AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ‘ಊರವರ ಏಟು ತಿನ್ನೋದಕ್ಕಿಂತ ಒಳ್ಳೇದು ಇದು’

Short Story of N.S. Madhavan : ‘ಏಸುಕ್ರಿಸ್ತನಿಗೂ ನನಗೂ ತಲಾ ಐದು ಗಾಯಗಳು.’ ನಾರಾಯಣನ್ ಕೈಯೆತ್ತಿ ಪಪ್ಪುವಿನ ಕಪಾಳಕ್ಕೆ ಹೊಡೆದ. ಏಟಿನ ಶಕ್ತಿಗಿಂತ ಹೆಚ್ಚು ತಬ್ಬಿಬ್ಬು ಕಾರಣವಾಗಿ ಆತ ನೆಲದ ಮೇಲೆ ಬಿದ್ದ. ನಾರಾಯಣನ್ ಪಪ್ಪುವಿನ ಬೆನ್ನಿಗೆ ಮೆಟ್ಟಿದ.

Literature: ನೆರೆನಾಡ ನುಡಿಯೊಳಗಾಡಿ; ‘ಊರವರ ಏಟು ತಿನ್ನೋದಕ್ಕಿಂತ ಒಳ್ಳೇದು ಇದು’
ಲೇಖಕರಾದ ಎನ್. ಎಸ್. ಮಾಧವನ್, ನಾ. ದಾಮೋದರ ಶೆಟ್ಟಿ
ಶ್ರೀದೇವಿ ಕಳಸದ
|

Updated on: Jun 03, 2022 | 11:53 AM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಪಪ್ಪು ಶೇವ್ ಮಾಡುವ ವಿದ್ಯೆ ಕಲಿಯತೊಡಗಿದ್ದು ಒಂದು ಜನವರಿ ತಿಂಗಳಿನಲ್ಲಿ. ವ್ರತ ಮುಗಿಸಿ ನಲವತ್ತೊಂದು ದಿನದ ಗಡ್ಡದೊಂದಿಗೆ ಶಬರಿಮಲೆಯ ಭಕ್ತರು ಹಿಂದಿರುಗುವ ಸಮಯ. ಗಡ್ಡದ ಆ ವಸಂತದಲ್ಲಿ ಆ ರೋಮವನ್ನು ಕತ್ತರಿಯಿಂದ ಕತ್ತರಿಸುತ್ತಲೇ ಆತ ಅಭ್ಯಾಸ ಪ್ರಾರಂಭಿಸಿದ್ದು. ನಾಲ್ಕೈದು ತಿಂಗಳು ಕಳೆದ ಬಳಿಕ ಒಂದು ಮಂಗಳವಾರ ನಾರಾಯಣನ್ ಪಪ್ಪುವನ್ನು ಬೇಗನೆ ಎಬ್ಬಿಸಿ ಹತ್ತಿರದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿದ. ಆಮೇಲೆ ಗಡ್ಡ ಬೋಳಿಸುವ ಕತ್ತಿಯನ್ನು ಕೈಬದಲಿಸಿದ. ಪಪ್ಪು ಅಪ್ಪನ ಕಾಲು ಮುಟ್ಟಿ ನಮಸ್ಕರಿಸಿದ. ನಾರಾಯಣನ್ ಮನೆಯ ಮುಂದಿನ ಹಜಾರದಲ್ಲಿ ಕುಳಿತ. ದಪ್ಪನೆಯ ನೊರೆಯನ್ನು ಪಪ್ಪು ಅಪ್ಪನ ಕೆನ್ನೆಗೆ ಬಳಿದ ಅವನ ಅಮ್ಮನೂ ಅಣ್ಣ ಕೇಶವನೂ ಕುಟುಂಬದ ಇತರ ಸದಸ್ಯರೂ ನೋಡುತ್ತ ನಿಂತರು. ಬೋಳಿಸಿ ಆದಾಗ ನಾರಾಯಣನ್ ಕನ್ನಡಿ ಕೇಳಿದ. ಬೆರಳುಗಳಿಂದ ಆತ ಮುಖದ ಗಾಯಗಳನ್ನು ಒಂದೊಂದಾಗಿ ಲೆಕ್ಕಹಾಕಿದ. ಲೋಟ್ಟೋ ಟಿಕೆಟಿನಲ್ಲಿ ಕಪ್ಪಾಗಿಸಿದ ಸಂಖ್ಯೆಗಳಂತೆ ಚಿಕ್ಕ ಚಿಕ್ಕ ಬೊಟ್ಟುಗಳು ನಾರಾಯಣನ್‌ನ ಮುಖದಲ್ಲಿ ಅಲ್ಲಲ್ಲಿ ನೆಲೆಸಿತ್ತು.

