No Delete Option : ಒಂದಾನೊಂದು ಕಾಲದಲ್ಲಿ ಕೊಡಗಿನಲ್ಲಿ ನಡೆದ ಸತ್ಯಕಥೆ

Kodagu : ‘ಏನು ಮಕ್ಕಳಪ್ಪ, ಊರಿನಲ್ಲಿ ಅಯ್ಯಪ್ಪ ಭಕ್ತರು ಮಾಲೆ ಹಾಕಿದರೆ ಸಾಕು, ಅವರು ಮಲೆಗೆ ಹೋಗಿ ಬರುವವರೆಗು ಈ ಮಕ್ಕಳಿಗೆ ಊಟ ತಿಂಡಿ ಏನು ಬೇಡ! ಶಾಲೆಗೆ ಹೊರತುಪಡಿಸಿದರೆ, ಉಳಿದ ಎಲ್ಲ ಸಮಯವೂ ಅಯ್ಯಪ್ಪ ಮಂದಿರದಲ್ಲೆ ಕಾಲ ಕಳೆಯುತ್ತಾರೆ’ ನಕ್ಕು ಐಸಮ್ಮ ಕೋಣೆಯೊಳಕ್ಕೆ ಹೋದಳು.

No Delete Option : ಒಂದಾನೊಂದು ಕಾಲದಲ್ಲಿ ಕೊಡಗಿನಲ್ಲಿ ನಡೆದ ಸತ್ಯಕಥೆ
ಲೇಖಕ ನೌಷಾದ ಜನ್ನತ್
Follow us
ಶ್ರೀದೇವಿ ಕಳಸದ
|

Updated on:Apr 17, 2022 | 3:47 PM

NO Delete Option : ಬೋಯಿಕೇರಿ ಎಂಬುದು ಕೊಡಗಿನ ಮಡಿಕೇರಿಯ ಪಕ್ಕದಲ್ಲಿ ಬರುವ ಒಂದು ಪುಟ್ಟ ಗ್ರಾಮ. ಸುತ್ತಲೂ ಬೆಟ್ಟಗುಡ್ಡ ಮತ್ತು ಕಾಫಿತೋಟಗಳ ನಡುವೆ ಕೇಂದ್ರಿಕೃತಗೊಂಡಿದ್ದ ಆ ಗ್ರಾಮದಲ್ಲಿ ವರ್ಷದ ಆರು ತಿಂಗಳು ಮಳೆಯ ಆರ್ಭಟವಾದರೆ, ಇನ್ನುಳಿದ ತಿಂಗಳುಗಳಲ್ಲಿ ಚಳಿಯದ್ದೆ ಪಾರುಪತ್ಯ. ಅದು ಡಿಸೆಂಬರ್ ತಿಂಗಳ ಕೊನೆಯ ದಿನಗಳಾಗಿದ್ದರಿಂದ, ಇಳಿಸಂಜೆಯಾಗುತ್ತಿದ್ದಂತೆ ಮಳೆಗೂ ಮಿಗಿಲಾಗಿ, ಭುವಿಗೆ ಮಂಜಿನ ಸಿಂಚನವಾಗುತ್ತಿದ್ದವು. ಊರಿನ ಜನರೆಲ್ಲ ಚಳಿ ತಡೆಯಲಾಗದೆ ಒಮ್ಮೆ ವರುಣನ ದರ್ಶನ ಆಗಬಾರದೆ ಎಂದು ಆಸೆಗಣ್ಣುಗಳಿಂದ ಮುಗಿಲಿನತ್ತ ದೃಷ್ಟಿನೆಟ್ಟು ಕಾಯುತ್ತಿದ್ದರು. ಊರಿನಿಂದ ಪರ್ಲಾಂಗಿಗೂ ದೂರದಲ್ಲಿದ್ದ ಶಾಲೆಯ ಕೊನೆಯ ಬೆಲ್ಲು ಬಾರಿಸುತ್ತಿದ್ದಂತೆ ಮನೆಯತ್ತ ಓಡೋಡಿ ಬಂದ ಮುಸ್ತಫ, ತನ್ನ ಪುಸ್ತಕದ ಗಂಟನ್ನು ಮಂಚದ ಮೇಲೆ ಎಸೆದು, ಊರಿನ ತುದಿಯಲ್ಲಿದ್ದ ಸಭಾಂಗಣದ ಪಕ್ಕದ, ಮೈದಾನಕ್ಕೆ ಹೋಗಲು ಅಣಿಯಾದ. ಅವನ ಈ ಆತುರವನ್ನು ಕಂಡು, ‘ಏ ಒಂದು ಲೋಟ ಚಹ ಕುಡಿದಾದರು ಹೋಗೊ!’ ಎಂದು ಅವಾಗ ತಾನೆ ಅಪ್ಪಣ್ಣ ಯಜಮಾನನ ಕಾಫಿತೋಟದಿಂದ ಕೆಲಸ ಮುಗಿಸಿ ಮರಳಿ ಬಂದಿದ್ದ ಐಸಮ್ಮ, ತನ್ನ ಸೊಂಟದ ಸುತ್ತ ಕಟ್ಟಿದ್ದ ಪ್ಲಾಸ್ಟಿಕ್ ಚೀಲದ ಗಂಟನ್ನು ಬಿಚ್ಚುತ್ತಾ, ಓಡಲು ಸಿದ್ದವಾಗಿದ್ದ ಮಗನಿಗೆ ಕೇಳಿಸುವಂತೆ ಹೇಳಿದಳು. ನೌಷಾದ್ ಜನ್ನತ್, ಲೇಖಕ, ಕೊಡಗು (Nowshad Jannath)

