Reporter‘s Diary : ಆ ಹಂತಕನ ಕರೆ ‘ಏಪ್ರಿಲ್ ಫೂಲ್’ ಆಗಬಾರದಿತ್ತೆ?

Murder : ‘ಬೇಗ ಕ್ಯಾಮರಾ ತಗೊಂಡು ಬರಬೇಕು. ಹೆಂಡ್ತಿ ತವರುಮನೇಲಿದಾಳೆ. ಹಬ್ಬಕ್ಕೆ ಊರಿಗೆ ಕರೆದರೆ ನಂಜೊತೆ ಬರ್ತಿಲ್ಲ. ಅತ್ತೆಮಾವ ಮಗಳಿಗೆ ಬುದ್ಧಿ ಹೇಳ್ತಿಲ್ಲ. ಆ ಅತ್ತೆಮಾವನನ್ನು ಮಚ್ಚಿನಿಂದ ಹೊಡೆದು ಕೊಲ್ತೀನಿ. ಬೇಗ ಬಂದು ಲೈವ್ ವಿಡಿಯೋ ಮಾಡಿ’

Reporter‘s Diary : ಆ ಹಂತಕನ ಕರೆ ‘ಏಪ್ರಿಲ್ ಫೂಲ್’ ಆಗಬಾರದಿತ್ತೆ?
ಚಿತ್ರದುರ್ಗ ಜಿಲ್ಲಾ ವರದಿಗಾರ ಬಸವರಾಜ ಮುದನೂರು
Follow us
ಶ್ರೀದೇವಿ ಕಳಸದ
|

Updated on: May 07, 2022 | 6:19 AM

Reporter’s Diary : ಅದು 2009ರ ಯುಗಾದಿ ಹಬ್ಬಕ್ಕೂ ಮೊದಲಿನ ಸೂಪರ್ ಸಂಡೇ. ದುರ್ಗದ ಬಹುತೇಕ ಹೋಟೆಲ್ ಮತ್ತು ಖಾನಾವಳಿಗಳು ಬಂದ್ ಆಗಿದ್ದವು. ಬೇಸಿಗೆ ಎಂಬ ಕಾರಣಕ್ಕೆ ಮಧ್ಯಾಹ್ನದ ಊಟ ಬೇರೆ ಮಾಡಿರಲಿಲ್ಲ. ಎಳನೀರು, ಮಜ್ಜಿಗೆಯಲ್ಲೇ ಮಧ್ಯಾಹ್ನ ಮುಗಿದಿತ್ತಾದ್ದರಿಂದ ಸಂಜೆಯಿಂದಲೇ ಹೊಟ್ಟೆ ತಾಳ ಹಾಕಲು ಆರಂಭಿಸಿತ್ತು. ರಾತ್ರಿ 8 ಗಂಟೆಯಿಂದ 9ರವರೆಗೆ ಜಿಸಿಆರ್ ಬಡಾವಣೆಯಿಂದ ಹಿಡಿದು ಜೋಗಿಮಟ್ಟಿ ರಸ್ತೆವರೆಗೆ, ಹೊಳಲ್ಕೆರೆ ರಸ್ತೆಯಿಂದ ಚಳ್ಳಕೆರೆ ಗೇಟ್​ವರೆಗೆ ಬೈಕಿನಲ್ಲಿ ಸುತ್ತಿದ್ದು ಸಾಕಾಯ್ತು. ಯಾವೊಂದು ಹೋಟೆಲ್, ಖಾನಾವಳಿಯೂ ತೆರೆದಿರಲಿಲ್ಲ. ಕೊನೆಗೆ ಮದಕರಿ ವೃತ್ತದ ಬಳಿ ತೆರಳುತ್ತಿದ್ದಾಗ ಪಾನಿಪುರಿ ಹುಡುಗನೋರ್ವ ಗಾಡಿ ಎತ್ತಲು ಮುಂದಾಗಿದ್ದು ಕಂಡಿತು. ಬಿಟ್ಟರೆ ಅದೂ ಸಿಗದು, ಪಾಲಿಗೆ ಬಂದಿದ್ದೇ ಪಂಚಾಮೃತವೆಂದು ಭಾವಿಸಿ ಪಾನಿಪೂರಿ ತಿನ್ನಲು ಹೋದರೆ ಅಳಿದುಳಿದದ್ದೆಲ್ಲ ಹಾಕಿಕೊಟ್ಟ. ಹೊಟ್ಟೆ ತುಂಬಾ ತಿಂದು ‘ಕಿತ್ನಾ ಹುವಾ ಭಾಯಿ’ ಎಂದು ನೂರು ಮತ್ತು ಹತ್ತರ ನೋಟು ಕೈಲಿಡಿದಾಗ ‘ಕಿತ್ನಾ ತೋ ದೇವೋ’ ಎಂದು ಕೇವಲ ಹತ್ತು ರೂಪಾಯಿ ಪಡೆದ ಪುಣ್ಯಾತ್ಮ ದಾಸೋಹಿಯಂತೆ ಕಂಡ. ಬಸವರಾಜ ಮುದನೂರ್, ಟಿವಿ 9 ಕನ್ನಡ ವರದಿಗಾರ, ಚಿತ್ರದುರ್ಗ

