Translated Story: ನೆರೆನಾಡ ನುಡಿಯೊಳಗಾಡಿ; ‘ನಿನ್ನ ಹೊಸ ತಾಯಿ ಸತ್ತು ಹೋದಳು’

Story of Nayyar Masood : ಅವಳು ತನ್ನ ಕಾಲುಗಳನ್ನು ಮೆಲ್ಲನೆ ಅಲ್ಲಾಡಿಸಿದಾಗ ದೋಣಿ ಮೆಲ್ಲನೆ ತೇಲಿತು. ಈಗ ಅವಳ ಬೆನ್ನು ನಮ್ಮ ಕಡೆ ಇತ್ತು. ನಾನು ಮೊದಲ ಸಲ ರ‍್ಯಾಳನ್ನು ಮೇಲಿಂದ ಕೆಳಗಿನವರೆಗೆ ಗಮನವಿಟ್ಟು ನೋಡಿದೆ.

Translated Story: ನೆರೆನಾಡ ನುಡಿಯೊಳಗಾಡಿ; ‘ನಿನ್ನ ಹೊಸ ತಾಯಿ ಸತ್ತು ಹೋದಳು'
ಉರ್ದು ಲೇಖಕ ನಯ್ಯರ್ ಮಸೂದ್ ಮತ್ತು ಅನುವಾದಕ ಅದೀಬ್ ಅಖ್ತರ್
Follow us
ಶ್ರೀದೇವಿ ಕಳಸದ
|

Updated on: Jul 01, 2022 | 11:49 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ರ‍್ಯಾ ಅಲ್ಲಿಂದ ಹೋದ ಕೂಡಲೇ ಜಹಾಜ್ ಹಳೆ ಕಥೆಯೊಂದನ್ನು ಆರಂಭಿಸಿದ. ದೊಡ್ಡ ದೋಣಿ ಬೀಬೀಯ ಪಾಲಿಗೆ ಅವಳ ಪೂರ್ವಜರಿಂದ ಬಂದಿದ್ದು. ಆ ದೋಣಿ ಎಷ್ಟೋ ಕಾಲದಿಂದ ಸರೋವರದ ಮಧ್ಯದಲ್ಲಿ ತೇಲುತ್ತಿತ್ತು. ಬೀಬಿ ಸಹ ಈ ಹಿಂದೆ ಎಲ್ಲೋ ದೂರದಲ್ಲಿರುತ್ತಿದ್ದಳು. ಅವಳ ಗಂಡ ಅವನು ಬಂಡುಕೋರನೋ ಅಥವಾ ಇನ್ನೇನೋ, ಆಗಾಗ ಅವಳನ್ನು ಭೇಟಿ ಮಾಡಲು, ಯಾರಿಗೂ ಸುಳಿವು ಸಿಗದಂತೆ ಬರುತ್ತಿದ್ದ. ರ‍್ಯಾ ಹುಟ್ಟುವ ಸಮಯದಲ್ಲಿ ಅವನು ದಾದಿಯೊಬ್ಬಳನ್ನು ಕರೆದುಕೊಂಡು ಬಂದು ಅವಳನ್ನು ಮತ್ತು ಬೀಬಿಯನ್ನು ದೋಣಿಯೊಳಗೆ ಸೇರಿಸಿಬಿಟ್ಟ. ಹೆರಿಗೆಯ ಸಮಯದಲ್ಲಿ ಬೀಬಿ ಚೀರಾಡುತ್ತಿರುವುದನ್ನು ಜಹಾಜ್ ದೂರದಿಂದ ಕೇಳುತ್ತಿದ್ದ. ಆಮೇಲೆ ಇದ್ದಕ್ಕಿದ್ದಂತೆ ಚೀರಾಟಗಳ ಧ್ವನಿಯೇ ಬದಲಾಗಿ ಹೋಯಿತು. ಸರ್ಕಾರದ ಜನ ಅಲ್ಲಿ ತಲುಪಿದರು. ಅವರು ಬೀಬಿಗೆ ಅವಳ ಗಂಡನ ಬಗ್ಗೆ ವಿಚಾರಿಸಿದರು. ಅವಳು ಬಾಯಿ ಬಿಡದಿದ್ದಾಗ ಅವಳನ್ನು ನೀರಿಗೆ ತಳ್ಳಿ ನೀರಲ್ಲಿ ಮುಳುಗು ಹಾಕಿಸತೊಡಗಿದರು. ಇಂಥ ಸಂದರ್ಭದಲ್ಲೆ ರ‍್ಯಾ ನೀರಲ್ಲಿ ಜನ್ಮ ಪಡೆದದ್ದು. ಬೀಬಿಯ ಬಾಯಿಂದ ಗುಳ್ಳೆಗಳು ಬರುತಿದ್ದವು. ಈ ಗುಳ್ಳೆಗಳ ನಡುವೆ ನೀರಿನಲ್ಲಿ ಪುಟ್ಟದಾದ ರ‍್ಯಾಳ ತಲೆ ಕಾಣಿಸಿಕೊಂಡಿತು. ಆಮೇಲೆ ಅವಳು ಅಳುವುದು ಕೇಳಿಸಿತು.

