Reporter’s Diary: ‘ಯಡಿಯೂರಪ್ಪನವರ ಜೈಲುಪ್ರಸಂಗ’ ಓರ್ವ ಪತ್ರಕರ್ತನಾಗಿ ಆ ದಿನ ನನಗೆ ಖುಷಿಯೂ ಇರಲಿಲ್ಲ ದುಃಖವೂ…

BS Yadiyurappa : ಸಂಜೆ 5ಗಂಟೆ. ಅಂಬೇಡ್ಕರ್‌ ಬೀದಿಯಿಂದ ಕೆ.ಆರ್‌. ಸರ್ಕಲ್‌ಗೆ ನಮ್ಮ ಪ್ರವೇಶ. ನಮ್ಮೆದುರು ಸಾಗಿದ್ದು ಪೊಲೀಸರ ಬೊಲೆರೋ. ಡ್ರೈವರ್‌ ಹಿಂದಿನ ಸೀಟಿನ ಮಧ್ಯಭಾಗದಲ್ಲಿ ಯಡಿಯೂರಪ್ಪ. ನಮ್ಮ ವಾಹನ ಕಂಡವರೇ ತಮ್ಮ ಟ್ರೇಡ್​ಮಾರ್ಕ್​ ವಿಕ್ಟರಿ ಸಿಂಬಲ್‌ ತೋರಿಸಿದ್ದರು. ಅಲ್ಲಿಂದ ಶುರುವಾಯ್ತು ಮೆಗಾ ಫಾಲೋಅಪ್‌ ಸುದ್ದಿ. 

Reporter’s Diary: ‘ಯಡಿಯೂರಪ್ಪನವರ ಜೈಲುಪ್ರಸಂಗ’ ಓರ್ವ ಪತ್ರಕರ್ತನಾಗಿ ಆ ದಿನ ನನಗೆ ಖುಷಿಯೂ ಇರಲಿಲ್ಲ ದುಃಖವೂ...
ಹರಿಪ್ರಸಾದ ಅಡ್ಪಂಗಾಯ
Follow us
ಶ್ರೀದೇವಿ ಕಳಸದ
|

Updated on:Jun 11, 2022 | 1:20 PM

Reporter’s Diary : 2011 ಅಕ್ಟೋಬರ್‌ 15ರ ಸಂಜೆಯದು. ಅಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಬಂಧನಕ್ಕೆ ಅರೆಸ್ಟ್‌ ವಾರೆಂಟ್‌ ಹೊರಡಿಸಲಾಗಿತ್ತು. ನ್ಯಾಯಾಲಯದೆದುರು ಶರಣಾಗತರಾಗಿದ್ದ ಅಂದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆ ಸುದ್ದಿಯ ವರದಿಗೆಂದು ಕಡೇ ಕ್ಷಣದಲ್ಲಿ ನಾನು, ಕ್ಯಾಮರಾಮನ್‌ ಶ್ರೀನಿವಾಸ್‌ ಕುಲಕರ್ಣಿ ಜೊತೆಯಾಗಿದ್ದೆವು. ಅಂದು ನಮ್ಮ ಕಾರ್‌ ಡ್ರೈವರ್‌ ಆಗಿದ್ದವನು ಯೋಗೀಶ್. ಈ ಯೋಗೀಶನನ್ನು ನಾವು ಯಾವತ್ತೂ ವೇಗವಾಗಿ ಕಾರು ಓಡಿಸೋದಿಕ್ಕೆ ಬರೋದಿಲ್ಲ ಎಂದು ಗೇಲಿ ಮಾಡುತ್ತಿದ್ದೆವು. ‘ಎಲ್ಲೇ ಹೋದ್ರೂ ನಿಧಾನಕ್ಕೆ ಕಾರು