ಬೆಂಗಳೂರು: ಕರುನಾಡ ಅಭಿನಯ ಚಕ್ರವರ್ತಿ ಬಾದ್ಶಾ ಕಿಚ್ಚ ಸುದೀಪ್ (Kichcha Sudeep) ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 49ನೇ ವಸಂತಕ್ಕೆ ನಟ ಸುದೀಪ್ ಕಾಲಿಟ್ಟಿದ್ದಾರೆ. ಎಲ್ಲೆಡೆ ಅಭಿಮಾನಿಗಳಿಂದ ಬಿಗ್ ಬಾಸ್ನ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಈ ಶುಭದಿನದಂದು ಪಶುಸಂಗೋಪನಾ ಇಲಾಖೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾನ್ನಾಗಿ ನಟ ಕಿಚ್ಚ ಸುದೀಪ್ರನ್ನು ನೇಮಕ ಮಾಡಿದೆ. ಈ ಕುರಿತಾಗಿ ಪಶು ಸಂಗೋಪನೆ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತವಾರಿ ಸಚಿವ ಪ್ರಭು ಬಿ. ಚವ್ಹಾಣ್ ನಟ ಕಿಚ್ಚ ಸುದೀಪ್ಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಅವರು ಯಾವುದೇ ಸಂಭಾವನೇ ಇಲ್ಲದೆ ಈ ಕೆಲಸ ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆಂದು ಸಚಿವ ಪ್ರಭು ಬಿ. ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.
ಪತ್ರದ ಸಾರಾಂಶ ಹೀಗಿದೆ
ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ತಮ್ಮ ಜನ್ಮದಿನದ ಈ ಶುಭಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಇಚ್ಛಿಸುತ್ತೇನೆ.
ಗೋಶಾಲೆಯಲ್ಲಿ ರಕ್ಷಿಸಲ್ಪಟ್ಟ ಅನಾಥ ಗೋವುಗಳ ಪಾಲನೆ – ಪೋಷಣೆಗೆ ನೆರವಾಗುವ ನಿಟ್ಟಿನಲ್ಲಿ ಜಾರಿಮಾಡಲಾದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ “ಪುಣ್ಯಕೋಟಿ ಯೋಜನೆ”ಯ ರಾಯಭಾರಿಯಾದ ಸುಪ್ರಸಿದ್ಧ ನಟ, ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. pic.twitter.com/uNkHetZOrV
— Prabhu Bhamla Chavan (@PrabhuChavanBJP) September 2, 2022
ಪುಣ್ಯಕೋಟಿ ದತ್ತು ಯೋಜನೆ ಕುರಿತು
ಭಾರತದಲ್ಲಿ ಗೋವು ಸಾಕಾಣಿಕೆಗೆ ಅದರದ್ದೇ ಆದ ಮಹತ್ವವಿದೆ. ಗೋಶಾಲೆಗಳ ವಿಭಿನ್ನ ಸಂಕೇತವೂ ನಮ್ಮಲಿದೆ. ಆದರೆ ಜಾನುವಾರಗಳ ಹತ್ಯೆ, ಗೋವುಗಳ ಮಾರಾಟದಿಂದಾಗಿ ರೈತರು ಹಸುಗಳನ್ನು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಮನಗಂಡ ರಾಜ್ಯ ಸರ್ಕಾರವು ಜುಲೈ 28ರಿಂದ ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೆ ತಂದಿದೆ. ಪುಣ್ಯಕೋಟಿ ದತ್ತು ಯೋಜನೆಯ ಮೂಲಕ ಗೋ ಸಂತತಿಯನ್ನು ಕಾಪಾಡುವ ಹೊಣೆಯನ್ನು ಕರ್ನಾಟಕ ಸರ್ಕಾರ ಹೊತ್ತಿದೆ. ಗೋಶಾಲೆಗಳಲ್ಲಿನ ಗೋವುಗಳ ದತ್ತು ಪಡೆಯಲು ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ‘ಅವರು ಇಲ್ಲ ಅಂದ್ರೆ ನಾನು ಇಲ್ಲಿ ಇರ್ತಾ ಇರಲಿಲ್ಲ’; ಕಿಚ್ಚನ ಸಹಾಯ ನೆನೆದ ಸೆಲೆಬ್ರಿಟಿಗಳ ವಿಡಿಯೋ ವೈರಲ್
ಗೋ ಹತ್ಯೆ ನಿಷೇಧದ ಬಳಿಕ ರಾಜ್ಯದಲ್ಲಿ ಅನೇಕ ಗೋಶಾಲೆಗಳನ್ನು ತೆರೆಯಲಾಗಿದ್ದು, ಆ ಮೂಲಕ ಅವುಗಳ ರಕ್ಷಣೆ ಮಾಡಲಾಗುತ್ತಿದೆ. ಆದರೆ ಈ ಗೋಶಾಲೆಗಳ ನಿರ್ವಣಹೆ ದೃಷ್ಠಿಯಿಂದ ಸಾರ್ವಜನಿಕರನ್ನು ಇದರ ಭಾಗವನ್ನಾಗಿಸಲು ಪಶುಸಂಗೋಪನಾ ಇಲಾಖೆ ಪುಣ್ಯಕೋಟಿ ದತ್ತು ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯ ಮೂಲಕ ಸಾರ್ವಜನಿಕರು ಸರ್ಕಾರಿ ಅಥವಾ ಖಾಸಗಿ ಗೋಶಾಲೆಗಳಲ್ಲಿರುವ ಗೋವುಗಳನ್ನು ನೇರವಾಗಿ ದತ್ತು ಪಡೆಯಬಹುದಾಗಿದೆ. ಸರ್ಕಾರದ ವೆಬ್ಸೈಟ್ನಲ್ಲಿ ದತ್ತು ಪಡೆಯುವವರು ಮೊದಲು ನೊಂದಣಿ ಮಾಡಿಕೊಳ್ಳಬೇಕು. ಇದಕ್ಕೆ ವಾರ್ಷಿಕ 11 ಸಾವಿರ ರೂ. ನೀಡಬೇಕು. ದತ್ತು ಪಡೆದಕೊಂಡ ಬಳಿಕ ಗೋವುಗಳ ಮಾಹಿತಿಯನ್ನು ದತ್ತು ಪಡೆದವರಿಗೆ ನೀಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Fri, 2 September 22