Reporter’s Diary: ಕೋಲಾರದ ಗಡಿಭಾಗದಿಂದ ‘ನಂಗಾನಾಚ್’ ಎಂಬ ಭೂತವನ್ನು ಓಡಿಸಿದ ಆ ದಿನಗಳು
Nanganach : ಪೊಲೀಸರಿಗೂ ಗೊತ್ತಿರದ ಇಂಥ ಸುದ್ದಿಯನ್ನು ಬಯಲಿಗೆಳೆಯುತ್ತೇನೆಂಬ ಧೈರ್ಯದಿಂದ ನಾನಲ್ಲಿಗೆ ವೇಷ ಮರೆಸಿಕೊಂಡು ಹೋದೆ, ಹಳ್ಳಿಯವರಂತೆ ಪಟಾಪಟಿ ಚಡ್ಡಿ, ಹೆಗಲ ಮೇಲೆ ಟವೆಲ್. ಮರ ಏರಿ ಕ್ಯಾಮರಾ ಹಿಡಿದು ಕೂತೆ. ಆದರೆ...
Reporter’s Diary: ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಾಲೂಕುಗಳು ಆಂಧ್ರಕ್ಕೆ ತಮ್ಮ ಗಡಿಯನ್ನು ಹಂಚಿಕೊಂಡಿವೆ. ಕೇವಲ ಗಡಿಯನ್ನಷ್ಟೇ ಅಲ್ಲದೆ ತೆಲುಗಿನ ಕೆಲವು ಸಂಪ್ರದಾಯಗಳನ್ನು, ಆಚರಣೆಗಳನ್ನು ಕೂಡ ಹಂಚಿಕೊಂಡಿವೆ. ಹಾಗಾಗಿ ಆಂಧ್ರ, ತಮಿಳುನಾಡಿನ ಸಾಂಸ್ಕೃತಿಕ ಆಚರಣೆಗಳು ಸರ್ವೇಸಾಮಾನ್ಯ. ಅಲ್ಲಿಯ ಹಬ್ಬ ಹರಿದಿನಗಳು, ಜಾತ್ರೆ, ರಥೋತ್ಸವಗಳಲ್ಲಿ ಮನೋರಂಜನೆಗಾಗಿ ಪೌರಾಣಿಕ ನಾಟಕಗಳು, ಹರಿಕಥೆಗಳು ಏರ್ಪಡುತ್ತಿರುತ್ತವೆ. 2007-8ರಲ್ಲಿ ಆಗಷ್ಟೇ ಕೋಲಾರ ಜಿಲ್ಲೆಯ ಪ್ರತಿನಿಧಿಯಾಗಿ ಸೇರಿದ ಸಂದರ್ಭ. ನನ್ನನ್ನು ತಲುಪಿದ ಸುದ್ದಿಯೊಂದು ವಿಚಿತ್ರ ಕುತೂಹಲವನ್ನು ಕೆರಳಿಸಿತು. ಅದು ಗಡಿ ಪ್ರದೇಶಗಳಲ್ಲಿ ನಂಗಾನಾಚ್, ಬೀಡಿ ಡ್ಯಾನ್ಸ್ ಅಥವಾ ರೆಕಾರ್ಡ್ ಡ್ಯಾನ್ಸ್ ಹೆಸರಲ್ಲಿ ನಡೆಯುತ್ತಿದ್ದ ಬೆತ್ತಲೆ, ಅರೆಬೆತ್ತಲೆ ನೃತ್ಯ. ಇಡೀ ರಾಜ್ಯದ ಜನತೆ ಬೆಚ್ಚಿಬಿದ್ದಿತ್ತು. ನಂಗಾನಾಚ್ ಅನ್ನು ಸಂಪೂರ್ಣವಾಗಿ ನಮ್ಮ ರಾಜ್ಯದಿಂದ ಹೊಡೆದೋಡಿಸುವಲ್ಲಿ ಟಿವಿ9 ಕನ್ನಡ ಯಶಸ್ವಿಯಾಗಿತ್ತು. ರಾಜೇಂದ್ರ ಸಿಂಹ, ಟಿವಿ9 ಕನ್ನಡ ಪ್ರತಿನಿಧಿ, ಕೋಲಾರ
ಸುದ್ದಿ ತಲುಪಿದಾಗ ನನಗೆ ಈ ನೃತ್ಯಗಳ ಬಗ್ಗೆ ಅರಿವಿರಲಿಲ್ಲ. ಇವೆಲ್ಲ ಎಂಥ ನೃತ್ಯಗಳು ಎಂದು ಸ್ಥಳೀಯ ಮೂಲಗಳಲ್ಲಿ ವಿಚಾರಿಸಿದಾಗ, ನಿಜಕ್ಕೂ ಆಶ್ಚರ್ಯವಾಯಿತು. ಅದು ಹೇಗೆ ಸಾವಿರಾರು ಜನರ ಮಧ್ಯೆ ವೇದಿಕೆಯ ಮೇಲೆ ಯುವತಿಯರು ಬೆತ್ತಲೆ, ಅರೆಬೆತ್ತಲೆ ನೃತ್ಯ ಮಾಡಲು ಸಾಧ್ಯ? ಕುಟುಂಬ ಸಮೇತ ಜಾತ್ರೆ, ರಥೋತ್ಸವಕ್ಕೆ ಹೋದ ಜನ ಇದನ್ನು ನೋಡಲಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಹುಟ್ಟಿ ಇಂಥ ಅಸಭ್ಯ ಚಟುವಟಿಕೆಯನ್ನು ನಿಲ್ಲಿಸಲೇಬೇಕೆಂದು ನಿರ್ಧರಿಸಿ ಅದಕ್ಕೆ ಬೇಕಾದ ಕೆಲ ತಯಾರಿಗಳನ್ನು ಮಾಡಿಕೊಂಡೆ.