ಸಂತೃಪ್ತ ಭಾವದಿ ಗೆಳೆಯರ ಅಡ್ಡಾಕ್ಕೆ ತೆರಳುವ ವೇಳೆಗೆ ಹಬ್ಬ ಮುಗಿಯುವವರೆಗಿನ ಹೊಟ್ಟೆಪಾಡಿನ ಚಿಂತೆ ಕಾಡಿತು. ರಾಮದಾಸ್ ಟೀ ಸ್ಟಾಲ್ ಬಳಿ ಬಾಯಿತುಂಬಾ ಬೀಡಾ ಹಾಕಿಕೊಂಡು ಕುಳಿತಿದ್ದ ಗೆಳೆಯ ನಾಗರಾಜ್ ಹೆಗಡೆ ಮುಖ ಮೇಲಕ್ಕೆತ್ತಿ ತಮ್ಮದೇ ಶೈಲಿಯಲ್ಲಿ ‘ಊಟ ಆಯ್ತಾ ಸರ್?’ ಎಂದರು. ‘ಊಟವೇನೋ ಆಯ್ತು, ಆದ್ರೆ, ಹೆಂಗರೆ ಮಾಡಿ ಜಲ್ದಿ ಮದ್ವೆ ಆಗಬೇಕು’ ಎಂದೆ. ನಗೆ ತಡೆಯಲಾಗದೆ ಬಾಯಿ ತುಂಬಿಕೊಂಡಿದ್ದ ಎಲೆ- ಅಡಿಕೆಯನ್ನು ಪಿಸಕ್ಕನೆ ಉಗಿದು ಮನಸಾರೆ ನಕ್ಕರು. ‘ಅಲ್ಲಾ ಸಾರ್, ಮದುವೆ ಆಗಬೇಕು ಅನ್ನಿ‌ ಓಕೆ. ಆದ್ರೆ, ಹೆಂಗರೆ ಮಾಡಿ ಜಲ್ದಿ ಮದ್ವೆ ಆಗಬೇಕು ಎಂದರೆ ಹೇಗೆ’ ಎನ್ನುತ್ತ ಚಪ್ಪಾಳೆಯಿಟ್ಟು ಮತ್ತೆ ನಗೆಯಾಡಿದರು. ಹೀಗೆ ಸೌರಮಾನ ಯುಗಾದಿ ಸಂದರ್ಭದಲ್ಲಿ ನವಸಂಸಾರ ಹೂಡುವ ಆಲೋಚನೆ ತಲೆ ಹೊಕ್ಕಿತು.

