Reporter’s Diary: ನಿರ್ಜನ ಪ್ರದೇಶದಲ್ಲಿ ಬೆನ್ನ ಹಿಂದೆ ನಿಂತವನ ಕಂಡು ಎದೆಬಡಿತವೇ ನಿಂತಿತ್ತು
KGF : ಆತನಕ ಅದು ನಿಷೇಧಿತ ಪ್ರದೇಶ, ಅಷ್ಟೊಂದು ನಿರ್ಬಂಧವಿದೆ ಎಂಬುದೇ ತಿಳಿದಿರಲಿಲ್ಲ. ಆದರೆ ಗುಟ್ಟಾಗಿ ಸುದ್ದಿ ಮಾಡಿ ಸದ್ದು ಮಾಡಬೇಕು ಎನ್ನುವುದೊಂದೇ ತಲೆಯಲ್ಲಿತ್ತು. ಹಾಗಾಗಿ ಸುದ್ದಿಯ ಬೆನ್ನು ಹತ್ತಿ ಒಬ್ಬನೇ ಹೋದೆ.
Reporter’s Diary : ಕೆಜಿಎಫ್ ಚಿನ್ನದ ಗಣಿಯನ್ನು ಆತನಕ ನೋಡಿಯೇ ಇರಲಿಲ್ಲ. ಏಕೆಂದರೆ ನಾನು ಮೂಲತಃ ಕೋಲಾರ ಜಿಲ್ಲೆಯವನಾಗಿರಲಿಲ್ಲ. ಆದರೆ ಒಮ್ಮೆಯಾದರೂ ಆ ಚಿನ್ನದ ಗಣಿಯನ್ನು ನೋಡಲೇಬೇಕು ಎಂಬ ಕುತೂಹಲ ಒಳಗೊಳಗೇ ಇತ್ತು. ಅದು ಸಾಧ್ಯವಾಗಿದ್ದು ಟಿವಿ9 ಗೆ ಸೇರಿದ ಮೇಲೆ. ಕೋಲಾರ ನನ್ನ ಕಾರ್ಯಸ್ಥಳ ಎಂದು ನಿಗದಿಯಾದ ಮೇಲೆ. ಕೋಲಾರ ಜಿಲ್ಲೆಯ ಕೆಲವು ಹಿರಿಯ ವರದಿಗಾರರು ಚಿನ್ನದ ಗಣಿ ಬಗ್ಗೆ ಹೇಳುತ್ತಿದ್ದ ರೋಚಕ ಸಂಗತಿಗಳು ನನ್ನಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟಿಸುತ್ತಿದ್ದವು. ಆಗೆಲ್ಲಾ ಒಮ್ಮೆಯಾದರೂ ಗಣಿಯ ಒಳಹೊಕ್ಕು ನೋಡಲೇಬೇಕು ಎಂಬ ಹುಕಿ ಹೆಚ್ಚುತ್ತಿತ್ತು. ಹೀಗಿರುವಾಗಲೇ ಒಂದು ವಿಶೇಷ ವರದಿ ಮಾಡಬೇಕು ಎಂದು ಬೆಂಗಳೂರು ಆಫೀಸಿನಿಂದ ಕರೆಬಂದಿತು. ನನ್ನ ಹಂಬಲಕ್ಕೆ ರೆಕ್ಕೆಪುಕ್ಕ ಮೂಡಿ ಈ ಅವಕಾಶವನ್ನು ಬಿಡಲೇಬಾರದು ಎಂದು ಮುನ್ನುಗ್ಗಿದೆ. ವಿಶೇಷ ಎಂದಮೇಲೆ ಎಲ್ಲರ ಕಣ್ತಪ್ಪಿಸಿಯೇ ವರದಿ ಮಾಡಬೇಕಲ್ಲ! ರಾಜೇಂದ್ರ ಸಿಂಹ, ಟಿವಿ9 ಕನ್ನಡ ವರದಿಗಾರ (Rajendra Simha)
