Reporter‘s Diary: ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು

Mother and Child : ಅವತ್ತೊಂದು ದಿನ ವ್ಯಾನ್‌ನಲ್ಲಿ ಬಂದ ಪತಿ ಏಕಾಏಕಿ ಹಾಲು ಕುಡಿಯುತ್ತಿದ್ದ ಹಸುಗೂಸು ಹಾಗೂ ಮತ್ತೊಂದು ಮಗುವನ್ನು ಎತ್ತಿಕೊಂಡು ಹೋಗಿಬಿಟ್ಟ. ಆಕೆಗೆ ಏನಾಗುತ್ತಿದೆ ಅಂತಾ ಗೊತ್ತಾಗುವ ಮುನ್ನವೇ ಮಗುವಿನ ಜೊತೆ ಅವ ನಾಪತ್ತೆಯಾಗಿದ್ದ.

Reporter‘s Diary: ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು
ರಾಮ್, ಟಿವಿ9 ಕನ್ನಡ, ಮೈಸೂರು
Follow us
ಶ್ರೀದೇವಿ ಕಳಸದ
|

Updated on:May 28, 2022 | 1:41 PM

Reporter’s Dairy : ಸುದ್ದಿಮನೆಯ ಧಾವಂತ, ಹುಡುಕಾಟ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರತಿನಿತ್ಯ ಹೊಸತೊಂದು ಸ್ಟೋರಿಯ ಹುಡುಕಾಟದಲ್ಲಿ ನಿರತರಾಗಿರುವುದು ನಮ್ಮ ನಿತ್ಯದ ಕಾಯಕ. ಅದು 2010 ಇದೇ ರೀತಿಯ ಸುದ್ದಿಯ ಹುಡುಕಾಟದಲ್ಲಿ ನಾನಿದ್ದೆ. ಆ ವೇಳೆ ನನ್ನ ಪರಿಚಯದ ಹಿರಿಯ ವಕೀಲರೊಬ್ಬರು ನನಗೆ ಕರೆ ಮಾಡಿದರು. ರಾಮ್, ನನ್ನ ಸ್ನೇಹಿತೆಯ ಬಳಿ ಒಬ್ಬರು ಜ್ಯೂನಿಯರ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ಆಕೆ ತುಂಬಾ ಸಮಸ್ಯೆಯಲ್ಲಿದ್ದಾರೆ. ಪೊಲೀಸ್ ಸ್ಟೇಷನ್‌ಗೆ ಹೋದ್ರು ನ್ಯಾಯ ಸಿಕ್ಕಿಲ್ಲ. ಸ್ವಲ್ಪ ನೀವು ಸಹಾಯ ಮಾಡಿ ಅಂತಾ ಕೇಳಿಕೊಂಡರು. ನಾನು ಸರಿ ಆಯ್ತು ಅಂತಾ ಅಂದೆ. ಇದಾದ ಸ್ವಲ್ಪ ಸಮಯದ ನಂತರ ಒಬ್ಬರು ಕಿರಿಯ ವಕೀಲರು ನಮ್ಮ ಮೈಸೂರು ಟಿವಿ9 ಕಚೇರಿಗೆ ಬಂದರು. ಬಂದವರ ಕಣ್ಣಲ್ಲಾಗಲೇ ನೀರು ತುಂಬಿಕೊಂಡಿತ್ತು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಬರೀ ಅಳು, ಅಳು. ಅವರು ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸುಮಾರು ಅರ್ಧ ಗಂಟೆಗಳ ನಂತರ ಸಾವರಿಸಿಕೊಂಡು ಬಿಕ್ಕುತ್ತಲೆ ತಮ್ಮ ಎಲ್ಲಾ ಕಥೆಯನ್ನು ಹೇಳಿದರು.                                                                                                                                                                                          ರಾಮ್, ವಿಶೇಷ ಪ್ರತಿನಿಧಿ, ಟಿವಿ9 ಕನ್ನಡ, ಮೈಸೂರು