ಓಡಿಸ್ತೀಯಾ.. ನಿನ್ನ ಕಾರು ಸರಿಯಿಲ್ಲ’ ಎಂಬುದು ನಮ್ಮ ಸಾಮಾನ್ಯ ದೂರಾಗಿತ್ತು. ಆದ್ರೆ ಅಂದು ಅದೇ ಯೋಗೀಶ್ ವೇಗವಾಗಿ ಕಾರು ಓಡಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದ. ಅಥವಾ ಪರಿಸ್ಥಿತಿ ಹಾಗೆ ಮಾಡಿತ್ತು. ಹರಿಪ್ರಸಾದ ಅಡ್ಪಂಗಾಯ, ಪ್ರಧಾನ ನಿರ್ಮಾಪಕ-ರಾಜಕೀಯ, ಟಿವಿ 9 ಕನ್ನಡ, ಬೆಂಗಳೂರು (Hariprasad Adpangay)

ಇಂದು ಟಿವಿಯಲ್ಲಿ ಅನೇಕ ಲೈವ್‌ ಫಾಲೋಅಪ್‌ ಸುದ್ದಿಗಳನ್ನು ನೋಡುತ್ತೇವೆ. ನಾನು ಹೇಳುತ್ತಿರುವುದು ಸರಿ ಸುಮಾರು 11 ವರ್ಷಗಳ ಹಿಂದಿನ ಮಾತು. ಇದು‌‌ ಕನ್ನಡ‌ ಟಿವಿ‌ ಚಾನೆಲ್‌ಗಳಲ್ಲಿ‌ ಮೊದಲ ಲೈವ್ ಫಾಲೋಅಪ್. ಆಗೆಲ್ಲಾ ಲೈವ್ ಫಾಲೋಅಪ್‌ಗೆ ಬೇಕಾದ ಇಂಟರ್‌ನೆಟ್‌ ಸ್ಪೀಡ್‌ ಸಿಗೋದು ಕಷ್ಟವಿತ್ತು. ಆಗಷ್ಟೇ ಕೆಲವು ಟಿವಿ ಚಾನೆಲ್‌ಗಳಲ್ಲಿ ಸುಸಜ್ಜಿತ ಲೈವ್‌ಕಿಟ್‌ಗಳು ಇದ್ದವಾದರೂ ಟಿವಿ9ನಲ್ಲಿ ಆಗ ನಮ್ಮದೇ ಚಾನೆಲ್‌ನ ತಾಂತ್ರಿಕ ಸಿಬ್ಬಂದಿ ಅಭಿವೃದ್ಧಿಪಡಿಸಿದ್ದ ಸಾಮಾನ್ಯ ಲೈವ್‌ಕಿಟ್‌ಗಳಿದ್ದವು. ಒಂದು ಅರ್ಥದಲ್ಲಿ ಎಲ್ಲವೂ ಸರಾಗವಿದ್ದರೆ, ಜಾಸ್ತಿ ಜನ ಅಲ್ಲಿ ಸೇರಿರದಿದ್ದರೆ ಮಾತ್ರ ಈ ಲೈವ್‌ ಕಿಟ್‌ಗಳಿಂದ ನಾವು ನೇರಪ್ರಸಾರ ಮಾಡಲು ಸಾಧ್ಯವಿತ್ತು. ಇದೇ ಕಾರಣಕ್ಕೆ ನಮ್ಮ ಲೈವ್‌ಕಿಟ್‌ಗೆ ಡಕೋಟಾ ಕಿಟ್‌ ಅಂತೆಲ್ಲಾ ತಮಾಷೆ ಮಾಡಿದ್ದೂ ಇದೆ. ಆದ್ರೆ ಅವತ್ತು ಕೆ.ಆರ್‌.