KN Rajanna ಹೆಚ್ಡಿ ದೇವೇಗೌಡರ ಬಗ್ಗೆ ಕೆಎನ್ ರಾಜಣ್ಣ ವಿವಾದಾತ್ಮಕ ಹೇಳಿಕೆ: ಎಲ್ಲೆಲ್ಲೂ ಆಕ್ರೋಶ, ಮಧುಗಿರಿಯಲ್ಲಿ ನಾಳೆ ಬೃಹತ್ ಪ್ರತಿಭಟನೆ
ಮಾಜಿ ಸಿಎಂ ಕುಮಾರಸ್ವಾಮಿ ಕೂಡ ರಾಜಣ್ಣ ಮಾತಿನ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಎದುರಾಳಿ ಪಕ್ಷದ ವಿರುದ್ಧ ಸಿಟ್ಟು, ವಿರೋಧ ಇರುವುದು ಸಹಜ. ಅದು ತೀರಾ ಒಬ್ಬ ವ್ಯಕ್ತಿಯ ಸಾವನ್ನು ಬಯಸುವ ಮಟ್ಟಕ್ಕೆ ಹೋಗಬಾರದು.
ಬೆಂಗಳೂರು: ಮಾಜಿ ಶಾಸಕ ಕೆ.ಎನ್. ರಾಜಣ್ಣ (KN Rajanna) ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಸಾವಿನ ಬಗ್ಗೆ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜಣ್ಣ ನೀಡಿದ ಹೇಳಿಕೆಯ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ಜೆಡಿಎಸ್ ವಿರುದ್ಧ ಇರುವ ಸಿಟ್ಟು ಹೊಸದೇನೂ ಅಲ್ಲ. ಮಧುಗಿರಿ ಕ್ಷೇತ್ರದಲ್ಲಿ 2008ರಲ್ಲಿ ನಡೆದ ಬೈಎಲೆಕ್ಷನ್‌ನಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ವಿರುದ್ಧ ಸೋತ ನಂತರ ಗೌಡರ ಕುಟುಂಬದ ವಿರುದ್ಧ ಬುಸುಗುಟ್ಟುತ್ತುಲೇ ಇದ್ದರು. ನಿನ್ನೆ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ತಾಲೂಕು ಪಂಚಾಯತ್‌ನ ಡಿ ಗ್ರೂಪ್ ನೌಕರನೊಬ್ಬನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆ.ಎನ್.ರಾಜಣ್ಣ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರು. ಅಲ್ಲದೆ 2023ರ ಚುನಾವಣೆಯೇ ತನಗೆ ಕೊನೆಯ ಚುನಾವಣೆ. ಈಗ ನನಗೆ 72 ವರ್ಷ ಆಗಿದೆ. ಮುಂದಿನ ಚುನಾವಣೆ ವೇಳೆ 77 ಆಗುತ್ತೆ. ಹೀಗಾಗಿ ಇದೇ ಕಡೇ ಚುನಾವಣೆ. ಇದರಲ್ಲಿ ಗೆದ್ದರೆ ಮಂತ್ರಿ ಆಗೇ ಆಗ್ತೀನಿ ಅಂತಿದ್ದರು. ಆಗ ಸಭಿಕಲ್ಲೊಬ್ಬ ದೇವೇಗೌಡರ ಹೆಸರು ಹೇಳುತ್ತಿದ್ದಂತೆ, ಗೌಡರು ನಡೆಯುವ ಭಂಗಿಯನ್ನು ತೋರಿಸುತ್ತಾ, ಅವರನ್ನು ನಾಲ್ಕು ಜನರು ಹೊತ್ತೊಯ್ಯುವ ಕಾಲ ಇಷ್ಟರಲ್ಲೇ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: Column: ಹಾದಿಯೇ ತೋರಿದ ಹಾದಿ; ನಾಗರಹೊಳೆಯಲ್ಲಿ ಮಾವುತ ವಿನು ಹೇಳಿದ ದಸರಾ ‘ಅರ್ಜುನ’ಗಾಥೆ
