AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad: ಮಾನವ ಜಾತಿ ತಾನೊಂದೆ ವಲಂ; ‘ನಡೀ ಜೀತಕ್ಕ, ಮುಂಜಾನೆ ಸತ್ರ ಮಣ್ಣಿಗಿಲ್ಲ ಸಂಜಿಕೆ ಸತ್ರ ಎಣ್ಣಿಗಿಲ್ಲ’

A.S. Makandar : ಲೋ ಅಬ್ದುಲ್ಲಾ ನೀ ಮರೇ ಜೀತಕ್ಕ ಹೋಗಬೇಡ. ಪುಸ್ತಕ ನಾ ಕೊಡಸ್ತೀನಿ ಸಾಲಿ ಸೂಟಿ ಇದ್ದಾಗ ಐಸ್​ಕ್ರೀಮ್, ಬ್ರೆಡ್ ಮಾರಿ ನಿನ್ನ ಫೀ ತುಂಬು. ನಿಮ್ಮವ್ವನರ ಎಲ್ಲಿಂದ ತರಬೇಕು ರೊಕ್ಕಾ? ಕಡಿಮಿ ಬಿದ್ರ ಶೆಟ್ಟರ ಕಡೆ ನಾ ಸಾಲಾ ಕೇಳ್ತೀನಿ ಅಂದಳು ಬಸಮ್ಮ.

Dharwad: ಮಾನವ ಜಾತಿ ತಾನೊಂದೆ ವಲಂ; ‘ನಡೀ ಜೀತಕ್ಕ, ಮುಂಜಾನೆ ಸತ್ರ ಮಣ್ಣಿಗಿಲ್ಲ ಸಂಜಿಕೆ ಸತ್ರ ಎಣ್ಣಿಗಿಲ್ಲ’
ಎ. ಎಸ್. ಮಕಾನದಾರ
Follow us
ಶ್ರೀದೇವಿ ಕಳಸದ
|

Updated on:Apr 16, 2022 | 1:41 PM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಇಂದಿಗೆ ಒಂದು ವಾರದ ಹಿಂದೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ. ಎ. ಎಸ್. ಮಕಾನದಾರ, ನಿರಂತರ ಪ್ರಕಾಶನ ಗದಗ (A.S. Makanadar)

ಮುಲ್ಕಿ ಪರೀಕ್ಷೆ ವಾರ್ಷಿಕ ಫಲಿತಾಂಶ ಬಂತು ನಾನು ಶರಣಯ್ಯ ಸರಗಣಾಚಾರಿ ಮಠ, ರಾಘವೇಂದ್ರ, ಸಂಗಣ್ಣ, ರಾಘವೇಂದ್ರ ಭಟ್ ಮುಂತಾದ ಗೆಳೆಯರು ಪಾಸ್ ಆಗಿದ್ವಿ. ಅವ್ವ ಆಗ್ಲೇ ಮಾಸ್ಟರ್ ಪ್ಲಾನ್ ಹಾಕಿ ಎಂಟು ಎತ್ತಿನ ಕಮತ ಇರುವ ಕೊಡೇಕಲ್ಲ ಅವರ ಮನೆಯಲ್ಲಿ ನನ್ನನ್ನು ಜೀತಕ್ಕ್ ಇಡಬೇಕು ಅಂತ. ವರುಷಕ್ಕೆ ಎರಡು ಚೀಲ ಜೋಳ ಖರ್ಚಿಗೆ ಸ್ವಲ್ಪ ರೊಕ್ಕಾ ಕೊಡಂದ್ರ ಕೊಡೇಕಲ್ ಅವರು ಕೊಡತಾರ ಅಂತ ಗೊತ್ತಿತ್ತು ಅವರ ಹೊಲಕ್ಕೆ ಕಳೆವು ತೇಗಿಯಾಕ ಹೋಗಿಮುಂದ ವಿಷಯ ಪ್ರಸ್ತಾವನೆ ಮಾಡಿದ್ದಳು, ಸಾಲಿ ಸೂಟಿ ಬಿಟ್ಟಾಗ ನಿನ್ನ ಮಗನ್ನ ಕರಕೊಂಡ ಬಾರಬೇ ಮಾಬವ್ವ್, ಹಂಗ ಬಿಟ್ರ ಹುಡುಗರು ದಾರಿ ಬಿಡ್ತಾವ್. ಮೈಯಾಗ ಮುಗ್ಗಲಗೇಡಿತನ ಬೆಳಿತೈತೆ ಅಂತ ಸಾಹುಕಾರ್ ಹೇಳಿದ್ದ ಮಾತು ಅವ್ವನ ತಲೆಯೊಳಗ ಬೋರಾಣಿ ಕೊರದಂಗ ಕೊರಿತಿತ್ತು. ಅಮ್ಮ ನಾ ಪಾಸ್ ಆದೆ ದೊಡ್ಡ ಸಾಲಿಗೆ ಹೆಸರು ಹಚ್ಚಬೇಕು ಅಂತ ಹೇಳಿದ್ದ ತಡ, ಅಯ್ಯ ಭಾಡಕೋ ಮುಂಜಾನೆ ಸತ್ರ ಮಣ್ಣಿಗಿಲ್ಲ ಸಂಜಿಕೆ ಸತ್ರ ಎಣ್ಣಿಗಿಲ್ಲ ಅನ್ನೋ ಬದುಕು ನಮ್ಮದಾಗೈತೆ ನಿಮ್ಮಪ್ಪ ನೋಡಿದ್ರ ದುಡಿಯೋವ ಅಲ್ಲ ದುಕ್ಕ ಬಡಿಯುವ ಅಲ್ಲ ಕೊಡೇಕಲ್ ಸಂಗಪ್ಪ ಸಾಹುಕಾರ್ ಮನೆಗೆ ಜೀತಕ್ಕ ಹಚ್ಚತೀನಿ ನಡಿ ಸುಮ್ನೆ ಧಿಮಾಕ್ ಮಾಡಬೇಡ.

