Music Award: ಧಾರವಾಡದಲ್ಲಿ ‘ಇನ್ಫೋಸಿಸ್ ಸಿತಾರ್ ನವಾಝ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ‘ ಪ್ರದಾನ, ಸಂಗೀತೋತ್ಸವ
Ustad Balekhan : ‘ಬಾಲೇಖಾನ್ ಅವರ ಸಿತಾರ್ ಭಾವಪ್ರಧಾನ, ಬುದ್ಧಿಪ್ರಧಾನ. ಕಿರಾಣಾ ಘರಾಣಾದ ಆಲಾಪಿ ಪದ್ಧತಿಯನ್ನು ಸಿತಾರ್ನಲ್ಲಿ ಹೊಮ್ಮಿಸುತ್ತಿದ್ದ ಅಪರೂಪದ ಕಲಾವಿದ. ಅವರ ಸ್ಮರಣೆಯಲ್ಲಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಸಂತಸ ತಂದಿದೆ.’ ಪಂ. ವಿನಾಯಕ ತೊರವಿ
ಧಾರವಾಡ : ಖ್ಯಾತ ಸಿತಾರ್ ವಾದಕ ಉಸ್ತಾದ ಬಾಲೇಖಾನ್ (Ustad Balekhan) ಅವರ ಸ್ಮರಣಾರ್ಥ ಬೆಂಗಳೂರಿನ ಸಿತಾರ್ ನವಾಝ್ ಉಸ್ತಾದ್ ಬಾಲೇಖಾನ ಮೆಮೋರಿಯಲ್ ಫೌಂಡೇಶನ್ ಟ್ರಸ್ಟ್ ಸಂಗೀತೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. 2020ನೇ ಸಾಲಿನ ಇನ್ಫೋಸಿಸ್ ಸಿತಾರ್ ನವಾಝ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿಯನ್ನು ಕಿರಾಣಾ ಘರಾಣಾದ ಖ್ಯಾತ ಗಾಯಕ ಪಂ. ವಿನಾಯಕ ತೊರವಿ (Vinayak Torvi) ಅವರಿಗೆ, 2021ನೇ ಸಾಲಿನ ಇದೇ ಪ್ರಶಸ್ತಿಯನ್ನು ಆಗ್ರಾ, ಜೈಪುರ್, ಅತ್ರೌಲಿ, ಜೈಪುರ್ ಘರಾಣೆ ಶೈಲಿಯ ಗಾಯಕಿ ಪುಣೆಯ ಆರತಿ ಅಂಕಲೀಕರ್ (Arati Ankalikar) ಅವರಿಗೆ ಪ್ರದಾನ ಮಾಡಲಾಗುವುದು. 2020 ಮತ್ತು 2021ನೇ ಸಾಲಿನ ಇದೇ ಪ್ರಶಸ್ತಿಯನ್ನು ಸಹಕಲಾವಿದರಿಗೂ ಕೊಡುವ ಕ್ರಮವಿದ್ದು, ಖ್ಯಾತ ತಬಲಾವಾದಕ ರಾಜೇಂದ್ರ ನಾಕೋಡ್ ಮತ್ತು ಹಾರ್ಮೋನಿಯಂ ಕಲಾವಿದರಾದ ವ್ಯಾಸಮೂರ್ತಿ ಕಟ್ಟಿಯವರು ಕ್ರಮವಾಗಿ ಪಡೆಯಲಿದ್ದಾರೆ. ಜೊತೆಗೆ ಜೀವಮಾನಸಾಧನೆಗಾಗಿ ಸಿತಾರ್ ಹಿರಿಯ ಕುಶಲಕರ್ಮಿ ಮಿರಜ್ನ ಅಹಮದ್ಸೋ ಆಬಾಸೋ ಅವರಿಗೂ ಈ ಪ್ರಶ್ರಿ ನೀಡಿ ಗೌರವಿಸಲಾಗುವುದು.
ಪ್ರಶಸ್ತಿ ಪಡೆಯಲಿರುವ ಪಂ. ವಿನಾಯಕ ತೊರವಿ ಈ ಸಂದರ್ಭದಲ್ಲಿ ಬಾಲೇಖಾನರ ಒಡನಾಟವನ್ನು ನೆನಪಿಸಿಕೊಂಡಿದ್ಧಾರೆ. ‘ಬಾಲೇಖಾನರ ಸಿತಾರ್ ನುಡಿಸಾಣಿಕೆ ಗಾಯಕಿಗೆ ಆಪ್ತ. ಬಾಲೇಖಾನ್ ಸಿತಾರ್ ಎಂದರೆ ಭಾವಪ್ರಧಾನ. ಸ್ವರ ಮತ್ತು ರಾಗ ಶುದ್ಧತೆ. ಕೇಳಿದ ಯಾರಿಗೂ ರೋಮಾಂಚನ. ಈವತ್ತು ನಾವು ಕಿರಾಣಾ ಘರಾಣಾದ ಆಲಾಪಿ ಪದ್ಧತಿ ಏನಿದೆಯಲ್ಲ ಅದು ಬಾಲೇಖಾನರ ಸಿತಾರದಲ್ಲಿ ಕಾಣುತ್ತಿದ್ದೆವು. ಲಯಕಾರಿ, ತಿಹಾಯಿ, ಚಮತ್ಕಾರಿ ಎಲ್ಲರೂ ನುಡಿಸುತ್ತಾರೆ. ಆದರೆ ಆಲಾಪೀ? ಆಲಾಪದ ಭಾಗ, ಮೀಂಡ್ನ ಕೆಲಸ? ಹೀಗೆ ಮಾತನಾಡುತ್ತಲೇ ನನಗೀಗ ನನ್ನ ಗುರು ಪಂ. ಭೀಮಸೇನ್ ಜೋಶಿ ನೆನಪಾಗುತ್ತಿದ್ದಾರೆ. ಈ ಇಬ್ಬರೂ ಮಹನೀಯರು ಯೋಚಿಸುತ್ತ ನುಡಿಸುತ್ತಿದ್ದದ್ದು ಹಾಡುತ್ತಿದ್ದದ್ದು. ಅದಕ್ಕೇ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.’
ಇದನ್ನೂ ಓದಿ : ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವ; ಧಾರವಾಡದಲ್ಲಿ ಅಕ್ಟೋಬರ್ 9 ರಿಂದ 2 ದಿನಗಳ ಸಂಗೀತೋತ್ಸವ
‘ಬಾಲೇಖಾನ್ ಅವರನ್ನು ಧಾರವಾಡದಲ್ಲಿ ಚಿಕ್ಕಂದಿನಿಂದಲೂ ಬಲ್ಲೆ. ಮುಸ್ಲಿಂ, ಹಿಂದೂ ಹಬ್ಬಗಳಲ್ಲಿ ನಾವು ಪರಸ್ಪರ ಭಾಗಿಯಾಗುತ್ತ ಬೆಳೆದೆವು. ಸಂಗೀತಕ್ಕೆ ಇದೆಲ್ಲ ಬಾರಾಖೂನ್ ಮಾಫ್. ಇಡೀ ಜಗತ್ತಿನ ತುಂಬಾ ಸಿತಾರ್ ನುಡಿಸುವವರು ಇದ್ದಾರೆ. ಆದರೆ ಬಾಲೇಖಾನ್ ಅವರಂಥ ಯೋಚನಾಪ್ರಧಾನ ಪ್ರತಿಭಾನ್ವಿತ ಕಲಾವಿದರು ವಿರಳ. ನಮ್ಮ ಮನೆಯಲ್ಲಿ ಚಿದಂಬರ ಮಹಸ್ವಾಮಿಗಳ ಉತ್ಸವದಲ್ಲಿ ಎರಡೂವರೆತಾಸು ಮಧ್ಯರಾತ್ರಿತನಕ ನುಡಿಸಿದ್ದು ಇನ್ನೂ ಸ್ಮೃತಿಪಟಲದಲ್ಲಿದೆ. ಈ ಉತ್ಸವಕ್ಕೆ ಅಬ್ದುಲ್ ಕರೀಮ್ ಖಾನರೂ ಬಂದು ನುಡಿಸಿದ್ದು ನಮ್ಮೆಲ್ಲರ ಪುಣ್ಯ. ಮುಂದೆ ಉಸ್ಮಾನ್ ಖಾನ್ ಮತ್ತು ಬಾಲೇಖಾನ್ ಜುಗಲ್ ಬಂದಿ ಮಾಡಿದ್ದಂತೂ ಎಂದೂ ಮರೆಯದಂಥದ್ದು. ಜನ ಹುಚ್ಚೆದ್ದು ಕೇಳಿದ್ದರು.’
ಇದನ್ನೂ ಓದಿ : ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಜನ್ಮಶತಮಾನೋತ್ಸವ; ಭೀಮಪಲಾಸ್ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಂಗೀತಕಾಶಿ ಧಾರವಾಡ
ಧಾರವಾಡದ ಸೃಜನಾ ರಂಗಮಂದಿರಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ಶುರುವಾಗಲಿರುವ ಈ ಕಾರ್ಯಕ್ರಮಕ್ಕೆ ಭಾಷಾತಜ್ಞ ಡಾ. ದೇವಿ ಗಣೇಶ, ಧಾರವಾಡದ ಸಿತಾರ್ ರತ್ನ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಯಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ನಡೆಯಲಿರುವ ಸಂಗೀತೋತ್ಸವದಲ್ಲಿ ಪಂ. ವಿನಾಯಕ ತೊರವಿ, ಪಂ. ಎಂ. ವೆಂಕಟೇಶಕುಮಾರ್, ಉಸ್ತಾದ್ ಛೋಟೇ ರಹಮತ್ ಖಾನ್, ಡಾ. ಆರತಿ ಅಂಕಲೀಕರ್, ಉಸ್ತಾದ್ ರಫೀಕ್ ಖಾನ್, ಪಂ. ಶೈಲೇಶ್ ಭಾಗವತ್, ಉಸ್ತಾದ್ ಶಫೀಕ್ ಖಾನ್, ಪಂ. ಪ್ರವೀಣ ಗೋಡ್ಖಿಂಡಿ, ಉಸ್ತಾದ್ ರಾಯೀಸ್ ಖಾನ್, ಉಸ್ತಾದ್ ಮೊಹಿಸೀನ್ ಖಾನ್, ಪಂ. ಮಾನಸ್ ಕುಮಾರ್ ಭಾಗವಹಿಸಲಿದ್ದಾರೆ. ಇವರಿಗೆ ಸಹವಾದ್ಯದಲ್ಲಿ ಪಂ. ರಘುನಾಥ ನಾಕೋಡ್, ಶಾಂತಲಿಂಗ ದೇಸಾಯಿ, ನಿಸಾರ್ ಅಹಮ್ಮದ್, ಶ್ರೀಧರ್ ಮಾಂಡ್ರೆ, ಗುರುಪ್ರಸಾದ್ ಹೆಗಡೆ, ಉದಯ್ ಕುಲಕರ್ಣಿ, ಬಸವರಾಜ್ ಹಿರೇಮಠ, ದತ್ತಾತ್ರೇಯ ಜೋಶಿ ಇರುತ್ತಾರೆ.
Published On - 6:22 pm, Sat, 28 May 22