ಬೆಂಗಳೂರು: ನಗರದ ಅರಮನೆ ಮೈದಾನ ಅವರಣದಲ್ಲಿ ಚಿತ್ರರಂಗ ಆಯೋಜಿಸಿರುವ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು. ‘ಪುನೀತ್ ನಮ್ಮೆಲ್ಲರಿಗೂ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ ವ್ಯಕ್ತಿ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಸಣ್ಣ ವಯಸ್ಸಿನಲ್ಲೇ ಆತ ಅದ್ಭುತವಾಗಿ ನಟಿಸುತ್ತಿದ್ದ. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ’ ಎಂದು ಬೊಮ್ಮಾಯಿ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಭಾರತ ರತ್ನ ಹೇಗೆ ಅತ್ಯುನ್ನತ ಪ್ರಶಸ್ತಿ ಎನಿಸಿದರೆ, ರಾಜ್ಯಮಟ್ಟದಲ್ಲಿ ಕರ್ನಾಟಕ ರತ್ನ ಅತ್ಯುನ್ನತ ಗೌರವ ಎನಿಸಿಕೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪಿಸಲಾಯಿತು. ಈವರಗೆ ಕೇವಲ ಎಂಟು ಮಂದಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಮರಣೋತ್ತರವಾಗಿ ಈ ಪ್ರಶಸ್ತಿ ಪಡೆಯುತ್ತಿರುವ ಪುನೀತ್ ರಾಜ್ಕುಮಾರ್ ಈ ಗೌರವಕ್ಕೆ ಪಾತ್ರರಾದ 10ನೇ ವ್ಯಕ್ತಿಯಾಗಿದ್ದಾರೆ.
50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಈ ಪುರಸ್ಕಾರ ಒಳಗೊಂಡಿರುತ್ತದೆ.
ಕರ್ನಾಟಕ ರತ್ನ ಪುರಸ್ಕೃತರು
ಈ ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ವಿವರ ಇಂತಿದೆ…
ಕುವೆಂಪು (1992), ಡಾ.ರಾಜ್ಕುಮಾರ್ (1992), ಎಸ್.ನಿಜಲಿಂಗಪ್ಪ (199), ಸಿ.ಎನ್.ಆರ್.ರಾವ್ (2000), ದೇವಿ ಪ್ರಸಾದ್ ಶೆಟ್ಟಿ (2001), ಭೀಮಸೇನೆ ಜೋಷಿ (2005), ಶಿವಕುಮಾರ ಸ್ವಾಮೀಜಿ (2007), ದೇ.ಜವರೇಗೌಡ (2008), ಡಿ.ವೀರೇಂದ್ರ ಹೆಗ್ಗಡೆ (2009), ಪುನೀತ್ ರಾಜ್ಕುಮಾರ್.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಇದನ್ನೂ ಓದಿ: Puneeth Namana: ‘ಪುನೀತ ನಮನ’ ಕಾರ್ಯಕ್ರಮ ಲೈವ್ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Tue, 16 November 21