Reporter’s Diary : ‘ಅಮ್ಮಾ, ಅಪ್ಪನನ್ನು ಸರಿಯಾಗಿ ನೋಡಿಕೋ’

Dharwad : ಕಟ್ಟಡ ಕುಸಿದು ಮೂವತ್ಮೂರು ಗಂಟೆಗಳ ಬಳಿಕ ರೇಖಾ ಇರುವ ಸ್ಥಳದಲ್ಲಿ ಕಾರ್ಯಾಚರಣೆ ಶುರುವಾಯಿತು. ಅವರನ್ನು ರಕ್ಷಿಸಿದ್ದೂ ಆಯಿತು. ಆದರೆ ರೇಖಾ, ‘ಒಳಗಡೆ ನನ್ನ ಮಗಳ ಶವವಿದೆ. ಆಕೆ ಸತ್ತು ಹೋಗಿದ್ದಾಳೆ. ದಯವಿಟ್ಟು ಆಕೆಯ ಶವವನ್ನು ಹೊರ ತನ್ನಿ...’ ಎಂದು ಕೂಗಿದು.

Reporter’s Diary : ‘ಅಮ್ಮಾ, ಅಪ್ಪನನ್ನು ಸರಿಯಾಗಿ ನೋಡಿಕೋ’
ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jul 02, 2022 | 11:46 AM

Reporter’s Diary : ಇಪ್ಪತ್ತು ವರ್ಷಗಳ ಹಿಂದೆ ದಿನ ಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಗೆ ಲೇಖನವೊಂದನ್ನು ಕಳಿಸಿದ್ದೆ. ಪುರವಣಿಯ ಸಂಪಾದಕರು ಲೇಖನ ಓದಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ಪತ್ರಕರ್ತನಾದವನು ಭಾವುಕನಾಗಬಾರದು ಎಂದು ಎಚ್ಚರಿಸಿದ್ದರು. ಆ ಮಾತು ಅವತ್ತು ನನಗಂತೂ ಹಿಡಿಸಿರಲಿಲ್ಲ. ಏಕೆಂದರೆ ಪತ್ರಕರ್ತ ಕೂಡ ಮನುಷ್ಯನೇ. ಹೀಗಾಗಿ ಭಾವುಕನಾಗಬಾರದು ಅಂದರೆ ಹೇಗೆ ಅನ್ನೋದು ನನ್ನ ವಾದವಾಗಿತ್ತು. ಆದರೆ ಹಿರಿಯ ಪತ್ರಕರ್ತರಾಗಿದ್ದ ಅವರ ತರ್ಕ ಯಾವ ರೀತಿಯಲ್ಲಿ ಇತ್ತು ಅನ್ನುವುದು ಆ ದಿನಗಳಲ್ಲಿ ನನಗಂತೂ ಗೊತ್ತಿರಲಿಲ್ಲ. ವರ್ಷಗಳು ಉರುಳಿದಂತೆ ಅವರ ಮಾತು ಕೆಲವು ಬಾರಿ ಸರಿ ಅನ್ನಿಸಿದ್ದೂ ಇದೆ, ತಪ್ಪು ಅನ್ನಿಸಿದ್ದೂ ಇದೆ. ಪತ್ರಕರ್ತ ವೃತ್ತಿಯ ಎರಡು ದಶಕಗಳ ಅವಧಿಯಲ್ಲಿ ಅವರ ಮಾತು ಪದೇಪದೆ ನೆನಪಿಗೆ ಬರುತ್ತಲೇ ಇರುತ್ತದೆ. ಆದರೆ ಇಂಥ ಮಾತುಗಳನ್ನು ಮೀರಿ ಕೆಲವೊಮ್ಮೆ ಪತ್ರಕರ್ತರು ಕೂಡ ಭಾವುಕರಾಗುವಂಥ ಅನೇಕ ಘಟನೆಗಳು ಜೀವನದಲ್ಲಿ ನಡೆದುಬಿಡುತ್ತವೆ. ಪತ್ರಕರ್ತರು ಎಷ್ಟೇ ಜಾಗ್ರತರಾಗಿ ವರ್ತಿಸಲು ಯತ್ನಿಸಿದರೂ, ಭಾವನೆಗಳನ್ನು ಅದುಮಿ ಇಟ್ಟುಕೊಳ್ಳಲು ಯತ್ನಿಸಿದರೂ ಅವರಿಗೆ ಗೊತ್ತಿಲ್ಲದೇ ಅನೇಕ ಘಟನೆಗಳಿಗೆ ಕಣ್ಣೀರಾಗಿಬಿಡುತ್ತಾರೆ. ಅಂಥದಕ್ಕೆ ನಾನು ಕೂಡ ಹೊರತಾಗಿಲ್ಲ. ನರಸಿಂಹಮೂರ್ತಿ ಪ್ಯಾಟಿ, ಹಿರಿಯ ವರದಿಗಾರ ಟಿವಿ9, ಧಾರವಾಡ

