- Kannada News Photo gallery Cricket photos IPL 2025 Resumes: Mayank Yadav Injured, Lucknow Giants Sign Will O'Rourke
IPL 2025: ಐಪಿಎಲ್ನಿಂದ ಮತ್ತೆ ಹೊರಬಿದ್ದ ಮಯಾಂಕ್ ಯಾದವ್; ಬದಲಿ ಆಟಗಾರನ ಸೇರ್ಪಡೆ
IPL 2025: ಐಪಿಎಲ್ 2025 ಮೇ 17 ರಿಂದ ಪುನರಾರಂಭವಾಗಲಿದೆ. ಲಕ್ನೋ ಸೂಪರ್ ಜೈಂಟ್ಸ್‌ನ ವೇಗಿ ಮಯಾಂಕ್ ಯಾದವ್ ಗಾಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ವಿಲ್ ಒ'ರೂರ್ಕ್ ಅವರನ್ನು ತಂಡ ಸೇರಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ ತಮ್ಮ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಿವೆ.
Updated on: May 15, 2025 | 9:25 PM

ಐಪಿಎಲ್ 2025 ರ ಉಳಿದ 17 ಪಂದ್ಯಗಳು ಮೇ 17 ರ ಶನಿವಾರದಿಂದ ಪ್ರಾರಂಭವಾಗಲಿವೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಮೇ 9 ರಂದು ಬಿಸಿಸಿಐ ಪಂದ್ಯಾವಳಿಯನ್ನು ಹಠಾತ್ತನೆ ಮುಂದೂಡಿತು. ಈಗ ಪಂದ್ಯಾವಳಿ ಮತ್ತೆ ಪ್ರಾರಂಭವಾಗುತ್ತಿದೆ ಆದರೆ ಬಹುತೇಕ ಪ್ರತಿಯೊಂದು ತಂಡವು ವಿಭಿನ್ನ ಕಾರಣಗಳಿಂದಾಗಿ ಬದಲಾವಣೆಗಳನ್ನು ಮಾಡಬೇಕಾಗಿದೆ.

ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಯುವ ವೇಗಿ ಮಯಾಂಕ್ ಯಾದವ್ ಮತ್ತೆ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವುದರಿಂದ ಭಾರಿ ಹಿನ್ನಡೆ ಅನುಭವಿಸಿದೆ. ಇತ್ತೀಚೆಗಷ್ಟೇ ಇಂಜುರಿಯಿಂದ ಚೇತರಿಸಿಕೊಂಡಿದ್ದ ಮಯಾಂಕ್ ಐಪಿಎಲ್‌ಗೆ ಎಂಟ್ರಿಕೊಟ್ಟಿದ್ದರು. ಆದರೀಗ ಅವರು ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.

ಪಂದ್ಯಾವಳಿ ಪುನರಾರಂಭಗೊಳ್ಳುವ ಸುಮಾರು 48 ಗಂಟೆಗಳ ಮೊದಲು, ಮೇ 15 ರ ಗುರುವಾರ ಐಪಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಇದರ ಪ್ರಕಾರ, ಬಲಗೈ ವೇಗದ ಬೌಲರ್ ಮಯಾಂಕ್ ಯಾದವ್ ಬೆನ್ನುನೋವಿನಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಮೇಲೆ ಹೇಳಿದಂತೆ ಮಯಾಂಕ್ ಗಾಯಕ್ಕೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಅವರು ಕೇವಲ 4 ಪಂದ್ಯಗಳನ್ನು ಆಡಿದ ನಂತರ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಅವರು ಇಡೀ ಟೂರ್ನಿಯಿಂದ ಹೊರಗುಳಿದಿದ್ದರು.

ಹೀಗಾಗಿ ಒಂದು ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಮಯಾಂಕ್, ಈ ಬಾರಿಯ ಐಪಿಎಲ್ ಆರಂಭವಾಗಿ ಸುಮಾರು ಪಂದ್ಯಗಳು ಮುಗಿದ ಬಳಿಕ ಲಕ್ನೋ ತಂಡವನ್ನು ಸೇರಿಕೊಂಡಿದ್ದರು. ಅಷ್ಟರಲ್ಲಾಗಲೇ ಲಕ್ನೋ ತಂಡ 9 ಪಂದ್ಯಗಳನ್ನು ಆಡಿ ಮುಗಿಸಿತ್ತು. ಆ ಬಳಿಕ ತಂಡ ಸೇರಿಕೊಂಡಿದ್ದ ಮಯಾಂಕ್ ಕೇವಲ 2 ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಗಾಯಗೊಂಡಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಈಗ ಮಯಾಂಕ್ ಬದಲಿಗೆ ನ್ಯೂಜಿಲೆಂಡ್‌ನ ಯುವ ವೇಗಿ ವಿಲ್ ಒ'ರೂರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಓ'ರೂರ್ಕ್ ಈ ಸೀಸನ್ನ ಉಳಿದ ಪಂದ್ಯಗಳಿಗೆ 3 ಕೋಟಿ ರೂ. ವೇತನ ಪಡೆಯಲಿದ್ದಾರೆ. ಇದು ಕಿವೀಸ್ ವೇಗಿಗೆ ಮೊದಲ ಐಪಿಎಲ್ ಆಗಲಿದೆ.

ಲಕ್ನೋ ಮಾತ್ರವಲ್ಲದೆ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ ಬದಲಿ ಆಟಗಾರರನ್ನು ಘೋಷಿಸಿವೆ. ಗುಜರಾತ್ ಟೈಟನ್ಸ್ ಜೋಸ್ ಬಟ್ಲರ್ ಬದಲಿಗೆ ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಅವರನ್ನು 75 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ.

ಹಾಗೆಯೇ ಪಂಜಾಬ್ ಕಿಂಗ್ಸ್ ಗಾಯಗೊಂಡ ವೇಗಿ ಲಾಕಿ ಫರ್ಗುಸನ್ ಅವರ ಬದಲಿಯಾಗಿ ಮತ್ತೊಬ್ಬ ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು 2 ಕೋಟಿ ರೂಗೆ ತಂಡಕ್ಕೆ ಸೇರಿಸಿಕೊಂಡಿದೆ. ಜೇಮೀಸನ್ 4 ವರ್ಷಗಳ ನಂತರ ಐಪಿಎಲ್‌ಗೆ ಮರಳುತ್ತಿದ್ದಾರೆ. ಇದಕ್ಕೂ ಮೊದಲು, ಅವರು 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.









