New Book: ಅಚ್ಚಿಗೂ ಮೊದಲು; ಕೆಕೆ ಗಂಗಾಧರನ್ ಅನುವಾದಿಸಿದ ‘ಬಿರಿಯಾನಿ’ ಕಥಾಸಂಕಲನ ಸದ್ಯದಲ್ಲೇ ಓದಿಗೆ

Santhosh Echikkanam : ಬೆಚ್ಚಿ ಎಚ್ಚರಗೊಂಡು, ಇರುವೆಯಂತೆ ಸಿಕ್ಕಿಬಿದ್ದಿರುವ ಗುಳಿಯ ಜಾರುವ ಗೋಡೆಯ ಮೇಲೆ ಪಾದಗಳನ್ನೂರಿ ಹತ್ತಲು ಶ್ರಮಿಸಿದೆ. ಆದರೆ ನನ್ನ ಇಚ್ಛಾಶಕ್ತಿಯನ್ನು ಕುಂದಿಸುವ ಏಕಾಂತತೆ ನನ್ನನ್ನು ಮತ್ತೆಮತ್ತೆ ಕೆಳಕ್ಕೆ ತಳ್ಳುತ್ತಿತ್ತು.

New Book: ಅಚ್ಚಿಗೂ ಮೊದಲು; ಕೆಕೆ ಗಂಗಾಧರನ್ ಅನುವಾದಿಸಿದ ‘ಬಿರಿಯಾನಿ’ ಕಥಾಸಂಕಲನ ಸದ್ಯದಲ್ಲೇ ಓದಿಗೆ
ಮಲಯಾಳದ ಲೇಖಕ ಸಂತೋಷ್ ಏಚ್ಚಿಕಾನಂ ಮತ್ತು ಅನುವಾದಕ ಕೆ.ಕೆ. ಗಂಗಾಧರನ್
Follow us
ಶ್ರೀದೇವಿ ಕಳಸದ
|

Updated on: Jun 02, 2022 | 6:30 AM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ: ಬಿರಿಯಾನಿ ಮತ್ತು ಇತರ ಕಥೆಗಳು
ಮಲಯಾಳ ಮೂಲ : ಸಂತೋಷ್ ಏಚ್ಚಿಕಾನಂ
ಕನ್ನಡಕ್ಕೆ : ಕೆ.ಕೆ. ಗಂಗಾಧರನ್
ಪುಟ : 164
ಬೆಲೆ : ರೂ. 120
ಮುಖಪುಟ ವಿನ್ಯಾಸ : ವಿಶ್ವನಾಥ ಶೆಟ್ಟಿಗಾರ್
ಪ್ರಕಾಶನ : ಕನ್ನಡ ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು

*

ಭಾರತೀಯ ಭಾಷೆಗಳ ಸಾಹಿತ್ಯದ ಪೈಕಿ ಕನ್ನಡಕ್ಕೆ ವಿಶೇಷ ಸ್ಥಾನವಿರುವಂತೆಯೇ ಮಲಯಾಳಕ್ಕೂ ಒಳ್ಳೆಯ ಹೆಸರಿದೆ. ಸಾಕಷ್ಟು ಅನುವಾದಕರು ಮಲಯಾಳಿ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಇಂಥ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತಾ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡವನ್ನು ಇತರ ಭಾರತೀಯ ಭಾಷೆಗಳ ಜೊತೆಗೆ ಬೆಸೆಯುವ ಯತ್ನ ಮಾಡುತ್ತಿದೆ. ಸಂತೋಷ್ ಏಚ್ಚಕಾನಂ ಅನೇಕ ಕತೆಗಳು ಈಗಾಗಲೇ ವಿವಿಧ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುವುದರಿಂದ ಅವರು ಕನ್ನಡಿಗರಿಗೆ ಅಪರಿಚಿತರೇನಲ್ಲ. ನಮ್ಮ ಸುತ್ತಮುತ್ತ ನಡೆಯಬಹುದಾದ ಘಟನೆಗಳೇ ಅವರ ಕಥನಗಳಲ್ಲಿ ಕಲ್ಪನೆಯೊಂದಿಗೆ ಬೆರೆತು ಹೋಗುವುದರಿಂದ ಕಥೆಗಳು ಆಪ್ತವಾಗುವಂತಿವೆ. ಡಾ. ಅಜಕ್ಕಳ ಗಿರೀಶ್ ಭಟ್