ಕಥೆ : ಶೀಷಾ ಘಾಟ್ | ಮೂಲ : ನಯ್ಯರ್ ಮಸೂದ್ | ಕನ್ನಡಕ್ಕೆ : ಅದೀಬ್ ಅಖ್ತರ್ | ಸೌಜನ್ಯ : ದೇಶಕಾಲ 

(ಭಾಗ 3)

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ಇಷ್ಟೊಂದು ಹಿಂಸೆ ನೀಡಿದರೂ ಬೀಬಿ ಬಾಯಿ ಬಿಡದಿರುವುದನ್ನು ನೋಡಿ ಸರ್ಕಾರದ ಜನ ಅವಳು ಸುಳ್ಳು ಹೇಳುತ್ತಿಲ್ಲ ಎಂದು ಅಲ್ಲಿಂದ ಹೊರಟುಹೋದರು. ಆದರೂ ಅವರು ಹೊಂಚು ಹಾಕಿಯೇ ಇದ್ದರು. ಅವರ ನಂಬಿಕೆಯಂತೆ ಒಂದು ದಿನ ರ‍್ಯಾಳ ಅಪ್ಪ ದಡಕ್ಕೆ ಬಂದ. ಅವನು ದೋಣಿಯ ಮೇಲಿದ್ದಾಗಲೇ ಸರ್ಕಾರದ ಜನ ಅವನನ್ನು ಸುತ್ತಿಕೊಂಡರು. ಅವನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತ ಏಟು ತಿಂದು ಸರೋವರದಲ್ಲಿ ಬಿದ್ದುಕೊಂಡ. ಆಮೇಲೆ ಅದರಲ್ಲೆ ಮುಳುಗಿ ಹೋದ.

ಆ ದಿನದಿಂದ ಬೀಬಿ ದೊಡ್ಡ ದೋಣಿಯಲ್ಲಿ ವಾಸವಾಗಿದ್ದಾಳೆ, ಮತ್ತು ರ‍್ಯಾ ಚಿಕ್ಕ ದೋಣಿಯಲ್ಲಿರುತ್ತಾಳೆ. ಕೆಲವೊಮ್ಮೆ ಬೀಬಿ ಬೇರೆ ಬೇರೆ ಊರುಗಳಿಗೆ ಭೇಟಿ ನೀಡಲು ಹೋಗುತ್ತಾಳೆ. ಆದರೆ ಅವಳು ಇದುವರೆಗೆ ರ‍್ಯಾಳಿಗೆ ಭೂಮಿಯ ಮೇಲೆ ಇಳಿಯಲು ಅವಕಾಶ ನೀಡಿಲ್ಲ. ರ‍್ಯಾ ತನ್ನ ದೋಣಿಯಲ್ಲೆ ಇಡೀ ಸರೋವರದಲ್ಲಿ ಸುತ್ತಾಡುತ್ತಾಳೆ, ಇಲ್ಲವೇ ದೊಡ್ಡ ದೋಣಿಯಲ್ಲಿರುವ ತಾಯಿಯನ್ನು ಭೇಟಿ ಮಾಡಲು ಬರುತ್ತಾಳೆ. ಹೀಗೆಲ್ಲ ಬೀಬೀ ಯಾಕಾಗಿ ಮಾಡುತ್ತಾಳೆಂದು ಗೊತ್ತಿಲ್ಲ. ಬೀಬೀ ಏನಾದರೂ ಆಣೆ ಮಾಡಿಕೊಂಡಿದ್ದಾಳೆಯೇ? ಅಥವಾ ದೇವರಲ್ಲಿ ಹರಕೆ ಹೊತ್ತುಕೊಂಡಿದ್ದಾಳೆಯೇ? ರ‍್ಯಾ ಎಷ್ಟು ಕಾಲದವರೆಗೆ ಸರೋವರದ ಮೇಲೆಯೇ ಇರುತ್ತಾಳೆ. ಅವಳ ಪಾದಗಳು ಭೂಮಿಯನ್ನು ಸ್ಪರ್ಶಿಸುವುದಿಲ್ಲವೋ?