ಕೆಲ ವರ್ಷಗಳ ಹಿಂದೆ ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿತ್ತು. ಒಂದು ವಾರ ಕುಸಿದ ಕಟ್ಟಡದ ತೆರವು ಕಾರ್ಯಾಚರಣೆ ನಡೆದಿತ್ತು. ಘಟನೆ ನಡೆದ ಎರಡು ದಿನಗಳ ಬಳಿಕ ಕೊಂಚ ಬಿಡುವು ಮಾಡಿಕೊಂಡು ಮನೆಗೆ ಬಂದಿದ್ದೆ. ಎರಡು ದಿನ ಮನೆಗೆ ಬಾರದೇ ಇದ್ದಿದ್ದರಿಂದ ಮಗಳು ಪ್ರತ್ಯುಷಾ ಓಡೋಡಿ ಬಂದು ಅಪ್ಪಿಕೊಂಡು, “ಎರಡು ದಿನ ಎಲ್ಲಿಗೆ ಹೋಗಿದ್ದಿ? ಒಂದು ಫೋನ್ ಮಾಡಲಿಕ್ಕೆ ಬರೋದಿಲ್ಲೇನು? ನಾನು ನೆನಪು ಆಗೋದಿಲ್ಲೇನು?” ಅಂತಾ ಏನೇನೋ ಕೇಳತೊಡಗಿದ್ದಳು. ದುಃಖ ಅದೆಲ್ಲಿತ್ತೋ ಏನೋ? ಒಮ್ಮೆಲೇ ಜೋರಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದ್ದೆ. ಅಳು ಕೇಳಿ ಮನೆಯವರೆಲ್ಲಾ ಬಂದು ಸುತ್ತಲೂ ನಿಂತಿದ್ದರು. ಏನಾಗಿದೆ ಅನ್ನೋ ಆತಂಕ ಅವರಿಗಾದರೆ, ತಾನು ಕೇಳಿದ್ದರಲ್ಲಿ ಏನಾದರೂ ತಪ್ಪಿದೆಯಾ? ಅನ್ನೋ ಪ್ರಶ್ನೆ ಮಗಳದ್ದು. ಏನೂ ಆಗಿಲ್ಲ, ಆಮೇಲೆ ಎಲ್ಲವನ್ನು ಹೇಳುತ್ತೇನೆ ಅಂತಾ ಹೇಳಿ, ಸ್ನಾನಕ್ಕೆ ಹೋದೆ. ಅಷ್ಟಕ್ಕೂ ಅವತ್ತು ಹೀಗೆ ವರ್ತಿಸಲು ಕಾರಣವಾಗಿದ್ದ ಘಟನೆ ಭೀಕರತೆಯೇ ಹಾಗಿತ್ತು. ನನ್ನ ಜೀವನದಲ್ಲಿ ಅದು ಯಾವತ್ತೂ ಮರೆಯದ ಘಟನೆ.

ಅದು ಮಾರ್ಚ್ 19, 2019 ರ ಮಧ್ಯಾಹ್ನ. ಸುಮಾರು ಮೂರು ಗಂಟೆಯ ಹೊತ್ತು. ಕೆಲಸ ಮುಗಿಸಿಕೊಂಡು ಮನೆಗೆ ಊಟಕ್ಕೆ ಬಂದಿದ್ದೆ. ಮತ್ತೊಂದು ವರದಿಗೆ ಹಳ್ಳಿ ಕಡೆಗೆ ಹೋಗಬೇಕಿತ್ತು ಅಂತಾ ಅವಸರವಸರವಾಗಿ ಊಟ ಮಾಡುತ್ತಿದ್ದೆ. ಮೊಸರನ್ನದ ಕೊನೆಯ ತುತ್ತು ತಿನ್ನೋ ಹೊತ್ತಿಗೆ ಆತ್ಮೀಯರೊಬ್ಬರು ಫೋನ್ ಮಾಡಿ, “ಸರ್ ದೊಡ್ಡದೊಂದು ಅನಾಹುತ ನಡೆದು ಹೋಗಿದೆ. ಧಾರವಾಡದ ಬೆಳಗಾವಿ ರಸ್ತೆಯ ನಮ್ಮ ಬ್ಯಾಂಕ್ ಬಳಿಯ ದೊಡ್ಡ ಕಟ್ಟಡ ಕುಸಿದು ಬಿದ್ದಿದೆ. ಕೂಡಲೇ ಬನ್ನಿ ಸರ್..!” ಆ ಕಡೆಯಿಂದ ದನಿ ಇನ್ನೂ ಕೇಳುತ್ತಲೇ ಇತ್ತು. ನಾನು ಗಾಬರಿಗೊಂಡು ಸುಮ್ಮನೇ ಕೂತೆ. ಕೊನೆಯ ತುತ್ತನ್ನು ತಟ್ಟೆಯಲ್ಲಿಯೇ ಬಿಟ್ಟು ಕೈತೊಳೆದುಕೊಂಡು, ಪ್ಯಾಂಟ್ ಧರಿಸಲು ಒಳಗೆ ಹೋದೆ.

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಅಷ್ಟೊತ್ತಿಗೆ ಮೊಬೈಲ್ ನಿರಂತರವಾಗಿ ಹೊಡೆದುಕೊಳ್ಳತೊಡಗಿತು. ಯಾವುದೇ ಕರೆ ಸ್ವೀಕರಿಸಿದರೂ ಇದರದ್ದೇ ಸುದ್ದಿ. ಫೋನ್ ನಲ್ಲಿ ಮಾತನಾಡುತ್ತಾ, ಡ್ರೆಸ್ ಧರಿಸಿ, ಹೆಗಲಿಗೆ ಲ್ಯಾಪ್ ಟಾಪ್ ಹಾಕಿಕೊಂಡು ಬೈಕ್ ಏರಿ ಹೊರಟೆ. ಕ್ಯಾಮೆರಾಮನ್ ರಾಹುಲ್ ಗೆ ನೇರವಾಗಿ ಸ್ಥಳಕ್ಕೆ ಬರುವಂತೆ ಹೇಳಿದೆ. ಘಟನಾ ಸ್ಥಳಕ್ಕೆ ಹೋಗುತ್ತಿದ್ದಂತೆಯೇ ದೊಡ್ಡದೊಂದು ಗಾಬರಿ. ಮುಗಿಲೆತ್ತರಕ್ಕೆ ಎದ್ದು ನಿಂತಿದ್ದ ಕಟ್ಟಡ ಸಂಪೂರ್ಣವಾಗಿ ನೆಲಕ್ಕುರುಳಿತ್ತು. ಕಟ್ಟಡಗಳು ಈ ರೀತಿಯಾಗಿ ಕುಸಿಯುತ್ತವೆ ಅನ್ನೋದನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಿರಲಿಲ್ಲ. ನಾಲ್ಕು ದಿನಗಳ ಹಿಂದಷ್ಟೇ ಅದೇ ಕಟ್ಟಡದಲ್ಲಿದ್ದ ಹೋಟೆಲ್ ನಲ್ಲಿ ಕುಳಿತು ಕಾಫಿ ಹೀರಿದ್ದೆವು. ಅವತ್ತು ಕಾಫಿ ಕುಡಿದ ಹೋಟೆಲ್ ಎಲ್ಲಿದೆ ಅನ್ನೋ ಕುರುಹು ಕೂಡ ಅಲ್ಲಿರಲಿಲ್ಲ. ಕೂಡಲೇ ಕಚೇರಿಗೆ ಫೋನ್ ಮಾಡಿ, ಹುಬ್ಬಳ್ಳಿಯಿಂದ ಲೈವ್ ಕಿಟ್ ಕಳಿಸಲು ಹೇಳಿದೆ. ಹೀಗೆ ಆ ಕ್ಷಣದಿಂದ ಆರಂಭವಾದ ಕರ್ತವ್ಯ ಮುಕ್ತಾಯವಾಗಿದ್ದು ಬರೋಬ್ಬರಿ ಏಳು ದಿನಗಳ ನಂತರವೇ..!

