Column: ಹಾದಿಯೇ ತೋರಿದ ಹಾದಿ; ನಾಗರಹೊಳೆಯಲ್ಲಿ ಮಾವುತ ವಿನು ಹೇಳಿದ ದಸರಾ ‘ಅರ್ಜುನ’ಗಾಥೆ

Elephant Love : 2019 ರಲ್ಲಿ ಒಮ್ಮೆ ಹುಲಿಯೊಂದು ನಾಲ್ಕು ಜನರನ್ನು ತಿಂದಿತ್ತು. ಹುಲಿಯ ಹೆಜ್ಜೆಗುರುತುಗಳು ನಮ್ಮನ್ನು ಹೊಸೂರು ಬಳಿಯ ಮಚ್ಚೂರಿಗೆ ಕರೆದೊಯ್ದಾಗ ಮೂರು ದಿನಗಳು ಕಳೆದಿದ್ದವು. ಅರ್ಜುನನ ಸಹಾಯದಿಂದ ಅಂತೂ ಹುಲಿ ಹಿಡಿದೆವು. ಪ್ರಶಸ್ತಿಪತ್ರದಲ್ಲಿ ನನ್ನ, ಅರ್ಜುನನ ಹೆಸರು ಒಟ್ಟಿಗೇ ಇದೆ.

Column: ಹಾದಿಯೇ ತೋರಿದ ಹಾದಿ; ನಾಗರಹೊಳೆಯಲ್ಲಿ ಮಾವುತ ವಿನು ಹೇಳಿದ ದಸರಾ ‘ಅರ್ಜುನ’ಗಾಥೆ
ಅರ್ಜುನನೊಂದಿಗೆ ಮಾವುತ ವಿನು
ಶ್ರೀದೇವಿ ಕಳಸದ | Shridevi Kalasad

|

Jul 01, 2022 | 4:20 PM

ಹಾದಿಯೇ ತೋರಿದ ಹಾದಿ | Haadiye Torida Haadi : ಮುಂಜಾನೆ 7 ಗಂಟೆಗೆ ಬೆಂಗಳೂರಿನಿಂದ ರೈಲು ಮಾರ್ಗವಾಗಿ ಮೈಸೂರು ಹೊರಟು, ಮೈಸೂರು ರೈಲ್ವೆ ಸ್ಟೇಷನ್ ನಿಂದ ಕಬರ್ ಬಸ್ ಸ್ಟಾಂಡ್ ಗೆ ಆಟೋದಲ್ಲಿ ಪ್ಲಾಟ್ ಫಾರ್ಮ್ ನಂಬರ್ 5,6 ಕ್ಕೆ ಹೋಗಿ ಎಚ್. ಡಿ. ಕೋಟೆ ಬಸ್ ಹುಡುಕಿ ಹ್ಯಾಂಡ್ ಪೋಸ್ಟ್ ಗೆ ಟಿಕೆಟ್ ತೆಗೆದುಕೊಂಡು ಸೀಟ್ ನಲ್ಲಿ ಕೂರುವ ಹೊತ್ತಿಗೆ ಒಂದ್ ಚೂರು ಸಮಾಧಾನ. ಹ್ಯಾಂಡ್ ಪೋಸ್ಟ್ ಇಳಿದು ನಾಗರಹೊಳೆ ಉದ್ಯಾನವನದ ಒಳಗೆ ಪರ್ಯಾಯ ಮಾರ್ಗವಾಗಿ ಪರಿಚಿತರ ಸ್ಕೂಟರ್ ನಲ್ಲಿ ಸುಮಾರು 45ಕಿ. ಮೀ ಪ್ರಶಾಂತ ವಾತಾವರಣ, ಬೆಟ್ಟ, ಗುಡ್ಡ, ನಳನಳಿಸುತ್ತಿದ್ದ ಸಾಲುಸಾಲು ವೃಕ್ಷಗಳು, ರಸ್ತೆಯಲ್ಲಿ ಆಗಾಗ ಕಾಣುತ್ತಿದ್ದ ವಿವಿಧ ಪಕ್ಷಿ ಸಂಕುಲ, ಮಂಗಗಳು, ಜಿಂಕೆ, ಕಾಡಾನೆ, ನವಿಲು, ಪಕ್ಷಿಗಳ ಕಲರವ, ತಂಪು ತಂಗಾಳಿ, ಮಳೆಯ ಕಲರವ, ಮಣ್ಣಿನ ಘಮಲು… ಆಹಾ ದಾರಿಯುದ್ದಕ್ಕೂ ಎಲ್ಲವನ್ನು ಮನಸ್ಸು ಆಸ್ವಾದಿಸುತ್ತಲೇ ಕೊನೆಗೂ ಕಾಡಿನ ಜಾಡು ಹಿಡಿದು ಹೊರಟ ನನಗೆ ಬಳ್ಳೆ ಎಂಬ ಗ್ರಾಮ ಸಿಕ್ಕಿತು. ಮಾವುತ ವಿನು ಹಾಗೂ ಅರ್ಜುನನನ್ನು ತಲುಪುವ ಹೊತ್ತಿಗೆ ಹಸಿವು ಆಯಾಸ ಮಾಯವಾಗಿತ್ತು. ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 25)

