Akkamahadevi Jayanthi: ‘ಭಾರೀ ಚುರ್ಕ್ ಆಗ್ತತಿ ಸೆಟ್ರ ನಿಂ ಕೂಸು’

Dr. H.S. Anupama : ಮಹಾದೇವಿಯ ಕುತೂಹಲ ಎಲ್ಲದರಲ್ಲೂ ಪ್ರಶ್ನೆಯನ್ನೇ ಹುಟ್ಟಿಸುವುದು. ಕುತೂಹಲ ಎನ್ನುವುದು ಪುಟ್ಟಿಯ ಹುಟ್ಟುಗುಣವೆಂಬಂತೆ ಆಯಿತು. ಅದಕ್ಕೆ ನಿರ್ಭಯವೂ ಸೇರಿ ಸಹಜ ಗುಣದ ಹುಡುಗಿಯಾಗಿ ಅರಳತೊಡಗಿದಳು. ಬೆಳೆಯುತ್ತ ಹೋದಂತೆ ಪ್ರಶ್ನೆ ಕೇಳುವ ಹುಡುಗಿಯಾದಳು.

Akkamahadevi Jayanthi: ‘ಭಾರೀ ಚುರ್ಕ್ ಆಗ್ತತಿ ಸೆಟ್ರ ನಿಂ ಕೂಸು’
ಡಾ. ಎಚ್. ಎಸ್. ಅನುಪಮಾ
Follow us
ಶ್ರೀದೇವಿ ಕಳಸದ
|

Updated on: Apr 16, 2022 | 10:41 AM

ಅಕ್ಕಮಹಾದೇವಿ ಜಯಂತಿ | Akkamahadevi Jayanthi : ಅಬ್ಬಬ್ಬ, ಸೆಟ್ಟರ ಮನೆಯ ಪುಟ್ಟಿ ನೂರೆಂಟು ಮೀಸಲುಗಳ ಜೊತೆಗೆ ಯಾವ ರಾಜಕುಮಾರಿಗೂ ಕಡಿಮೆಯಿಲ್ಲದಂತೆ ಬೆಳೆಯುತ್ತಿದ್ದಳು. ಅವಳು ಆಡಿದ ತೊದಲು ಮಾತುಗಳು ಹಾಡಿಗೆ ಸಮ. ಅವಳ ಅಡ್ಡತಿಡ್ಡ ಹೆಜ್ಜೆಗಳ ನಡಿಗೆ ಅಂಬಾರಿ ಉತ್ಸವಕ್ಕೆ ಸಮ. ಬೆಳೆಯುತ್ತ ಹೋದ ಪುಟ್ಟಿ ಸೆಟ್ಟರ ತೊಡೆ ಏರಿ ಕೂರುವಂತಾದಳು. ಕೂಸು ನೋಡುವುದು, ನೋಡುವುದು, ನೋಡುವುದು, ಎಲ್ಲವನ್ನೂ ತದೇಕ ನೋಡುವುದು. ಬರೆಯುವ ಅಪ್ಪನ ಕೈಯನ್ನೇ ನೋಡುವುದು. ಕಾಳು ಸುಲಿಯುವವರ ಬೆರಳುಗಳನ್ನೇ ತದೇಕವಾಗಿ ನೋಡುವುದು. ಅದರ ಕೈಗೆ ನಾಕು ಅವಡೆಯ ಕೋಡು ಕೊಟ್ಟರೆ ಮುಗಿಯಿತು, ಸುಲಿಯಲು ಬರುವುದಿಲ್ಲ, ಅದು ನೋಡುವುದು ಬಿಡುವುದಿಲ್ಲ. ಕಾಳು, ಬೀಜಗಳ ಮೇಲೆ ಕೂಸಿಗೆ ಬಲು ಪ್ರೀತಿ. ಮೂಗಿನೊಳಗೆ ಕಡಲೆಯ ಕಾಳು ತುಂಬಿಕೊಂಡು ಅದನ್ನು ತೆಗೆಸಲು ಸೆಟ್ಟರು ಪಾಡು ಪಟ್ಟಿದ್ದು ಇದೆ. ಕಿವಿಯೊಳಗೆ ಅವರೆ ಕಾಳು ಗಿಡಿದುಕೊಂಡದ್ದು ಇದೆ. ಮಗುವಿನ ಚುರುಕುತನ ಕಂಡವರು ‘ಬಾರೀ ಚುರ್ಕ್ ಆಗ್ತತಿ ಸೆಟ್ರ ನಿಂ ಕೂಸು’ ಎಂದು ಹುರಿದುಂಬಿಸುವರು.

