AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಮಾನ ಗುಜರಾತ್​ನಲ್ಲಿ ಹರಾಜಿಗಿಟ್ಟ ಆರ್​ಟಿಒ ಅಧಿಕಾರಿಗಳು! ಕಾಸು ಕೊಟ್ರೆ ವಾಹನ ತಪಾಸಣೆಯೇ ಮಾಡದೆ ಕೊಡ್ತಾರೆ ಎಫ್​ಸಿ

ಬೆಂಗಳೂರಿನ ಕೋರಮಂಗಲ RTO ಕಚೇರಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿರುವ ವಾಹನಗಳಿಗೆ, ಯಾವುದೇ ತಪಾಸಣೆ ಇಲ್ಲದೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ನೀಡಿರುವುದನ್ನು ಆ ರಾಜ್ಯಗಳ ಅಧಿಕಾರಿಗಳೇ ದಾಖಲೆ ಸಮೇತ ಬಯಲಿಗೆಳೆದಿದ್ದಾರೆ. ಗುಜರಾತ್ ಅಧಿಕಾರಿಗಳ ಕಾರ್ಯಾಚರಣೆಯೊಂದಿಗೆ ಕರ್ನಾಟಕಕ್ಕೆ ಭಾರಿ ಮುಜುಗರ ಉಂಟಾಗುವಂತಾಗಿದೆ.

ಕರ್ನಾಟಕದ ಮಾನ ಗುಜರಾತ್​ನಲ್ಲಿ ಹರಾಜಿಗಿಟ್ಟ ಆರ್​ಟಿಒ ಅಧಿಕಾರಿಗಳು! ಕಾಸು ಕೊಟ್ರೆ ವಾಹನ ತಪಾಸಣೆಯೇ ಮಾಡದೆ ಕೊಡ್ತಾರೆ ಎಫ್​ಸಿ
ಸಾಂದರ್ಭಿಕ ಚಿತ್ರ
Kiran Surya
| Edited By: |

Updated on: Jan 20, 2026 | 11:15 AM

Share

ಬೆಂಗಳೂರು, ಜನವರಿ 20: ಕರ್ನಾಟಕದ (Karnataka) ಆರ್‌ಟಿಒ ಕಚೇರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಇದೀಗ ಅನುಮಾನ ಬಲವಾಗಿದೆ. ಅರ್ಹವಲ್ಲದಿದ್ದರೂ ಅಕ್ರಮವಾಗಿ ಗುಜರಾತ್ (Gujrat) ಹಾಗೂ ಮಹಾರಾಷ್ಟ್ರದ ವಾಹನಗಳಿಗೆ ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಕರ್ನಾಟಕ ಮುಜುಗರಕ್ಕೀಡಾಗುವಂತಾಗಿದೆ. ನಿಯಮಾನುಸಾರ, ಯಾವುದೇ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮೊದಲು ಆರ್‌ಟಿಒ ಅಧಿಕಾರಿಗಳು ವಾಹನವನ್ನು ಖುದ್ದಾಗಿ ಪರಿಶೀಲಿಸಬೇಕು. ವಾಹನ ರಸ್ತೆ ಮೇಲೆ ಸಂಚರಿಸಲು ಯೋಗ್ಯವಾಗಿದೆಯೇ, ತುರ್ತು ಸಂದರ್ಭಗಳಿಗೆ ಅಗತ್ಯವಾದ ಸುರಕ್ಷತಾ ಸಾಧನಗಳು ಇದೆಯೇ ಎಂಬುದನ್ನು ತಪಾಸಣೆ ಮಾಡುವುದು ಕಡ್ಡಾಯ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಗುಜರಾತ್ ರಾಜ್ಯದಲ್ಲೇ ಇದ್ದ ಬಸ್‌ಗಳಿಗೆ ಬೆಂಗಳೂರಿನಲ್ಲಿ ಎಫ್​ಸಿ ನೀಡಲಾಗಿದೆ ಎಂಬುದು ಬಹಿರಂಗವಾಗಿದೆ.

ಗುಜರಾತ್​ನ 50 ಶಾಲಾ ಬಸ್‌ಗಳಿಗೆ ಅಕ್ರಮವಾಗಿ ಎಫ್​ಸಿ

ಗುಜರಾತ್‌ನಲ್ಲಿ ಇದ್ದ ಸುಮಾರು 50 ಶಾಲಾ ಬಸ್‌ಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿದೆ. ಈ ಅಕ್ರಮವನ್ನು ಗುಜರಾತ್ ರಾಜ್ಯದ ಸಾರಿಗೆ ಅಧಿಕಾರಿಗಳೇ ಬಯಲಿಗೆಳೆದಿದ್ದಾರೆ. ವಾಹನಗಳು ನಮ್ಮ ರಾಜ್ಯದಲ್ಲಿದ್ದಾಗ, ಕರ್ನಾಟಕದಲ್ಲಿ ಎಫ್​ಸಿ ಹೇಗೆ ನೀಡಲಾಯಿತುಎಂದು ಪ್ರಶ್ನಿಸಿ, ಸಾಕ್ಷ್ಯಾಧಾರಗಳೊಂದಿಗೆ ಕರ್ನಾಟಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಟೋಲ್ ದಾಖಲೆಗಳೇ ಸಾಕ್ಷಿ

2025ರ ಅಕ್ಟೋಬರ್ 8ರಂದು ಒಂದೇ ದಿನ 20 ಗುಜರಾತ್ ವಾಹನಗಳಿಗೆ ‘ಖುದ್ದು ಪರಿಶೀಲನೆ ನಡೆಸಲಾಗಿದೆ’ ಎಂದು ದಾಖಲೆಗಳಲ್ಲಿ ಉಲ್ಲೇಖಿಸಿ ಕೋರಮಂಗಲ ಆರ್​ಟಿಒ ಎಫ್​ಸಿ ನೀಡಿದೆ. ಆದರೆ ಆ ದಿನವೇ, ಆ ವಾಹನಗಳು ಗುಜರಾತ್‌ನ ವಿವಿಧ ಟೋಲ್ ಗೇಟ್‌ಗಳಲ್ಲಿ ಸಂಚರಿಸಿದ್ದವು ಎಂಬುದಕ್ಕೆ ಸಂಬಂಧಿಸಿದ ಟೋಲ್ ದಾಖಲೆಗಳನ್ನು ಗುಜರಾತ್ ಅಧಿಕಾರಿಗಳು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಗುಜರಾತ್ ಸರ್ಕಾರವು ಆ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ರದ್ದುಪಡಿಸಿದೆ.

ಮಹಾರಾಷ್ಟ್ರದ 400 ವಾಹನಗಳಿಗೂ ನೀಡಲಾಗಿತ್ತು ಎಫ್​ಸಿ

ಗುಜರಾತ್​ ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ಸುಮಾರು 400 ವಾಹನಗಳಿಗೂ ಇದೇ ರೀತಿ ಅಕ್ರಮವಾಗಿ ಎಫ್​ಸಿ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ಬಸ್​ಗಳಲ್ಲೂ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್​ಗಳಿಗೆ ಹೊಸ ನಿಯಮ

ಇದರೊಂದಿಗೆ, ದೇಶದಲ್ಲಿ ಇತ್ತೀಚೆಗೆ ನಡೆದ ಸಾಲು ಸಾಲು ಬಸ್ ಅಗ್ನಿ ದುರಂತಗಳಿಗೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣವೇ ಎಂಬ ಪ್ರಶ್ನೆ ಈಗ ಮೂಡಿದೆ. ಯಾವುದೇ ತಪಾಸಣೆ ಇಲ್ಲದೇ ನೀಡಿದ ಫಿಟ್ನೆಸ್ ಸರ್ಟಿಫಿಕೇಟ್‌ಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದಿಟ್ಟಿವೆಯೇ ಎಂಬುದರ ಕುರಿತು ಗಂಭೀರ ತನಿಖೆ ಅಗತ್ಯವಾಗಿದೆ ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಗುಜರಾತ್ ಅಧಿಕಾರಿಗಳಿಂದ ಸಿಕ್ಕ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ, ಕೋರಮಂಗಲ ಆರ್‌ಟಿಒ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಜೋರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