ನಾನು ಮಾವುತ ವಿನು. ಮೂಲತಃ ಬಳ್ಳೆಗ್ರಾಮ, ಡಿ. ವಿ. ಕುಪ್ಪೆ ಪೋಸ್ಟ್, ಅಂತರಸಂತೆ ಹೋಬಳಿ, ಎಚ್. ಡಿ. ಕೋಟೆ ತಾಲ್ಲೂಕ್, ಮೈಸೂರಿನವನು. ತಂದೆ ದೊಡ್ಡಪ್ಪಾಜಿ, ತಾಯಿ ಚಿಕ್ಕಮಣಿ. ನಮ್ಮ ಮುತ್ತಾತನ ಕಾಲದಿಂದಲೂ ಮಾವುತರಾಗಿಯೇ ಕೆಲಸ ಮಾಡುತ್ತ ಬಂದಿದ್ದೇವೆ. ಸುಮಾರು 4ನೇ ತಲೆಮಾರಿನಿಂದ ನಮ್ಮ ಮುತ್ತಾತ ದೊಡ್ಡಯ್ಯ, ತಾತ ಚೆನ್ನಕೇಶವ, ಅಪ್ಪ ದೊಡ್ಡಪ್ಪಾಜಿ ಈಗ ನಾನು ನಾನು ಪಿ. ಯು. ಸಿ ವರೆಗೆ ಓದಿದ್ದೇನೆ. ಈ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.