ಇದನ್ನೂ ಓದಿ
Image
Literature: ಅನುಸಂಧಾನ; ‘ನನ್ನ ಕತೆಗಳಲ್ಲಿ ಈ ದೇಹ ಆನಂದದ ತಾಣವಾಗುವ ಬಗೆಯನ್ನು ತೋರಿಸಲು ಬಯಸುತ್ತೇನೆ’ ಬೆಲ್ ಆಲಿಡ್
Image
ವೈಶಾಲಿಯಾನ: ಇಂಗ್ಲಿಷ್! ಹೆಮ್ಮೆಯಿಂದ ಬಳಸುತ್ತಿದ್ದೇವೋ, ಸಂಕೋಚದಿಂದ ಮುದುಡಿ ಹೋಗುತ್ತಿದ್ದೇವೋ?
Image
National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್
Image
Award : ನಾಗರಾಜ ಕೋರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ

‘ನಾಯಿ ಕಾಪು’ ಆಯ್ದ ಭಾಗ

“ನಿನಗೆ ಒಪ್ಪುವ ಒಂದು ಕತೆಯಿದೆ. ಈಗ ನನ್ನ ಜೊತೆ ವಾಸವಾಗಿರುವ ಒಬ್ಬ ತಮಿಳಿನವನ ಜೀವನದ ಕತೆ. ಅದನ್ನು ಹೀಗೆ ಹೇಳಿದರೆ ಸರಿಹೋಗಲ್ಲ. ಅನುಭವಿಸಿದವನಿಂದ ನೀನು ನೇರವಾಗಿ ಕೇಳಿಸ್ಕೋಬೇಕು. ಆಗಲೇ ನಿನಗೆ ಅದರ ಏನಪ್ಪ ಅಂದರೆ ಅದರ ‘ಇದು’ ಸಿಗೋದು. ಆದ್ದರಿಂದ ನೀನು ಒಂದಿನ ಕುಂಬಳೆಗೆ ಬಾ. ರಾತ್ರೆ ಅಲ್ಲೇ ಇರುವೆಯಂತೆ. ನಮಗೆ ಅಲ್ಲಿನ ಫ್ಯಾಕ್ಟರಿಯ ಎಂ.ಡಿ. ಒಂದು ಮನೆ ಸರಿಮಾಡಿಕೊಟ್ಟಿದ್ದಾರೆ. ಮನೆಯ ಮಹಡಿಯ ಕೆಲಸ ಬಹುತೇಕ ಪೂರ್ತಿಯಾಗ್ತಾ ಇದೆ. ತೊಂದರೆ ಏನೂ ಇಲ್ಲಪ್ಪ. ಕೆಳಗಿನ ಫ್ಲೋರನ್ನು ವಾಸ ಯೋಗ್ಯವನ್ನಾಗಿ ಮಾಡಲಾಗಿದೆ. ಕುಂಬಳೆ ಪೇಟೆಯಿಂದ ಕೊಂಚ ಒಳಕ್ಕೆ ಹೋಗಬೇಕು. ಅಬ್ಬಬ್ಬಾ ಅಂದರೆ ಸುಮಾರು ಎಂಟು ಕಿಲೋಮೀಟರ್‌ನಷ್ಟಾಗಬಹುದು. ರಾತ್ರೆ ಎಷ್ಟೇ ಹೊತ್ತಾದರೂ ಆಟೋ ಸಿಗುತ್ತೆ. ಅದರ ಬಗ್ಗೆಯೇನೂ ನೀನು ತಲೆ ಕೆಡಿಸ್ಕೋಬೇಡ. ನನ್ನ ಲ್ಯಾಂಡ್ ಫೋನ್ ಇದೆಯಲ್ಲ. ಅದಕ್ಕೆ ನೀನು ಯಾವುದಾದರೂ ಬೂತಿನಿಂದ ಫೋನ್ ಮಾಡು. ಪೇರಳನಿಗೆ ಸ್ಕೂಟರ್ ಇದೆ. ಅವನು ಬಂದು ನಿನ್ನನ್ನು ಕುಂಬಳೆ ಪೇಟೆಯಿಂದ ಪಿಕ್‌ಅಪ್ ಮಾಡ್ತಾನೆ.