*

ಶೀಷಾ ಘಾಟ್‌ಗೆ ನಾನು ಬಂದು ಒಂದು ವರ್ಷವಾಗಿತ್ತು. ಈ ಅವಧಿಯಲ್ಲಿ ನಾನು ಸರೋವರದ ಮೇಲೆ ಸರಿದು ಹೋದ ಎಲ್ಲಾ ಋತುಗಳನ್ನು ನೋಡಿದೆ. ಹಾಗೆಯೇ ಪ್ರತಿಯೊಂದು ಋತುವಿನಲ್ಲಿ ರ‍್ಯಾಳ ದೋಣಿ ನೀರಿನ ಮೇಲೆ ಅಲೆಯುತ್ತಿರುವುದನ್ನು ಸಹ ಗಮನಿಸಿದೆ. ಇದರ ಹೊರತು ಅಲ್ಲಿ ಮನಸ್ಸಿಗೆ ನೆಮ್ಮದಿ ನೀಡುವಂಥದ್ದು ಇನ್ನೇನೂ ಇರಲಿಲ್ಲ.

ನನ್ನ ಬಿಡಾರದ ಹೊರಬಾಗಿಲು ಪಾಳು ಬಿದ್ದಿರುವ ಮೈದಾನದ ಕಡೆಯಿತ್ತು. ಅಲ್ಲಿ ಹತ್ತಿರದಲ್ಲೆ ಗಾಜು ತಯಾರಿಸುವವರ ಕೇರಿಗಳಿದ್ದವು. ಅದರಾಚೆ ಹೆಚ್ಚಿನ ಸಂಖ್ಯೆಗಳಲ್ಲಿ ಬೆಸ್ತರು ಸಹ ಇದ್ದರು. ಬೆಸ್ತರ ಕೇರಿಗಳಲ್ಲಿ ಮೀನು ಒಣ ಹಾಕುತ್ತಿದ್ದುದನ್ನು ನೋಡಿ ನಾನು ಆ ಕಡೆ ಹೋಗುತ್ತಿರಲಿಲ್ಲ. ಬೆಸ್ತರು ಯಾವಾಗಲೂ ಏನಾದರೊಂದು ಕೆಲಸದಲ್ಲಿ ಮಗ್ನರಾಗಿಯೇ ಇರುತ್ತಿದ್ದರು. ಯಾವ ರೀತಿ ನಾನು ಅವರಿಗೆ ಯಾವ ಪ್ರಯೋಜನಕ್ಕೆ ಬರುವುದಿಲ್ಲವೋ ಅದೇ ರೀತಿ ಅವರು ಸಹ ನನ್ನ ಯಾವ ಪ್ರಯೋಜನಕ್ಕೂ ಬರುವವರಲ್ಲ. ಮೈದಾನ ಈ ಕಡೆಯ ದಡಗಳಲ್ಲಿ ನಾವಿಕರು ಸಹ ಇದ್ದರು. ನಾನು ಜಹಾಜ್‌ನ ಮಗನೆಂದು ಸುದ್ದಿ ಹರಡಿ ಜನ ನನ್ನನ್ನು ಗುರುತಿಸುತ್ತಿದ್ದರು. ಪಾಳು ಮೈದಾನಗಳಲ್ಲಿ ಅಲೆಯುವ ಮತ್ತು ಅಲ್ಲಿನ ಕೆಲಸಕ್ಕೆ ಬಾರದಿರುವ ವಿಚಾರಗಳಲ್ಲಿ ಆಸಕ್ತಿ ಹೊಂದುವ ಗೋಜಿಗೆ ಹೋಗದೆ ಹೆಚ್ಚಿನ ಸಮಯವನ್ನು ನಾನು ಚಪ್ಪರದಡಿಯಲ್ಲಿ ಕಳೆಯುತ್ತಿದ್ದೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮುತ್ತೇ ಕೊಟ್ಟುಕೊಳ್ಳದೆ ನಾವಿಬ್ಬರೂ ಒಂದಾಗಿ ಕೂಡಿದ್ದೇವೆಯೇ?