ಮಾರುವೇಷದಲ್ಲಿ ಹೋದೆವು
ಸಾವಿರಾರು ಜನರಿರುವ ಜಾಗ ಅದೂ ರಾತ್ರಿ! ಅಲ್ಲಿ ಸೇರುವವರಲ್ಲಿ ಸಾಮಾನ್ಯವಾಗಿ ಕುಡುಕರೇ. ಇಂಥ ಸಂದರ್ಭದಲ್ಲಿ ಒಬ್ಬನೇ ಹೋಗುವುದು ಸರಿಯಲ್ಲ ಎನ್ನಿಸಿ ಕೆಲ ಸ್ನೇಹಿರನ್ನು ಜೊತೆ ಕರೆದುಕೊಂಡು ಹೋಗುವುದು ಎಂದು ನಿರ್ಧರಿಸಿದೆ. ಹೀಗೆ ಹೋದರೆ ಹೇಗೆ? ನಾವೆಲ್ಲರೂ ಹಳ್ಳಿಯವರಂತೆ ಪಟಾಪಟಿ ಚಡ್ಡಿಗಳನ್ನು ಹಾಕಿಕೊಂಡು, ಹೆಗಲ ಮೇಲೆ ಒಂದೊಂದು ಟವೆಲ್ ಹಾಕಿಕೊಂಡು ವೇಷ ಮರೆಸಿಕೊಂಡೆವು. ಹತ್ತು ಗಂಟೆಯಾಗಿತ್ತು, ನಮ್ಮ ಜೊತೆಗೆ ಸಣ್ಣದೊಂದು ಹ್ಯಾಂಡಿಕ್ಯಾಮ್ ಇತ್ತು. ಸ್ನೇಹಿತರ ಕಾರಿತ್ತು. ಆ ಗ್ರಾಮಕ್ಕೆ ಹೋಗಿ ಇಳಿದಾಗ ಜಾತ್ರೆ ರಂಗೇರಿದ್ದು ದೂರದಿಂದಲೇ ತಿಳಿಯುತ್ತಿತ್ತು. ದೂರದಲ್ಲೇ ಕಾರ್ ನಿಲ್ಲಿಸಿ ಜಾತ್ರೆಯತ್ತ ನಡೆದೆವು.
ಇದನ್ನೂ ಓದಿ : Reporter‘s Diary: ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು
ಪೌರಾಣಿಕ ನಾಟಕದ ವೇದಿಕೆ ಖಾಲಿ!
ಅದು ಬಂಗಾರಪೇಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಜಾತ್ರೆ. ಒಳಹೊಕ್ಕಾಗ ರಾತ್ರಿ ಹನ್ನೆರಡೂವರೆಯಾಗಿತ್ತು. ಒಂದು ಭಾಗದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಡೆಯುತ್ತಿತ್ತು, ನೋಡಿದರೆ, ಬೆರಳೆಣಿಕೆಯಷ್ಟು ಜನ ಅಲ್ಲಿದ್ದರು. ಬಹುಶಃ ಜಾತ್ರೆ, ಪ್ರದರ್ಶನಗಳೆಲ್ಲವೂ ಮುಗಿದು ಜನ ಮನೆಗಳಿಗೆ ವಾಪಾಸಾಗಿರಬಹುದು ಎಂದುಕೊಂಡು ವಾಪಸಾಗೋಣ ಎಂದುಕೊಂಡೆವು. ಆದರೆ ಸ್ವಲ್ಪ ದೂರದಿಂದ ಕೇಳಿಬರುತ್ತಿದ್ದ ಅಬ್ಬರದ ಸಿನೆಮಾ ಹಾಡು ನಮ್ಮ ಗಮನ ಸೆಳೆಯಿತು. ಆ ಶಬ್ದದ ಜಾಡುಹಿಡಿದು ಹೊರಟು ಸ್ಥಳ ತಲುಪಿದಾಗ ದೊಡ್ಡ ಶಾಕ್ ಕಾದಿತ್ತು. ಏಕೆಂದರೆ ಇಡೀ ಜಾತ್ರೆಯ ಜನ ಅಲ್ಲಿದ್ದ ವೇದಿಕೆಯ ಬಳಿ ನೆರೆದಿತ್ತು- ಚಿಕ್ಕವರು, ದೊಡ್ಡವರು, ಮಹಿಳೆಯರು, ಮಕ್ಕಳು, ಅಪ್ಪ-ಮಗ ಹೀಗೆ ಯಾವುದೇ ವಯಸಿನ ಬೇಧವಿಲ್ಲದೆ. ಸಿನಿಮಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದವರನ್ನು ನೋಡುತ್ತ ವೇದಿಕೆಗೆ ಒತ್ತಾಗಿ ಅಂಟಿಕೊಂಡಿದ್ದರು. ಓಹ್ ಹಾಗಿದ್ದರೆ ಇದೇ ನಂಗಾನಾಚ್! ಎಂಬುದಾಗಿ ತಿಳಿಯಿತು.
ವೇದಿಕೆಯ ಮೇಲೆ ತೆಲುಗು ಸಿನಿಮಾ ಹಾಡಿಗೆ ಅರೆಬರೆ ಬಟ್ಟೆ ತೊಟ್ಟ ಯುವತಿಯರೊಂದಿಗೆ ಯುವಕರು ಡ್ಯಾನ್ಸ್ ಮಾಡುತ್ತಿದ್ದರೆ ಜನಸಮೂಹದಿಂದ ಜೋರಾಗಿ ಚಪ್ಪಾಳೆ, ಶಿಳ್ಳೆ. ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ ಯುವತಿಯರು ಅಸಭ್ಯವಾಗಿ ಸನ್ನೆಗಳನ್ನು ಮಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದರೆ ಜನರು ಹುಚ್ಚೆದ್ದು ವೇದಿಕೆ ಎದುರೇ ಕುಣಿದು ಕುಪ್ಪಳಿಸುವುದು. ಸಮೂಹಸನ್ನಿಯಂತೆ ಎಲ್ಲರೂ ಮೈಮರೆತಿದ್ದರು. ಹತ್ತಿರದಲ್ಲೇ ಇದ್ದ ಮರವೊಂದನ್ನು ಏರಿ ಕುಳಿತು ಹ್ಯಾಂಡಿಕ್ಯಾಮ್ನಲ್ಲಿ ಶೂಟ್ ಮಾಡಿಕೊಳ್ಳಲು ಆರಂಭಿಸಿದೆ. ನನ್ನ ಜೊತೆ ಬಂದ ಇನ್ನೊಂದಿಬ್ಬರು ದೂರದಲ್ಲೇ ನಿಂತು ಸುತ್ತಮುತ್ತಲಿನ ಬೆಳವಣಿಗೆಯನ್ನು ಗಮನಿಸುತ್ತಿದ್ದರು. ಮಧ್ಯರಾತ್ರಿ ಕಳೆಯುತ್ತಿದ್ದಂತೆ ಅಲ್ಲಿ ವೇದಿಕೆ ಮೇಲೆ ಕುಣಿಯುತ್ತಿದ್ದ ಜನರ ಬಟ್ಟೆಗಳು ಕಡಿಮೆಯಾಗುತ್ತಾ ಹೋದಂತೆ ಜನರ ಉತ್ಸಾಹ ಅತಿರೇಕಕ್ಕೇರಿತು. ಪಕ್ಕದಲ್ಲೇ ಸಾರಾಯಿ ಅಂಗಡಿ ಇತ್ತು. ದುಪ್ಪಟ್ಟು ಕೊಟ್ಟು ಅಮಲೇರಿಸಿಕೊಂಡು ನಂಗಾನಾಚ್ನ ಕಡಲಲ್ಲಿ ಮುಳುಗಿಹೋದರು.