ಸರ್ಕಲ್‌ ತಲುಪೋದಿಕ್ಕೆ ಸ್ವಲ್ಪ ಮುಂಚೆ ನಮ್ಮ ಕ್ಯಾಮರಾಮನ್ ಕುಲಕರ್ಣಿ, ‘ಸರ್, ನೀವು ಹಿಂದೆ ಕೂಡ್ರಿ.. ನಾನು ಎದುರು ಕೂತ್ಕೊಂಡು ಲೈವ್ ಮಾಡೋಣ’ ಅಂತ ಭಯಂಕರವಾದ ಕನಸೊಂದನ್ನು ಹೇಳಿದ್ದ. ಅವನ ಮಾತು ಕೇಳಿ ನಗುತ್ತಾ.. ಆಯ್ತು ನಡೀರಿ ಅಂತ ಕುಲಕರ್ಣಿಯನ್ನು ಎದುರು ಕೂರಿಸಿ, ನಾನು ಹಿಂದಿನ ಸೀಟಲ್ಲಿ ಕುಳಿತಿದ್ದೆ. ಮುಂದೆ ನಡೆದಿದ್ದು ನಿಜಕ್ಕೂ ರಿಪೋರ್ಟಿಂಗ್‌ನಲ್ಲಿ ಮರೆಯಲಾಗದ ಅನುಭವ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದು ಮೂರೂವರೆ ತಿಂಗಳಾಗಿತ್ತಷ್ಟೇ. ಅವರು ಜೈಲು ವಾಸಿಯಾಗುತ್ತಿರುವ ಸುದ್ದಿ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಸ್ವತಃ ಬಿಜೆಪಿಯ ಅಂದಿನ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ‘ಇದು ಬಿಜೆಪಿ ಪಾಲಿನ ಅತ್ಯಂತ ಕೆಟ್ಟ ದಿನ’ ಎಂದು ಕರೆದಿದ್ದರು. ಯಡಿಯೂರಪ್ಪ ಜೈಲಿಗೆ ಹೋಗುತ್ತಿರುವಾಗಲೂ ಅವರ ಬೆಂಬಲಿಗ ಶಾಸಕರು ಅವರನ್ನು ಹಿಂಬಾಲಿಸಿ ಜೈಲಿನವರೆಗೂ ಹೋಗಲು ರೆಡಿಯಾಗಿದ್ದರು. ಕೆ.ಆರ್‌.ಸರ್ಕಲ್‌ನಲ್ಲಿ ಯಡಿಯೂರಪ್ಪ ಕುಳಿತಿದ್ದ ಪೊಲೀಸರ ಬೊಲೆರೋ ವಾಹನ ಬರುತ್ತಿದ್ದಂತೆ ಸೈಡಲ್ಲಿದ್ದ ನಮ್ಮ ಕಾರು ಮುಖ್ಯರಸ್ತೆಗಿಳಿದಿತ್ತು. ಕೆ.ಆರ್‌. ಸರ್ಕಲ್‌ಗೆ ರೌಂಡ್‌ ಹಾಕಿ ಕಬ್ಬನ್‌ ಪಾರ್ಕ್‌ನೊಳಗೆ ಪೊಲೀಸ್‌ ವಾಹನ ಹೋಗುತ್ತಿದ್ದಂತೆ ಅದರ ಬೆನ್ನಲ್ಲಿ ನಾವಿದ್ದೆವು. ಎದುರಿನ ಸೀಟಿನಲ್ಲಿ ಕುಳಿತಿದ್ದ ಕುಲಕರ್ಣಿ, ಮುಂದಿದ್ದ ಕಾರನ್ನು ಕ್ಯಾಮರಾದ ಮೂಲಕ ಫಾಲೋ ಮಾಡೋದ್ರ ಜೊತೆಗೆ ಲೈವ್‌ಕಿಟ್‌ನಲ್ಲಿ ಫೀಡ್‌ ಹೋಗ್ತಿದೆಯೇ ಎಂದು ಚೆಕ್‌ ಮಾಡ್ತಿದ್ದ. ಹಿಂದೆ ಕುಳಿತಿದ್ದ ನಾನು ಆಫೀಸ್‌ಗೆ ಕರೆ ಮಾಡಿ, ನೋಡಿ ಲೈವ್‌ ವಿಷುವಲ್‌ ಬರುತ್ತಿದೆ.. ನೋಡ್ತಿರಿ ಅಂತ ಹೇಳ್ತಿದ್ದೆ.