ಕವಿ, ಲೇಖಕಿ ಡಾ. ಎಚ್. ಎಸ್. ಅನುಪಮಾ ಮಹಾದೇವಿಯಕ್ಕನ ಜೀವನಾಧಾರಿತವಾಗಿ ಬರೆಯುತ್ತಿರುವ ಕಾದಂಬರಿ ‘ಬೆಳಗಿನೊಳಗು’. ಅವಳ ಬಾಲ್ಯಜೀವನ ಚಿತ್ರಿಸುವ ‘ಕಲ್ಲರಳಿ’ ಭಾಗದಿಂದ ಒಂದು ಅಧ್ಯಾಯ ಮಹಾದೇವಿಯಕ್ಕನ ಹುಟ್ಟಿದ ದಿನಕ್ಕೆ.

(ಭಾಗ 2)

ಅಂದು ಸೋಮ ಎತ್ತಿಕೊಂಡು ಸಂಭ್ರಮಿಸಿದ ಮಗು ದಿನದಿಂದ ದಿನಕ್ಕೆ ಬೆಳೆಯಿತು. ಕುಳಿತಲ್ಲಿಂದಲೇ ಕೇಕೆಹಾಕಿ ಅವನನ್ನು ಕರೆಯುವಂತಾಯಿತು, ಅಂಬೆಗಾಲಿಟ್ಟು ಸರಸರ ಅವನೆಡೆಗೆ ಹರಿದು ಬರುವಂತಾಯಿತು. ಓಲಾಡುತ್ತ ಕೈ ಊರಿ ಮೇಲೆದ್ದು ನಿಲ್ಲುವಂತಾಯಿತು. ನಿಂತಲ್ಲೆ ಉಚ್ಚೆ ಹೊಯ್ದು, ಕೈಕಾಲಲ್ಲಿ ಬಡಿದು, ಪಚಪಚ ಹಾರಿಸಿ ಹಿಗ್ಗುವಂತಾಯಿತು. ಅಡರಾ ತಿಡರಾ ಹೆಜ್ಜೆಯಿಟ್ಟು ನಡೆದು ಬರುವ ಸೊಂಟದ ಕೂಸಾಯಿತು. ಅವಳಮ್ಮ ಕಷ್ಟಪಟ್ಟು ಕಟ್ಟಿದ ಕುಚ್ಚಿನ ಟೋಪಿಯನ್ನು ಕಿತ್ತೆಳೆದು ಎಲ್ಲ ಬಟ್ಟೆ ಬಿಚ್ಚಿ ಕುಣಿಯುವಂತಾಯಿತು. ಎದುರು ಎರಡು ಹಲ್ಲು ಮೂಡಿ, ನಾಲಕ್ಕಾಗಿ, ಆರಾಗಿ, ಎಂಟಾಗಿ ಪುಟ್ಟಪುಟ್ಟ ಹಲ್ಲು ತೋರಿಸಿ ನಗುವಂತಾಯಿತು. ಅಮ್ಮನ ಮೊಲೆ ತೊಟ್ಟು ಮಗು ಕಚ್ಚಿದ ಗಾಯದಿಂದ ಕೆಂಪಾಗಿ ಎದೆಹಾಲು ಕಟ್ಟುವಷ್ಟಾಯಿತು. ಬೆಕ್ಕನ್ನು, ನಾಯಿಯನ್ನು ಮಾತಾಡಿಸುತ್ತ, ಹಿಂಬಾಲಿಸುತ್ತ ಅದರ ಕಣ್ಣಿಗೇ ಕೈ ಹಾಕುವ, ನಡೆವ ಕೂಸಾಯಿತು. ಮನೆಯಿಂದ ಹೊರಗೊಯ್ಯಿರಿ ಎಂದು ಬಯಲ ತೋರಿಸುವ ಅವಳ ಕಣ್ತಪ್ಪಿಸಿ ಮಾರಯ್ಯ, ಸೋಮರು ಹೊರಬೀಳುವಷ್ಟಾಯಿತು.

