Eid Mubarak : ಬಸವನ ದಾಸೋಹ ರಂಜಾನ್‌ನ ರೋಜಾದ ಹಸಿವನ್ನು ತೀರಿಸುವ ಹಂಬಲದಲ್ಲಿ ಬಂದು ನಿಂತಿದೆ
Moon : ಬೆಳಗ್ಗಿನ ಬ್ರೆಡ್ಡು ಮಾರುವ ಹುಡುಗರಿಂದ ಹಿಡಿದು ಸಂಜೆ ಕಬಾಬ್ ಮಾಡುವವವರ ಎಲ್ಲರ ಕಾಯಕಗಳು ಹಸಿವು ಕಲಿಸಿದ ಪಾಠಗಳೆ ಆಗಿವೆ. ಯುಗಾದಿಗೂ ರಂಜಾನ್‌ಗೂ ಇರುವವನು ಒಬ್ಬನೇ ಚಂದ್ರನಲ್ಲವೆ?
Eid Mubarak : ಏಕಾದಶಿ, ಉಪವಾಸ ಮತ್ತು ರೋಜಾಗಳಿಗೆ ಎಂತಹದ್ದೆ ಧಾರ್ಮಿಕ ನಂಬಿಕೆ ಆಚರಣೆಗಳಿದ್ದರೂ ಬದುಕು ಸಹಜವಾಗಿ ನಮಗೆ ಕಲಿಸುವ ಹಸಿವಿನ ಜೀವನ ಪಾಠ ದೊಡ್ಡದು. ಬೆಳಗ್ಗಿನ ಬ್ರೆಡ್ಡು ಮಾರುವ ಹುಡುಗರಿಂದ ಹಿಡಿದು ಸಂಜೆ ಕಬಾಬ್ ಮಾಡುವವವರ ಎಲ್ಲರ ಕಾಯಕಗಳು ಹಸಿವು ಕಲಿಸಿದ ಪಾಠಗಳೆ ಆಗಿವೆ. ಯುಗಾದಿಗೂ ರಂಜಾನ್‌ಗೂ ಇರುವವನು ಒಬ್ಬನೇ ಚಂದ್ರನಲ್ಲವೆ? ಈ ವರ್ಷ ಬಸವನೂ ಈದ್‌ಗೆ ಸೇರಿಕೊಂಡದ್ದು ವಿಶೇಷ. ಸಾಮರಸ್ಯದ ಜೀವನ ದ್ರವ್ಯಗಳು, ಸಾಕ್ಷಿಗಳು ನಮ್ಮ ನಡುವೆಯೆ ಸಹಜವಾಗಿ ಇರುವಾಗ ಜಗತ್ತು ಖತ್ತಿ ಮಸೆಯುತ್ತಾ, ಯುದ್ಧಕ್ಕೆ ಹಪಹಪಿಸುತ್ತಿರುವುದನ್ನು ನೋಡಿದರೆ ಎಲ್ಲಿಗೆ ಬಂದು ನಿಂತಿದ್ದೇವೆ ಎಂದು ನಾಚಿಕೆಯಾಗುತ್ತದೆ. ಹಬ್ಬಗಳ ಸಂದರ್ಭದಲ್ಲಿ ನಮ್ಮ ಪಂಚಮಿ ಉಂಡಿಗಳು, ಅವರ ಚೊಂಗ್ಯಾ, ಖೀರು ಎಷ್ಟು ಖುಷಿಯಿಂದ ಮನೆಮನೆಗೆ ಪರಸ್ಪರ ಹಂಚಿಕೊಳ್ಳುತ್ತಿದ್ದವು. ಆದರೆ ಈಗ? ನಂಜಿನ ಬೀಜಗಳು ಮೊಳಕೆಯೊಡೆದು ಚಿಗುರಿ ಬೆಳೆಯುವ ಮುನ್ನ ಬೇರು ಸಮೇತ ಕಿತ್ತೆಸೆಯುವ ಜೀವನಪ್ರೀತಿ ನಮ್ಮದಾಗಬೇಕಿದೆ. ಭವಿಷ್ಯಕ್ಕೆ ಕೆಟ್ಟ ಇತಿಹಾಸವನ್ನು ಮುಂದಿನ ಪೀಳಿಗೆಯ ಹೆಗಲಿಗೆ ಕಟ್ಟುವುದು ನಿಲ್ಲಲಿ. ಬಸವನ ದಾಸೋಹ ರಂಜಾನ್‌ನ ರೋಜಾದ ಹಸಿವನ್ನು ತೀರಿಸುವ ಹಂಬಲದಲ್ಲಿ ಬಂದು ನಿಂತಿದೆ. ಪ್ರೀತಿಯಿಂದ ಸ್ವಾಗತಿಸಿ, ಪ್ರೀತಿ ಎಲ್ಲೆಡೆ ಅಂಕುರಿಸಲಿ. ರಟ್ಟಿಹಳ್ಳಿ ರಾಘವಾಂಕುರ, ಕವಿ, ಲೇಖಕ (Rattihalli Raghavankura)
ಆಗಬಹುದೆ?