ಇದನ್ನೂ ಓದಿ
Image
Reporter’s Diary: ನಿರ್ಜನ ಪ್ರದೇಶದಲ್ಲಿ ಬೆನ್ನ ಹಿಂದೆ ನಿಂತವನ ಕಂಡು ಎದೆಬಡಿತವೇ ನಿಂತಿತ್ತು
Image
Reporter’s Diary: ಉಂಡು ಹೊರಟಿದ್ದವರ ಬಲಿ ಪಡೆದ ಉಂಡುಬತ್ತಿ ಕೆರೆ
Image
Reporter‘s Diary: ಫೋನೋ, ನೇರಪ್ರಸಾರದ ಬಗ್ಗೆ ಮೊದಲ ಸಲ ಜನಕ್ಕೆ ಅರ್ಥವಾಯಿತು
Image
Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’

ಕಾರು ಕಬ್ಬನ್‌ ಪಾರ್ಕ್ ದಾಟಿ, ವಿಠಲ್‌ ಮಲ್ಯ ರಸ್ತೆಯನ್ನು ಹಾದು ರಿಚ್ಮಂಡ್‌ ಸರ್ಕಲ್‌ ಬಳಿಗೆ ತಲುಪಿತ್ತು. ಆಗ ಕುಲಕರ್ಣಿಗೆ ಅದೇನು ವಿಶ್ವಾಸ ಬಂತೋ ಗೊತ್ತಿಲ್ಲ. ‘ಸರ್, ಆಫೀಸ್‌ಗೆ ಕಾಲ್‌ ಮಾಡಿ ಹೇಳಿ, ಕಂಪ್ಲೀಟ್‌ ಲೈವ್‌ ಫಾಲೋಅಪ್‌ ಮಾಡ್ತೀವಿ. ನೀವು ಫೋನೋ ಕೊಡ್ತಾ ಹೋಗಿ. ಕನೆಕ್ಟ್‌ ಮಾಡೋಕೆ ಹೇಳಿ..’ ಎಂದು ಸೀರಿಯಸ್‌ ಆಗಿ ಮುಂದಿರುವ ಕಾರು ಫ್ರೇಮಿಂದ ಹೊರಹೋಗದಂತೆ ಕ್ಯಾಮರಾ ಲೆನ್ಸ್‌ ಮೇಲೆಯೇ ಕಣ್ಣಿಟ್ಟು ಕಮಾಂಡ್‌ ಕೊಟ್ಟಿದ್ದ. ಈ ಕುಲಕರ್ಣಿಗೆ ಕೆಲವೊಮ್ಮೆ ಮೈಮೇಲೆ ದೆವ್ವ ಹೊಕ್ಕಂತೆ ಕೆಲಸ ಮಾಡೋದು ಗೊತ್ತು. ಆಗ ಅವನು ಹೇಳಿದ ಮಾತಿಗೆ ‘ದೂಸ್ರಾ ಮಾತಾಡದೆ ಜಸ್ಟ್‌ ಫಾಲೋ ಮಾಡದಷ್ಟೇ ನನ್ ಕೆಲಸ’ ಅಂತ ಅನುಭವದಿಂದಲೇ ಗೊತ್ತಾಗಿತ್ತು. ಹೀಗಾಗಿ ಕುಲಕರ್ಣಿ ಮಾತಿನಂತೆ ಇನ್‌ಪುಟ್‌ಗೆ ಫೋನ್‌ ಮಾಡಿದ್ದೆ. ಲೈವ್‌ ಕನೆಕ್ಟ್‌ ಮಾಡಿ, ಕಂಪ್ಲೀಟ್‌ ಲೈವ್‌ ಫಾಲೋ ಮಾಡ್ತೀವಿ ಅಂದಿದ್ದೆ. ಸರಿ. ಸುದ್ದಿಮನೆಯಲ್ಲಿ ಕೆಲಸ ಮಾಡುವವರಿಗೆ ಇದಕ್ಕಿಂತ ಖುಷಿಯ ಸುದ್ದಿ ಇರೋದಿಕ್ಕೆ ಸಾಧ್ಯವೇ ಇಲ್ಲ. ಅವರೂ ‘ಡನ್‌’ ಅಂತ ಫೋನಿಟ್ಟವರೇ ‘ಟಣ್‌’ ಅಂತ ಆ ಕಡೆಯಿಂದ ಕರೆ ಮಾಡಿ ಕನೆಕ್ಟ್‌ ಮಾಡಿಯೇ ಬಿಟ್ಟರು. ಆ ಕಡೆಯಿಂದ ಆ್ಯಂಕರಿಂಗ್‌ ಮಾಡ್ತಿದ್ದ ರೆಹಮಾನ್‌ ಹಾಸನ್, ಈಗೆಲ್ಲಿಗೆ ತಲುಪಿದ್ದೀರಿ ಹರಿಪ್ರಸಾದ್‌.. ಯಡಿಯೂರಪ್ಪ ಅವರು ಈಗ ಎಲ್ಲಿಗೆ ತಲುಪಿದ್ದಾರೆ ಎಂದು ಪ್ರಶ್ನೆ ಕೇಳಿದ್ದ. ಅಲ್ಲಿಂದ ಶುರುವಾಯ್ತು ನೋಡಿ ಅಂದು ಮೆಗಾ ಫೋನೋ.. ಸರಿಯಾಗಿ ರಿಚ್ಮಂಡ್‌ ಸರ್ಕಲ್‌ ದಾಟಿ ಲ್ಯಾಂಗ್‌ಫೋರ್ಡ್‌ ರೋಡ್‌ಗೆ ಎಂಟ್ರಿಯಾಗುವಾಗ ಶುರುವಾಗಿದ್ದ ಫೋನೋ ನಿಂತಿದ್ದು ಯಡಿಯೂರಪ್ಪ ಅವರು ಪರಪ್ಪನ ಅಗ್ರಹಾರ ಜೈಲಿನೊಳಗೆ ಕಾಲಿಟ್ಟ ಮೇಲೆ.