ಆಗಷ್ಟೇ ಟಿವಿ9 ಆರಂಭವಾಗಿ ಒಂದೂವರೆ ವರ್ಷ ಕಳೆದಿತ್ತು. ನಾನಲ್ಲಿ ಸೇರಿದ್ದು ಕ್ಯಾಮೆರಾಮನ್ ಆಗಿ. ಆದರೆ ವರದಿಗಾರಿಕೆಯ ಜವಾಬ್ದಾರಿಯ್ನೂ ಹೊಸದಾಗಿ ವಹಿಸಿದ್ದರು. ಇದು ನನ್ನ ಉತ್ಸಾಹವನ್ನು ದುಪ್ಪಟ್ಟು ಮಾಡಿತ್ತು. ಹಿರಿಯರು ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು ಎನ್ನುವ ಹಟ ಒಂದೆಡೆಯಾದರೆ, ಹೊಸ ಹೊಸ ಸುದ್ದಿ ಮಾಡಿ ಸದ್ದು ಮಾಡಬೇಕು ಎನ್ನುವ ಹಂಬಲ ಒಂದುಕಡೆ. ಈ ಹೊತ್ತಿನಲ್ಲಿಯೇ ಚಿನ್ನದ ಗಣಿಯಲ್ಲಿ ನಡೆಯುತ್ತಿದ್ದ ಕಳ್ಳತನದ ಬಗ್ಗೆ ವಿಶೇಷ ಸುದ್ದಿ ಮಾಡುವ ಕಡೆ ಮನಸ್ಸು ಗಟ್ಟಿಗೊಂಡಿದ್ದು.
ಬೆಳಗ್ಗೆ ಸ್ವಲ್ಪ ಬೇಗ ಎದ್ದು ರೆಡಿಯಾಗಿ ತಿಂಡಿತಿಂದು ಕ್ಯಾಮೆರಾ, ಟ್ರೈಪ್ಯಾಡ್ ಹಿಡಿದು ಬೈಕ್ ಹತ್ತಿ ಒಬ್ಬನೇ ಕೆಜಿಎಫ್ನತ್ತ ಹೊರಟೆ. ಯಾಕೆಂದರೆ ನಾನು ಸುದ್ದಿ ಮಾಡುತ್ತಿರುವ ವಿಷಯ ಗುಟ್ಟಾಗಿರಬೇಕಿತ್ತು. ಹಾಗಾಗಿ ಜೊತೆಗೆ ಯಾರನ್ನೂ ಕರೆದೊಯ್ಯಲಿಲ್ಲ. ಕೆಜಿಎಫ್ನ ಪೈಲಟ್ಸ್ ಸರ್ಕಲ್ ಬಳಿಯಲ್ಲಿನ ಒಂದು ಚಿನ್ನದ ಗಣಿಯ ಶಾಪ್ಟ್ (ಚಿನ್ನವನ್ನು ಅಗೆಯುವ ಸ್ಥಳ) ಇದೆ. ಸೀದಾ ಅದರ ಗೇಟ್ ಬಳಿ ಹೋಗಿ ಬೈಕ್ ನಿಲ್ಲಿಸಿದೆ. ಗೇಟ್ ಓಪನ್ ಇರಲಿಲ್ಲ ಆದರೂ ಪಕ್ಕದಲ್ಲಿ ಮುಳ್ಳು ತಂತಿಯ ಕಾಂಪೌಂಡ್ ಹಾಕಲಾಗಿತ್ತು. ತಂತಿ ಸರಿಸಿ ಒಳನುಗ್ಗಲು ಧೈರ್ಯ ಮಾಡಿದೆ. ಅಲ್ಲಿ ಬೃಹತ್ತಾದ ಮೆಷಿನರಿಗಳು, ಜೊತೆಗೆ ಚಿನ್ನದ ಗಣಿಗೆ ಬೀಗ ಹಾಕಿ ಅಲ್ಲಿಗಾಗಲೇ ಸುಮಾರು ಏಳು ವರ್ಷಗಳು ಕಳೆದು