5 ಗ್ಯಾರಂಟಿಗಳ ಆಸೆ ತೋರಿಸಿ(Congress Guarantee) ಅಧಿಕಾರಕ್ಕೆ ಬಂದ ಕಾಂಗ್ರೆಸ್ ಷರತ್ತುಗಳನ್ನು ವಿಧಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. ಜೊತೆಗೆ ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆಯುತ್ತಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಗೃಹಲಕ್ಷ್ಮೀ ಯೋಜನೆ(Gruha Lakshmi Scheme) ಲಾಭ ಪಡೆಯುವ ಹಿನ್ನೆಲೆ ಆಧಾರ್ ತಿದ್ದುಪಡಿಗಾಗಿ ಮಹಿಳೆಯರು ಸೇವಾ ಕೇಂದ್ರಗಳಿಗೆ ಲಗ್ಗೆ ಇಟ್ಟಿದ್ದಾರೆ. ಇದೆಲ್ಲದರ ನಡುವೆ ಈಗ ಸಿದ್ದರಾಮಯ್ಯ(Siddaramaiah) ಆರೋಪವೊಂದನ್ನು ಮಾಡಿದ್ದಾರೆ. ಅನ್ನಭಾಗ್ಯಕ್ಕೆ(Anna Bhagya Scheme) ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಬಿಪರ್‌ಜಾಯ್ ಚಂಡಮಾರುತದ ಅಬ್ಬರಕ್ಕೆ ಅಂಕೋಲ ತಾಲೂಕಿನ ತರಂಗಮೇಟ್ ಕಡಲತೀರದಲ್ಲಿ ಭಾರೀ ಕಡಲಕೊರೆತ ಸಂಭವಿಸಿದೆ. ಅಲೆಗಳ ಹೊಡೆತಕ್ಕೆ 20 ಕ್ಕೂ ಹೆಚ್ಚು ತೆಂಗಿನ ಮರಗಳು ಕೊಚ್ಚಿ ಹೋಗಿವೆ. ಅಬ್ಬರಿಸುವ ಅಲೆಗಳನ್ನು ಕಂಡು ಮೀನುಗಾರರು ಆತಂಕಗೊಂಡಿದ್ದಾರೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಸರ್ಕಾರ ಸೂಲೆಬೆಲೆ ಪಾಠ ಕೈಬಿಟ್ಟಲ್ಲ, ಭಗತ್ ಸಿಂಗ್ ಪಾಠ ಕೈಬಿಟ್ಟಿದೆ. ಇದು ನನ್ನ ಮೇಲಿನ ಆಕ್ರಮಣ ಅಲ್ಲ, ಭಗತ್ ಸಿಂಗ್ ಮೇಲಿನ ಆಕ್ರಮಣ ಎಂದು ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬೆಂಗಳೂರು: ಪಠ್ಯ ಪರಿಷ್ಕರಣೆ ಜೊತೆಗೆ ಎನ್ಇಪಿ ರದ್ದುಗೊಳಿಸುವಂತೆ ಸಿಎಂ ಸಿದ್ಧರಾಮಯ್ಯಗೆ ಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪತ್ರ ಬರೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆಯಲಾಗಿದೆ.
ಶಿವಮೊಗ್ಗ: ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಲು ದಿಗ್ಗಜರ ಪಾಠ ಸೇರಿಸಿದ್ದೆವು. ಪಠ್ಯವನ್ನು ತೆಗೆಯಲು ಸರ್ಕಾರ ಮುಂದಾದ್ರೆ ಅದಕ್ಕೆ ಅಭ್ಯಂತರವಿಲ್ಲ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಮತ್ತು ಕೇಶವ ಹೆಡ್ಗೇವಾರ್ ಅವರ ಪಾಠ ತೆಗೆಯಲು ಸರ್ಕಾರ ಮುಂದಾಗಿದೆ. ಯಾಕೆ ಅಂತ ಅದನ್ನ ಸರ್ಕಾರಕ್ಕೆ ನೀವು ಕೇಳಬೇಕು. ಇವರು ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ನಾನು ಸಿದ್ದನಿದ್ದೇನೆ.
ಲಖನೌ: ಜಾತ್ಯತೀತ ಜನತಾದಳ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಅಖಿಲೇಶ್ ಯಾದವ್ ಅವರನ್ನು ಲಖನೌದ ಅವರ ನಿವಾಸದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.