ಕಥೆ : ಕ್ಷೌರಿಕ | ಮಲಯಾಳಂ : ಎನ್.ಎಸ್. ಮಾಧವನ್ | ಕನ್ನಡಕ್ಕೆ : ನಾ. ದಾಮೋದರ ಶೆಟ್ಟಿ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ

(ಭಾಗ 2)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

‘ಏಸುಕ್ರಿಸ್ತನಿಗೂ ನನಗೂ ತಲಾ ಐದು ಗಾಯಗಳು.’ ನಾರಾಯಣನ್ ಕೈಯೆತ್ತಿ ಪಪ್ಪುವಿನ ಕಪಾಳಕ್ಕೆ ಹೊಡೆದ. ಏಟಿನ ಶಕ್ತಿಗಿಂತ ಹೆಚ್ಚು ತಬ್ಬಿಬ್ಬು ಕಾರಣವಾಗಿ ಆತ ನೆಲದ ಮೇಲೆ ಬಿದ್ದ. ನಾರಾಯಣನ್ ಪಪ್ಪುವಿನ ಬೆನ್ನಿಗೆ ಮೆಟ್ಟಿದ. ಮತ್ತೂ ಒದೆಯಲೆಂದು ಕಾಲೆತ್ತಿದಾಗ ಪಪ್ಪುವಿನ ಅಮ್ಮನೂ ಕೇಶವನ ಹೆಂಡತಿ ಪ್ರೀಜೆಯೂ ನಾರಾಯಣನನ್ನು ತಡೆದರು.

‘ಜನರ ಮುಖವೇ ನಮ್ಮ ಸೊತ್ತೂಂತ ಈ ಫಟಿಂಗನಿಗೆ ಗೊತ್ತಿಲ್ಲ’ – ನಾರಾಯಣನ್ ಹೇಳಿದ. ಆತ ಮತ್ತೂ ಹೊಡೆಯಲೆಂದು ಕೈ ಎತ್ತಿದ. ಹೆಂಗಸರು ಗಟ್ಟಿಯಾಗಿ ರೋಧಿಸಿದರು.

‘ಊರವರ ಏಟು ತಿನ್ನೋದಕ್ಕಿಂತ ಒಳ್ಳೇದು ಇದು’ ಕೇಶವನ್ ಮನೆಯೊಳಕ್ಕೆ ಕಾಲಿರಿಸುತ್ತ ಹೇಳಿದ. ಮೂರು ತಿಂಗಳು ಕಳೆದ ಮೇಲೆ ಒಂದು ಮಂಗಳವಾರ ನಾರಾಯಣನ್ ಪಪ್ಪುವನ್ನು ಬೇಗ ಎಬ್ಬಿಸಿದ. ಈ ಬಾರಿ ಶೇವ್ ಮಾಡಿಸಿಕೊಳ್ಳಲು ಕುಳಿತಿದ್ದು ಕೇಶವನ್. ಗಾಯದ ಸಂಖ್ಯೆ ಆರಕ್ಕೇರಿತು. ನಾರಾಯಣನ್ ಪಪ್ಪುವಿನ ಕೆಪ್ಪೆಗೆ ಬಿಗಿದ. ಆದರೆ, ಈ ಬಾರಿ ನೆಲಕ್ಕೆ ಬೀಳುವ ಸರದಿ ನಾರಾಯಣನದಾಗಿತ್ತು.

