ಪಿಜಿಗಳಲ್ಲಿಲ್ಲ ಮಧ್ಯಾಹ್ನದ ಊಟ, ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ಸಂಕಷ್ಟ: ಸಿಲಿಂಡರ್​​ ಕೊರತೆ ಮತ್ತಷ್ಟು ಉಲ್ಬಣ

ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಬೆಂಗಳೂರಿನ ಪಿಜಿಗಳಲ್ಲಿ ಮಧ್ಯಾಹ್ನದ ಊಟ ನಿಲ್ಲಿಸಲಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದ ಪಿಜಿ ನಿವಾಸಿಗಳು ಮತ್ತು ಹೋಟೆಲ್‌ಗಳು ತೊಂದರೆ ಅನುಭವಿಸುತ್ತಿವೆ. ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೂ ಇದು ದೊಡ್ಡ ಹೊಡೆತ ನೀಡಿದೆ. ಕೇವಲ ಒಂದು ಸಿಲಿಂಡರ್‌ನಲ್ಲಿ ಅಡುಗೆ ತಯಾರಿಸಲು ಸಿಬ್ಬಂದಿಗಳಿಗೆ ಕಷ್ಟವಾಗಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಆತಂಕವಿದೆ.

ಪಿಜಿಗಳಲ್ಲಿಲ್ಲ ಮಧ್ಯಾಹ್ನದ ಊಟ, ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ಸಂಕಷ್ಟ: ಸಿಲಿಂಡರ್​​ ಕೊರತೆ ಮತ್ತಷ್ಟು ಉಲ್ಬಣ
ಅಡುಗೆ ತಯಾರಿಕೆಗೂ ಸಂಕಷ್ಟ

Updated on: Mar 11, 2026 | 2:57 PM

ಬೆಂಗಳೂರು, ಮಾರ್ಚ್​​ 11: ಎಲ್​​ಪಿಜಿ ಸಿಲಿಂಡರ್​​ಗಳ ಅಭಾವ ಕರ್ನಾಟಕದಲ್ಲಿ ಮತ್ತಷ್ಟು ಉಲ್ಬಣಿಸಿದ್ದು, ಬೆಂಗಳೂರಿನ ಕೆಲ ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿ) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಮಧ್ಯಾಹ್ನದ ಊಟದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.  ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗೆಹರಿಯುವವರೆಗೂ ಊಟ ನೀಡದಿರಲು ನಿರ್ಧರಿಸಲಾಗಿದೆ ಎಂದು ಪಿಜಿ ಮಾಲೀಕರು ಘೋಷಿಸಿದ್ದು, ಎಲೆಕ್ಟ್ರಿಕ್ ಸ್ಟವ್ ಅಥವಾ ಸೌದೆ ಬಳಕೆಯಂತಹ ಪರ್ಯಾಯ ವ್ಯವಸ್ಥೆಗಳನ್ನು ರಾತ್ರೋರಾತ್ರಿ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಇನ್ನು ಗ್ಯಾಸ್ ಹೆಚ್ಚು ಬಳಕೆಯಾಗುವ ಆಹಾರಕ್ಕೆ ಬ್ರೇಕ್​​ ಹಾಕಿ ಬೆಂಗಳೂರಿನ ಪಿಜಿಗಳ ಊಟದ ಮೆನು ಬದಲಾವಣೆಗೆ ಪಿಜಿ ಮಾಲೀಕರ ಸಂಘ ನಿರ್ಧರಿಸಿದೆ. ಚಪಾತಿ ಹಾಗೂ ದೋಸೆಗಳ ಬದಲು ರೈಸ್ ಐಟಂಗಳತ್ತ ಹೆಚ್ಚು ಒಲವು ತೋರಿ. ತರಕಾರಿ, ಕಾಳುಗಳನ್ನು ವಿತರಿಸಿ ಎಂದು ಎಲ್ಲಾ ಪಿಜಿ ಮಾಲೀಕರಿಗೂ ಅಸೋಷಿಯೇಷನ್​ನಿಂದ ಸೂಚನೆ ನೀಡಲಾಗಿದೆ.

