AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature : ನೆರೆನಾಡ ನುಡಿಯೊಳಗಾಡಿ; ಈ ರಾಗವನ್ನು ಕಂಠಪಾಠ ಮಾಡಲೆಂದು ಬಹುಕಾಲ ನಾನು ಹುಡುಕಿ ಅಲೆದೆ

Short Story of M.S. Madhavan : ಜಾನ್ ಲೋಪೆಜ್ ಗಿಟಾರಿನಲ್ಲಿ ಉದ್ರೇಕಕರ ಸಂಗೀತ ಹರಿಸಿದಾಗ ಆಸ್ಕರೂ ಆತನ ತೋಳಿನಲ್ಲಿ ತಲೆಯಿರಿಸಿದ ರೋಜರೂ ಮೃದು ಹೆಜ್ಜೆಗಳನ್ನಿಟ್ಟು ನರ್ತಿಸಿದರು. ಥಟ್ಟನೆ ಜಾನ್ ಲೋಪೆಜ್‌ನ ತುಟಿಗಳು ಸ್ಟೆನ್‌ಗನ್ನಾದುವು.

Literature : ನೆರೆನಾಡ ನುಡಿಯೊಳಗಾಡಿ; ಈ ರಾಗವನ್ನು ಕಂಠಪಾಠ ಮಾಡಲೆಂದು ಬಹುಕಾಲ ನಾನು ಹುಡುಕಿ ಅಲೆದೆ
ಲೇಖಕರಾದ ಎನ್. ಎಸ್. ಮಾಧವನ್, ನಾ. ದಾಮೋದರ ಶೆಟ್ಟಿ
ಶ್ರೀದೇವಿ ಕಳಸದ
|

Updated on:Jun 03, 2022 | 1:14 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಬಾಗ್ದಾದಿನ ಕಿಟಕಿಗಳನ್ನು ಫಿರಂಗಿಯುಂಡೆಗಳು ಹಲವು ದಿವಸಗಳ ಕಾಲ ಮುಟ್ಟಿದ್ದರೂ ಅವು ತೆರೆದುಕೊಳ್ಳಲಿಲ್ಲ. ಆಕಾಶದ ಬಾವಲಿಗಳಂತೆ ಬಿ-52 ವಿಮಾನಗಳು ಹಾರಾಡಿ ಬಾಂಬ್‌ಗಳನ್ನು ಸುರಿಸಿದವು. ವಿಮಾನಭೇದಿ ಕೋವಿಗಳು – ನಿಶ್ಶಬ್ದವಾಗತೊಡಗಿದವು. ‘ಸದ್ದಾಂ ಹುಸೇನ್ ವಿಮಾನ ನಿಲ್ದಾಣ’ವನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ಪಾಡಿಯ, ರೋಜರಿನ ಜೊತೆಗಿದ್ದವರು ದಿನವೂ ಹೋಗುತ್ತಿದ್ದರು. ಒಂದು ದಿವಸ ಎಲ್ಲರೂ ಜೊತೆಯಾಗಿ ಮರಳಿದರು. ಜೋ ಹಂಫ್ರಿಯ ಖಾಲಿಬಿದ್ದ ಮಂಚದಲ್ಲಿ ಅಮೇರಿಕಾದ ಒಂದು ಕಿರು ಧ್ವಜವನ್ನು ನಿಲ್ಲಿಸಿದ ಮೇಲೆ ಜಾನ್ ಲೋಪೆಜ್ ಹೇಳಿದ: ‘ಬಹಳ ದಿನಗಳ ಬಳಿಕ ನಾವೆಲ್ಲರೂ ಇಂದು ಒಂದಾಗಿದ್ದೇವೆ. ಆದ್ದರಿಂದ ಸಂಗೀತ…’ ಜಾನ್ ಲೋಪೆಜ್ ಗಿಟಾರಿನಲ್ಲಿ ಉದ್ರೇಕಕರ ಸಂಗೀತ ಹರಿಸಿದಾಗ ಆಸ್ಕರೂ ಆತನ ತೋಳಿನಲ್ಲಿ ತಲೆಯಿರಿಸಿದ ರೋಜರೂ ಮೃದು ಹೆಜ್ಜೆಗಳನ್ನಿಟ್ಟು ನರ್ತಿಸಿದರು. ಥಟ್ಟನೆ ಜಾನ್ ಲೋಪೆಜ್‌ನ ತುಟಿಗಳು ಸ್ಟೆನ್‌ಗನ್ನಾದುವು. ಅವುಗಳಿಂದ ಮಾತುಗಳು ದುರದುರನೆ ಸಿಡಿಗುಂಡುಗಳಂತೆ ಸುರಿಯತೊಡಗಿದುವು. ರ‍್ಯಾಪ್ ಹಾಡಿನ ಹೊಂದಾಣಿಕೆಯಿಲ್ಲದ ಸಾಲುಗಳ ಮಧ್ಯೆ ಬಣ್ಣಿಯೂ ಪಾಡಿಯೂ ಮ್ಯಾಕೂ ಮೈಕಲೂ ತಟಸ್ತರಾಗಿ ನಿಂತರು.

ಕಥೆ : ಕ್ಷೌರಿಕ | ಮಲಯಾಳಂ : ಎನ್.ಎಸ್. ಮಾಧವನ್ | ಕನ್ನಡಕ್ಕೆ : ನಾ ದಾಮೋದರ ಶೆಟ್ಟಿ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ

(ಭಾಗ 4)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಮರು ದಿವಸ ಬಾಗ್ದಾದಿನಿಂದ ಮೊದಲು ಹಿಂದಿರುಗಿದ್ದು ಬಣ್ಣಿ. ಆತ ಬಂದ ಕೂಡಲೆ ಮಂಚದಲ್ಲಿ ಕುಳಿತು ಸಂಗೀತ ಕೇಳತೊಡಗಿದ. ಸ್ವಲ್ಪ ಹೊತ್ತು ಕಳೆದರೆ ಮುಗಿದು ಹೋಗುವ ಸಿ.ಡಿ. ಬಣ್ಣಿ ಹಲವು ಸಲ ಕೇಳಿದ. ವಾಕ್‌ಮನ್‌ನಲ್ಲಿ ಸಿ.ಡಿಯನ್ನು ಹಾಡಿಸುವಾಗಿನ ಕ್ಲಿಕ್ ಶಬ್ದಗಳು ಮತ್ತು ಹೆಚ್ಚಾಗತೊಡಗಿದುವು. ಪಾಡಿ ಆತನ ಹತ್ತಿರಕ್ಕೆ ಹೋಗಿ ಕೇಳಿದ: ‘ಊಟ ಬೇಡ್ವ?’

