ಅಮಾರೈಟ್ : ‘ಎಲ್ಲವನ್ನೂ ನಿನ್ನಲ್ಲೇ ಗಿರವಿ ಇಟ್ಟಿರುವಾಗ ಏನನ್ನ ಮಾರಿಕೊಂಡರೆ ಈ ‘ಪುರುಸೊತ್ತುʼ ಖರೀದಿಸಬಹುದು’

Love : ನಮ್ಮ ಕಣ್ಣಲ್ಲಿ ಜವಾಬ್ದಾರಿ ಅನ್ನುವ ಬೆಳಕಿರುತ್ತದಲ್ಲ, ಆ ಬೆಳಕಿನ ಆಳದಲ್ಲಿ ಒಂದು ಅಗ್ಗಿಷ್ಟಿಕೆ ಇರುತ್ತದೆ. ಎಷ್ಟೇ ಸುಂದರವಾಗಿ ಹೇಳಿದರೂ ಅದು ಬೆಂಕಿಯೇ. ಸುಡುಸುಡು ಬೆಂಕಿಯನ್ನು ತೊಟ್ಟುಕೊಂಡು ಬೆಳಕಾಗುವ ಪ್ರಕ್ರಿಯೆಯನ್ನು ಹೇಗೆ ತ್ಯಾಗದ ಮೆರುಗುಗಿನಿಂದ ಸಿಂಗರಿಸಿದರೂ ಅದು ಜವಾಬ್ದಾರಿಯ ಕಾವೇ.

ಅಮಾರೈಟ್ : ‘ಎಲ್ಲವನ್ನೂ ನಿನ್ನಲ್ಲೇ ಗಿರವಿ ಇಟ್ಟಿರುವಾಗ ಏನನ್ನ ಮಾರಿಕೊಂಡರೆ ಈ ‘ಪುರುಸೊತ್ತುʼ ಖರೀದಿಸಬಹುದು’
ಫೋಟೋ : ಡಾ. ನಿಸರ್ಗ
Follow us
ಶ್ರೀದೇವಿ ಕಳಸದ
|

Updated on: May 03, 2022 | 4:38 PM

ಅಮಾರೈಟ್ | Amaright : ‘ನಮ್ಮನ್ನ ನಾವು ಪ್ರೀತಿಸೋದೇ ಮಹಾನ್ ಕ್ರಾಂತಿ’ ಅಂತ ಎಲ್ಲೋ ಓದಿದ್ದ ನೆನಪು. ಎಲ್ಲಿ ಓದಿದ್ದು, ಯಾರು ಬರೆದಿದ್ದು ಅಂತ ಹುಡುಕಿದರೆ ಸಿಗಬಹುದು. ಆದರೆ, ಒಂದು ಸಾಲು ನಮ್ಮದೂ ಅಂತ ಅನಿಸಿದ ಮೇಲೆ ಆ ಸಾಲುಗಳನ್ನ ಸುಮ್ಮನೆ ಉಸಿರಾಡಿಕೊಂಡರೂ ಸಾಕು. ಅಲ್ಲೆಲ್ಲೋ ಕೂತ ಕವಿಯೆಂಬೋ ಹೂಮರ ತೆಳ್ಳಗೆ ಮಳೆಯಾಗುತ್ತದೆ. ಹ್ಞಾ, ಅದಿರಲಿ… ಈಗ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದರ ಬಗ್ಗೆ ಮಾತು ಶುರು ಮಾಡಿದ್ದೆ ತಾನೇ. ತುಂಬಾ ಕಷ್ಟದ, ಮಹತ್ವದ, ಚರ್ಚೆಯಾಗಬಹುದಾದ ಸಂಗತಿಗಳಲ್ಲಿ ನಮ್ಮನ್ನು ನಾವು ಪ್ರೀತಿಸಬಹುದಾಗಿರುವ ಸಾಧ್ಯತೆಗಳ ಕುರಿತು ನಾವು ಮಾತೇ ಆಡುವುದಿಲ್ಲವಲ್ಲಾ ಅಂತ ಅನಿಸಿತು. ಸ್ವಂತ ಮತ್ತು ಸ್ವಾರ್ಥ ಎರಡರ ನಡುವಿನ ಗೆರೆಯನ್ನು ಮರೆತಂತೆ ಅರ್ಥೈಸಿಕೊಳ್ಳುವರ ಎದುರು ಕಡೇಪಕ್ಷ ನಾವಾದರೂ ‘ಅದು ಹಾಗಲ್ಲ.. ಹೀಗೇ..’ ಅಂತ ವಿವರಿಸಿ ಹೇಳಬೇಕಾದ ದರ್ದೇ ಅಂತಲ್ಲದಿದ್ದರೂ, ಅಂಥದ್ದೊಂದು ಅವಕಾಶ ಸಿಕ್ಕರೆ ಮಾತಾಡಿಕೊಳ್ಳಬಹುದಲ್ಲಾ ಅಂತ ಹೇಳಿದೆ… ಅಮಾರೈಟ್? ಭವ್ಯಾ ನವೀನ, ಕವಿ, ಲೇಖಕಿ (Bhavya Naveen)