ಮುದುಕನಾದ ಜಹಾಜ್ ಸಹ ತನ್ನ ಕೆಲಸ ಕಾರ್ಯಗಳಿಂದ ಮುಕ್ತಿ ಪಡೆದು, ಹೊಗೆಸೊಪ್ಪು ಸೇವಿಸುವ ಸಾಮಾನುಗಳನ್ನು ಹೊತ್ತುಕೊಂಡು ಅಲ್ಲೆ ಬಂದು ಬಿಡುತ್ತಿದ್ದ. ಇಲ್ಲಿ ಅವನು ನನಗೆ ಅನೇಕ ಕಥೆಗಳನ್ನು ಹೇಳಿದ. ಅವುಗಳ ಪೈಕಿ ಅನೇಕ ಕಥೆಗಳನ್ನು ನಾನು ನೆನಪಿನಲ್ಲಿ ಉಳಿಸಿಕೊಳ್ಳಬೇಕಾಗಿತ್ತು. ಆದರೆ ನನಗೆ ಯಾವ ಕಥೆಯನ್ನೂ ನೆನಪಿನಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನು ಹೇಳುವ ಕಥೆಯಲ್ಲಿ ನಾನು ಆಸಕ್ತಿ ತೆಗೆದುಕೊಳ್ಳದಿದ್ದರೆ ಅವನು ಕೋಪಿಸಿಕೊಳ್ಳುತ್ತಿದ್ದ. ಇಂಥ ಸಂದರ್ಭದಲ್ಲಿ ಅವನು ಆವೇಶಕ್ಕೊಳಗಾಗುತ್ತಿದ್ದ. ಆಮೇಲೆ ಅವನು ನಕಲಿ ಮಾಡುವ ತನ್ನ ಹಳೇ ಧಾಟಿಯಲ್ಲಿಯೂ ಕಥೆ ಹೇಳುವ ಪ್ರಯತ್ನ ಪಡುತ್ತಿದ್ದ. ಇಂಥ ಸಂದರ್ಭದಲ್ಲಿ ಅವನು ಹೆಚ್ಚಾಗಿ ಕೆಮ್ಮುತ್ತಿದ್ದ. ಇದರಿಂದಾಗಿ ಕಥೆಯು ತನ್ನ ಸ್ವಾರಸ್ಯವನ್ನು ಕಳೆದುಕೊಳ್ಳುತ್ತಿತ್ತು.