ಅಂದ ಹಾಗೆ, ಪೇರಳಗನ್ ಎಂಬುದೇ ಆ ಅಣ್ಣಾಚಿಯ ಹೆಸರು. ಅವನು ಒಳ್ಳೆಯ ಅಡಿಗೆಯವನು. ತರಕಾರಿಗಳಿಗೆ ಅಷ್ಟೊಂದು ರುಚಿ ಇದೆಯಂತ ತಿಳಿದದ್ದೆ ಅವನಿಂದ. ಏನೂಂತ ಗೊತ್ತಾಗ್ತಿಲ್ಲ. ಅವನು ಏನು ಮಾಡಿದರೂ ರುಚಿಯಾಗಿರುತ್ತದೆ. ಬಹುಶಃ ಅವನ ಕತೆ ಕೇಳಿ, ಕೇಳಿ ಅವನ ಮೇಲೆ ಅನುಕಂಪ ಹುಟ್ಟಿರಬೇಕು. ಅದರಿಂದ ಅವನು ಮಾಡಿದ್ದೆಲ್ಲಾ ರುಚಿಯಾಗಿರುತ್ತದೇನೋ. ಪಾಪ, ಜೀವನ ಪೂರ್ತಿ ಕಷ್ಟಗಳನ್ನು ಅನುಭವಿಸಿದ ಮನುಷ್ಯ. ಹೋಗಿ ಹೋಗಿ ಅವನು ಮಾಡಿದ ಅಡಿಗೆ ಚೆನ್ನಾಗಿಲ್ಲವೆಂದು ಹೇಳಿದರೆ ಬೇಜಾರಾಗಲ್ವ? ಆ ಮೇಲೆ ಭಾವಾವೇಶಕ್ಕೆ ಒಳಗಾಗಿ ಏನಾದರೂ ಮಾಡಿಕೊಂಡು ಬಿಟ್ಟರೆ, ನಮ್ಮ ಫ್ಯಾಕ್ಟರಿ ಕೂಡ ಹಾಳಾಗಿ ಹೋಗುತ್ತೆ. ಅದೇನೇ ಇರಲಿ, ನೀನು ಮಾತ್ರ ಒಂದ್ಸಾರಿ ಬಂದು ಹೋಗು. ಸ್ವಲ್ಪ ಹೊತ್ತು ಅವನ ಜೊತೆ ಕಳಿ. ಅವನು ಹೇಳಿದ್ದೆಲ್ಲವನ್ನು ಸುಮ್ಮನೆ ಬಾಯ್ಮುಚ್ಚುಕೊಂಡು ಕೇಳು ಸಾಕು. ಮನಸು ತುಂಬುತ್ತೆ.