ಹೆಚ್ಚಿನವರು ಉದ್ಯೋಗ ನಿಮಿತ್ತ ಅಥವಾ ವಿದ್ಯಾಭ್ಯಾಸಕ್ಕಾಗಿ ತಮ್ಮ ಮನೆಗಳಿಂದ ದೂರ ಉಳಿದು ಪಿಜಿಗಳನ್ನು ಆಶ್ರಯಿಸಿದ್ದಾರೆ. ಅವರು ಮಾಸಿಕ ಶುಲ್ಕವನ್ನು ಪಾವತಿಸಿದ್ದರೂ, ಸದ್ಯಕ್ಕೆ ಊಟದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಹೋಟೆಲ್‌ಗಳೂ ಸಹ ವಾಣಿಜ್ಯ ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿರುವುದರಿಂದ, ಹೊರಗಡೆ ಊಟ ಸಿಗುವುದು ಕಷ್ಟಕರವಾಗಿದೆ. ಗೃಹಬಳಕೆಯ ಸಿಲಿಂಡರ್‌ಗಳ ಪೂರೈಕೆಗೆ ಕೇಂದ್ರದಿಂದ ಸೂಚನೆಗಳು ಬಂದಿದ್ದು, ಅವುಗಳು ತಕ್ಕಮಟ್ಟಿಗೆ ಲಭ್ಯವಿವೆ. ತಿಂಗಳಿಗೆ ಒಂದು ಸಿಲಿಂಡರ್ ದೊರೆಯುತ್ತಿರುವುದು ಮನೆಗಳಲ್ಲಿರುವವರಿಗೆ ಸ್ವಲ್ಪ ಸಮಾಧಾನಕರ ಸಂಗತಿ. ಆದರೆ, ವಾಣಿಜ್ಯ ಸಿಲಿಂಡರ್‌ಗಳ ಅಭಾವ ಮಾತ್ರ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ವಿಧಾನಸಭೆಯಲ್ಲೂ ಸಿಲಿಂಡರ್​​ ಕೊರತೆ ಗದ್ದಲ; ಆಡಳಿತ ಮತ್ತು ವಿಕ್ಷದ ನಡುವೆ ವಾಕ್ಸಮರ

ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ಸಂಕಷ್ಟ

ಎಲ್‌ಪಿಜಿ ಸಿಲಿಂಡರ್ ತೀವ್ರ ಕೊರತೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಮಕ್ಕಳಿಗೆ ಆಹಾರ ತಯಾರಿಸಲು ತಿಂಗಳಿಗೆ ಹಲವು ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ, ಕೊರತೆಯಿಂದ ಕಡಿಮೆ ಸಂಖ್ಯೆಯಲ್ಲಿ ಸಿಲಿಂಡರ್​​ ಪೂರೈಕೆಯಾಗಿರೋದು, ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರನ್ನು ಆತಂಕಕ್ಕೆ ತಳ್ಳಿದೆ. ಹಳೇ ಬಾಗಲಕೋಟೆಯ 3ನೇ ನಂಬರ್ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್ ಕೊರತೆಯಿಂದ ಅಡುಗೆ ತಯಾರಿಸಲು ಸಿಬ್ಬಂದಿಗಳಿಗೆ ಕಷ್ಟವಾಗಿದ್ದು, ಏಜೆನ್ಸಿಯವರು ಒಂದು ಸಿಲಿಂಡರ್‌ನಲ್ಲಿ ಅಡ್ಜಸ್ಟ್ ಮಾಡಿಕೊಳ್ಳಿ. ನಂತರ ಹೆಚ್ಚಿನ ಸಿಲಿಂಡರ್‌ಗಳು ಬಂದಾಗ ತಲುಪಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ಸಿಲಿಂಡರ್‌ನಲ್ಲಿ ದೊಡ್ಡ ಪ್ರಮಾಣದ ಅಡುಗೆ ತಯಾರಿಸುವುದು ಕಷ್ಟಕರ ಎಂದು ಸಿಬ್ಬಂದಿ ಹೇಳಿದ್ದು, ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾಗಿದೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us