ಹೋಗಿತ್ತು. ಅದರ ತುಂಬಾ ಗಿಡಗಂಟೆಗಳು ಬೆಳೆದಿದ್ದವು. ಒಳಗೆ ಹೋಗುತ್ತಾ ಹೋಗುತ್ತಾ ಕ್ಯಾಮಾರಾದಲ್ಲಿ ಶೂಟ್ ಮಾಡಿಕೊಂಡೇ ಹೋದೆ. ಒಳಗೆ ಹೋದಾಗ ಅಲ್ಲಿ ಒಂದೆರಡು ನಾಯಿಗಳು ನನ್ನ ಕಂಡು ಬೊಗಳಿದವು. ಭಯವೇನೋ ಆಯಿತು. ಅಲ್ಲೇ ಇದ್ದ ಕಲ್ಲು ಬೀಸಿದೆ. ಸದ್ಯ ಪೊದೆಯೊಳಗೆ ನುಗ್ಗಿ ಓಡಿದವು. ಆಗಲೇ ಅಲ್ಲಿ ಯಾರೋ ಇರಬೇಕು ಎನ್ನಿಸಿತು. ಆದರೂ ನನಗೆ ವಿಶುವಲ್ಸ್ ಮುಖ್ಯ! ಅದರತ್ತ ಗಮನ ಕೊಟ್ಟೆ.
ಇದನ್ನೂ ಓದಿ : Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’
ಯಾರದು ನಿಂತವನು? ಅವಸರದಲ್ಲಿ ಶೂಟ್ ಮಾಡುತ್ತಲೇ ಇದ್ದೆ. ಒಂದೊಂದೂ ನನ್ನನ್ನು ಶೂಟ್ ಮಾಡಿಕೋ ಎಂದು ಕರೆದಂತೆ ಭಾಸವಾಗುತ್ತಿತ್ತು. ಸುತ್ತಮುತ್ತ ಬೇರೆ ಯಾರೂ ಇಲ್ಲ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಯಂತ್ರಗಳು ತುಕ್ಕು ಹಿಡಿದು ಬಿದ್ದಿದ್ದರೆ, ಮತ್ತೊಂದಷ್ಟು ಕಳ್ಳತನವಾಗಿ ಹೋಗಿದ್ದವು. ಒಂದು ಸೆಕೆಂಡ್ ಹಾಳುಮಾಡದೆ ಎಲ್ಲವನ್ನೂ ಶೂಟ್ ಮಾಡಿಕೊಂಡೆ. ದೊಡ್ಡ ಶಾಪ್ಟ್ ಬಳಿ ಶೂಟ್ ಮಾಡುತ್ತಿದ್ದೆ. ಅಷ್ಟೊತ್ತಿಗೆ ನನ್ನ ಬೆನ್ನಹಿಂದೆ ಯಾರೋ ಬಂದು ನಿಂತಂತೆ ಭಾಸವಾಯಿತು. ಎದೆ ಡವಗುಡುತ್ತಿತ್ತು. ಆದರೆ ನಾನು ತಕ್ಷಣ ತಿರುಗಿ ನೋಡದೆ ನನ್ನ ಪಾಡಿಗೆ ನನ್ನ ಕೆಲಸ ಮಾಡುತ್ತಿದ್ದೆ. ಏನೋ ಒಂದು ಗಟ್ಟಿಯಾದ ವಸ್ತು ಬಂದು ಬೆನ್ನಿಗೆ ತಾಕಿದಂತೆ ಅನ್ನಿಸಿತು. ತಕ್ಷಣ ತಿರುಗಿ ನೋಡಿದೆ. ಒಂದು ಕ್ಷಣ ಎದೆಬಡಿತವೇ ನಿಂತುಹೋಯಿತು.
ಖಾಕಿ ತೊಟ್ಟು ಬಂದೂಕು ಹಿಡಿದಿದ್ದ ವ್ಯಕ್ತಿ ಸೀದಾ ನನ್ನ ಕಡೆ ಬಂದೂಕು ತೋರಿಸಿ, ಹಿಂದಿಯಲ್ಲಿ ಹೇ ಕೌನ್ ಹೋ ತುಮ್ ಎಂದಿದ್ದ. ನನಗೋ ಹಿಂದಿ ಅಷ್ಟಕ್ಕಷ್ಟೇ. ನಾನು ಹೀಗೆ ನ್ಯೂಸ್ ಚಾನೆಲ್ನಿಂದ ಬಂದಿದ್ದೇನೆ ಎಂದೆ. ಬಹುಶಃ ಅವನಿಗೆ ಅರ್ಥವಾಗಿತ್ತು ಎನ್ನಿಸುತ್ತದೆ ಬಂದೂಕು ಕೆಳಗಿಳಿಸಿ, ಇದು ನಿಷೇಧಿತ ಪ್ರದೇಶ ಇಲ್ಲಿ ಯಾರೂ ಒಳಗೆ ಬರುವ ಹಾಗಿಲ್ಲ, ಶೂಟ್ ಮಾಡಬೇಕಂದರೆ ಅನುಮತಿ ಪಡೆಯಬೇಕು ಎಂದು ಹೇಳಿದ.
‘ವಾರಂಟ್’ ನಲ್ಲಿ ಸಖತ್ ಸದ್ದು ಮಾಡಿತು ಆತನಕ ಅದು ನಿಷೇಧಿತ ಪ್ರದೇಶ, ಅಷ್ಟೊಂದು ನಿರ್ಬಂಧವಿದೆ ಎಂಬುದೇ ತಿಳಿದಿರಲಿಲ್ಲ. ಆದರೆ ಗುಟ್ಟಾಗಿ ಸುದ್ದಿ ಮಾಡಿ ಸದ್ದು ಮಾಡಬೇಕು ಎನ್ನುವುದೊಂದೇ ತಲೆಯಲ್ಲಿತ್ತು. ಹಾಗಾಗಿ ಅಲ್ಲಿಗೆ ಹೋಗುವ ಮೊದಲು ಯಾರ ಬಳಿಯೂ ಚರ್ಚಿಸದೇ ಸುದ್ದಿಯ ಬೆನ್ನು ಹತ್ತಿ ಹೋಗಿದ್ದೆ. ಆದರೆ ನಾನಂದುಕೊಟ್ಟ ಮಟ್ಟದಲ್ಲಿ ಆ ಸುದ್ದಿಯನ್ನು ಮಾಡಲಾಗಲಿಲ್ಲ. ಆದರೆ ಶೂಟ್ ಮಾಡಿದ ವಿಶುವಲ್ಸ್ ಉಪಯೋಗಿಸಿಕೊಂಡು ‘ವಾರಂಟ್’ ಕಾರ್ಯಕ್ರಮದ ಎಂ.ಎಸ್. ರಾಘವೇಂದ್ರ ಅವರು ಚಿನ್ನದ ಗಣಿ ಕಳ್ಳತನದ ಸುದ್ದಿಯನ್ನು ಅದ್ಭುತವಾಗಿ ಬಿತ್ತರಿಸಿದ್ದರು. ಕಾರ್ಯಕ್ರಮ ಪ್ರಸಾರವಾಗಿದ್ದೇ ಇಡೀ ಕೆಜಿಎಫ್ ಹಾಗೂ ಕೋಲಾರವಷ್ಟೇ ಅಲ್ಲ ಅದು ಇಡೀ ರಾಜ್ಯದಾದ್ಯಂತ ಬಾರೀ ಸದ್ದು ಮಾಡಿತ್ತು. ನನಗೂ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/reporters-diary