ನಿನಗೆ ಜೀವನಾನುಭವ ಕಡಿಮೆ. ಸಾಮಾನ್ಯ ಮನುಷ್ಯನ ಜೀವನದಲ್ಲಿ ಎಷ್ಟೋ ಘಟನೆಗಳು ನಡೆದಿರುತ್ವೆ. ಅವೆಲ್ಲಾ ಮೈಗೆ ಮನಸಿಗೆ ಅಂಟ್ಕೊಳ್ಳೋದಿಲ್ಲ. ಆದರೆ ಪೇರಳಗನ ಜೀವನದ ಘಟನೆಗಳು ಹಾಗಲ್ಲ. ಅದನ್ನು ಅವನು ಹಾಸ್ಯ ಬೆರೆಸಿ ಹೇಳುವಾಗ ನಗು ಮತ್ತು ಆಳು ಒಟ್ಟೊಟ್ಟಿಗೆ ಬರುತ್ತೆ. ದೊಡ್ಡ ಮಳೆಗೆ ಸಿಕ್ಕಿಬಿದ್ದ ಆಡಿನ ಮರಿಯಂತಾಗಿ ಬಿಡುತ್ತೇವೆ. ಸರಿ, ನಾನು ನಿಲ್ಲಿಸ್ತೀನಿ. ಹೇಳಿ ಹೇಳಿ ಏಕೆ ನಿನಗೆ ಬೋರು ಹೊಡೆಸಲಿ. ಹೇಗೂ ನೀನು ಬರ್ತಿಯಲ್ಲ. ನಿನಗೆ ಒಂದು ಮಾತು ಹೇಳ್ತೀನಿ ಸಂತೋಷ್, ಮನೆಯಲ್ಲಿ ಮುದುಡ್ಕೊಂಡು ಮಲಗಿದರೆ ಕತೆ ಹುಟ್ಟಲ್ಲ. ಮೊದಲು ನೀನು ಮನೆಯೊಳಗಿನಿಂದ ಹೊರಕ್ಕೆ ಬಾ, ನಾಲ್ಕಾರು ಮಂದಿಯನ್ನು ಸಂಪರ್ಕಿಸು ತಿಳೀತಾ?”

ಇದನ್ನೂ ಓದಿ : New Book: ಅಚ್ಚಿಗೂ ಮೊದಲು: ಕೆ. ನಲ್ಲತಂಬಿ ಅನುವಾದಿಸಿದ ‘ಮತ್ತೊಂದು ರಾತ್ರಿ’, ‘ಬಾಪೂ ಹೆಜ್ಜೆಗಳಲ್ಲಿ’, ‘ಗುಡಿ ಗಂಟೆ’ ಸದ್ಯದಲ್ಲೇ ಬಿಡುಗಡೆ

ಶ್ರೀಜಯ ಚಿಕ್ಕಪ್ಪ ಬೇಗನ್ನು ಹೆಗಲಿಗೇರಿಸಿ ಹೊರಕ್ಕಿಳಿದರು. ಹಾಗೆ ನೋಡಿದರೆ ಈ ಚಿಕ್ಕಪ್ಪ ನನ್ನ ಅಪ್ಪನ ಖಾಸಾ ತಮ್ಮನೇನೂ ಅಲ್ಲ. ವರಸೆಯಲ್ಲಿ ಚಿಕ್ಕಪ್ಪ ಅಷ್ಟೆ. ಕಪ್ಪು ಬಿಳುಪು ಮೈಬಣ್ಣ ಒಂದು ಕೋನದಿಂದ ಗಮನಿಸಿದರೆ ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್‌ರವರ ಹೋಲಿಕೆಯಿದೆ. ಅದು ಅವರಿಗೂ ಗೊತ್ತು. ಅದ್ದರಿಂದಲೋ ಏನೋ ಲಾಲನಂತೆ ವೇಷಭೂಷಣಗಳನ್ನು ಧರಿಸಿ ಪೋಸ್ ಕೊಡುತ್ತಿದ್ದರು. ಅದು ಅವರಿಗೆ ಅನಿರ್ವಚನೀಯವಾದ ಆನಂದ ನೀಡುತ್ತಿತ್ತಂತೆ.