ಇಲ್ಲಿ ಬಂದ ಆರಂಭದಲ್ಲಿ ನಾನು ಶೀಷಾ ಘಾಟ್‌ನ್ನು ಪ್ರಪಂಚದ ಬೇರೆಯೇ ಒಂದು ಭಾಗ ಎಂದು ತಿಳಿದುಕೊಂಡಿದ್ದೆ. ಇಲ್ಲಿ ಜನರ ಸಂಚಾರವೇ ಇರುವುದಿಲ್ಲ, ಇದು ಯಾವಾಗೂ ಪಾಳು ಬಿದ್ದಿರುತ್ತದೆಯೆಂದು ತಿಳಿದುಕೊಂಡಿದ್ದೆ. ಅಪ್ಪನ ಮನೆಯಲ್ಲಿ ಜನರಿಂದ ಇಲ್ಲಿನ ವಿವರಣೆ ಕೇಳಿದ ಬಳಿಕ ಬೀಬಿ ಇಲ್ಲಿ ಯಾರಿಗೂ ಬರಲು ಅವಕಾಶ ನೀಡುವುದಿಲ್ಲವೆಂದೇ ಊಹಿಸಿಕೊಂಡಿದ್ದೆ. ಆದರೆ ಇಲ್ಲಿ ಬಂದ ನಂತರ ತಿಳಿದಿದ್ದೆಂದರೆ, ಕೆಲವು ವಿಶೇಷ ಸಂದರ್ಭದಲ್ಲಿ ಬೆಸ್ತರು ತಮ್ಮ ದೋಣಿಗಳಲ್ಲಿ ಬಲೆಗಳನ್ನು ತುಂಬಿಕೊಂಡು ಇಲ್ಲಿಗೆ ಬರುತ್ತಿದ್ದರು. ಒಮ್ಮೊಮ್ಮೆಯಂತು ಅವರು ಅಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಇಂಥ ಸಂದರ್ಭದಲ್ಲಿ ಅಲ್ಲಿ ನೀರಿನ ಮೇಲೆ ಸಂತೆಯ ವಾತಾವರಣ ನಿರ್ಮಾಣವಾಗುತ್ತಿತ್ತು. ಚಪ್ಪರದಲ್ಲಿ ಕುಳಿತು ನಾನು ಬೆಸ್ತರ ಕಡೆ ಗಮನ ಹರಿಸುತ್ತಿದ್ದೆ. ಅವರು ಪರಸ್ಪರ ಎತ್ತರವಾದ ಧ್ವನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಸಲಹೆ ಸಹ ನೀಡುತ್ತಿದ್ದರು.

ಬೆಸ್ತರ ಕೂಗಾಟದ ನಡುವೆ ರ‍್ಯಾ ನಗುತ್ತಿರುವುದು ಕೇಳಿ ಬರುತ್ತಿತ್ತು. ರ‍್ಯಾ ಅವರಿಗೆ ತುಂಬಾನೇ ಕಿರುಕುಳ ಕೊಡುತ್ತಿದ್ದಳೇನೋ, ಅದಕ್ಕೆ ಅವರು ಅವಳಿಗೆ ತಮ್ಮ ಕೆಲಸದಲ್ಲಿ ಅಡಚಣೆ ಕೊಡಬೇಡವೆಂದು ವಿನಂತಿಸಿಕೊಳ್ಳುತ್ತಿರುವುದು ಸಹ ಗಮನಕ್ಕೆ ಬರುತ್ತಿತ್ತು. ಇಂಥ ಸಂದರ್ಭದಲ್ಲಿ ಬೀಬೀ ದೋಣಿಯಿಂದಲೇ ಕೂಗಿ ರ‍್ಯಾಳಿಗೆ ‘ರ‍್ಯಾ ಅವರನ್ನು ಕೆಲಸ ಮಾಡಲು ಬಿಡು’ ಎನ್ನುವುದು ಕೇಳಿಬರುತ್ತಿತ್ತು. ಅಮ್ಮ ಬೆದರಿಸಿದರೂ ರ‍್ಯಾ ನಗುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಕೆಲವು ಸಂದರ್ಭದಲ್ಲಿ ರ‍್ಯಾ ಬೆಳಗ್ಗೆಯೇ ದಡದ ಸಮೀಪ ಬಂದು ದೋಣಿಯ ಮೇಲೆಯೇ ನಿಂತುಕೊಂಡು ಜಹಾಜ್ ಅಲ್ಲಿದ್ದರೆ ಅವನೊಂದಿಗೆ, ಅವನು ಇಲ್ಲದಿದ್ದರೆ ನನ್ನೊಂದಿಗೆ ಮಾತಾಡುತ್ತಿದ್ದಳು. ನನ್ನೊಂದಿಗೆ ಪುಟಾಣಿ ಮಕ್ಕಳಂತೆ ಅವಳು ಮಾತಾಡುತ್ತಿದ್ದಳು. ತನ್ನ ನಾಯಿ ಬೆಕ್ಕಿನ ಬಗ್ಗೆಯೇ ಹೆಚ್ಚಾಗಿ ವಿವರಿಸುತ್ತಿದ್ದಳು. ಹಾಗೆಯೇ ನಿನ್ನ ತಾಯಿ ತನ್ನನ್ನು ಎಷ್ಟು ಬಾರಿ ಗದರಿಸಿದಳೆಂದು ಸಹ ಲೆಕ್ಕ ಹಾಕಿ ಹೇಳುತ್ತಿದ್ದಳು. ಅವಳು ನನಗೆ ಏನಾದರೂ ಕೇಳಿದರೆ ನಾನು ಬಾಯಿ ತೆರೆಯಲು ಹೋದಾಗ ನನ್ನ ಬಾಯಿಂದ ಸರಿಯಾಗಿ ಮಾತಾಡಲು ಸಾಧ್ಯವಾಗದಿದ್ದುದನ್ನು ಗಮನಿಸಿ ಅವಳು ತುಂಬ ನಗುತ್ತಿದ್ದಳು. ನನ್ನೊಂದಿಗೆ ಮಾತುಕತೆ ನಡೆಸಿದ ನಂತರ ಅವಳು ಸರೋವರದಲ್ಲಿ ಅತಿ ದೂರ ಹೊರಟುಹೋಗುತ್ತಿದ್ದಳು. ಮಧ್ಯಾಹ್ನ ಬೀಬಿ ಕೂಗಿದಾಗ ಅವಳು ಬರುತ್ತಿದ್ದಳು. ಕೆಲವೊಮ್ಮೆ ಸಂಜೆಯಲ್ಲಿ ಅವಳು ಬಂದು ನನ್ನೊಂದಿಗೆ ಮಾತಾಡುತ್ತಿದ್ದಳು. ಅವಳು ಜಹಾಜ್‌ನನ್ನು ತುಂಬ ಹಾಸ್ಯ ಮಾಡುತ್ತಿದ್ದಳು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ

ಅವಳು ನನ್ನೊಂದಿಗೂ ಜಹಾಜ್‌ನ ಬಗ್ಗೆ ಏನಾದರೂ ಹೇಳುತ್ತಿದ್ದಳು. ಜಹಾಜ್ ಹಿಂದೊಮ್ಮೆ ಪೇಟೆ, ಸಂತೆಗಳಲ್ಲಿ ಜೋಕರ್‌ನಂತೆ ನಕಲಿ ಮಾಡುತ್ತಿದ್ದ ವಿಷಯ ಅವಳಿಗೆ ಗೊತ್ತಿರಲಿಲ್ಲ. ನಾನು ಅದೆಲ್ಲ ವಿವರಿಸಿದಾಗ ಅವಳು ವಿಶೇಷ ಆಸಕ್ತಿಯಿಂದ ಕೇಳುತ್ತಿದ್ದಳು. ಒಮ್ಮೆ ಹೀಗೆಯೇ ನಾನು ಅವಳಿಗೆ ಜಹಾಜ್‌ನ ಕಥೆ ಹೇಳುತ್ತಿರುವಾಗ ಜಹಾಜ್ ಅಲ್ಲೆ – ಹತ್ತಿರದಲ್ಲಿ ಹೊಗೆಸೊಪ್ಪು ಸೇವಿಸುತ್ತಿದ್ದ. ಆಮೇಲೆ ಅವನು ನಮ್ಮ ಹತ್ತಿರ ಬಂದು ತಾನು ಹೇಗೆ ನಕಲಿ ಮಾಡುತ್ತಿದ್ದೆನೆಂದು ನಕಲಿ ಮಾಡಿ ತೋರಿಸಿದ. ಇದನ್ನು ನೋಡಿ ರ‍್ಯಾ ದೋಣಿ ಮೇಲೆ ನಿಂತುಕೊಂಡು ಎಷ್ಟೊಂದು ನಕ್ಕಿದಳೆಂದರೆ ದೋಣಿಯೇ ಅಲುಗಾಡತೊಡಗಿತು. ಅದೇ ಸಮಯದಲ್ಲಿ ಜಹಾಜ್‌ಗೆ ಕೆಮ್ಮು ಬಂದು ಬಿಟ್ಟಿತು.