(ಬಿಲ್ಲೆ 9)

ಕೊರೊನಾ ವಾರ್ಡಿನಲ್ಲಿ ಮಲಗಿದವರು ಪಕ್ಕದಲ್ಲಿದ್ದದ್ದು ಮೇಲಾ, ಫೀಮೇಲಾ ಅಂತ ಗಮನಿಸದೆ ‘ಹುಷಾರಾಗತ್ತಾ? ಹುಷಾರಗತ್ತೆ.. ಹೆದರ್ಬೇಡಿ’ ಅಂತಿದ್ದರಲ್ಲ ಹಾಗೇ.. ನಾವು ಅಂದರೆ.. ಮೇಲೂ, ಫೀಮೇಲೂ ಅಂತ್ಯಾವುದೂ ಅಲ್ಲದೇ ನಮ್ಮನ್ನು ನಾವೂ ಪ್ರೀತಿಸಿಕೊಳ್ಳಬಹುದು ಅಂತ ಯೋಚಿಸಿಕೊಳ್ಳಲೂ ಪುರುಸೊತ್ತಾಗದ ಒಂದು ವರ್ಗದ ಅಸ್ತಿತ್ವದ ಬಗ್ಗೆ ಈಗ ಮಾತಾಡುತ್ತಿದ್ದೇನೆ.

“ಎಲ್ಲವನ್ನೂ ನಿನ್ನಲ್ಲೇ ಗಿರವಿ ಇಟ್ಟಿರುವಾಗ ಏನನ್ನ ಮಾರಿಕೊಂಡರೆ ಈ ‘ಪುರುಸೊತ್ತುʼ ಅನ್ನುವುದನ್ನು ಖರೀದಿಸಬಹುದು ಬದುಕೇ..” ಅಂತ ಕೇಳ್ತಾರಲ್ಲ ಗುಲ್ಜಾರ್..

ಹಾಗೇ ಆ ಕೊಂಡುಕೊಳ್ಳಲಾಗದ ಪುರುಸೊತ್ತು ಮತ್ತು ಏಕಾಂತದಲ್ಲಿಯೇ ನಮ್ಮನ್ನು ನಾವು ಪ್ರೀತಿಸಿಕೊಳ್ಳಬಹುದಾದ ರೀತಿ-ನೀತಿ-ಜರೂರತ್ತುಗಳನ್ನು ಕೂಡಿಟ್ಟಿರಲಾಗಿರುತ್ತದೆ. ಅದು ಸಿಗಬೇಕೆಂದರೆ ಪುರುಸೊತ್ತನ್ನು ಖರೀದಿಸುವುದನ್ನು ಕಲಿಯಬೇಕು. ಹಾಗಂತ ಸಮಯ ಸಿಕ್ಕಾಗೆಲ್ಲಾ ಪುರುಸೊತ್ತಾಗಿರುತ್ತೇವೆನ್ನುವುದೆಲ್ಲಾ ಸುಳ್ಳು. ಸಮಯ ಮತ್ತು ಪುರುಸೊತ್ತು ಎರಡು ಬೇರೆಬೇರೆಯದೇ ಟ್ರೈನು. ಒಂದು ಕೆಲಸವಿಲ್ಲದ ದಿನವನ್ನು ಪುರುಸೊತ್ತಿನ ದಿನ ಅನ್ನಬಹುದು ಅನ್ನುವುದರ ಬಗ್ಗೆ ತಕರಾರಿದೆ ಅನ್ನುವ ಗೆಳೆಯ-ಗೆಳತಿಯರೆಲ್ಲರ ಮಾತು ಕೇಳಿದ ಮೇಲೆ ನಾನೂ ಧೈರ್ಯವಾಗಿ ‘ಒಂದು ಸಾರ್ವತ್ರಿಕ ರಜೆಯನ್ನು ಪುರುಸೊತ್ತಿನ ದಿನ ಅಂತನ್ನಲಾಗುವುದಿಲ್ಲʼ ಅನ್ನುವ ಪರಮ ಸತ್ಯ ಹೇಳುತ್ತಿದ್ದೇನೆ. ಬೇಕಾದ ನಿಲ್ದಾಣಕ್ಕೆ ಹೋಗಲು ಸಮಯದ ಟ್ರೈನು ಹತ್ತಿದರೆ, ಪುರುಸೊತ್ತಿನ ಸ್ಟಾಪಿನಲ್ಲಿ ಇಳಿಯಲು ತೆಗೆದ ಟಿಕೇಟು ದಂಡವಾಗಿಬಿಡುತ್ತದೆ.