ಸಾಲಿ ಕಲ್ತು ಯಾರ್ ಬಕಬಾರ್ಲಿ ಬಿದ್ದಾರಾ ಅಂತ ಕೈ ಹಿಡ್ಕೊಂಡು ಸೀದಾ ಗಣಾಚಾರಿ ಬಸಮ್ಮನಮನೆಗೆ ಕರೆಕೊಂಡು ಹೋದ್ಲು. ಎಕ್ಕ ನೋಡಬೇ ಮಕ್ಕಳ ಕಾಲಾಗ ಸಾಕು ಸಾಕ್ ಆಗೈತೆ. ಜೀತಕ್ಕ್ ಹಾಕ್ತಿನಿ ಅಂದ್ರವಲ್ಲೆ ಅಂತ ಕುಂತಾನ. ನೀನರ ಸ್ವಲ್ಪ ಬುದ್ದಿ ಹೇಳಬೇ ಅಕ್ಕ ಅಂತ ಒಂದೇ ಸವನೆ ದಯನಾಸ ಬಿಟ್ಲು. ಗಣೇಚಾರಿ ಬಸಮ್ಮಗ ನಾವು ಅತ್ತಿ ಅಂತ ಈಗಲ್ಯೂ ಕರೀತೀವಿ. ನಮ್ಮ ಅಪ್ಪಗ ಅಣ್ಣ ಅಂತಾಳ ಆ ನಡೀಯಿಂದ ಬಸಮ್ಮನ ಅಳಿಯ, ಸೊಸೆಯಂದಿರು ಅಂತಲೇ ಸಂಬಂಧದ ನಡೆ ನಡೀತಾನ ಬಂದೇತಿ. ನಡಕೋತಾನ ಹೊಂಟೇತಿ. ಬಸಮ್ಮ ಅತ್ತಿ ನನ್ನ ಕಿವಿ ಹಿಂಡಿ ಬುದ್ದಿವಾದ ಹೇಳಿ ಜೀತಕ್ಕ ಕಳಸತಾಳ ಅಂತ ಅವ್ವನ ಲೆಕ್ಕಾಚಾರ ಆಗಿತ್ತು. ಬಾಯಿ ಮಾಡೋದು ಕೇಳಿ ಕೋಟಗಿ ಶರಣವ್ವ ಕೂಡ ಹಾಜರಿ ಹಾಕಿದಳು.

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ನನ್ನಮ್ಮ ಆರನೇ ಬೆರಳಿನಂತೆ ಕತ್ತರಿಸಿ ಎಸೆದರೆ, ಅತ್ತೆ ಬಿಗಿದೇ ಸಂಬಂಧ ಹಿಡಿದರು