ಪೊಲೀಸ್ ಅಧಿಕಾರಿಯಿಂದ ಬಂದ ವಾರ್ನಿಂಗ್

ಇದನ್ನೂ ಓದಿ
Image
ವೈಶಾಲಿಯಾನ: ಇಂಗ್ಲಿಷ್! ಹೆಮ್ಮೆಯಿಂದ ಬಳಸುತ್ತಿದ್ದೇವೋ, ಸಂಕೋಚದಿಂದ ಮುದುಡಿ ಹೋಗುತ್ತಿದ್ದೇವೋ?
Image
Reporter’s Diary: ಉಂಡು ಹೊರಟಿದ್ದವರ ಬಲಿ ಪಡೆದ ಉಂಡುಬತ್ತಿ ಕೆರೆ
Image
Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’

ಕಿರಿಯ ವಕೀಲೆಯ ಆರೋಪ ತನ್ನ ಪತಿ ಹಾಗೂ ಪತಿಯ ಸಹೋದರಿಯ ಬಗ್ಗೆಯಾಗಿತ್ತು. ಇಂಟರೆಸ್ಟಿಂಗ್ ಅಂದ್ರೆ ಆಕೆಯ ಪತಿಯ ಸಹೋದರಿ ಕಿರಿಯ ನ್ಯಾಯಾಧೀಶೆಯಾಗಿದ್ದರು‌. ಇನ್ನು ಆ ಕಿರಿಯ ವಕೀಲೆ ನ್ಯಾಯಕ್ಕಾಗಿ ಟಿವಿ9 ಬಳಿ ಬಂದ ವಿಚಾರ ಪೊಲೀಸ್ ಅಧಿಕಾರಿಯೊಬ್ಬರಿಗೆ ಅದೇಗೋ ಗೊತ್ತಾಗಿದೆ. ನನ್ನ ಪರಿಯದವರು ಆಗಿದ್ದ ಅವರು ನನಗೆ ಕರೆ ಮಾಡಿದರು. ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದಿದ್ದಾರಾ? ಏನು ಕಥೆ ಎಂದು ಕೇಳಿದರು. ಸ್ವಲ್ಪ ಸಮಯ ಸುಮ್ಮನಾದ ಆ ಅಧಿಕಾರಿ ನಂತರ, ರಾಮ್ ಅದು ನ್ಯಾಯಾಧೀಶರಿಗೆ ಸಂಬಂಧಪಟ್ಟಿದ್ದು ಸುಮ್ನೆ ಏಕೆ ಅಂದರು. ಅವರ ಮಾತಲ್ಲಿ ನನ್ನ ಬಗ್ಗೆ ಕಳಕಳಿಯಿತ್ತು, ಮುಂದುವರಿಯಬೇಡಿ ಅನ್ನೋ ಎಚ್ಚರಿಕೆಯಿತ್ತು. ನಾನು ಅವರನ್ನು ಕೇಳಿದೆ, ಸರ್ ಎಫ್ ಐ ಅರ್ ಆಗಿದೆ ಅಲ್ವಾ? ಅದರಲ್ಲಿ ಆ ನ್ಯಾಯಾಧೀಶರ ಹೆಸರು ಇದೆ ಅಲ್ವಾ? ಎಂದಾಗ ಅವರು ಹೌದೆಂದರು. ಸರಿ ಸರ್ ನೋಡ್ತೇನೆ ಅಂತಾ ಹೇಳಿ ಕಾಲ್ ಕಟ್ ಮಾಡಿದೆ.

