No Delete Option: ಅಶೋಕ ಚಕ್ರವರ್ತಿಗಳೇ, ಈ ಹೆದ್ದಾರಿ ಎಂಬ ಹೆಬ್ಬಾವು ನಮ್ಮನ್ನು ನುಂಗುವುದಿಲ್ಲವಲ್ಲ?

Molakalmuru Highway Project : ಮೊದಲಿಂದಲೂ ಬಯಲಲ್ಲಿ ಹಚ್ಚಿಟ್ಟ ದೀಪದಂತಹ ಪರಿಸ್ಥಿತಿ. ಆದರೂ ಎದೆಗುಂದದೆ ಕರಗಳಿಂದ ಸೊಡರುಹಿಡಿದು ಪುಟ್ಟಬೆಳಕಲ್ಲೇ ಕುಟುಂಬದ ಭವಿಷ್ಯ ರೂಪಿಸಿದ ಅಪ್ಪ. ಅವನೂ ಸೇರಿ ನಮ್ಮೂರುಗಳ ಚಿಲ್ಲರೆ ವ್ಯಾಪಾರಿಗಳೀಗ ಬಯಲಲ್ಲಿ ನಿಲ್ಲಬೇಕಿದೆ.

No Delete Option: ಅಶೋಕ ಚಕ್ರವರ್ತಿಗಳೇ, ಈ ಹೆದ್ದಾರಿ ಎಂಬ ಹೆಬ್ಬಾವು ನಮ್ಮನ್ನು ನುಂಗುವುದಿಲ್ಲವಲ್ಲ?
ಕಲೆ : ಜಬೀವುಲ್ಲಾ ಎಂ. ಅಸದ್
Follow us
ಶ್ರೀದೇವಿ ಕಳಸದ
|

Updated on:Mar 22, 2022 | 3:36 PM

No Delete Option : ಮೊಳಕಾಲ್ಮೂರಿನ ಹೆಸರು ತನ್ನ ರೇಷ್ಮೆಸೀರೆಗಳ ಸಿರಿತನದಿಂದ, ಸೀತಾಫಲಗಳ ಸಿಹಿಯಿಂದ, ಕೂಗೆ ಬೆಟ್ಟದ ಕಲರವದಿಂದ, ದಕ್ಷಿಣ ಕಾಶಿ – ಶ್ರೀ ಕಾಲಭೈರವ ನುಂಕೆಮಲೇ ಸಿದ್ದೇಶ್ವರ ಸ್ವಾಮಿಯ ಸನ್ನಿಧಾನದಿಂದ ನಾಡಿನಾದ್ಯಂತ ಚಿರಪರಿಚಿತ. ಇತ್ತ ಕಡೆ ಊರು ಅಲ್ಲದ, ಅತ್ತ ಕಡೆ ಹಳ್ಳಿಯೂ ಅಲ್ಲದ, ಅಷ್ಟೇನೂ ಜನಸಂದಣಿ ಇಲ್ಲದ, ಎಲ್ಲಾ ಕ್ಷೇತ್ರದಲ್ಲಿಯೂ ಹಿಂದುಳಿದಿದ್ದರೂ, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದರೂ, ಗಡಿನಾಡಾದ ಕಾರಣ ತಾಲ್ಲೂಕು ಕೇಂದ್ರ ಎಂಬ ನಾಮ್​ ಕಾ ವಾಸತೆ ಹಣೆಪಟ್ಟಿಯನ್ನು ಅಂಟಿಸಿಕೊಂಡಿದೆ. ಇತ್ತೀಚಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ನನ್ನೂರಿನ ಹೆಸರು ಎಲ್ಲೆಡೆ ಹರಿದಾಡಿದ್ದು ವಿಶೇಷ. ಇಂದಿಗೆ ಹಲವಾರು ವರುಷಗಳು ಕಳೆದ ಮೇಲೆ, ಊರಿಗೆ ರೋಡು ಬರುವ ಸುದ್ದಿ ಮತ್ತೆ ಹೊಸ ಉಮೇದಿನೊಂದಿಗೆ ಸದ್ದು ಮಾಡಿದೆ. ಈವರೆಗೂ ಆಗುತ್ತಂತೆ, ಬರುತ್ತಂತೆ ಎಂದು ಭವಿಷ್ಯವಾಣಿಯಾಗಿದ್ದ ಪೊಳ್ಳುಮಾತು ಈಗ ಸತ್ಯದ ಅರಿವೆಯನ್ನು ಉಟ್ಟುಕೊಳ್ಳುತ್ತಿದೆ. ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮೂರು (Zabiullah M. Asad, Molakalmuru)

