ಟಚ್ಚಾಯ್ತು ಬೈಕ್ ಶುರುವಾಯ್ತು ವಾರ್! ತಳ್ಳಾಟದಲ್ಲಿ ಬಿದ್ದವನು ಮೇಲೇಳಲಿಲ್ಲ, ಬಿಬಿಎಂಪಿ ನೌಕರನ ಸ್ಥಿತಿ ಚಿಂತಾಜನಕ
ಮಂಜುನಾಥ ಗರಂ ಆಗಿ ಸೂರ್ಯನಿಗೆ ಬೈಕನ್ನ ಸರಿಯಾಗಿ ಓಡ್ಸಪ್ಪ ಎಂದಿದ್ದನಷ್ಟೇ. ತಕ್ಷಣ ಬೈಕ್ ನಿಲ್ಲಿಸಿದ ಸೂರ್ಯ ಮಂಜುನಾಥನ ಕೊರಳ ಪಟ್ಟಿ ಹಿಡಿದಿದ್ದ.
ಬೆಂಗಳೂರು: ಬೈಕ್ ಟಚ್ಚಾಗಿ ಬೈಕ್ ಸವಾರರಿಬ್ಬರ ನಡೆವೆ ಜಗಳವಾಗಿದ್ದು, ತಳ್ಳಾಟದಲ್ಲೇ ಬಿದ್ದ ಬಿಬಿಎಂಪಿ ನೌಕರ ಕೋಮಾ ತಲುಪಿಬಿಟ್ಟಿರುವಂತಹ ಘಟನೆ ಆಗಸ್ಟ್ 30ರ ರಾತ್ರಿ ನಡೆದಿದೆ. ಬಿಬಿಎಂಪಿ ಡಿಗ್ರೂಪ್ ನೌಕರ ಸೂರ್ಯನ ಸ್ಥಿತಿ ಚಿಂತಾಜನಕವಾಗಿದೆ. ಸೂರ್ಯ ಎಂದಿನಂತೆ ನೈಂಟಿ (ಮದ್ಯ) ಏರಿಸಿಕೊಂಡು ಬೈಕ್ನಲ್ಲಿ ಬರ್ತಿದ್ದ. ಎಸ್ಆರ್ ನಗರ 14 ನೇ ಕ್ರಾಸಲ್ಲಿ ಬರ್ತಿದ್ದಾಗ ಮಂಜುನಾಥ್ ಎಂಬಾತನಿಗೆ ಬೈಕ್ ಟಚ್ಚಾಗಿತ್ತು. ಮಂಜುನಾಥ ಗರಂ ಆಗಿ ಸೂರ್ಯನಿಗೆ ಬೈಕನ್ನ ಸರಿಯಾಗಿ ಓಡ್ಸಪ್ಪ ಎಂದಿದ್ದನಷ್ಟೇ. ತಕ್ಷಣ ಬೈಕ್ ನಿಲ್ಲಿಸಿದ ಸೂರ್ಯ ಮಂಜುನಾಥನ ಕೊರಳ ಪಟ್ಟಿ ಹಿಡಿದಿದ್ದ. ಮಂಜುನಾಥನೂ ಕೂಡ ಸೂರ್ಯನ ಕೊರಳಪಟ್ಟಿ ಹಿಡಿದು ನೂಕಿದ್ದನಷ್ಟೇ. ಆಯತಪ್ಪಿ ರಸ್ತೆಗೆ ಬಿದ್ದ ಸೂರ್ಯ ಮತ್ತೆ ಏಳಲೇ ಇಲ್ಲ.
ಇದೀಗ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸೂರ್ಯ ನಿಮಾನ್ಸ್ನಲ್ಲಿ ಚಿಕಿತ್ಸೆ ಪಡೀತಿದ್ದಾನೆ. ಬುದ್ಧಿವಾದ ಹೇಳಿ ಸೈಲೆಂಟಾಗಿ ಹೋಗೋದನ್ನ ಬಿಟ್ಟು ಕೈಕೈ ಮಿಲಾಯಿಸೋಕೆ ಹೋದ ಮಂಜುನಾಥ ಇದೀಗ ಅರೆಸ್ಟ್ ಆಗಿದ್ದಾನೆ. ಮಂಜುನಾಥ ಹಾಗೂ ಸೂರ್ಯನ ನಡುವೆ ನಡೆದ ಜಗಳದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಎಸ್ಆರ್ ನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಭೀಮಾ ತೀರದಲ್ಲಿ ಅಕ್ರಮ ನಾಡ ಪಿಸ್ತೂಲ್ ಮಾರಾಟ ದಂಧೆ
ಕಲಬುರಗಿ: ಭೀಮಾ ತೀರದಲ್ಲಿ ಅಕ್ರಮ ನಾಡ ಪಿಸ್ತೂಲ್ ಮಾರಾಟ ದಂಧೆ ಸಕ್ರೀಯವಾಗಿ ನಡೆಯುತ್ತಿದ್ದು, ನಾಡ ಪಿಸ್ತೂಲ್ ಹೊಂದಿದ್ದ ನಾಲ್ವರ ಬಂಧನ ಮಾಡಲಾಗಿದೆ. ಬಂಧಿತರಿಂದ 4 ನಾಡ ಪಿಸ್ತೂಲ್, 18 ಜೀವಂತ ಗುಂಡು ಜಪ್ತಿ ಮಾಡಲಾಗಿದೆ. ಭೀಮಣ್ಣ ಪೂಜಾರಿ, ಸಿದ್ದಪ್ಪ ಪೂಜಾರಿ, ಸಲೀಂ ಶಿರಸಗಿ, ಪರಸಯ್ಯ ಸೆರೆಯಾದವರು. ಮಧ್ಯಪ್ರದೇಶದ ದಾರ್ ಜಿಲ್ಲೆಯಲ್ಲಿ ನಾಡ ಪಿಸ್ತೂಲ್ ಖರೀದಿಸಿ ತಂದಿದ್ದ ಭೀಮಣ್ಣ, ಜಿಲ್ಲೆಯಲ್ಲಿ ನಾಡ ಪಿಸ್ತೂಲ್ ಬಂಧಿತರು ಮಾರಾಟ ಮಾಡುತ್ತಿದ್ದರು. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:28 am, Fri, 2 September 22