ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್​ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು

ಗುಜರಾತ್ ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಆರೋಪದ ಮೇಲೆ ಕೋರಮಂಗಲ ಆರ್‌ಟಿಒದ ಹಿರಿಯ ಮೋಟರ್ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಟಿವಿ9 ವರದಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ತನಿಖೆಯಲ್ಲಿ ಅವರ ತಪ್ಪು ಸಾಬೀತಾಗಿದೆ. ರಾಜ್ಯ ಸಾರಿಗೆ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್​ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು
ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು
Edited By:

Updated on: Jan 21, 2026 | 12:46 PM

ಬೆಂಗಳೂರು, ಜನವರಿ 21: ಗುಜರಾತ್ (Gujrat) ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿದ ಗಂಭೀರ ಆರೋಪದ ಮೇಲೆ ಕೋರಮಂಗಲ ಆರ್‌ಟಿಒದ ಹಿರಿಯ ಮೋಟರ್ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ‘ಟಿವಿ9’ ದಾಖಲೆಗಳ ಸಹಿತ ವರದಿ ಮಾಡಿತ್ತು. ನಂತರ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿತ್ತು. ಕೋರಮಂಗಲ ಆರ್‌ಟಿಒ ಅಧಿಕಾರಿಗಳು ಗುಜರಾತ್ ವಾಹನಗಳ ಖುದ್ದು ತಪಾಸಣೆ ನಡೆಸದೆಯೇ ಅವುಗಳಿಗೆ ಎಫ್‌ಸಿ ನೀಡಿದ್ದರು.

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ, ಯಾವುದೇ ರಾಜ್ಯದಲ್ಲಾದರೂ ವಾಹನಗಳ ಎಫ್‌ಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ, ವಾಹನವವನ್ನು ಖುದ್ದು ಆರ್‌ಟಿಒ ಮುಂದೆ ಹಾಜರುಪಡಿಸಿದ ನಂತರ ಪರಿಶೀಲನೆ ನಡೆಸಿಯೇ ಎಫ್​ಸಿ ನೀಡಬೇಕು ಎಂಬ ನಿಯಮವಿದೆ. ಆದರೆ, ಕೋರಮಂಗಲ ಆರ್‌ಟಿಒ ಅಧಿಕಾರಿಗಳು, ವಾಹನಗಳು ಇಲ್ಲಿಗೆ ಬಂದಿದ್ದವು, ನಾವು ಖುದ್ದಾಗಿ ಪರಿಶೀಲಿಸಿದ್ದೇವೆ ಎಂದು ಸುಳ್ಳು ಹೇಳಿ ಎಫ್‌ಸಿಗಳನ್ನು ನೀಡಿದ್ದರು. ಆದರೆ, ಆ ಸಮಯದಲ್ಲಿ ಆ ವಾಹನಗಳು ಗುಜರಾತ್‌ನಲ್ಲಿ ಸಂಚರಿಸುತ್ತಿರುವುದನ್ನು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ಬಹಿರಂಗಪಡಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಾರಿಗೆ ಇಲಾಖೆ ಸಚಿವರು ತನಿಖೆಗೆ ಆದೇಶಿಸಿದ್ದರು. ಜಂಟಿ ಕಮಿಷನರ್ ನೇತೃತ್ವದಲ್ಲಿ ತನಿಖೆ ನಡೆದು, ಮೇಲ್ನೋಟಕ್ಕೆ ನಿಸಾರ್ ಅಹಮದ್ ಅವರು ತಪ್ಪೆಸಗಿರುವುದು ಕಂಡುಬಂದಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ರಾಜ್ಯ ಸಾರಿಗೆ ಇಲಾಖೆ ಆಯುಕ್ತರು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದು ಪ್ರಾಥಮಿಕ ಹಂತದ ಕ್ರಮವಾಗಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿರುವ ಇತರೆ ಅಧಿಕಾರಿಗಳ ಬಗ್ಗೆಯೂ ತನಿಖೆ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಧಿಕಾರಿಗಳ ಅಮಾನತು ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕರ್ನಾಟಕದ ಮಾನ ಗುಜರಾತ್​ನಲ್ಲಿ ಹರಾಜಿಗಿಟ್ಟ ಆರ್​ಟಿಒ ಅಧಿಕಾರಿಗಳು! ಕಾಸು ಕೊಟ್ರೆ ವಾಹನ ತಪಾಸಣೆಯೇ ಮಾಡದೆ ಕೊಡ್ತಾರೆ ಎಫ್​ಸಿ

ಗುಜರಾತ್‌ನ ಸುಮಾರು 50 ಶಾಲಾ ಬಸ್‌ಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿತ್ತು. ಈ ಅಕ್ರಮವನ್ನು ಗುಜರಾತ್ ರಾಜ್ಯದ ಸಾರಿಗೆ ಅಧಿಕಾರಿಗಳೇ ಬಯಲಿಗೆಳೆದಿದ್ದರು. ವಾಹನಗಳು ನಮ್ಮ ರಾಜ್ಯದಲ್ಲಿದ್ದಾಗ, ಕರ್ನಾಟಕದಲ್ಲಿ ಎಫ್​ಸಿ ಹೇಗೆ ನೀಡಲಾಯಿ ತುಎಂದು ಪ್ರಶ್ನಿಸಿ, ಸಾಕ್ಷ್ಯಾಧಾರಗಳೊಂದಿಗೆ ಕರ್ನಾಟಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಾಕ್ಷ್ಯಾಧಾರಗಳು ಟಿವಿ9ಗೆ ಲಭ್ಯವಾಗಿದ್ದವು. ಅದನ್ನಿಟ್ಟುಕೊಂಡೇ ವರದಿ ಮಾಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