ಅದೊಂದು ಕ್ಷೀಣಿಸುತ್ತಿರುವ ಸಂಜೆ, ಕತ್ತಲು ಹಗಲಿಗೆ ಮೆತ್ತಿಕೊಂಡು ಶೃಂಗಾರಗೊಳ್ಳುವ ಸಮಯ. ನನ್ನೂರಾದ ಮೊಳಕಾಲ್ಮುರಿನ ಕಲ್ಲುಬೆಟ್ಟಗಳ ನಡುವೆ, ಸುಡುವ ಬಿಸಿಲಿನ ಮಳೆಗೆ ಸೋತು ನಿಟ್ಟಿಸಿರು ಬಿಡುತ್ತ, ಧೂಳನ್ನು ಹೇರಿಕೊಂಡ ಮಣ್ಣಿನ ಹಾವಿನಂತೆ ಮಿಸುಗಾಡುವ ಮುಖ್ಯ ರಸ್ತೆ. ಐದು ಕಿಲೋಮೀಟರ್ ದೂರವಿರುವ ಪೂರ್ವ ದಿಕ್ಕಿನಲ್ಲಿ ಬಳ್ಳಾರಿ ಮತ್ತು ಬೆಂಗಳೂರು ಹೆದ್ದಾರಿಯಿಂದ ಶಾಂತವಾಗಿ ಬಯಲು ಸೀಮೆಯ ಸಣ್ಣ ತೊರೆಯಂತೆ ಹರಿಯುವ ರಸ್ತೆ, ಊರು ಸಮೀಪಿಸುತ್ತಿದ್ದಂತೆ ಚಂಚಲವಾಗುತ್ತ, ಮತ್ತೆ ಐದು ಕಿಲೋಮೀಟರ್ ಪಶ್ಚಿಮದತ್ತ ಸಾಗುತ್ತಿದ್ದಂತೆ ಸೀಮಾಂಧ್ರದ ಗಡಿಯಲ್ಲಿ ತೆಲುಗು ನದಿಯಲ್ಲಿ ಕರಗಿ ಇಲ್ಲವಾಗುತ್ತದೆ.

ಊರೇ ಎಲೆಮರೆಯ ಕಾಯಿಯಂತೆ ಮರಿಚಿಕೆಯಾಗಿ ಉಳಿದಿರುವಾಗ, ಕೇವಲ ಹತ್ತು ಕಿಲೋಮೀಟರ್ ಉದ್ದದ ರಸ್ತೆ ಇಹ – ಪರಗಳನ್ನು ಕಟ್ಟಿಕೊಡುವ ಕೊಂಡಿಯಂತೆ, ಹೊರಜಗತ್ತಿಗೆ ಚಾಚಿದ ಕರದಂತೆ, ಊರಿನ ಜನರ ಜೀವನಾಡಿಯಂತಾಗಿದೆ. ರಸ್ತೆ ಇರುವುದೇ ಅಷ್ಟು, ಅದನ್ನು ಎಳೆದು ಉದ್ದ ಮಾಡಲಿಕ್ಕಂತೂ ಆಗಲ್ಲ. ಹಾಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ವಿಸ್ತರಿಸಲು ಹಲವಾರು ವರ್ಷಗಳಿಂದ ಯೋಜನೆಗಳು ಸಿದ್ಧವಾಗುತ್ತಲೆ ಇವೆ ಇಂದಿಗೂ.