ಆತ ಹಲವು ಬಾರಿ ಎದ್ದು ನಿಲ್ಲಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪಪ್ಪುವೂ ಕೇಶವನೂ ನಾರಾಯಣನನ್ನು ಆಧರಿಸಿ ನಿಲ್ಲಿಸಲು ಯತ್ನಿಸಿದರೂ ಆತ ಮತ್ತೆ ನೆಲಕ್ಕೆ ಒರಗಿದ. ಕೊನೆಗೆ ಎಲ್ಲರೂ ಆಧರಿಸಿ ಹಿಡಿದು ಆತನನ್ನು ಮನೆಯ ಒಳಗಿನ ಮಂಚದಲ್ಲಿ ಮಲಗಿಸಿದರು. ಆತನ ಒಂದು ಪಾರ್ಶ್ವ ನಿಶ್ಶಕ್ತಿಯಿಂದ ಬಳಲಿತ್ತು. ಐದನೆಯ ದಿನ ನಾರಾಯಣನ್ ನಿದ್ದೆಯಲ್ಲೇ ಸತ್ತು ಹೋದ. ಮುಂಜಾನೆ ಅಮ್ಮನ ಅಳುವಿನ ದನಿ ಕೇಳಿ ಎಲ್ಲರೂ ಎಚ್ಚರಗೊಂಡರು. ಮಂಚದ ಸುತ್ತ ನಿಂತು ಎಲ್ಲರೂ ಅಳುತ್ತಿರುವುದರ ಮಧ್ಯೆ ಅಮ್ಮ ಅಳು ನಿಲ್ಲಿಸಿ ಹೇಳಿದಳು : ಎಲ್ಲರೂ ಹೊರಗೆ ಹೋಗಿ, ಪಪ್ಪು, ನೀನು ಮಾತ್ರ ನಿಲ್ಲು.

ಜನ ಕರಗಿದಾಗ ಅಮ್ಮ ಬಾಗಿಲು ಮುಚ್ಚಿದಳು. ಅಮ್ಮ ನಾರಾಯಣನ ಶೇವಿಂಗ್ ಸಾಮಗ್ರಿಗಳನ್ನು ತಂದಳು ‘ಮಗೂ ಪಪ್ಪು, ಆ ಮುಖವನ್ನೊಮ್ಮೆ ನೋಡು. ದಿನವೂ ಬೆಳಗ್ಗೆ, ಸಾಯಂಕಾಲ ಶೇವ್ ಮಾಡುವ ವ್ಯಕ್ತಿ ಅದು. ಐದು ದಿನದ ಗಡ್ಡ ಸಮೇತ ಮಲಗಿರೋ ಆ ಮುಖವನ್ನು ಯಾರೂ ನೋಡಬಾರದು. ಮಗೂ ಅಪ್ಪನಿಗೆ ಶೇವ್ ಮಾಡು.’

‘ನನ್ನಿಂದಾಗಲ್ಲ’ ಪಪ್ಪು ಹೇಳಿದ.

ಅಮ್ಮ ಪಪ್ಪುವನ್ನು, ನೆನಪು ಬಂದಾಗಿನಿಂದ ಮೊದಲ ಬಾರಿಗೆ, ಅಪ್ಪಿ ಹಿಡಿದಳು. ‘ಒಳ್ಳೆಯ ಮಗು ಅಲ್ವ, ಅಮ್ಮ ಹೇಳೋದನ್ನು ಕೇಳು.’

ಪಪ್ಪು ನೆಲದಲ್ಲಿ ಕುಳಿತು ನಾರಾಯಣನ ಮುಖದ ಮೇಲೆ ನೊರೆ ಬರಿಸಿದ ಶೇವಿಂಗ್ ಕ್ರೀಂ ಹಚ್ಚಿದ. ಮುಖ ಅರ್ಧ ಬೋಳಿಸಿ ಆದಾಗ ಪಪ್ಪು ನಿಧಾನವಾಗಿ ಏದುಸಿರು ಬಿಡತೊಡಗಿದ. ಕೊನೆಯ ಬಾರಿಗೆ ನೊರೆಯ ಜಾಡನ್ನು ಕೆರೆದು ತೆಗೆಯುವಾಗ ಆತನ ಕಣ್ಣೀರ ಕಟ್ಟೆ ಒಡೆಯಿತು. ಅಮ್ಮ ನಾರಾಯಣನ ಮುಖವನ್ನು ಬೈರಾಸಿನಿಂದ ಒರಸಿದಳು. ಆಮೇಲೆ ಮುಖದ ಎದುರಿಗೆ ಕನ್ನಡಿ ಹಿಡಿದಳು. ನಾರಾಯಣನ ಗಲ್ಲ ನೇವರಿಸುತ್ತ ಅಮ್ಮ ಹೇಳಿದಳು: ‘ನೋಡಿ, ನಮ್ಮ ಮಗ ಎಷ್ಟು ಚೆನ್ನಾಗಿ ಶೇವ್ ಮಾಡಿದ್ದಾನೆ. ಹೇಗೆ ಮಿನುಗ್ತಾ ಇದೆ. ಒಂದೇ ಒಂದು ಗಾಯ ಕೂಡ ಇಲ್ಲ’. ಕೇಶವನ್ ಬಾಗಿಲು ಬಡಿಯುತ್ತ ಗಟ್ಟಿಯಾಗಿ ಕೇಳಿದ : ‘ಏನು ಹುಚ್ಚು ಕೆಲ್ಸ ಮಾಡ್ತಾ ಇದ್ದೀರಿ ಒಳಗೆ? ಅದನ್ನು ಕೆಳಗಿಳಿಸಬೇಕಾದ ಹೊತ್ತಾಯ್ತು’ ಅದು – ಮಧ್ಯಮ ಪುರುಷ ಸರ್ವನಾಮದ ನಿರ್ವಿಕಾರತೆಯೊಂದಿಗೆ ನಾರಾಯಣನ್ ಮೃತ ದೇಹವಾದ.