ಇದನ್ನ ಓದಿ : Reporter‘s Diary: ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು

ಸುಮಾರು 30 ನಿಮಿಷಗಳ ಕಾಲ ನನ್ನ ಮುಂದೆ ನಡೆಯುತ್ತಿರುವ ಘಟನೆಗಳನ್ನು ಯಾವುದೇ ಉತ್ಪ್ರೇಕ್ಷೆ, ಇಲ್ಲದೆ, ಆಯಾ ಸ್ಥಳಗಳ ವಿವರ ಕೊಡುತ್ತಾ, ವೀಕ್ಷಕರಿಗೆ ಸರಿಯಾದ ಸುದ್ದಿ ಮುಟ್ಟಿಸುವುದಷ್ಟೇ ನಮ್ಮ ಮುಂದಿದ್ದ ಆದ್ಯತೆ. ನಡುವೆ ವೀಡಿಯೋ ಕೈಕೊಟ್ಟರೆ ಅಲ್ಲಿಗೆ ಫೋನೋ ಕೊಡೋದು ಕೂಡ ಕಟ್‌ ಆಗ್ತಿತ್ತು. ಆದ್ರೆ ಅವತ್ತು ನಮ್ಮ ಲೈವ್‌ಕಿಟ್‌ನಲ್ಲಿ ನಿರಂತರವಾಗಿ ಲೈವ್‌ ಮಾಡಲು ಸಾಧ್ಯವಾಗಿದ್ದೂ ಒಂದು ಪವಾಡವೇ ಸರಿ. ಹಾಗೆ ಲ್ಯಾಂಗ್‌ಫೋರ್ಡ್‌  ದಾಟಿ ಹೊಸೂರು ರಸ್ತೆಗೆ ಎಂಟ್ರಿಯಾಗುವ ವೇಳೆಗೆ ಸರಿಯಾಗಿ ಯಡಿಯೂರಪ್ಪ ಅವರು ಕುಳಿತಿದ್ದ ಪೊಲೀಸ್‌ ವಾಹನ ನಮಗಿಂತ ಸುಮಾರು 100 ಮೀಟರ್‌ ಮುಂದೆ ಹೋಗಿತ್ತು. ಅದನ್ನು ಹಿಂಬಾಲಿಸಲು ಒಂದೆಡೆ ಡ್ರೈವರ್‌ ಯೋಗಿಗೆ ಕೈಯಲ್ಲೇ ಸನ್ನೆ ಮಾಡುತ್ತಿದ್ದೆವು. ಪಾಪ ಆ ಬಡಜೀವ ಕೂಡ ಅದ್ಯಾವ ಪರಿ ಡ್ರೈವ್‌ ಮಾಡಿದ್ದ ಅಂದರೆ, ಒಂದಿಷ್ಟೂ ಅಂಜದೆ ಅಕ್ಕಪಕ್ಕದಿಂದ ನುಸುಳಿ ಬರುತ್ತಿದ್ದ ಬೇರೆ ಚಾನೆಲ್‌ಗಳ ವಾಹನಗಳಿಂದ ತಪ್ಪಿಸಿ, ಮುಂದಕ್ಕೆ ನುಗ್ಗುತ್ತಿದ್ದ. ಆದರೆ ಅಷ್ಟೊತ್ತಿಗೆ ಒಂದು ಸ್ಯಾಂಟ್ರೋ ವಾಹನ ನಮಗೆ ಪದೇ ಪದೆ ಅಡ್ಡ ಬರುತ್ತಿತ್ತು. ಅದೊಂಥರಾ ಯಡಿಯೂರಪ್ಪ ಅವರಿದ್ದ ಪೊಲೀಸ್‌ ವಾಹನ ನಮಗೆ ಕಾಣಬಾರದು ಎಂದು ತಡೆಯೊಡ್ಡುವ ಪ್ರಯತ್ನದ ಭಾಗವಾಗಿತ್ತು. ಬಹುಷಃ ಅದು ಹೊನ್ನಾಳಿ ಕಡೆಯ ವಾಹನ ಇದ್ದಿರಬೇಕು ಅಂತ ನೆನಪು.