*

ಒಂದು ಸಂಜೆ ಅಪ್ಪ ಶೀಷಾ ಘಾಟ್‌ಗೆ ಬಂದ. ಕಳೆದ ಎಂಟು ವರ್ಷಗಳಲ್ಲಿ ಜಹಾಜ್ ಎಷ್ಟು ಮುದುಕನಾಗಿ ಹೋಗಿದ್ದನೋ ಅದಕ್ಕಿಂತ ಹೆಚ್ಚಾಗಿ ಅಪ್ಪ ಒಂದೇ ಒಂದು ವರ್ಷದಲ್ಲಿ ಮುದುಕನಾಗಿ ಹೋಗಿದ್ದ. ಅವನಿಂದ ಸರಿಯಾಗಿ ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ. ಅವನನ್ನು ಹಿಡಿದುಕೊಂಡು ಜಹಾಜ್ ಕರೆದುಕೊಂಡು ಬಂದ. ಅವನು ಬಂದು ಕೂಡಲೇ ನನ್ನನ್ನು ತಬ್ಬಿಕೊಂಡ. ಬಹಳ ಹೊತ್ತಿನವರೆಗೆ ತಬ್ಬಿಕೊಂಡಿಯೇ ಇದ್ದ. ಕೊನೆಗೆ ಜಹಾಜ್ ಅವನನ್ನು ನನ್ನಿಂದ ಬಿಡಿಸಿದ. ನನ್ನ ಕಡೆ ಮುಖ ಮಾಡಿ ಹೇಳಿದ. ‘ನಿನ್ನ ಹೊಸ ತಾಯಿ ಸತ್ತು ಹೋದಳು.’ ಇಷ್ಟನ್ನು ಹೇಳಿ ಅವನು ಕೆಮ್ಮತೊಡಗಿದ.

*

ಅಪ್ಪನೊಂದಿಗೆ ನನ್ನದು ಅಷ್ಟೇನು ಹೆಚ್ಚಾಗಿ ಮಾತುಕತೆ ನಡೆಯಲಿಲ್ಲ. ಅವನು ಬಂದ ಸ್ವಲ್ಪ ಹೊತ್ತಿನ ಬಳಿಕ ಜಹಾಜ್ ಅವನನ್ನು ಅಲ್ಲಿಂದ ಕರೆದುಕೊಂಡು ಎಲ್ಲೋ ಹೊರಟು ಹೋದ. ಆಮೇಲೆ ರಾತ್ರಿ ತಡವಾಗಿ ಅವನೊಬ್ಬನೇ ಬಂದ. ಆ ಸಮಯದಲ್ಲಿ ನಾನು ಹಾಸಿಗೆ ಮೇಲೆ ಬಿದ್ದುಕೊಂಡಿದ್ದೆ.

ಕೆಲವು ಸಮಯದವರೆಗೆ ಹೊಗೆಸೊಪ್ಪು ಸೇವಿಸಿದ ಬಳಿಕ ಅವನು ಮಲಗಿಕೊಂಡ. ಅಪ್ಪ ಇಷ್ಟೊಂದು ಬೇಗ ಯಾಕೆ ಮುದುಕನಾಗಿ ಹೋದನೆಂದು ನಾನು ಯೋಚಿಸುತ್ತಿರುವಾಗಲೇ ಹೊಸ ಅಮ್ಮನ ನೆನಪಾಯಿತು. ನಾನು ಮಾತಾಡುವುದನ್ನು ನೋಡುವುದಕ್ಕೆ ಮುನ್ನವೇ ಅವಳು ಮರಣ ಹೊಂದಿದ್ದಳು. ಬಹುಶಃ ಅವಳಿಗೆ ಹುಚ್ಚು ಸಹ ಹಿಡಿದಿರಲಿಲ್ಲವೆಂದೆನಿಸುತ್ತದೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’