ಒಂದು ಕಡೆ ಕಟ್ಟಡದಲ್ಲಿ ಸಿಲುಕಿದವರ ರಕ್ಷಣೆಯ ಕಾರ್ಯ ಶುರು ಮಾಡಲು ಯೋಜನೆ ರೂಪಿಸಲಾಗುತ್ತಿದ್ದರೆ, ಮತ್ತೊಂದು ಕಡೆಗೆ ಒಳಗಡೆ ಸಿಕ್ಕಿಹಾಕೊಂಡಿರೋ ಸಂಬಂಧಿಕರ ಅಳು ಮುಗಿಲು ಮುಟ್ಟಿತ್ತು. ಕೆಲವರಂತೂ ತಾವೇ ಒಳಗಡೆ ಹೋಗೋದಾಗಿ ಪಟ್ಟು ಹಿಡಿದಿದ್ದರು. ರಕ್ಷಣಾ ಕಾರ್ಯವನ್ನು ಮಾಡೋದು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ. ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಯಾವ ಯಾವ ಭಾಗದಲ್ಲಿ ಎಷ್ಟು ಜನರಿದ್ದಾರೆ ಅನ್ನೋ ಸಣ್ಣ ಮಾಹಿತಿ ಕೂಡ ಯಾರಿಗೂ ಇರಲಿಲ್ಲ. ಪೊಲೀಸರು ಬೆಳಗಾವಿ ರಸ್ತೆಯನ್ನೇ ಬಂದ್ ಮಾಡಿ, ರಕ್ಷಣಾ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು. ಕಾರ್ಯಾಚರಣೆ ಆರಂಭವಾಗೋದಕ್ಕಿಂತ ಮುಂಚೆ ಎಸ್.ಡಿ.ಆರ್.ಎಫ್. ಹಾಗೂ ಪೊಲೀಸ್ ಸಿಬ್ಬಂದಿಗೆ ಕಟ್ಟಡದ ಸಂಪೂರ್ಣ ಮಾಹಿತಿ ಬೇಕಿತ್ತು.

ಆದರೆ ಆ ಸಂದರ್ಭದಲ್ಲಿ ಅದನ್ನೆಲ್ಲಾ ಕೊಡೋರಾದರೂ ಯಾರು? ಹೀಗಾಗಿ ನಿಧಾನವಾಗಿ ಎಲ್ಲ ಕಡೆಯಿಂದ ಗೋಡೆ, ಪಿಲ್ಲರ್, ಬೀಮ್ ಗಳನ್ನು ಕೊರೆಯುತ್ತಾ ಒಳ ಹೋಗಲು ನಿರ್ಧರಿಸಲಾಯಿತು. ಈ ಮಧ್ಯೆ ಘಟನಾ ಸ್ಥಳಕ್ಕೆ ಇಡೀ ಧಾರವಾಡವೇ ಹರಿದು ಬಂದಿತ್ತು. ಜನರನ್ನು ಘಟನಾ ಸ್ಥಳದಿಂದ ದೂರಕ್ಕೆ ಕಳಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೇ ಅವರಲ್ಲಿ ಅನೇಕರು ತಾವು ಕೂಡ ಕಾರ್ಯಾಚರಣೆಗೆ ಸಹಾಯ ಮಾಡಲು ಬಂದಿರೋದಾಗಿ ಹೇಳಿದ್ದರಿಂದ, ಅಧಿಕಾರಿಗಳು ಕೂಡ ಏನೂ ಮಾಡುವಂತಿರಲಿಲ್ಲ. ಅಂತೂ ಇಂತೂ ಘಟನೆ ನಡೆದು ಒಂದೆರಡು ಗಂಟೆ ಹೊತ್ತಿಗೆ ಕಾರ್ಯಾಚರಣೆ ಶುರುವಾಯಿತು. ಕಟ್ಟಡದ ಹೊರಭಾಗದ ಗೋಡೆಗಳ ಬಳಿ ಸಿಲುಕಿಕೊಂಡವರ ಪೈಕಿ ಅನೇಕರನ್ನು ರಕ್ಷಿಸಲಾಯಿತು. ಆದರೆ ಕಟ್ಟಡದ ಮಧ್ಯಭಾಗದಲ್ಲಿ ಸಿಲುಕಿದವರ ರಕ್ಷಣೆ ಅಸಾಧ್ಯ ಅನ್ನೋ ಭಾವನೆ ಎಲ್ಲರಿಗೂ ಬಂದು ಬಿಟ್ಟಿತ್ತು. ಹಾಗಂತ ಅಧಿಕಾರಿಗಳು ಬಾಯಿ ಬಿಟ್ಟು ಹೇಳೋ ಹಾಗಿರಲಿಲ್ಲ. ಎಲ್ಲರನ್ನು ರಕ್ಷಿಸಿಯೇ ತೀರುತ್ತೇವೆ ಅಂತಾ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳಿಗೆ ಆರಂಭದಲ್ಲಿ ಜೀವಂತವಾಗಿ ಹೊರಗೆ ಬಂದ ಕೆಲವರಿಂದ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದರೆ ಒಂದೆರಡು ದಿನಗಳೆದಂತೆ ಅಲ್ಲಲ್ಲಿ ಶವಗಳು ಪತ್ತೆಯಾಗಿದ್ದರಿಂದ ಅವರು ಕೂಡ ಆತಂಕಗೊಂಡರು. ಈ ಮಧ್ಯೆ ರಕ್ಷಣೆ ಮಾಡುವಾಗ ಸಂಭವಿಸುತ್ತಿದ್ದ ಅನೇಕ ಘಟನೆಗಳು ಕೂಡ ಅವರನ್ನು ಭಯಭೀತಗೊಳಿಸುತ್ತಿದ್ದವು.

ಇದನ್ನೂ ಓದಿ : Reporter’s Diary: ‘ಯಡಿಯೂರಪ್ಪನವರ ಜೈಲುಪ್ರಸಂಗ’ ಓರ್ವ ಪತ್ರಕರ್ತನಾಗಿ ಆ ದಿನ ನನಗೆ ಖುಷಿಯೂ ಇರಲಿಲ್ಲ ದುಃಖವೂ

ಒಳಗಡೆಯಿಂದ ರಕ್ಷಣೆಗಾಗಿ ಅನೇಕರು ಕೂಗುತ್ತಿದ್ದರು. ಆ ಭಾಗಕ್ಕೆ ರಕ್ಷಣಾ ಪಡೆ ಹೋದರೆ ಆ ವ್ಯಕ್ತಿ ಅಲ್ಲಿ ಇರುತ್ತಲೇ ಇರಲಿಲ್ಲ. ಏಕೆಂದರೆ ಒಳಗಡೆಯಿಂದ ಕೂಗುತ್ತಿದ್ದ ವ್ಯಕ್ತಿಯ ದನಿಯೂ ಬೇರೆ ಯಾವುದೋ ಕಿಂಡಿಯಿಂದ ಹೊರಗಡೆ ಇದ್ದವರಿಗೆ ಕೇಳಿಸುತ್ತಿತ್ತು. ಹೀಗಾಗಿ ದನಿ ಬಂದ ಕಡೆ ಆಪರೇಷನ್ ಶುರು ಮಾಡಿ, ಇನ್ನೇನು ಅಲ್ಲಿ ಆ ವ್ಯಕ್ತಿ ಸಿಕ್ಕೇ ಬಿಟ್ಟ ಅನ್ನುವಷ್ಟರಲ್ಲಿ ಅದೆಲ್ಲಾ ಸುಳ್ಳಾಗಿ ಬಿಡುತ್ತಿತ್ತು. ಘಟನೆಯಲ್ಲಿ ಒಟ್ಟು ಹತ್ತೊಂಬತ್ತು ಜನರು ಮೃತಪಟ್ಟರೆ, ಐವತ್ತೇಳು ಜನರನ್ನು ಸುರಕ್ಷಿತವಾಗಿ ಹೊರ ಕರೆತರಲಾಯಿತು. ಈ ವೇಳೆ ಎಷ್ಟೋ ಜನರು ದಿನಗಟ್ಟಲೇ ನೀರು, ಆಹಾರವಿಲ್ಲದೇ ಬದುಕಿ ಅಚ್ಚರಿ ಮೂಡಿಸಿದ್ದರು. ಮತ್ತೆ ಕೆಲವರಂತೂ ಗಾಳಿ ಸಿಗದೇ ಪರದಾಡಿದ್ದೂ ಇತ್ತು. ಇಂಥದ್ದರಲ್ಲಿ ಅನೇಕ ಮನಕಲಕಿದ ಘಟನೆಗಳು ನಡೆದವು. ಆದರೆ ಅತಿ ಹೆಚ್ಚು ವರದಿಗಾರರನ್ನು ಹಾಗೂ ಅಧಿಕಾರಿಗಳನ್ನು ಕಣ್ಣೀರಾಗಿಸಿದ್ದು ಒಂದು ಘಟನೆ. ಅದನ್ನು ಅರಗಿಸಿಕೊಳ್ಳಲು ನಮಗೆ ಇಂದಿಗೂ ಸಾಧ್ಯವಾಗುತ್ತಿಲ್ಲ.

ಕಟ್ಟಡ ಕುಸಿತದ ಘಟನೆ ನಡೆದಿದ್ದು ಮಂಗಳವಾರ. ಘಟನೆ ನಡೆದ ಮೂವತ್ಮೂರು ಗಂಟೆಗಳ ಬಳಿಕ ಮಹಿಳೆಯೊಬ್ಬಳು ಜೀವಂತವಾಗಿರೋದನ್ನು ರಕ್ಷಣಾ ಪಡೆಯ ಸಿಬ್ಬಂದಿ ಖಚಿತಪಡಿಸಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ತಮ್ಮ ತಂಡ ಅಲ್ಲಿಗೆ ಮುಟ್ಟುತ್ತೆ, ಆಕೆಯನ್ನು ರಕ್ಷಿಸುತ್ತೆ ಅಂತಾ ಹೇಳಿದ್ದರು. ಎಲ್ಲರ ಕಣ್ಣುಗಳು ಅತ್ತ ನೆಟ್ಟಿದ್ದವು. ಎಲ್ಲ ಕ್ಯಾಮೆರಾಗಳು ಅತ್ತ ಕಡೆ ಫೋಕಸ್ ಆಗಿದ್ದವು. ಒಂದೂವರೆ ದಿನ ಬದುಕಿದ ಆಕೆ ಯಾರು ಅನ್ನೋ ಕುತೂಹಲ ನಮಗೆಲ್ಲಾ ಇದ್ದರೆ, ಆಕೆ ತಮ್ಮ ಕುಟುಂಬದ ಮಹಿಳೆಯೇ ಆಗಿರಲಿ ಅಂತಾ ಒಳಗೆ ಸಿಲುಕಿದ್ದವರ ಬರುವಿಗಾಗಿ ಹೊರಗೆ ನಿಂತವರು ದೇವರನ್ನು ಬೇಡಿಕೊಳ್ಳುತ್ತಿದ್ದರು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು. ಗಾಯಗೊಂಡಿದ್ದ ಆ ಮಹಿಳೆಯನ್ನು ಕಷ್ಟಪಟ್ಟು ಹೊರ ತರುತ್ತಲೇ ಆಕೆ ನೋವಿನಿಂದ ನರಳುತ್ತಿರೋ ಶಬ್ದ ಎಲ್ಲರಲ್ಲೂ ನೋವನ್ನು ಹೆಚ್ಚಿಸಿತ್ತು. ಆ ಮಹಿಳೆ ಹೊರಗೆ ಬರುತ್ತಲೇ, ತನ್ನ ಹೆಸರು ಪ್ರೇಮಾ ಉಣಕಲ್ ಅಂತಾ ಜೋರಾಗಿ ಅಳತೊಡಗಿದ್ದರು. ಜೀವಂತವಾಗಿ ಹೊರಗೆ ಬಂದಿದ್ದಕ್ಕೆ ಅಳು ಒತ್ತಿ ಬಂದಿರಬಹುದು ಅಂತಾ ಭಾವಿಸಿದ್ದು ಸುಳ್ಳಾಗಿತ್ತು. ಇನ್ನೇನು ಅವರನ್ನು ಆ್ಯಂಬುಲೆನ್ಸ್ ಗೆ ಶಿಫ್ಟ್ ಮಾಡಬೇಕು ಅನ್ನುವಷ್ಟರಲ್ಲಿಯೇ ಆಕೆ ಕೂಗತೊಡಗಿದ್ದರು: “ಒಳಗೆ ನನ್ನ ಮಗಳಿದ್ದಾಳೆ. ನಾ ಕೈಮುಗಿಯುತ್ತೇನೆ, ಆಕೆಯನ್ನೂ ಹೊರ ತನ್ನಿ…” ಅವರನ್ನು ಹೊತ್ತ ಆ್ಯಂಬುಲೆನ್ಸ್ ವೇಗವಾಗಿ ಆಸ್ಪತ್ರೆಯತ್ತ ಸಾಗಿತ್ತು. ಆಸ್ಪತ್ರೆಗೆ ದಾಖಲಾಗಿ, ಕೊಂಚ ಸುಧಾರಿಸಿಕೊಂಡ ಬಳಿಕ ರೇಖಾ ನಡೆದ ಘಟನೆಯನ್ನು ವಿವರಿಸಿದ್ದರು.

ಅವತ್ತು ಅದೇ ಕಟ್ಟಡದಲ್ಲಿ ಸ್ವ ಉದ್ಯೋಗ ಬಯಸುವ ಮಹಿಳೆಯರಿಗಾಗಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಹರ್ಬಲ್ ಉತ್ಪನ್ನಗಳ ಮಾರಾಟ ಮಾಡುವ ಕಂಪನಿ ಆ ಸಭೆಯನ್ನು ಆಯೋಜಿಸಿತ್ತು. ಮಹಿಳೆಯರೇ ಈ ಕಂಪನಿಗೆ ಏಜೆಂಟರಾಗಿದ್ದರು. ಆಗಾಗ ಅವರನ್ನೆಲ್ಲಾ ಕರೆದು ಸಭೆ ನಡೆಸಲಾಗುತ್ತಿತ್ತು. ಹೀಗೆ ಅಲ್ಲಿಗೆ ಧಾರವಾಡದ ಶಿವಾನಂದ ನಗರದ ರೇಖಾ ಉಣಕಲ್ ಬಂದಿದ್ದರು. ಅವತ್ತು ಮಧ್ಯಾಹ್ನ ಶಾಲೆಗೆ ಬಿಡುವು ಇದ್ದಿದ್ದರಿಂದ ಎರಡನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಮಗಳು ದಿವ್ಯಾಳನ್ನು ಕೂಡ ಕರೆ ತಂದಿದ್ದರು. ಮಧ್ಯಾಹ್ನ ಸುಮಾರು 3:40 ಕ್ಕೆ ಕಟ್ಟಡ ಕುಸಿಯುತ್ತಿದ್ದಂತೆಯೇ ತಾಯಿ-ಮಗಳು ಒಂದೇ ಕಡೆಗೆ ಕುಸಿದು ಬಿದ್ದಿದ್ದರು. ಅಕ್ಕಪಕ್ಕದಲ್ಲಿಯೇ ಇಬ್ಬರೂ ಬಿದ್ದಿದ್ದರು.