ಬಣ್ಣಿ ಮುಖ ಅಲ್ಲಾಡಿಸಿದ ಮೇಲೆ ಸಿ.ಡಿಯನ್ನು ಮತ್ತೊಮ್ಮೆ ಹಾಡಿಸಿದ. ಮತ್ತೆ ಮತ್ತೆ. ಆತ ಹೊರಗೆ ಮೈದಾನದಲ್ಲಿ ಬಾಗ್ದಾದಿನ ಆಕಾಶವನ್ನು ನೋಡಿದ. ಬಾಗ್ದಾದಿಗೆ ಆಕಾಶ ಇರಲಿಲ್ಲ. ಆಕಾಶ ಭೂಮಿಗೆ ಇಳಿದು ಬಂದಿತ್ತು. ಆ ನಗರವು ಹಲವು ಬಣ್ಣದ ಹೂಗಳಿಂದ ನೇಯ್ದ ಒಂದು ರತ್ನಗಂಬಳಿಯಾಗಿತ್ತು. ಸಿಡಿಮದ್ದುಗಳು ತುಂಬಿದ ಹೆಲಿಕಾಪ್ಟರುಗಳೂ ವಿಮಾನಗಳೂ ಅಡ್ಡಾದಿಡ್ಡಿ ಹಾರಾಡಿದವು. ಎಣ್ಣೆ ಟ್ಯಾಂಕರುಗಳು ನುಚ್ಚು ನೂರಾದದ್ದರ ಸಪೂರ ಹೊಗೆ. ಮನುಷ್ಯ ಹೊಗೆಯ ಒಂಟಿನಾರುಗಳು. ಮಣ್ಣಿಗೆ ಬಂದು ಸಿಡಿಯುವ ಬಾಂಬ್‌ಗಳಿಂದ ಚೆಲ್ಲುವ ಟೈಗ್ರೀಸ್ ನದಿಯ ಮೆಕ್ಕಲು ಮಿಶ್ರಿತ ಕೆಂಪು ಹೊಗೆ. ಬಣ್ಣಿಯ ವಾಕ್‌ಮನ್‌ನ ಕ್ಲಿಕ್ಕುಗಳಿಗೆ ವಿರಾಮವೇ ಇರಲಿಲ್ಲ.

‘ಏನು ಕೇಳ್ತಾ ಇದ್ದೀರಿ?’ ಪಾಡಿ ಕೇಳಿದ.

‘ಹೋಗು. ನನಗೆ ಕಿರಿಕಿರಿ ಮಾಡ್ಬೇಡ’

‘ಬಟ್ಟೆ ಕೂಡ ಬದಲಾಯಿಸ್ಲಿಲ್ಲ.’

‘ಹೋಗು, ನಾಯಿ ಮಗನೆ’ ಬಣ್ಣಿ ಎದ್ದು ಕಟ್ಟಡದ ಒಳಕ್ಕೆ ನಡೆದ. ಆ ಮೇಲೆ ಆತ ಲ್ಯಾಪ್‌ಟಾಪಿನ ಕೀಬೋರ್ಡಿನ ಚೌಕಕಟ್ಟೆಗಳನ್ನು ವೇಗವಾಗಿ ಕುಟ್ಟತೊಡಗಿದ. ಅವರಿಗೆ ಸಿಡಿ ವಾಕ್‌ಮನ್‌ನ ಕ್ಲಿಕ್ಕುಗಳಿಂದ ವಿರಾಮ ಲಭಿಸಿತು. ರಾತ್ರಿ ಮೂರು ಗಂಟೆಗೆ ಕೋಣೆಯ ಬಾಗಿಲನ್ನು ತಟ್ಟಿದ್ದು ಕೇಳಿಸಿತು. ಬಣ್ಣಿ ಎದ್ದು ಅದೇ ವೇಷದಲ್ಲಿ ಮತ್ತೆ ಬಾಗ್ದಾದಿಗೆ ಹೋಗಲೆಂದು ಕೋವಿ ತೆಗೆದು ಹಮ್‌ವೀಯಲ್ಲಿ ಹೋಗಿ ಕುಳಿತ. ಪಾಡಿ ಅವನನ್ನು ಕಳುಹಿಸಿಕೊಡಲೆಂದು ಹೋದರೂ ಬಣ್ಣಿ ಅವನ ಮುಖ ನೋಡಲಿಲ್ಲ. ಮಾರನೆಯ ಬೆಳಗ್ಗೆ, ದೂರದಿಂದ ದೂತನಂತೆ ಬಂದ ಒಂದು ಸಿಡಿಗುಂಡು ಬಣ್ಣಿಯನ್ನು ಕೊಂದಿತೆಂಬ ಸುದ್ದಿ ಕ್ಯಾಂಪಿನಲ್ಲಿ ಹರಡಿತು. ಬಣ್ಣಿಯ ಮೂರು ದಿವಸದಷ್ಟು ಬೆಳೆದ ಗಡ್ಡವನ್ನು ಪಾಡಿ ಶೇವ್ ಮಾಡಿದ, ಅರ್ಧ ನಗ್ನವಾಗಿ ಮಲಗಿಸಿದ್ದ ಆತನ ದೇಹದಲ್ಲಿ, ಎದೆಯಲ್ಲಿ ಸಿಡಿಗುಂಡಿನ ಕಲೆಯ ರಕ್ತ ತಿಲಕ ಬಿಟ್ಟರೆ, ಬೇರಾವ ಗಾಯವೂ ಇರಲಿಲ್ಲ. ಸ್ವಲ್ಪ ಬೆಳೆದ ಬಣ್ಣಿಯ ಕೂದಲನ್ನು ಅತ್ತಿತ್ತ ಬಾಚಿ ಕತ್ತರಿಸುತ್ತ ಸಮತಟ್ಟುಗೊಳಿಸಿದ. ಜೆಲ್ ಹಚ್ಚಿ ಕೂದಲು ಬಾಚಿದ. ಆಸ್ಪತ್ರೆಯ ಕೋಣೆಯಿಂದ ಹೊರಗಿಳಿಯುವಾಗ ಪಾಡಿ ಮೊದಲನೆಯ ಆ ಶಬ್ದ ಕೇಳಿದ. ಸ್ಪಷ್ಟವಾದ ಸ್ವರದಲ್ಲಿ ನಾರಾಯಣನ್ ಅವನನ್ನು ಕರೆದ, ಮಗಾ.