‘ನನಗೆ ಬೇಡ ಉಮ್ಮ, ಆ ಗಣಿ ಸಾಮಿ, ಕುಮಾರ ಸಾಮಿ ಎಲ್ಲರೂ ಶಾಲೆಯಿಂದ ನೇರವಾಗಿ ಅಯ್ಯಪ್ಪ ಮಂದಿರಕ್ಕೆ ಹೋಗಿಯಾಯಿತು! ನಿನ್ನೆ ಗುರುಸ್ವಾಮಿ ಪೂಜೆಯ ನಂತರ ಪ್ರಸಾದ ಕೊಡುವಾಗ, ನಾಳೆ ಸಂಜೆ ಎಲ್ಲಾ ಸಾಮಿಗಳು ಹೋಗಿ, ಸ್ವಲ್ಪ ಕಟ್ಟಿಗೆ ಸಂಗ್ರಹಿಸಿ ತರಬೇಕು ಎಂದು ಹೇಳಿದ್ದರು. ನನ್ನನ್ನು ಬಿಟ್ಟು ಅವರೆಲ್ಲರು ಈಗಾಗಲೇ ಹೋಗಿರಬಹುದು!’ ಎಂದು ಏದುಸಿರು ಬಿಡುತ್ತಾ ಹೇಳಿ.. ‘ನಾನು ಅಯ್ಯಪ್ಪ ಮಂದಿರದಲ್ಲಿ ಸ್ವಾಮಿಗಳೊಂದಿಗೆ ಚಹ ಕುಡಿಯುತ್ತೇನೆ’ ಎನ್ನುತ್ತಾ, ಅಮ್ಮನ ಮಾತು ಮುಗಿಯುವ ಮುಂಚೆಯೆ ಅಲ್ಲಿಂದ ದೌಡಾಯಿಸಿದ. ಅವನ ಹಿಂದೆಯೇ, ‘ಇರೋ ನಾನು ಕೂಡ ಬರುತ್ತೇನೆ’ ಎಂದು ಎಂಟರ ಪ್ರಾಯದ ಮುಸ್ತಫನ ತಂಗಿ ಜಮೀಲ ಕೂಡ ತನ್ನ ತಲೆಯ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಾ ಓಟಕ್ಕಿತ್ತಳು.

‘ಏನು ಮಕ್ಕಳಪ್ಪ, ಊರಿನಲ್ಲಿ ಅಯ್ಯಪ್ಪ ಭಕ್ತರು ಮಾಲೆಯಾಕಿದರೆ ಸಾಕು, ಅವರು ಮಲೆಗೆ ಹೋಗಿ ಬರುವವರೆಗು ಈ ಮಕ್ಕಳಿಗೆ ಊಟ ತಿಂಡಿ ಏನು ಬೇಡ! ಶಾಲೆಗೆ ಹೋಗುವ ಆ ಸಂದರ್ಭವೊಂದನ್ನು ಬಿಟ್ಟು ಉಳಿದ ಎಲ್ಲ ಸಮಯವೂ ಆ ಅಯ್ಯಪ್ಪ ಮಂದಿರದಲ್ಲೆ ಕಾಲ ಕಳೆಯುತ್ತಾರೆ’ ಎಂದು ನಕ್ಕು ಐಸಮ್ಮ ಕೋಣೆಯೊಳಕ್ಕೆ ಹೋದಳು.

ಮೈದಾನದ ನೆಲವನ್ನು ಸಮತಟ್ಟು ಮಾಡಿ, ಸಾರಿಸಿ, ನಾಲ್ಕು ಮೂಲೆಗಳಿಗೂ ಮರದ ಕಂಬಗಳನ್ನ ನೆಟ್ಟು, ತೆಂಗಿನ ಓಲೆಯಿಂದ ಮೇಲ್ಛಾವಣಿ ಮಾಡಿ, ಸುತ್ತಲೂ ನೀಲಿಬಣ್ಣದ ಟಾರ್ಪಲ್‌ನಿಂದ ಹೊದಿಸಿ ನಿರ್ಮಿಸಿದ್ದ ಮಂದಿರದ ಒಳಗೆ, ಯೋಗಮುದ್ರೆಯಲ್ಲಿ ಕುಳಿತು, ಚಿನ್ಮುದ್ರೆಧಾರಿಯಾಗಿ ಅಭಯಹಸ್ತ ನೀಡುತ್ತಿರುವ ಭಂಗಿಯಲ್ಲಿದ್ದ ಬಂಗಾರದ ಪುತ್ಥಳಿಯ ಅಯ್ಯಪ್ಪನ ದೊಡ್ಡ ಭಾವಚಿತ್ರವನ್ನು ಇಟ್ಟಿದ್ದರು, ಅದರ ಪಕ್ಕದಲ್ಲೆ ಹುಲಿಸವಾರಿ ಮಾಡುತ್ತಿರುವ ರೀತಿಯ ಹರಿಹರಸುತನ ಮತ್ತೊಂದು ಚಿತ್ರ. ಪಕ್ಕದಲ್ಲಿ ಒಂದಷ್ಟು ಪೂಜಾ ಸಾಮಾಗ್ರಿಗಳು. ಜೊತೆಗೆ ಎಲ್ಲಾ ಮಕ್ಕಳ ಕಣ್ಮನ ಸೆಳೆಯುವ ರೀತಿಯ ಉದ್ದುದ್ದದ ನವಿಲುಗರಿಯ ಗೊಂಚಲುಗಳನ್ನು ಫೋಟೋದ ಪಕ್ಕದಲ್ಲಿ ಜೋಡಿಸಿದ್ದರು.