ಏಕೋ ಪೊಲೀಸ್ ಅಧಿಕಾರಿ ಹೇಳಿದ ಮೇಲೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕು ಅನಿಸಿತು. ಮತ್ತೆ ಆ ಕಿರಿಯ ವಕೀಲೆಗೆ ಕರೆ ಮಾಡಿ ಸಂಪೂರ್ಣ ದಾಖಲೆಗಳು, ಫೋಟೋಗಳನ್ನು ಕಲೆ ಹಾಕಿದೆ‌. ಯಾವ ಕೋನದಲ್ಲಿ ನೋಡಿದರು. ಕಿರಿಯ ವಕೀಲೆಗೆ ಅನ್ಯಾಯವಾಗಿರೋದು ಸ್ಪಷ್ಟವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಆಕೆ ಅದಾಗಲೇ ನ್ಯಾಯಕ್ಕಾಗಿ ಹಲವು ಪತ್ರಿಕೆಗಳ ಕಚೇರಿ, ಸಂಘ ಸಂಸ್ಥೆಗಳು, ಪೊಲೀಸ್ ಅಧಿಕಾರಿಗಳ ಕಚೇರಿಗಳಿಗೆ ಅಲೆದು, ಅಲೆದು ಹೈರಾಣಾಗಿದ್ದರು. ಆದ್ರೆ ಅವರಿಗೆ ಸಾಂತ್ವನ ಹೇಳುವ ಅಥವಾ ಭರವಸೆ ಕೊಡುವ ಕೆಲಸ ಯಾರು ಮಾಡಿರಲಿಲ್ಲ. ನ್ಯಾಯಾಧೀಶರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಎಲ್ಲರೂ ಹಿಂದೇಟು ಹಾಕಿ ಬಿಡುತ್ತಿದ್ದರು. ಒಂದು ಸ್ಥಳೀಯ ಪತ್ರಿಕೆಯಲ್ಲಿ ಮಾತ್ರ ಆಕೆಯ ನೋವಿನ ಬಗ್ಗೆ ಒಂದು ಕಾಲಂನಷ್ಟು ಸುದ್ದಿಯಾಗಿತ್ತು ಅಷ್ಟೇ.

ಧೈರ್ಯ ತುಂಬಿದ ಲಾಗೈಡ್

ಸಾಮಾನ್ಯವಾಗಿ ನಾನು ಮೈಸೂರಿನಲ್ಲಿ ಯಾವುದೇ ಕಾನೂನಾತ್ಮಕವಾದ ಸ್ಟೋರಿಗಳನ್ನು ಮಾಡುವ ಮುನ್ನ ನಮ್ಮ ಟಿವಿ9 ಬೆಂಗಳೂರಿನ ಹಿರಿಯ ವರದಿಗಾರರಾದ ರಮೇಶ್ ಅವರನ್ನು ಸಂಪರ್ಕಿಸುತ್ತೇನೆ. ಅವರಿಗೆ ಸ್ಟೋರಿಯ ಮಾಹಿತಿ ಹಾಗೂ ಅದಕ್ಕೆ ಲಭ್ಯವಿರುವ ದಾಖಲೆ ಬಗ್ಗೆ ಹೇಳಿದರೆ ಮಾರ್ಗದರ್ಶನ ಮಾಡುತ್ತಾರೆ. ಈಗಲೂ ಅದು ಮುಂದುವರಿದಿದೆ. ಇನ್ನು ಇದರ ಜೊತೆಗೆ ನಮ್ಮ ಮೈಸೂರಿನ ಲಾಗೈಡ್ ಕನ್ನಡ ಕಾನೂನು ಮಾರ್ಗದರ್ಶಿಕೆಯ ಎಚ್. ಎನ್. ವೆಂಕಟೇಶ್ ಅವರನ್ನು ನಾನು ಸಂಪರ್ಕಿಸಿ ಈ ಬಗ್ಗೆ ಚರ್ಚೆ ಮಾಡಿದೆ. ಅವರ ಅಭಿಪ್ರಾಯ ಕೇಳಿದೆ. ಅವರು ಎಫ್ ಐ ಆರ್‌ನಲ್ಲಿ ನ್ಯಾಯಾಧೀಶರ ಹೆಸರು ಇದೆ. ಸಮಸ್ಯೆಗೊಳಗಾದವರು ಸಹಾ ಅವರ ಹೆಸರು ಹೇಳಿದ್ದಾರೆ ಖಂಡಿತಾ ಮಾಡಬಹುದು. ಕಾನೂನಾತ್ಮಕವಾಗಿ ಏನು ಸಮಸ್ಯೆ ಇಲ್ಲ ಅಂತಾ ತಿಳಿಸಿದರು. ಲಾಗೈಡ್ ವೆಂಕಟೇಶ್ ಅವರ ಈ ಸಲಹೆ ನನಗೆ ಆ ಸ್ಟೋರಿ ಮಾಡಲು ಧೈರ್ಯ ತುಂಬಿತು.