ಚಿಕ್ಕವಯಸ್ಸಿನಿಂದಲೂ ನನಗೆ ಓದಿನ ಕಡೆ ಗಮನ ಕಡಿಮೆ. ಆನೆ ಎಂದರೆ ತುಂಬ ಪ್ರೀತಿ. ಹೆಚ್ಚಿನ ಆಟ ಪಾಠ ಎಲ್ಲವೂ ಆನೆಯ ಜೊತೆಗೆ ಹೆಚ್ಚು. ನಾನು ಚಿಕ್ಕವನಿದ್ದಾಗ ಅಪ್ಪ ಸಾಕಿದ್ದ ದ್ರೋಣ ಆನೆ ಇತ್ತು. ಅಪ್ಪ ಮೈಸೂರು ದಸರಾಗೆ ಹೋದರೆ ದ್ರೋಣನ ಜೊತೆಗೆ ನಾನು ಹೋಗುತ್ತಿದ್ದೆ. ಮೊದಲು ಕವಾಡಿಗನಾಗಿ ಕೆಲಸ ಮಾಡುತ್ತಿದ್ದೆ. ಕವಾಡಿಗ ಎಂದರೆ ಕ್ಲೀನರ್. 2013 ರಲ್ಲಿ ಮೊದಲನೆಯ ಆನೆ ಲಕ್ಷ್ಮಣನನ್ನು ನೋಡಿಕೊಳ್ಳುತ್ತಿದ್ದೆ. 2006 ರಿಂದ 2008 ರ ವರೆಗೂ ಬಂಡೀಪುರದಲ್ಲಿ ಕೆಲಸ ಮಾಡಿದೆ. ನಂತರ 2009ರಲ್ಲಿ ಕೆಲಸಕ್ಕೆ ಸೇರಿದೆ. ಜೊತೆಗೆ ಕೆಲಸ ಪರ್ಮನೆಂಟ್ ಆಯ್ತು. ಆಗ ದ್ರೋಣದ ಮರಿ ಇತ್ತು. ಅದಾದ ಮೇಲೆ ಗಂಗೆ ಅಂತ ಹೆಣ್ಣಾನೆ ಅದನ್ನು 6 ತಿಂಗಳು ಅದಾದ ನಂತರ ಅದರ ತಂಗಿ ಗಂಗೆ, ಮತ್ತು ರಮಣಿ ಎಂಬ ಆನೆಯನ್ನು 2015ರ ವರೆಗೂ ಸಾಕಿದೆ. ಅವಳು ತೀರಿಹೋದ ಮೇಲೆ 2015 ರಿಂದ ಅರ್ಜುನನನ್ನು ನೋಡಿಕೊಳ್ಳುತ್ತಿದ್ದೇನೆ. 2015 ರಲ್ಲಿ ಕವಾಡಿ ವೃತ್ತಿಯಿಂದ ಮಾವುತನ ಪೋಸ್ಟ್ ಗೆ ವರ್ಗಾವಣೆಯಾಯಿತು. ಆಗಿನಿಂದಲೂ ಅರ್ಜುನ ಆನೆಯನ್ನು ನೋಡಿಕೊಳ್ಳುತ್ತಿದ್ದೇನೆ.

ಈ ವೃತ್ತಿ ನನಗೆ ವಂಶಪಾರಂಪರ್ಯವಾಗಿ ಬಂದಿರುವುದು. ಈ ವನಸಿರಿಯ ನಾಡಲ್ಲಿ ಸರಿ ಸುಮಾರು 4000 ದಿಂದ 5000 ಆನೆಗಳಿವೆ. ಅರ್ಜುನನಿಗೆ ಮದ ಬಂದರೆ ಚೈನ್ ಬಿಚ್ಚಿಕೊಂಡು ಹೋಗಿ ಬಿಡುತ್ತಾನೆ. ಎಷ್ಟೋ ಸಲ ಜೀಪ್ ನಲ್ಲಿ ಹುಡುಕಿಕೊಂಡು ಹೋಗಿ ಹಿಡಿದು ಕರೆದುಕೊಂಡು ಬಂದಿದ್ದೇವೆ. ನಾನು ಬಹಳವೆಂದರೆ ರಾತ್ರಿ ಮೂರು ತಾಸು ಮಾತ್ರ ನಿದ್ರೆ ಮಾಡುತ್ತೇನೆ. ಇನ್ನು, ಆನೆಗೆ ಅದರದ್ದೇ ಆದ ಭಾಷೆ ಇರುವುದಿಲ್ಲ. ನಾವು ಯಾವ ಭಾಷೆಯಲ್ಲಿ ಹೇಳಿದರೆ ಅದನ್ನು ಕೇಳುತ್ತದೆ. ಯಾ ಮತ್ ಅಂದರೆ ಬಂದು ನಮ್ಮ ಹತ್ತಿರ ನಿಂತುಕೊಳ್ಳುತ್ತದೆ. ಗದೆ ಸಲಾಂ ಎಂದರೆ ಸೊಂಡಿಲು ಎತ್ತುತ್ತದೆ. ಭೈಟ್ ಎಂದರೆ ಕುಳಿತುಕೊಳ್ಳುತ್ತದೆ. ಸೋಲ್ ಅಂದರೆ ಕಾಲು ಎತ್ತುತ್ತದೆ. ಅಭಿ ಅಂದರೆ ಹಿಂದಿನ ಕಾಲು ಎತ್ತುತ್ತದೆ.