ಬೇಡಡುಕ್ಕದ ಅಮ್ಮನ ಮನೆಯಿಂದ ಏಚ್ಚಿಕ್ಕಾನಂನ ತರವಾಡು ಮನೆಗೆ ನನಗೆ ಸ್ಥಳಾಂತರವಾಗಿತ್ತು. ಆ ಮನೆ ನನ್ನನ್ನು “ಏಕಾಂತತೆಯ ಸಾವಿರ ವರ್ಷಗಳತ್ತ” ತಳ್ಳಿತ್ತು. ಅದರ ಗಾಢ ಕತ್ತಲೆ, ಅಸಹ್ಯ ಮೌನಗಳ ಶೂನ್ಯತೆಯನ್ನು ಭಂಗಪಡಿಸಲು ಯಾವುದೇ ಸದ್ದಿನಿಂದಲೂ ಸಾಧ್ಯವಿರಲಿಲ್ಲ. ಅಲ್ಲಿ ಒಂಟಿತನ ನನಗೆ ಹುಚ್ಚು ಬರಿಸುವಂತೆ ಮಾಡುತ್ತಿತ್ತು. ತರವಾಡು ಮನೆಯ ನಾಲ್ಕು ದಿಕ್ಕುಗಳಲ್ಲಿಯೂ ಸುಮೋ ಕುಸ್ತಿಪಟುಗಳಂತಿರುವ ಬೃಹತ್ ಗುಡ್ಡಗಳಿದ್ದವು. ಬೂಷ್ಟಿನ ವಾಸನೆಯನ್ನು ಹೊಮ್ಮಿಸುವ ಅನೇಕ ಕೋಣೆಗಳು ಅಲ್ಲಿದ್ದವು. ಅವುಗಳೆಲ್ಲಾ ವ್ಯವಹಾರ ಮುಗಿದ ನಂತರದ ನ್ಯಾಯಾಲಯದ ದಾಖಲೆಗಳಂತೆ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಸೋಲಿನ ನಿಟ್ಟುಸಿರು ಚೆಲ್ಲುತ್ತಾ ಅನೇಕ ಹಿರಿಯರು ಆ ಮನೆಯಲ್ಲಿ ಕೊನೆಯುಸಿರೆಳೆದಿದ್ದರು. ಮಾಗಿದ ವಯಸ್ಸಿನ ಅವರು ತಮ್ಮ ದೇಹವನ್ನು ಬೆಚ್ಚಗಿರಿಸಲು ಧನ್ವಂತರಿಯ ತೈಲವನ್ನು ಬಳಸುತ್ತಿದ್ದರು. ಅದರ ವಾಸನೆ, ಮನೆಯೊಳಗಿನ ಸೀಳುದಾರಿಗಳಲ್ಲೆಲ್ಲಾ ತಂಗಿ ನಿಂತಿದ್ದವೆಂದು ಅನಿಸುತ್ತಿತ್ತು. ರಾತ್ರೆಗಳಲ್ಲಿ ಬೀಳುವ ಸುಂದರ ಕನಸುಗಳನ್ನು ಬಾವಲಿಗಳು ಬಂದು ರೆಕ್ಕೆ ಬಡಿದು ಕೆಡಹುತ್ತಿದ್ದವು.