ನಾರಾಯಣನ್ ಗತಿಸಿ ಸ್ವಲ್ಪ ದಿನ ಕಳೆದ ಮೇಲೆ ಅಮ್ಮ ಅನಿರೀಕ್ಷಿತವಾಗಿ ರಾಯಲ್ ಹೇರ್ ಕಟ್ಟಿಂಗ್ ಸೆಲೂನಿಗೆ ಬಂದಳು. ಅಮ್ಮ ಹೇಳಿದಳು : ‘ಪಪ್ಪು, ಕುವೈಟಿನಿಂದ ಕೃಷ್ಣನ ಫೋನು ಈಗ ಬಂತಷ್ಟೆ. ನಿನಗೊಂದು ಒಳ್ಳೆಯ ಕೆಲಸ ಅವ ನೋಡಿ ಇಟ್ಟಿದ್ದಾನೆ ಇವತ್ತು ಸಂಜೆ ಆರೂವರೆ ಗಂಟೆಗೆ ಚಾಟ್ ಮಾಡ್ಲಿಕ್ಕೆ ರ‍್ಬೇಕೂಂತ ನಿನ್ನತ್ರ ಹೇಳ್ಲಿಕ್ಕೇಳಿದ’.

ಇದನ್ನೂ ಓದಿ : Literature: ಅನುಸಂಧಾನ; ‘ನನ್ನ ಕತೆಗಳಲ್ಲಿ ಈ ದೇಹ ಆನಂದದ ತಾಣವಾಗುವ ಬಗೆಯನ್ನು ತೋರಿಸಲು ಬಯಸುತ್ತೇನೆ’ ಬೆಲ್ ಆಲಿಡ್

ಕ್ರಿಸ್ 123 (ಕೃಷ್ಣನ್) : ಹಲೋ ಪಪ್ಪೂ

ಪದ್ಮ – 2000 (ಪಪ್ಪು) : ಹಲೋ ಕೆ. ಅಣ್ಣಾ

ಕ್ರಿಸ್ 123 : (ಇಂಗ್ಲಿಷ್ ಅಕ್ಷರಗಳಲ್ಲಿ ಮಲಯಾಳವನ್ನು ಕಂಪ್ಯೂಟರಿನಲ್ಲಿ ಟೈಪ್ ಮಾಡುತ್ತ) ಅಮ್ಮ ಹೇಳ್ಳಿಲ್ವ ?

ಪದ್ಮ… 2000 : ಹ್ಞೂಂ

ಕ್ರಿಸ್ 123 : ಒಂದು ಅಮೇರಿಕನ್ ಸೈನ್ಯದ ಬೆಟಲಿಯನ್‌ನಲ್ಲಿ ಬಾರ್ಬರ್ ಕೆಲಸ.

ಪದ್ಮ – 2000 : ಥ್ಯಾಂಕ್ಸ್, ಕೆ. ಅಣ್ಣಾ

ಕ್ರಿಸ್ 123 : ಅಮೇರಿಕನ್ ಅಂಬಾಸ್ಸಿಯ ನನ್ನೊಬ್ಬ ಕಸ್ಟಮರ್ ಮಾಡಿಕೊಟ್ಟದ್ದು.