Haadiye Torida Haadi column Story of Mysore Dasara Elephant Arjun by Jyothi S

ನಾವು ನಡೆದಿದ್ದೇ ದಾರಿ ಅನ್ನೋಹಾಗಿಲ್ಲವಲ್ಲ!

ಇದನ್ನೂ ಓದಿ :Gokak Falls : ಮುಖವಾಡದ ಮನುಷ್ಯರಿಗಿಂತ ಪ್ರತಿಫಲಾಪೇಕ್ಷೆ ಬಯಸದ ಪ್ರಾಣಿಗಳೇ ಮೇಲು

ಈಗ ಅರ್ಜುನನಿಗೆ 60 ವರ್ಷ. ಫಿಟ್ ಆಗಿದ್ದಾನೆ. 6 ವರ್ಷಗಳ ಕಾಲ ನಾಡಹಬ್ಬ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತಿದ್ದಾನೆ. ಆನೆ ಕಾಡಿನಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಇರುತ್ತದೆ. ಅಲ್ಲಿ ಜನರು ಶಬ್ಧ ಮಾಡುವುದು, ಪಟಾಕಿ ಹೊಡೆಯುವುದು ಮಾಡಿದಾಗ ಬೇರೆ ಆನೆಗಳಾದರೆ ದಿಕ್ಕಾಪಾಲಾಗಿ ಓಡಿ ಬಿಡುತ್ತವೆ. ಆದರೆ ಅರ್ಜುನನ ವಿಶೇಷತೆ ಅವನ ಗಾಂಭೀರ್ಯ.

ಅರಣ್ಯ ಇಲಾಖೆಯಿಂದ ಆನೆಯನ್ನು ನೋಡಿಕೊಳ್ಳಲು ಆನೆ ಮಾವುತ, ಕವಾಡಿ, ಇವರಿಬ್ಬರಿಗೂ ಮೇಲಿರುವವರನ್ನು ಜಮೆದಾರ್ ನ್ನು ನೇಮಿಸುತ್ತಾರೆ. ಒಂದು ಆನೆಯನ್ನು ನೋಡಿಕೊಳ್ಳಲು ಇಬ್ಬರು ಇರುತ್ತಾರೆ. ಒಬ್ಬ ಮಾವುತ, ಒಬ್ಬ ಕವಾಡಿ. ನಮ್ಮಲ್ಲಿ ಒಟ್ಟು 5 ಆನೆಗಳಿವೆ. 10 ಜನರು ಕೆಲಸ ಮಾಡುತ್ತಿದ್ದೇವೆ. ಹತ್ತು ಆನೆಗಳಿದ್ದಲ್ಲಿ ಅದರ ಮೇಲುಸ್ತುವಾರಿ ನೋಡಿಕೊಳ್ಳಲು ಜಮೇದಾರ್ ರನ್ನು ನೇಮಕ ಮಾಡುತ್ತಾರೆ. ನಮ್ಮಲ್ಲಿ ಜಮೇದಾರ್ ಯಾರೂ ಇಲ್ಲ.

ಆನೆಗಳು ನಾವಿಟ್ಟಿರುವುದಕ್ಕಿಂತ ಹೆಚ್ಚು ಅವು ನಮ್ಮ ಮೇಲೆ ನಂಬಿಕೆ ಇಟ್ಟಿರುತ್ತವೆ. ಅತೀ ಬುದ್ದಿವಂತ ನಿಯತ್ತಿನ ಪ್ರಾಣಿ ಎಂದರೆ ನಮ್ಮಲ್ಲಿ ನಾಯಿಯನ್ನು ಬಿಟ್ಟರೆ ಆನೆಯೇ. ಆನೆಗೆ ನಾವು ಹಿಂಸೆ ಕೊಟ್ಟರೆ ಅವು ಸಹಿಸಿಕೊಳ್ಳುತ್ತವೆ. ಆದರೆ ಅವು ತಿರುಗಿಸಿ ಹಿಂಸೆ ಕೊಡಲು ಪ್ರಾರಂಭಿಸಿದರೆ ನಾವು ಬದುಕುಳಿಯುವುದೇ ಇಲ್ಲ.