ಕೂರಲು ಏಳಲು ಆಗುವುದಿಲ್ಲ ಎಂದು ಹಾಸ್ಯ ಮಾಡುವವರಿಗೆ ಸರಿಯಾದ ಉತ್ತರ ಕೊಡುತ್ತೇನೆ ಅಂದಹಾಗೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ದೋಸ್ತಿ ಸರ್ಕಾರದದ ಅವಧಿಯಲ್ಲಿ ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಒಳಗಿಂದಲೇ ಕೊಟ್ಟ ಪೆಟ್ಟು ಕಾರಣ ಎಂಬ ಆರೋಪ ಕೇಳಿಬಂದಿತ್ತು. ಆದ್ರೀಗ ರಾಜಣ್ಣ ಬಾಯಿಂದಲೇ ದೇವೇಗೌಡರ ಬಗ್ಗೆ ಹಗುರವಾದ ಮಾತು ಹೊರಬಿದ್ದಿದೆ. ಆದ್ರೆ ಈ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ದೇವೇಗೌಡ, ಮಹಾನಾಯಕರು ದೇವೇಗೌಡ ಏನ್ ಮಾಡ್ತಾನೆ ಎಂದು ಮಾತಾಡಿದ್ದಾರೆ. ಕೂರಲು ಏಳಲು ಆಗುವುದಿಲ್ಲ ಎಂದು ಹಾಸ್ಯ ಮಾಡುವವರಿಗೆ ಸರಿಯಾದ ಉತ್ತರ ಕೊಡುತ್ತೇನೆ ಎಂದಿದ್ದಾರೆ.
ಇನ್ನೊದೆಂಡೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ರಾಜಣ್ಣ ಮಾತಿನ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಎದುರಾಳಿ ಪಕ್ಷದ ವಿರುದ್ಧ ಸಿಟ್ಟು, ವಿರೋಧ ಇರುವುದು ಸಹಜ. ಅದು ತೀರಾ ಒಬ್ಬ ವ್ಯಕ್ತಿಯ ಸಾವನ್ನು ಬಯಸುವ ಮಟ್ಟಕ್ಕೆ ಹೋಗಬಾರದು. ಆದ್ರಿಲ್ಲಿ ರಾಜಣ್ಣ ಹೇಳಿರುವ ಮಾತು ಮಧುಗಿರಿಯಲ್ಲಿ ಮುಂದಿನ ಚುನಾವಣೆ ಮೇಲೂ ಪರಿಣಾಮ ಬೀರಿದರೂ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೊಡಗಿನ ಕೆಲಭಾಗಗಳಲ್ಲಿ ಕಳೆದ ರಾತ್ರಿ ಮತ್ತೇ ಭೂಕಂಪ, ವಾರದಲ್ಲಿ ಇದು 5ನೇ ಸಲ, ಆತಂಕದಲ್ಲಿ ಜನ
ಇನ್ನು ಇದೇ ವಿಚಾರವಾಗಿ ಕೆ.ಎನ್.ರಾಜಣ್ಣ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ರಾಜಣ್ಣ ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಎಂದು ಮಧುಗಿರಿ ಜನ ಮನೆಗೆ ಕಳುಹಿಸಿದ್ದಾರೆ. ಲೆಕ್ಕಕ್ಕಿಲ್ಲದವರ ಬಗ್ಗೆ ನಾನು ಏಕೆ ಪ್ರತಿಕ್ರಿಯೆ ಕೊಡಬೇಕು. ದೊಡ್ಡ ದಂಧೆಕೋರ ಅವನು ದೇವೇಗೌಡರ ಕಾಲಿನ ಧೂಳಿಗೂ ಸಮ ಇಲ್ಲ. ನೀಚನ ಬಾಯಲ್ಲಿ ನೀಚ ಪದ ಬಂದಿದೆ ಇದಕ್ಕೆ ದೇವರು ಉತ್ತರ ಕೊಡ್ತಾರೆ. ಅವನು ಜನಪ್ರತಿನಿಧಿಯಲ್ಲ ಸೋತು ಮನೆಯಲ್ಲಿ ಕೂಳಿತುಕೊಂಡಿದ್ದಾರೆ. ಹೀಗೆ ಮಾತನಾಡಿದ್ರೆ ಸಂತೆಯಲ್ಲಿ ಹುಚ್ಚುನಾಯಿಗೆ ಹೊಡೆದಂಗೆ ಹೊಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆ.ಎನ್.ರಾಜಣ್ಣ ಹೇಳಿಕೆಗೆ ಶಾಸಕ ವೀರಭದ್ರಯ್ಯರಿಂದ ಪ್ರತಿಭಟನೆಯ ತಿರುಗೇಟು ಮಧುಗಿರಿಯಲ್ಲಿ ರಾಜಣ್ಣ ವಿರುದ್ಧ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಸಜ್ಜಾಗಿದೆ ಎಂದು ಮಧುಗಿರಿಯಲ್ಲಿ ಜೆಡಿಎಸ್ ಶಾಸಕ ವೀರಭದ್ರಯ್ಯ ಹೇಳಿದ್ದಾರೆ. ಅಲ್ಲದೆ ಪ್ರತಿಭಟನೆಗೆ ಜೆಡಿಎಸ್ ಕಾರ್ಯಕರ್ತರು ಸಹಕರಿಸುವಂತೆ ವೀರಭದ್ರಯ್ಯ ಮನವಿ ಮಾಡಿದ್ದಾರೆ. ರಾಜಣ್ಣ ಅವ್ರು ರಾಷ್ಟ್ರ ನಾಯಕ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿರೋದು ವಿಷಾಧನೀಯ. ಈ ಸಂಬಂಧ ರಾಜಣ್ಣ ವಿರುದ್ಧ ನಾಳೆ ಬೃಹತ್ ಪ್ರತಿಭಟನೆಯನ್ನ ಹಮ್ಮಿಕೊಂಡಿರುತ್ತೇವೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡುತ್ತೇನೆ ಎಂದರು.
ಹೆಚ್.ಡಿ.ದೇವೇಗೌಡರ ಬಗ್ಗೆ ಹೇಳಿಕೆಗೆ ಕೆ.ಎನ್.ರಾಜಣ್ಣ ವಿಷಾದ ಇನ್ನು ಇಷ್ಟೆಲ್ಲಾ ಆದ ಬಳಿಕ ಹೆಚ್.ಡಿ.ದೇವೇಗೌಡರ ಬಗ್ಗೆ ಹೇಳಿಕೆಗೆ ಕೆ.ಎನ್.ರಾಜಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ. ದೇವೆಗೌಡರನ್ನ ಭೇಟಿಯಾಗಿ ವಿಚಾರವನ್ನ ಅರ್ಥೈಸುತ್ತೆನೆ. ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ಬೇಸರವಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ. ಸಿದ್ದರಾಮಯ್ಯ 75 ನೇ ಹುಟ್ಟು ಹಬ್ಬಕ್ಕೆ ತಯಾರಿ ಮಾಡಲಾಗುತ್ತಿದೆ. ಅದನ್ನ ಹಿನ್ನಡೆ ಮಾಡಬೇಕೆಂದು ಹೀಗೆ ಮಾಡಲಾಗಿದೆ. ದೇವೇಗೌಡರ ಮನಸ್ಸಿಗೆ ಬೇಸರವಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಮಾಡಲಾಗಿದೆ. ರಾಜಕೀಯವಾಗಿ ಮುಗಿಸಲು ಈ ರೀತಿ ಮಾಡಲಾಗಿದೆ. ಪದಬಳಕೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೇ. ತಳ ಸಮುದಾಯವನ್ನ ರಾಜಕೀಯವಾಗಿ ಮುಗಿಸಲು ಈ ರೀತಿ ಮಾಡಲಾಗಿದೆ ಎಂದರು.
Published On - 4:05 pm, Fri, 1 July 22