ಗೃಹ ಲಕ್ಷ್ಮೀಯರ ಖಾತೆಗೆ ಬೀಳದ ಹಣ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದ ಯಜಮಾನಿಯರು

| Updated By: ಆಯೇಷಾ ಬಾನು

Updated on: Nov 07, 2023 | 11:23 AM

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದೆ. ಆದರೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಹಿಳೆಯರ ಖಾತೆಗೆ 2 ಸಾವಿರ ರೂ. ಬಂದಿಲ್ಲ. ಹೀಗಾಗಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮತ ಕೇಳುವಾಗ ಎಲ್ಲರಿಗೂ ಹಣ ಕೊಡುತ್ತೇವೆ ಅಂದಿದ್ದರು. ಈಗ ನೋಡಿದರೆ ಈ ರೀತಿ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮೈಸೂರಿನಲ್ಲಿ ಮಹಿಳೆಯೊಬ್ಬರು ಸಿದ್ದರಾಮಯ್ಯರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಗೃಹ ಲಕ್ಷ್ಮೀಯರ ಖಾತೆಗೆ ಬೀಳದ ಹಣ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದ ಯಜಮಾನಿಯರು
ಸರ್ಕಾರದ ವಿರುದ್ಧ ಗರಂ ಆದ ಮಹಿಳೆಯರು
Follow us on

ಮೈಸೂರು, ನ.2023: ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಐದು ಉಚಿತ ಗ್ಯಾರಂಟಿಗಳನ್ನು (Congress Free Guarantees) ಘೋಷಣೆ ಮಾಡಿತ್ತು. ಚುನಾವಣೆಯಲ್ಲಿ ಬಹುಮತ ಪಡೆದು ಆಧಿಕಾರಕ್ಕೇರಿದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಸಾಗಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯೂ (Gruha Lakshmi Scheme) ಒಂದು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಕುಟುಂಬದ ಯಜಮಾನಿಗೆ ಎರಡು ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿದೆ. ಕಳೆದ ಆಗಷ್ಟನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇನ್ನೂ ಕೂಡ ಮಹಿಳೆಯರು ಈ ಯೋಜನೆಯಡಿ ಒಂದು ರೂಪಾಯಿಯನ್ನೂ ಪಡೆದಿಲ್ಲ. ಈ ಹಿನ್ನೆಲೆ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಹೌದು, ಬೆಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ, ದಾವಣಗೆರೆ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ. ದಾಖಲೆಗಳನ್ನು ಸಲ್ಲಿಸಿದ್ದರೂ ಹಣ ಬಂದಿಲ್ಲ. ಸರ್ಕಾರ ನಮಗೆ ಸುಳ್ಳು ಹೇಳಿ ಮತ ಹಾಕಿಸಿಕೊಂಡಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಹಣ ಬೇಕಾದರೆ ಸಿದ್ದರಾಮಯ್ಯನವರನ್ನೇ ಕೇಳಿ ಎಂದು ಬ್ಯಾಂಕ್ ಸಿಬ್ಬಂದಿ ನಮ್ಮ ಜೊತೆ ಜಗಳ ಮಾಡುತ್ತಿದ್ದಾರೆ. ಕೆಲವರಿಗೆ ಒಂದು ತಿಂಗಳು ಬಂದಿದೆ. ಎರಡನೇ ತಿಂಗಳು ಹಣ ಬಂದಿಲ್ಲ. ಹಣ ಬರುತ್ತೆ ಎಂದು ನಾವು ತುಂಬಾ ಆಸೆಯಿಂದ ಇದ್ದೆವು ಎಂದು ಮೈಸೂರಿನಲ್ಲಿ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಕ್ಕೆ ವಾರ್ನಿಂಗ್