ಇದನ್ನೂ ಓದಿ : Literature: ಅನುಸಂಧಾನ; ಬರವಣಿಗೆ ಆತ್ಮಕಥಾನಕವೇ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ

ಆಸ್ಪತ್ರೆಯ ವರಾಂಡದ ಗೋಡೆಗೆ ಒರಗಿ ನಿಂತಾಗ ಪಾಡಿಯ ತಲೆಯೊಳಗಿನ ಗೊಂದಲ ಇನ್ನಷ್ಟು ಅಧಿಕವಾಯಿತು. ಅದುರುವ ಧ್ವನಿಯಲ್ಲಿ ದೇವಬ್ರತ ಬ್ಯಾನರ್ಜಿ ಆಲಾಪ ಪ್ರಾರಂಭಿಸಿದ. ಅದು ಲೋಕದ ಅತ್ಯಧಿಕ ದೀರ್ಘವಾದ ಆಲಾಪವಾಗಿತ್ತು. ಅದರೆಡೆಯಲ್ಲಿ ಓರ್ವ ಹೆಂಗಸಿನ ಅಳು ಕೇಳಿಸತೊಡಗಿತು. ಬಳಿಕ ಮತ್ತೊಬ್ಬ ಹೆಂಗಸು. ಅಳುವ ಹೆಂಗಸರ ಸಂಖ್ಯೆ ಐದಾದಾಗ ಪಾಡಿ ಅಬೋಧ ಸ್ಥಿತಿಗೆ ಬಂದು ನೆಲಕ್ಕೆ ಬಿದ್ದ.

ಅಂದು ಸದ್ದಾಂ ಹುಸೇನನ ಪ್ರತಿಮೆಯೊಂದಿಗೆ ಬಾಗ್ದಾದ್ ಕೂಡ ಔಪಚಾರಿಕವಾಗಿ ಬಿತ್ತು. ಕೋಣೆಯಲ್ಲಿದ್ದವರು ಖಾಲಿ ಮಂಚಗಳ ಕಡೆಗೆ ನೋಡುತ್ತ ಮೂಕರಾಗಿ ಕುಳಿತರು. ಪಾಡಿ ಬಣ್ಣಿಯ ಲ್ಯಾಪ್‌ಟಾಪ್ ತೆರೆದ. ಪಾಸ್‌ವರ್ಡ್ ಗೊತ್ತಿಲ್ಲದ ಕಾರಣ ಅವನಿಗೆ ಬಂದಿದ್ದ ಈಮೇಲ್‌ಗಳೆಲ್ಲ ತೆರೆಯದೆ ಅದರೊಳಗೇ ಬಿದ್ದಿರಬಹುದೆಂದು ಪಾಡಿಗೆ ಅನಿಸಿತು. ಈ ರೀತಿಯ ಈಮೇಲ್‌ಗಳು ಎಲ್ಲಿಗೆ ಹೋಗುತ್ತವೆ? ಸತ್ತವರ ತೆರೆಯದ ಈಮೇಲ್‌ಗಳು ಆಕಾಶವನ್ನು ತುಂಬುತ್ತವೆ. ಪಾಡಿ ಬಣ್ಣಿಯ ಕೊನೆಯ ಬ್ಲಾಗ್ ಓದಿದ.

ಏಪ್ರಿಲ್ 8, 2003 : ಲಂಕಾದಹನ

ಇವತ್ತು ನಾನು ಪೀಯೊಂದಿಗೆ ಕೆಟ್ಟದಾಗಿ ನಡೆದುಕೊಂಡೆ. ನಾನು ಊಟಮಾಡದೆ ಸಿ.ಡಿ. ಕೇಳುತ್ತ ಕುಳಿತದ್ದು ಆತನಿಗೆ ತುಂಬ ನೋವುಕೊಟ್ಟಿತ್ತು. ಪ್ರೀತಿ ತೋರುವ ಆಡಿನ ಮರಿಯಂತೆ ಆತ ನನ್ನ ಹಿಂದೆಯೇ ನಡೆದ. ನಾನು ನನ್ನ ಅಪ್ಪ ಕಳುಹಿಸಿಕೊಟ್ಟ ಸಿ.ಡಿ. ಕೇಳುತ್ತಿದ್ದೆ. ಅಪ್ಪನೇ ತಯಾರಿಸಿದ ಸಿ.ಡಿಯಾಗಿತ್ತದ್ದು. ಆ ಸಿ.ಡಿಯನ್ನು ಎಷ್ಟು ಸಲ ನಾನು ಕೇಳಿದೆನೆಂದು ನನಗೇ ಗೊತ್ತಿರಲಿಕ್ಕಿಲ್ಲ. ನನ್ನ ವಾಕ್‌ಮನ್ನಿನ ಹುಚ್ಚು ಹಿಡಿದ ಕ್ಲಿಕ್ಕುಗಳು ಪೀಯನ್ನು ದಿಕ್ಕೆಡಿಸಿತು. ಆತ ನನ್ನನ್ನು ಬಿಡದೆ ಹಿಂಬಾಲಿಸಿದ. ನಾನು ಅವನನ್ನು ನಾಯಿ ಮಗನೆ ಎಂದು ಕರೆದು ಬೆದರಿಸಿ ಅಟ್ಟಿಬಿಟ್ಟೆ.