ಖಾಲೀ ಸಮಯದಲ್ಲಿ ಕೈ ಕಾಲುಗಳಿಗೆ ಕೆಲಸ ಕೊಡದ ಹಾಗೇ ಕೂತರೆ ಅದನ್ನು ಬಿಡುವು ಅನ್ನಬಹುದೇ ಹೊರತು ಏಕಾಂತ ಅನ್ನುವುದಕ್ಕೆ ಸಾಧ್ಯವಿಲ್ಲ ತಾನೇ. ಮುಂದಿನ ಗಂಟೆಯ, ರಾತ್ರಿಯ, ನಾಳೆ ಬೆಳಗಿನ.. ಹೀಗೇ.. ನಮ್‌ ನಮ್ಮವೇ ಜಗತ್ತಿನ ಸಾವಿರ ಜವಾಬ್ದಾರಿಗಳೇ ತಲೆ ತುಂಬಾ ಹೊಕ್ಕಿರುವಾಗ ಬಿಡುವಿನ ಸಮಯವನ್ನು ಏಕಾಂತದ ಸಮಯವಾಗಿಸಿಕೊಳ್ಳಬೇಕಾದರೆ ನಾವು, ಖುದ್ದು ನಮ್ಮ ಕುರಿತಾದ ಜವಾಬ್ದಾರಿಗಳನ್ನೂ ಅತ್ಯಂತ ಸೀರಿಯಸ್ಸಾಗಿ ಪರಿಗಣಿಸಬೇಕಾಗುತ್ತದೆ.

ನಮ್ಮ ಕಣ್ಣಲ್ಲಿ ಜವಾಬ್ದಾರಿ ಅನ್ನುವ ಬೆಳಕಿರುತ್ತದಲ್ಲ, ಆ ಬೆಳಕಿನ ಆಳದಲ್ಲಿ ಒಂದು ಅಗ್ಗಿಷ್ಟಿಕೆ ಇರುತ್ತದೆ. ಎಷ್ಟೇ ಸುಂದರವಾಗಿ ಹೇಳಿದರೂ ಅದು ಬೆಂಕಿಯೇ. ಸುಡುಸುಡು ಬೆಂಕಿಯನ್ನು ತೊಟ್ಟುಕೊಂಡು ಬೆಳಕಾಗುವ ಪ್ರಕ್ರಿಯೆಯನ್ನು ಹೇಗೆ ತ್ಯಾಗದ ಮೆರುಗುಗಿನಿಂದ ಸಿಂಗರಿಸಿದರೂ ಅದು ಜವಾಬ್ದಾರಿಯ ಕಾವೇ ಆಗಿರುತ್ತದೆ. ಅದೇ ಕಾವು ತಣಿಯಬೇಕಾದರೆ ಪ್ರೀತಿ ಬೇಕು. ಹೊರಗಿನಿಂದ ಭರಪೂರ ಪ್ರೀತಿ ಸಿಕ್ಕರೂ ತೀರದ ದಾಹಕ್ಕೆ ನಮಗೆ ನಮ್ಮ ಮೇಲೂ ಒಲವಿರಬೇಕು. ನಮ್ಮನ್ನು ನಾವೇ ಪ್ರೀತಿಸಿಕೊಳ್ಳುವುದು ಅಂದರೆ ಅದೇ, ಜಗತ್ತಿನ ಜವಾಬ್ದಾರಿಗಳಷ್ಟೇ ಗಂಭೀರವಾಗಿ, ಸಲೀಸಾಗಿ ಮತ್ತು ನಿಯಮಿತವಾಗಿ ನಮ್ಮ ಅವಶ್ಯಕತೆಗಳನ್ನೂ ಗೌರವಿಸಿಕೊಳ್ಳುವುದು.

*

ನಿಮಗೆ ಹೀಗೇ ಹೇಳಿದರೆ ಕೇಳಬಹುದು.. ಈಗ ಇನ್ನೇನು ಅಮ್ಮಂದಿರ ದಿನ ಹತ್ತಿರ ಬಂತು. ನಮ್ಮಮ್ಮ, ನಿಮ್ಮಮ್ಮ ಎಲ್ಲಾ ಇದ್ದಕ್ಕಿದ್ದ ಹಾಗೇ ಒಂದು ದಿನದ ಮಟ್ಟಿಗೆ ಉತ್ಸವದ ದೇವರಾಗುತ್ತಾರೆ. ಹಾಗೇ ದೇವರಾಗಬೇಕೆಂದರೆ ಅವರ ಪಾದದ ಶುರುವಿಂದ ನೆತ್ತಿಯ ತುದಿಯವರೆಗೂ ಹೊತ್ತುಕೊಂಡ ಜವಾಬ್ದಾರಿಗಳೂ ಹಾಗೇ ಇರುತ್ತವೆ. ಆ ಎಲ್ಲಾ ಜವಾಬ್ದಾರಿಗಳ ಮಧ್ಯೆ, ‘ಅವಳದುʼ ಅನ್ನುವುದೊಂದು ಭಾವ ಮಾತ್ರ ಹಾಲುಖೀರಿನ ಕಡೇಗೆ ಹಾಕಿದ ಚಿಟಿಕೆ ಉಪ್ಪಿನ ತರವೇ ಕಳೆದು ಹೋಗಿರುತ್ತದೆ. ಆದರೂ ಸಿಹಿಯನ್ನು ಬ್ಯಾಲೆನ್ಸ್‌ ಮಾಡುವ ಹಾಗೆ.. ಅಮ್ಮ. ಇಲ್ಲಿ ಕಳೆದು ಹೋಗುವುದು, ಅವಳ ಆಯ್ಕೆ ಮಾತ್ರವಲ್ಲ.. ಅನಿವಾರ್ಯ ಕೂಡ. ಆದರೂ ಅವಳ ಕುರಿತಾದ ಜವಾಬ್ದಾರಿಯ ನಿಭಾಯಿಸದೇ ಇರುವುದು ಪರಮ ಕರ್ತವ್ಯ ಲೋಪ. ಅಮ್ಮ ಹಾಗೇ.. ತನ್ನ ಮೇಲಿನ ತನ್ನ ಜವಾಬ್ದಾರಿಯ ಲೋಪವನ್ನಾದರೂ ಸಹಿಸಿಬಿಡುತ್ತಾಳಾದರೂ, ಅವಳ ಪುಟ್ಟ ಜಗತ್ತಿನ ಜವಾಬ್ದಾರಿಗಳ ಮೇಲೆ ಲೋಪವಾಗದ ಹಾಗೇ ಎಚ್ಚರವಾಗಿರುತ್ತಾಳೆ. ಅಮ್ಮ ಅನ್ನುವುದು ಕುಟುಂಬದೊಳಗಿನ ಹಲವು ಸಂಬಂಧಗಳ ಸಾಂಕೇತಿಕ ನಿದರ್ಶನ ಅಷ್ಟೇ. ಎಲ್ಲ ಬಂಧಗಳೂ ಹೀಗೆ ಇರುತ್ತವೆ, ಒಮ್ಮೆ ಇಣುಕಿ ನೋಡಿ.

ಇಲ್ಲಿ ಅಮ್ಮ ಸ್ವಯಂ ಪ್ರೀತಿಯನ್ನು ಮರೆತು, ಸ್ವಜವಾಬ್ದಾರಿಗಳ ನಿಭಾಯಿಸದೇ ಹೋಗಿದ್ದಕ್ಕೆ ದೇವರೇನೋ ಆಗಿಬಿಡುತ್ತಾಳೆ, ಆದರೆ ಅವಳೊಳಗಿನ ಹುಡುಗಿ, ಪಾಪ ಯಾವತ್ತೋ ಬಳಲಿ ಮುರುಟಿ ಹೋಗಿರುತ್ತಾಳೆ. ಅಪ್ಪನ ವಿಚಾರದಲ್ಲೂ ಹೀಗೇ ಆಗುತ್ತದೆ ಅನ್ನುವುದನ್ನು ನೀವೇ ಕಲ್ಪಿಸಿಕೊಂಡು ಓದಬಹುದು. ಅಮ್ಮ ಸಾಂಕೇತ ಅಷ್ಟೇ. ಅಪ್ಪನೂ ಅಮ್ಮನೇ.

ಇದನ್ನೂ ಓದಿ : ವೈಶಾಲಿಯಾನ: ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ

*

ಇನ್ನೊಂದೇನು ಗೊತ್ತಾ.. ಖುದ್ದು ಪ್ರೀತಿಸಿಕೊಳ್ಳುವುದು ಕ್ರಾಂತಿ ಅಂತ ಮೇಲೆ ಹೇಳಿದೆನಲ್ಲಾ.. ಅಂಥ ಕ್ರಾಂತಿ (?) ಮಾಡಿದರು ಅನಿಸಿದವರ ಬಗ್ಗೆ ನಿಮಗೆ ಹೇಳುತ್ತೇನೆ ಕೇಳಿ. ನಮ್ಮನ್ನು ನಾವೇ ಪ್ರೀತಿಸುವ ಜವಾಬ್ದಾರಿಯನ್ನು ನಿಭಾಯಿಸುವುದೆಂದರೆ ಹೀಗೂ ಇರುತ್ತದಾ ಅನ್ನುವ ಅರಳುಗಣ್ಣಿನ ಘಟನೆ ಇದು. ಸುಮಾರು ವರ್ಷಗಳ ಹಿಂದೆ ಮನೆಯ ಕಾರ್ಯಕ್ರಮಕ್ಕೆ ಬರಬೇಕಿದ್ದ ಮಠದ ಹಿರಿಯ ಸ್ವಾಮಿ ಬರಲಾಗದ್ದಕ್ಕೆ ಒಬ್ಬ ಕಿರಿ ಸ್ವಾಮಿಯನ್ನು ಕಳಿಸಿದ್ದರು. ಮನೆಗೆ ಬಂದ ಆ ಕಾವಿಧಾರಿ ನೋಡಿ ನಮಗೆಲ್ಲಾ ಆಶ್ಚರ್ಯ. ಆತ ಒಬ್ಬ ಸಣ್ಣ ವಯಸ್ಸಿನ ಹುಡುಗ, ಅಕ್ಕನ ಜೊತೆಯಲ್ಲೇ ಶಾಲೆ ಕಲಿತವನು. ಊರು, ಎರಡೆಕೆರೆ ತೋಟ, ಒಂಟಿ ಅಮ್ಮನ ಅಷ್ಟೂ ಜವಾಬ್ದಾರಿಗಳನ್ನು ನಿಭಾಯಿಸಲ್ಲಿಕ್ಕಂತಲೇ ಹುಟ್ಟಿದವನು ಅನ್ನುವಂತಿದ್ದವನು. ಸಂತೆಯಲ್ಲಿ, ಜಾತ್ರೆಯಲ್ಲಿ, ಅವರಿವರ ಮನೆಯ ಕಷ್ಟ ಸುಖಗಳಲ್ಲಿ ಓಡಾಡಿಕೊಂಡಿದ್ದ ಆಪತ್ಪಾಂಧವ ಅವನು. ಆಸೆ ಕಣ್ಣುಗಳಿಂದ ಗೇರಣ್ಣು ಕೂಡಿಡುತ್ತಿದ್ದ ಚಿಕ್ಕ ಹುಡುಗನಿಂದ ಹಿಡಿದು, ಅಂತದೇ ಆಸೆಕಣ್ಣುಗಳಿಂದ ಗೆಳೆಯನ ಗೆಳತಿಗೆ ಎತ್ತರದ ನೇರಳೇ ಮರ ಹತ್ತಿ ಹಣ್ಣು ಕಿತ್ತು ತಂದ ಅತ್ಯಂತ ಲೌಕಿಕದ ಮನುಷ್ಯನಾಗಿದ್ದವನು ಇದ್ದಕ್ಕಿದ್ದ ಹಾಗೇ ಕಾವಿ ತೊಟ್ಟು ಜೋಳಿಗೆ ಹಿಡಿದು ಬಂದರೆ ನೋಡಿದ ನಮಗೆಲ್ಲಾ ಹೇಗಾಗಿರಬೇಡ ಹೇಳಿ? “ಅಷ್ಟು ಜವಾಬ್ದಾರಿ ಇದ್ದ ಹುಡುಗ ಕಾವಿ ಹಾಕಿದನಾ?” ಅಂತ ದೊಡ್ಡಮ್ಮನಿಗೆ ಆಶ್ಚರ್ಯ! ಅವನನ್ನು ಏಕವಚನದಲ್ಲಿ ಮಾತಾಡಿಸಬೇಕಾ, ಬೇಡವಾ? ಕಾಲಿಗೆ ಬೀಳಲಾ ಬೇಡವಾ ಅನ್ನುವ ತತ್‌ಕ್ಷಣದ ಗೊಂದಲ ಶುರುವಾಗಿತ್ತು ಅವರಿಗೆ. “ನನಗೆ ನನ್ನಪಾಡಿಗೆ ನನ್ನ ಹುಡುಕಿಕೊಬೇಕಿತ್ತು” ಅಂತ ಅಕ್ಕನ ಬಳಿ ತುಂಬಾ ಗಂಭೀರವಾಗಿ, ತುಂಬಾ ತಣ್ಣಗೆ ಹೇಳಿದ್ದನ್ನು ಕೇಳಿಸಿಕೊಂಡರೂ ನನಗೆ ಆ ಮಾತಿನ ಅರ್ಥವಾಗಿರಲಿಲ್ಲ.

ಅವನು ಅಲ್ಲಿಯವರೆಗಿದ್ದ ಅವನ ಜವಾಬ್ದಾರಿಗಳ ಪಲಾಯನ ಮಾಡಿದ್ದನಾ ಅಂತ ಹೇಳುವ ಅಂತನಿಸಿದರೆ, ಅವನಿಗೆ ಅವನ ಕುರಿತಾದ್ದೊಂದು ಜವಾಬ್ದಾರಿಯಿತ್ತಲ್ಲ.. ಅದರ ಬಗ್ಗೆ ಯೋಚಿಸಿ ಪ್ರಶ್ನೆ ಹಾಗೇ ಉಳಿದಿತ್ತು. ಆತ ಲೌಕಿಕದ ಸಂತೆಯಿಂದ ಏಕಾಂತದ ಅವನೊಳಗಿನ ನಿಸರ್ಗವನ್ನು ಹುಡುಕಿಕೊಂಡನೇನೋ ಅಂತ ಈಗ ನಾನದನ್ನು ವ್ಯಾಖ್ಯಾನಿಸಬಲ್ಲೆ. ಅವನಿಗಷ್ಟೇ ಕೇಳಿಸುವ ಅವನ ಉಸಿರಾಟದ ಏರಿಳಿತಗಳ ಸಮತೋಲನ ಅವನನ್ನು ಸೆಳೆಯಿತಾ ಅನ್ನುವುದನ್ನು ಈಗ ತಪ್ಪೋ ಸರಿಯೋ, ಎಂಥೋ ಊಹಿಸಬಲ್ಲೆ.. ಹಾಗೆಯೇ ಅವನು ಅವನ ಕುರಿತಾದ ಜವಾಬ್ದಾರಿಗಳ ಕಡೆಗೆ ತುಡಿಯುತ್ತಾ, ಸಾಮಾಜಿಕ ಜವಾಬ್ದಾರಿಗಳಿಂದ ವಿಮುಖನಾದನೋ ಅನ್ನುವ ಪ್ರಶ್ನೆಯನ್ನೂ ಉತ್ತರ ಸಿಗುವವರೆಗೂ ನೆನಪಿಟ್ಟುಕೊಳ್ಳಬಲ್ಲೆ..! ಆದರೆ ಇದನ್ನೆಲ್ಲಾ ಒಟ್ಟಾರೆ ‘ಸ್ವ-ಪ್ರೀತಿಯ ಕ್ರಾಂತಿಯಾ?ʼ ಅಂತ ಮಾತ್ರ ದೃಢೀಕರಿಸಿ ಹೇಳಲಾರೆ?