ಪದ್ಮ – 2000 : ಹ್ಞೂಂ

ಕ್ರಿಸ್ 123 : ಒಂದು ಸೆಕ್ಯೂರಿಟಿ ಕಂಪೆನಿಯ ಹೆಸರಿನಲ್ಲಿ ವೀಸಾ ಮತ್ತು ಟಿಕೆಟನ್ನು ನಿನಗೆ ಕೊರಿಯರ್ ಮಾಡುತ್ತಾರೆ. ಅದಕ್ಕೂ ಮೊದಲು ಮುಂಬೈಯಲ್ಲಿ ಮೆಡಿಕಲ್ ಟೆಸ್ಟೂ ಇಂಟರ್‌ವ್ಯೂ –

ಪದ್ಮ – 2000 : ಅಮೇರಿಕಾಕ್ಕ? ನಂಬ್ಲಿಕ್ಕಾಗ್ತಾ ಇಲ್ಲ!

ಕ್ರಿಸ್ 123 : ಅಲ್ವೋ ಬೇಕೂಫ, ಕುವೈಟಿಗೆ. ಬೆಟಾಲಿಯನ್ ಈಗ ಕುವೈಟಿನಲ್ಲಿದೆ.

ಪದ್ಮ – 2000 : ಓ…

ಕ್ರಿಸ್ 123 : ಯುದ್ಧ ಮುಗಿದರೆ –

ಪದ್ಮ – 2000 : ಯುದ್ಧ ?

ಕ್ರಿಸ್ 123 : ನೀ ಪೇಪರ್ ಓದೋದಿಲ್ವ ?

ಪದ್ಮ – 2000 : ಟೀವಿಯಲ್ಲಿ ದಿನಾ ನೋಡ್ತೇನೆ. ಆದರೆ ಕೆ ಅಣ್ಣಾ, ಯುದ್ಧ ಇರಾಕಿನಲ್ಲಲ್ವ ನಡೇಲಿಕ್ಕಿರೋದು ?

ಕ್ರಿಸ್ 123 : ಈ ಬೆಟಾಲಿಯನ್ ಇರಾಕಿನ ಗಡಿದಾಟೋದಕ್ಕೆ ಕಾಯ್ತಾ ಕೂತಿದೆ.

ಕ್ರಿಸ್ 123 : ಬಸ್ (ಗಂಟೆಸದ್ದು)

ಕ್ರಿಸ್ 123 : ಬಸ್ (ಗಂಟೆಸದ್ದು)

ಕ್ರಿಸ್ 123 : ?

ಪದ್ಮ 2000 : ಹಲವರು ಚಾಟ್ ಮಾಡುವುದಕ್ಕೇಂತ ಎ / ಎಸ್ / ಎಲ್ (ಏಜ್, ಸೆಕ್ಸ್, ಲೊಕೇಶನ್) ಕೇಳಿ ಬಂದ್ರು. ಅವನ್ನೆಲ್ಲ ಬ್ಲಾಕ್ ಮಾಡ್ತಾ ಇದ್ದೆ.

ಕ್ರಿಸ್ 123 : ಮೊದಲಿಗೆ ನೀನು ನಿನ್ನ ಹೆಸರನ್ನು ಬದಲಾಯಿಸು. ಹುಡಗೀಂತ ಜನ ಭಾವಿಸ್ತರ‍್ಬೇಕು.

ಪದ್ಮ – 2000: ಹೌದು!

ಕ್ರಿಸ್ 123 : ಯುದ್ಧ ನಡೆದ್ರೂ ಒಂದು ವಾರದಲ್ಲಿ ಮುಗೀತದೆ ಅದು ಮುಗಿದ್ರೆ ನಿಂಗೆ ಅಮೇರಿಕಾಕ್ಕೂ ಹೋಗಬಹುದು. ಗ್ರೀನ್‌ಕಾರ್ಡ್ ಮತ್ತು ಸಿಟಿಜನ್ ಶಿಪ್…

ಪದ್ಮ – 2000 : ಸದ್ದಾಂ ಬಿಟ್ಟುಕೊಟ್ಟಾನಾ ? ಭಯಂಕರ ಗಟ್ಸಲ್ವ ಆಸಾಮಿಗೆ ?

ಕ್ರಿಸ್ 123 : ಅಮೇರಿಕಾದ ಜೊತೆಗಲ್ವ ಆಟ. ಒಂದು ವಾರ, ಹೆಚ್ಚಾದ್ರೆ ಎರಡು ವಾರ.