ಅದೇ ಗುಂಗಿನಲ್ಲಿ ಮನೆಗೆ ಬಂದು ನಿದ್ರೆಗೆ ಜಾರಲು ಪ್ರಯತ್ನಿಸಿದರೆ ಬೇಸಿಗೆಯ ಬೇಗೆ ಮಲಗಲು ಬಿಡಲಿಲ್ಲ. ಮನದಲ್ಲಿ ಅಂಕುರಿಸಿದ್ದ ಮದುವೆಯ ಗುಂಗು ಸಹ ಏನೇನೋ ಆಸೆ, ಆಕಾಂಕ್ಷೆಗಳಿಗೆ ಮಣಿ ಜೋಡಿಸಿತು.

ಅಕ್ಕಪಕ್ಕದ ಮನೆಯ ಚಂದದ ಹುಡುಗಿಯರು ವಾರಿಗೆಯ ಗೆಳತಿಯರು ಮದುವೆಯಾಗಿ ಮನೆ ದಾಟಿದರು ನನ್ನ ಬಾಳಸಂಗಾತಿ ನೀ ಎಲ್ಲಿರುವಿ…

ಎಂಬ ಚಂದದ ಕವಿತೆ ಹುಟ್ಟಿಕೊಂಡಿತು. ಮದುವೆ ಕನಸಿನಿಂದ ಕಾವ್ಯದೆಡೆಗೆ ವಾಲಿದ ಮನಸು ಸುಂದರ ಲೋಕದಲ್ಲಿ ವಿಹರಿಸುತ್ತ ಅದ್ಯಾವ ಗಳಿಗೆ ನಿದ್ರೆಗೆ ಜಾರಿತೋ ಗೊತ್ತಿಲ್ಲ. ಬೆಳಗಿನ ಜಾವ ಬೀಸಿದ ತಂಗಾಳಿಗೆ ಭರ್ತಿ ನಿದ್ರೆ ಮಂಪರು. ಬೆಳಗ್ಗೆ 5:45ಕ್ಕೆ ಮೊಬೈಲ್ ರಿಂಗಣಿಸಿತು. ಒಲ್ಲದ ಮನಸ್ಸಿನಿಂದಲೇ ಕರೆ ಸ್ವೀಕರಿಸಿದೆ. ಯಾವುದೋ ಹೆದ್ದಾರಿಯಲ್ಲಿ ಅಪಘಾತವೇ ಸಂಭವಿಸಿರಬಹುದು ಎಂದು ಯೋಚಿಸುತ್ತ ಹಲೋ ಅಂದವನಿಗೆ ಪ್ರಶ್ನೆಗಳ ಸುರಿಮಳೆ ಶುರುವಾಯಿತು.

ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ನಿಮ್ಮ ಹೆಸರೇನು? ಯಾವ ಊರು? ಎಂದು ಮಾತು ಶುರು ಮಾಡಿದನು. ಮೊದಲೇ ಮದುವೆ ಗುಂಗಿನಲ್ಲಿ ಮಲಗಿದ್ದವನಿಗೆ ಆ ಕ್ಷಣಕ್ಕೆ ಭಗವಂತ ಇಷ್ಟು ಬೇಗ ಕಣ್ಣು ಬಿಟ್ಟನಾ? ಕನ್ಯಾ ನೋಡುವವನೋ, ಕನ್ಯಾ ಕೊಡುವವನೋ…? ಅಥವಾ ಇದು ಗೆಳೆಯ ಹೆಗಡೆ ಕಮಾಲ್ ಆಗಿರಬಹುದೇ? ಎಂಬ ಸಂಶಯ ಮೂಡಿತು. ಅಷ್ಟರಲ್ಲಾಗಲೇ ಚಳ್ಳಕೆರೆ ತಾಲೂಕಿನ ಓಬಯ್ಯನಹಟ್ಟಿಯಿಂದ ಕರೆ ಮಾಡಿದ್ದ ವ್ಯಕ್ತಿ ‘ನೀವು ಬೇಗ ಕ್ಯಾಮರಾ ತಗೊಂಡು ಬರಬೇಕು. ನನ್ನ ಹೆಂಡ್ತಿ ತವರು ಮನೆಯಲ್ಲಿದ್ದಾಳೆ. ಹಬ್ಬಕ್ಕೆ ಊರಿಗೆ ಕರೆದರೆ ನಂಜೊತೆ ಬರುತ್ತಿಲ್ಲ. ನಮ್ಮ ಅತ್ತೆ- ಮಾವ ಮಗಳಿಗೆ ಬುದ್ಧಿ ಹೇಳಿ ಕಳಿಸುವುದು ಬಿಟ್ಟು ಗಂಡ-ಹೆಂಡತಿಯನ್ನು ಅಗಲಿಸುತ್ತಿದ್ದಾರೆ. ನಾನು ನನ್ನ ಅತ್ತೆ- ಮಾವ ಇಬ್ಬರನ್ನೂ ಮಚ್ಚಿನಿಂದ ಹೊಡೆದು ಕೊಲ್ಲುತ್ತೇನೆ. ನೀವು ಬೇಗ ಬಂದು ಲೈವ್ ವಿಡಿಯೋ ಮಾಡಿ’ ಎಂದು ಹುಕುಂ ಹೊರಡಿಸಿ ಕೂಗುತ್ತಲೆ ಇದ್ದ.

ಕ್ಷಣ ಕಾಲ ಆ ವ್ಯಕ್ತಿಗೆ ಏನು ಉತ್ತರ ಕೊಡಬೇಕೆಂಬುದು ತೋಚಲಿಲ್ಲ. ಮಾತನಾಡುವ ವ್ಯಕ್ತಿ ಬೆಳ್ಳಂಬೆಳಗ್ಗೆಯೇ ಭರ್ತಿ ಕುಡಿದಿದ್ದಾನೆಂಬುದು ಮಾತ್ರ ಖಾತ್ರಿ ಆಯಿತು. ‘ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಸಮಸ್ಯೆಯಿದ್ದರೆ ಠಾಣೆಗೆ ಹೋಗಿ ದೂರು ನೀಡಿ’ ಎಂದು ಹೇಳಲೆತ್ನಿಸುವಷ್ಟರಲ್ಲಿ ಆ ವ್ಯಕ್ತಿ ಸಿಟ್ಟಿಗೆದ್ದ. ‘ನಿನ್ನ ಕೈಲಿ ಕ್ಯಾಮರಾ ತೆಗೆದುಕೊಂಡು ಬರಲು ಆಗುತ್ತದೋ ಇಲ್ವೋ, ಅಷ್ಟು ಹೇಳಪ್ಪ ಸಾಕು. ಉಪದೇಶ ಮಾಡಬೇಡ. ಕಡಿದ ಬಳಿಕವೇ ನಾನು ಸ್ಟೇಷನ್ ಗೆ ಹೋಗುವುದು’ ಎಂದು ಹೇಳಿ ಫೋನ್ ಕಟ್ ಮಾಡಿಬಿಟ್ಟ. ನಿದ್ದೆಗಣ್ಣಲ್ಲಿದ್ದವನಿಗೆ ಆ ವ್ಯಕ್ತಿಯ ಮಾತು ಬರಸಿಡಿಲಿನಂತೆ ಬಡಿದವು.