ಮುಸ್ತಫ ಮತ್ತು ಜಮೀಲ ಓಡಿಕೊಂಡು ಮಂದಿರ ತಲುಪುವಷ್ಟರಲ್ಲಿ ಕೆಲ ಕನ್ನಿಸ್ವಾಮಿಗಳು ಕಟ್ಟಿಗೆ ತರಲು, ಇನ್ನುಳಿದವರು ಕೆಳಬದಿಯಲ್ಲಿದ್ದ ಟ್ಯಾಂಕಿಯಿಂದ ಅಡುಗೆಗಾಗಿ ಮಂದಿರದ ಪಕ್ಕದಲ್ಲಿ ಇರಿಸಿದ್ದ ಡ್ರಮ್ಮಿಗೆ ನೀರು ತುಂಬುವ ಸಲುವಾಗಿ ಹೊರಡಲು ಸಿದ್ದವಾಗಿದ್ದರು. ಅವರನ್ನು ಕಂಡದ್ದೆ ತಡ, ತಮ್ಮ ಪಾದರಕ್ಷೆಗಳನ್ನು ಕಳಚಿ ಒಂದು ಬದಿಯಲ್ಲಿಟ್ಟು ಮುಸ್ತಫ, ಕಟ್ಟಿಗೆ ತರಲು ಹೊರಟು ನಿಂತವರ ಗುಂಪನ್ನು ಸೇರಿಕೊಂಡರೆ, ಜಮೀಲ ಸಣ್ಣ ಗಾತ್ರದ ಕೊಡಪಾನವೊಂದನ್ನು ಎತ್ತಿಕೊಂಡು ನೀರು ತರುವವರ ಸಂಗಡ ಸೇರಿಕೊಂಡು ತನ್ನ ಪುಟ್ಟಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಅವರೊಂದಿಗೆ ಸಾಗಿದಳು.

ಮಂದಿರದ ಮುಂಭಾಗದಲ್ಲಿ ನಿಂತಿದ್ದ ದಾಮೋದರ ಗುರುಸ್ವಾಮಿಗಳು, ‘ಏ ಮುಸ್ತಫ, ಚಪ್ಪಲು ಹಾಕೊಂಡು ಹೋಗೊ, ಸೌದೆ ತರಲು ಬೇರೆ ಹೋಗ್ತಾ ಇದ್ದೀರ, ಕಾಲಿಗೆ ಮುಳ್ಳುಗಿಳ್ಳು ಏನಾದ್ರು ಚುಚ್ಚಿಕೊಂಡು ಬಿಡುತ್ತೆ’ ಎಂದು ಕೂಗಿ ಹೇಳಿದರು.

ಇದನ್ನ ಓದಿ : No Delete Option: ಅಶೋಕ ಚಕ್ರವರ್ತಿಗಳೇ, ಈ ಹೆದ್ದಾರಿ ಎಂಬ ಹೆಬ್ಬಾವು ನಮ್ಮನ್ನು ನುಂಗುವುದಿಲ್ಲವಲ್ಲ?

ಗುರುಗಳ ಮಾತುಕೇಳಿ ತಿರುಗಿ ನಿಂತ ಮುಸ್ತಫ, ‘ಇಲ್ಲಿರುವ ಸ್ವಾಮಿಗಳೆಲ್ಲರೂ ಚಪ್ಪಲು ಧರಿಸದೇ ತಾನೆ ಸೌದೆ ತರಲು ಹೋಗುತ್ತಿರುವುದು! ಅವರ ಕಾಲಿಗೆ ಮುಳ್ಳು ಚುಚ್ಚುವುದಿಲ್ಲ ಎಂದಾದರೆ ನನಗೂ ಚುಚ್ಚುವುದಿಲ್ಲ ಬಿಡಿ’ ಎಂದು ನಗುತ್ತಾ ಗುರು ಸ್ವಾಮಿಗಳಿಗೆ ಉತ್ತರ ಕೊಟ್ಟು ಅಯ್ಯಪ್ಪ ಭಕ್ತರೊಂದಿಗೆ ಮುಂದಕ್ಕೆ ನಡೆದ. ಚೋಟುದ್ದದ ಮುಸ್ತಫನ ಮಾತು ಕೇಳಿ ಸಂತೋಷಗೊಂಡ ದಾಮೋದರ ಸ್ವಾಮಿಗಳು, “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಮನದಲ್ಲೆ ಹೇಳಿದರು.

ರಾಜರ ಕಾಲದಲ್ಲೆ, ಬೆಟ್ಟದ ಎದೆಯನ್ನು ಸೀಳಿ, ಮಡಿಕೇರಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಹಾವಿನ ಮೈಯ ರೀತಿಯಲ್ಲಿ ಅಂಕುಡೊಂಕಾದ ಮುಖ್ಯರಸ್ತೆಯೊಂದನ್ನು ಬೋಯಿಕೇರಿ ಗ್ರಾಮಕ್ಕೆ ಅಂಟಿಕೊಂಡಂತೆ ನಿರ್ಮಿಸಿದ್ದರು. ತುಂಬಾ ತಿರುವುಗಳಿಂದ ಕೂಡಿದ್ದ ಆ ರಸ್ತೆಯಲ್ಲಿ ದಿನನಿತ್ಯ ಯಾವುದಾದರು ಒಂದು ಅಪಘಾತ ಕಟ್ಟಿಟ್ಟಬುತ್ತಿ. ಆ ರಸ್ತೆಯ ಬಲಬದಿಗೆ ಊರಿದ್ದರೆ, ಎಡಬದಿಯಲ್ಲಿ ಕಣ್ಣೆಟುಕದ ದೂರಕ್ಕೂ ಹಸಿರು ಮೈರಾಶಿಯನ್ನು ಹೊದ್ದುಮಲಗಿರುವ ಕಾಫಿತೋಟಗಳು ಎದ್ದು ಕಾಣುತ್ತಿದ್ದವು. ಜೊತೆಗೆ ಈ ಊರಿನಲ್ಲಿ ನದಿ ಇಲ್ಲದೆ ಇದ್ದುದರಿಂದ ಊರಜನರಿಗೆ ಬಟ್ಟೆಬರೆಗಳನ್ನು ಒಗೆಯಲು ಅನುಕೂಲವಾಗಲೆಂದು ಪಂಚಾಯಿತಿ ವತಿಯಿಂದ, ಅಯ್ಯಪ್ಪ ಮಂದಿರದ ಮತ್ತೊಂದು ಮಗ್ಗುಲಲ್ಲಿ ಕಲ್ಲಿನ ಕಟ್ಟೆಗಳನ್ನು ಕಟ್ಟಿಸಿ ಕೃತಕವಾಗಿ ನೀರು ಸಂಗ್ರಹಿಸಿ ದೋಬಿಘಾಟ್ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದರು.

ಸಂಜೆ ಆರು ಗಂಟೆ ಆಗುತ್ತಿದ್ದಂತೆ ಪಕ್ಕದಲ್ಲಿದ್ದ ಅಯ್ಯಪ್ಪ ಭಕ್ತರೆಲ್ಲರು ಆ ನೀರು ಶೇಖರಿಸಿಟ್ಟಿದ್ದ ಟ್ಯಾಂಕಿಯ ಬಳಿ ಹೋಗಿ ಆ ಮೈ ಕೊರೆಯುವ ಚಳಿಯ ನಡುವೆಯೂ ಬಕೇಟಿನಲ್ಲಿ ಆ ತಣ್ಣನೆಯ ನೀರನ್ನು ತುಂಬಿ, ಜೋರಾಗಿ ಅಯ್ಯಪ್ಪನ ನಾಮವನ್ನು ಕೂಗುತ್ತಾ ತಲೆಯ ಮೇಲೆ ಸುರಿದುಕೊಂಡು, ತರತರ ನಡುಗುತ್ತ ಮಂದಿರದೊಳಕ್ಕೆ ಬಂದು ಸ್ವಾಮಿ ಕೂಗಲು ಸಿದ್ದವಾಗತೊಡಗಿದರು.

ಅಷ್ಟರಲ್ಲಾಗಲೆ ಕಟ್ಟಿಗೆ ತರಲು ಹೋಗಿದ್ದ ಮತ್ತು ನೀರು ತುಂಬುತ್ತಿದ್ದ ಎಲ್ಲಾ ಸ್ವಾಮಿಗಳು ಬಂದು ಸಾಲಾಗಿ ಉಳಿದವರ ಹಿಂದೆ ಕುಳಿತುಕೊಂಡರು. ಜೊತೆಜೊತೆಯಲ್ಲೆ ಮುಸ್ತಫ, ಜಮೀಲ ಇನ್ನಿತರೆ ಅನ್ಯಧರ್ಮದ ಎಲ್ಲಾ ಮಕ್ಕಳು ಒಟ್ಟೊಟ್ಟಾಗಿ ಕುಳಿತಿದ್ದರು. ಗುರುಸ್ವಾಮಿಯಾದ ದಾಮೋದರ ಸ್ವಾಮಿಗಳು, “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಪ್ರಾರಂಭ ಮಾಡಿ, ಸ್ವಾಮಿ ಕೂಗಲು ಪ್ರಾರಂಭಮಾಡಿದರು. ಅವರೊಂದಿಗೆ ಧ್ವನಿಗೂಡಿಸಿದ ಉಳಿದವರು ಕೂಡ, “ಸ್ವಾಮಿ ಶರಣಂ, ಅಯ್ಯಪ್ಪ ಶರಣಂ” ಎಂದು ಏಕಾಗ್ರತೆಯಿಂದ ಮೈಮರೆತು ಒಂದು ತಾಸುಗಳಿಗು ಹೆಚ್ಚು ಕಾಲ ಅಯ್ಯಪ್ಪನ ನಾಮವನ್ನು ಭಜನೆ ಮಾಡಿ ಪೂಜಿಸತೊಡಗಿದರು. ಇದನ್ನೆಲ್ಲ ಮುಗ್ದತೆಯಿಂದ ಮುಸ್ತಫ ಮತ್ತು ಉಳಿದ ಮಕ್ಕಳು ನೋಡುತ್ತಾ ಅವರ ಜೊತೆಜೊತೆಗೆ ಧ್ವನಿಗೂಡಿಸುತ್ತಿದ್ದರು. ಪೂಜೆಯ ನಂತರ ಪ್ರಸಾದ ಸ್ವೀಕರಿಸಿ, ಅಯ್ಯಪ್ಪ ಮಾಲಾಧಾರಿಗಳು ಮಂದಿರದಲ್ಲಿಯೇ ಮಲಗಿದರೆ, ಉಳಿದವರು ತಮ್ಮತಮ್ಮ ಮನೆಗಳತ್ತ ತೆರಳಿದರು. ಅದಾಗಲೆ ನಿದ್ದೆ ತೂಕಡಿಸುತ್ತಿದ್ದ ಜಮೀಲಳ ಕೈಯನ್ನು ಹಿಡಿದುಕೊಂಡು ಪ್ರಸಾದ ಮೆಲ್ಲುತ್ತಾ ಮುಸ್ತಫ ಕೂಡ ಮನೆಯತ್ತ ಹೆಜ್ಜೆ ಹಾಕಿದ.

ಮರುದಿನ ಬೆಳಕರಿಯುವ ಮುನ್ನವೇ ಮುಸ್ತಫನ ಮನೆಯ ಬಾಗಿಲನ್ನು ಯಾರೋ “ಉಮ್ಮ ಉಮ್ಮ” ಎಂದು ಕೂಗುತ್ತಾ ಬಡಿಯತೊಡಗಿದರು. ಐಸಮ್ಮ ಬೆಳಗ್ಗಿನ ನಮಾಜು ಮುಗಿಸಿ, ಚಾಪೆಯಲ್ಲೆ ಕುಳಿತು, ‘ನನ್ನ ಕಷ್ಟಗಳನ್ನೆಲ್ಲ ನೀಗಿಸು ಭಗವಂತ, ನನ್ನ ಮಕ್ಕಳಿಗೆ ಒಳ್ಳೆ ಬುದ್ದಿ ಕೊಡು ರಬ್ಬೆ’ ಎಂದು ಮಂದಲಿಗೆಯ ಮೇಲೆ ಕುಳಿತು ಎರಡು ಕೈಗಳನ್ನು ಬೊಗಸೆ ಮಾದರಿಯಲ್ಲಿ ಜೋಡಿಸಿ ಮೇಲಕ್ಕೆ ನೋಡುತ್ತಾ ಪ್ರಾರ್ಥನೆ ಮಾಡುತ್ತಿದ್ದಳು. ಇಂದೆಂದಿಗೂ ಇಲ್ಲದಂತೆ, ಈ ಹೊತ್ತಿನಲ್ಲಿ ಬಾಗಿಲು ಬಡಿಯುವ ಶಬ್ದ ಕೇಳಿ ಆತಂಕಗೊಂಡ ಐಸಮ್ಮ ಅಳುಕಿನಿಂದಲೆ ಎದ್ದು ಬಂದು ಬಾಗಿಲು ತೆರೆದರೆ, ನೆತ್ತಿಯ ಮೇಲೆ ಬೆಳ್ಳಗಿನ ಚಂದನದ ಬೊಟ್ಟುತೊಟ್ಟು, ಎದೆಯವರೆಗೂ ರುದ್ರಾಕ್ಷಿ ಮಾಲೆಯನ್ನು ಇಳಿಬಿಟ್ಟು, ಹೆಗಲಿನ ಮೇಲೆ ಕಪ್ಪು ಬಣ್ಣದ ಶಾಲನ್ನು ಹೊದ್ದುಕೊಂಡು ಕಿಟ್ಟಣ್ಣನ ಮಗ ಗಣಿ, ಕೈಯಲ್ಲಿ ಒಂದು ಬಟ್ಟೆಯ ಮುದ್ದೆಯನ್ನು ಹಿಡಿದುಕೊಂಡು ಎದುರಿಗೆ ನಿಂತಿದ್ದ. ಈ ಹುಡುಗ ಯಾಕೆ ಇಷ್ಟೊತ್ತಿನಲ್ಲಿ ಬಂದಿದ್ದಾನೆ! ಎಂದು ಆಶ್ಚರ್ಯಗೊಂಡ ಐಸಮ್ಮ, “ಎಂಥ ಗಣಿ, ಏನಾಯ್ತು! ಇಷ್ಟು ಬೆಳಿಗ್ಗೆಯೆ ಬಂದಿದ್ದಿಯಲ್ಲ!” ಎಂದು ತನ್ನ ಬಿಳಿಬಣ್ಣದ ನಮಾಜು ಬಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಕೇಳಿದಳು.

‘ಅದು ಉಮ್ಮಾ, ರಾತ್ರಿ ಸಾಮಿ ಕೂಗಿ, ಮರಳುವಾಗ ಜಮೀಲ ತನ್ನ ವೇಲನ್ನು ಅಲ್ಲೆ ಮರೆತು ಬಂದಿದ್ದಾಳೆ. ಅವಳು ಬೆಳಿಗ್ಗೆಯೆ ಮದರಸಕ್ಕೆ ಹೋಗಬೇಕಲ್ವ! ಹಿಜಬ್ ಇಲ್ಲ ಅಂತ ಅವಳು ಉಸ್ತಾದರ ಕೈಯಿಂದ ಏಟು ತಿನ್ನಬೇಕಾಗುತ್ತದೆ ಎಂಬುದು ಆ ಬಟ್ಟೆಯನ್ನು ನೋಡಿದ ತಕ್ಷಣ ನನಗೆ ನೆನಪಾಯಿತು. ಅದರಿಂದ ಬೆಳಿಗ್ಗೆ ಎದ್ದವನೆ ಅವಳು ಮದರಸಕ್ಕೆ ಹೋಗುವ ಮುಂಚೆಯೇ ಅವಳ ತಲೆಬಟ್ಟೆಯನ್ನು ಕೊಟ್ಟುಬರುವ’ ಎಂದು ಬಂದೆ ಎಂದು ಹೇಳಿದ.

ಇದನ್ನೂ ಓದಿ : No Delete Option: ಅಂದಿನ ಹಸಿವು ನಾಣ್ಯದಂತೆ ಸದ್ದು ಹೊರಡಿಸುತ್ತಿತ್ತು, ಇಂದಿನ ಹಸಿವು ನೋಟಿನಂತೆ ಮಲಗಿರುತ್ತದೆ

ಗಣಿಯ ಮಾತು ಕೇಳಿ ಸಂತೋಷಗೊಂಡ ಐಸಮ್ಮ, ‘ಯಾ ಅಲ್ಲಾಹ್, ಒಳ್ಳೆಯ ಕೆಲಸ ಮಾಡಿದೆ’ ಎಂದು ದೀರ್ಘ ನಿಟ್ಟುಸಿರೊಂದನ್ನು ಬಿಟ್ಟು ‘ಬಾ ಒಳಗೆ ಕಟ್ಟನ್ ಕೊಡುತ್ತೇನೆ’ ಎಂದು ಗಣಿಯನ್ನು ಒಳಕರೆದಳು. ‘ಇಲ್ಲ ಉಮ್ಮ, ಹೋಗಿ, ತಣ್ಣೀರು ಸ್ನಾನ ಮಾಡಿ ಪೂಜೆ ಮಾಡಬೇಕಾಗಿದೆ’ ಎಂದು ನಗುತ್ತಾ ಅಲ್ಲಿಂದ ಗಣಿ ಮರೆಯಾದ. ಅವನು ಹೋದ ನಂತರದಲ್ಲಿ ‘ಪಾಪ ಹುಡುಗ ಅಯ್ಯಪ್ಪನ ಮಾಲೆ ಹಾಕಿಕೊಂಡು ವ್ರತ ಇದ್ದಾನೆ. ನಾನು ಬೇರೆ ಅವನನ್ನು ಟೀ ಕುಡಿಯಲು ಕರೆದೆನಲ್ಲ!’ ಎಂದು ತನ್ನ ಅವಿವೇಕಿತನವನ್ನು ನೆನೆದು ತಲೆಚಚ್ಚಿಕೊಳ್ಳುತ್ತಾ ಒಳನಡೆದು ತನ್ನ ಕೆಲಸದಲ್ಲಿ ಮಗ್ನಳಾದಳು.

ದಿನಗಳುರುಳಿದವು. ಅಯ್ಯಪ್ಪ ಸ್ವಾಮಿ ಭಕ್ತರು ತಮ್ಮ ವೃತಗಳನ್ನೆಲ್ಲ ಮುಗಿಸಿ, ಕಟ್ಟು ತುಂಬಿಸಿಕೊಂಡು ಶಬರಿಮಲೆಗೆ ಹೋಗುವ ದಿನ ಬಂತು. ಮಲೆಗೆ ಹೊರಟಿದ್ದ ಸ್ವಾಮಿಗಳ ಕುಟುಂಬಸ್ಥರು ಮತ್ತು ಊರಿನವರೆಲ್ಲ ಮಂದಿರದ ಬಳಿ ನೆರೆದಿದ್ದರು. ಪೂಜೆಯ ನಂತರದಲ್ಲಿ ಯಾವುದೇ ತಾಪತ್ರಯಗಳು ಎದುರಾಗದೇ ಮಾಲೆ ಧರಿಸಿದ್ದ ಸ್ವಾಮಿಗಳೆಲ್ಲ, ಪಂದಳ ದೇಶಕ್ಕೆ ಹೋಗಿ ಜ್ಯೋತಿಯನ್ನು ನೋಡಿ ಬರಲಿ ಎಂದು ಸುಪ್ತ ಮನಸ್ಸಿನಿಂದ ಬೇಡಿಕೊಂಡು ಎಲ್ಲರೂ ಮಾಲೆದಾರಿಗಳನ್ನು ಬೀಳ್ಕೊಟ್ಟರು. ಹೋಗುವ ಮುನ್ನ ಮುಸ್ತಫನ ಬಳಿ ಬಂದ ಗಣಿ, ಆತ್ಮೀಯತೆಯಿಂದ ‘ನಾನು ಹೋಗಿಬರುತ್ತೇನೆ’ ಎಂದು ಹೇಳಿದ.

ಗೆಳೆಯನ ಮಾತು ಕೇಳಿ ಕಣ್ತುಂಬಿಕೊಂಡ ಮುಸ್ತಫ, ತನ್ನ ಚಡ್ಡಿ ಜೇಬಿಗೆ ಕೈ ಹಾಕಿ ಐದು ರೂಪಾಯಿಗಳ ನೋಟೊಂದನ್ನು ತೆಗೆದು ಗಣಿಯ ಕೈಗಿತ್ತು. ಇದು ರಂಜಾನ್‌ಗೆ ನನಗೆ ಜ್ಹಕಾತ್ ಸಿಕ್ಕಿದ ಹಣ, ಇದು ನಿನ್ನ ಖರ್ಚಿಗಿರಲಿ ಎಂದು ತಬ್ಬಿ ಬೀಳ್ಕೊಟ್ಟ. ಸ್ವಾಮಿಗಳನ್ನು ಹೊತ್ತ ಟಾಟಾಸುಮೋ ಕಪ್ಪನೆಯ ಹೊಗೆ ಉಗುಳಿಕೊಂಡು, ಏರುರಸ್ತೆಯಲ್ಲಿ ಮೆಲ್ಲನೇ ಸಾಗತೊಡಗಿತು. ವಾಹನ ಮರೆಯಾದರು “ಸ್ವಾಮಿ ಶರಣಂ ಅಯ್ಯಪ್ಪ ಶರಣಂ” ಎಂದು ಮಣಿಕಂಠನ ನಾಮಜಪ ಮಾತ್ರ ಗಾಳಿಯಲ್ಲಿ ಝೇಂಕರಿಸುತ್ತಲೆ ಇತ್ತು.

ಒಂದು ವಾರ ಕಳೆಯುವಷ್ಟರಲ್ಲಿ ಶಬರಿಮಲೆಗೆ ಹೋಗಿದ್ದ ಯಾತ್ರಾರ್ಥಿಗಳೆಲ್ಲರು ಅಯ್ಯಪ್ಪನ ದರ್ಶನ ಮುಗಿಸಿ ಮರಳಿ ಬಂದರು. ಬಂದ ನಂತರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅನುಭವಗಳನ್ನು ಊರಿನಲ್ಲಿ ಹಂಚಿಕೊಳ್ಳುತ್ತಿದ್ದರು, ಬರಿಗಾಲಲ್ಲಿ ಬೆಟ್ಟ ಹತ್ತಿದ್ದರಿಂದ ಹಿಡಿದು! ಸತ್ಯವಾಸಿಗಳಾದ ನಮಗೆ ಮಾತ್ರ ಮಕರ ಜ್ಯೋತಿಯ ದರ್ಶನವಾಗಿದ್ದು! ಉಳಿದವರಿಗೆ ಕಾಣಲು ಸಾಧ್ಯವಾಗದೆ ಇದ್ದದ್ದು! ಪದಿನೆಟ್ಟು ಪಡಿ ಹತ್ತಿದ್ದು! ಬಾಬರ್ ಮಸೀದಿಯ ಭೇಟಿ, ಹೀಗೆ ಊರಿಡಿ ಇದೇ ಚರ್ಚೆ! ಅಯ್ಯಪ್ಪನ ಸನ್ನಿಧಾನದಿಂದ ತಂದ ಪ್ರಸಾದದ್ದೆ ಘಮಲು! ಮಾಲಾಧಾರಿಯಾದ ನಂತರದಲ್ಲಿ ತನ್ನ ಮನೆಗೆ ಒಮ್ಮೆಯೂ ಬಂದಿಲ್ಲದ ಗಣಿ, ಮಲೆಯಿಂದ ಬಂದು ಮಾಲೆ ಬಿಚ್ಚಿದ ತರುವಾಯ ತನ್ನ ಮನೆಗೆ ಬರಬಹುದು ಎಂದು ಮುಸ್ತಫ ಕಾಯುತ್ತಲೆ ಇದ್ದ. ಅವನ ಊಹೆ ಹುಸಿಯಾಗಲಿಲ್ಲ. ಒಂದು ಸಂಜೆ ಮನೆಯಲ್ಲಿ ಐಸಮ್ಮ ಮತ್ತು ಮಕ್ಕಳು ಕುರ್‌ಹಾನ್ ಪಠಿಸುತ್ತ ಕುಳಿತಿದ್ದರು. ಮನೆಯ ಹೊರಗಡೆ ಯಾರೊ ಬಂದ ಧ್ವನಿ ಕೇಳಿದಂತಾಗಿ ಐಸಮ್ಮ ಎದ್ದು ಹೊರಬಂದು ನೋಡಿದರೆ, ಕಿಟ್ಟಣ್ಣ ಮತ್ತು ಅವರ ಮಗ ಗಣಿ ನಗುತ್ತಾ ಹೊರಗಡೆ ನಿಂತಿದ್ದರು. ಅವರನ್ನು ಕಂಡದ್ದೆ ನಗುತ್ತಾ ‘ಬನ್ನಿ ಕಿಟ್ಟಣ್ಣ ಯಾವಾಗ ಬಂದ್ರಿ ಮಲೆಯಿಂದ?’ ಎಂದು ಪ್ರೀತಿಯಿಂದ ಐಸಮ್ಮ ಒಳಕರೆದಳು.

ನಗುತ್ತಾ ಒಳಬಂದ ಕಿಟ್ಟಣ್ಣ, “ಬಂದಾಗಿನಿಂದ ಈ ಗಣಿಯದ್ದು ಒಂದೆ ಹಠ, ಮುಸ್ತಫನ ಮನೆಗೆ ಪ್ರಸಾದ ಕೊಡಬೇಕು” ಎಂದು ಅದಕ್ಕೆ ನಾನೇ ನೇರವಾಗಿ ಕರೆದುಕೊಂಡು ಬಂದೆ ಎಂದರು.

ಗಣಿಯ ಧ್ವನಿ ಕೇಳುತ್ತಿದ್ದಂತೆ ಮುಸ್ತಫ ಗ್ರಂಥವನ್ನು ಮುಚ್ಚಿ ಎದ್ದು ಕೋಣೆಯಿಂದ ಹೊರಬಂದು ನೋಡಿದರೆ, ಎದುರಿಗೆ ಒಂದು ಪೊಟ್ಟಣವನ್ನು ಹಿಡಿದುಕೊಂಡು ಗಣಿ ಕುಳಿತಿದ್ದ. ಮುಸ್ತಫ ಅವನ ಪಕ್ಕದಲ್ಲಿಯೇ ಹೋಗಿ ಕುಳಿತ. ಇಬ್ಬರೂ ಹಿರಿಯರ ಮುಂದೆ ಮುಖಮುಖ ನೋಡುತ್ತಿದ್ದರೆ ಹೊರತು ಸಂಕೋಚದಿಂದ ಹೆಚ್ಚೇನು ಮಾತನಾಡಲಿಲ್ಲ. ಅಷ್ಟರಲ್ಲಿ ಐಸಮ್ಮ ಎರಡು ಲೋಟ ಕಟ್ಟನ್ ತಂದು ಕಿಟ್ಟಣ್ಣ ಮತ್ತು ಗಣಿಯ ಕೈಗಿತ್ತಳು. ಚಹಾ ಹೀರಿ, ಪ್ರಸಾದ ಕೊಟ್ಟು ಹೊರಡುವ ಮುನ್ನ, ‘ಇದು ನಾನು ಬಾಬರ್ ಮಸೀದಿಗೆ ಹೋದಾಗ ನಿನಗಾಗಿ ಖರೀದಿಸಿದ್ದು’ ಎಂದು ತನ್ನ ಕೈಲಿದ್ದ ಪೊಟ್ಟಣವನ್ನು ಗಣಿ ಮುಸ್ತಫನ ಕೈಗೆ ಕೊಟ್ಟ. ಪೊಟ್ಟಣ ಕೈಗೆ ತೆಗೆದುಕೊಂಡವನೆ ಕುತೂಹಲ ತಾಳಲಾರದೇ ಚರಪರ ಎಂದು ಬಿಡಿಸಿ ಮುಸ್ತಫ ನೋಡತೊಡಗಿದ.

ಆ ಪೊಟ್ಟಣದ ಒಳಗೆ ಅಯ್ಯಪ್ಪನ ಊರಿನಿಂದ ಗೆಳೆಯನಿಗಾಗಿ “ಬಿಳಿಯ ಬಣ್ಣದ ಒಂದು ಮುಸಲ್ಮಾನರು ಧರಿಸುವ ಟೋಪಿ ಮತ್ತು ಜಮೀಲಳಿಗೆ ಒಂದು ತಲೆಬಟ್ಟೆಯನ್ನು” ಗಣಿ ತಂದಿದ್ದ. ಅದನ್ನು ಕೈಯಲ್ಲಿಡಿದುಕೊಂಡು ಸಂತೋಷದಿಂದ ಮುಸ್ತಫ ಗಣಿಯತ್ತ ತಿರುಗಿದ, ಗಣಿ ಮುಗುಳ್ನಗುತ್ತಾ ನಿಂತಿದ್ದ.

ಆ ದೃಶ್ಯವನ್ನು ಕಂಡ ಕಿಟ್ಟಣ್ಣ, ‘ಮಲೆಗೆ ಹೋಗುವ ಮುನ್ನ ನಾನು ಮತ್ತು ಕುಟುಂಬದವರು ಅವನ ಖರ್ಚಿಗಾಗಿ ಕೊಟ್ಟ ಹಣವನ್ನು ಕೂಡಿಟ್ಟು ಅವನು ಮುಸ್ತಫ ಮತ್ತು ಜಮೀಲಳಿಗೆ ಈ ರೀತಿಯ ಉಡುಗೊರೆ ತಂದಿದ್ದಾನೆ’ ಎಂದು ಖುಷಿಯಿಂದ ಹೇಳಿದರು.

ಕಿಟ್ಟಣ್ಣನ ಮಾತು ಕೇಳಿದ ಐಸಮ್ಮ, “ಯಾ ರಬ್ಬೆ ನಮ್ಮ ಮಕ್ಕಳು ಸಾಯುವವರೆಗು ಈ ರೀತಿ ಅನ್ಯೋನ್ಯತೆಯಿಂದ ಬಾಳಲಿ” ಎಂದು ಮೇಲೆ ನೋಡುತ್ತಾ ಕೈಯೆತ್ತಿ ಪ್ರಾರ್ಥನೆ ಮಾಡಿದಳು.

*

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

ಇದನ್ನೂ ಓದಿ : No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ

Published On - 3:32 pm, Sun, 17 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