2003ರ ಘಟನೆ. ಹುಲಿ ಹಿಡಿಯಲು ಹೋಗಬೇಕಾಗಿತ್ತು. ಕಾಡಿನಲ್ಲಿ ಮಣ್ಣಿನ ಇಟ್ಟಿಗೆಗಾಗಿ ಮಣ್ಣು ಅಗೆದು ನಿರ್ಮಾಣವಾದ ಗುಂಡಿಯ ತುದಿಗೆ ಆನೆ ಹೋಗಿ ನಿಂತುಬಿಟ್ಟಿತು. ಗುಂಡಿ ಇದ್ದಿದ್ದನ್ನು ನಾನು ಗಮನಿಸಿರಲಿಲ್ಲ.  ಇದ್ದಕ್ಕಿದ್ದಂತೆ ಮಣ್ಣು ಕುಸಿಯಿತು. ನಾನು ಆನೆಯ ಮೇಲಿದ್ದವನು ಒಂದೇ ಸಲಕ್ಕೆ ಕೆಳಕ್ಕೆ ಬಿದ್ದೆ. ಆಗ ಸೊಂಡಿಲಿನಿಂದ ನನ್ನ ಕಾಪಾಡಿತು. ಈ ತರಹ ತುಂಬ ಸಲ ಕಾಪಾಡಿದೆ. ಹುಲಿ ಹಿಡಿಯಲು ಹೋದಾಗ ನಮಗೂ ಭಯ ಇರುತ್ತದೆ. ಎಲ್ಲಿ ಹುಲಿ ಬಂದು ಬಿಡುತ್ತದೆಯೋ ಎಂದು ಹಾಗಾಗಿ, ಒಂದು ಕಡೆ ಬೆಂಕಿ ಹಾಕಿ ನಾನು ಆನೆ ಹತ್ತಿರ ಮಲಗುತ್ತೇನೆ. ಆಗ ಅದು ಯಾರನ್ನೂ ಹತ್ತಿರ ಬರಗೊಡುವುದಿಲ್ಲ.

ಧ್ವನಿ ಮತ್ತು ನೋಟದಲ್ಲಿಯೇ ನನ್ನನ್ನು ಗುರುತಿಸುತ್ತಾನೆ. ಒಂದು ದಿನ ಕಾಣಿಸಲಿಲ್ಲ ಅಂದರೂ ಬೇಜಾರಿನಲ್ಲಿರುತ್ತಾನೆ. ನಾನು ಕಾಣಲೇಬೇಕು ಅವನಿಗೆ. ಆದ್ದರಿಂದ ಯಾವ ಊರಿಗೆ, ನೆಂಟರ ಮನೆಗೆ, ಹಬ್ಬ ಹುಣ್ಣಿಮೆ ಅಂತ ಎಲ್ಲೂ ಹೋಗುವುದಿಲ್ಲ. ನನ್ನ ತಮ್ಮನ ಮದುವೆಯಲ್ಲೂ ಮುಹೂರ್ತದ ಸಮಯಕ್ಕೆ ಹೋಗಿ ಮತ್ತೆ ಬೇಗ ಬಂದುಬಿಟ್ಟೆ. ನಾನಿಲ್ಲವೆಂದರೆ ಹಠ ಮಾಡುತ್ತಾನೆ, ಚೈನ್ ಬಿಚ್ಚಿಕೊಂಡು ಹೋಗಿಬಿಡುತ್ತಾನೆ. ಬೆಳಗ್ಗೆ 4:30 ಕ್ಕೆ ಎದ್ದರೆ ಅವನಿಗೆ ಸ್ನಾನ ಎಲ್ಲ ಮಾಡಿಸಿ ಊಟ ಕೊಟ್ಟು, ಕಾಡಿಗೆ ಕರೆದುಕೊಂಡು ಹೋಗುತ್ತೇವೆ. ಕಾಡೆಲ್ಲಾ ಸುತ್ತಿ ಅಲ್ಲಿ ಅವನಿಷ್ಟದ ಆಲ, ಅರಳಿ, ಸೋಗೆ, ಮರದ ಕೊಂಬೆಗಳನ್ನು ತಿನ್ನುತ್ತಾನೆ.