ತಕ್ಷಣಕ್ಕೆ ಎಚ್ಚೆತ್ತುಕೊಂಡು ಚಳ್ಳಕೆರೆ ಇನ್ಸ್​ಪೆಕ್ಟರ್ ವಾಸುದೇವ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ‘ಯಾರೋ ಕುಡಿದ ಅಮಲಿನಲ್ಲಿ ಮಾಡಿರುತ್ತಾರೆ ಬಿಡಿ’ ಎಂದರು. ನಾನು ಮತ್ತೆ ಸಿಹಿ ನಿದ್ರೆಗೆ ಜಾರಲು ಯತ್ನಿಸಿದೆನಾದರೂ ರಾತ್ರಿಯ ಕನಸುಗಳು ಸಮೀಪಕ್ಕೂ ಸುಳಿಯಲಿಲ್ಲ. ಫ್ರೆಶ್ಶಾಗಿ ಕುಳಿತು ಮೂರ್ನಾಲ್ಕು ಪತ್ರಿಕೆಗಳನ್ನು ಓದಿದರೂ ಸಮಾಧಾನ ಸಿಗಲಿಲ್ಲ. ಏನೋ ಚಡಪಡಿಕೆ ಕಾಡತೊಡಗಿತು. ಮತ್ತೆ ಚಳ್ಳಕೆರೆ ಇನ್ಸ್​ಪೆಕ್ಟರ್​ಗೆ ಕರೆ ಮಾಡಿ ವಿಚಾರಿಸಿದೆ. ‘ನಮ್ಮವರನ್ನು ಕಳಿಸಿದ್ದೆ. ಯಾರೋ ಕುಡಿದ ಅಮಲಿನಲ್ಲಿ ತವರು ಮನೆಗೆ ಬಂದ ಪತ್ನಿ ಮತ್ತು ಅತ್ತೆ ಮಾವನ ಜತೆ ಗಲಾಟೆ ಮಾಡುತ್ತಿದ್ದನಂತೆ. ಊರಲ್ಲಿನ ಕಾಯಿನ್ ಬಾಕ್ಸಿಂದ ನಿಮಗೆ ಕರೆ ಮಾಡಿದ್ದಾನೆ. ನಮ್ಮವರು ಎಚ್ಚರಿಕೆ ಕೊಟ್ಟು ಬಂದಿದ್ದಾರೆ’ ಎಂದು ಹೇಳಿದರು. ಬಳಿಕ ಅಂದಿನ ದಿನವೂ ಎಂದಿನ ಸುದ್ದಿ ಸಂತೆಯಲ್ಲಿ ಕಳೆದು ಹೋಯಿತು.

ಇದನ್ನೂ ಓದಿ : ಆಗಾಗ ಅರುಂಧತಿ: ಭಾವಸಮಾಧಿಗೆ ಜಾರಿದಾಗ ಅರಿವಿಲ್ಲದೆ ಸಂತೋಷದಿಂದ ಕಣ್ಣೀರಿಳಿಯುತ್ತಿತ್ತು

