Award: ‘ನಮ್ಮೂರಿಗೆ ಬಾರದ ಸರ್ಕಾರಿ ಬಸ್ಸುಗಳೇ ಕಥೆ ಬರೆಯಲು ಪ್ರೇರಣೆ’ ಇಸ್ಮಾಯಿಲ್ ತಳಕಲ್

Ismail Talakal : ಇಂದು ಸಂಜೆ ಮಂಡ್ಯದಲ್ಲಿ 2021ನೇ ಸಾಲಿನ ‘ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ’ಯನ್ನು ಕಥೆಗಾರ ಇಸ್ಮಾಯಿಲ್ ತಳಕಲ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕಥಾಪ್ರಕಾರ ಅವರ ಕೈಹಿಡಿದಿದ್ದು ಹೇಗೆ ಎಂಬುದನ್ನಿಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ‘ಗುಲಾಬಿ’ ಕಥೆಯ ಆಯ್ದಭಾಗವೂ ಇಲ್ಲಿದೆ.

Award: ‘ನಮ್ಮೂರಿಗೆ ಬಾರದ ಸರ್ಕಾರಿ ಬಸ್ಸುಗಳೇ ಕಥೆ ಬರೆಯಲು ಪ್ರೇರಣೆ’ ಇಸ್ಮಾಯಿಲ್ ತಳಕಲ್
‘ಬೆತ್ತಲೆ ಸಂತ’ ಕಥಾಸಂಲನಕ್ಕೆ ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಭಾಜನರಾದ ಇಸ್ಮಾಯಿಲ್ ತಳಕಲ್
Follow us
ಶ್ರೀದೇವಿ ಕಳಸದ
|

Updated on:Jun 11, 2022 | 1:18 PM

Dr. Besagarahalli Ramanna Award : ನಮ್ಮ ಊರಿಗೆ ಆಗೊಂದು ಈಗೊಂದು ಬಂದುಹೋಗುವ ಬಸ್ಸುಗಳಲ್ಲಿಯೇ ನಾನು ಕಾಲೇಜಿಗೆ ಹೋಗಿ ಬರುತ್ತಿದ್ದೆ.‌ ಊರವರು ಬಸ್ಸುಗಳಿಗೆ ಕಾಯದೆ ಟೆಂಪೊ, ಜೀಪು, ಆಟೋಗಳಲ್ಲೇ ಪ್ರಯಾಣಿಸುತ್ತಿದ್ದರು. ಇದರ ಪರಿಣಾಮವಾಗಿ ಸರ್ಕಾರಿ ಬಸ್ಸುಗಳಿಗೆ ಆದಾಯ ಕಡಿಮೆಯಾಗಿ ಕೆಲವೊಂದು ಬಸ್ಸುಗಳು ನಮ್ಮ ಊರಿಗೆ ಬರುವುದು ನಿಲ್ಲಿಸಿದ್ದರಿಂದ ಇದರ ನೇರ ಪರಿಣಾಮ‌ ನನ್ನಂತಹ ಕಾಲೇಜು ವಿದ್ಯಾರ್ಥಿಗಳ ಮೇಲಾಗುತ್ತಿತ್ತು.‌ ಬಡತನದ ಹಿನ್ನಲೆಯವನಾದ ನಾನು ಮತ್ತು ನನ್ನ ಗೆಳೆಯರು ಬಸ್ ಪಾಸ್ ತೆಗೆಸಿದ್ದರಿಂದ ಒದ್ದಾಡುತ್ತಿದ್ದೆವು. ಏಕೆಂದರೆ, ಒಂದೆಡೆ ಖಾಸಗಿ ವಾಹನಗಳಲ್ಲಿ ಓಡಾಡಲು ಹಣವಿರುತ್ತಿರಲಿಲ್ಲ. ಇನ್ನೊಂದೆಡೆ ಬಸ್​ಸ್ಟ್ಯಾಂಡು ಕಾಯ್ದು ಹಸಿವೆಯ ಒದ್ದಾಟ. ಇದೆಲ್ಲದರಿಂದ ಪಾರಾಗಲು ನಾವೆಲ್ಲರೂ ಸೇರಿ ಖಾಸಗಿ ವಾಹನಗಳನ್ನು ಅಡ್ಡಗಟ್ಟಿ, ನ್ಯಾಯ ದೊರಕಿಸಿಕೊಡುವಂತೆ ಪ್ರತಿಭಟಿಸುತ್ತಿದ್ದೆವು. ಹೀಗೆ ಅಂದಿನ ಬಡತನ, ಹಸಿವು, ಆಕ್ರೋಶ, ಹೋರಾಟದ ಅಸ್ತ್ರಗಳಾಗಿ ಬದಲಾದವು. ಸಂವೇದನಾರಹಿತ ಸಮಾಜದ ವಿರುದ್ದ ಬಂಡಾಯವೇಳುತ್ತಿದ್ದ ಗುಣ ಮುಂದೆ ಬರವಣಿಗೆಯಲ್ಲಿಯೂ ಮುಂದುವರೆಯಿತು. ಬಂಡಾಯ ನನ್ನ ಅಂತಃಸತ್ವ ಅನ್ನಿಸಿತು. ಆಗ ತೀವ್ರ ಭಾವಸಂವೇದನೆಗಳನ್ನು ಅಭಿವ್ಯಕ್ತಿಸುವ ಮಾರ್ಗವಾಗಿ ಕಥಾಪ್ರಕಾರವನ್ನು ಕಂಡುಕೊಂಡೆ. ಇಸ್ಮಾಯಿಲ್ ತಳಕಲ್, ಕಥೆಗಾರ (Ismail Talakal)