ಮಾಜಿ ಸಿಎಂ ಅಖಿಲೇಶ್ ಯಾದವ್ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ: ಲೋಕಸಭೆ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ
ದಕ್ಷಿಣ ಕನ್ನಡ: ಸವಣೂರಿನ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ವಿಶೇಷ ಹೋಮ ಮಾಡಿಸಿದ್ದಾರೆ
ಜೂ.11ರಂದು ಆರಂಭವಾಗಿರುವ ಹೋಮ ಜೂ.18ರವರೆಗೆ ನಡೆಯುತ್ತೆ. ವಿದ್ವಾನ್ ಬಾಲಕೃಷ್ಣ ಕಾರಂತ್ ನೇತೃತ್ವದಲ್ಲಿ ವಿಶೇಷ ಹೋಮ ಹವನ ಮಾಡಲಾಗಿದೆ.
ಕಳಪೆ ಕಾಮಗಾರಿ ಬಗ್ಗೆ ದೂರು ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ 11 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 9 ಇಂಜಿನಿಯರ್, ಓರ್ವ ಅಧೀಕ್ಷಕ, ಓರ್ವ ಉಪ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ. ಕಳಪೆ ಕಾಮಗಾರಿ ಸಂಬಂಧ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಪರಿಷ್ಕರಣೆಗೆ ಆಗ್ರಹ ಮಾಡಿದ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, NEP ರದ್ದತಿಗೂ ಆಗ್ರಹಿಸಿದ್ದಾರೆ. ಸಿಎಂ ಗೆ ಪತ್ರ ಬರೆದು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕುರಿತಂತೆ ಆಗ್ರಹಿಸಿದ್ದಾರೆ.
ಬೆಂಗಳೂರು: ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರವಾಗಿ ಆಹಾರ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಶಕ್ತಿ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಅನ್ನಭಾಗ್ಯ ಸೇರಿ ಬಜೆಟ್ ವಿಚಾರವಾಗಿಯೂ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಬಗ್ಗೆ ಚರ್ಚಿಸಲಾಗುತ್ತಿದೆ.
ಮೈಸೂರು: ಕೇಂದ್ರದಿಂದ ಅಕ್ಕಿ ಸರಬರಾಜು ನಿಲುಗಡೆ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಅವರೇನು ಪುಕ್ಸಟ್ಟೆ ಅಕ್ಕಿ ಕೊಡುತ್ತಿಲ್ಲ. ಕೇಂದ್ರಕ್ಕೆ ಅಕ್ಕಿ ಕೊಡುವಂತೆ ನಾವು ಪುಕ್ಸಟ್ಟೆ ಕೇಳಿಲ್ಲ, ಜುಲೈ 1 ರಿಂದ ಅನ್ನ ಭಾಗ್ಯ ಯೋಜನೆಯಡಿ ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಸಿಎಂ ಛತ್ತಿಸ್‌ಗಡ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದ ಜೊತೆ ಮಾತನಾಡಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ನಮಗೆ ಕೊಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಅಕ್ಕಿ ಕೊಡುವುದಿಲ್ಲ ಎಂದು ವಿತ್ ಡ್ರಾ ಮಾಡಿದ್ದಾರೆ. ಈ ಬಗ್ಗೆ ದೊಡ್ಡ ಹೋರಾಟ ಮಾಡುತ್ತೇವೆ. ರೂಪುರೇಷೆಯ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಚಿವ ಸಂಪುಟ ನಿರ್ಧಾರ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಲೋಕಸಭೆ, ಜಿಲ್ಲಾ ಪಂಚಾಯತ್ ಚುನಾವಣೆಗೆ ಈ ವಿಚಾರ ತೆಗೆದುಕೊಂಡು ಹೋಗುತ್ತೇವೆ. ಜನರ ಮುಂದೆ ಈ ವಿಚಾರ ಇಡುತ್ತೇವೆ. ನಿಮಗೆ ದೇಶ ಭಕ್ತಿ ಇದ್ದರೆ, ತಾಕತ್ ಇದ್ದರೆ ಅಂಬೇಡ್ಕರ್ ಕಾಂಗ್ರೆಸ್ ಬಗ್ಗೆ ಏನು ಹೇಳಿದರು ಅದನ್ನು ಪ್ರಕಟಿಸಿ. ಸಾವರ್ಕರ್ ಪಾಠ ಓದಿದರೆ ಮಕ್ಕಳು ದೇಶ ದ್ರೋಹಿ ಆಗುತ್ತಾರಾ? ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ನವರು ರಣ ಹೇಡಿಗಳು. ಮಾತ್ರವಲ್ಲದೆ, ದೇಶದ್ರೋಹಿಗಳು. ಟಿಪ್ಪು ಪಾಠ ಕಾಂಗ್ರೆಸ್ನವರಿಗೆ ಬೇಕು. ಏಕೆಂದರೆ ತುಷ್ಟಿಕರಣ ಮಾಡಲು ಎಂದು ಆಕ್ರೋಶ ಹೊರಹಾಕಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಪ್ರಯೋಜನವಾಗಿಲ್ಲ ಎಂದು ವಿಧಾನಸೌಧದಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಕಾಯ್ದೆಯಿಂದ 1 ಲಕ್ಷ ರೈತ ಕುಟುಂಬಗಳಿಗೆ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಮಾರುಕಟ್ಟೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ತಿದ್ದುಪಡಿ ಕಾಯ್ದೆ ಜಾರಿ ನಂತರ ವ್ಯವಹಾರ 570 ಕೋಟಿಯಿಂದ 200 ಕೋಟಿಗೆ ಕುಸಿದಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ತನಿಖೆ ವಿಚಾರದ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ವಿವಿಧ ಹಗರಣಗಳ ತನಿಖೆ ಬಗ್ಗೆ ಎಸ್ಐಟಿ ರಚನೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಹಿಂದೆ ನಾವು ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಈಗ ತನಿಖೆ ಮಾಡದಿದ್ದರೆ ಹೊಂದಾಣಿಕೆ ರಾಜಕಾರಣ ಎನ್ನುತ್ತಾರೆ. ಹೀಗಾಗಿ ಕೂಡಲೇ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಸೂಚಿಸಿ ಎಂದು ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಧ್ವನಿಗೂಡಿಸಿದ್ದಾರೆ. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸೋಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆಗೂ ತಿದ್ದುಪಡಿ ತರಲು ಕ್ಯಾಬಿನೇಟ್ನಲ್ಲಿ ತೀರ್ಮಾನ ಮಾಡಲಾಗಿದೆ. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಸೇರಿಸಿದ್ದ ಅಂಶಗಳನ್ನು ಕೈಬಿಟ್ಟು ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದ್ದು, ಜುಲೈ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಮಾಡಲು ನಿರ್ಧರಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆ ಅಕ್ರಮದ ಬಗ್ಗೆಯೂ ತನಿಖೆಗೆ ತೀರ್ಮಾನಿಸಲಾಗಿದೆ.
ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು FCI ತಿರಸ್ಕಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕೇಂದ್ರ, ಹೊರ ರಾಜ್ಯಗಳ ಬದಲು ರಾಜ್ಯದ ರೈತರ ಬಳಿ ಅಕ್ಕಿ ಖರೀದಿಸಿ ಎಂದು ಮನವಿ ಮಾಡಿದ್ದಾರೆ. ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳವನ್ನು ನೇರವಾಗಿ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಬಳಸಿ. ಇದರಿಂದ ರಾಜ್ಯದ ರೈತರು, ಜನರಿಗೆ ಅನುಕೂಲವಾಗಲಿದೆ ಎಂದರು. ಉಚಿತ ವಿದ್ಯುತ್ ಬದಲು ಪ್ರತಿ ಮನೆಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿ ಅಂತಾನೂ ಸಲಹೆ ನೀಡಿದ್ದಾರೆ.
‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪೂರ್ಣಚಂದ್ರ ತೇಜಸ್ವಿಯವರ ಸಣ್ಣ ಕಥೆ ಆಧರಿತ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ನಿರ್ದೇಶಕ ಶಶಾಂಕ್ ಸೋಗಾಲ ಅವರು ಮನವಿ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದು, ತೆರಿಗೆ ವಿನಾಯಿ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ NPS ಬೇಡ OPS ಬೇಕು ಅಂತಾ ಫ್ರೀಡಂಪಾರ್ಕ್ನಲ್ಲಿ ಹೋರಾಡಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ NPS ರದ್ದುಗೊಳಿಸುವುದಾಗಿ ಹೇಳಿತ್ತು. ಈಗ ಸರ್ಕಾರ ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸೋದಾಗಿ ಭರವಸೆ ನೀಡಿದ್ದಾರೆ. ಮುಖ್ಯ ಮಂತ್ರಿಗಳು,ಉಪಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನನ್ನ ಜೀವನದಲ್ಲಿ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನನಗೆ ಹೊಂದಾಣಿಕೆ ರಾಜಕಾರಣ ಮಾಡುವ ಅವಶ್ಯಕತೆಯೇ ಇಲ್ಲ. ಶಾಮನೂರು, ನಾವು ಹಳೆಯ ಸ್ನೇಹಿತರು, ಹೀಗಾಗಿ ಭೇಟಿಯಾಗಿದ್ದೆವು. ಈಗಾಗಲೇ ಮಾತನಾಡಿದವರಿಗೂ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ತಮ್ಮದೇ ಪಕ್ಷದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ಕನ್ಯೆ ಹುಡುಕಿ ಹುಡುಕಿ ಸುಸ್ತಾದ ಯುವಕನೊಬ್ಬ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದಾರೆ. ಕನ್ಯೆ ಭಾಗ್ಯ ನೀಡಲು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ಪಿಡಿಒಗೆ ಮುತ್ತು ಹೂಗಾರ(28) ಎಂಬ ಯುವಕ ಕನ್ಯೆ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕಕ್ಕೂ ಬಿಪರ್‌ಜಾಯ್ ಚಂಡಮಾರುತದ ಎಫೆಕ್ಟ್ ತಟ್ಟಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಎತ್ತರದ ಅಲೆ ಏಳುವ ಎಚ್ಚರಿಕೆ ನೀಡಿದೆ. 10 ಅಡಿಗೂ ಹೆಚ್ಚು ಎತ್ತರದ ಅಲೆ ಏಳುವ ಬಗ್ಗೆ ವಾರ್ನಿಂಗ್ ಕೊಟ್ಟಿದೆ. ದಕ್ಷಿಣ ಒಳನಾಡಿನಲ್ಲೂ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ.
ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು FCI ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲವೆಂದು ಸಿಎಂ ಆರೋಪಿಸಿದ್ದಾರೆ. ಅಕ್ಕಿ ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್ ಈಗ ಜನರಿಗೆ ಮೋಸ ಮಾಡ್ತಿದೆ. ರೈತರಿಗೆ, ಜನರಿಗೆ ಕೊಟ್ಟ ಮಾತಿಂದ ತಪ್ಪಿಸಿಕೊಳ್ಳಲು ರಾಜಕಾರಣ ಮಾಡುತ್ತಿದೆ. ಆಹಾರ ಭದ್ರತಾ ಕಾಯ್ದೆಯಡಿ ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ. ಯಾವುದೇ ಖರ್ಚು ಇಲ್ಲದೇ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸತ್ಯ ಹೇಳಬೇಕೆಂದ್ರೆ ರಾಜ್ಯ ಸರ್ಕಾರ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ಕೇಂದ್ರ ನೀಡುವ ಅಕ್ಕಿ ಸೇರಿ ರಾಜ್ಯ ಸರ್ಕಾರ ಒಟ್ಟು 15 ಕೆಜಿ ಅಕ್ಕಿ ನೀಡಬೇಕು. ಆದ್ರೆ ಕೇಂದ್ರದ 5 ಕೆಜಿ, ರಾಜ್ಯದ 5 ಕೆಜಿ ಸೇರಿಸಿ 10 ಕೆಜಿ ನೀಡ್ತೀವಿ ಎನ್ನುತ್ತಿದೆ ಎಂದರು.
ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಶಿವಮೊಗ್ಗದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಅಶೋಕ ನಾಯ್ಕರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ ಸಂಸದ ರಾಘವೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಜೂನ್ 18ರಂದು ಯಡಿಯೂರಪ್ಪ, ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ನಾಲ್ಕು ಸಾರಿಗೆ ನಿಗಮಗಳಿಗೆ ನೂತನ ಕಾಂಗ್ರೆಸ್ ಸರ್ಕಾರ ಶಾಕ್ ಕೊಟ್ಟಿದೆ. ಇನ್ಮುಂದೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಅನುದಾನ ನೀಡೋದಿಲ್ವಂತೆ. ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನೌಕರರಿಗೆ 15% ವೇತನ ಪರಿಷ್ಕರಣೆ ಮಾಡಿತ್ತು. ಆ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಆದರೆ ನೂತನ ಕಾಂಗ್ರೆಸ್ ಸರ್ಕಾರ ಅನುದಾನ ನೀಡಲು ಆಗೋದಿಲ್ಲ ಎಂದು ಆದೇಶ ನೀಡಿದೆ.
ಬೆಂಗಳೂರು ವಿದ್ಯಾರ್ಥಿಗಳು ಹಲವಾರು ಕೋರ್ಸ್‌ಗಳಲ್ಲಿ ಗಮನಾರ್ಹ ಸಾಧನೆಗಳೊಂದಿಗೆ ಹೊರಹೊಮ್ಮಿದ್ದಾರೆ. ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಬೆಂಗಳೂರು ಟಾಪ್ 10ರಲ್ಲಿ ಎಂಟು ರ‍್ಯಾಂಕ್‌ಗಳನ್ನು ಪಡೆದುಕೊಂಡಿದೆ. ಧಾರವಾಡ ಮತ್ತು ಬಳ್ಳಾರಿ ಕೂಡ ತಲಾ ಒಂದು ರ‍್ಯಾಂಕ್‌ನೊಂದಿಗೆ ತಮ್ಮದೇ ಆದ ಛಾಪು ಮೂಡಿಸಿದ್ದು, ರಾಜ್ಯದಾದ್ಯಂತ ಇರುವ ವೈವಿಧ್ಯಮಯ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ.
ಮಳೆಬಾರದ ಹಿನ್ನೆಲೆ ಅಜ್ಜಿಯೊಬ್ಬರು ಮಳೆರಾಯನ ಹಾಡು ಹಾಡುತ್ತ ಮಳೆಗಾಗಿ ಗುರ್ಜಿ ಪೂಜೆ ಮಾಡಿದ್ದಾರೆ. ಪೂಜೆ ಮಾಡಿ ಮಳೆರಾಯನ ಆಹ್ವಾನಿಸುವ ಪ್ರಾರ್ಥನೆ ಮಾಡಿದ್ದಾರೆ. ಹಾಡು ಹೇಳಿ ಮಳೆಯನ್ನು ಪ್ರಾರ್ಥಿಸಿದ್ದಾರೆ. ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ರುದ್ರಮ್ಮ ಎಂಬ ಅಜ್ಜಿಯಿಂದ ಗುರ್ಜಿ ಪೂಜೆ ಮಾಡಿದ್ದು ಗುರ್ಜಿಪೂಜೆಯಲ್ಲಿ ಮಳೆ ಬರುವ ಮುನ್ಸೂಚನೆ ಸಿಕ್ಕಿತು.
ವಿಧಾನಸೌಧದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದ್ದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಹತ್ತಿರ ಅಕ್ಕಿ ದಾಸ್ತಾನು ಇರುತ್ತೆ. ಆದರೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡ್ತಿದೆ. ಪಾರ್ಲಿಮೆಂಟ್ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತೆ ಅಂತ ಭಯ ಅವರಿಗೆ. ಬಿಜೆಪಿ ನಾಯಕರಿಗೆ ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಕೇಳಬೇಕಿತ್ತು. ನಮ್ಮ ಸರ್ಕಾರ ಏಳು ಕೆ.ಜಿ ಅಕ್ಕಿ ಕೊಟ್ಟಿರುವುದನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿದ್ರು. ಕೇಂದ್ರ ಸರ್ಕಾರ ಯಾರದು. ನಾವು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಜೊತೆಗೆ ಕೇಳ್ಬೇಕಾ. ಬಿಜೆಪಿಯವರು ಯಡಬಿಡಂಗಿಗಳು ಅವರಿಗೆ ಇದು ಅವರಿಗೆ ಗೊತ್ತಾಗಲ್ಲ. ಸೋಲಿನ ಹತಾಶೆಯಿಂದ ಏನ್ ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ. ಅವರಿಗೆ ಅವರೇ ಸೋಲಿಸಿದ್ದಾರೆ ಅಂತ ಹತಾಶೆ ಆಗಿದ್ದಾರೆ ಎಂದರು.
ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಅಕ್ಕಿ ನೀಡಲು ಎಫ್ಸಿಐ ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಅವರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಬಡವರಿಗೆ ಸಹಾಯ ಮಾಡುವ ವಿಚಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ಅವರ ಈ ಧೋರಣೆ ಅವರು ಯಾರ ಪರ ಇದ್ದಾರೆ ಎಂದು ತೋರಿಸುತ್ತೆ. ನಾವು ಪುಕ್ಕಟ್ಟೆ ಕೊಡಿ ಎಂದು ಕೇಳಿಲ್ಲ, ಹಣ ಕೊಡ್ತೀವಿ. ಅದಕ್ಕೆ ಅವರು ನೀಡಬಹುದಿತ್ತು ಎಂದು ವಿಧಾನಸೌಧದಲ್ಲಿ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಪತಿ ಟ್ಯಾಕ್ಸ್ ಪೇಯರ್ಸ್ ಆಗಿದ್ರೆ ಅರ್ಜಿ ರಿಜೆಕ್ಟ್ ಆಗಲಿದೆ. ಇ ಗವರ್ನೆನ್ಸ್ ಮೂಲಕ ಅರ್ಜಿ ಹಾಕುವ ವ್ಯವಸ್ಥೆ ಮಾಡಿದ್ದೇವೆ. ಅರ್ಜಿದಾರರ ಪತಿ ಟ್ಯಾಕ್ಸ್ ಪೇಯರ್ಸ್ ಆಗಿದ್ರೆ ಅರ್ಜಿ ಸ್ವೀಕಾರ ಆಗೋದಿಲ್ಲ. ಹೀಗಾಗಿ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಜಾರಿ ಹಿನ್ನಲೆ ಆಧಾರ ತಿದ್ದುಪಡಿ ಕೇಂದ್ರದ ಬಳಿ ಜನವೋ ಜನ. ಹೊಸ ಆಧಾರ್ ಮಾಡಿಸಲು ಹಾಗೂ ತಿದ್ದುಪಡಿ ಮಾಡಿಸಲು ಮಹಿಳೆಯರ ಕ್ಯೂ ನಿಂತಿದ್ದಾರೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ SBI ಬ್ಯಾಂಕ್ ಪಕ್ಕದಲ್ಲಿರೋ ಕೇಂದ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದಾರೆ.
ನಾಳೆ ಮಧ್ಯಾಹ್ನ 1.30ಕ್ಕೆ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಚಾಲನೆ ನೀಡಲಿದ್ದಾರೆ. ಶಕ್ತಿಭವನದಲ್ಲಿ ಸೇವಾ ಸಿಂಧು ವೆಬ್ಪೋರ್ಟಲ್ ಸಿಎಂರಿಂದ ಲಾಂಚ್ ಮಾಡಲಿದ್ದಾರೆ.
ಯೋಜನೆಯ ಕುರಿತಂತೆ ಸಂದೇಹ/ ಕುಂದುಕೊರತೆಗಳಿದ್ದಲ್ಲಿ ಸಹಾಯವಾಣಿ (Helpline) – 1902 ಗೆ ಸಂಪರ್ಕಿಸಬಹುದಾಗಿದೆ.
ಗೃಹಲಕ್ಷ್ಮಿ, ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಬಿಪಿಎಲ್/ಎಪಿಎಲ್/ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು DBT ಮೂಲಕ ನೀಡುವ ಯೋಜನೆಯಾಗಿರುತ್ತದೆ. ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ಸಮಗ್ರ ಅಭಿವೃದ್ಧಿಯನ್ನು ಖಚಿತ ಪಡಿಸಬಹುದಾಗಿರುತ್ತದೆ ಹಾಗೂ ಕುಟುಂಬದ ಅಭಿವೃದ್ಧಿ ಸಮಾಜದ ಅಭಿವೃದ್ಧಿಗೆ ಬುನಾದಿಯಾಗಿರುತ್ತದೆ, ಆದ್ದರಿಂದ ಸದರಿ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಹೆಗ್ಗುರುತಾಗಲಿದೆ. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಹರ್ಷಿಸುತ್ತದೆ.
ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಟಿ ನಡೆಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹತ್ವದ ನಿರ್ಧಾರ ಆಗಿದೆ. ನಮ್ಮ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಗೃಹ ಲಕ್ಷ್ಮಿ ಯೋಜನೆ. ಮನೆಯ ಯಜಮಾನಿ ಶಕ್ತಿಶಾಲಿಯಾಗ್ತಾಳೆ ಆಗ ಸಮಾಜದ ಶಕ್ತಿ ವೃದ್ದಿ ಆಗ್ತದೆ. ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ನವರಿಗೆ ಈ ಯೋಜನೆ ಲಾಭ ಸಿಗುತ್ತದೆ. ನಾಳೆಯಿಂದ ಅರ್ಜಿ ಸಲ್ಲಿಸಬಹುದು. ಕೆಲವೊಂದು ಕಾರಣಗಳಿಂದ ಜೂನ್ 16 ರಿಂದ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಮೂಲಕ ಭೌತಿಕವಾಗಿ ಕೂಡ ಅರ್ಜಿ ಸಲ್ಲಿಸಬಹುದು. 1902 ಹೆಲ್ಪ್ ಲೈನ್ ಮೂಲಕ ಏನಾದರೂ ಗೊಂದಲಗಳಿದ್ದರೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯಾವಕಾಶ ಕೇಳಿದ್ದಾರೆ. ಜೂ. 21ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ. ಜೂನ್ 21ರಂದು ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭೇಟಿಗೂ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆ ಸಮಯ ಕೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಸಿಕ್ಕರೆ ಅನ್ನಭಾಗ್ಯ ಅಕ್ಕಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಇಂದಿರಾ ಕ್ಯಾಂಟಿನಲ್ಲಿ ಕೋಳಿ ಮೊಟ್ಟೆ ನೀಡಲು ಚಿಂತನೆ ನಡೆದಿದೆ. ಇಂದಿರಾ ಕ್ಯಾಂಟಿನ್ ನಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಸಿಎಂ ಸೂಚನೆ ಬೆನ್ನಲೆ ಅನೇಕ ತಜ್ಞರು ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರಕ್ಕೆ ಕೋಳಿ ಮೊಟ್ಟೆ ಬೆಸ್ಟ್ ಅಂತಾ ಅಭಿಪ್ರಾಯ ಕೊಟ್ಟಿದ್ದಾರೆ. ಬಡ, ಶ್ರಮಿಕ ವರ್ಗದವರಿಗೆ ಕೋಳಿ ಮೊಟ್ಟೆ ಉತ್ತಮ ಪೌಷ್ಟಿಕಾಂಶ ಹೀಗಾಗಿ ಕಾಂಗ್ರೆಸ್ಗೆ ಬಿಬಿಎಂಪಿ, ಮಾಜಿ ಸದಸ್ಯರು ಕೋಳಿ ಮೊಟ್ಟೆಗೆ ಒತ್ತಾಯಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ವಿಚಾರ ಸಂಬಂಧ ಇಂದು ಕ್ಯಾಬಿನೇಟ್ ನಲ್ಲೂ ವಿಷಯ ಚರ್ಚೆಯಾಗುವ ಸಾಧ್ಯತೆ ಇದೆ. ಅಕ್ಕಿ ಪೂರೈಕೆಗೆ ಮಾರ್ಗೋಪಾಯಗಳ ಬಗ್ಗೆ ಕ್ಯಾಬಿನೇಟ್ ನಲ್ಲೂ ಚರ್ಚೆ ನಡೆಯಲಿದೆ. ಕ್ಯಾಬಿನೆಟ್ ಸಭೆಯ ಬಳಿಕ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸಿಎಂ ಜೊತೆಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತಾರೆ. ಸಿಎಂ ಜೊತೆ ಚರ್ಚೆ ಬಳಿಕ ಆಹಾರ ಸಚಿವ ಕೆ ಎಚ್ ಮುನಿಯಪ್ಪ ತೆಲಂಗಾಣ ತೆರಳಲಿದ್ದಾರೆ. ಸಚಿವ ಸಂಪುಟ ಸಹೋದ್ಯೋಗಿಗಳ ಸಲಹೆ ಆಧರಿಸಿ ತೆಲಂಗಾಣಕ್ಕೆ ತೆರಳುವ ಸಾಧ್ಯತೆ ಇದೆ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ‘ಗೃಹಜ್ಯೋತಿ’ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯಗೆ KSRTC ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಪತ್ರ ಬರೆದಿದ್ದಾರೆ. KSRTC ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ್ ಸುಬ್ಬರಾವ್, ಚಾಲಕರ ಕಷ್ಟಗಳನ್ನ ಸರ್ಕಾರಕ್ಕೆ ತಿಳಿಸಲು ಸುದೀರ್ಘ ಪತ್ರ ಬರೆದಿದ್ದಾರೆ.
ಉಚಿತ ಯೋಜನೆಯಿಂದ ಪ್ರಯಾಣಿಸುತ್ತಿರುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ ಈ ಹಿನ್ನಲೆ ನಿಗಮಗಳ ವಾಹನಗಳ ಸಂಖ್ಯೆಯನ್ನು ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿಸಬೇಕು. ಕೆಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಮಹಿಳೆಯರು ಈ ವಾಹನಗಳನ್ನು ಬಿಟ್ಟು ನಮ್ಮ ಸಂಸ್ಥೆಯ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಆದ ಕಾರಣ ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಿರುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಅಲ್ಲಿ ಕೆಲಸ ಮಾಡುವ ಬಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಮತ್ತಿತರ ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಸ್ತಿಲ್ಲವೆಂದು ಆರೋಪ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ನೀಡಲಾಗದೆ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅಕ್ಕಿ ಯಾವುದೂ ನಿಲ್ಲುವುದಿಲ್ಲ. ಇದು ದ್ವೇಷದ ರಾಜಕಾರಣವಲ್ಲ, ಅಸಮರ್ಥ ರಾಜಕಾರಣ. ಈ ಹಿಂದೆಯೂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಿಸಿದ್ದರು. ಆಗಲೂ ಕೇಂದ್ರ ಸರ್ಕಾರದ ಅಕ್ಕಿಗೆ ತಮ್ಮ ಫೋಟೋ ಹಾಕಿಕೊಂಡಿದ್ದರು ಎಂದರು.
ಹುಬ್ಬಳ್ಳಿ ಪಾಲಿಕೆ ಪೌರಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಳಪೆ ಆಹಾರ ವಿತರಣೆ ವಿರುದ್ಧ ಪೌರಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ. ಕಳಪೆ ಆಹಾರ ವಿತರಣೆ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಂತಿಮ ವರದಿ ಸಿದ್ಧಪಡಿಸಿದ್ದಾರೆ. ಈ ವರ್ಷವೇ ಪರಿಷ್ಕರಣೆ ನಿಶ್ಚಿತ ಎಂದು ತಿಳಿಸಿದ್ದಾರೆ. ಸಪ್ಲಿಮೆಂಟರಿ ರೂಪದಲ್ಲಿ ಪಠ್ಯ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದ ಸಚಿವ ಮಧು ಬಂಗಾರಪ್ಪ, ಈಗಾಗಲೇ ಪರಿಷ್ಕರಣೆಯ ವರದಿ ಸಿದ್ದಪಡಿಸಿದ್ದಾರೆ. ಇಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಭಿಪ್ರಾಯ ಪಡೆಯುವ ಸಾಧ್ಯತೆ ಇದೆ.
ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಕ್ಕೆ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಪುಕ್ಕಟೆ ವಿದ್ಯುತ್ ಕೊಡುತ್ತೇವೆಂದು ವಿದ್ಯುತ್ ದರ ಏರಿಸಿದ್ದೀರಿ. ಗೃಹಜ್ಯೋತಿ ಅರ್ಜಿ ದಿನಾಂಕವನ್ನು ಮುಂದಕ್ಕೆ ತಳ್ಳಿದ್ದೀರಿ. ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ ಎಂದು ಬಿಜೆಪಿ ಲೇವಡಿ ಮಾಡಿದೆ.
ಗೃಹಜ್ಯೋತಿ ಅರ್ಜಿ ದಿನಾಂಕವನ್ನು ಮುಂದಕ್ಕೆ ತಳ್ಳಿದ್ದೀರಿ. ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.#Siddaramaiah #bjpkarnataka #Congress #congresskarnataka https://t.co/7rhNFYBWNB
— TV9 Kannada (@tv9kannada) June 15, 2023
ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ಚಂಡಮಾರುತದ ಆರ್ಭಟ ಹೆಚ್ಚಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಗುಜರಾತ್ ಸಮುದ್ರ ತೀರಕ್ಕೆ ‘ಬಿಪರ್‌ಜಾಯ್’ ಅಪ್ಪಳಿಸಲಿದೆ. ಗುಜರಾತ್‌ನ ಮಾಂಡವಿ ಬಳಿ ‘ಬಿಪರ್‌ಜಾಯ್’ ನೆಲಕ್ಕೆ ಅಪ್ಪಳಿಸಲಿದೆ. ಇಂದು 9 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
Published On - 8:02 am, Thu, 15 June 23