ಮಗ ಶ್ಯಾನೆ ಅದಾನ ನಿನ್ನ ತಲಿ ಕೆಟ್ಟೇತೇ ಏನ್ ಬೆ ಮಾಬವ್ವ. ಬಡತನ ಎಷ್ಟು ದಿವಸದ್ದು ನಿನಗೆ ಓದಸಾಕ ಆಗಲಿಲ್ಲ ಅಂದ್ರ ನನ್ನ ಮಕ್ಕಳ್ ಜೊತೆಗೆ ನಾನು ನನ್ನ ಅಳಿಯಾಗ ಓದಸತ್ತೀನಿ ಬಿಡು. ಲೋ ಅಬ್ದುಲ್ಲಾ ನೀ ಮರೇ ಜೀತಕ್ಕ ಹೋಗಬೇಡ. ಸಾಲಿಗೆ ಹೋಗಿ ಶ್ಯಾಣೇ ಆಗು ಓದು ಶೀಪಣ್ಣ, ಶರಣಪ್ಪ ಜೊತೆಗೆ ನೀ ಸಾಲಿಗೆ ಹೋಗು ಪುಸ್ತಕ ನಾನು ಕೊಡಸ್ತೀನಿ ಸಾಲಿ ಸೂಟಿಇದ್ದಾಗ ಐಕ್ರೀಮ್ ಬ್ರೆಡ್ ಮಾರಿ ನಿನ್ನ ಫೀ ತುಂಬು ನಿಮ್ಮವ್ವನರ ಎಲ್ಲಿಂದ ತರಬೇಕು ರೊಕ್ಕಾ ಕಡಿಮೆ ಬಿದ್ರ ಶೆಟ್ಟರ ಕಡೆಗೆ ನಾನು ಸಾಲ ಕೇಳ್ತೀನಿ ಅಂದದ್ದೇ ತಡ ನನಗೆ ಮುಗಿಲು ಮೂರೇ ಗೇಣು. ಅವ್ವನ ಮುಖ ಪೆಚ್ಚಗ ಆತು. ಆಟ ನಡೀಲಿಲ್ಲ.

ನನಗೆ ಮನಿಯಾಗ ಹೊರಗ ಎಲ್ಲವು ಇಂತವು ಜೋಡ ಆಗ್ಯಾವು ಹೊರಗನವರು ಹೇಳ್ತಾರ್ ಆದ್ರ ಮನೆತನ ನಡೆಸೋದು ಅವರಿಗೇನು ಗೊತ್ತ ಆಗತೈತಿ. ಅಂತ ಗೊಣಗುತ್ತಲೇ ಇದ್ದಳು. ಫಕೀರ ಸಂಪ್ರದಾಯವಾದ ಮಕಾನದಾರ ಖಾನದಾನ್​ಗೆ ಜೋಳಿಗೆ ದೈವದತ್ತ ಬಳುವಳಿ. ಆದರ ಮನೆಮನೆಗೆ ಭಿಕ್ಷೆ ಬೇಡಲು ಹೋಗಬೇಕಂದರ  ಚಮಲಾ (ಭಿಕ್ಷೆ ಪಾತ್ರೆ ) ಬೇಕೇ ಬೇಕು. ಭಿಕ್ಷಾ ಪಾತ್ರೆ ನಮ್ಮ ಬಳಿ ಇಲ್ಲ. ಅಂದ್ರ ಭಿಕ್ಷೆ ಬೇಡಲೂ ಹೋಗುವಂತಿಲ್ಲ. ಭಿಕ್ಷೆ ಬೇಡಲು ಖೈರಾತ್ ಬೇಡಲು ಸೀಜರಾ ಮತ್ತೂ ಚಮಲಾ ಬೇಕು. ಇದು ಜಮಾತಿನ ಅಲಿಖಿತ ನಿಯಮ. ಕವಿರಾಜಮಾರ್ಗಕಾರನ ಕಾವ್ಯದ ತಿರುಳಿನಂತೆ ಗಜೇಂದ್ರಗಡದ ನಮ್ಮ ಟೆಕ್ಕೆದ ಓಣಿ ಐತಿ.

ಕಸವರ ಮೆಂಬುದು ನೆರೆ ಸೈರಿಸಲಾರ್ಪೋಡೆ ಪರವಿಚಾರ ಮುಮುಂ ಪರ ಧರ್ಮಮುಮುಂ

ಈ ಮಾತು ಇಂದಿಗೂ ನಿತ್ಯಸತ್ಯ ನಮ್ಮ ಓಣಿಯೊಳಗ.  ನನ್ನ ಮನಿ ಎದೂರ್ಗೆ ಪಟ್ಟೇಗಾರ ಕುಟುಂಬ. ಬಲಕ್ಕ ಅಗಸರ ಎರಡು ಮನಿ ಬಿಟ್ಟರ ಬ್ರಾಹ್ಮಣರ ಅಗ್ರಹಾರ. ಶೆಟ್ಟರ ಮನಿ, ಜಂಗಮರ ಮನಿ, ಮರಾಠರ ನಾಪಿತರ ಮನಿಗಳು, ಮನಿ ಹಿಂದನ ನೇಕಾರರ ಕಮ್ಮಾರರ ಮನಿಗಳು… ಹಿಂಗ ಸಾಲುಸಾಲು ಮನಿಗಳೊಳಗ ಸ್ನೇಹ, ಸೌಹಾರ್ದತೆ, ಮಾನವೀಯತೆ ಯಾವಾಗಲೂ ತುಳುಕತಾನ ಐತಿ.

