ಬೆಂಗಳೂರು, (ಡಿಸೆಂಬರ್ 27): ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ (Kannada) ಕಡ್ಡಾಯಕ್ಕೆ ಸರ್ಕಾರ ಸೂಚನೆ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಇಂದು(ಡಿಸೆಂಬರ್ 27) ನಾಮಫಲಕ ಮಹಾ ಅಭಿಯಾನ ಕೈಗೊಂಡಿದೆ. ಈ ಸಂಬಂಧ ಇಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣ ರಸ್ಥೆಯಿಂದ ರ್ಯಾಲಿ ಶುರುವಾಗಲಿದ್ದು, ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, SP ರೋಡ್, ಬ್ರಿಗೇಡ್ ರೋಡ್, MG ರೋಡ್, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವಿನ್ಯೂ ರೋಡ್ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ರ್ಯಾಲಿ ಸಾಗಲಿದೆ.
ಕನ್ನಡಕ್ಕೆ ಶೇ.60 ರಷ್ಟು ಆದ್ಯತೆ ಕೊಡಬೇಕು ಎಂದು ಕರವೇ ನಾರಾಯಣಗೌಡ ಬಣ ಮಾಲ್,ಅಂಗಡಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದೆ. ಒಂದು ವೇಳೆ ಕನ್ನಡ ಬಳಕೆ ಮಾಡದ ಮಾಲ್, ಅಂಗಡಿ, ಇತರೆ ವಾಣಿಜ್ಯ ಮಳಿಗೆಗಳ ಇಂಗ್ಲಿಷ್ ಹಿಂದಿ ನಾಮಫಲಕ ತೆರವು ಮಾಡುತ್ತೇವೆಂದು ಎಚ್ಚರಿಕೆ ನೀಡಿದೆ.
ಡಿಸೆಂಬರ್ 27ರ ಒಳಗೆ ಬೆಂಗಳೂರಿನ ಎಲ್ಲ ವ್ಯಾಪಾರ, ಉದ್ಯಮಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಡುವನ್ನು ವಿಧಿಸಿತ್ತು. ಆದರೆ, ಕೆಲವು ಮಾಲೀಕರು ಕರವೇಯ ಈ ಅಂತಿಮ ಗಡುವಿಗೆ ಸವಾಲು ಹಾಕಿದ್ದರಿಂದ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ರಕ್ಷಣಾ ವೇದಿಕೆಯು ತಾನು ನೀಡಿದ ಅಂತಿಮ ಗಡುವಿನ ದಿನವಾದ ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆಯನ್ನು (Procession in Bangalore) ಆಯೋಜಿಸಿದ್ದು, ಈ ವೇಳೆ ಕನ್ನಡ ನಾಮಫಲಕ ಇಲ್ಲದ ಅಂಗಡಿ, ಉದ್ಯಮಗಳು ಕಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಹೀಗಾಗಿ ಸ್ವಲ್ಪಮಟ್ಟಿಗೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೂ ಎದುರಾಗುವ ಸಾಧ್ಯತೆಗಳಿವೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಕರ್ನಾಟಕದ ಎಲ್ಲ ವ್ಯಾಪಾರ, ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂಬ ಸರ್ಕಾರದ ನಿಯಮಾವಳಿಗಳು ಇದ್ದರೂ ಸಹ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಕನ್ನಡದ ಅಸ್ಮಿತೆಯನ್ನು ಅಗೌರವದಿಂದ ಕಾಣುತ್ತ, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ನವೆಂಬರ್ 1ರಿಂದ ಸತತವಾಗಿ ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸುತ್ತ ಬಂದಿದೆ. ಆದರೂ ಕೆಲವು ವಲಸಿಗ ದುರಹಂಕಾರಿ ವ್ಯಾಪಾರಸ್ಥರು ನಾಮಫಲಕ ಬದಲಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 27ರೊಳಗೆ ನಾಮಫಲಕ ಕನ್ನಡೀಕರಿಸಲು ಕರ್ನಾಟಕ ರಕ್ಷಣಾ ವೇದಿಕೆ ಗಡುವು ನೀಡಿತ್ತು. ಇದೀಗ ಡಿಸೆಂಬರ್ 27 ಬುಧವಾರ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ನಾಡಪ್ರಭು ಕೆಂಪೇಗೌಡರ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಬಳಿ ಸಮಾವೇಶಗೊಂಡು, ಅಲ್ಲಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಎಂದು ಕರವೇ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.