ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವಿರುದ್ಧ ಆದಾಯಕ್ಕೂ ಅಧಿಕ ಆಸ್ತಿ ಗಳಿಕೆ ಆರೋಪದಲ್ಲಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಸಿಬಿಐ ತನಿಖೆ ಕೋರಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸಂಬಂಧಿಕರ ಹೆಸರಿನಲ್ಲಿ ಅಕ್ರಮ ಆಸ್ತಿ ಸಂಪಾದನೆ, ಬೇನಾಮಿ ಹೆಸರಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪ, ಪೋಷಕರ ಹೆಸರಿನಲ್ಲೂ ಅಪಾರ ಆಸ್ತಿ ಖರೀದಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಈ ಆರೋಪದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಲು ಹಿಂದೇಟು ಹಾಕಿದೆ, ಹೀಗಾಗಿ ಸಿಬಿಐ, EDಯಿಂದ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ವಕೀಲರ ಮೂಲಕ ರಿಟ್ ಅರ್ಜಿ ಸಲ್ಲಿಸಿದ ಕೆ.ಎನ್. ಜಗದೀಶ್ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅವರ ತಂದೆ- ತಾಯಿ ಈ ಮೊದಲು ಮಾಧ್ಯಮ ಪ್ರಕಟಣೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿರುವಂತೆ ನಮ್ಮದು ಅಕ್ರಮ ಆಸ್ತಿ ಅಲ್ಲ ಎಂದು ರವಿ ಅವರ ತಾಯಿ ರತ್ನವ್ವ ಮತ್ತು ತಂದೆ ದ್ಯಾಮಪ್ಪ ಚನ್ನಣ್ಣವರ್ ಸ್ಪಷ್ಟನೆ ನೀಡಿದ್ದರು. ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರದ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿದ್ದ ಅವರು, 25 ವರ್ಷಗಳಿಂದ ನಮ್ಮ ಕುಟುಂಬಕ್ಕೆ 6 ಎಕರೆ ಪಿತ್ರಾರ್ಜಿತ ಆಸ್ತಿ ಇತ್ತು ಎಂದು ಸ್ಪಷ್ಟಪಡಿಸಿದ್ದರು.
ಸ್ವಂತ ಪರಿಶ್ರಮದಿಂದ ಹಿರಿಯ ಮಗ ಯುಪಿಎಸ್ಸಿ ತೇರ್ಗಡೆಯಾಗಿ, ಐಪಿಎಸ್ ಅಧಿಕಾರಿಯಾಗಿದ್ದಾನೆ. ನಮ್ಮ ಕಿರಿಯ ಮಗ ರಾಘವೇಂದ್ರ ಚನ್ನಣ್ಣವರ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಅವರು ಸುಮಾರು ಐದು ಸ್ಥಳಗಳಲ್ಲಿರುವ ಆಸ್ತಿ ವಿವರ ಪ್ರಕಟಿಸಿದ್ದರು. ಕಿರಿಯ ಮಗನ ಆದಾಯ, ಕೃಷಿ ಆದಾಯದಿಂದ ಆಸ್ತಿ ಗಳಿಸಿರುವ ಆಸ್ತಿಯ ವಿವರಗಳನ್ನೂ ಬಹಿರಂಗಪಡಿಸಿದ್ದರು.
ಕುಟುಂಬ ಸಂಪಾದಿಸಿದ ಆದಾಯ ಮಾಹಿತಿಯನ್ನು ಸಲ್ಲಿಸುತ್ತಿದ್ದೇವೆ. ವ್ಯಾಪಾರದಲ್ಲಿ ಆಸಕ್ತಿಯಿರುವ ಹಿನ್ನೆಲೆಯಲ್ಲಿ ಕಿರಿಯ ಮಗ ಮನೆ ದೇವರು ರೇಣುಕಾ ಎಂಟರ್ ಪ್ರೈಸಸ್ ಹೆಸರಲ್ಲಿ ವ್ಯಾಪಾರ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದ. ನಮ್ಮ ಎಲ್ಲಾ ಆಸ್ತಿ ಪರಿಶ್ರಮದಿಂದಲೇ ಸಂಪಾದಿಸಿದ್ದು ಎಂದು ಅವರು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿ ಸುಳ್ಳು ಹಾಗೂ ಹೀಗೆ ಸುಳ್ಳುಸುದ್ದಿ ಹಬ್ಬಿಸುವುದು ಶಿಕ್ಷಾರ್ಹ ಅಪರಾಧ. ಸುಳ್ಳುಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರ ವಿವಾದದಲ್ಲಿ ಸಿಲುಕಿರುವ ಐಪಿಎಸ್ ರವಿ ಚನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸರ್ಕಾರದಿಂದ ತಡೆ