ಮರುದಿನವೂ ಬೆಳಗ್ಗೆ‌ 5:45ಕ್ಕೆ ಸರಿಯಾಗಿ ಮೊಬೈಲ್ ರಿಂಗಣಿಸಿತು. ಹಲೋ ಅಂದವನಿಗೆ ‘ನಮ್ಮೂರಲ್ಲಿ ಕೊಲೆ ಆಗಿದೆ ಸರ್. ಇನ್ನೂ ಪೊಲೀಸರೂ ಬಂದಿಲ್ಲ’ ಎಂಬ ಮಾಹಿತಿ ಸಿಕ್ಕಿತು. ಯಾವ ಊರು? ಏನು ಕಥೆ? ಎಂದು ಕೇಳಿ ಮಾಹಿತಿ ಬರೆದಿಟ್ಟುಕೊಂಡೆ. ಅರೆಕ್ಷಣದಲ್ಲಿ ‘ಇಂದು ಎಪ್ರಿಲ್ ಫಸ್ಟ್; ಎಪ್ರಿಲ್ ಫೂಲ್ ದಿನ’ ಅಲ್ಲವೇ ಎಂಬುದು ನೆನಪಾಯಿತು. ಪ್ರತಿ ವರ್ಷ ಗೆಳೆಯರು ಏನೇನೋ ಸ್ಟೋರಿ ಹೇಳಿ ಫೂಲ್ ಮಾಡಲೆತ್ನಿಸುತ್ತಿದ್ದುದು ಒಂದು ಕ್ಷಣ ಸ್ಮೃತಿ ಪಟಲದಲ್ಲಿ ಸುಳಿದಾಡಿತು. ಯಾವುದಕ್ಕೂ ಕ್ರಾಸ್ ಚೆಕ್ ಮಾಡಿಯೇ ತಾನೇ ಬ್ರೇಕಿಂಗ್ ಕೊಡುವುದು ಎಂದು ಮತ್ತದೇ ಚಳ್ಳಕೆರೆ ಇನ್ಸ್​ಪೆಕ್ಟರ್​ಗೆ ಕರೆ ಮಾಡಿದೆ. ಸರ್ ಯಾವುದಾದರೂ ಕ್ರೈಮ್ ಆಗಿದೆಯಾ? ಅಂತಾ ವಿಚಾರಿಸಿದೆ. ಅವರು ‘ಅಂಥದ್ಯಾವುದೂ ನಡೆದಿಲ್ಲ.‌ ಒಮ್ಮೆ ಠಾಣೆಗೆ ವಿಚಾರಿಸಿ ಹೇಳುತ್ತೇನೆ’ ಅನ್ನುವಷ್ಟರಲ್ಲೇ ನಾನು ಕರೆ ಮಾಡಿದವರು ನೀಡಿದ ಮಾಹಿತಿ ತಿಳಿಸಿದೆ. ‘ಸರಿ, ನಮ್ಮವರನ್ನು ಕಳಿಸಿ ಕನ್‌ಫರ್ಮ್ ಮಾಡುತ್ತೇನೆ’ ಎಂದರು.

ನಾನು ಮತ್ತೆ ಫ್ಯಾನ್ ಜೋರಾಗಿಟ್ಟು ಮಲಗಲು ಯತ್ನಿಸಿದೆನಾದರೂ ಕಣ್ಣು ಮತ್ತು ಮನಸು ಸ್ಪಂದಿಸಲಿಲ್ಲ. 8 ಗಂಟೆಯಾದರೂ ಇನ್ಸ್​ಪೆಕ್ಟರ್ ಮರಳಿ ಕರೆ ಮಾಡಲಿಲ್ಲ. ‘ಏಪ್ರಿಲ್ ಫೂಲ್’ ಎಂದುಕೊಂಡರೆ ಗೆಳೆಯರ ಸುಳಿವೂ ಇಲ್ಲ. ತಳಮಳ ತಾಳದೇ ಕೊನೆಗೆ ನಾನೇ ಇನ್ಸ್​ಪೆಕ್ಟರ್​ಗೆ ಕರೆ ಮಾಡಿದಾಗ ‘ಸ್ಪಾಟಿಗೆ ಬಂದಿದ್ದೇನೆ. ನೀವು ಕೊಟ್ಟ ಮಾಹಿತಿ ಸರಿಯಿದೆ. ಅಳಿಯನೇ ಮಚ್ಚಿನಿಂದ ಹೊಡೆದು ಮಾವನನ್ನು ಕೊಲೆ ಮಾಡಿದ್ದಾನೆ. ಅಡ್ಡ ಬಂದ ಅತ್ತೆಗೂ ಏಟು ಬಿದ್ದಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ನೋಡಿ’ ಎಂದರು. ಕೂಡಲೇ ಕಚೇರಿಗೆ ಫೋನ್ ಮಾಡಿ ಬ್ರೇಕಿಂಗ್ ನ್ಯೂಸ್ ಕೊಟ್ಟೆ. ಒಂದೆರಡು ನಿಮಿಷ ಕಳೆಯುವಷ್ಟರಲ್ಲಿ ಊರ ಹೆಸರು ಮತ್ತು ಅಳಿಯನೇ ಮಾವನ ಕೊಲೆ ಮಾಡಿದ್ದು ಎಂಬಂಶ ಗಮನಿಸಿ ದಿಗ್ಭಮೆ ಮೂಡಿತು.