ಇದನ್ನೂ ಓದಿ : Reporter’s Diary: ನಿರ್ಜನ ಪ್ರದೇಶದಲ್ಲಿ ಬೆನ್ನ ಹಿಂದೆ ನಿಂತವನ ಕಂಡು ಎದೆಬಡಿತವೇ ನಿಂತಿತ್ತು

ಕಣ್ಣೀರು ಹಾಕುತ್ತಲೆ ತನ್ನ ನೋವಿನ ಕಥೆ ಬಿಚ್ಚಿಟ್ಟ ಕಿರಿಯ ವಕೀಲೆ

ಸರಿ ಎಲ್ಲವೂ ಆಗಿತ್ತು ಸ್ಟೋರಿ ಮಾಡಲು ಅವರಿಂದ ಎಲ್ಲಾ ಸಂಪೂರ್ಣ ಕಲೆ ಹಾಕಬೇಕಿತ್ತು. ಸರಿ ನಿಮ್ಮ ಸಮಸ್ಯೆಯೇನು ವಿವರವಾಗಿ ಹೇಳಿ ಅಂದೆ. ಆಗ ಅಳುತ್ತಲೇ ತಮ್ಮ ನೋವನ್ನು ಹೇಳುತ್ತಾ ಹೋದರು. ಆಕೆ ಮೈಸೂರಿನ ಮಧ್ಯಮ ಕುಟುಂಬದ ಹೆಣ್ಣುಮಗಳು. ಸ್ವಂತ ಮನೆ, ಸ್ವಂತದ ಮೆಡಿಕಲ್ ಸ್ಟೋರ್ ಇತ್ತು. ಜೀವನಕ್ಕೆ ಏನು ಸಮಸ್ಯೆಯಿರಲಿಲ್ಲ. ಯಾವುದಕ್ಕೂ ಕೊರತೆಯೂ ಇರಲಿಲ್ಲ. ಆಕೆಗೊಬ್ಬ ಪ್ರಾಣ ಸ್ನೇಹಿತೆಯಿದ್ದರು. ಇಬ್ಬರು ಒಟ್ಟಿಗೆ ಕಾನೂನು ಓದಲು ಸೇರಿಕೊಂಡಿದ್ದರು. ಇಬ್ಬರ ನಡುವೆ ಗಾಢ ಸ್ನೇಹವಿತ್ತು. ಅವರ ಮನೆಗೆ ಈಕೆ ಹೋಗುವುದು, ಈಕೆಯ ಮನೆಗೆ ಆಕೆ ಬರುವುದು ಸಾಮಾನ್ಯವಾಗಿತ್ತು. ಈ‌ ಮಧ್ಯೆ ಈಕೆಗೆ ಸ್ನೇಹಿತೆಯ ಸಹೋದರನ ಪರಿಚಯವಾಯಿತು. ಆಗಾಗ ಮನೆಗೆ ಹೋಗುತ್ತಿದ್ದಾಗ ನೋಡುತ್ತಿದ್ದವನು ಈಕೆಯ ಕಡೆಗೆ ಆಕರ್ಷಿತನಾದ. ಈಕೆಗೂ ಆತನ ಮೇಲೆ ಒಂದು ರೀತಿ ಆಕರ್ಷಣೆ ಬೆಳೆಯಿತು. ಸ್ಬಲ್ಪ‌ ದಿನದಲ್ಲೇ ಆ ಆಕರ್ಷಣೆ ಸ್ನೇಹವಾಗಿ, ಸಲುಗೆಯಾಗಿ ಪ್ರೀತಿಗೆ ತಿರುಗಿತು. ಪ್ರೀತಿಯಲ್ಲಿ ಮೈ ಮರೆತರು. ಫಲವಾಗಿ ಆಕೆ ಗರ್ಭಿಣಿಯಾದಳು.

ಸಹೋದರನ ತಪ್ಪಿಗೆ ಸ್ನೇಹಿತೆಯ ವಿರುದ್ದವೇ ತಿರುಗಿ ಬಿದ್ದ ಸಹೋದರಿ

ತನ್ನ ಸ್ನೇಹಿತೆ ಹಾಗೂ ಸಹೋದರನ‌ ನಡುವಿನ ಈ ವಿಚಾರ ತಿಳಿದ ತಕ್ಷಣ ಈಕೆಯ ಸ್ನೇಹಿತೆ ಕೆಂಡಾಮಂಡಲರಾದರು. ತನ್ನ ಸಹೋದರ ಮಾಡಿದ್ದು ತಪ್ಪು ಎಂದು ಆಕೆಗೆ ಅನಿಸಲಿಲ್ಲ. ಸ್ನೇಹಿತೆಯದ್ದೇ ಎಲ್ಲಾ ತಪ್ಪು ಅನ್ನೋ ನಿರ್ಧಾರಕ್ಕೆ ಬಂದರು. ಏನೇ ಕೋಪ ಮಾಡಿಕೊಂಡರೂ ಆಗಿದ್ದನ್ನು  ತಪ್ಪಿಸಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲ ಅದನ್ನು ಮುಚ್ಚಿಡುವುದಕ್ಕೂ ಆಗುತ್ತಿರಲಿಲ್ಲ. ಕೊನೆಗೆ ಆಕೆ ಮೂರು ತಿಂಗಳ ಗರ್ಭಿಣಿಯಿರುವಾಗಲೇ ಆತನ ಜೊತೆಯಲ್ಲೇ ಮದುವೆ ಮಾಡಲಾಯಿತು. ನಂಜನಗೂಡಿನಲ್ಲಿ ಕೇವಲ‌ ಕುಟುಂಬಸ್ಥರ ಸಮ್ಮುಖದಲ್ಲಿ‌ ಮದುವೆ ಸರಳವಾಗಿ ನೆರವೇರಿತು. ಮದುವೆಯಾದ ಮೇಲೆ ಎಲ್ಲಾ ಸರಿಯಾಗುತ್ತದೆ ಅಂತಲೇ ಈಕೆ ಭಾವಿಸಿದ್ದರು. ಆದರೆ ಆಕೆಯ ನಿರೀಕ್ಷೆ ತಪ್ಪಾಗಿತ್ತು.

ಮದುವೆಯಾದ ಮೊದಲ‌ ದಿನದಿಂದಲೇ ನರಕದ ದರ್ಶನವಾಗತೊಡಗಿತ್ತು. ಕಾರಣ ಆಕೆ ನನ್ನ ಸ್ನೇಹಿತೆಯಿಂದ ಸಂಬಂಧಿಕರ ಮುಂದೆ ತಲೆ ತಗ್ಗಿಸುವಂತಾಯ್ತು ಎಂದು ಆಕೆ ಆಕ್ರೋಶಗೊಂಡಿದ್ದರು. ಒಂದು ಕಡೆ ಗಂಡ ಹಾಗೂ ಗಂಡನ ಮನೆಯವರು ಈಕೆಯನ್ನು ಹೀನಾಯವಾಗಿ ನೋಡತೊಡಗಿದ್ದರು. ಮನೆಯವರಿಗಿಂತ ಸ್ನೇಹಿತೆಯೇ ಪರಮ ಶತ್ರುವಾಗಿಬಿಟ್ಟಿದ್ದಳು. ಕಾನೂನು ಓದಿ ವಕೀಲೆಯಾಗಬೇಕಾಗಿದ್ದ ಕನಸಿಗೆ ಆಕೆಯೇ ಕಲ್ಲು ಹಾಕಿದಳು. ವಕೀಲ ವೃತ್ತಿಗೆ ಕಳುಹಿಸದೇ ಮನೆಯಲ್ಲೇ ಇರುವಂತೆ ತಾಕೀತು ಮಾಡಿದ್ದಳು. ತಾನು ಮಾತ್ರ ವಕೀಲೆಯಾಗಿ, ಕೊನೆಗೆ ಕಿರಿಯ ನ್ಯಾಯಾಧೀಶಳಾಗಿಯೂ ನೇಮಕಗೊಂಡಳು.

ಇದನ್ನೂ ಓದಿ : Reporter‘s Diary : ಆ ಹಂತಕನ ಕರೆ ‘ಏಪ್ರಿಲ್ ಫೂಲ್’ ಆಗಬಾರದಿತ್ತೆ?