ನಾನಿಲ್ಲಿ ಬಂದು ಒಂದು ವರ್ಷವೇ ಕಳೆದಿತ್ತು. ಇಲ್ಲಿ ಯಾವಾಗಲೂ ಹರಡಿಕೊಂಡಿರುವ ಮೌನದಿಂದ ನನಗೆ ಬೇಸರ ಉಂಟಾಗಿತ್ತು. ಬೆಸ್ತರ ಕೂಗಾಟ, ಗಾಜು ತಯಾರಿಸುವ ಕೇರಿಗಳಿಂದ ಬಹು ಮೆಲ್ಲನೆ ಬರುತ್ತಿರುವ ಧ್ವನಿಗಳಿಂದ ಇಲ್ಲಿನ ವಾತಾವರಣ ತುಂಬಿರುತ್ತದೆ ಎಂದೆನಿಸುತ್ತಿತ್ತು. ಸರೋವರದಿಂದ ನೀರಿನ ಹಕ್ಕಿಗಳ ಕಲರವ ಕೇಳಿ ಬರುತ್ತಿತ್ತು. ಆದರೆ ಆ ಕಡೆ ನಾನು ಗಮನ ನೀಡುತ್ತಿರಲಿಲ್ಲ. ನನಗಾಗಿ ಶೀಷಾ ಘಾಟ್ ನಿರ್ಮಾಣವಾಗಿದೆ, ನಾನು ಜನ್ಮ ಪಡೆದಿರುವುದೇ ಇಲ್ಲಿ ಇರುವುದಕ್ಕಾಗಿ, ಇಲ್ಲಿಯ ಹೊರತು ಇನ್ನೆಲ್ಲೂ ಹೋಗಬಾರದೆಂದು ನಾನು ನಿಶ್ಚಯಿಸಿಕೊಂಡೆ. ನನ್ನ ಈ ಹೊಸ ನಿರ್ಧಾರವನ್ನು ನಾಳೆ ಬೆಳಗ್ಗೆ ಜಹಾಜ್‌ಗೆ ತಿಳಿಸಬೇಕೆಂದು ನನಗೆ ನಾನೇ ಹೇಳಿಕೊಂಡು ಮಲಗಿಕೊಂಡೆ. ಮಾರನೆ ದಿನ ಜಹಾಜ್‌ನ ಕೆಮ್ಮಿನ ಶಬ್ದದಿಂದಾಗಿ ನಾನು ಎಚ್ಚರಗೊಂಡೆ. ಅದೇ ಸಮಯದಲ್ಲಿ ರ‍್ಯಾಳ ಧ್ವನಿ ಸಹ ಕೇಳಿ ಬಂತು. ಹೊರಗೆ ಅವರಿಬ್ಬರಲ್ಲಿ ಮಾತು ನಡೆಯುತ್ತಿತ್ತು. ಜಹಾಜ್ ಕುಳಿತಲ್ಲಿಂದ ರ‍್ಯಾಳ ದೋಣಿ ಸ್ವಲ್ಪ ದೂರದಲ್ಲಿತ್ತು. ಅದಕ್ಕಾಗಿಯೇ ಜಹಾಜ್ ಸ್ವಲ್ಪ ಎತ್ತರದ ಧ್ವನಿಯಲ್ಲಿ ಮಾತಾಡುತ್ತಿದ್ದ. ಮಾತಾಡುತ್ತ ಮಾತಾಡುತ್ತ ಅವನು ನಿರಂತರವಾಗಿ ಕೆಮ್ಮುತ್ತಿದ್ದ. ನಾನೆದ್ದು ಚಪ್ಪರದೆಡೆಗೆ ಬಂದೆ. ರ‍್ಯಾ ಎದುರಲ್ಲಿ ದೋಣಿಯ ನಡುವೆ ನಿಂತುಕೊಂಡಿದ್ದಳು. ಅವಳು ಜಹಾಜ್‌ನೊಂದಿಗೆ ಒಂದಿಷ್ಟು ಮಾತುಕತೆ ನಡೆಸಿದ ಬಳಿಕ ದೋಣಿಯ ಇನ್ನೊಂದು ತುದಿಯ ಕಡೆ ನಡೆದಳು. ಅವಳು ತನ್ನ ಕಾಲುಗಳನ್ನು ಮೆಲ್ಲನೆ ಅಲ್ಲಾಡಿಸಿದಾಗ ದೋಣಿ ಮೆಲ್ಲನೆ ತೇಲಿತು. ಈಗ ಅವಳ ಬೆನ್ನು ನಮ್ಮ ಕಡೆ ಇತ್ತು. ನಾನು ಮೊದಲ ಸಲ ರ‍್ಯಾಳನ್ನು ಮೇಲಿಂದ ಕೆಳಗಿನವರೆಗೆ ಗಮನವಿಟ್ಟು ನೋಡಿದೆ.

(ಮುಂದಿನ ಭಾಗಕ್ಕಾಗಿ  ನಿರೀಕ್ಷಿಸಿ)

ಈ ಕಥೆ ಎಲ್ಲಾ ಭಾಗಗಳು ಮತ್ತು ಇತರೇ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