‘ಗುಲಾಬಿ ಹೂವಿನ ಫ್ರಾಕು’ ಕಥೆಯ ಆಯ್ದ ಭಾಗ

ಮಾರ್ಕೆಟ್ಟಿನ ಇಕ್ಕೆಲಗಳಲ್ಲಿಯೂ ತಳ್ಳುವ ಬಂಡಿಗಳಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಾನುಗಳನ್ನೂ ಹೊಸ ಹೊಸ ಬಟ್ಟೆಗಳನ್ನೂ ಇತ್ತರ್, ಟೋಪಿ, ಖಜೂರ ಮುಂತಾದವುಗಳನ್ನು ವ್ಯಾಪಾರಸ್ಥರು ಕೂಗಿ ಕೂಗಿ ಮಾರಾಟ ಮಾಡುತ್ತಿದ್ದರೆ ಕೊಳ್ಳುವವರಿಂದ ಮಾರ್ಕೆಟ್ಟು ಗಿಜಿ ಗಿಜಿ ಎನ್ನುತ್ತಿತ್ತು. ಎರಡೂ ಬದಿಯ ಅಂಗಡಿಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರಿಂದ ಬಟ್ಟೆಯ ಅಂಗಡಿಗಳು ಝಗಮಗಿಸುತ್ತಿದ್ದವು. ಅಲ್ಲಿಯ ಸಂಜೆ ತಿಳಿ ಹಗಲಾಗಿ ಮಾರ್ಪಟ್ಟಿತ್ತು.

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ತಾಯಿಯ ಕೈ ಹಿಡಿದು ಹೊರಟಿದ್ದ ಹಸೀನಾಳಿಗೆ ಅಮ್ಮಿ ಯಾವ ಅಂಗಡೀಲಿ ಫ್ರಾಕು ಕೊಡಿಸಬಹುದೆಂದು ಯೋಚಿಸುತ್ತಿರುವಾಗಲೇ ಅಂಗಡಿಗಳ ಮುಂದೆ ಇಳಿ ಬಿಟ್ಟಿದ್ದ ಅವಳದೇ ಸೈಜಿರುವ ಬೇರೆ ಬೇರೆ ಡಿಸೈನಿನ ರಂಗು ರಂಗಾಗಿದ್ದ ಕಾಮನಬಿಲ್ಲಿನಂತಹ ತರಹೇವಾರಿ ಫ್ರಾಕುಗಳು ಕಣ್ಣು ಕುಕ್ಕುತ್ತಿದ್ದವು. ಒಂದು ಅಂಗಡಿಯ ಮುಂದೆ ಗೊಂಬೆಯೊಂದಕ್ಕೆ ಉಡಿಸಿದ್ದ ಫ್ರಾಕು ಅಪ್ಪ ಕೊಡಿಸಿದ್ದ ಫ್ರಾಕಿನಂತೆಯೆ ಇದ್ದುದ್ದರಿಂದ ಅದನ್ನು ಮತ್ತೆ ಮತ್ತೆ ತಿರುಗಿ ನೋಡುತ್ತಾ ಹೋಗುತ್ತಿದ್ದವಳಿಗೆ ಮೊನ್ನೆಯ ಘಟನೆ ನೆನಪಾಯ್ತು.