ಇಂದು ಟೈಗ್ರಿಸ್‌ನ ಪಶ್ಚಿಮ ತೀರದಿಂದ ಅಮೇರಿಕನ್ ಸೈನ್ಯ ಮುನ್ನುಗ್ಗಿತು. ಸದ್ದಾಮಿನ ಆಳ್ವಿಕೆಯ ಮರ್ಮಸ್ಥಾನಗಳನ್ನು ಒಂದೊಂದಾಗಿ ಅವರು ಭೇದಿಸಿದರು. ತಗ್ಗಿನಲ್ಲಿ ಹಾರಿದ ವಿಮಾನಗಳ ಪೈಲೆಟುಗಳು ಭೀತರಾಗಿದ್ದ ಬಾಗ್ದಾದಿಗಳ ಕಣ್ಣುಗಳನ್ನು ಕಂಡರು. ಬಾಂಬುಗಳ ಮೋಟಾರುಗಳ – ಶಬ್ದಗಳೆಡೆಯಲ್ಲೂ ಪಶ್ಚಿಮ ಬಾಗ್ದಾದಿನ ‘ಅಲ್ ಕಿಂಡಿ’ ಆಸ್ಪತ್ರೆಯಿಂದ ರೋದನ ಕೇಳಬಹುದಾಗಿತ್ತು. ಹತ್ತು ಲಕ್ಷ ಮನೆಗಳುಳ್ಳ ಬಾಗ್ದಾದಿನ ವಿವಿಧ ಭಾಗಗಳೂ ಹೊತ್ತಿ ಉರಿಯುತ್ತ ನರಕ ಸದೃಶ ದೀಪಾವಳಿಯನ್ನು ಸೃಷ್ಟಿಸಿತ್ತು. ಯಾಕೋ ಏನೋ ಮರಳಿ ಬಂದಲ್ಲಿಂದ ಅಪ್ಪ ಕಳುಹಿಸಿಕೊಟ್ಟ ಸಿಡಿ ಕೇಳಬೇಕೆಂದೂ ಅಪ್ಪನ ಕಾಗದ ಓದಬೇಕೆಂದೂ ತೋರತೊಡಗಿತ್ತು. ಅಪ್ಪ ಬರೆದರು: ಒಂದು ಪಟ್ಟಣ ನಾಶವಾದದ್ದರ ನೆನಪಿನಲ್ಲುಂಟಾದ ಒಂದು ರಾಗದಲ್ಲಿ ನಿನಗೆ ಸಿಡಿ ತಯಾರಿಸಿ ಕಳುಹಿಸುತ್ತಿದ್ದೇನೆ. ಈ ರೀತಿಯ ರೆಕಾರ್ಡಿಂಗುಗಳು ಬಹು ಅಪರೂಪ. ಪ್ರತಿಯೊಂದೂ ಮೂರು ನಾಲ್ಕು ಮಿನಿಟುಗಳಷ್ಟು ಮಾತ್ರ. ಉಸ್ತಾದ್ ವಿಲಾಯತ್ ಖಾನ್ (ಸಿತಾರ್), ಅಲಿ ಅಕ್ಬರ್ ಖಾನ್ (ಸರೋದ್) ಮೊದಲಾದವರು ಅಲಾಪಿಸಿದ ಈ ರಾಗ ನನ್ನ ಕಂಪ್ಯೂಟರಿನ ಯಾವುದೋ ಮೂಲೆಯಲ್ಲಿ ಮಲಗಿತ್ತು. ‘ಇದು ಒಂದು ಮಧ್ಯಾಹ್ನಕ್ಕೆ ಪೂರ್ವ ಸಮಯದ ರಾಗ. ಸುಮಾರು ಹನ್ನೊಂದು ಗಂಟೆಯ ರಾಗ. ಲಂಕಾದಹನ ಸಾರಂಗ್ ಎಂಬುದಿದರ ಹೆಸರು. ‘ಈ ರಾಗವನ್ನು ಕಂಠಪಾಠ ಮಾಡಲೆಂದು ಬಹುಕಾಲ ನಾನು ಹುಡುಕಿ ಅಲೆದೆ. ಕೊನೆಗೆ ಒಬ್ಬರು ಈ-ಮೇಲ್‌ನಲ್ಲಿ ಪಂಡಿತ್ ರಾಮಾಶ್ರದ್ಧಾ ಸಾಹೇಬ್ ಹಾಡಿದ್ದನ್ನು ಕಳುಹಿಸಿದ್ದರು. ಅದೂ ಕೂಡ ಕೈಸೇರಿದಾಗ, ನಿನಗೆ ಕಳುಹಿಸಿಕೊಡಬೇಕೆಂದು ತೋರಿತು.

‘ನಿನಗೆ ಹನುಮಾನ್‌ನ ಕತೆ ನೆನಪುಂಟೊ ಗೊತ್ತಿಲ್ಲ…’

ಆಮೇಲೆ ಎರಡು ಪುಟಗಳಲ್ಲಿ ಅಪ್ಪ ರಾಮಾಯಣವನ್ನು ಪೂರ್ಣವಾಗಿ ಬರೆದರು. ಶ್ರೀರಾಮನ ದೂತನಾದ ಹನುಮಾನ್ ಲಂಕೆಗೆ ತಲುಪಿದಾಗ ಲಂಕೇಶ್ವರನಾದ ರಾವಣನ ಸೇವಕರು ಹನುಮಾನ್‌ನನ್ನು ಬಂಧಿಸಿದರು. ಅದಕ್ಕೂ ಮೊದಲೆ ರಾವಣನು ಶ್ರೀರಾಮನ ಹೆಂಡತಿಯಾದ ಸೀತೆಯನ್ನು ಲಂಕೆಗೆ ಅಪಹರಿಸಿ ತಂದಿದ್ದ. ಭಟರು ಹನುಮಾನ್‌ನ ಬಾಲಕ್ಕೆ ಬಟ್ಟೆ ಸುತ್ತಿದರು. ಹನುಮಾನ್‌ನ ಬಾಲ ಬೆಳೆಯುತ್ತಲೇ ಇತ್ತು. ಬಟ್ಟೆ ಮುಗಿದಾಗ ಭಟರು ಅದಕ್ಕೆ ಎಣ್ಣೆ ಹೊಯ್ದು ಬೆಂಕಿಕೊಟ್ಟರು. ಹನುಮಾನ್ ಅವರ ಕೈಯಿಂದ ಬಿಡಿಸಿಕೊಂಡು ಹಾರಿ ಲಂಕೆಯನ್ನು ಉರಿಸತೊಡಗಿದ. ಲಂಕೆ ಅಂದಿನ ಲೋಕದಲ್ಲಿ ಒಂದು ದೊಡ್ಡ ನಗರವಾಗಿತ್ತು.

ಇದನ್ನೂ ಓದಿ : Music: ವೈಶಾಲಿಯಾನ; ‘ಇದನ್ನು ನೀವು ‘ಹರಾಮ್’ ಎಂದರೆ, ನಾನು ಮತ್ತಷ್ಟು ಹರಾಮ್…’ ಎಂದಿದ್ದರು ಬಿಸ್ಮಿಲ್ಲಾ ಖಾನ್

ಮರಗಳ ಮೇಲಿನಿಂದಲೇ ಇರಬೇಕು: ಬೆಂಕಿ ಉರಿಯತೊಡಗಿದ್ದು. ಆಮೇಲೆ ಕಟ್ಟಡಗಳು. ಬೆಂಕಿ ಕೆಳಗಡೆ ಹರಡತೊಡಗಿತು. ಪ್ರೀತಿಪೂರ್ವಕ ನೀರುಣಿಸಿ ಬೆಳೆಸಿದ ಗಿಡಗಳು. ಗುಡಿಸಲುಗಳು. ಮಂಚಗಳು. ಅಕ್ಕಿ ತುಂಬಿದ ಕಣಜಗಳು. ಮಲಗಿ ನಿದ್ರಿಸಲಿಕ್ಕಿದ್ದ ಚಾಪೆಗಳು. ತೊಟ್ಟಿಲುಗಳು. ಅವುಗಳಲ್ಲಿ ಮಲಗಿದ್ದ ಮಕ್ಕಳು. ಮಕ್ಕಳ ಆಟಿಕೆಗಳು. ಬುಗರಿಗಳು. ವೀಣೆಗಳೂ ತಂಬೂರಗಳೂ. ಗೋಡೆಗಳಲ್ಲಿ ಬಿಡಿಸಿದ್ದ ಪೂರ್ವಿಕರ ಚಿತ್ರಗಳು. ನಾಯಿಗಳು. ಪಂಜರದ ಗಿಳಿಗಳು. ಹೆಂಸರ ವಲ್ಕಲಗಳು. ದೇವಾಲಯಗಳು. ಆಟದ ಮೈದಾನಗಳು. ಶಿರಸ್ಸಿನ ಬಟ್ಟೆಗಳು. ಸೇತುವೆಗಳು. ಆಸ್ಪತ್ರೆಗಳು. ಪ್ರಾರ್ಥನಾ ಸಾಮಗ್ರಿಗಳು. ಬಂಗಲೆಗಳು. ಬಳಿಕ ಜನರು. ಬೆಂಕಿ ಅವರನ್ನೆಲ್ಲ ನಗ್ನರನ್ನಾಗಿಸಿದ ಮೇಲಷ್ಟೆ ಕೊಲ್ಲುತ್ತಿದ್ದುದು.

ಮಂಗಗಳನ್ನು ಆರಾಧಿಸುವವರು ನಾವು ಎಂದು ಹೇಳಿದ ನನ್ನನ್ನು ಗೇಲಿಮಾಡುತ್ತಿದ್ದ ಕೆ, ನೀನು ಇದನ್ನು ಓದುತ್ತೀಯಲ್ಲ? ಹಾಗಿದ್ರೆ ನಾನು ಹೇಳ್ತೇನೆ. ಹನುಮಾನ್ ಒಂದು ಮರ್ಕಟ ದೈವವಷ್ಟೇ ಅಲ್ಲ; ಮಹಾಪಂಡಿತನೂ ಆಗಿದ್ದ.

ಆತ ಲಂಕೆಯನ್ನು ಆವರಿಸಿದ ಸಮುದ್ರದ ತಡಿಯಲ್ಲಿ ಹೋಗಿನಿಂತು ಕೇಳಿದ: ‘ನಾನಿದೇನು ಮಾಡಿದೆ? ಒಂದು ಮಹಾನಗರವನ್ನಲ್ವೆ ನಾನು ನಾಶಗೈದದ್ದು? ಒಂದು ಸಂಸ್ಕಾರವನ್ನು? ಅದೂ – ಮತ್ತೆ ಅತಿಯಾಗಿ ನಾಚಿಕೆ ಬರಿಸಿದ್ದು ಇದು – ನನ್ನ ಸ್ವಾಮಿಯ ಹೆಂಡತಿಯ ಎದುರಲ್ಲಲ್ವೆ ನಾನು ಮಾಡಿದ್ದು? ನನ್ನ ಮಾತೃಸಮಾನರಾದ ದೇವಿಗೆ ನನ್ನ ಬಗ್ಗೆ ಏನನ್ನಿಸಿರಬಹುದು?’

ಹನುಮಾನ್ ಸಮುದ್ರ ತಡಿಯಲ್ಲಿ ನಿಂತ. ಧ್ಯಾನ. ಮನಸ್ಸಿನ ಮೌನದಲ್ಲಿ ಪರಿಸಮಾಪ್ತಿ. ಆ ನಿಶ್ಶಬ್ದದೆಡೆಗೆ, ಶೂನ್ಯದೆಡೆಗೆ ಗಾಳಿಯಂತೆ, ಒಂದು ರಾಗ ಪ್ರವೇಶಿಸಿತು. ಅದೇ ಲಂಕಾದಹನ ಸಾರಂಗ್, ಹನುಮಾನ್‌ನ ರಾಗ. ಪಶ್ಚಾತ್ತಾಪದ ಈ ರಾಗ ನಾನು ಇನ್ನೂ ಒಮ್ಮೆ ಕೇಳುವೆ. ನೀವೂ ಕೇಳಬಹುದು. ಅಡಿಗೆರೆ ಹಾಕಿರುವ ಹೆಸರುಗಳ ಮೇಲೆ ಕ್ಲಿಕ್ ಮಾಡಿದರೆ ಸಾಕು.

ತಿಯೋಫೆಲಸ್ 11.58 ಪಿ.ಎಂ.

ಸದ್ದಾ ಹುಸೇನ್ ಭೂಗತನಾಗಿಯೂ ಸೈನಿಕರಿಗೆ ಅಮೇರಿಕಾಕ್ಕೆ ಹಿಂದಿರುಗುವುದು ಸಾಧ್ಯವಾಗಲಿಲ್ಲ. ಪಾಡಿ ಒಂದು ದಿನ ರಾತ್ರಿ ಕೋಣೆಗೆ ಬಂದಾಗ ಅಳುತ್ತಿದ್ದ ಮ್ಯಾಕನ್ನೂ ಮೈಕಲನ್ನೂ ಕಂಡ. ಮ್ಯಾಕ್ ಪಾಡಿಯನ್ನು ಕೇಳಿದ :

‘ಇವತ್ತು ಯಾವ ತಾರೀಕು?’

‘ಆಗಸ್ಟ್ 16. ಯಾಕೆ?’

‘ನಮ್ಮ ತಾಯಿಯ ಹುಟ್ಟಿದ ದಿನ. ನಲುವತ್ತನೆಯ ಹುಟ್ಟಿದ ದಿನ’ ಮ್ಯಾಕ್ ಹೇಳಿದ.

ಮೈಕಲ್ ಅಳುತ್ತ ಹೇಳಿದ: ‘ನಾವು ಕಾರಿನಲ್ಲಿ ಒಬ್ಬರ ನಂತರ ಒಬ್ಬರು ಡ್ರೈವ್ ಮಾಡುತ್ತ ಅಮ್ಮನನ್ನು ಲಾಸ್ ವೇಗಸ್‌ಗೆ ಕೊಂಡು ಹೋಗುತ್ತೇವೆಂದು ಹೇಳಿದ್ದೆವು. ಅಮ್ಮನಿಗೆ ಸ್ಪಾಟ್ ಮೆಷಿನ್‌ನಲ್ಲಿ ಆಡುವುದೆಂದರೆ ತುಂಬ ಇಷ್ಟ. ಸಾಯಂಕಾಲವಿಡೀ ಗ್ಯಾಂಬ್ಲಿಂಗ್, ರಾತ್ರಿ ಶಾಂಪೇನ್ ಸಹಿತ ಭೋಜನ.’

‘ಎರಡು ವಾರದ ಯುದ್ಧಾಂತ ಪ್ರಾರಂಭವಾದದ್ದು. ಸದ್ದಾಂ ಬಿಟ್ಟು ಹೋದ ನಂತರ ಮರಳಿ ಹೋಗಬಹುದೆಂದು ಭಾವಿಸಿದ್ದೆವು. ಈಗಲೂ ಸಿಡಿಮದ್ದೂ ಗೋಳೂ. ಜನರು ನಮ್ಮನ್ನು ವಿಮೋಚನೆ ಮಾಡಿದವರೆಂದು ಸ್ವಾಗತಿಸುತ್ತಾರೆ ಎಂದು ಹೇಳಿದ್ದರು’ ಮ್ಯಾಕ್ ಹೇಳಿದ.

‘ಬಾ ನಾವು ಅಮ್ಮನಿಗೆ ಒಂದು ಎಲೆಕ್ಟ್ರಾನಿಕ್ ಗ್ರೀಟಿಂಗ್ ಕಾರ್ಡು ಕಳುಹಿಸುವಾ’ ಮೈಕಲ್ ಹೇಳಿದ.

‘ಒಳ್ಳೆ ಕಾಮಿಕ್ ಇರುವಂಥಾದ್ದು’ ಕೋಣೆಗೆ ಆಸ್ಕರಿನೊಂದಿಗೆ ಒಳಗೆ ಬಂದ ರೋಜರ್ ಹೇಳಿದ: ‘ತಾಯಂದಿರಿಗೆ ಚಿಂತೆಯಾಗಬಾರದು.’

ನವೆಂಬರ ತಿಂಗಳ ಕೊನೆಗೆ ಆಸ್ಕರ್ ಗತಿಸಿದ. ಒಂದು ಆತ್ಮಹತ್ಯಾ ಬಾಂಬ್ ಆತನ ಹತ್ತಿರಕ್ಕೆ ಬಂದು ಸ್ಫೋಟಗೊಂಡಿತು. ಸಿಕ್ಕಿದ ಶರೀರ ಭಾಗಗಳನ್ನು ಯಾರಿಗೂ ತೋರಿಸದೆ ಒಂದು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿ ಅಮೇರಿಕಾಕ್ಕೆ ಕಳುಹಿಸಲಾಯಿತು. ರೋಜರ್ ಒಂದು ಇಡೀ ದಿವಸ ಮೂಕನಾಗಿ ಕುಳಿತ. ಮರುದಿವಸ ಆತ ಅಳತೊಡಗಿದ. ನಡುನಡುವೆ ವಿವಶನಾದ. ಡಾಕ್ಟರುಗಳು ಅವನನ್ನು ಆಸ್ಪತ್ರೆಗೆ ಸೇರಿಸಿ ನಿದ್ದೆಮದ್ದು ಚುಚ್ಚಿದರು. ಕೋಣೆಗೆ ಮರಳಿ ಬಂದ ಬಳಿಕವೂ ರೋಜರ್ ಹೆಚ್ಚೇನೂ ಮಾತನಾಡಲಿಲ್ಲ. ಒಂದು ದಿನ ರಾತ್ರಿ ಏನೋ ಶಬ್ದ ಕೇಳಿ ಪಾಡಿ ಟಾರ್ಚ್ ಹಿಡಿದಾಗ, ಟಾರ್ಚ್ ಬೆಳಕಿನಲ್ಲಿ ಸಣ್ಣ ವೃತ್ತದೊಳಗೆ – ಚಂದ್ರನೊಳಗಿನ ಮೊಲದಂತೆ – ಗೋಡೆಗೆ ಅಂಟಿದ ರೋಜರ್‌ನ ದೊಡ್ಡ ಮೂಗೂ ದಪ್ಪನೆಯ ತುಟಿಯೂ ಕಾಣಿಸಿತು. ಆತ ಗೋಡೆಗೆ ಆತು ಕುಳಿತು ಆಸ್ಕರಿನ ಚಿತ್ರವನ್ನು ಚುಂಬಿಸುತ್ತಿದ್ದ. ಪಾಡಿ ಟಾರ್ಚ್ ನಂದಿಸಿ ಚಂದ್ರನನ್ನು ಅಸ್ತಮನಕ್ಕಟ್ಟಿದ.

ಡಿಸೆಂಬರ್ ತಿಂಗಳ ತಂಪಾದ ಒಂದು ರಾತ್ರಿಯಲ್ಲಿ ರೋಜರೂ ಪಾಡಿಯೂ ಮಾತ್ರವೇ ಕೊಠಡಿಯಲ್ಲಿದ್ದರು. ಅವರು ಮಲಗಿದ ನಂತರ ಬಾಗಿಲನ್ನು ಯಾರೋ ತಟ್ಟಿದರು. ರೋಜರ್ ಬಾಗಿಲು ತೆರೆದಾಗ ಯೂನಿಫಾರ್ಮ್ ಹಾಕಿದ ಒಂದು ಗುಂಪು ಮಿಲಿಟರಿಯವರೂ ಕ್ಯಾಪ್ಟನೂ ನಿಂತಿದ್ದರು. ಕ್ಯಾಪ್ಟನ್ ಹೇಳಿದ: ‘ರೋಜರ್, ಬೇಗ ಸಿದ್ಧನಾಗು. ಒಂದು ಕೆಲಸ ಇದೆ.’

‘ನನ್ನಿಂದಾಗದು’

‘ಆರ್ಡರಿದು’ ಕ್ಯಾಪ್ಟನ್ ಹೇಳಿದ.

‘ಇವತ್ತು ಕೈ ನಡುಗ್ತದೆ. ಇವತ್ತು ಸಿಯಾಟಲಿನ ಜೂ ಸ್ಮಶಾನದಲ್ಲಿ ಆಸ್ಕರನ ಶವಸಂಸ್ಕಾರ. ನಿಮ್ಮೊಂದಿಗೆ ಪಾಡಿ ರ‍್ತಾನೆ.’

‘ಸಾಲದು ಹೆಚ್ಚು ಪರಿಚಿತನಾದ ವ್ಯಕ್ತಿಯೇ ಬೇಕು’ ಕ್ಯಾಪ್ಟನ್ ಹೇಳಿದ.

‘ಪಾಡಿ ಕೆಲಸಮಾಡ್ತಾನೆ. ಜೊತೆಗೆ ನಾನೂ ಬರ‍್ತೇನೆ’ ರೋಜರ್ ಹೇಳಿದ.

ಮಿಲಿಟರಿಯವರು ಅವರಿಬ್ಬರ ಕಣ್ಣನ್ನು ಬಟ್ಟೆಯಲ್ಲಿ ಕಟ್ಟಿದ ಬಳಿಕ ಒಂದು ವಾಹನದ ಬಳಿಗೆ ನಡೆಯಿಸಿದರು. ಅಂಧರತೆ ನಡೆಯುವಾಗ ಸಮಯವೂ ದೂರವೂ ಹೆಚ್ಚಾಗುತ್ತದೆ. ಆದ್ದರಿಂದ ಎಷ್ಟು ಹೊತ್ತಾದ ಮೇಲೆ ನಡೆತ ನಿಂತಿತೆಂಬುದನ್ನು ಪಾಡಿಗೆ ಊಹಿಸಲು ಸಾಧ್ಯವಾಗಲಿಲ್ಲ.

ಕಣ್ಣಿನ ಕಟ್ಟುಗಳನ್ನು ಬಿಚ್ಚಿದಾಗ ಅವರು ಒಂದು ಚಿಕ್ಕ ಕೋಣೆಯಲ್ಲಿದ್ದರು. ಅದರ ಪಕ್ಕದ ನಡುಭಾಗದಲ್ಲಿ, ಉತ್ತರ ದಿಕ್ಕಿನಲ್ಲಿ ಒಂದು ಅರವತ್ತು ವಾಟ್ಸ್ ಬಲ್ಬ್ ನೇತಾಡುತ್ತಿತ್ತು. ಬಲ್ಬಿನ ಕೆಳಗೆ ಒಂದು ಮರದ ಕುರ್ಚಿಯಲ್ಲಿ ಕಟ್ಟಿ ಹಾಕಲಾದ ಕಪ್ಪನೆಯ ವ್ಯಕ್ತಿಯೊಬ್ಬ ಕುಳಿತುಕೊಂಡಿದ್ದ. ಆತನ ಎಡದ ರೆಪ್ಪೆಯ ಮೇಲ್ಭಾಗದಲ್ಲಿ ರಕ್ತ ಹರಿದದ್ದರ ಗಾಯವಿತ್ತು. ಪಾಡಿ ಮುದುಕನ ಸುರುಟಿದ ಗಡ್ಡದ ಕೂದಲನ್ನು ಕತ್ತರಿಯಿಂದ ಕತ್ತರಿಸತೊಡಗಿದ. ರೋಜರೂ ಕೆಲವು ಸೈನಿಕರೂ ಹತ್ತಿರದಲ್ಲೆ ನೋಡುತ್ತ ನಿಂತರು. ವೃದ್ಧನ ಕಣ್ಣು ಸತ್ತವರ ಕಣ್ಣಿನಂತೆ ನಿಶ್ಚಲವಾಗಿತ್ತು. ಗುಳಿ ಬಿದ್ದ ಕೆನ್ನೆಗಳ ಮೇಲೆ ಕತ್ತರಿ ಓಡಿಸುತ್ತಿದ್ದಾಗ ಮಾತ್ರ ಆತ ಕಣ್ಣು ಮುಚ್ಚಿದ. ಅಲ್ಲಿ ಏನೋ ಗಾಯ ಇದ್ದ ಹಾಗೆ ಪಾಡಿಗೆ ಅನ್ನಿಸಿತು. ಆತ ಕತ್ತರಿಯ ಚಲನೆಯನ್ನು ಇನ್ನಷ್ಟು ಮೃದುಗೊಳಿಸಿದ. ಪಾಡಿ ಆತನ ಮುಖಕ್ಕೆ ಶೇವ್ ಮಾಡಲೆಂದು ನೊರೆ ಮೆತ್ತಿದ.

