ಸರ್ಕಾರದ ಆದೇಶ ಪ್ರತಿಯಲ್ಲಿ ‌ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ: ರಾಜ್ಯ ಸರ್ಕಾರದಿಂದ ಎಡವಟ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 16, 2022 | 12:16 PM

ಕರ್ನಾಟಕ ಬದಲು ‘ಕರ್ನಾಟಾ’ ಎಂದು, ಪ್ರಸ್ತಾವನೆ ಬದಲು ‘ಪ್ರಸತ್ತಾವನೆ’ ಎಂದು ಉಲ್ಲೇಖ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧ ಆದೇಶ ವಾಪಸ್ ಪತ್ರಿಯಲ್ಲಿ ಕನ್ನಡ ಪದ ಬಳಕೆ ತಪ್ಪಾಗಿ ಬರೆಯಲಾಗಿದೆ.

ಸರ್ಕಾರದ ಆದೇಶ ಪ್ರತಿಯಲ್ಲಿ ‌ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ: ರಾಜ್ಯ ಸರ್ಕಾರದಿಂದ ಎಡವಟ್ಟು
ಆದೇಶ ಪತ್ರದಲ್ಲಿ ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ ಮಾಡಿರುವುದು.
Follow us on

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ (Government 0ffices) ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಿದ್ದ ಸರ್ಕಾರ ಇದೀಗ ರಾತ್ರೋ ರಾತ್ರಿ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಆದರೆ ವಾಪಸ್‌ ಪಡೆದ ಆದೇಶದ ಪ್ರತಿಯಲ್ಲಿರುವ ಅಕ್ಷರ ದೋಷಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸರ್ಕಾರಿ ಆದೇಶದಲ್ಲೇ ಈ ರೀತಿಯ ತಪ್ಪುಗಳಾದರೆ ಹೇಗೆ ಎಂದು ಜನರ ಪ್ರಶ್ನೆ ಮಾಡುವಂತ್ತಾಗಿದೆ. ಆದೇಶ ಪ್ರತಿಯ ಆರಂಭದಲ್ಲಿ ಕರ್ನಾಟಕ ಸರ್ಕಾರದ ‘ನಡಾವಳಿಗಳು’ ಎಂದು ಬರೆಯುವ ಬದಲಾಗಿ ‘ನಡವಳಿಗಳು’, ‘ಪ್ರಸ್ತಾವನೆ’ ಬದಲಾಗಿ ‘ಪ್ರಸತ್ತಾವನೆ’, ಮೇಲೆ ಓದಲಾದ ಬದಲಾಗಿ ‘ಮೇಲೇ’, ಸರ್ಕಾರದ ಆದೇಶ ಸಂಖ್ಯೆ ‘ಭಾಗ 1’ ಬದಲಾಗಿ ‘ಬಾಗ 1’, ಕಡತದ ಬದಲಾಗಿ ‘ಕತವ’ ಎಂದು ತಪ್ಪಾಗಿ ಬರೆಯಲಾಗಿದೆ. ‘ಕರ್ನಾಟಕ’ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಬರೆಯುವ ಬದಲಾಗಿ ‘ಕರ್ನಾಟಾ’ ಎಂದು ಬರೆಯಲಾಗಿದೆ.
ಸರ್ಕಾರದ ಉಪ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಂದು ಬರೆಯುವಾಗ ‘ಆಡಳಿತ’ದ ಬದಲಾಗಿ ‘ಅಡಳಿತ’ ಎಂದು ಬರೆಯಲಾಗಿದೆ. ಹೀಗೆ ಸುಮಾರು ಎಂಟು ತಪ್ಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪಟ್ಟಿ ಮಾಡಿದ್ದಾರೆ. ಸರ್ಕಾರದ ಆದೇಶವನ್ನು ಇಷ್ಟು ತರಾತುರಿಯಲ್ಲಿ ತಪ್ಪು ತಪ್ಪಾಗಿ ಬರೆಯವ ಅಗತ್ಯ ಏನಿದೆ ಎನ್ನುತ್ತಿದ್ದಾರೆ.

ಅಧಿಕಾರಿಗಳು ನನ್ನ ಗಮನಕ್ಕೆ ತಂದಿರಲಿಲ್ಲ: ಸಿಎಂ ಬೊಮ್ಮಾಯಿ

ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧ ಆದೇಶ ವಾಪಸ್ ಕುರಿತಾಗಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು, ವಿಡಿಯೋ ಚಿತ್ರೀಕರಣ ಆದೇಶದ ಬಗ್ಗೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿರಲಿಲ್ಲ. ಆದರೆ ಅವರು ಕೇಳೋದ್ರಲ್ಲೂ ನ್ಯಾಯ ಇತ್ತು. ಕೆಲ ಮಹಿಳೆಯರ ಚಿತ್ರ ತೆಗೆಯುತ್ತಿದ್ದರು. ಆದರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ವಾಪಸ್ ಪಡೆಯಲಾಗಿದೆ. ನಮ್ಮ ಸರ್ಕಾರ ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದೆ ಅದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋಗೆ ನಿರ್ಬಂಧ ವಿಧಿಸಿತ್ತು. ಆದರೆ ಈಗ ಆ ಆದೇಶವನ್ನು ಸರ್ಕಾರ ಆದೇಶ ವಾಪಸ್ ಪಡೆದುಕೊಂಡಿದೆ. ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರ್ಕಾರ ಜುಲೈ 15ರ ತಡರಾತ್ರಿ ಆದೇಶ ಹಿಂಪಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ನಡೆಸುವಂತಿಲ್ಲ ಎಂದು ಆಡಳಿತ ಸುಧಾರಣಾ ಇಲಾಖೆಯಿಂದ ನಿನ್ನೆ ಆದೇಶ ಹೊರಡಿಸಿತ್ತು. ಕೆಲವರು ಸರ್ಕಾರಿ ಕಚೇರಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು.

ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೊ / ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಹಿಗಾಗಿ ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೊ / ವಿಡಿಯೋ ಮಾಡುವುದನ್ನು ನಿಷೇಧಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನೌಕರರ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

Published On - 10:01 am, Sat, 16 July 22