ಅಂದು ಸಂಜೆ ಹಸೀನಾ, ಗೂಟಕ್ಕೆ ಸಿಗಿಸಿದ್ದ ಬಟ್ಟೆಯ ಗಂಟು ಕೆಳಗಿಳಿಸಿ, ಹುಡುಕಿ ಅವಳಿಷ್ಟದ ಅಲ್ಲಿಷ್ಟು ಇಲ್ಲಿಷ್ಟು ಹರಿದಿದ್ದ ಗುಲಾಬಿ ಹೂಗಳಿರುವ ಫ್ರಾಕು ಸಿಕ್ಕ ತಕ್ಷಣ ಅದನ್ನಿಡಿದು ತಾನು ಹೆಂಗ ಕಾಣ್ತಿರಬಹುದು ಅನ್ನೋ ಕುತೂಹಲಕ್ಕ ನೆರಿಕೆಯಲ್ಲಿ ಸಿಗಿಸಿದ್ದ ಒಡೆದ ಕನ್ನಡಿ ಚೂರಿನ್ಯಾಗ ತನ್ನ ಪ್ರತಿಬಿಂಬ ನೋಡಿ, ಅದರಲ್ಲಿ ತಾನು ಛಲೋ ಕಾಣ್ತಿರೋದಕ್ಕ ಹಿಗ್ಗಾದಂಗಾಗಿ ಮಕದ ಮ್ಯಾಲ ನಗು ತುಂಬಿಕೊಂಡ್ಲು. ಗುಡಿಸಲೆಲ್ಲ ಹರಡಿಕೊಂಡಿದ್ದ ಡಿಮ್ಮು ಲೈಟಿನ ಬೆಳಕು ಆಕಿ ಮಕದಾಗ ಬಂದು ಕುಂತಂಗಾತು. ಹಸೀನಾ ರಂಜಾನ್ ಹಬ್ಬಕ್ಕ ಆ ಹರಿದ ಫ್ರಾಕೆ ಉಡಾಕ ಬಯಸ್ಯಾಳಂತ ಪರ್ವೀನ್‌ಗೆ ಅರ್ಥ ಆಗಿದ್ದರಿಂದ ಮನಸಿಗೆ ನೋವಾತು. ಅದೇ ಫ್ರಾಕಿನಲ್ಲಿ ಎರಡು ರಂಜಾನ್ ಕಳೆದವಳಿಗೆ ಈ ಸರ್ತಿನೂ ಅದೆ ಗತಿ ಅಂತ ಮಗಳಿಗೆ ಗೊತ್ತಾಯ್ತೋ ಏನೋ? “ಈ ಸಲ ವ್ಯಾಪಾರ ಛಲೋ ಆತು ಅಂದ್ರ ಹೊಸ ಫ್ರಾಕು ಕೊಡಿಸ್ತೀನಿ ಬಿಡು” ಅಂದಳು. ಅದು ಮಗಳ ಸಮಾಧಾನಕ್ಕೆ ಹೇಳಿದ್ದ ಮಾತೋ ಅಥವಾ ತಾನು ಈ ಸರ್ತಿ ದುಡಿತೀನಿ ಅನ್ನೋ ಧೈರ್ಯನೋ ಸ್ವತಃ ಅವಳಿಗೂ ಗೊತ್ತಾಗಲಿಲ್ಲ. ಆದರೆ ತಾಯಿಯ ಈ ಭರವಸೆ ನಿರೀಕ್ಷಿಸಿರದಿದ್ದ ಹಸೀನಾಳ ಕಣ್ಣಲ್ಲಿ ಮೂಡಿದ ಹೊಳಪು ಲೈಟಿನ ಬೆಳಕಿಗೆ ಸ್ಪರ್ಧೆ ಒಡ್ಡುವಂತಿತ್ತು.

ಇದನ್ನೂ ಓದಿ : Award : ನಾಗರಾಜ ಕೋರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ

ಹಾಗೆ ಹಸೀನಾ ಬಟ್ಟೆ ತಡಕಾಡುವಾಗ ರಫೀಕನ ಫೋಟೊ ಕಣ್ಣಿಗೆ ಬಿದ್ದಿದ್ದರಿಂದ “ಅಮ್ಮಿ, ಇಲ್ನೋಡು, ಅಬ್ಬ” ಎಂದು ತಾಯಿಗೆ ತೋರಿಸಿ ಫೋಟೊಕ್ಕೊಂದು ಮುತ್ತು ಕೊಟ್ಟಳು. ಗಂಡ ರಫೀಕ್ ಇಲ್ಲದ ನೋವನ್ನು ಪರ್ವೀನ್ ಕಣ್ಣುಗಳಲ್ಲಿ ತೋರಿಸುತ್ತಿರಲಿಲ್ಲವಷ್ಟೆ. ಎದೆಯಲ್ಲಾ ಅವನದ್ದೆ ಕೊರಗು ಮೀಟಾಕತ್ತಿತ್ತು. ಮಗಳು ಫೋಟೊ ತೋರಿಸಿದಾಗ ಸುಮ್ಮನೆ ನಕ್ಕಳು. ಮರುಕ್ಷಣ ಲೈಟಿನ ಬಟನ್ನಿನ ಸದ್ದಾಗಿ ಕರೆಂಟು ಹೋದಂತಾಗಿ ಗುಡಿಸಲ್ಲೆಲ್ಲ ಕತ್ತಲಾವರಿಸಿತು. ಪರ್ವೀನ್ ಬಿಕ್ಕಿ ಬಿಕ್ಕಿ ಅಳುವ ಸದ್ದು ಕತ್ತಲಿನಷ್ಟೆ ಮೌನವಾಗಿತ್ತು. ಅತ್ತಾದ ಮೇಲೆ ಬಟನ್ನಿನ ಸದ್ದಿನೊಂದಿಗೆ ಮತ್ತೆ ಕರೆಂಟು ಬಂತು. ಹೀಗೆ ಮಗಳು ಅಪ್ಪನ ಫೋಟೊವನ್ನು ತಾಯಿಗೆ ತೋರಿಸಿದಾಗಲೆಲ್ಲ ಕರೆಂಟು ಹೋಗಿ ಬಂದು ಮಾಡುವುದು ಮಾಮೂಲು. ನಡುವೆ ಒಂದಿಷ್ಟು ಅಳುವ ಸದ್ದು ಹಸೀನಾಗಾದರೂ ಹೇಗೆ ಗೊತ್ತಾಗಬೇಕು? ಅಪ್ಪ ಕೊಡಿಸಿದ್ದ ಆ ಫ್ರಾಕು ಹಿಡಿದು ತುಂಬಾ ಹೊತ್ತು ಕನ್ನಡಿ ಮುಂದೆ ನಿಂತೆ ಇದ್ದಳು. * “ಅಮ್ಮಿ, ಹೊಸ ಫ್ರಾಕು ಯಾವ ಅಂಗಡ್ಯಾಗ ಕೊಡಿಸ್ತಿ?” ಎಲ್ಲಾ ಬಟ್ಟೆ ಅಂಗಡಿಗಳನ್ನೂ ಪರ್ವೀನ್ ದಾಟಿ ದಾಟಿ ಮುಂದೆ ಹೋಗುತ್ತಿದ್ದರಿಂದ ಅನುಮಾನಗೊಂಡ ಹಸೀನಾ ಕೇಳಿದಳು. ತೋಯಿಸಿಕೊಂಡ ಕಣ್ಣುಗಳಿಂದ ಮಗಳ ಮುಖ ನೋಡಲಾಗದೇ ಎದೆ ಕಲ್ಲು ಮಾಡಿಕೊಂಡು ಪರ್ವೀನ್ ನಡೆಯುತ್ತಲೆ ಇದ್ದಳು. ತಾಯಿಯಿಂದ ಯಾವ ಪ್ರತಿಕ್ರಿಯೆಯೂ ಬರದೆ ಇದ್ದುದ್ದರಿಂದ, ಹಸೀನಾ ಒಮ್ಮೆ ತಾಯಿಯನ್ನು ಮತ್ತೊಮ್ಮೆ ತಮ್ಮಿಂದ ದೂರ ದೂರ ಸಾಗುತ್ತಿದ್ದ ಬಟ್ಟೆ ಅಂಗಡಿಗಳನ್ನೂ ಪದೆ ಪದೆ ತಿರುಗಿ ತಿರುಗಿ ನೋಡುವುದು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ

ರಂಜಾನ್ ಶುರು ಆಗಿದ್ದರಿಂದ ಪರ್ವೀನ್, ದಿನವೂ ಬಜಿ ಮಾಡಿ ಪುಟ್ಟಿಯಲ್ಲಿ ತುಂಬಿ ಮಗಳನ್ನು ಒಂದು ಮಸೀದಿಗೆ ಕಳುಹಿಸಿದರೆ ತಾನೊಂದು ಮಸೀದಿಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರುವುದು ನಡಿದಿತ್ತು. ಹಸೀನಾ ಬಜಿ ಮಾರಲು ಮಸೀದಿಯ ಹತ್ತಿರ ಹೋದಾಗಲೇ ಗೊತ್ತಾಗಿದ್ದು ಅಲ್ಲಿ ತನ್ನಂಗೆ ಸಾಕಷ್ಟು ಜನ ಬಜಿ, ಪಕೋಡ, ಸಮೋಸ, ಇಡ್ಲಿ, ದೋಸೆ ಮಾಡ್ಕೊಂಡು ವ್ಯಾಪಾರಕ್ಕೆ ನಿಂತಿರುತ್ತಾರೆ ಎಂದು. ಅವರನ್ನು ನೋಡಿದಾಗ ಅವಳ ಕಣ್ಣುಗಳಲ್ಲಿಯ ಬೆಳಕಿಗೆ ಬೆಂಕಿ ಬಿದ್ದಂಗಾಗಿತ್ತು. ಗಿರಾಕಿ ಇವರೆಲ್ಲರನ್ನೂ ದಾಟಿ ತನ್ನ ಹತ್ರ ಬಂದು ಬಜಿ ತಗೋಳ್ತಾನ ಅನ್ನೊ ನಂಬಿಕಿ ಅವಳಿಗೇನು ಉಳಿಲಿಲ್ಲ. ತನ್ನ ಬಜಿಯ ಮೇಲೆ ಹಾರಾಡುತ್ತಿದ್ದ ನೊಣಗಳನ್ನು ಓಡಿಸುತ್ತಾ “ಬಜಿ ಬಜಿ ಹತ್ತು ರೂಪಾಯಿಗೆ ನಾಲ್ಕು ಬಜಿ” ಅಂತ ಕೂಗುತ್ತ ಮಸೀದಿಗೆ ಇಫ್ತಾರ್‌ಗೆ ಬರುತ್ತಿದ್ದವರ ಹತ್ತಿರ ಇತರ ಮಕ್ಕಳಂತೆ ತಾನೂ ಓಡಿ ಅವರು ಖರೀದಿಸುತ್ತಾರೋ ಏನೋ ಎಂದು ಬಜಿಯ ಪುಟ್ಟಿಯನ್ನು ಅವರ ಮುಂದಿಡುತ್ತಿದ್ದಳು. ಬೆರಳೆಣಿಕೆಯಷ್ಟು ಜನ ಖರೀದಿಸಿದರೆ ಬಹಳಷ್ಟು ಮಂದಿ ಬೇಡ ಅಂತ ಹೋದಾಗ ಅವಳ ಕಣ್ಣುಗಳಲ್ಲಿಯ ಅಸಹಾಯಕತೆ ಹನಿಗಟ್ಟುತ್ತಿತ್ತು. ಪರ್ವೀನ್‌ಳ ವ್ಯಾಪಾರವೂ ಇದಕ್ಕೆ ವಿರುದ್ಧವೇನೂ ಆಗಿರಲಿಲ್ಲ.

Published On - 1:17 pm, Sat, 11 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್