ಇಫ್ತಾರ್ ಕೂಟದಲೊಂದು ದಿನ ಹಸಿದಂತೆ ಬಂದು, ಕುಂತು ಕತ್ತು ಮೇಲೆತ್ತಿ ಆಜ್ಞಾಪಿಸಿತು ಧ್ವನಿ ಗೊತ್ತಲ್ಲ ನಾನು ಸಸ್ಯಾಹಾರಿ
ಅಚ್ಛಾ ಅಚ್ಛಾ ಬನ್ನಿ ಬನ್ನಿ ಹೀಗೆ ಬನ್ನಿ ಕುಳಿತುಕೊಳ್ಳಿ
ಬಾಗಿ ಬಳುಕಿ ಬಂದ ತಾಜಾ ಬಾಳೆ ಎಲೆ ಅಂಗಾತ ಹಾಸಿಕೊಂಡಿತು ಮೇಲೊಂದಿಷ್ಟು ನೀರು ಚುಮುಕಿಸಿದ ಕೈ ಅದರ ಹಿಂದೆಯೆ ಬಂದ ಉಪ್ಪು ಉಪ್ಪಿನಕಾಯಿ ಆಮೇಲಾಮೇಲೆ ಕೋಸುಂಬರಿ, ಪಲ್ಯ, ರೊಟ್ಟಿ ಹಪ್ಪಳ, ಅನ್ನ ಸಾರು ಬೇಕೆಂದರೆ ಉಂಟೂ ತಿಳಿಸಾರು ಕೊನೆಗೆ ಇದ್ದದ್ದೆ ಮಜ್ಜಿಗೆ ಹಾಕಿಕೊಳ್ಳುವವರಿಗೆ ತಾಂಬೂಲ
ಊಟಕ್ಕೆಂದೆ ಕೂತ ಮೇಲೆ ಉಣ್ಣುವುದೇನು ಮಹಾ!
ಉಣ್ಣಲಾಗದು! ಅಡ್ಡಿಗಳಿವೆ ಕೆಲವು
ತಿನ್ನಬಾರದಂತೆ ಉಪ್ಪು ಉಪ್ಪಿನಕಾಯಿ ಸರ‍್ರನೆ ಎಲೆಯಿಂದ ನಿರ್ಗಮಿಸಿತು ಬಿ.ಪಿ ಆಗಬಹುದೆ ?
ಕೋಸುಂಬರಿ ಇವತ್ತಿಗೆ ಬೇಡ ನಿರ್ಗಮಿಸಿತು ರಾಮನವಮಿಯ ಭಕ್ಷ್ಯ
ಅಭಿ.. ಹೋ ಸಕ್ತಾ ಹೈ?