2019 ರಲ್ಲಿ ಒಮ್ಮೆ ಹುಲಿಯೊಂದು ನಾಲ್ಕು ಜನರನ್ನು ತಿಂದಿತ್ತು. ಆ ಹುಲಿ ಕಾರ್ಯಾಚರಣೆಯಲ್ಲಿ ಮೂರನೇ ದಿನಕ್ಕೆ, ಹುಲಿಯ ಹೆಜ್ಜೆಗುರುತು ನಮ್ಮನ್ನು ಹೊಸೂರು ಬಳಿ ಮಚ್ಚೂರಿಗೆ ಕರೆದೊಯ್ಯಿತು. ಅರ್ಜುನನ ಸಹಾಯದಿಂದ ಅದನ್ನು ಹಿಡಿದೆವು. ಆಗ ಸರ್ಕಾರದಿಂದ ಪ್ರಶಸ್ತಿ ಬಂದಿತ್ತು. ನನ್ನ ಮತ್ತು ಅವನ ಹೆಸರೂ ಪ್ರಶಸ್ತಿ ಪತ್ರದಲ್ಲಿದೆ.

ಅರ್ಜುನ ಮೊದಲು 6000 ಕೆಜಿ ತೂಕ ಇದ್ದ. ಈಗ 5700 ಕೆಜಿ ತೂಕ ಇದ್ದಾನೆ. ನಮ್ಮಲ್ಲಿನ ಆನೆಗಳಲ್ಲಿ ಇವನೇ ಹೆಚ್ಚು ತೂಕ ಇರುವುದು. ವರ್ಷಕ್ಕೊಮ್ಮೆ ಮದ ಬರುತ್ತದೆ. ಐದರಿಂದ ಆರು ತಿಂಗಳು ಇರುತ್ತದೆ. ಅದು ಕ್ರಾಸ್ಸಿಂಗ್ ಟೈಮ್. ಆಗ ಬೇರೆ ಆನೆಗಳನ್ನು ಕರೆಸುತ್ತೇವೆ. ಈಗ ಹೇಗೆ ನೋಡಿಕೊಳ್ಳುತ್ತೇವೆಯೋ ಆಗಲೂ ಹಾಗೆ ನೋಡಿಕೊಳ್ಳುತ್ತೇವೆ. ಮೊದಲು ನಮ್ಮಲ್ಲಿ ಇಪ್ಪತ್ನಾಲ್ಕು ಆನೆಗಳಿದ್ದವು. ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಅಪ್ಪ ನೋಡಿಕೊಳ್ಳುವಾಗ ಐವತ್ತು ಆನೆಗಳಿದ್ದವು. ಈಗ ನಮ್ಮ ಹತ್ತಿರ ಐದು ಆನೆಗಳಿವೆ.

Haadiye Torida Haadi column Story of Mysore Dasara Elephant Arjun by Jyothi S

ವಿನು ಅವರ ಕುಟುಂಬ

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?

ಮೊದಲೆಲ್ಲ ಪುಂಡಾನೆಗಳನ್ನು ಸಾಕಾನೆಗಳಿಂದ ತಳ್ಳಿಸಿ ಲಾರಿ ಹತ್ತಿಸಬೇಕಿತ್ತು. ಆಗ ಸಾಕಿರುವ ಆನೆಗೂ ಕಾಡಾನೆಗೂ ಪೆಟ್ಟಾಗುತ್ತಿತ್ತು. ಅದನ್ನು ತಪ್ಪಿಸಲು ಈಗ ಆನೆಗೆ ಬೆಲ್ಟ್ ಹಾಕಿ ಫ್ರೇಮ್ ನಿಂದ ಲಾರಿಯೊಳಗೆ ಕ್ರೇನ್ ನಿಂದ ಎತ್ತಿಡುವಂತಾಗಿದ್ದು ಒಳ್ಳೆಯದಾಗಿದೆ.