ಪದ್ಮ – 2000 : ಹ್ಞೂಂ.

ಕ್ರಿಸ್ 123 : ಕೆಲವೊಮ್ಮೆ ಸೈನಿಕರಿಗೆ ಏನೂ ಕೆಲ್ಸ ಇರೋದಿಲ್ಲ.

ಪದ್ಮ – 2000 : ?!

ಕ್ರಿಸ್ 123 : ಜನರಿಗೆ ಸದ್ದಾಮಿನ ಮೇಲೆ ಸಿಟ್ಟಿದೆ. ಅಷ್ಟೊಂದು ಜನರನ್ನಾತ ಕೊಂದಿದ್ದಾನೆ. ಜನ್ರು ಸಮಯ ಕಾಯ್ತಾ ಇದ್ದಾರೆ.

ಪದ್ಮ – 2000 : ಊಞಂ

ಕ್ರಿಸ್ 123 : ಜನರು ಸೈನಿಕರನ್ನು ಸ್ವಾಗತಿಸುವರು, ಧ್ವಜ ನಿಂಬೆಹಣ್ಣಿನೊAದಿಗೆ.

ಪದ್ಮ – 2000 : ಊಞಂ

ಕ್ರಿಸ್ 123 : ಕೆಲ್ಸಕೂಡ ಸುಲಭ. ಬಿಳಿಯರ ಕೂದಲು ಸಪೂರ. ಕತ್ತರಿ ವೇಗವಾಗಿ ಓಡ್ತದೆ.

ಪದ್ಮ – 2000 : ನಿಗ್ರೋಗಳದು? ಕಬ್ಬಿಣದ ಸುರುಳಿಗಳ ಹಾಗಲ್ವ ಅವರ ಕೂದಲು ?

ಕ್ರಿಸ್ 123 : ಕಾಣುವಷ್ಟೇನೂ ಕಷ್ಟ ಇಲ್ಲ. ಒತ್ತಿ ಕತ್ತರಿಸ್ಬೇಕು.

ಕುವೈಟಿನಲ್ಲಿ ಬೆಟಾಲಿಯನ್ ಸೇರಿದ ದಿನ ಪಪ್ಪು ಮೊತ್ತ ಮೊದಲು ಪರಿಚಯ ಮಾಡಿಕೊಂಡದ್ದು ರೋಜರ್ ಎಂಬ ಹೆಸರಿನ ತುಸು ಮೇಲಿನ ಹಂತದ ಬಾರ್ಬರನ್ನು. ಆತ ಆರಡಿ ಎತ್ತರದ, ತಲೆ ಬೋಳಿಸಿಕೊಂಡ ಓರ್ವ ಕಪ್ಪು ಅಮೇರಿಕನ್ ಆಗಿದ್ದ. ತೋಳಿನ ಮಾಂಸರಾಶಿಯ ಕಿರು ಗುಡ್ಡದ ಮೇಲೆ ತಲೆಯಿಟ್ಟು ಮಲಗಿ, ಮೊಣಕೈಯ ಗುಳಿಗಳನ್ನು ದಾಟಿ, ಕೈಯ ಅಡಿ ಹೊರಳಿ ಸಂಚರಿಸಿ, ಕೊನೆಗೆ ಕಿರು ಬೆರಳಿನ ತುದಿಯಲ್ಲಿ ಸಪೂರ ಬಾಲದೊಂದಿಗೆ ಕೊನೆಗೊಳ್ಳುವ ಬೃಹತ್ ಸರ್ಪವೊಂದನ್ನು ಎಡಗೈಯಲ್ಲಿ ಪಚ್ಚೆ ಕುತ್ತಿದ್ದ. ಪಚ್ಚೇಂತ ಹೇಳುವುದೂ ಸರಿಯಲ್ಲ ; ಹಾವಿನ ಬಣ್ಣ ನೀಲ ಹಾಗೂ ಕೆಂಪಾಗಿತ್ತು.

