ಬೆಂಗಳೂರು: ಕರ್ನಾಟಕದಲ್ಲಿ ಮಳೆಯಬ್ಬರ ತಗ್ಗಿದೆ. ಕಳೆದೊಂದು ವಾರದಲ್ಲಿ ಅಬ್ಬರಿಸಿ ಆತಂಕ ಸೃಷ್ಟಿಸಿದ್ದ ಆಶ್ಲೇಷಾ ಮಳೆ ವಿರಾಮ ನೀಡಿದೆ. ಪೂರ್ಣ ಪ್ರಮಾಣದಲ್ಲಿ ಮಳೆ (Karnataka Rains) ನಿಂತಿಲ್ಲವಾದರೂ ನಾಲ್ಕೈದು ದಿನಗಳ ಹಿಂದೆಯಿದ್ದ ವಾತಾವರಣ (Weather) ಸಾಕಷ್ಟು ಬದಲಾಗಿದೆ. ಜುಲೈ ತಿಂಗಳ ಭೀಕರ ಮಳೆಯನ್ನು ನೋಡಿ ಕಂಗಾಲಾಗಿದ್ದ ಜನ ಸಾವರಿಸಿಕೊಳ್ಳುವಷ್ಟರಲ್ಲಿ ಆಶ್ಲೇಷಾ ಮಳೆ ಅಬ್ಬರಿಸಲಾರಂಭಿಸಿ ದಿಗಿಲು ಮೂಡಿಸಿತ್ತು. ಮಲೆನಾಡು, ಕರಾವಳಿ ಭಾಗದ ಕೃಷಿಕರಂತೂ ಬೆಳೆ ಕಣ್ಣೆದುರೇ ಹಾಳಾಗುವುದನ್ನು ನೋಡಿ ಸಂಕಟ ಪಟ್ಟಿದ್ದರು. ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೃಷಿಯನ್ನೇ ಜೀವನದ ಹಾದಿಯನ್ನಾಗಿಸಿಕೊಂಡವರು ಮಳೆಗೆ ಹಿಡಿಶಾಪ ಹಾಕುವಂತಾಗಿತ್ತು. ಇಂತಹ ಆತಂಕದ ಸನ್ನಿವೇಶದಲ್ಲಿ ಮಳೆ ಕಡಿಮೆಯಾಗುವ ಲಕ್ಷಣ ಕಾಣಿಸಿರುವುದು ರೈತರಿಗೆ ಸಮಾಧಾನ ತಂದಿದೆ.
ಹವಾಮಾನ ವರದಿಗಳು ನೀಡಿರುವ ಮುನ್ಸೂಚನೆ ಪ್ರಕಾರ ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಲಘು ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವವಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಈ ಬಾರಿ ಹೆಚ್ಚೂಕಡಿಮೆ ಮೇ ತಿಂಗಳಿನಿಂದಲೇ ಮಳೆಗಾಲದ ವಾತಾವರಣ ಆವರಿಸಿಕೊಂಡಿತ್ತಾದ್ದರಿಂದ ಅಲ್ಲಿನ ಕೃಷಿಕರಿಗೆ ಮಳೆ ಈಗಾಗಲೇ ಅಡ್ಡಪರಿಣಾಮ ಬೀರಿದೆ. ಇದೀಗ ಮಳೆ ನಿಲ್ಲುವುದೇ ಅವರಿಗೆ ಶುಭಸೂಚನೆ ಎಂಬಂತಾಗಿದೆ.
24hrs ☔️ Map of #Karnataka from 8.30 am on 7th August 2021 to 8.30 am on 8th August 2021, highest 142.5mm ☔️@Uttara Kannada_Ankola_Agragona. pic.twitter.com/sVy6rnUwxs
— KSNDMC (@KarnatakaSNDMC) August 8, 2021
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಕ್ಕಮಟ್ಟಿಗೆ ಮಳೆಯಾಗುತ್ತಿದ್ದು ಇಂದು ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಕಳೆದ 24ಗಂಟೆಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಎಂದರೆ 21 ಮಿ.ಮೀ ಬೆಂಗಳೂರು ದಕ್ಷಿಣ ವ್ಯಾಪ್ತಿಯ ವಿದ್ಯಾಪೀಠದಲ್ಲಿ ದಾಖಲಾಗಿದೆ. ಅಂತೆಯೇ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಎಂದರೆ 142.5 ಮಿ.ಮೀ ಉತ್ತರ ಕನ್ನಡದ ಅಂಕೋಲಾ ಬಳಿಯ ಅಗ್ರಗೋಣದಲ್ಲಿ ದಾಖಲಾಗಿದೆ. ಒಟ್ಟಾರೆಯಾಗಿ ರಾಜ್ಯಾದ್ಯಂತ ಕಳೆದೊಂದು ವಾರದಿಂದ ಆರ್ಭಟಿಸಿದ್ದ ಮಳೆ ಇನ್ನು ಕೊಂಚ ಸುಧಾರಿಸುವ ಸಾಧ್ಯತೆ ಇದೆ.
(Karnataka Weather Today Monsoon 2021 likely to be slowdown in state some parts may get light rain)
ಇದನ್ನೂ ಓದಿ:
ಉತ್ತಮ ಮಳೆಯಾಗುತ್ತಿದೆ, ಜಲಾಶಯಗಳು ಬಹುತೇಕ ಭರ್ತಿ; ಕರ್ನಾಟಕದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
Rain : ಮಳೆ ಬಂತು ಮಳೆ : ‘ಚೋಳರಾಜ್ಯದ ಬೀದಿಯಲ್ಲಿ, ಸುರಿವ ಮಳೆಯಲ್ಲಿ ಸರಿದು ಹೋದರು ಕನ್ನಗಿ ಕೋವಲರು’
Published On - 7:06 am, Mon, 9 August 21