30-40ವರುಷದ ಹಿಂದೆ ತುತ್ತು ಕೂಳಿಗಾಗಿ ಪರದಾಡುವ ಸಂದರ್ಭದಲ್ಲಿ ಬ್ರಾಹ್ಮಣ ರು ಮಾಡಿದ ಅಡುಗೆ ಉಳದೇತಿ ಅಂದ್ರ ಮಾಬವ್ವನ ಮಕ್ಕಳಿಗೆ ಕರೆದುಕೊಡ್ರಿ, ಅನ್ನ ಕೆಡಸಬೇಡ್ರಿ ಅಂತ ಹೇಳತ್ತಿದ್ದರು. ಉಳಿದ ಅಡುಗೆ ದೂರದಿಂದ ಕೈ ಎತ್ತಿ ನಮ್ಮ ತಾಟು ಡಬರಿಗೆ ಹಾಕತ್ತಿದ್ದರು. ಶೀಲಮಾಡಲು ಕೈ ಎತ್ತಿ ಸಾರು ಡಬರಿಗೆ ಸುರುವುತ್ತಿದ್ದರೆ ಬಟ್ಟಿಗೆ ಚಿತ್ತಾರವಾಗಿ ಮೂಡಿದ ಕಲೆ ಸ್ವಾದಿಷ್ಠ ವಾಸನೆ ಮುಂದ ಮಾಯಾ ಆಗತಿತ್ತು. ಕಸ ಮುಸುರೆ ತಿಕ್ಕಿ ಉಳಿದ ಅಡುಗೆ ತಂದ ಹೊಸಮನಿ ಪಾರವ್ವ ನಮಗ ಕೊಡದ ಎಂದೂ ತುತ್ತು ಎರಡು ಮಾಡಿಲ್ಲ. ಮಡಿವಾಳ ಕುಟುಂಬವೂ ಅಷ್ಟ. ನಾಲ್ಕು ತುತ್ತಿನಲ್ಲಿ ನಮಗೂ ಎರಡು ತುತ್ತು ಮೀಸಲು ಇರುತ್ತಿತ್ತು. ಅಗಸರ ಮಲ್ಲಪ್ಪ ಕಾಕಾನಿಗೆ ಅಂತ ಕರೀತಿದ್ದಿವಿ. ವರಷಗಟ್ಟಲೆ ನಮ್ಮ ಅರಿವಿ ಪುಕ್ಕಟಲೇ ತೊಳದು ಇಸ್ತ್ರಿ ಮಾಡಿ ಕೊಡಿತಿದ್ದ. ಬಸಪ್ಪ ಕಾಕಾ ಬಟ್ಟಿಗೆ ಹಾಕಿದ ಗಂಜಿ ಹೆಂಗ ಮರ್ಯಾಕ ಸಾಧ್ಯ?

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಹೇ ರಾಮ್! ಪ್ರೀತಿ ಬೆರೆತ ಅನ್ನಧರ್ಮದ ಅಮಲೇರಿಸು

ಹಡಪದ್ ಈರಪ್ಪ ಕಾಕಾ ನಮಗ ಕಟಿಂಗ್ ಮಾಡಿದರ ಒಮ್ಯನೂ ರೊಕ್ಕಾ ಕೇಳಿದ್ದು ನೆನಪಿಲ್ಲ. ಅವಾಗ ರೊಕ್ಕಾ ಕೇಳಿದ್ರ ನಮ್ಮ ಕಡೆ ಕೊಡಾಕನೂ ಇರಲಿಲ್ಲ. ಈಗ ಕೊಟ್ಟು ಋಣ ತೀರಿಸಕೊಳ್ಳಬೇಕು ಅಂದ್ರ ಕಾಕಾ ಇಲ್ಲ. ನೇಕಾರರ ಸಹಕಾರ ಸಂಘದಿಂದ ಬಡಮಕ್ಕಳಿಗೆ ಸಹಾಯ ಮಾಡತ್ತಿದ್ದರು; ಒನ್ನೆತ್ತಕ್ಕ ಎರಡು ರೂಪಾಯಿ ಎರಡನೇತ್ತಕ್ಕ ನಾಲ್ಕು ರೂಪಾಯಿ, ಹತ್ತನೇತ್ತಕ್ಕ ಇಪ್ಪತ್ತು ರೂಪಾಯಿ. ಹಳೇ ಪುಸ್ತಕ ಕೊಟ್ಟು ಹಿಂದಿನ ವರುಷ ಓದಿದ ಹಳೇ ಪುಸ್ತಕ ತಗೊಂಡು ಬರಬೇಕು. ನೋಟಬುಕ್ಸ್, ಪೆನ್, ಪೆನ್ಸಿಲ್ ಕಂಪಾಸಕ್ಕ ಹತ್ತಿಪ್ಪತ್ತು ಸಹಾಯ ಧನ ಕೊಡತಿದ್ರು.