ನನ್ನಲ್ಲಿ ಅರಿವು ಮೂಡಿದಂದಿನಿಂದಲೂ “ರೋಡ್ ಬರುತ್ತಂತೆ” ಎಂಬ ಮಾತುಗಳನ್ನು ಕೇಳುತ್ತಲೇ ಬಂದಿದ್ದೀನಿ. ಆ ಸುದ್ದಿಗೆ ಜೀವ ತುಂಬುವಂತೆ ಆಗಾಗ ಸಮೀಕ್ಷೆಗಳು ನಡೆಯುವುದು, ರಸ್ತೆ ಅಳೆಯುವುದು, ಗುರುತು ಮಾಡುವುದು, ರಸ್ತೆಬದಿಯ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವುದು, ಪದೇಪದೆ ಜನಜೀವನವನ್ನು ಅಸ್ತ್ಯವ್ಯಸ್ತ ಮಾಡುವುದು ಮಾಮೂಲಿಯಾಗಿತ್ತು. ಮತ್ತೆ ಎಂದಿನಂತೆ ಸುದ್ದಿ ತನ್ನ ಜೀವಂತಿಕೆ ಕಳೆದುಕೊಂಡಂತೆ ಅಂಗಡಿ ಮುಂಗಟ್ಟುಗಳ ಜೊತೆಗೆ ಜನರ ಬದುಕು ಎಂದಿನಂತೆ ತನ್ನ ಉಸ್ತುವಾರಿಯಲ್ಲಿ ನಿಯೋಜನೆಗೊಳ್ಳುವುದು, ಕೆಲವು ವರ್ಷಗಳ ನಂತರ ಮತ್ತದೇ ಸುದ್ದಿ ಅದ್ಹೇಗೋ ಜನರ ಬಾಯಿಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಜೀವಪಡೆದಂತೆ ಸಮಾಧಿಯಿಂದೆದ್ದು ಬಂದು ಮತ್ತಷ್ಟು ಹುರೂಪಿನೊಂದಿಗೆ ರಾರಾಜಿಸುವಾಗ ಮತ್ತದೇ ಹಳೆಯ ಹಾಡು, ಎತ್ತಂಗಡಿಯ ಪಾಡು, ಎಲ್ಲಾ ಮಾಮೂಲು. ರೋಡು ಬರುತ್ತದೆಂಬ ಸವಕಲು ಸುದ್ದಿಯ ಗುದ್ದಿಗೆ ರಸ್ತೆಯ ಅಕ್ಕಪಕ್ಕದಲ್ಲಿದ್ದ ಬೇವು, ಹುಣಸೆ, ಆಲ ಇತ್ಯಾದಿ ಬಯಲ ಹಸಿರು ಚುಕ್ಕಿಗಳಾಗಿದ್ದ ಹಲವು ಮರಗಳನ್ನು ಎಂದೋ ಬುಡಮೇಲು ಮಾಡಿ, ಬಯಲನ್ನು ಬಟ್ಟ ಬಯಲಾಗಿಸಿದ್ದು ಸುಳ್ಳಲ್ಲ.

ಜಬೀವುಲ್ಲಾ ಬರೆದ ಕವನಗಳನ್ನೂ ಓದಿ : Poetry : ಅವಿತಕವಿತೆ ; ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗ ಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ

ಮೊಳಕಾಲ್ಮುರು ತಾಲ್ಲೂಕಿಗೆ ಒಳಪಟ್ಟಿರುವ, ಸಮೀಪದಲ್ಲೆ ಇರುವ ಸಿದ್ಧಾಪುರ ಎಂಬ ಕುಗ್ರಾಮ, ಮೌರ್ಯ ಸಾಮ್ರಾಟ ಅಶೋಕನ ಶೀಲಾ ಶಾಸನಗಳಿಂದಾಗಿ “ಅಶೋಕ ಸಿದ್ಧಾಪುರ” ಎಂದೇ ಹೆಸರುವಾಸಿ. ಆ ಭಾಗ ಅಶೋಕನ ಕಾಲದ ಮೌರ್ಯ ಸಾಮ್ರಾಜ್ಯದ ನಾಲ್ಕು ಉಪ ರಾಜಧಾನಿಗಳಲ್ಲಿ ಒಂದಾದ “ಇಸಿಲ” ಪಟ್ಟಣವಾಗಿತ್ತು ಎಂಬ ಉಲ್ಲೇಖ ನಮಗೆ ಅಲ್ಲಿ ನಡೆದಂತಹ ಸಂಶೋಧನೆ ಮತ್ತು ಲಭ್ಯವಿರುವ ಐತಿಹಾಸಿಕ ದಾಖಲೆಗಳಿಂದ ದೊರೆಯುತ್ತದೆ.

ಅಶೋಕನ ಕಾಲದಲ್ಲಿಯೇ ರಸ್ತೆಯ ಅಕ್ಕಪಕ್ಕದಲ್ಲಿ ಗಿಡ-ಮರಗಳನ್ನು ಬೆಳೆಸುವ ಕ್ರಮ ಬೆಳೆದು ಬಂತು ಎಂದು ಪುಸ್ತಕಗಳಲ್ಲಿ ಓದಿದ್ದೇವೆ. ಅಶೋಕನಿಗೂ, ನಮ್ಮ ಊರಿಗೂ, ಸಾಲು ಮರಗಳಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮರಗಳನ್ನು ಸ್ವತಃ ಅಶೋಕನೇ ನಿಂತು ನೆಡಿಸಿದ್ದನೇನೋ ಎಂಬ ಕಲ್ಪನೆ ಅವುಗಳನ್ನು ನೋಡುವಾಗಲೆಲ್ಲಾ ಅನ್ನಿಸುತ್ತದೆ. ಆದರೆ ಈಗ ಗತದ ಪ್ರಾಕೃತಿಕ ಕೊಂಡಿಯೊಂದು ಕಳಚಿದ ಭಾವ ಮೊದಲಾಗುತ್ತಿರುವುದು ವಿಷಾದದ ಸಂಗತಿ.

