ಉದ್ಯಮಿ ಅಮಿರುಲ್ ಮುರ್ತುಜಾ, ಅಮ್ಜಾ, ಶಹಬಾಜ್, ಶಿರೋಜ್ ನಿವಾಸ, ಕಚೇರಿಗಳಲ್ಲಿ ಐಟಿಯಿಂದ ಶೋಧ ನಡೆಸುತ್ತಿದ್ದಾರೆ. ಉದ್ಯಮ ನಡೆಸುತ್ತಿರುವ ಸಹೋದರರು ಪೌಲ್ಟ್ರಿ ಫಾರಂ, ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಆಸ್ತಿ ಹೊಂದಿದ್ದಾರೆ. ನಾಗಮಂಗಲ, ಮೈಸೂರು, ಮಂಡ್ಯ, ಬೆಂಗಳೂರಿನ ಹಲವೆಡೆ ಆಸ್ತಿ ಹೊಂದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು, 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಆಸ್ತಿ ವಿವರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: ಮೀನುಗಾರರ ಗಾಳಕ್ಕೆ ಬಿದ್ದ 20 ಕೆಜಿ ತೂಕದ ಹದ್ದು ಮೀನು!
ಇದನ್ನೂ ಓದಿ: CCB Transfers: ಸಿಸಿಬಿ ಅಂಗಳದಲ್ಲಿ ಬೇರು ಬಿಟ್ಟಿದ್ದ ಸಿಬ್ಬಂದಿಗೆ ಸಾಮೂಹಿಕ ಟ್ರಾನ್ಸ್ಫರ್ ಶಾಕ್!
Published On - 11:48 am, Wed, 23 February 22