ಹಣ ಬರುತ್ತೆ ಎಂದು ತುಂಬಾ ಆಸೆಯಿಂದ ಇದ್ದೆವು. ಆದರೆ ಹಣ ಬಂದಿಲ್ಲ. ನಾವು ಎಲ್ಲಾ ದಾಖಲೆ ನೀಡಿದ್ದೇವೆ. ಬ್ಯಾಂಕ್‌ಗೆ ಹೋದರೆ ಜಗಳ ಮಾಡುತ್ತಾರೆ. ಸಿದ್ದರಾಮಯ್ಯ ಅವರನ್ನೇ ಹೋಗಿ ಕೇಳಿ ಅನ್ನುತ್ತಾರೆ. ಮತ ಕೇಳುವಾಗ ಎಲ್ಲರಿಗೂ ಹಣ ಕೊಡುತ್ತೇವೆ ಅಂದಿದ್ದರು. ಈಗ ನೋಡಿದರೆ ಈ ರೀತಿ ಮಾಡುತ್ತಿದ್ದಾರೆ. ಬರಲಿ ಮುಂದಿನ ಚುನಾವಣೆಗೆ ತಕ್ಕ ಪಾಠ ಕಲಿಸುತ್ತೇವೆ. ನಾವು ಯಾರಿಗೂ ಮತ ಹಾಕುವುದಿಲ್ಲ ಎಂದು ಮೈಸೂರಿನ ಗೃಹಲಕ್ಷ್ಮಿಯರು ಸಿದ್ದರಾಮಯ್ಯನವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲಾಭಾರ್ಥಿಗಳ ಖಾತೆಗಳಿಗೆ ನಾಲ್ಕೈದು ದಿನಗಳಲ್ಲಿ ಹಣ ಜಮೆಯಾಗುತ್ತದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಇನ್ನು ವಿಯಯಪುರದಲ್ಲಿ ಯೋಜನೆ ಜಾರಿಯಾಗಿದ್ದರೂ ಸಹ ಅನೇಕ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ ಹಣ ಖಾತೆಗೆ ವರ್ಗಾವಣೆಯಾಗಿಲ್ಲಾ. ಎಲ್ಲಾ ದಾಖಲಾತಿಗಳ ಸಹಿತ ಅರ್ಜಿಯನ್ನು ಸಲ್ಲಿಸಿದ್ದರೂ ಗೃಹ ಲಕ್ಷ್ಮೀ ಯೋಜನೆಯ ಹಣ ಮಾತ್ರ ಬಂದಿಲ್ಲಾ. ಇತರರಿಗೆ ಹಣ ಬಂದಿದೆ ನಮಗೆ ಯಾಕೆ ಹಣ ಬಂದಿಲ್ಲ ಎಂದು ಜಿಲ್ಲೆಯ ಕೆಲ ಮಹಿಳೆಯರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ನಮಗೂ ಗೃಹ ಲಕ್ಷ್ಮೀ ಹಣ ನೀಡಿದರೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸರ್ಕಾರದ ವಿರುದ್ಧ ಗೃಹಿಣಿಯರ ಆಕ್ರೋಶ

ಮಹಿಳೆಯರಿಗೆ ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಹಣ ಜಮೆ ಆಗದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೂ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬ್ಯಾಂಕ್ ಪಾಸ್ ಬುಕ್ ಕೈಯಲ್ಲಿ ಹಿಡಿದು ಹಣ ಜಮಾಣೆ ಆಗಿಲ್ಲ ಎಂದು ಗರಂ ಆಗಿದ್ದಾರೆ. ಪದೇ ಪದೇ ಬ್ಯಾಂಕ್ ಗೆ ಹೋಗಿ ಹಣ ಬಂದಿರುವುದನ್ನ ಪರಿಶೀಲನೆ ಮಾಡ್ತಿದ್ದೇವೆ. ಈ ವರೆಗೂ ಅಕೌಂಟ್​ಗೆ ಹಣ ಜಮಾವಣೆ ಆಗಿಲ್ಲ. ನಮ್ಮ ಜಿಲ್ಲೆಯವರೇ ಸಚಿವರಿದ್ದು ಈ ತಿಂಗಳಾದ್ರೂ ಹಣ ಹಾಕಿ. ಆರೋಗ್ಯ ಸಮಸ್ಯೆ ಇದೆ, ಶಾಲೆಗೆ ಫೀಸ್ ಕಟ್ಟಬೇಕು. ಎರಡು ಸಾವಿರ ಹಣ ಹಾಕುವುದರಿಂದ ಸಾಕಷ್ಟು ಅನುಕೂಲ ಆಗುತ್ತೆ ಎಂದು ಸರ್ಕಾರಕ್ಕೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಹಿಳೆಯರು ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಎಲ್ಲಾ ದಾಖಲೆಗಳನ್ನ ಕೊಟ್ಟರೂ ಹಣ ಮಾತ್ರ ಬಂದಿಲ್ಲ. ಪ್ರತಿದಿನ ಬ್ಯಾಂಕ್‌ಗೆ ಬರುತ್ತಿದ್ದೇವೆ. ಚೆಕ್ ಮಾಡಿ ಮಾಡಿ ಸಾಕಾಗಿದೆ. ಜೊತೆಗೆ ಅನ್ನಭಾಗ್ಯ ಯೋಜನೆಯ ಹಣ ಸಹ ಬಂದಿಲ್ಲ. ಆಧಾರ್ ಕಾರ್ಡ್ ಸಮೇತ ದಾಖಲೆಗಳನ್ನ ಸಲ್ಲಿಸಿದ್ದೇವೆ. ಮತ್ತೆ ನಾಳೆ ಬ್ಯಾಂಕ್‌ಗೆ ಹೋಗಿ ಚೆಕ್ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಮಹಿಳೆಯೊಬ್ಬರು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:19 am, Tue, 7 November 23