ವೃದ್ಧನ ಮುಖದಿಂದ ನೊರೆ ಮಿಶ್ರಿತ ಗಡ್ಡ ಬೋಳಾಗುತ್ತಿದ್ದಂತೆಯೆ ಸದ್ದಾಂ ಹುಸೈನ್ ಇನ್ನಷ್ಟು ಸ್ಪಷ್ಟಗೊಳ್ಳತೊಡಗಿದ.

ರೋಜರ್ ಹೇಳಿದ : ‘ನಾನು ಏನೀ ಕಾಣ್ತಿರೋದು ಏಸುವೆ !’

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ಕೆಕೆ ಗಂಗಾಧರನ್ ಅನುವಾದಿಸಿದ ‘ಬಿರಿಯಾನಿ’ ಕಥಾಸಂಕಲನ ಸದ್ಯದಲ್ಲೇ ಓದಿಗೆ

ಪಾಡಿ ಸದ್ದಾಮಿನ ಮೀಸೆಯನ್ನೂ ಕೂದಲನ್ನೂ ಚಿತ್ರಗಳಲ್ಲಿ ಕಂಡ ಸದ್ದಾಮಿನ ನೆನಪಿನಲ್ಲಿ ಕತ್ತರಿಸಿದ. ಮರಳಿ ಹೋಗುವಾಗಲೂ ರೋಜರನ್ನೂ ಪಾಡಿಯನ್ನೂ ಕಣ್ಣು ಕಟ್ಟಿ ಒಯ್ದಿದ್ದರು. ರೋಜರ್ ಆತನ ಕಿಸೆಯಿಂದ ಮೊಬೈಲ್ ಫೋನ್ ತೆಗೆದು, ನಂಬರನ್ನೇನೂ ಡಯಲ್ ಮಾಡದೆ ಕರೆದ : ‘ಹಲೋ’ ಎರಡು ಮೂರು ‘ಹಲೋಗಳ’ ಬಳಿಕ ರೋಜರ್ ಕೇಳಿದ: ‘ದೇವರಲ್ವೆ? ಇದು ನಾನು ರೋಜರ್ ಡಿಕ್ಸನ್. ಆಸ್ಕರ್ ಸಿಗಬಹುದಾ ಒಮ್ಮೆ?’ ಸ್ವಲ್ಪ ಹೊತ್ತಿನ ಮೌನದ ಬಳಿಕ ರೋಜರ್ ಹೇಳಿದ: ‘ಮುದ್ದು ಆಸ್ಕರ್, ನಿಂಗೆ ಸಂಗತಿ ಗೊತ್ತಾಯ್ತಾ? ನಮ್ಮ ಪಾಡಿ, ಇಂಡಿಯಾದ ಒಂದು ಮೂಲೆಯಿಂದ ಬಂದ ಪಾಡಿ, ಸದ್ದಾಮ್ ಹುಸೇನ್‌ನ ಗಡ್ಡ ಬೋಳಿಸಿದ.’ ರೋಜರ್ ನಗತೊಡಗಿದ. ಸೈನಿಕರು ಮೊಬೈಲ್ ಕಿತ್ತು ತೆಗೆದರು. ರೋಜರ್ ಕೇಳಿದ: ‘ದೇವರ ಹತ್ರ ಮಾತಾಡೋದಕ್ಕೆ ಸೆಲ್‌ಫೋನ್ ಯಾಕೆ ?’

ಮಾರನೆಯ ದಿವಸ ರೋಜರನ್ನು ಆಸ್ಪತ್ರೆಗೆ ಸೇರಿಸಿದರು. ಮುಂದಿನ ವಾರವೆ ಆತನನ್ನು ಅಮೇರಿಕಾಕ್ಕೆ ವಾಪಾಸು ಕಳುಹಿಸಿದರು.

ರೋಜರ್ ಹೋದ ದಿವಸ ಸಂಜೆಗೆ ಕೋಣೆಯಲ್ಲಿ ಪಾಡಿ ಒಬ್ಬನೇ ಕುಳಿತಿದ್ದಾಗ ನಾಲ್ಕು ಮಂದಿ ಯುವ ಗೂಢಚಾರರು ಅಲ್ಲಿಗೆ ಹೊಸದಾಗಿ ವಾಸ್ತವ್ಯಕ್ಕೆಂದು ಬಂದರು. ಖಾಲಿ ಬಿದ್ದ ಮಂಚಗಳಲ್ಲಿ ಅವರ ಹಾವರ್‌ಸ್ಯಾಕ್ಕುಗಳನ್ನು ಇಳಿಸಿದ ಬಳಿಕ ಗೂಢಚಾರರು ಕೈಯಲ್ಲಿದ್ದ ಚೆಂಡನ್ನು ಅತ್ತಿತ್ತ ಬಿಸಾಡಿ ಆಡ ತೊಡಗಿದರು. ಚೆಂಡು ಕೈಯಿಂದ ಉರುಳಿ ಬೀಳುವ ಮಧ್ಯಂತರದ ಹೊತ್ತಿನಲ್ಲಿ ಯುದ್ಧದ ಭೀತಿ ಅವರನ್ನು ಆವರಿಸುತ್ತಿತ್ತು. ಮಾರನೆಯ ದಿವಸ ಬೆಳಿಗ್ಗೆ ಪಾಡಿ ಅವರ ಕೂದಲನ್ನು ಕತ್ತರಿಸಿದ.

(ಮುಗಿಯಿತು)

ಈ ಕಥೆಯ ಎಲ್ಲಾ ಭಾಗಗಳನ್ನು, ಇತರೆ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 1:14 pm, Fri, 3 June 22

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