ಇಂಗ್ಲಿಷನ್ನು ತಡವರಿಸದೆ ಹೇಳಲು ಬಾರದ ಪಪ್ಪುವಿಗೆ ಅದನ್ನು ಕೇಳಿದರೆ ಚೆನ್ನಾಗಿ ಅರ್ಥವಾಗುತ್ತಿತ್ತು. ಆದರೆ ರೋಜರ್ ಹೇಳಿದ್ದು ಯಾವುದೂ ಆತನಿಗೆ ಮೊದಮೊದಲು ಅರ್ಥವಾಗಲೇ ಇಲ್ಲ. ಹಾಲಿವುಡ್ ಸಿನೆಮಾಗಳಲ್ಲೂ ಟೀವಿಯಲ್ಲೂ ಕೇಳುವ ಭಾಷೆಯಲ್ಲದೆ, ಅಮೇರಿಕಾದಲ್ಲಿ ಮಾತನಾಡುವ ಇಂಗ್ಲಿಷ್‌ಗೆ ಹಲಬಗೆಯ ರಾಗಗಳಿವೆ ಎಂದು ಆತನಿಗೆ ತೋರಿತು. ಕ್ಷಮಾಶೀಲನೂ ಶಾಂತನೂ ಆದ ರೋಜರ್ ಪಪ್ಪುವನ್ನು ಹೆದರಿಸುವ ರೀತಿಯಲ್ಲಿ ಸದ್ದೇರಿಸಲಿಲ್ಲ. ಆತ ಕೈಯ ಆಂಗಿಕ ಚಲನೆ ಬಳಸಿ ಅವನೊಂದಿಗೆ ಮಾತನಾಡಿದ. ಅಮೇರಿಕಾದವರ ಕೈಯ ಉಪಭಾಷೆ ಕೂಡ ಮೊದಮೊದಲು ಪಪ್ಪುವಿಗೆ ಅರ್ಥವಾಗಲಿಲ್ಲ. ನಿಧಾನವಾಗಿ ಆತನಿಗೆ ಭಯ ಅನ್ನಿಸತೊಡಗಿತು. ಕೂದಲು ತೆಗೆಯುವಾಗ, ತೆಗೆಸಿಕೊಳ್ಳುವಾತನೊಂದಿಗೆ ಸ್ವಲ್ಪವಾದರೂ ಮಾತನಾಡಬೇಕೆಂಬುದು ಅನಿವಾರ್ಯವಾಗಿತ್ತು.

ಇದನ್ನೂ ಓದಿ : Booker Prize 2022: ‘ಇದು ಭಾರತೀಯ ಭಾಷೆಯ ಗೆಲುವು’ ಕೆ. ಎಸ್. ವೈಶಾಲಿ

ಪಪ್ಪು ಕ್ಯಾಂಪಿಗೆ ಬಂದ ಮಾರನೆಯ ದಿನದಿಂದ ಕೂದಲು ಕತ್ತರಿಸುವುದಕ್ಕೆ ಪ್ರಾರಂಭಿಸಿದ. ಅಂಗಳದಲ್ಲಿರಿಸಿದ ಎರಡು ಕುರ್ಚಿಗಳ ಎದುರು ಮಿಲಿಟರಿಯವರ ಚಿಕ್ಕ ಸಾಲು ಇತ್ತು. ಮೊದಲು ಕೂದಲು ತೆಗೆಸುವುದಕ್ಕೆ ಬಂದ ಮಿಲಿಟರಿಯಾತ ಪಪ್ಪುವಿನ ಕುರ್ಚಿಯಲ್ಲಿ ಕುಳಿತ. ರೋಜರ್ ಕೂದಲು ಕತ್ತರಿಸದೆ ನೋಡುತ್ತ ನಿಂತ. ಮಿಲಿಟರಿಯಾತನ ಕೂದಲಿಗೆ ನೀರು ಚಿಮುಕಿಸಿದ ಪಪ್ಪು ಕತ್ತರಿಸುವುದಕ್ಕೆ ಅಣಿಗೊಳಿಸಿದ. ಹಲವು ಕೋನಗಳಿಂದ ಆತ ಆ ತಲೆಯನ್ನು ನೋಡಿ ಅದಕ್ಕೆ ಹೊಂದುವ – ಮಿಲಿಟರಿಯಾತನ ಮುಖವನ್ನು ಅತಿ ಹೆಚ್ಚು ಸುಂದರ ಮಾಡುವ – ರೀತಿಯನ್ನು ಮನಸ್ಸಿನಲ್ಲಿ ರೂಪಿಸಿಕೊಂಡ. ಕೂದಲನ್ನು ಹಲವು ಬಾರಿ ಬಾಚಿ, ಗುಂಪು ಮೀರಿ ಬೆಳೆದು ನಿಂತ ಕೂದಲುಗಳನ್ನು ಅವನು ಕತ್ತರಿಸಿದ. ಕೆಲವೊಮ್ಮೆ ಆತ ಗುಂಪಿನಿಂದ ಬೇರ್ಪಟ್ಟು ಒಂಟಿಯಾಗಿ ನಿಂತ ಕೂದಲನ್ನು ಹುಡುಕಿ ತೆಗೆದು ಕತ್ತರಿಸಿದ. ಕೃಷ್ಣಣ್ಣನನ್ನು ಮೀರಿಸುವ ರೀತಿಯದ್ದಾಗಬೇಕು ತಾನು ಕತ್ತರಿಸುವ ರೀತಿ ಎಂದು ಪಪ್ಪು ಮನಸ್ಸಿನಲ್ಲೇ ತೀರ್ಮಾನಿಸಿದ.