ಬೆಚ್ಚಿ ಎಚ್ಚರಗೊಂಡು, ಇರುವೆಯಂತೆ ಸಿಕ್ಕಿಬಿದ್ದಿರುವ ಗುಳಿಯ ಜಾರುವ ಗೋಡೆಯ ಮೇಲೆ ಪಾದಗಳನ್ನೂರಿ ಹತ್ತಲು ಶ್ರಮಿಸಿದೆ. ಆದರೆ ನನ್ನ ಇಚ್ಛಾಶಕ್ತಿಯನ್ನು ಕುಂದಿಸುವ ಏಕಾಂತತೆ ನನ್ನನ್ನು ಮತ್ತೆಮತ್ತೆ ಕೆಳಕ್ಕೆ ತಳ್ಳುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ನನಗೆ ಶ್ರೀಜಯ ಚಿಕ್ಕಪ್ಪನ ಪರಿಚಯವಾಗುತ್ತದೆ. ಎರಡು ಮೂರು ಮದುವೆಯ ಸಂದರ್ಭಗಳಲ್ಲಿ ಅಥವಾ ಅಂತಹದ್ದೇ ಕೌಟುಂಬಿಕ ಸಮಾರಂಭಗಳಲ್ಲಿ ಅವರ ಭೇಟಿಯಾಗಿತ್ತು. ಅದು ಬಿಟ್ಟು ಮತ್ತೆಂದೂ ಅವರ ಸಂಪರ್ಕ ಬಂದಿರಲಿಲ್ಲ. ಇಪ್ಪತ್ತರ ಹರೆಯದ ಯುವಕನೊಂದಿಗೆ ನಲ್ವತ್ತರ ವಯಸ್ಸಿನ ವ್ಯಕ್ತಿಗೆ ಅಷ್ಟೇನೂ ನಿಕಟ ಸಂಪರ್ಕವಿರಲಿಲ್ಲ. ನನಗೆ ಬರೆಯುವ ಕಾಯಿಲೆ ಇದೆಯೆಂಬ ವಾಸ್ತವ ಅರಿತಾಗ ಚಿಕ್ಕಪ್ಪನಿಗೆ ನನ್ನ ಮೇಲೆ ಕೊಂಚ ಆಸಕ್ತಿಯುಂಟಾಯಿತು. ಪರವಾಗಿಲ್ಲವೆಂದೆನಿಸಿಕೊಂಡ ಮೃದಂಗ ವಿದ್ವಾನ್, ಒಬ್ಬ ಕಲಾವಿದ, ನಟರೆಲ್ಲಾ ಅವರಲ್ಲಿ ಅಡಗಿದ್ದಾರೆಂಬುದನ್ನು ತಿಳಿದಾಗ ನನಗೂ ಅವರ ಬಗ್ಗೆ ಕುತೂಹಲವೆನಿಸಿತು.

ಸಿನಿಮಾ ಹುಚ್ಚು ತಲೆಗೆ ಹತ್ತಿ ತಿರುವನಂತಪುರಕ್ಕೆ ಹೋಗಿದ್ದು, ನಟ ನಿರ್ದೇಶಕ ಬಾಲಚಂದ್ರ ಮೆನನ್‌ರೊಂದಿಗೆ ಕುಳಿತು ಊಟ ಮಾಡಿದ್ದು, ಚಿತ್ರರಂಗವನ್ನು ಪ್ರವೇಶಿಸಲು ಹಸ್ತಶಾಸ್ತ್ರ, ಜ್ಯೋತಿಷ್ಯ ಮುಂತಾದ ಮಾಂತ್ರಿಕ ವಿದ್ಯೆಗಳನ್ನು ಕಲಿತದ್ದು… ಎಲ್ಲವನ್ನು ಚಿಕ್ಕಪ್ಪ ತಮ್ಮದೇ ತಮಾಷೆಯ ಶೈಲಿಯಲ್ಲಿ ನನ್ನ ಮುಂದೆ ತೆರೆದಿಟ್ಟಾಗ ಅವರ ಮೇಲಿನ ಗೌರವ ನನಗೆ ಮತ್ತಷ್ಟು ಹೆಚ್ಚಾಯಿತು. ಒಮ್ಮೆ ನನ್ನ ಹಸ್ತರೇಖೆಯನ್ನು ಓದಿ ಅವರು ಹೇಳಿದರು ‘ನೀನು ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೋ. ಇನ್ನು ಯಾವುದರಿಂದಲೂ ನೀನು ಏಳಿಗೆ ಕಾಣಲಾರೆ’. ಇಂತಿಪ್ಪ ನನ್ನ ಚಿಕ್ಕಪ್ಪನಿಗೆ ತನ್ನ ಕಲಾಭಿರುಚಿಯನ್ನು ಬೆಳೆಸಲಾಗಲಿ, ಅದರಿಂದ ಬದುಕನ್ನು ಕಟ್ಟಿಕೊಳ್ಳಲಾಗಲಿ ಸಾಧ್ಯವಾಗಲಿಲ್ಲವೆಂಬುದು ಒಂದು ದುರಂತ. ಹಾರಲಾಗದ ಗಾಳಿಪಟದಂತೆ ಅವರ ಬದುಕು ಡೋಲಾಯಮಾನವಾಗಿ ಬದಲಾಯಿತು. ಯಾವುದೇ ವೃತ್ತಿಯಲ್ಲಿ ತಳವೂರಲಾಗದೆ, ತನಗೆ ಒಗ್ಗದ ಕೆಲಸದಲ್ಲಿ ತೊಡಗಿಸಿಕೊಂಡು ಕಾಲದೂಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರು ಕಾಸರಗೋಡಿನ ಸಮೀಪದ ಕುಂಬಳೆಯನ್ನು ತಲುಪಿದ್ದರು. ಪ್ಲಾಸ್ಟಿಕ್ ಫ್ಯಾಕ್ಟರಿಯ ಉಸ್ತುವಾರಿಯನ್ನು ಅದರ ಎಂ.ಡಿ. ಚಿಕ್ಕಪ್ಪನಿಗೆ ವಹಿಸಿದ್ದರು. ಅಲ್ಲಿಯೇ ಅವರಿಗೆ ಪೇರಳಗನ್ ಎಂಬ ತಮಿಳು ಭಾಷಿಗನ ಪರಿಚಯವಾಗುತ್ತದೆ. ಈ ಪೇರಳಗನ್ನನ ಜೀವನಗಾಥೆಯನ್ನೇ ಕಥಾರೂಪದಲ್ಲಿ ತರುವಂತೆ ಚಿಕ್ಕಪ್ಪ ನನಗೆ ಹೇಳಿದ್ದರು.

