ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಖಂಡಿಸಿ ಇಂದು ಇಡೀ ದಿನ ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟರ್ ಅಭಿಯಾನ!
ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಕನ್ನಡ ನುಡಿಯನ್ನು ಹಿಂದಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಟ್ವಿಟರ್ ಅಭಿಯಾನ ನಡೆಸುವ ಮೂಲಕ ಬಹುದೊಡ್ಡ ಹೋರಾಟವನ್ನು ಆರಂಭಿಸಲಿದೆ.
ಬೆಂಗಳೂರು: ಸಂಸ್ಕೃತ ವಿಶ್ವವಿದ್ಯಾಲಯ (Sanskrit University) ಸ್ಥಾಪನೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕರವೇ (ಕರ್ನಾಟಕ ರಕ್ಷಣಾ ವೇದಿಕೆ) ಹೋರಾಟ ನಡೆಸಲು ಮುಂದಾಗಿದೆ. ಇಂದು (ಜ.16) ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಟ್ವಿಟರ್ ಅಭಿಯಾನ (Twitter Campaign) ನಡೆಸಲು ಕರವೇ ನಿರ್ಧರಿಸಿದೆ. ಸದ್ಯ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ (Narayanagouda), ರಾಜ್ಯದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿರಲಿಲ್ಲ. ಕನ್ನಡಿಗರ ಮೇಲೆ ಪರನುಡಿಯನ್ನು ಹೇರುವ ಇಂಥ ಯತ್ನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಸರ್ಕಾರ ಏನೇ ಬಲಪ್ರಯೋಗ ಮಾಡಿದರೂ ವಿಶ್ವವಿದ್ಯಾಲಯ ಆರಂಭಕ್ಕೆ ನಾವು ಅವಕಾಶ ನೀಡುವುದಿಲ್ಲ ಅಂತ ಹೇಳಿದ್ದಾರೆ.
ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಕನ್ನಡ ನುಡಿಯನ್ನು ಹಿಂದಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಟ್ವಿಟರ್ ಅಭಿಯಾನ ನಡೆಸುವ ಮೂಲಕ ಬಹುದೊಡ್ಡ ಹೋರಾಟವನ್ನು ಆರಂಭಿಸಲಿದೆ. ಮೊದಲ ಹಂತದಲ್ಲಿ ಸಂಸ್ಕೃತ ವಿವಿ ಸ್ಥಾಪನೆ ಹಿನ್ನೆಲೆಯ ಹುನ್ನಾರಗಳನ್ನು ಬಯಲಿಗೆಳೆದು ಜನಜಾಗೃತಿ ನಡೆಸಲಾಗುವುದು. ಮುಂದೆ ಹಂತಹಂತವಾಗಿ ರಾಜ್ಯದೆಲ್ಲೆಡೆ ಬೀದಿ ಹೋರಾಟಗಳನ್ನು ಸಂಘಟಿಸಲಾಗುವುದು. ಸಂಸ್ಕೃತ ವಿವಿ ರದ್ದುಗೊಳಿಸದಿದ್ದರೆ ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ ಅಂತ ಕರವೇ ಅಧ್ಯಕ್ಷ ನಾರಾಯಣಗೌಡ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಮಾಗಡಿ ಬಳಿ ನೂರು ಎಕರೆ ಜಾಗವನ್ನು ವಿವಿಗಾಗಿ ನೀಡಲಾಗಿದೆ. 359 ಕೋಟಿ ರುಪಾಯಿ ಕೊಡಲಾಗಿದೆ. ಇನ್ನೂ ಸಾವಿರಾರು ಕೋಟಿ ರುಪಾಯಿ ನಮ್ಮ ಹಣವನ್ನು ಕೊಡುವ ಸಾಧ್ಯತೆ ಇದೆ. ಈ ಎಲ್ಲ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಟ್ವೀಟ್ ಮಾಡಿರುವ ನಾರಾಯಣಗೌಡ, ಹಂಪಿಯಲ್ಲಿನ ಕನ್ನಡ ವಿವಿಯ ಸಿಬ್ಬಂದಿಗೆ ಹಣ ಕೊಡಲೂ ಸರ್ಕಾರ ಹಣವಿಲ್ಲವೆಂಬ ಸಬೂಬು ನೀಡುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ, ಹೋರಾಟ ನಡೆಸಿ ಅನುದಾನ ಕೊಡಿಸಬೇಕಾಯಿತು. ಕನ್ನಡ ವಿವಿಗೆ ಇಲ್ಲದ ಹಣ ಸಂಸ್ಕೃತ ವಿವಿಗೆ ಎಲ್ಲಿಂದ ಬಂತು? ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಅಂತ ಒತ್ತಾಯಿಸಿದ್ದಾರೆ.
ಸಂಸ್ಕೃತ ಅಧ್ಯಾಪಕರು, ಸಂಸ್ಕೃತಕ್ಕೆ ಸಂಬಂಧಪಟ್ಟ ಸಂಸ್ಥೆಗಳು ನ್ಯಾಯಲಯಕ್ಕೆ ಹೋಗಿ ಪದವಿ ಹಂತದಲ್ಲಿ ಕನ್ನಡ ಕಲಿಕೆಗೆ ಅಡ್ಡಿಯಾಗಿವೆ. ಇವರೆಲ್ಲ ಯಾರು, ಈ ಸಂಚುಕೂಟದ ಹುನ್ನಾರಗಳೇನು, ಇವರ ಹಿಂದೆ ಯಾರಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿದೆ ಅಂತ ನಾರಾಯಣಗೌಡ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು. ಕನ್ನಡವನ್ನು ಕತ್ತು ಹಿಸುಕುವ ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಇಂಥವರಿಗೆ ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ಹಲವು ರೀತಿಯಲ್ಲಿ ಪಾಠ ಕಲಿಸಿದ್ದೇವೆ. ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡಕ್ಕೆ ದ್ರೋಹ ಎಸಗುವವರು ಮೈಮೇಲೆ ಪ್ರಜ್ಞೆ ಇಟ್ಟುಕೊಂಡಿರಲಿ ಅಂತ ಎಚ್ಚರಿಸಿದ್ದಾರೆ.
ಇನ್ನು ಇಂದು ನಡೆಯುವ ಟ್ವಿಟರ್ ಅಭಿಯಾನದಲ್ಲಿ ಎಲ್ಲ ಕನ್ನಡದ ಮನಸುಗಳೂ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ. ಇದು ದೊಡ್ಡ ಚಳವಳಿಯ ಸಣ್ಣ ಆರಂಭವಷ್ಟೆ. ನಾವು ಸಾಗಬೇಕಾದ ಹಾದಿ ದೂರವಿದೆ. ಕನ್ನಡದ ಜನತೆ ಸಂಸ್ಕೃತ ಪ್ರಿಯರ ಹುನ್ನಾರಗಳನ್ನು ಅರಿತು ಹೋರಾಡಲೇಬೇಕಾದ ಅನಿವಾರ್ಯತೆ ಈಗ ಉಂಟಾಗಿದೆ ಅಂತ ತಿಳಿಸಿದ್ದಾರೆ.