ತಕ್ಷಣ ಮತ್ತೆ ಇನ್ಸ್​ಪೆಕ್ಟರ್​ಗೆ ಕರೆ ಮಾಡಿ, ‘ಸರ್, ನಿನ್ನೆ ನಮಗೆ ಕರೆ ಮಾಡಿದ್ದವನೇ ಕೊಲೆ ಮಾಡಿಬಿಟ್ಟನಾ? ಅದೇ ಊರು, ಗಂಡ-ಹೆಂಡತಿ ಜಗಳ, ಅತ್ತೆ-ಮಾವ, ಅಳಿಯ ಎಂದೆ. ಇನ್ಸ್​ಪೆಕ್ಟರ್ ತಬ್ಬಿಬ್ಬಾದರು. ‘ಓ ಮೈ ಗಾಡ್! ಹೌದಲ್ರೀ ಬಸವರಾಜ್. ಎಂಥ ಕೆಲ್ಸಾ ಆಗೋಯತಲ್ರೀ. ಇಷ್ಟೊತ್ತು ನನಗೆ ನೆನಪೇ ಬರಲಿಲ್ಲ. ಎಂಥ ಕೆಲಸ ಮಾಡಿದ್ದಾನಲ್ರೀ ಈ ಲೋಫರ್’ ಎಂದು ಕೆಂಡವಾದರು. ನಾನು ಕ್ಯಾಮೆರಾಮನ್ ಜತೆಗೆ ಜಿಲ್ಲಾಸ್ಪತ್ರೆಗೆ ಹೋದರೆ ಆರೋಪಿಯ ಪತ್ನಿ ತನ್ನ ತಾಯಿಯ ಆರೈಕೆಯಲ್ಲಿ ತೊಡಗಿದ್ದಳು. ನಾವು ಟಿವಿ9 ನವರು ಎಂದು ಗೊತ್ತಾಗುತ್ತಿದ್ದಂತೆಯೇ ‘ನಿನ್ನೆಯೇ ನನ್ನ ಗಂಡ ನಿಮಗೆ ಫೋನ್ ಮಾಡಿದ್ದನಲ್ಲ ಅಣ್ಣ. ನೀವು ಹೇಳಿದ್ಮೇಲೆ ಪೊಲೀಸ್ರು ಊರಿಗೆ ಬಂದು ಬೈದು ಬುದ್ಧಿ ಹೇಳಿದರು. ಆಗಿನಿಂದ ಸೈಲೆಂಟಾಗಿದ್ದ. ಸರಿ ಹೋಗುತ್ತಾನೆ ಬಿಡು ಅಂದುಕೊಂಡೆವು. ಪಾಪಿ, ಇದ್ದಕ್ಕಿದ್ದಂತೆ ಬೆಳಗಿನ ಜಾವ ಹೀಗೆ ಮಾಡಿಬಿಟ್ಟ. ಅಪ್ಪನೇ ಹೋದ ಮೇಲೆ ನಮಗ್ಯಾರು ಗತಿ’ ಎಂದು ಗೋಗರೆದಳು. ಯುಗಾದಿ ಮತ್ತು ಏಪ್ರಿಲ್ ಫಸ್ಟ್ ಬಂದಾಗಲೆಲ್ಲಾ ದುರಂತ ಘಟನೆ ನೆನಪಾಗುತ್ತದೆ. ಆ ಎರಡು ದಿನದ ಬೆಳಗಿನ ಕರೆಗಳು ‘ಏಪ್ರಿಲ್ ಫೂಲ್’ ಆಗಿರಬಾರದಿತ್ತೇ ಎಂಬ ಕೊರಗು ಕಾಡುತ್ತದೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಬರಹಗಳನ್ನೂ ಓದಿ : https://tv9kannada.com/tag/reporters-diary

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