ಇಂದಿಗೆ ಹಲವಾರು ವರುಷಗಳು ಕಳೆದ ಮೇಲೆ, ಊರಿಗೆ ರೋಡು ಬರುವ ಸುದ್ದಿ ಮತ್ತೆ ಹೊಸ ಉಮೇದಿನೊಂದಿಗೆ ಸದ್ದು ಮಾಡಿದೆ. ಇದಕ್ಕೆ ಇಂಬು ಸಿಗುವಂತೆ ನೂರಾರು ವರುಷಗಳ ಐತಿಹ್ಯವುಳ್ಳ ಮನೆಗಳಿಂದ ಹಿಡಿದು ಇತ್ತೀಚೆಗೆ ನಿರ್ಮಾಣಗೊಂಡ ಅಂಗಡಿ ಮುಂಗಟ್ಟುಗಳನ್ನು ಸಹ ಯಾವ ಮುಲಾಜಿಲ್ಲದೆ ಕೆಡವಿ ನೆಲಸಮ ಮಾಡಲಾಗಿದೆ. ಮನೆಯನ್ನು ಕಳೆದುಕೊಂಡು ಬೀದಿಪಾಲಾದವರ ಗೋಳು ಒಂದೆಡೆಯಾದರೆ, ಜೀವನಕ್ಕೆ ಆದಾಯದ ಮೂಲವಾಗಿದ್ದ ಚಿಲ್ಲರೆ ವ್ಯಾಪಾರಿಗಳ ನೋವು ಮತ್ತೊಂದೆಡೆ. ಇಂತಹ ನೋವಿಗೆ ತುತ್ತಾದವರಲ್ಲಿ ನನ್ನ ಅಪ್ಪನೂ ಒಬ್ಬ. ಮೊದಲಿನಿಂದಲೂ ಅಪ್ಪನಿಗೆ ಬದುಕು ಎಂಬುದು ಬವಣೆಯಾಗಿತ್ತು. ಬೀಸುವ ಗಾಳಿ, ಮಳೆಯ ನಡುವೆ ಬಯಲಲ್ಲಿ ಹಚ್ಚಿಟ್ಟ ದೀಪದಂತಹ ಪರಿಸ್ಥಿತಿ. ಆದರೂ ಯಾವುದಕ್ಕೂ ಅಂಜದೆ, ಅಳುಕದೆ, ಎದೆಗುಂದದೆ ತನ್ನ ಕರಗಳಿಂದ ಸೊಡರು ಹಿಡಿದು ಕಾಪಾಡಿ, ಆ ಅಲ್ಪ ಬೆಳಕಲ್ಲೆ ತನ್ನ ಕುಟುಂಬದ ಉಜ್ವಲ ಭವಿಷ್ಯವನ್ನು ರೂಪಿಸಿದವನು; ನೆರಳಾದವನು ಅಪ್ಪ ಎಂಬ ಜೀವ. ಈಗ ಮತ್ತೆ ಬಿಸಿಲ ಬಯಲಲ್ಲಿ ನಿಂತು ಚಿಂತಾಕ್ರಾಂತನಾಗಿದ್ದಾನೆ.

ನಿಟ್ಟುಸಿರು ಬಿಡುತ್ತ ಮಲಗಿದ್ದ ರಸ್ತೆ ಎಂಬ ಹಾವನ್ನು ಈಗ ಹೆದ್ದಾರಿ ಎಂಬ ಕಪ್ಪು ಹೆಬ್ಬಾವು ನುಂಗುತ್ತ, ಎದೆಗಳನ್ನು ನಡುಗಿಸುತ್ತ ಬುಸುಗುಡುತ್ತಿದೆ. ಅದೆಷ್ಟೋ ನೆನಪಿನ ಹೆಜ್ಜೆಗಳ ಗುರುತನ್ನು ಅಳಿಸಿ ಹಾಕುತ್ತಿದೆ. ಎಲ್ಲವೂ ಬದಲಾಗುತ್ತಿದೆ.

*

ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್​ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com

No Delete Option ಅಂಕಣದ ಎಲ್ಲಾ ಬರಹಗಳನ್ನು ಇಲ್ಲಿ ಓದಿ : https://tv9kannada.com/tag/no-delete-option

Published On - 2:35 pm, Tue, 22 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