ನಮ್ಮ ನಮ್ಮದೇ ಸಂಸಾರ ಕಟ್ಟಿಕೊಂಡು, ನಮ್ಮ ಹೊಕ್ಕುಳ ಬಳ್ಳಿಗಳ ಚಿಗುರಿಸಿ ಹೂ ಬಿಟ್ಟಿರುವಾಗ, ಅದೇ ಸಂಸಾರದ ಜೊತೆಗಿದ್ದುಕೊಂಡೇ ತನ್ನೊಳಗಿನ ಭಾವಕೋಶಕ್ಕೆ ಜೀವ ತುಂಬುವುದರ ಕುರಿತಾಗಿಯಷ್ಟೇ ನಾನು ಮಾತಾಡುತ್ತಿದ್ದದ್ದು. ಕಾವಿ ವೈಯಕ್ತಿಕವೂ ಅಲ್ಲ, ಸಾಮಾಜಿಕವೂ ಅಲ್ಲ, ಕೌಟುಂಬಿಕ ಅಂತೂ ಮೊದಲೇ ಅಲ್ಲ. ಇಲ್ಲಿನ ಆಧ್ಯಾತ್ಮಿಕತೆ ಬಗ್ಗೆ ನಾನು ಮಾತಾಡುವುದೂ ಇಲ್ಲ. ಆದರೆ ಕಿರಿಸ್ವಾಮಿಯ ಪೂರ್ವಾಶ್ರಮದ ಆ ಹುಡುಗನ ತನ್ನ ಮೇಲಿನ ಪ್ರೀತಿ ಇದೇ ಆಗಿತ್ತೆಂದರೆ ನಾನದನ್ನು ಗೌರವಿಸಬೇಕಲ್ಲವಾ?

*

ನಾನು ಸಾಮಾನ್ಯರಲ್ಲಿ ಸಾಮಾನ್ಯರ ಸಹಜ ಹೋರಾಟದ ಬಗ್ಗೆ ಮಾತನಾಡಲು ಬಂದೆ. ನೆನಪಾಯಿತು ಅಂತ ಈ ಕತೆ ಹೇಳಿದೆ. ಇವತ್ತು ಎಲ್ಲವೂ ಅಕ್ಷಯವಾಗುವ ದಿನ ಅನ್ನುವುದು ನಂಬಿಕೆ. ಸಾಮಾಜಿಕ, ಕೌಟುಂಬಿಕ ಜವಾಬ್ದಾರಿಗಳನ್ನು ಹೇಗಾದರೂ ನೀಗಿಸುವುದಕ್ಕೆ ಹಲವು ಮಾದರಿಗಳು ಸಿಗುವ ಜಗತ್ತಿನಲ್ಲಿ.. ನಮ್ಮ ಕುರಿತಾದ ಪ್ರೀತಿಯ ನಿಭಾಯಿಸುವುದರ ಬಗ್ಗೆ ಒಂದು ಸರಳ ಮಾದರಿ ಹುಡುಕಿದರೆ ಸಿಗುತ್ತಿಲ್ಲ ಅಂದರೆ ಹಾಗಂತ ಬರೆಯುತ್ತ, ಹಾಗೇ ಬದುಕದ ಬದುಕಿನ ಬಗ್ಗೆ ಖುದ್ದು ಅಸಮಾಧಾನವಿದೆ. ಆದರೆ ಅದರ ಜೊತೆಗೆ ನಮ್ಮನ್ನು ನಾವೇ ಪ್ರೀತಿಸಿಕೊಳ್ಳಬೇಕಾದ ಕ್ರಾಂತಿಯ ಕಡೆಗೆ ತುಡಿತವೂ ಇದೆ.

(ಮುಂದಿನ ಬಿಲ್ಲೆ : 17.5.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಬರಹಗಳನ್ನುಇಲ್ಲಿ ಓದಿ : https://tv9kannada.com/tag/amaright

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