Karnataka Weather: ಅಬ್ಬರಿಸುತ್ತಿದೆ ಆಶ್ಲೇಷಾ ಮಳೆ; ಮಲೆನಾಡು, ಕರಾವಳಿ ಭಾಗದ ಜನರ ಕಣ್ಣಲ್ಲಿ ಆತಂಕದ ಛಾಯೆ

| Updated By: Skanda

Updated on: Aug 06, 2021 | 8:42 AM

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿನ್ನೆ ಪ್ರಕಟಿಸಿರುವ ಮಳೆ ಮುನ್ಸೂಚನೆ ಮಾಹಿತಿ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ ಆಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ.

Karnataka Weather: ಅಬ್ಬರಿಸುತ್ತಿದೆ ಆಶ್ಲೇಷಾ ಮಳೆ; ಮಲೆನಾಡು, ಕರಾವಳಿ ಭಾಗದ ಜನರ ಕಣ್ಣಲ್ಲಿ ಆತಂಕದ ಛಾಯೆ
ಹವಾಮಾನ ವರದಿ (ಸಾಂಕೇತಿಕ ಚಿತ್ರ)
Follow us on

ಬೆಂಗಳೂರು: ಕರ್ನಾಟಕದಲ್ಲಿ ಆಶ್ಲೇಷಾ ಮಳೆ ಅಬ್ಬರಿಸಲಾರಂಭಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದ (Heavy Rain) ಮಳೆಯಾಗುತ್ತಿದ್ದು ಜನರನ್ನು ಸಂಕಷ್ಟಕ್ಕೆ ನೂಕಿದೆ. ಈ ವರ್ಷವಂತೂ ಮೇ ತಿಂಗಳಿನಿಂದಲೇ ಮಳೆಗಾಲ ಆವರಿಸಿಕೊಂಡಂತೆ ಆಗಿರುವ ಕಾರಣ ಕೃಷಿಕರು ಮಳೆಯ ಹೊಡೆತಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಜೂನ್​ ತಿಂಗಳ ಕೆಲ ದಿನಗಳ ಕಾಲ ವಿರಾಮ ನೀಡಿದ್ದ ಮಳೆ (Monsoon 2021) ಜುಲೈನಲ್ಲಿ ಧಾರಾಕಾರವಾಗಿ ಸುರಿದು ಪ್ರವಾಹ, ಭೂಕುಸಿತದೊಂದಿಗೆ ಅನೇಕ ಕಡೆ ಅನಾಹುತಕ್ಕೆ ಕಾರಣವಾಗಿತ್ತು. ಆ ಸಂಕಷ್ಟಗಳನ್ನೆಲ್ಲಾ ಎದುರಿಸಿ ಇನ್ನೇನು ಮಳೆ (Karnataka Rain) ಕಡಿಮೆ ಆಯಿತು ಎಂದು ಜನ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಭೋರ್ಗರೆಯಲಾರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಳೆದೊಂದು ದಿನದಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಇಂದು ಕೂಡಾ ಈ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣವಿದ್ದು, ಮಳೆ ಆಗುತ್ತಿದೆ. ಆಗಸ್ಟ್​ 5 ರಿಂದ ಆಗಸ್ಟ್ 8ರ ವರೆಗೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯೂ ಮುನ್ನೆಚ್ಚರಿಕೆ ನೀಡಿದ್ದು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ (Yellow Alert) ಘೊಷಿಸಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿನ್ನೆ ಪ್ರಕಟಿಸಿರುವ ಮಳೆ ಮುನ್ಸೂಚನೆ ಮಾಹಿತಿ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ ಆಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕಳೆದ ತಿಂಗಳು ಸುಮಾರು 15 ದಿನಕ್ಕೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿತ್ತು. ನದಿಗಳು ಉಕ್ಕಿ ಹರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ನೋಡನೋಡುತ್ತಿದ್ದಂತೆಯೇ ಮನೆ ಮಠ ಸಾಕು ಪ್ರಾಣಿಗಳು ಕೊಚ್ಚಿ ಹೋಗಿದ್ದವು. ವರ್ಷಪೂರ್ತಿ ಬೆವರು ಸುರಿಸಿ ಬೆಳೆದಿದ್ದ ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿ ಬದುಕು ದುಸ್ತರಗೊಂಡಿದೆ. ಇದೆಲ್ಲಾ ಆಗಿ ಅರ್ಧ ತಿಂಗಳು ಕಳೆಯುವ ಮೊದಲೇ ಮಳೆ ಮತ್ತೆ ತನ್ನ ರೌದ್ರಾವತಾರ ಪ್ರದರ್ಶಿಸಲಾರಂಭಿಸಿದ್ದು, ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಇಂದು ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್, ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ, ಬೆಳಗಾವಿ ಮತ್ತು ವಿಜಯನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ತುಮಕೂರು, ರಾಮನಗರ, ದಾವಣಗೆರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹಗುರ ಮಳೆಯಾಗುವ ಸಂಭವವಿದ್ದು ಇನ್ನೂ ಮೂರ್ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ಇದನ್ನೂ ಓದಿ:
Health Tips: ಮಳೆಗಾಲದಲ್ಲಿ ಕಾಯಿಲೆಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು, ಹೀಗಾಗಿ ಈ 5 ಆಹಾರಗಳ ಬಗ್ಗೆ ಗಮನಹರಿಸಿ

(Karnataka Weather Today Heavy rainfall over Malnad and Coastal Karnataka creating fear in people)