ಶನಿ ಯಾರನ್ನೂ ಬಿಡಲ್ಲ ಅನ್ನೋಕೆ ನಾನೇ ಉದಾಹರಣೆ: ದಯವಿಟ್ಟು ಕ್ಷಮಿಸಿ ಎಂದು ಕೊಡವರನ್ನು ವಿನಂತಿಸಿದ ಬ್ರಹ್ಮಾಂಡ ಗುರೂಜಿ
ಪ್ರಜ್ಞೆಯಿಲ್ಲದೆ ಆಡಿರುವ ಸ್ಫೀಡ್ ಮಾತಿನಲ್ಲಿ ತಪ್ಪುಗಳು ಇರಬಹುದು ಎಂದು ನರೇಂದ್ರ ಬಾಬು ಶರ್ಮಾ ಹೇಳಿದ್ದಾರೆ.
ಬೆಂಗಳೂರು: ತಮ್ಮ ಕಾರ್ಯಕ್ರಮವೊಂದರಲ್ಲಿ ಕೊಡವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ‘ಬ್ರಹ್ಮಾಂಡ ಗುರೂಜಿ’ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಇದೀಗ ಕ್ಷಮೆ ಯಾಚಿಸಿದ್ದಾರೆ. ತಾವು ಅವಹೇಳನಕಾರಿಯಾಗಿ ಮಾತನಾಡಲು ಶನಿಕಾಟವೇ ಕಾರಣ ಎಂದು ಸ್ವಯಂ ವಿಶ್ಲೇಷಣೆ ಮಾಡಿಕೊಂಡಿರುವ ಅವರು, ‘ನೀವು ಕೊಡವರು, ವಿಶಾಲ ಹೃದಯದವರು. ಕ್ಷಮಿಸುವ ಗುಣ ನಿಮ್ಮಲ್ಲಿದೆ. ಜಗತ್ತಿನಲ್ಲಿ ಹಲವೆಡೆ ಇರುವ ಕೊಡವ ಜನಾಂಗವರನ್ನು ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಿಬಿಡಿ’ ಎಂದು ವಿನಂತಿಸಿದ್ದಾರೆ. ‘ಕೊಡವರು ಮನೆಮಂದಿಯೆಲ್ಲ ಕುಳಿತು ವೈನ್ ಕುಡಿಯುತ್ತಾರೆ’ ಎನ್ನುವ ನರೇಂದ್ರ ಬಾಬು ಶರ್ಮಾ ಅವರ ಹೇಳಿಕೆಯನ್ನು ಸಾಕಷ್ಟು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದರು.
‘ಜಗತ್ತಿನಲ್ಲಿ ಮನುಷ್ಯನಾದವನು ತಪ್ಪು ಮಾಡದಿರುವ ಸಾಧ್ಯತೆಯಿಲ್ಲ. ನಾನು ಮಾಧ್ಯಮಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ಆರಂಭಿಸಿ 20 ವರ್ಷಗಳಾಗಿದೆ. ಪ್ರಜ್ಞೆಯಿಲ್ಲದೆ ಆಡಿರುವ ಸ್ಫೀಡ್ ಮಾತಿನಲ್ಲಿ ತಪ್ಪುಗಳು ಇರಬಹುದು. ಯಾವುದೇ ಮನುಷ್ಯ, ಸಮಾಜ ಅಥವಾ ಸಮುದಾಯಕ್ಕೆ ನೋವಾಗಲಿ ಎಂದು ಹೇಳಿರುವುದಿಲ್ಲ. ಆ ಸಂದರ್ಭದ ಗ್ರಹಗತಿ ಹಾಗೆ ನುಡಿಸಿರಬಹುದು. ಶನಿ ಯಾವತ್ತೂ ಯಾರನ್ನೂ ಬಿಟ್ಟಿಲ್ಲ ಅನ್ನೋಕೆ ನಾನೋ ಉದಾಹರಣೆ. ನನ್ನನ್ನು ಹಲವು ಬಾರಿ ಟ್ರೋಲ್ ಮಾಡಲಾಗಿದೆ. ನಾನು ಹಲವು ಭಾಷೆಗಳಲ್ಲಿ ಮಾತನಾಡಿದ್ದೇನೆ. ನಾನು ಒಮ್ಮೆ ಮಡಿಕೇರಿ ಬಗ್ಗೆ ಪ್ರಳಯದ ಬಗ್ಗೆ, ಮಳೆ, ಬೆಟ್ಟ ಕುಸಿತದ ಬಗ್ಗೆ ಹೇಳುವಾಗ ಏನೋ ತಪ್ಪಾಡಿದ್ದೆ. ಹಲವು ಎಫ್ಐಆರ್ಗಳು ದಾಖಲಾಗಿದ್ದವು’ ಎಂದು ನೆನಪಿಸಿಕೊಂಡಿದ್ದಾರೆ.
ನಾನು ಬೈದಿದ್ದೇನೆ ಎಂದು ಬಹಳಷ್ಟು ಜನ ಹೆಣ್ಣುಮಕ್ಕಳು ನೊಂದಿರಬಹುದು. ಆದರೆ ನಾನು ಯಾರನ್ನೂ ಉದ್ದೇಶಪೂರ್ವಕವಾಗಿ ಬೈದಿಲ್ಲ. ಒಳ್ಳೇಯವರಾಗಲಿ, ಒಳ್ಳೇದಾಗಲಿ ಎನ್ನುವ ಕಾರಣಕ್ಕೆ ಬೈದಿರಬಹುದು. ಕೊಡವ ಜನಾಂಗದವರು ಭತ್ತದಿಂದ ವೈನ್ ಮಾಡಿಕೊಂಡು ಮನೆಮಂದಿಯೆಲ್ಲರೂ ಕುಡೀತಾರೆ ಆಂತ ಹೇಳಿದ್ದೆ. ಇದರಿಂದ ನೋವಾಗಿದ್ದರೆ ಕ್ಷಮಿಸಿ ಎಂದು ವಿನಂತಿಸಿದ್ದಾರೆ. ನನ್ನ ಸಿಕ್ಸ್ತ್ ಸೆನ್ಸ್ ಸೂಚನೆಯಂತೆ ಕ್ಷಮೆ ಕೇಳುತ್ತಿದ್ದೇನೆ. ಯಾರೋ ಬೆದರಿಕೆ ಹಾಕಿದರೆಂದು ಭಯಪಟ್ಟು ಕ್ಷಮೆ ಕೇಳುತ್ತಿಲ್ಲ. ನಾನು ಇವತ್ತು ಇರ್ತೀನಿ, ನಾಳೆ ಹೋಗ್ತೀನಿ ಎಂದು ವಿಷಾದಿಸಿದ್ದಾರೆ.
Published On - 1:44 pm, Fri, 2 September 22