‘ಹಾಗಲ್ಲ’ ರೋಜರ್ ಹೇಳಿದ್ದು ಪಪ್ಪುವಿಗೆ ಅರ್ಥವಾಗಲಿಲ್ಲ. ಮಿಲಿಟರಿಯಾತನೂ ರೋಜರೂ ಏನೋ ಹೇಳಿ ನಕ್ಕರು. ಪಪ್ಪು ಮತ್ತೂ ಮಿಲಿಟರಿಯಾತನ ಕೂದಲನ್ನು ಬಾಚಿ, ಕತ್ತರಿಸತೊಡಗಿದ. ರೋಜರ್ ಹಿಂದಿನಿಂದ ಬಂದು ಅವನ ಇಡಿಯ ದೇಹವನ್ನು ತನ್ನ ಕೈಗಳಿಂದ ಹಿಡಿದೆತ್ತಿ ದೂರದಲ್ಲಿಟ್ಟ. ಕೂದಲು ತೆಗೆಸಲೆಂದು ಬಂದವರೆಲ್ಲ ಗೊಳ್ಳೆಂದು ನಕ್ಕರು. ಒಂಬತ್ತು ಅಡಿ ಎತ್ತರದಿಂದ, ಪಪ್ಪು, ಕ್ಯಾಂಪಿನ ಗೋಡೆಯ ಆಚೆ ಭಾಗದ ಕುವೈಟಿನ ರಸ್ತೆಗಳೆಲ್ಲ ನಿರ್ಜನವಾಗಿ ಬಿದ್ದುಕೊಂಡಿರುವುದನ್ನು ಕಂಡ. ರೋಜರ್ ಮಿಲಿಟರಿಯಾತನ ಕೂದಲಿನಲ್ಲಿ ಕತ್ತರಿಯನ್ನು ಮೂರು ನಾಲ್ಕು ಬಾರಿ ಓಡಿಸಿ ಬಹುತೇಕ ಕತ್ತರಿಸಿ ತೆಗೆದ. ಆಮೇಲೆ ಕ್ರೋಪ್ ಮಾಡುವ ಮೆಷಿನನ್ನು ತಲೆಯ ಮೇಲಿನಿಂದ ಹಲವು ಬಾರಿ ಓಡಿಸಿದ. ಸ್ವಲ್ಪ ಹೊತ್ತಾದಾಗ ಮಿಲಿಟರಿಯಾತ ಕಾಲು ಇಂಚು ಉದ್ದದ ಕುತ್ತಿ ಕೂದಲಿನವನಾದ.

ಕನ್ವೆಯರ್ ಬೆಲ್ಟಿನಲ್ಲೋ ಎಂಬಂತೆ ಮಿಲಿಟರಿಯವರ ತಲೆಗಳೂ ಪಪ್ಪುವಿನ ಎದುರುಗಡೆ ಬಂದು ನಿಂತವು. ಅವುಗಳು ಕುತ್ತಿ ಕೂದಲಾಗಿ ಮರಳಿ ಹೋದವು. ಅಷ್ಟರಲ್ಲೆ ರೋಜರ್ ಅವನನ್ನು ಪಾಡಿ ಎಂಬುದಾಗಿ ಕರೆಯತೊಡಗಿದ್ದ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಈ ಕಥೆಯ ಎಲ್ಲಾ ಭಾಗಗಳನ್ನು, ಇತರೆ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