ಇದನ್ನೂ ಓದಿ : Reporter’s Diary: ನಿರ್ಜನ ಪ್ರದೇಶದಲ್ಲಿ ಬೆನ್ನ ಹಿಂದೆ ನಿಂತವನ ಕಂಡು ಎದೆಬಡಿತವೇ ನಿಂತಿತ್ತು
ಜನಪ್ರತಿನಿಧಿಗಳ ಸ್ಟೆಪ್
ಇಂಥ ಅಸಭ್ಯತನವನ್ನು ವರದಿ ಮೂಲಕ ಬಯಲಿಗೆಳೆಯುತ್ತೇನೆಂಬ ಉಮೇದಿ, ಧೈರ್ಯದೊಂದಿಗೆ ಹೋದ ನಾನು, ಬಹುಶಃ ಇದು ಪೊಲೀಸರಿಗೂ ಗೊತ್ತಿಲ್ಲವೇನೋ ಎಂದುಕೊಂಡಿದ್ದೆ. ಆದರೆ ನನ್ನ ಊಹೆಗೂ ಮೀರಿದ ಘಟನೆಯನ್ನು ಕಂಡು ಬೆಚ್ಚಿದೆ. ವೇದಿಕೆಯ ಬಳಿ ಪೊಲೀಸರು ವೇದಿಕೆಯ ಈ ದೃಶ್ಯ ನೋಡಿ ಮಜಾ ಉಡಾಯಿಸುತ್ತಿದ್ದರು. ಅಯ್ಯೋ ಪೊಲೀಸರ ಕಥೆಯೇ ಹೀಗಾಯಿತಲ್ಲ ಎಂದುಕೊಳ್ಳುವಷ್ಟರಲ್ಲಿ ಗಮನ ಮತ್ತೆ ವೇದಿಕೆಯ ಕಡೆ ಹೋಯಿತು. ನೋಡಿದರೆ, ಕೆಲ ಸ್ಥಳೀಯ ಜನಪ್ರತಿನಿಧಿಗಳು ಅರೆಬೆತ್ತಲೆ ನೃತ್ಯದ ಮಾಡುತ್ತಿದ್ದ ಯುವತಿರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಕೇವಲ ನಂಗಾನಾಚ್ ಕುರಿತು ಸುದ್ದಿ ಮಾಡಲು ಹೋದ ನಮಗೆ ಅಂದರೆ ಮಾಧ್ಯಮದವರಿಗೆ ಇದೊಂದು ಬೋನಸ್! ಕೊನೆಗೆ ಸುದ್ದಿಯ ಜಾಡು ಹಿಡಿದು ಹೊರಟಾಗ ಇಂಥ ಅಸಭ್ಯ ಪದ್ಧತಿಗೆ ಬೆಂಬಲ ಕೊಟ್ಟಿರುವವರು ಯಾರೆಂದು ತಿಳಿಯಿತು. ಸಾಕ್ಷಿಸಮೇತ ಎಲ್ಲವನ್ನೂ ಶೂಟ್ ಮಾಡಿಕೊಂಡು ಬೆಳಗಿನ ಜಾವ ವಾಪಾಸಾದೆವು.
ಪೊಲೀಸ್ ಅಧಿಕಾರಿಗಳು ಸಸ್ಪೆಂಡ್
ಈ ವರದಿ ಪ್ರಸಾರ ಇಡೀ ರಾಜ್ಯದಲ್ಲಿ ಜೋರಾಗಿಯೇ ಸದ್ದು ಮಾಡಿತು. ಇದಕ್ಕೆ ಜನರಿಂದಲೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿತು. ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದ ಜನಪ್ರತಿನಿಧಿಗಳು ಕೆಲವು ದಿನಗಳ ಕಾಲ ಕಣ್ಮರೆಯಾದರೆ, ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಆದರು. ಈ ನೃತ್ಯವನ್ನು ವಿರೋಧಿಸುವ ಗ್ರಾಮಸ್ಥರಿಂದ ಕರೆಗಳು ಬರಲಾರಂಭಿಸಿದವು. ಹೀಗೆ ಕೆಲ ದಿನಗಳವರೆಗೆ ನಾವು ವೇಷ ಮರೆಸಿಕೊಂಡು ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ನಂಗಾನಾಚ್ ಬಗ್ಗೆ ಮೇಲಿಂದ ಮೇಲೆ ಸುದ್ದಿ ಮಾಡಿದ ಪರಿಣಾಮ ಒಂದೆರಡು ವರ್ಷಗಳಲ್ಲಿ ಈ ಅಸಭ್ಯತನ ಆ ಜಿಲ್ಲೆಯಿಂದ ಕಣ್ಮರೆಯಾಯಿತು.
ಪ್ರತಿಕ್ರಿಯೆಗಾಗಿ : tv9kannadadigital@gmail.com