ಮಗುವನ್ನು ಕಸಿದ ದ್ವೇಷ

ಸ್ನೇಹಿತೆ ನ್ಯಾಯಾಧೀಶೆಯಾದ ನಂತರ ತನಗೆ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬ್ರೇಕ್ ಬೀಳಬಹುದು ಎಂದು  ಅಂದುಕೊಂಡಿದ್ದಳು. ಆದರೆ ಅದು ಆಗಲಿಲ್ಲ. ಕಿರುಕುಳ ಹೆಚ್ಚಾಯ್ತೇ ಹೊರತು ಕಡಿಮೆಯಾಗಲಿಲ್ಲ. ಈ ನಡುವೆ ಆಕೆ ಗಂಡು ಮಗುವಿಗೆ ಜನ್ಮ‌ ನೀಡಿದಳು. ಇದಾದ 6 ತಿಂಗಳಿಗೆ ಮತ್ತೆ ಆಕೆ ಗರ್ಭವತಿಯಾದಳು. ಆರೈಕೆ, ಹೆರಿಗೆಗಾಗಿ ಎಂದು ತವರುಮನೆ ಸೇರಿದಳು. ತವರುಮನೆಯಲ್ಲಿ ಕೊಂಚ ನೆಮ್ಮದಿಯಿತ್ತು. ಅಲ್ಲಿ ಆಕೆ ಮತ್ತೊಂದು ಗಂಡು ಮಗುವಿಗೆ ಜನ್ಮ‌ ನೀಡಿದಳು. ಎರಡು ಮಕ್ಕಳ ಜೊತೆ ಆಕೆ ತವರು ಮನೆಯಲ್ಲಿ ಆರಾಮಾಗಿದ್ದರು. ಹಿರಿಯ ವಕೀಲರ ಬಳಿ ಪ್ರಾಕ್ಟೀಸ್ ಸಹಾ ಆರಂಭಿಸಿದ್ದರು. ಆಗ ಎರಡನೇ ಮಗುವಿಗೆ ಆರು ತಿಂಗಳಾಗಿತ್ತು. ಮಗುವನ್ನು ನೋಡಲು ಗಂಡನಾಗಲಿ ಅವರ ಮನೆಯವರಾಗಲಿ ಬಂದಿರಲಿಲ್ಲ. ಆದರೆ ಅವತ್ತೊಂದು ದಿನ ವ್ಯಾನ್‌ನಲ್ಲಿ ಬಂದ ಪತಿ ಏಕಾಏಕಿ ಹಾಲು ಕುಡಿಯುತ್ತಿದ್ದ ಹಸುಗೂಸು ಹಾಗೂ ಮತ್ತೊಂದು ಮಗುವನ್ನು ಎತ್ತಿಕೊಂಡು ಹೋಗಿಬಿಟ್ಟ. ಆಕೆಗೆ ಏನಾಗುತ್ತಿದೆ ಅಂತಾ ಗೊತ್ತಾಗುವ ಮುನ್ನವೇ ಮಗುವಿನ ಜೊತೆ ಪತಿ ನಾಪತ್ತೆಯಾಗಿದ್ದ. ಎಲ್ಲಿ ಹೋದ ಏನು ಒಂದು ಗೊತ್ತಿರಲಿಲ್ಲ. ಮಗುವಿಗಾಗಿ ಕಾಡಿ ಬೇಡಿದರು ಆಕೆಗೆ ಮಕ್ಕಳ ದರ್ಶನವೂ ಸಿಕ್ಕಿರಲಿಲ್ಲ. ಆ ಮಗುವನ್ನು ನನಗೆ ಕೊಡಿಸಿಕೊಡಿ ಅಂತಲೇ ಆಕೆ ಪೊಲೀಸ್ ಠಾಣೆ ಬಾಗಿಲು ಬಡಿದಿದ್ದರು. ಸಿಕ್ಕ ಸಿಕ್ಕವರ ಬಳಿ ಅಲವತ್ತುಕೊಂಡಿದ್ದರು. ಆದ್ರೆ ಯಾವುದೇ ಪ್ರಯೋಜನಾವಗಿರಲಿಲ್ಲ. ಕೊನೆಗೆ ಆಕೆ ಬಂದು ನಿಂತಿದ್ದು ಟಿವಿ9 ಕಚೇರಿಗೆ.

ನೊಂದ ತಾಯಿ ಜೊತೆ ನಿಂತ ಟಿವಿ9; ತಾಯಿ ಮಡಿಲು ಸೇರಿದ ಕಂದಮ್ಮಗಳು

ನೊಂದ ತಾಯಿ ನಮ್ಮ ಬಳಿ ಕೇಳಿದ್ದು ಒಂದೇ, ಸರ್ ನನಗೆ ನನ್ನ ಮಕ್ಕಳನ್ನು ಕೊಡಿಸಿಬಿಡಿ ಸಾಕು. ಗಂಡ, ಹಣ, ಆಸ್ತಿ ಏನೂ ಬೇಡ ಅಂತಾ. ತಾಯಿಯ ಈ ಕರುಣಾಜನಕ ಕಥೆ ಕೇಳಿದ ನಂತರ ಏನಾದರೂ ಆಗಲಿ ಆಕೆಗೆ ನಮ್ಮ ಕೈಲಾದ ಸಹಾಯ ಮಾಡಲೇಬೇಕೆಂದು ನಿರ್ಧರಿಸಿ ಈ ಬಗ್ಗೆ ಒಂದು ಸ್ಟೋರಿ‌ ಮಾಡಿ ನಮ್ಮ ನಾಗೇಶ್ ಸರ್‌ ಅವರಿಗೆ ತಿಳಿಸಿದೆ. ವಿಚಾರ ತಿಳಿದ ನಾಗೇಶ್ ಸರ್ ಸ್ಟೋರಿ ತೆಗೆದುಕೊಂಡಿದ್ದು ಮಾತ್ರವಲ್ಲ ನೊಂದ ತಾಯಿಯನ್ನು ಲೈವ್‌ನಲ್ಲಿ ಕೂರಿಸಿ ಮಾತನಾಡಿಸಿದರು. ಆಕೆ ಲೈವ್‌ನಲ್ಲಿ ನನಗೆ ನನ್ನ ಮಕ್ಕಳನ್ನು ಕೊಡಿಸಿ ಅಂತಾ ಗೋಗರೆದು ಮನವಿ ಮಾಡಿದ್ರು. ಅವತ್ತು ಟಿವಿ9ನಲ್ಲಿ ತಾಯಿಯ ನೋವು ಕಲ್ಲೆದೆಯವರನ್ನು ಕರಗಿಸುವಂತಿತ್ತು. ಅದಾದ ಮೂರೇ ದಿನಕ್ಕೆ ನ್ಯಾಯಾಲಯದ ಮೂಲಕವೇ ಮಕ್ಕಳು ತಾಯಿಯ ಮಡಿಲು ಸೇರಿದವು‌. ನ್ಯಾಯಾಲಯದ ಆವರಣದಲ್ಲಿ ಆ ಮಕ್ಕಳನ್ನು ತಾಯಿಗೆ ಒಪ್ಪಿಸಿದ ಆ ಕ್ಷಣ ನಿಜಕ್ಕೂ ಅವಿಸ್ಮರಣೀಯ. ಆ ತಾಯಿ ಆ ಎರಡು ಮಕ್ಕಳನ್ನು ಒಟ್ಟಿಗೆ ಕಂಕುಳಲ್ಲಿ ಎತ್ತಿಕೊಂಡು ಮುತ್ತಿಟ್ಟ ಪರಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದವು. ಮಕ್ಕಳ ಆ ಭಾವ, ಪ್ರೀತಿ ನೋಡಿ ನನ್ನ ಕಣ್ಣುಗಳು ತುಂಬಿ ಬಂದವು. ಆ ಕ್ಷಣವನ್ನು ನಮ್ಮ ಕ್ಯಾಮೆರಾಪರ್ಸನ್ ಹೇಮಂತ್ ಯಥಾವತ್ತಾಗಿ ಚಿತ್ರೀಕರಿಸಿದ್ದರು.

ಇದನ್ನೂ ಓದಿ : Reporter‘s Diary: ಫೋನೋ, ನೇರಪ್ರಸಾರದ ಬಗ್ಗೆ ಮೊದಲ ಸಲ ಜನಕ್ಕೆ ಅರ್ಥವಾಯಿತು

ತಾಯಿಯ ಕೃತಜ್ಞತಾ ಮಾತು

ಮಕ್ಕಳನ್ನು ಪಡೆದ ಅ ತಾಯಿಯ ಆನಂದಕ್ಕೆ ಪಾರವೇ ಇರಲಿಲ್ಲ. ಆನಂದಭಾಷ್ಪದಿಂದ ಆಕೆಗೆ ಮಾತುಗಳೇ ಬರುತ್ತಿರಲಿಲ್ಲ. ಮಕ್ಕಳನ್ನು ಎತ್ತುಕೊಂಡೇ ನಮ್ಮೆಡೆಗೆ ತಿರುಗಿ ಕೈ ಮುಗಿದರು. ನನ್ನ ಕೊನೆ ಉಸಿರು ಇರುವವರೆಗೂ ಟಿವಿ9ನ್ನು ಮರೆಯುವುದಿಲ್ಲ ಅಂತಾ ಕೂಗಿ ಕೂಗಿ ಹೇಳಿದ್ರು. ಅದಾದ ನಂತರ ತಾಯಿಗೆ ಮಗು ಸಿಕ್ಕಿದ ಸುದ್ದಿಯನ್ನು ಪ್ರಸಾರ ಮಾಡಿದೆವು. ನಮ್ಮ ಕೆಲಸಕ್ಕೆ ತುಂಬಾ ಮೆಚ್ಚುಗೆ ವ್ಯಕ್ತವಾಯಿತು. ಆಕೆಯ ಪತಿ ಸಹ ಮೊದಲು ನಮ್ಮ ಮೇಲೆ ಬೇಸರಗೊಂಡಿದ್ದರು. ನನ್ನ ಬಳಿ ಬಂದು ನಮ್ಮ ಮಾನ ಮರ್ಯಾದೆ ಹಾಳಾಯ್ತು ನಿಮ್ಮಿಂದ ಅಂದರು. ನಾನು ಸರ್ ನನಗೆ ನಿಮ್ಮ ಜೊತೆ ಯಾವುದೇ ವೈಯುಕ್ತಿಕ ಸಮಸ್ಯೆಯಿಲ್ಲ. ಆದ್ರೆ ಆ ನೊಂದ ತಾಯಿಗೆ ಮಗುವನ್ನು ಕೊಡಿಸಬೇಕಾಗಿದ್ದು ನಮ್ಮ ಧರ್ಮ ಅದನಷ್ಟೇ ನಾನು ಮಾಡಿದ್ದೇನೆ ಅಂತಾ ಹೇಳಿ ಸುಮ್ಮನಾದೆ. ಆಮೇಲೆ ಅವರು ಸುಮ್ಮನಾದರು.

ಐದು ವರ್ಷ ಐದು ಬದುಕು : ಪ್ರಶಸ್ತಿ ತಂದು ಕೊಟ್ಟ ಕಾಯಕ

ಇದಾದ ಒಂದು ವರ್ಷದ ನಂತರ ಮತ್ತೆ ಇದೇ ಸ್ಟೋರಿಯನ್ನು ಐದು ವರ್ಷ ಐದು ಬದುಕು ಅನ್ನೋ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯ್ತು. ಈ ಮೂಲಕ ಟಿವಿ9ನ ಬದ್ದತೆ, ಸಾಮಾಜಿಕ ಕಳಕಳಿಯ ಪರಿಚಯ ಮಾಡಿಕೊಡಲಾಯ್ತು. ಇದರ ಜೊತೆಗೆ ನೊಂದತಾಯಿಯ ನೋವಿಗೆ ಸ್ಪಂದಿಸಿದ ನನಗೆ ನನ್ನ ಕ್ಯಾಮೆರಾಪರ್ಸನ್ ಹೇಮಂತ ಕುಮಾರ್ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ವತಿಯಿಂದ ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಖಂಡಿತವಾಗಿಯೂ ಆ ಪ್ರಶಸ್ತಿ ಖುಷಿಯ ಜೊತೆಗೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತು. ಇದರ ಜೊತೆಗೆ ಈ ಒಂದು ಘಟನೆ ನನಗೆ ಪ್ರಶಸ್ತಿಗಿಂತ ಮಿಗಿಲಾದ ಬೆಲೆಯೇ ಕಟ್ಟಲಾಗದ ಆತ್ಮ ಸಂತೃಪ್ತಿಯನ್ನು ತಂದುಕೊಟ್ಟಿತು. ಖಂಡಿತವಾಗಿಯೂ ಇದು ನನ್ನ ಕೆಲಸದಲ್ಲಿ ನನ್ನ ಜೀವಮಾನದ ಸಾಧನೆ ಅಂದರೂ ತಪ್ಪಾಗಲಾರದು.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 1:36 pm, Sat, 28 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