ಮಾರಯ್ಯನ ಇಬ್ಬರು ಹೆಂಡಿರು ಹೆರುವಾಗ ತೀರಿಕೊಂಡಿದ್ದರು. ಅದಾದ ಮೇಲೆ ಮದುವೆಯ, ಸಂಸಾರದ ಆಸೆಯನ್ನೇ ಬಿಟ್ಟು ಕೇತಪ್ಪಯ್ಯನವರ ಕಾಲದಿಂದ ಸೆಟ್ಟರ ಮನೆಯಲ್ಲಿ ಕೊಟ್ಟಿಗೆ ಕೆಲಸ ಮಾಡುತ್ತ ನಿಂತಿದ್ದ. ಸೆಟ್ಟರ ಮನೆಯಲ್ಲೇ ಮೂರು ಹೊತ್ತೂ ಗೇಯ್ದು, ಉಂಡು, ಅಲ್ಲೇ ಉಗ್ರಾಣದ ಹೊರಗೆ ಮಾಡಿಳಿಸಿದ ಜಗಲಿ ಮೂಲೆಯಲ್ಲಿ ಮಲಗುತ್ತಿದ್ದ. ಅವನ ಹಬ್ಬ ಹರಿದಿನ, ಜಡ್ಡುಜಾಪತ್ರೆಗಳೆಲ್ಲ ಸೆಟ್ಟರ ಮನೆಯಲ್ಲೇ ಕಳೆಯುವುದು. ಅಂತಹ ಮಾರಜ್ಜನಿಗೆ ಅದು ಹೇಗೋ ಸೋಮ ಕೂಸ ಅಂಟಿಕೊಂಡ. ಮೈಲಿಬೇನೆಗೆ ಮನೆಯವರನ್ನೆಲ್ಲ ಕಳೆದುಕೊಂಡ ಮಾರಯ್ಯನ ಕೇರಿಯ ಪರಪುಟ್ಟ ಸೋಮ ಮಾರಜ್ಜನ ಜೊತೆ ಸೆಟ್ಟರ ಮನೆಗೇ ಬಂದುಬಿಟ್ಟಿದ್ದ. ದನಕಾಯಲು ಅಜ್ಜನಿಗೊಂದು ಜೋಡಿಯಾಗಿ ಬೆಳೆದ. ಬೆಳಿಗ್ಗೆ ಎದ್ದವನೇ ‘ತಂಗೀ, ಚೀ ಕಳ್ಳ’ ಎಂದು ಮಾತನಾಡಿಸುತ್ತ ಅವಳ ಆಪ್ತ ಜೀವವಾದ.

ಡಾ. ಎಚ್. ಎಸ್. ಅನುಪಮಾ ಕವಿತೆಗಳು : Poetry : ಅವಿತಕವಿತೆ ; ಈ ಕೊಡದಿಂದ ಆ ಕೊಡಕ್ಕ ಜಿಗಿ ಅಂತೀ ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ?

ದನ ಹೊಡೆದುಕೊಂಡು ತಿರುಗಿ ಬರುವಾಗ ಸೋಮ ನವಿಲುಗರಿ, ಬಣ್ಣಬಣ್ಣದ ಹಕ್ಕಿಪುಕ್ಕ ತಂದು ಪುಟ್ಟಿಗೆ ಕೊಡುವನು. ಗಿಲಗಿಲವೆನ್ನುವ ಹೂ ಗಿಡದ ಬೀಜ, ಎಲೆಯಲ್ಲಿ ಮಾಡಿದ ಪೀಪಿ, ಸಣ್ಣಪುಟ್ಟ ಆಟದ ಸಾಮಾನುಗಳನ್ನು ತಯಾರಿಸಿ ಕೊಡುವನು. ಸೋಮ ಹೊರಟರೆ ಸಾಕು, ತಾನೂ ಅವನೊಡನೆ ಹೋಗುವೆನೆಂದು ಬೆನ್ನು ಹತ್ತುವಳು. ಹಟ್ಟಿಯ ದನಕರುಗಳ ಕಣ್ಣಿ ಬಿಚ್ಚಿ ಬೆನ್ನ ಮೇಲೊಂದು ಚಪ್ಪರಿಸಿ, ‘ಹಂಡಪ್ಪಿ, ಬೋಂಟ, ಶುಕ್ರಿ, ಅಂಬಾ, ಮಂಗಳಿ, ಭವಾನಿ, ಸುಂದರು, ಬೆಳ್ಳಿ, ಪದಮಿ, ಹಂಪಣ್ಣ, ಕೆಂಪಿ, ಕರಿಯ, ರ‍್ರಾ..’ ಎಂದು ಒಂದೊಂದಾಗಿ ಗಂಟಿಯ ಹೆಸರು ಕರೆಯುತ್ತಿದ್ದಂತೆ ಅವು ತಲೆ ತಗ್ಗಿಸಿ ಸರಸರ ಕಾಲು ಹಾಕಿ ದಣಪೆ ದಾಟುವವು. ಸೋಮನ ‘ಹಂಡಪ್ಪಿ, ಬೋಂಟ..’ ದನಿ ಕೇಳಿದ್ದೇ ಎಲ್ಲಿದ್ದರೂ ಕೂಸು ಓಡುತ್ತ ಬರುವುದು. ಅವಳನ್ನೊಮ್ಮೆ ಎತ್ತಿ ಗೇರು ಮರದ ಕೊಂಬೆ ಮೇಲೆ ಕೂರಿಸಿ, ಜೋ ಎಂದು ಎರಡು ಬಾರಿ ಮೇಲೆ ಕೆಳಗೆ ಉಯ್ಯಾಲೆಯಾಡಿಸಿ, ಒಳಗೆ ಕಳಿಸಿ ಅವನು ದನಗಳ ಹಿಂದೆ ಓಡಬೇಕು. ಸಂಜೆ ಅವ ಬಂದಮೇಲೂ ಅಷ್ಟೇ, ಕೊಟ್ಟಿಗೆಯ ಕೆಲಸ ಮುಗಿಸಿ ಕೆರೆಯಲ್ಲಿ ಮಿಂದು ಬಂದಮೇಲೆ ಅವನ ಪಿಳ್ಳಂಗೋವಿಯೊಡನೆ, ಚಾಟರಿ ಬಿಲ್ಲಿನೊಡನೆ, ಎಲೆಪೀಪಿಯೊಡನೆ ಅವಳ ಆಟ. ಅವನ ಹಾಡು ಕೇಳುತ್ತ ಕಣ್ಣರಳಿಸಿ ಕೂರುವ ಹಾಡುಹುಚ್ಚು ಮಗುವಿಗೆ. ಎಲ್ಲ ಮಕ್ಕಳೂ ಹಾಡು ಕೇಳಿ ನಿದ್ರೆ ಮಾಡಿದರೆ ಈ ಮಗು ಹಾಡು ಕೇಳಿದರೆ ಕಣ್ಣರಳಿಸಿ ಕುಣಿದಾಡುವುದು.

ದಿನಗಳೆದಂತೆ ಕೂಸು ಅವ್ವಯ್ಯ, ಅಪ್ಪಯ್ಯನ ಬಾಯಲ್ಲಿ ಕೂಸೇ, ತಂಗೀ, ಪುಟ್ಟಮ್ಮ, ದೇವ್ರು, ಮಾದಿ, ಮಾದು ಮುಂತಾಗಿ ಹಲವು ಮುದ್ದಿನ ಹೆಸರುಗಳನ್ನು ಪಡೆಯಿತು. ಅವಳು ಕೇಳಿದ್ದೆಲ್ಲ ಚೆಂದ, ಹೇಳಿದ್ದೆಲ್ಲ ಮಾಟ. ಕೂಸೊಂದು ಒಳಹೊರಗೆ ತಿರುಗಿದರೆ ಬೀಸಣಿಕೆ ಬೇಡ ಎನ್ನುವಂತೆ ಅವಳು ಹಿಂದೆಮುಂದೆ ಓಡಾಡಿ ಮನೆ ತಂಪಾಯಿತು. ಅವಳು ಕಾಲಿಟ್ಟರೆ ಘಲುಘಲಿರೆನ್ನುವ ಸದ್ದು ಹೊರಟು ಎಲ್ಲರ ಎದೆಗಳಲ್ಲೂ ಸಂತೋಷ ಪುಟಿಯಬೇಕು, ಹಾಗೆ ಅಕ್ಕಸಾಲಿಯ ಬಳಿ ಹೇಳಿ ಹೆಚ್ಚು ಗೆಜ್ಜೆ ಕೂರಿಸಿದ ಕಾಲುಬಳೆಯನ್ನು ಸೆಟ್ಟರು ಮಾಡಿಸಿದ್ದರು. ಉಣ್ಣುವಾಗ ತಮ್ಮ ಜೊತೆಯೇ ಕೂಸನ್ನು ಕೂರಿಸಿಕೊಳ್ಳುವರು. ತಾವು ಬಾಯಿಗೆ ಹಾಕುವುದನ್ನೆಲ್ಲ ಅದರ ಬಾಯಿಗೂ ಇಡುವರು. ತಾವು ಕಂಡದ್ದನ್ನೆಲ್ಲ ಬಾಲಭಾಷೆಯಲ್ಲಿ ವರ್ಣಿಸುವರು. ಬೆಳಿಗ್ಗೆ ತಾವು ವ್ಯಾಯಾಮ ಮಾಡುವಾಗ ಕೂಸನ್ನೂ ಎಬ್ಬಿಸಿ ಜೊತೆಯಿಟ್ಟುಕೊಳ್ಳುವರು. ತಾವು ಮಾಡಲು ಕಷ್ಟ ಪಡುವ ಆಸನಗಳನ್ನು ಮಗು ಅನಾಯಾಸವಾಗಿ ಮಾಡುವುದು ನೋಡುವಾಗ ಅವರಿಗೆ ಕೂಸಿನ ಮೇಲೆ ಮೋಹವುಕ್ಕುವುದು.

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಇದ್ನ ನಿಮುಗ್ ಕೊಡ್ದೆ ಹ್ಯಾಂಗ್ ತಿಂಬುದು ಅಮಾ?‘

ಮಗಳಿಗೆ ಅಪ್ಪಯ್ಯ ಲೋಕರೂಢಿ, ಲೋಕಜ್ಞಾನಗಳನ್ನು ತಿಳಿಸುತ್ತ ಬಾಯಿಪಾಠ, ಲೆಕ್ಕ ಹೇಳಿಕೊಡುವರು. ಹುಣ್ಣಿಮೆ ಅಮಾವಾಸ್ಯೆಗಳ ಲೆಕ್ಕ, ಮಳೆ ನಕ್ಷತ್ರ, ವಾರತಿಥಿ ತಿಂಗಳುಗಳನ್ನು ಬಾಯಿಪಾಠ ಮಾಡಿಸುವರು. ಅಗಿಯ ಹುಣ್ಣಿಮೆ ಹೋಗಿ ಮೂರು ದಿವಸಕ್ಕೆ ಮೃಗಶಿರಾ ಮಳೆಗಾಲ ಶುರುವಾಗುವುದು, ಆಗ ಜಗವೆಲ್ಲ ಹಸಿರು ಹೊದ್ದುಕೊಳ್ಳಲು ಅಣಿಯಾಗುವುದು; ರೋಹಿಣಿ ಮಳೆ ಹೊಯ್ದರೆ ಓಣಿಯೆಲ್ಲಾ ಕೆಸರು; ಹೊತ್ತಾರೆ ನೆರೆದು, ಹೊತ್ತೇರಿ ಹರಿದು, ಮುಗಿಲು ಕತ್ತೆಯ ಬಣ್ಣವಾದರೆ ಮಳೆ ಎಲ್ಲಿಂದ ಬಕ್ಕು ಎಂದು ಮುಗಿಲ ತೋರಿಸಿ ಹೇಳುವರು.

ಅವ್ವಯ್ಯ ತನಗೆ ತಿಳಿದ ಹಾಡು, ಭಜನೆ, ಹಬ್ಬ ಹರಿದಿನ, ಲೆಕ್ಕವನ್ನೆಲ್ಲ ಮಗಳಿಗೆ ಹೇಳಿಕೊಡುವಳು. ಹಣ್ಣು, ಹೂವು, ಹಸಿರು ಗಿಡಬಳ್ಳಿಗಳ ತೋರಿಸುವಳು, ನೆಡಿಸುವಳು. ಸಂಬಂಧ ಯಾವುದು, ಹೇಗೆ ಆಗುತ್ತದೆ ಎಂದೆಲ್ಲ ತಿಳಿಸುವಳು. ತನ್ನ ಅಜ್ಜ ಅಜ್ಜಿಯರ ಕತೆಗಳು, ತನ್ನ ಬಾಲ್ಯದ ತೌರೂರಿನ ಕತೆಗಳು, ತನ್ನವರ ವಿವರ, ವಯಸ್ಸು, ಮದುವೆ ಮುಂತಾಗಿ ಇಂಥದೆಂದಿಲ್ಲ, ಲಿಂಗಮ್ಮ ಏನಾದರೂ ಹೇಳುತ್ತಲೇ ಇರುವಳು. ಯಾವ ಕಾಲದಲ್ಲಿ ಯಾವುದು ತಿಂದರೆ, ಆಹಾರ ಅಭ್ಯಾಸದಲ್ಲಿ ಯಾವುದು ಹೇಗಿದ್ದರೆ ಒಳ್ಳೆಯದು ಎಂದು ತಿಳಿಸಿ ಹೇಳುವಳು. ನವಣೆಯ ಬೋನ, ಅದರ ಮೇಲೆ ಕವಣೆಯಷ್ಟು ಬೆಣ್ಣೆ ಹಾಕಿ ಕೊಡುವಳು. ಜೋಳದ ಬೋನ, ಬೇಳೆಯ ತೊಗೆ, ಮೇಲೆ ಮಜ್ಜಿಗೆ ಬೆರೆಸಿ ಕೊಡುವಳು. ಜ್ವಾಳ ತಿಂಬವನು ತೋಳದಂತಾಗುವನು/ಎಳ್ಳು ಬೆಲ್ಲ ತಿಂಬವನು ಬಹುಕಾಲ ಬಾಳನು/ನವಣೆಯನು ಉಂಬವರು ಹವಣಾಗಿ ಇರುತಿಹರು/ರಾಗಿಯನು ಉಂಬವರು ನಿರೋಗಿ ಎನಿಸುವರು/ಭೋಗಿಗಳಿಗಲ್ಲ, ರಾಗಿ ಬಡವರಿಗಾಗಿ ಬೆಳೆದಿಹುದು ಎಂದೆಲ್ಲ ನಾಣ್ಣುಡಿಗಳನ್ನು ಹೇಳುವಳು. ಬಾಯಾಡಲು ಕೂಸಿಗೆ ತುಡುವಾದರೆ ಹುರಿಗಡಲೆ, ಹುರಿದ ನೆಲಗಡಲೆ, ಅವಲಕ್ಕಿ ಕೊಬ್ಬರಿ, ರಾಗಿ ಹುರಿಹಿಟ್ಟು-ಬೆಲ್ಲ-ತುಪ್ಪ, ಕೊಬ್ಬರಿ ಬೆಲ್ಲ ಕೊಡುವಳು. ಅದ್ಯಾವುದೂ ಇರದಿದ್ದರೆ ಬರಿ ಬೆಲ್ಲ ಕೊಟ್ಟು ಮುದ್ದಿಸುವಳು.

ಲಿಂಗಮ್ಮನ ಕೊಟ್ಟಿಗೆ ತುಂಬ ಎತ್ತು, ಆಕಳು, ಮಣಕೆಮ್ಮೆಯ ಗ್ವಾಲೆ. ಹಯನು ಎಂದಿಗೂ ಕಮ್ಮಿಯೆಂದಿಲ್ಲ. ಚಳಿಗಾಲದಲ್ಲಿ ಮಾವು ಶುಂಠಿ, ಮಾಕಳಿ ಬೇರು, ದೊಡ್ಡಪತ್ರೆ ಗಿಡದ ಸೊಪ್ಪು ಹುರಿದು ಮಜ್ಜಿಗೆಗೆ ಬೆರೆಸಿ ಕೊಡುವಳು. ಬೇಸಿಗೆಗೆ ತಂಪೆಂದು ಹೆಸರು ಪಾನಕ, ಎಳ್ಳು ಪಾನಕ, ಬೆಳವಲಕಾಯಿ ಪಾನಕ, ಲಿಂಬೆ ಪಾನಕ, ಮುರುಗಲ ಪಾನಕ, ರಾಗಿ ನೀರು ಮಾಡಿ ಎಲ್ಲರಿಗೂ ಹಂಚಲು ಕೊಟ್ಟು, ಮಾದಿಗೂ ಕುಡಿಸುವಳು. ತಾವು ಬೆಳೆಯುವ ನೆಲ್ಲು, ಜೋಳ, ರಾಗಿ, ಸಾವೆ, ನವಣೆ, ಬರಗು, ಊದಲ, ಸಜ್ಜೆ, ಕಾಳು, ಧಾನ್ಯಗಳನ್ನೆಲ್ಲ ತೋರಿಸುವಳು. ಬರಿಯ ತೋರಿಸುವುದಲ್ಲ, ಮುಟ್ಟಿಸುತ್ತ ಅದರ ಕೆಲಸ ಮಾಡುತ್ತ, ಮಾಡಿಸುವಳು. ಅವಳ ಬಳಿ ಒಂದೊಂದಕ್ಕೂ ಒಂದೊಂದು ಕತೆಯಿರುವುದು.

ಇದನ್ನೂ ಓದಿ  : Covid Diary : ಫೆನ್ನಿರಾಯನೆಂಬ ಸಮಾಜಸೇವಕನೂ ಮತ್ತವನ ‘ಅದು’ ಕ್ಲಿನಿಕ್ಕಿಗೆ ಬಂದ ದಿನ

ಮಾದಿ ಪುಟ್ಟಿಯು ಒಂದಿಲ್ಲೊಂದು ಕೆಲಸ ಮಾಡುವ ಅವ್ವಯ್ಯನ ಜೊತೆಗೆ ತಾನೂ ಕೈ ಹಾಕುವಳು. ಮಾತನಾಡುವಾಗಲೂ ಕೈಯಲ್ಲಿ ಏನಾದರೊಂದು ಕೆಲಸ ಮಾಡುತ್ತಲೇ ಇರಬೇಕು. ಅಕ್ಕಿ ಗೇರುತ್ತ, ಕಲ್ಲು ಹೆಕ್ಕುತ್ತ, ಬತ್ತ ಕುಟ್ಟಿ ಅವಲಕ್ಕಿ ಮಾಡುತ್ತ, ಕಾಯಿ ತುರಿಯುತ್ತ, ಹೂ ಮಾಲೆ ಮಾಡುತ್ತ, ಬೆರಳ ನಡುವೆ ಬಾಳೆನಾರಿನಲ್ಲಿ ಜಾಜಿ ಮೊಗ್ಗು ನೇಯುತ್ತ, ಮಲ್ಲಿಗೆ ಹಂಬು ನೆಡುತ್ತ, ಕಣಗಿಲ ಹೂ ಕೀಳುತ್ತ, ಅಬ್ಬಲಿಗೆ ಕಟ್ಟುತ್ತ, ಬಾವಿಯಿಂದ ನೀರು ಸೇದುತ್ತ, ಮೆಣಸಿನ ಕರೆ ಬಿಡಿಸುತ್ತ, ತೆಂಗಿನ ಗರಿ ಹೆಣೆಯುತ್ತ, ಉದ್ದು ಹೆಸರುಗಳ ಒಣಗಿಸುತ್ತ, ಧಾನ್ಯ ಬೀಸುತ್ತ, ಕಟ್ಟಿಗೆ ಕೂಡುತ್ತ, ಹುಲ್ಲು ಸರಿಯುತ್ತ ಕೆಲಸದಲ್ಲಿ ತೊಡಗಿರುವವರ ಕೈಯಾಗಿ ತಾನೂ ಏನಾದರೂ ಮಾಡುವಳು. ಜೊತೆಜೊತೆಗೆ ಅದೇನು, ಇದೇಕೆ, ಅದೆಲ್ಲಿಗಳ ಬಾಣ ಬಿಡುವಳು.

ವರ್ಷಗಳು ಕಳೆಯುತ್ತ ಹೋದಂತೆ ಮಹಾದೇವಿಯ ಕುತೂಹಲ ಎಲ್ಲದರಲ್ಲೂ ಪ್ರಶ್ನೆಯನ್ನೇ ಹುಟ್ಟಿಸುವುದು. ಕುತೂಹಲ ಎನ್ನುವುದು ಪುಟ್ಟಿಯ ಹುಟ್ಟುಗುಣವೆಂಬಂತೆ ಆಯಿತು. ಅದಕ್ಕೆ ನಿರ್ಭಯವೂ ಸೇರಿ ಸಹಜ ಗುಣದ ಹುಡುಗಿಯಾಗಿ ಅರಳತೊಡಗಿದಳು. ಬೆಳೆಯುತ್ತ ಹೋದಂತೆ ಪ್ರಶ್ನೆ ಕೇಳುವ ಹುಡುಗಿಯಾದಳು. ಏಕೆ ಹೀಗೆ, ಏಕೆ ಹಾಗೆ? ಏನು? ಎಲ್ಲಿ? ಎಂದು ಸದಾ ಅವಳ ಪ್ರಶ್ನೆ. ಪ್ರಶ್ನೆಯ ಸರಪಳಿ ಅವ್ವಯ್ಯ, ಅಪ್ಪಯ್ಯ, ರೇಮವ್ವ, ಮಾರಜ್ಜರನ್ನು ದಾಟಿ ಸೋಮನನ್ನೂ ಸುತ್ತಿಕೊಳ್ಳುವುದು.

ಭಾಗ 1 : Akkamahadevi Jayanthi : ‘ಬೆಳಗಿನೊಳಗು’ ಡಾ. ಎಚ್ಎಸ್ ಅನುಪಮಾ ಅಪ್ರಕಟಿತ ಕಾದಂಬರಿಯ ಪುಟಗಳಿಂದ ‘ಕಲ್ಲರಳಿ’

ಪ್ರತಿಕ್ರಿಯೆಗಾಗಿ  : tv9kannadadigital@gmail.com