ಅಲ್ಲಿಯ ಬೆಂಬಲಿಗರೊಬ್ಬರ ವಾಹನ ಯಡಿಯೂರಪ್ಪ ಅವರು ಸಾಗುತ್ತಿದ್ದ ಬೆಂಗಾವಲಿಗಿದ್ದ ಪೊಲೀಸ್‌ ವಾಹನಗಳ ಹಿಂದೆಯೇ ಅತ್ತಿಂದಿತ್ತ. ಇತ್ತಿಂದತ್ತ ಹೋಗುತ್ತಲೇ ಮಾಧ್ಯಮದ ಕಾರುಗಳಿಗೆ ಅಡ್ಡಿಪಡಿಸುತ್ತಾ ಸಾಗಿತ್ತು. ನೀವು ವೀಡಿಯೋ ಗೇಮ್‌ ರೇಸ್‌ನಲ್ಲಿ ಕಾರು ಓಡಿಸುವಾಗ ನಡುವೆ ಕೆಲವೊಂದು ಕಾರುಗಳು ಸಡನ್ನಾಗಿ ರೈಟ್-ಲೆಫ್ಟ್ ಅಂತ ಅಡ್ಡ ಬರುತ್ತವಲ್ಲಾ ಹಾಗಿತ್ತು ಆ ಕಾರಿನ ಆಟ. ಸರಿಯಾಗಿ ಮಡಿವಾಳದ ಬಳಿಯಿರುವ ಅಂಡರ್‌ ಪಾಸ್‌ ಬಳಿ ಬಂದಾಗ, ಅಲ್ಲಿ ಎದುರಿಗಿದ್ದ ಕಾರಿನವನ ಕಾಟದಿಂದಾಗಿ ನಮ್ ಯೋಗಿ ಒಂದು ದೊಡ್ಡ ಹೊಂಡಕ್ಕೆ ನಮ್ಮ ಕಾರನ್ನು ದಢಾರ್‌.. ಅಂತ ಎಗರಿಸಿದ್ದ.. ಒಮ್ಮೆ ಜೀವ ಹಾಗೆಯೇ ಮೇಲೆ ಹಾರಿ ಕೆಳಗೆ ಕೂತಿತ್ತು. ಆದ್ರೆ ಫೋನಲ್ಲಿ ಮಾತ್ರ ರಿಪೋರ್ಟಿಂಗ್‌ ನಿಂತಿರಲಿಲ್ಲ.