ಇದನ್ನೂ ಓದಿ : ಅಚ್ಚಿಗೂ ಮೊದಲು: ಮಂಜುನಾಥ ಚಾರ್ವಾಕರ ‘ಮುರಕಮಿ; ಕಿನೊ ಮತ್ತು ಇತರ ಕತೆಗಳು’ ಸದ್ಯದಲ್ಲೇ ನಿಮ್ಮ ಓದಿಗೆ

ಸರಿ, ಒಂದು ದಿನ ನಾನು ಕಥೆಯ ಅನ್ವೇಷಣೆಯಲ್ಲಿ ಕುಂಬಳೆಯತ್ತ ಹೊರಟೆ. ಕಾಞಂಗಾಡಿನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಕುಳಿತಾಗಲೇ ಸಂಜೆ ಗಂಟೆ ಐದು ದಾಟಿತ್ತು. ಇಂತಹ ಅವೇಳೆಯಲ್ಲಿ ಗುರುತುಪರಿಚಯವಿಲ್ಲದ ಊರಿಗೆ ಏಕೆ ಹೋಗ್ತೀಯಾ ಎಂದು ಅಮ್ಮ ಕ್ಯಾತೆ ತೆಗೆದಿದ್ದರು. ಆದರೂ ಅಮ್ಮನ ಮಾತನ್ನೂ ಲಕ್ಕಿಸದೆ, ಚೀಲವನ್ನು ತೋಳಿಗೇರಿಸಿ ಗುಡ್ಡ ಹತ್ತಿದೆ. ಇದಕ್ಕಿದ್ದಂತೆ ಆಕಾಶ ಕಪ್ಪಿಟ್ಟುಕೊಂಡಿತು. ಸ್ವಲ್ಪ ಸಮಯದಲ್ಲಿಯೇ ಆಕಾಶ ಕರಗಿ ನೀರಾಗಿ ಬೀಳತೊಡಗಿತು. ಡ್ರೈವರ್ ನಿಧಾನವಾಗಿ ಬಸ್ಸನ್ನು ಓಡಿಸುತ್ತಾ ಕುಂಬಳೆ ಬಸ್ ನಿಲ್ದಾಣವನ್ನು ತಲುಪಿದ.

ಈ ಕಥೆಯ ಪೂರ್ಣ ಓದಿಗಾಗಿ ಪುಸ್ತಕ ಖರೀದಿಸಿಲು ಸಂಪರ್ಕಿಸಿ : 080-23183311

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