ಗಟ್ಟಿಯಿಲ್ಲ ಹಲ್ಲು ತಿನ್ನುವಷ್ಟು ರೊಟ್ಟಿ ಅಲ್ಲದೆ ಮೈತುರಿಕೆ ಬದನೆಗೆ ಹೊರನಡೆಯಿತು ಬಂದ ದಾರಿಯಲ್ಲಿ ಬುಟ್ಟಿಗೆ ರೊಟ್ಟಿ
ಹೋ ಸಕ್ತಾ ಹೈ? ಬೇಡ ಸಂಕೋಚ, ಅಂದುಕೊಳ್ಳಿ ನಿಮ್ಮದೆ ಮನೆ
ಶುಗರು ಸರ‍್ರನೇಳುತ್ತದೆ ಈ ರೈಸಿಗೆ.. ಎಲೆಯಿಂದ ಬಾಚಿ ಬಳಿದುಕೊಂಡು ಮುನಿದು ನಡೆದ ಅನ್ನಬ್ರಹ್ಮ ಗಣಪನ ಮೂಷಿಕನಂತೆ ಹಪ್ಪಳವೂ ಹಿಂದೆ
ಅಭಿ.. ಹೋ ಸಕ್ತಾ ಹೈ?
ಹೋದ ವೇಗಕ್ಕೆ ಮರಳಿ ಪರಕಾಯ ಪ್ರವೇಶ ಪಡೆದು ನಿಂತ ಬಿ.ಪಿ ಕೈ ತೊಳೆಯಿತು ಎಲೆಯಲ್ಲಿ
ಛೀ ಛೀ! ಎಂತಾ ಮಾತು.. ಕ್ಯಾ.. ಹೋ ಸಕ್ತಾ ಹೈ? ಆಗುವುದಕ್ಕೇನಿದೆ ಇಲ್ಲಿ? ಉಳಿದದ್ದೇನಿದೆೆ ಎಲೆಯಲ್ಲಿ? ಹೇಗೆ ಇಳಿದೀತು ಮಜ್ಜಿಗೆ ಒಳಕ್ಕೆ ಊಟವಿಲ್ಲದೆ ತಾಂಬೂಲವೆ? ಎಲೆ ಹಾಕಿ ಮೇಲೆಬ್ಬಿಸುವುದು ಕ್ಷೋಭೆಯಲ್ಲ ಸಲ್ಲದು ನಮಗೀ ಶಿಷ್ಟಾಚಾರ ಹೊರಟು ನಡೆಯಿತು ಹೊಟ್ಟೆ ಶಪಿಸುತ್ತ ಸಸ್ಯಾಹಾರಿಯ ಬೆನ್ನಿಗಂಟಿ
ಬಿ.ಪಿ, ಶುಗರು, ಪಥ್ಯಗಳ ಅನುಮಾನಿಸಬಹುದು? ಅನುಮಾನಿಸಬಾರದು ಊಟ ಮತ್ತು ಬಡಿಸುವ ಕೈಗಳ
ದೇಖಿಯೆ ಸಾಬ್.. ತಮಗೆ ಊಟವೇ ಬೇಡವಿದ್ದ ಮೇಲೆ ಕೂತದ್ದಾದರೂ ಏಕೆ ಪಂಕ್ತಿಯಲ್ಲಿ? ಜಾಣಕಿವುಡು ಹಿಂದೆ ತಿರುಗಲಿಲ್ಲ
ಅಂಗಾತ ಮಲಗಿ ಸುಸ್ತಾದ ಬಾಳೆ ಎಲೆ ಹೋಳು ಮಗ್ಗಲಾಗಿ ಎದ್ದು ಬೇಸರಿಸಿ ನಡೆಯಿತು ತೆಪ್ಪಗೆ, ತಿಪ್ಪೆಗೆ
ಒಡನೆಯೇ ಓಡಿ ಬಂದ ಜೋಡಿ ದನ ಹರಿದು ತಿಂದವು ಬಾಳೆ ಎಲೆಯ ಬಾಯಿ ಚಪ್ಪರಿಸುತ್ತ.. ಆಗಬಹುದೆ?
*
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : No Delete Option : ಒಂದಾನೊಂದು ಕಾಲದಲ್ಲಿ ಕೊಡಗಿನಲ್ಲಿ ನಡೆದ ಸತ್ಯಕಥೆ
Published On - 12:43 pm, Tue, 3 May 22