ಅದು ಸರಿ ಅಷ್ಟೊತ್ತು ಫೋನೋ ಕೊಡೋದಿಕ್ಕೆ ವಿಷಯ ಬೇಕಲ್ಲ ಅಂತ ಅನ್ನಿಸಬಹುದು. ಟೀವಿಯವರು ಬಿಡಿ, ಹೇಳಿದ್ದನ್ನೇ ಹೇಳ್ತಾ ಹೋಗ್ತೀರಿ ಅಂತಲೂ ಹೇಳಬಹುದು. ಆದ್ರೆ ಅಂದು ಯಡಿಯೂರಪ್ಪ ಅವರು ಕುಳಿತಿದ್ದ ವಾಹನದ ನಂಬರ್‌ ಹೇಳ್ತಾ ಇದ್ದ ರೀತಿ ಈಗಲೂ ನಗು ತರಿಸುತ್ತದೆ. ಆ ನಂಬರ್‌ ಒಮ್ಮೊಮ್ಮೆ ಒಂದೊಂದು ರೀತಿ ಕಾಣ್ತಿತ್ತು. ನನ್ನ ಕಣ್ಣು ಆ ಕ್ಷಣದಲ್ಲಿ ಅಂದಾಜಿಸಿದ ನಂಬರ್‌ ಹೇಳುತ್ತಲೇ, ‘ರಹಮಾನ್‌, ಹೀಗಂತ ಕಾಣ್ತಿದೆ, ಆದ್ರೂ ಇದು ಖಚಿತವಲ್ಲ. ಆ ಕಾರಿನ ಸಮೀಪಕ್ಕೆ ಹೋದಾಗ ನಾನು ಕನ್ಫರ್ಮ್‌ ಮಾಡ್ತೀನಿ. ಈಗ ನನ್ನ ಎದುರಲ್ಲಿರುವ ಸ್ಯಾಂಟ್ರೋ ಕಾರು ನೋಡಿ, ಇದು ಅಡ್ಡಲಾಗಿ ಬಂದು ಯಡಿಯೂರಪ್ಪ ಅವರ ಕಾರಿನ ಸಮೀಪಕ್ಕೆ ನಾವು ಹೋಗದಂತೆ ತಡೆಯುತ್ತಿದೆ’ ಎಂದು ಹೇಳುತ್ತಾ ನಡುನಡುವೆ ಕಾರಿನ ನಂಬರ್‌ ಅನ್ನು ಅಪ್ಡೇಟ್‌ ಮಾಡ್ತಿದ್ದೆ. ರೂಪೇನ ಅಗ್ರಹಾರ ದಾಟಿದ ನಂತರ ಬೊಮ್ಮಸಂದ್ರ ಬಳಿಗೆ ಬರುವಾಗ ಅದು ಹೇಗೋ ಆ ಸ್ಯಾಂಟ್ರೋ ಕಾರಿನ ಕಾಟ ತಪ್ಪಿಸಿಕೊಳ್ಳುವಲ್ಲಿ ಡ್ರೈವರ್‌ ಯೋಗೀಶ್‌ ಯಶಸ್ವಿಯಾಗಿದ್ದ.

ಇದನ್ನೂ ಓದಿ : Reporter’s Diary: ಕೋಲಾರದ ಗಡಿಭಾಗದಿಂದ ‘ನಂಗಾನಾಚ್’ ಎಂಬ ಭೂತವನ್ನು ಓಡಿಸಿದ ಆ ದಿನಗಳು​

ಅಲ್ಲಿಂದ ಮುಂದಕ್ಕೆ ಯಡಿಯೂರಪ್ಪ ಅವರಿದ್ದ ಕಾರಿಗೆ ಸರಿಯಾಗಿ ಹಿಂದೆಯೇ ನಾವು ಆಲ್‌ಮೋಸ್ಟ್‌ ಕೂಡ್ಲು ಗೇಟ್‌ವರೆಗೂ ಹೋಗಿದ್ದೆವು. ಅಲ್ಲಿಂದ ಎಡಕ್ಕೆ ತಿರುವು ತೆಗೆದುಕೊಳ್ಳುವಲ್ಲಿ ಮತ್ತೆ ಬಿಜೆಪಿಯ ಸುಮಾರು ಕಾರ್ಯಕರ್ತರು ಜಮಾಯಿಸಿದ್ದರು. ಇದರ ನಡುವೆ ಇದ್ದಕ್ಕಿದ್ದಂತೆ ಪೊಲೀಸ್‌ ವಾಹನಗಳು ಸಂಖ್ಯೆ, ಬೆಂಬಲಿಗರ ಸಂಖ್ಯೆ ಹೆಚ್ಚಾಯ್ತು. ಅವೆಲ್ಲವನ್ನೂ ನಿಭಾಯಿಸಿ, ಪರಪ್ಪನ ಅಗ್ರಹಾರ ಮುಖ್ಯ ರಸ್ತೆಯಿಂದ ಜೈಲಿನ ಕಡೆಗೆ ಎಡಕ್ಕೆ ತಿರುವು ತೆಗೆದುಕೊಳ್ಳುವಲ್ಲಿ ಪೊಲೀಸರು ನಮ್ಮ ವಾಹನ ತಡೆದಿದ್ದರು. ಅಲ್ಲಿಂದ ನಂತರ ಓಡುತ್ತಲೇ ಮುಂದಿನ ಇನ್ನೂರು ಮೀಟರ್ ಸಾಗಿದ್ದೆವು. ಫೋನೋ ಕೊಡೋದು ಮಾತ್ರ ನಿಂತಿರಲಿಲ್ಲ. ಅಂತಿಮವಾಗಿ ಜೈಲಿನ ಎದುರು ತಲುಪಿದ ಮೇಲೆ ಅಲ್ಲಿಂದಲೇ ಲೈವ್ ಫ್ರೇಮ್‌ಗೆ ನಿಂತು ಮಾತು ನಿಲ್ಲಿಸಿದಾಗ ಈ ಕಡೆಯಿಂದ ರಹಮಾನ್‌ ‘ವಂಡರ್‌ಫುಲ್‌ ಹರಿಪ್ರಸಾದ್ ನೀವು ಕೊಟ್ಟಿರುವ ಲೈವ್‌ ಅಪ್ಡೇಟ್ಸ್​ಗೆ. ವೀಕ್ಷಕರಿಗೆ ಸಂಪೂರ್ಣ ವಿವರಣೆಯನ್ನು ನೀವು ಅಲ್ಲಿಂದಲೇ ಕೊಟ್ರಿ’ ಅಂತ ಹೇಳಿದಾಗ ಒಬ್ಬ ಸಾಮಾನ್ಯ ವರದಿಗಾರನಾಗಿದ್ದ ನನಗೆ ಗೋಲ್ಡ್‌ ಮೆಡಲ್ ಸಿಕ್ಕಷ್ಟು ಸಮಾಧಾನವಾಗಿತ್ತು.

ಇಲ್ಲಿ ಯಡಿಯೂರಪ್ಪ ಅವರು ಜೈಲಿಗೆ ಹೋಗಿದ್ದರಿಂದ ಖುಷಿಯಾಗಲಿ, ದುಃಖವಾಗಲಿ ಓರ್ವ ಪತ್ರಕರ್ತನಾಗಿ ನನಗೆ ಆಗಿಲ್ಲ. ಅದನ್ನೊಂದು ವರದಿ ಮಾಡುವುದಷ್ಟೇ ನನ್ನ ಜವಾಬ್ದಾರಿಯಾಗಿತ್ತು. ಆದರೆ ಇಂತಹ ವರದಿಗಾರಿಕೆಯನ್ನು ಟಿವಿಯಲ್ಲಿ ನೋಡುವವರಿಗೆ ಕೆಲವೊಮ್ಮೆ ‘ಹೇಳಿದ್ದನ್ನೇ ಹೇಳ್ತಾರೆ’ ಎಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಒಂದು ತಂಡವಾಗಿ ಕೆಲಸ ಮಾಡುವ ನಮ್ಮಲ್ಲಿ ವರದಿಗಾರನಿಗೆ ಅಂತಿಮ ಕ್ರೆಡಿಟ್‌ ಸಿಕ್ಕರೂ ಕ್ಯಾಮರಾಮನ್ ಮತ್ತು ಕಾರು ಚಾಲಕ ಕೂಡ ಇಂತಹ ಶಹಬ್ಬಾಸ್‌ಗಿರಿಗೆ ಅರ್ಹರಾಗಿರುತ್ತಾರೆ. ಅವರಿಲ್ಲದಿದ್ದರೆ ಟಿವಿ ರಿಪೋರ್ಟಿಂಗ್‌ನಲ್ಲಿ ವರದಿಗಾರನಿಗೆ ಇಂತಹ ವರದಿಗಳನ್ನು ಯಶಸ್ವಿಯಾಗಿ ಮಾಡುವುದು ಕಷ್ಟಸಾಧ್ಯ.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 12:05 pm, Sat, 11 June 22