ಗೊಟಗೋಡಿ ಟಿ.ಬಿ. ಸೋಲಬಕ್ಕನವರು ಏಳುಕೊಳ್ಳದ ಎಲ್ಲಮ್ಮ ದೊಡ್ದಾಟಕ್ಕ ಒಂದು ಹೊಸ ಸ್ಪರ್ಶ ನೀಡಿ ನಾಡಿನ ತುಂಬಾ ಪ್ರದರ್ಶನ ಏರ್ಪಡಿಸಿದ್ರು 90ರ ದಶಕದೊಳಗ. ನಾನು ನಿರಂತರ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಯಾಗಿದ್ದ ಸಂದರ್ಭ. ನಮ್ಮ ಮನಿ ಮುಂದಿನ ಬಯಲ ಜಾಗೆ ಮುಳ್ಳುಕಂಠಿ ಸ್ವಚ್ಛಗೊಳಿಸಿ ಪ್ರದರ್ಶನ ಮಾಡಿದ್ವಿ. ಆಗ ಹೆಣ್ಣಮಕ್ಕಳು ಬಹಿರ್ದೇಸೀಗೆ ಕೂತ್ಕೋತಿದ್ದ ಜಾಗಾ ಈಗ ರಂಗಮಂದಿರ ಆಗೇತಿ.

ಸೀಗಿ ಹುಣ್ಣಿಮಿ ಗೌರ ಹುಣ್ಣಿಯೊಳಗ ಓಣಿ ಹೆಣ್ಣುಮಕ್ಕಳು ಸಕ್ಕರಿ ಆರತಿ ಬೆಳಗಲು ಸಣ್ಣ ಗೂಡಿನ ಗುಡಿ 1980ರಲ್ಲಿ ನನ್ನ ಹಿರಿಯ ಅಣ್ಣ ಮಸೂಮ್ ಅಲಿ ಕಟ್ಟಿದ್ದು. ಕಟ್ಟಿ ಬಸವೇಶ್ವರ ದೇವಸ್ಥಾನಕ್ಕ ನನ್ನ ಹಿರಿಯ ಅಣ್ಣ, ಸೂಫಿ ಸಂತ ಮೆಹಬೂಬ್ ಅಲಿಷಾ ಪೀರಾ ಜಾಗೆ ದಾನ ಕೊಟ್ಟಿದ್ದು ಮಾತ್ರ ಅಲ್ಲ ಅಡಿಗಲ್ಲು ಸಮಾರಂಭನೂ ಅವರೇ ನೆರವೇರಿಸಿ ಕೊಟ್ರು. ಈಗಲೂ ವಿಜಯದಶಮಿಗೆ ಟೆಕ್ಕೆದ ದರ್ಗಾದ ಪೀಠಾಧಿಪತಿಗಳ ಮೊದಲು ಬನ್ನಿ ಮುಡಿಯೂ ಕಾರ್ಯಕ್ರಮಕ್ಕ ಚಾಲನೆ ನೀಡ್ತಾರು.

ಹಿಂಗೆಲ್ಲಾ ಬಾಳಿ ಬದಕಾಕಹತ್ತೇವಿ. ಆದರೀಗ ರಾಜ್ಯದೊಳಗ ನಡಿಯೋ ಘಟನಾಗಳು ಬ್ಯಾಸರಾ ತರಾತಾವು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಸರಣಿಯ ಎಲ್ಲಾ ಬರಹ/ಕವಿತೆಗಳನ್ನು ಇಲ್ಲಿ ಓದಿ : https://tv9kannada.com/tag/nuggikere-dharwad

Published On - 1:33 pm, Sat, 16 April 22

ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು