Poetry: ಅವಿತಕವಿತೆ; ‘ಗೆದ್ದೆನೆಂಬ ಭಾವದಲ್ಲಿ ಬೀಗುವಾಗಲೇ ಮತ್ತೆಲ್ಲೋ ಹೊಲಿಗೆ ಬಿಚ್ಚಿರುತ್ತದೆ’
Poem : ಐವತ್ತು ವರ್ಷ ದಾಟಿದ ಮೇಲೆ ಮತ್ತಿಲ್ಲಿ ನನ್ನದಲ್ಲ ಎಂದುಕೊಂಡ ಪ್ರಕಾರ ಕವನರಚನೆಯನ್ನು ಶುರುಮಾಡಿದೆ. ಮೊದಲಿಗೆ ಚಿತ್ರಗಳಿಗೆ ಕವಿತೆ, ನಂತರ ಅಡುಗೆಮನೆಯೇ ಕವಿತೆ ಹುಟ್ಟಲು ನೆಲೆಯಾಯಿತು. ಅನಿಸಿದ್ದನ್ನು ಬರೆಯುತ್ತ ಹೋದೆ ಯಾವ ಉದ್ದೇಶವಿಲ್ಲದೆ.
ಅವಿತಕವಿತೆ | AvitaKavite : ಸಮುದ್ಯತಾ ವೆಂಕಟರಾಮು (Samudyata Venkataramu) ಅವರ ಮೊದಲ ಕವನ ಸಂಕಲನವಿದು. ಆದರೆ ಇಲ್ಲಿನ ಕವಿತೆಗಳು ಉದಯೋನ್ಮುಖ ಕವಿಯೊಬ್ಬಳ ತೊದಲು ನುಡಿಗಳಲ್ಲ. ಕಾವ್ಯ-ಸಂಗೀತಗಳ ಸತತ ಅಭ್ಯಾಸ ಮತ್ತು ಪ್ರಯೋಗಗಳಿಂದ ಸಂಸ್ಕಾರ ಪಡೆದ ಹಾಗೂ ತುಂಬು ಸಂಸಾರ ನಡೆಸುತ್ತಿರುವ ಗೃಹಿಣಿಯೊಬ್ಬಳ ಗಾಢವಾದ ಜೀವನಾನುಭವಗಳಿಂದ ಮಾಗಿದ ಮನಸ್ಸಿನ ಉಕ್ತಿಗಳು. ಇವರಿಗೆ ಕಾವ್ಯವೆಂದರೇನು ಎಂಬುದು ಗೊತ್ತಿದೆ. ಹಾಗೆಯೇ ಯಾವುದು ಕಾವ್ಯವಾಗಲಾರದು ಎಂಬ ಎಚ್ಚರವೂ ಇದೆ. ‘ಅರ್ಥವಿಲ್ಲದ ಮಾತು ಭಾವವಿಲ್ಲದ ಧಾತು’ ಕೇವಲ ಶಬ್ದಾಡಂಬರದ ಮಂಡೂಕ ಕಲಕರವವನ್ನಷ್ಟೇ ಸೃಷ್ಟಿಸುತ್ತದೆ ಎಂಬ ಅರಿವುಳ್ಳ ಇವರಿಗೆ ‘ಎದೆಯ ಒಳಗಣ ಭಾವ/ಪದವಾಗಿ ಹೊರಬರೆ’ ಹಾಡು ಸಹಜವಾಗಿ ಹೊರಬರುವುದು ಎಂಬ ಅನುಭವವಿದೆ. ಕರುವನ್ನು ಕಂಡೊಡನೆ ತಾಯ್ತನ ಉಕ್ಕಿ ಮೊಲೆಹಾಲು ಚಿಮ್ಮುವಂತೆ ಕಾವ್ಯ ಸೃಷ್ಟಿಯಾಗಬೇಕು ಎನ್ನುವ ಮಾತುಗಳನ್ನು ಓರ್ವ ಸಹಜ ಕವಿಯಷ್ಟೇ ಉದ್ಗರಿಸಬಲ್ಲಳು. ಟಿ.ಪಿ. ಅಶೋಕ, ವಿಮರ್ಶಕ
ಹರಿದು ಕೆಳಕ್ಕುದುರಿದ ಹಾರದ ಮುತ್ತುಗಳೆಲ್ಲ ಮತ್ತಾಯ್ದು ಪೋಣಿಸಿಕೊಂಡು ಹಾರವಾಯಿತು ಖರೆ ದುರದೊಳಗೆ ಶಿರ ಹರಿದು ಬಿದ್ದ ದೇಹಗಳೆಲ್ಲ ಮತ್ತೆ ಸೇರಿಕೊಂಡಾವೆಯೇ ರುಂಡಕ್ಕೆ ಮುಂಡ ಸೇರಿಸಿಕೊಂಡು ಭಾನುಮತಿಗೆ ಬೇಕಿರಲಿಲ್ಲ ಸುಯೋಧನ ಕೇಳಲಿಲ್ಲ ಮಂಡೋದರಿ ಸಾರಿ ಸಾರಿ ಹೇಳಿದ್ದಳಲ್ಲ ರಾವಣ ಕೇಳಿದ್ದನೇ? ಮೊದಲು ಬಲಿಯಾಗುವುದು ತಾಯಿಯ ಮಕ್ಕಳು ಒಡಲಳಗೆ ಚಿಪ್ಪೊಡೆದ ಮುತ್ತುಗಳೆಲ್ಲ ಯುದ್ದಕ್ಕೆ ಹಾರ ದಾಹ ಸಾಮ್ರಾಜ್ಯದ ದಾಹ ತೀರದ ದಾಹ ಹೆಣ್ಣು ಹೊನ್ನು ಮಣ್ಣುಗಳ ದಾಹಕ್ಕೆ
ಪುರುಷ ಹಸ್ತದ ದಾಳಗಳ ಬೀಸಿಗೆ ಒರಗಿ ಬಿಡುತ್ತಾಳವಳು ಹೊಡೆತ ತಿಂದು ಮೇಲೇಳಲಾರದ ಪಗಡೆಕಾಯಿಯಂತೆ
ಆಯ್ದು ಕೊಡುವವರಿಲ್ಲದ ಮುತ್ತುಗಳು ಮತ್ತೆ ನೇಯಲಾಗದ ಹಾರ ಉದುರಿ ಹೋದ ಭಾನುಮತಿಯ ಮುತ್ತುಗಳು ಭಾನುಮತಿ ಎಂಬ ಕುರುವಂಶದರಸಿಯ ಕತ್ತಷ್ಟೇ ಅಲ್ಲ ಈಗ, ಒಡಲೂ ಬರಿದು…
ಸಣ್ಣಕಥೆ, ಲಲಿತ ಪ್ರಬಂಧಗಳನ್ನು ಬರೆಯುವ ಆಸಕ್ತಿ ಇದ್ದ ನನಗೆ ಫೇಸ್ಬುಕ್ ಒಂದು ವರವಾಯಿತು. ಯಾಕೆಂದರೆ ನಾನು ಬರೆದಿದ್ದೆಲ್ಲವನ್ನೂ ಇಲ್ಲಿ ಹಾಕಬಹುದಲ್ಲ. ಪತ್ರಿಕೆಗಳಿಗೆ ಕಳಿಸಿದಾಗ ಪ್ರಕಟವಾಗಿದ್ದಕ್ಕಿಂತಲೂ ತಿರಸ್ಕೃತಗೊಂಡಿದ್ದೇ ಹೆಚ್ಚಾದಾಗ ಅದೂ ಅಲ್ಲದೇ ಬರೆದದ್ದಕ್ಕಿಂತಲೂ ಅಂಚೆಗೆ ಹಾಕುವುದೇ ದೊಡ್ಡ ಸಾಹಸವಾದಾಗ ಇವೆಲ್ಲ ಬೇಕೇ? ಎನಿಸಿ ಸುಮ್ಮನುಳಿದೆ. ಆದರೂ ಹಾಡುವ ಹವ್ಯಾಸ ಇದ್ದ ಕಾರಣ ಕೆಲವು ಕವನಗಳನ್ನು ಬರೆದು ಹಾಡಿಕೊಳ್ಳುತ್ತಿದ್ದೆ. ಎಲ್ಲವೂ ನನ್ನಿಂದ ನನಗಾಗಿ ಎಂಬಷ್ಟಕ್ಕೆ ಸೀಮಿತವಾಗಿತ್ತು. ಕೊರೊನಾ ಮೊದಲ ಅಲೆಯಲ್ಲಿ ಫೇಸ್ಬುಕ್ನೊಳಗೆ ಪ್ರವೇಶಿಸಿದಾಗ ಎಲ್ಲವೂ ಬದಲಾಯಿತು. ಇಲ್ಲಿ ಬರೆಯುವುದನ್ನು ಕಲಿತೆ. ಐವತ್ತು ವರ್ಷ ದಾಟಿದ ಮೇಲೆ ಮತ್ತಿಲ್ಲಿ ನನ್ನದಲ್ಲ ಎಂದುಕೊಂಡ ಪ್ರಕಾರ ಕವನರಚನೆಯನ್ನು ಶುರುಮಾಡಿದೆ. ಮೊದಲಿಗೆ ಚಿತ್ರಗಳಿಗೆ ಕವಿತೆ. ನಂತರ ಅಡುಗೆಮನೆಯೇ ಕವಿತೆ ಹುಟ್ಟಲು ನೆಲೆಯಾಯಿತು. ಅನಿಸಿದ್ದನ್ನು ಬರೆಯುತ್ತ ಹೋದೆ ಯಾವ ಉದ್ದೇಶವಿಲ್ಲದೆ.
ತಡವಾಗಿ ಹುಟ್ಟಿದ ನನ್ನ ಕವಿತೆಗಳು ನಿಜಕ್ಕೂ ಪುಣ್ಯ ಮಾಡಿದ್ದವು. ಆತ್ಮೀಯರಾದ ನಮ್ಮ ಸಮೀಪದಲ್ಲೇ ಇರುವ ಲೇಖಕ ಕೆ. ವಿ. ಅಕ್ಷರ ಅವರಿಗೆ ನಾನು ಬರೆದ ಪದ್ಯಗಳು ಬಿಡುವಿನಲ್ಲಿ ನೋಡಿ ಸಾಧ್ಯವಾದರೆ ಪ್ರತಿಕ್ರಿಯಿಸಿರೆಂದು ಕೇಳಿಕೊಂಡಾಗ ಅವರು ನೋಡಿದ್ದಷ್ಟೇ ಅಲ್ಲದೆ ನಾನು ಊಹಿಸಿರದ ರೀತಿಯಲ್ಲಿ ಮುಂದುವರೆದು ಅಕ್ಷರ ಪ್ರಕಾಶನದಿಂದ ನನ್ನ ಮೊಟ್ಟ ಮೊದಲ ಕವನ ಸಂಕಲನ ಬರಲು ಕಾರಣರಾದರು.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಎಸ್. ದಿವಾಕರ ಅವರ ಕವಿತೆಯನ್ನೂ ಓದಿ : Poetry: ಅವಿತಕವಿತೆ; ಕಿತ್ತಳೆ ಇಂದಿನ ಕಿತ್ತಳೆಯಾಗಿರುವುದಿಲ್ಲ, ಮಾರುವವರೂ ಬೇರೆ ಅವರ ಕೂಗೂ ಮೊದಲಿನವರ ಕೂಗಲ್ಲ
ಅವಿತಕವಿತೆ ಅಂಕಣದ ಎಲ್ಲ ಕವನಗಳನ್ನೂ ಇಲ್ಲಿ ಓದಿ : https://tv9kannada.com/tag/avithakavithe