ಈ ವೇಳೆ ದಿವ್ಯಾ ಅಮ್ಮನನ್ನು ನೆನೆದು ಕೂಗತೊಡಗಿದಾಗ ಮಗಳ ದನಿ ಕೇಳಿದ ತಾಯಿ ರೇಖಾರ ಮನಸ್ಸಿಗೆ ಏನೋ ಸಮಾಧಾನ. ಮಗಳು ಜೀವಂತವಾಗಿದ್ದಾಳೆ ಅನ್ನೋ ಸಣ್ಣ ಸಂತಸ. ತಾನು ಕೂಡ ಪಕ್ಕದಲ್ಲಿಯೇ ಇದ್ದಿದ್ದಾಗಿ ರೇಖಾ ಹೇಳಿದಾಗ ಮಗುವಿಗೂ ಧೈರ್ಯ. ತಾಯಿ-ಮಗಳು ಅತ್ತ ಇತ್ತ ಕೈ ತಡಕಾಡಿದಾಗ ಅಕ್ಕಪಕ್ಕದಲ್ಲಿಯೇ ಇರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಇಬ್ಬರ ಕೈಗಳು ಪರಸ್ಪರ ತಾಗಿದಾಗ ನರಕದಲ್ಲಿಯೂ ಸ್ವರ್ಗದ ಅನುಭವ..! ಇಬ್ಬರೂ ಒಬ್ಬರನ್ನೊಬ್ಬರು ನೋಡುವಂತಿಲ್ಲ. ಏಕೆಂದರೆ ಒಳಗಡೆ ಗಾಢ ಕತ್ತಲು. ಇನ್ನು ಎದ್ದು ಸಮೀಪಕ್ಕೆ ಹೋಗೋಣವೆಂದರೆ ಇಬ್ಬರ ಕಾಲುಗಳ ಮೇಲೆ ಕಟ್ಟಡದ ಅವಶೇಷಗಳು ಬಿದ್ದಿವೆ. ಅದರಲ್ಲೂ ಮಗುವಿನ ಕಾಲಲ್ಲಿ ಕಬ್ಬಿಣದ ರಾಡ್ ಹೊಕ್ಕು ಬಿಟ್ಟಿತ್ತು. ಹೀಗಾಗಿ ತಾಯಿ-ಮಗಳು ತಾವಿದ್ದಲ್ಲೇ ಅಂಗಾತವಾಗಿ ಬಿದ್ದಿದ್ದರು. ಒಬ್ಬರ ದನಿ ಮತ್ತೊಬ್ಬರಿಗೆ ಕೇಳುವುದು ಮತ್ತು ಕೈ ಸ್ಪರ್ಶ ಬಿಟ್ಟರೆ ಅಲ್ಲಿ ಮತ್ತೆಲ್ಲವೂ ಶೂನ್ಯ ಶೂನ್ಯ…

ಇದನ್ನೂ ಓದಿ : Reporters Diary: ದೊಡ್ಡಕಡತೂರಿನ ರಘುವಿನ ಈ ‘ದಿವ್ಯಧ್ಯಾನ’ಕ್ಕೀಗ ಐದುವರ್ಷ

ಘಟನೆ ನಡೆದ ಬಳಿಕ ಯಾರಾದರೂ ತಮ್ಮನ್ನು ಸಂಪರ್ಕಿಸಬಹುದು ಮತ್ತು ತಾವು ಹೊರಗೆ ಜೀವಂತವಾಗಿ ಬರಬಹುದು ಅನ್ನೋ ನಿರೀಕ್ಷೆಯಲ್ಲಿ ರೇಖಾ ಇದ್ದರು. ಮಗು ಕೂಡ ಆಗಾಗ “ಅಮ್ಮಾ ಇಲ್ಲಿಂದ ಹೊರಗೆ ಹೋಗೋದು ಯಾವಾಗಮ್ಮಾ?” ಅನ್ನುತ್ತಲೇ ಇತ್ತು. ಅಲ್ಲಿ ನಡೆದ ಘಟನೆ ಎಂಥ ಭೀಕರ ಅನ್ನೋದನ್ನು ಕೂಡ ತಿಳಿಯದ ವಯಸ್ಸದು. ಬೃಹತ್ ಕಟ್ಟಡ ಕುಸಿದು ಬಿದ್ದಿದೆ, ನಾವು ಅದರ ಕೆಳಗಡೆ ಸಿಲುಕಿಕೊಂಡಿದ್ದೇವೆ ಅಂತಾ ಹೇಳಿದರೂ ಅರ್ಥವಾಗದ ಮನಸ್ಸದು. ಇನ್ನು ಮುಂದಿನ ಅನಾಹುತಗಳನ್ನು ಊಹಿಸೋದು ಮಗುವಿಗೆ ಸಾಧ್ಯವಿರದ ವಿಚಾರ. ಆದರೆ ತಾಯಿ ಪಕ್ಕದಲ್ಲಿಯೇ ಇದ್ದಾಳೆ ಅನ್ನೋ ಕಾರಣಕ್ಕೆ ಮಗು ಕೊಂಚ ಸಮಾಧಾನಪಟ್ಟುಕೊಂಡಿತ್ತು.

ಆದರೆ ಮಗುವಿನ ಕಾಲನ್ನು ಹೊಕ್ಕಿದ್ದ ರಾಡ್ ಸಣ್ಣಗೆ ತನ್ನ ಕೆಲಸ ಮಾಡಲು ಶುರು ಮಾಡಿತ್ತು. ಘಟನೆ ನಡೆದ ಕೂಡಲೇ ಆಘಾತದಿಂದಾಗಿ ನೋವು ಕಂಡು ಬಂದಿರಲಿಲ್ಲ. ಆದರೆ ಒಂದೆರಡು ಗಂಟೆ ಕಳೆದ ಬಳಿಕ ಮಗುವಿಗೆ ಅದರ ಅರಿವಾಗತೊಡಗಿತ್ತು. ರಕ್ತ ನಿರಂತರವಾಗಿ ಹರಿದು ಹೋಗುತ್ತಿತ್ತು. ಅದನ್ನು ಮಗು ತಾಯಿಗೆ ಹೇಳುತ್ತಲೇ ಇತ್ತು. ಆದರೆ ತಾಯಿ ಏನೂ ಮಾಡುವಂತಿರಲಿಲ್ಲ. ಮಗುವಿಗೆ ಸಮಾಧಾನ ಹೇಳೋದೊಂದೇ ಆಕೆ ಮಾಡಬಹುದಾಗಿದ್ದ ಕೆಲಸವಾಗಿತ್ತು. ಘಟನೆ ನಡೆದು ಸುಮಾರು ಹತ್ತು ಗಂಟೆಗಳ ಕಾಲ ತಾಯಿ-ಮಗು ಮಾತನಾಡುತ್ತಲೇ ಇದ್ದರು. ಗಂಟಲು ಒಣಗಿದ್ದರಿಂದ ನೀರಡಿಕೆಯಾಗಿದೆ ಅಂತಾ ದಿವ್ಯಾ ಅಮ್ಮನನ್ನು ಕೇಳಿದ್ದಾಳೆ. ಆಗ ನೀರನ್ನೂ ಕೊಡಲು ಆಗದಂಥ ಸ್ಥಿತಿ ಬಂತಲ್ಲಾ ಅಂತಾ ರೇಖಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೊರ ಜಗತ್ತಿಗೆ ತಮ್ಮ ದನಿ ಕೇಳಲಿ ಅಂತಾ ಕೂಗಿದ್ದಾರೆ. ಆ ಕೂಗು ಹೊರಗೆ ಬರೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಿಧಾನವಾಗಿ ದಿವ್ಯಾಳ ದನಿ ಕಡಿಮೆಯಾಗತೊಡಗಿದೆ. ಯಾವುದೇ ಕಾರಣಕ್ಕೂ ಎದೆಗುಂದದಂತೆ ಮಗುವಿಗೆ ರೇಖಾ ಧೈರ್ಯ ಹೇಳುತ್ತಲೇ ಇದ್ದಾರೆ. ಈ ವೇಳೆ ಅದ್ಹೇಗೋ ದಿವ್ಯಾಳಿಗೆ ತಾನು ಉಳಿಯೋದಿಲ್ಲ ಅಂತಾ ಗೊತ್ತಾಗತೊಡಗಿದೆ. ಗಾಯದ ನೋವು ಹೆಚ್ಚಾಗತೊಡಗಿದೆ. ನೋವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತಾ ಅತ್ತಿದ್ದಾಳೆ. ಹೇಗಾದರೂ ಮಾಡಿ ಇನ್ನೂ ಸ್ವಲ್ಪ ಹೊತ್ತು ತಾಳಿಕೋ ಅಂತಾ ಹೇಳೋದನ್ನು ಬಿಟ್ಟು ತಾಯಿ ಬಳಿ ಯಾವುದೇ ಮಾರ್ಗವೇ ಇರಲಿಲ್ಲ.

ಬೆಳಗಿನ ಜಾವ ಸುಮಾರು ಮೂರು ಗಂಟೆ ಹೊತ್ತಿಗೆ, “ಅಮ್ಮಾ” ಅನ್ನೋ ದನಿ ಕೇಳಿ ಬಂದಿದೆ. ಮಗಳು ಜೀವಂತವಾಗಿದ್ದಾಳೆ ಅಂತಾ ತಾಯಿ ಸಮಾಧಾನಪಟ್ಟುಕೊಳ್ಳೋ ಹೊತ್ತಿಗೆ ದಿವ್ಯಾ ಮಾತು ಮುಂದುವರೆಸಿದ್ದಾಳೆ: “ಅಮ್ಮಾ, ನೋವು ಹೆಚ್ಚಾಗುತ್ತಲೇ ಇದೆ. ಬಾಯಿ ಒಣಗುತ್ತಿದೆ. ಉಸಿರಾಡಲು ಕೂಡ ಸಾಧ್ಯವಾಗುತ್ತಿಲ್ಲ. ನಾನು ಬದುಕೋದಿಲ್ಲ. ನೀನು ಸುರಕ್ಷಿತವಾಗಿ ಹೊರಗೆ ಹೋಗು. ಅಪ್ಪನೊಂದಿಗೆ ಜಗಳವಾಡಬೇಡ. ನನ್ನ ಪ್ರೀತಿಯ ಅಪ್ಪನನ್ನು ಚೆನ್ನಾಗಿ ನೋಡಿಕೋ” ಅಂದಿದ್ದಾಳೆ. ಮಗಳ ಮಾತನ್ನು ಕೇಳಿದ ರೇಖಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಷ್ಟು ಹೇಳಿ ಮಗು ಆಯಾಸವಾದಂತಾಗಿ ಸುಮ್ಮನಾಗಿದೆ. ಇದಾಗಿ ಕೆಲ ಹೊತ್ತಿಗೆ ರೇಖಾಗೆ ಜೆಸಿಬಿಯಿಂದ ಕಾರ್ಯಾಚರಣೆ ನಡೆಸುತ್ತಿರೋ ಸದ್ದು ಕೇಳಿದೆ. ಇಷ್ಟರಲ್ಲಿಯೇ ತಮ್ಮ ಬಳಿ ರಕ್ಷಣಾ ಪಡೆಗಳು ಬಂದು, ರಕ್ಷಿಸಬಹುದು ಅನ್ನೋ ಸಮಾಧಾನವಾಗಿದೆ. ಹೋಗಿದ್ದ ಜೀವ ಮರಳಿ ಬಂದಷ್ಟು ಖುಷಿಯಾಗಿದೆ.

ಮತ್ತೆ ಮತ್ತೆ ರೇಖಾ ಜೋರಾಗಿ ಕೂಗಿದ್ದಾರೆ.. ದನಿ ಕೇಳಿಯಾದರೂ ತಮ್ಮ ಕಡೆ ಕಾರ್ಯಾಚರಣೆ ತಂಡದವರು ಬರಲಿ ಅನ್ನೋದು ಅವರ ಉದ್ದೇಶವಾಗಿತ್ತು. ಅವರು ಅಂದುಕೊಂಡಂತೆಯೇ ಕಾರ್ಯಾಚರಣೆಯ ತಂಡ ತಮ್ಮತ್ತ ಧಾವಿಸೋದು ಅವರ ಅರಿವಿಗೆ ಬಂದಿದೆ. ಜೆಸಿಬಿಗಳ ಸದ್ದು ಕ್ಷಣಕ್ಷಣಕ್ಕೆ ಹೆಚ್ಚಾಗತೊಡಗಿದೆ. ಅದೇ ರೀತಿ ರೇಖಾ ಕೂಡ ಕೂಗುವುದನ್ನು ಮುಂದುವರೆಸಿದ್ದಾರೆ. ಇದೇ ವೇಳೆ ಮತ್ತೊಮ್ಮೆ ರೇಖಾ ಮಗಳನ್ನು ಕೂಗಿದ್ದಾರೆ. ಮಗು ನರಳುವ ದನಿಯಲ್ಲಿಯೇ ಸ್ಪಂದಿಸಿದೆ. ಅದೇ ಕೊನೆ… ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಕ್ಕದಲ್ಲಿ ದೊಡ್ಡದೊಂದು ವಸ್ತು ಬಿದ್ದ ಸದ್ದು… ಇದರಿಂದ ಆತಂಕಗೊಂಡ ರೇಖಾ ಮಗುವನ್ನು ಮತ್ತೆ ಮತ್ತೆ ಮಾತಾಡಿಸಿದ್ದಾರೆ. ಆದರೆ ಅದುವರೆಗೂ ನರಳುತ್ತಲೇ ತಾಯಿಗೆ ಸ್ಪಂದಿಸುತ್ತಿದ್ದ ದಿವ್ಯಾ ಈ ಬಾರಿ ಸ್ಪಂದಿಸಲೇ ಇಲ್ಲ. ಅಲ್ಲಿಗೆ ದಿವ್ಯಾಳ ಕಥೆ ಮುಗಿದೇ ಹೋಗಿತ್ತು. ಮಗಳನ್ನು ನೆನೆದು ರೇಖಾ ಅವರಿಗೆ ಅಳುವೊಂದನ್ನು ಬಿಟ್ಟು ಮತ್ತೇನನ್ನೂ ಮಾಡಲು ಸಾಧ್ಯ? ಅಂತೂ ಇಂತೂ ಕಟ್ಟಡ ಕುಸಿದು ಮೂವತ್ಮೂರು ಗಂಟೆಗಳ ಬಳಿಕ ರೇಖಾ ಇರುವ ಸ್ಥಳಕ್ಕೆ ಕಾರ್ಯಾಚರಣೆ ತಂಡ ತಲುಪಿದ್ದು ಆಯಿತು, ಅವರನ್ನು ರಕ್ಷಿಸಿದ್ದೂ ಆಯಿತು. ಹೀಗೆ ಹೊರಗಡೆ ಬಂದ ಕೂಡಲೇ ಜೋರಾಗಿ ಕೂಗಿದ ರೇಖಾ, “ಒಳಗಡೆ ನನ್ನ ಮಗಳ ಶವವಿದೆ. ಅವಳ ಮೇಲೆ ಏನೋ ಬಿದ್ದು ಆಕೆ ಸತ್ತು ಹೋಗಿದ್ದಾಳೆ. ದಯವಿಟ್ಟು ಆಕೆಯ ಶವವನ್ನು ಹೊರ ತನ್ನಿ…”

ಇದನ್ನೂ ಓದಿ : Reporter‘s Diary : ಆ ಹಂತಕನ ಕರೆ ‘ಏಪ್ರಿಲ್ ಫೂಲ್’ ಆಗಬಾರದಿತ್ತೆ?

ಎರಡು ದಿನಗಳ ಬಳಿಕ ದಿವ್ಯಾಳ ಶವವನ್ನು ಹೊರ ತರಲಾಯಿತು. ಒಳಗಡೆ ನಡೆದಿದ್ದ ಕಥೆಯನ್ನು ನೆನೆದು ಅಲ್ಲಿದ್ದವರೆಲ್ಲಾ ಕಣ್ಣೀರಾಗಿದ್ದರು. ಈ ವೇಳೆ ಪಕ್ಕದಲ್ಲಿದ್ದ ಪತ್ರಕರ್ತ ಮಿತ್ರ ಜಾವೆದ್ಗೆ ಹಿಂದಿನ ದಿನ ನಾನು ಅತ್ತ ಘಟನೆಯನ್ನು ಹೇಳಿದೆ. ನನ್ನ ನೋಡಿ ಮುಗುಳ್ನಕ್ಕ ಜಾವೇದ್, ತಾವೂ ಕೂಡ ಮಗಳನ್ನು ತಬ್ಬಿ ರಾತ್ರಿಯಿಡೀ ಅತ್ತದ್ದನ್ನು ಎಲ್ಲರೆದರು ಬಿಚ್ಚಿಟ್ಟರು. ಅಲ್ಲಿದ್ದ ಬಹುತೇಕ ಪತ್ರಕರ್ತರು ರಾತ್ರಿಯಿಡೀ ಘಟನೆಯನ್ನು ನೆನೆದು ಅತ್ತವರೇ ಆಗಿದ್ದರು. ಅಲ್ಲಿಯೇ ನಿಂತು ನಮ್ಮ ಮಾತನ್ನು ಗಮನಿಸುತ್ತಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್, ರಾತ್ರಿ ತಾವೂ ಕೂಡ ಅತ್ತಿದ್ದು, ಪತಿ ರಾಜೇಂದ್ರ ಜೋಳನ್ ರಾತ್ರಿಯಿಡೀ ಸಮಾಧಾನಪಡಿಸಿದ್ದಾಗಿ ಹೇಳಿದರು. ಐಎಎಸ್, ಐಪಿಎಸ್ ಅಧಿಕಾರಿಗಳು ಭಾವುಕರಾಗಬಾರದು ಅಂತಾ ಅವರ ಅಧಿಕಾರಿಗಳು ಹೇಳುತ್ತಲೇ ಇರುತ್ತಾರಂತೆ. ಆದರೆ ದೀಪಾ ಚೋಳನ್ ಅವರದ್ದೂ ನಮ್ಮ ರೀತಿಯ ಕಥೆಯೇ ಆಗಿತ್ತು. ಈ ಘಟನೆಗೆ ಕಣ್ಣೀರಾದ ನಮಗೆಲ್ಲರಿಗೂ ದಿವ್ಯಾಳ ವಯಸ್ಸಿನ ಮಗಳು ಇದ್ದಿದ್ದೇ ಕಾರಣವಾಗಿತ್ತೇ?

ಅಂದಿನಿಂದ ಈ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ಇದ್ದೇನೆ…!

ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ

Published On - 11:45 am, Sat, 2 July 22

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು