
ಬೆಂಗಳೂರು, ಫೆಬ್ರವರಿ 13: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳ ಸೂಚನೆ ಹಿನ್ನೆಲೆ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ (Private bus)ಮಾಲೀಕರಿಗೆ ಖಡಕ್ ನಿರ್ದೇಶನ ನೀಡಿದೆ. ಎಲ್ಲಾ ಸ್ಲೀಪರ್ ಕೋಚ್ ಮತ್ತು ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಫೆಬ್ರವರಿ 28ರವ ಗಡುವು ನೀಡಲಾಗಿದೆ.
ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತದ ನಂತರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿಸುವ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಳೆದ ತಿಂಗಳ 21ರಂದು ಖಾಸಗಿ ಬಸ್ ಮಾಲೀಕರು, ಕೋಚ್ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಸ್ ಬಾಡಿ ನಿರ್ಮಾಣ ವಿಧಾನ, ತುರ್ತು ನಿರ್ಗಮನ ದ್ವಾರಗಳ ಸಂಖ್ಯೆ, ಅಗ್ನಿಶಾಮಕ ಸಾಧನಗಳ ಅಳವಡಿಕೆ, ಎಮರ್ಜೆನ್ಸಿ ಎಕ್ಸಿಟ್ ಬಳಿ ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ 11 ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ನಂದಿಸುವ ವಿಧಾನಗಳ ಬಗ್ಗೆ ಸೂಚನೆ ನೀಡಬೇಕು, ಗ್ಲಾಸ್ ಒಡೆದು ಹೊರಬರಲು ಹ್ಯಾಮರ್‌ಗಳನ್ನು ಇರಿಸಬೇಕು, ಪ್ರಯಾಣಿಕರಿಗೆ ಎಚ್ಚರಿಕೆ ಅಲಾರಂ ವ್ಯವಸ್ಥೆ ಮಾಡಬೇಕು ಹಾಗೂ ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ಸೌಲಭ್ಯ ಒದಗಿಸಬೇಕು ಎಂದು ಸಚಿವರು ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್ ಟ್ವಿಸ್ಟ್: ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಬಹಿರಂಗ
ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಹೆಚ್ಚಿನ ಸೂಚನೆಗಳನ್ನು ಈಗಾಗಲೇ ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಗಡುವಿಗೆ ಇನ್ನೂ 16 ದಿನಗಳು ಮಾತ್ರ ಬಾಕಿಯಿರುವುದರಿಂದ ಎಲ್ಲಾ ಬಸ್‌ಗಳಲ್ಲಿ ನಿಯಮಗಳು ಸಂಪೂರ್ಣ ಜಾರಿಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 am, Fri, 13 February 26