ಅಣೆಕಟ್ಟು, ನೀರಾವರಿ ಯೋಜನೆಗಳು, ಜನವಸತಿ, ಹೆದ್ದಾರಿ, ರೈಲ್ವೇ ಮಾರ್ಗಗಳಂತಹ ಅಭಿವೃದ್ಧಿ ಯೋಜನೆಗಳಿಂದ ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶ, ಕಾಡಿನ ಸುತ್ತಮುತ್ತಲಿನ ಕೃಷಿ ಪದ್ಧತಿ, ಒತ್ತುವರಿ, ಗಣಿಗಾರಿಕೆ, ಅರಣ್ಯ ಸಂಪತ್ತಿನ ಕಳ್ಳಸಾಗಣೆ, ಕಾಡ್ಗಿಚ್ಚು, ಜಾನುವಾರುಗಳ ಮೇವಿಗಾಗಿ ಕಾಡಿನ ಅವಲಂಬನೆ, ಸ್ಥಳೀಯ ಜನಪ್ರತಿನಿಧಿಗಳ ಜಾಣಕುರುಡು, ಸರ್ಕಾರಗಳ ಜಿಡ್ಡುಗಟ್ಟಿದ ಅವೈಜ್ಞಾನಿಕ ಯೋಜನೆಗಳು ಇನ್ನೂ ಹಲವಾರು ಕಾರಣಗಳಿಂದ ನಶಿಸುತ್ತಿರುವ ಕಾಡುಗಳಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಮರಗಳ ನಾಶದಿಂದಾಗಿ ಆನೆಗಳಿಗೆ ಆಹಾರದ ಕೊರತೆಯಾಗಿ ಊರುಗಳಿಗೆ ಬರುತ್ತಿವೆ. ಇದರಿಂದಾಗಿ ಮಾನವ ಮತ್ತು ಆನೆಗಳ ಸಂಘರ್ಷ ಆಗುತ್ತಿದೆ. ಇದನ್ನು ತಪ್ಪಿಸಲು ಕಾಡುಗಳಲ್ಲಿ ಸಾಕಷ್ಟು ಆಹಾರ, ನೀರು ಲಭ್ಯವಾಗುವಂತಹ ಕಾರ್ಯಗಳನ್ನು ಮಾಡಬೇಕು. ಅರಣ್ಯಕ್ಕೆ ಹೊಂದಿಕೊಂಡ ಕೃಷಿ ಭೂಮಿಯ ಸುತ್ತ ಬೇಲಿ ನಿರ್ಮಾಣ, ಆನೆಗಳ ಚಲನವಲನದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಬೇಕು. ಅರಣ್ಯ ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಪರಿಣಾಮಕಾರಿಯಾಗಿ ಆಗಬೇಕು.

ಇನ್ನು ತಮ್ಮ ಬೆಳೆಗಳನ್ನು ನಾಶ ಮಾಡಿದ ಆನೆಯಾದರೂ ಅದು ತೀರಿಕೊಂಡಾಗ ಜನ ದುಃಖಿಸುತ್ತಾರೆ. ಕೇರಳದಲ್ಲಿ ಸಿಡಿಮದ್ದಿನಿಂದ ಆನೆ ತೀರಿಕೊಂಡಾಗ ಇಡೀ ದೇಶವೇ ಮರುಗಿತ್ತು. ತನ್ನ ಮಾವುತ ತೀರಿಕೊಂಡಾಗಲೂ ಕಣ್ಣೀರಿಟ್ಟು ಆಹಾರ ನೀರು ಬಿಟ್ಟು ಕೊರಗಿದ ಅನೇಕ ಆನೆಗಳ ಉದಾಹರಣೆಗಳಿವೆ.

(ಮುಂದಿನ ಹಾದಿ : 8.7.2022. ಇನ್ನುಮುಂದೆ ಪ್ರತೀ ಶುಕ್ರವಾರ ಈ ಅಂಕಣ ಪ್ರಕಟವಾಗುತ್ತದೆ.)

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada