Translated Story: ನೆರೆನಾಡ ನುಡಿಯೊಳಗಾಡಿ; ಅದೀಬ್ ಅಖ್ತರ್ ಅನುವಾದಿಸಿದ ನಯ್ಯರ್ ಮಸೂದ್​ ಅವರ ‘ಶೀಷಾ ಘಾಟ್’

Story of Nayyar Masood : ನಾನು ಮೌನ ಧರಿಸಿಕೊಂಡು ಇನ್ನೇನು ಅವನು ಏನಾದರೂ ಕೇಳಬಹುದೆಂದು ಯೋಚಿಸಿ ಆ ಕ್ಷಣಗಳ ನಿರೀಕ್ಷೆಯಲ್ಲಿದ್ದಾಗ ಅಚಾನಕ್ಕಾಗಿ ಅವನು ಹೇಳಿದ, ‘ನಾಳಿದ್ದು ನಿನ್ನ ಹೊಸ ತಾಯಿ ಬರುತ್ತಿದ್ದಾಳೆ’. ನನಗೆ ಸಂತೋಷವಾಯಿತು.

Translated Story: ನೆರೆನಾಡ ನುಡಿಯೊಳಗಾಡಿ; ಅದೀಬ್ ಅಖ್ತರ್ ಅನುವಾದಿಸಿದ ನಯ್ಯರ್ ಮಸೂದ್​ ಅವರ ‘ಶೀಷಾ ಘಾಟ್’
ಉರ್ದು ಲೇಖಕ ನಯ್ಯರ್ ಮಸೂದ್ ಮತ್ತು ಅನುವಾದಕ ಅದೀಬ್ ಅಖ್ತರ್
ಶ್ರೀದೇವಿ ಕಳಸದ | Shridevi Kalasad

|

Jul 01, 2022 | 12:02 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನಯ್ಯರ್ ಮಸೂದ್ ಉರ್ದು ಸಾಹಿತ್ಯದಲ್ಲಿ ದೊಡ್ಡ ಹೆಸರು. ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಇವರು ಉತ್ತಮ ಅಭಿರುಚಿಗೆ ಹೆಸರಾದವರು. ಅವರ ಕಥೆಗಳಲ್ಲಿ ಕಾಣುವ ‘ವಿಚಿತ್ರ ವಾತಾವರಣ’ವನ್ನು ವಿಮರ್ಶಕರು ಗುರುತಿಸಿದ್ದಾರೆ. ಈ ಕುರಿತು ಮಸೂದ್  ಒಂದು ಸಂದರ್ಶನದಲ್ಲಿ, ‘ನನ್ನ ಕಥೆಗಳ ಆ ವಿಚಿತ್ರ ವಾತಾವರಣಕ್ಕೆ ಬಹುಶಃ ನನ್ನ ಯೋಚನೆಗಳ ಅಸ್ಪಷ್ಟತೆಯೂ ಕಾರಣವಿರಬಹುದು. ಇದೆಲ್ಲ ನನಗೆ ಹೊಳೆಯುವುದೇ ಅಸ್ಪಷ್ಟವಾಗಿ. ಹಾಗಾಗಿ ಅವುಗಳನ್ನು ಹೇಳಲು ಬಳಸುವ ಶಬ್ದಗಳಿಗೆ ಕನಸಿನ ಗುಣಗಳಿರಬೇಕಾದುದು ಅಗತ್ಯ. ಬಹುಶಃ ಈ ಕಾರಣದಿಂದ ನನ್ನ ಕತೆಗಳ ವಾತಾವರಣ ಅನ್ಯವೆಂದು ಅನಿಸುತ್ತದೆಯೋ ಏನೋ…’ ಎಂದಿದ್ದಾರೆ. ಕೇವಲ ಕೆಲವೇ ಕತೆಗಳನ್ನು ಹೊರತುಪಡಿಸಿ ಮಸೂದ್ ಕತೆಗಳ ಪಾತ್ರಗಳಿಗೆ ಹೆಸರುಗಳಿಲ್ಲ. ಅದು ಪಾತ್ರಗಳನ್ನು ಕಾಲದೇಶಗಳ ನಿರ್ದಿಷ್ಟತೆಯಿಂದ ಹೊರತುಪಡಿಸಲು ಮಾಡಿದ ಪ್ರಯತ್ನವೆಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಇಲ್ಲಿ ಪ್ರಕಟವಾಗಿರುವ ಶೀಷಾ ಘಾಟ್ ಕತೆಯಲ್ಲಿ ಅವರ ಬರವಣಿಗೆಯ ಅನೇಕ ಚಹರೆಗಳನ್ನು ಕಾಣಬಹುದು. ಕತೆಗಾರ ಅದೀಬ್ ಅಖ್ತರ್ ಉರ್ದು ಮಾಧ್ಯಮದಲ್ಲಿ ಓದಿ ಕನ್ನಡದಲ್ಲಿ ಬರವಣಿಗೆಯನ್ನು ಕೈಗೊಂಡವರು. ‘ಬಹುರೂಪಿ’ ಇವರ ಕಥಾಸಂಕಲನ. ಬಹು ಆಸ್ಥೆಯಿಂದ, ಈ ಕತೆಯನ್ನು ಉರ್ದುವಿನಿಂದ ಕನ್ನಡಕ್ಕೆ ತಂದಿದ್ದಾರೆ.

ಕಥೆ : ಶೀಷಾ ಘಾಟ್ | ಮೂಲ : ನಯ್ಯರ್ ಮಸೂದ್ | ಕನ್ನಡಕ್ಕೆ : ಅದೀಬ್ ಅಖ್ತರ್ | ಸೌಜನ್ಯ : ದೇಶಕಾಲ 

(ಭಾಗ 1)

ಎರಡು ವರ್ಷದವರೆಗೆ ತುಂಬಾ ಪ್ರೀತಿಯಿಂದ ತನ್ನ ಬಳಿ ಇರಿಸಿಕೊಂಡ ಬಳಿಕ ನನ್ನ ಸಾಕುತಂದೆ, ಅವನನ್ನು ನಾನು ಅಪ್ಪ ಎಂದೇ ಕರೆಯುತ್ತಿದ್ದೆ, ಕೊನೆಗೊಂದು ದಿನ ಕೈಚೆಲ್ಲಿ ನನಗಾಗಿ ಬೇರೆ ತಾಣವನ್ನು ಹುಡುಕಿದ. ಇದರಲ್ಲಿ ನನ್ನದಾಗಲೀ ಅವನದಾಗಲೀ ಯಾವ ತಪ್ಪೂ ಇರಲಿಲ್ಲ. ಅವನೊಂದಿಗೆ ಒಂದಿಷ್ಟು ದಿನ ನೆಮ್ಮದಿಯಿಂದ ಇದ್ದ ಬಳಿಕ ನಾನು ತೊದಲುವುದನ್ನು ಬಿಟ್ಟುಬಿಡಬಹುದೆಂದು ಅವನಿಗೂ ನನಗೂ ಸಂಪೂರ್ಣ ನಂಬಿಕೆಯಿತ್ತು. ಆದರೆ ಆದದ್ದು ಬೇರೆಯೇ. ನಾನು ತೊದಲುವುದನ್ನು ಮುಂದುವರಿಸಿಕೊಂಡೇ ಹೋದೆ. ಮನೆಯ ಹೊರಗೂ ನನ್ನನ್ನು ಕಿಚಾಯಿಸಬಹುದೆಂದು ನಾನು ಅಂದುಕೊಂಡಿರಲಿಲ್ಲ. ಅವನಿಗೂ ಹಾಗನ್ನಿಸಿರಲಿಲ್ಲ.

ಪೇಟೆಗಳಲ್ಲಿ ಜನ ನನ್ನ ಮಾತನ್ನು ಲಕ್ಷ್ಯವಿಟ್ಟು ಆಲಿಸುತ್ತಿದ್ದರು ನಿಜ. ಆದರೂ ನಾನು ಹೇಳುವ ಮಾತಿನಲ್ಲಿ ಹಾಸ್ಯದ ಅಂಶ ಇರಲಿ, ಇರದಿರಲಿ ಎಲ್ಲರೂ ನಗುತ್ತಿದ್ದರು. ಕೆಲವೇ ಕೆಲವು ದಿನಗಳಲ್ಲಿ ನನ್ನ ಸ್ಥಿತಿ ಯಾವ ಮಟ್ಟಕ್ಕೆ ತಲುಪಿತೆಂದರೆ, ಪೇಟೆಯ ಮಾತಿರಲಿ, ಮನೆಯಲ್ಲಿ ಸಹ ಏನಾದರೂ ಹೇಳುವ ಪ್ರಯತ್ನಪಟ್ಟರೆ ಶಬ್ದಗಳು, ತುಟಿಗೆ, ಹಲ್ಲಿಗೆ ಮತ್ತು ಮೆದುಳಿಗೆ ಅಪ್ಪಳಿಸಿ ಹಿಂತಿರುಗುತ್ತಿದ್ದದ್ದವು. ಸಮುದ್ರದ ಅಲೆಗಳು ತೀರವನ್ನು ಮುಟ್ಟಿ ಹಿಂತಿರುಗುವಂತೆ. ಆಮೇಲಾಮೇಲೆ ನನ್ನ ನಾಲಿಗೆಯಲ್ಲಿ ಗಂಟುಗಳು ಬಿದ್ದುಕೊಳ್ಳುತ್ತಿದ್ದವು, ಕತ್ತಿನ ನರಗಳು ಊದಿಕೊಳ್ಳುತ್ತಿದ್ದವು, ಗಂಟಲು ಮತ್ತು ಎದೆಯ ಮೇಲೆ ಹೆಚ್ಚಾಗುತ್ತಿರುವ ಒತ್ತಡದಿಂದ ಉಸಿರಾಟದಲ್ಲಿ ಅಡಚಣೆಯಾಗಿ ಇನ್ನೇನು ಸತ್ತೇ ಹೋಗುತ್ತೇನೆಂದೆನಿಸುತ್ತಿತ್ತು. ಅಂಥ ಸಂದರ್ಭದಲ್ಲಿ ವಿಧಿಯಿಲ್ಲದೆ ಮಾತನ್ನು ಮುಂದುವರಿಸಲಾಗದೆ ಅರ್ಧಕ್ಕೆ ನಿಲ್ಲಿಸಿ ಆಮೇಲೆ ಸ್ವಲ್ಪ ಸುಧಾರಿಸಿಕೊಂಡ ಬಳಿಕ ಮತ್ತೆ ಮಾತು ಆರಂಭಿಸುತ್ತಿದ್ದೆ. ಇದರಿಂದ ಅಪ್ಪನಿಗೆ ಕಿರಿಕಿರಿಯುಂಟಾಗಿ ಅವನು ಗದರಿಸುತ್ತಿದ್ದ.

ಇದನ್ನೂ ಓದಿ : Translated Story: ನೆರೆನಾಡ ನುಡಿಯೊಳಗಾಡಿ; ಮುಕುಂದ ಜೋಷಿ ಅನುವಾದಿಸಿದ ಹಿಂದಿ ಕಥೆ ‘ತಿರೀಛ’

‘ಇದುವರೆಗೆ ಹೇಳಿದ್ದನ್ನು ಕೇಳಿಸಿಕೊಂಡೆ. ಈಗ ಮುಂದುವರಿಸು.’

ಇಂತಹ ಸಂದರ್ಭದಲ್ಲಿ ಮಾತ್ರ ಅವನು ನನ್ನನ್ನು ಗದರಿಸುತ್ತಿದ್ದನೇ ಹೊರತು ಬೇರೆ ಹೊತ್ತಿನಲ್ಲಲ್ಲ. ಆದರೆ ಏನು ಮಾಡುವುದು, ನನಗೆ ಮಧ್ಯದಲ್ಲಿ ಮಾತು ಆರಂಭಿಸುವ ಅಭ್ಯಾಸವಿರಲಿಲ್ಲ. ಒಮ್ಮೊಮ್ಮೆ ಅವನು ಸಹನೆಯಿಂದ ಮಾತು ಆಲಿಸುತ್ತಿದ್ದ. ಕೆಲವೊಮ್ಮೆ ಕೈಯೆತ್ತಿ ‘ಆಯಿತು ನಿಲ್ಲಿಸು’ ಎನ್ನುತ್ತಿದ್ದ. ಮಾತನ್ನು ಅರ್ಧಕ್ಕೆ ನಿಲ್ಲಿಸುವ ಜಾಯಮಾನದವನು ನಾನಾಗಿರಲಿಲ್ಲ. ಇದರಿಂದ ನನಗೆ ತುಂಬಾ ಹಿಂಸೆಯಾಗುತ್ತಿತ್ತು ನಿಜ. ಆದರೆ ತೊದಲುತ್ತಿರುವ ನನ್ನನ್ನು ಒಂಟಿಯಾಗಿ ಬಿಟ್ಟು ಅವನು ಅಲ್ಲಿಂದ ಹೊರಟು ಹೋಗುತ್ತಿದ್ದ. ಅಂಥ ಸಂದರ್ಭದಲ್ಲಿ ನನ್ನನ್ನು ನೋಡಿದವರು ನನಗೆ ಹುಚ್ಚು ಹಿಡಿದಿರಬೇಕೆಂದು ಭಾವಿಸುವ ಅವಕಾಶವೇ ಹೆಚ್ಚಾಗಿತ್ತು.

ಪೇಟೆಗಳಲ್ಲಿ ಸುತ್ತಾಡುವ, ಹಾಗೆಯೇ ಜನರೊಂದಿಗೆ ಬೆರೆಯುವ ಅಭ್ಯಾಸ ಸಹ ನನಗಿತ್ತು. ನಾನಂತೂ ಸ್ವಚ್ಛವಾಗಿ ಮಾತಾಡುತ್ತಿರಲಿಲ್ಲ. ಆದರೆ ಈ ಕೊರತೆಯನ್ನು ಬೇರೆಯವರು ಮಾತಾಡುವುದನ್ನು ಗಮನವಿಟ್ಟು ಆಲಿಸುವ ಮೂಲಕ ಮತ್ತು ಅದನ್ನು ಮನಸ್ಸಿನಲ್ಲಿಯೆ ಮೆಲಕು ಹಾಕುವ ಮೂಲಕ ಮೀರಲು ಯತ್ನಿಸಿದೆ. ಈ ನಡುವೆ ಕೆಲವೊಮ್ಮೆ ತಾತ್ಕಾಲಿಕವಾಗಿ ನನ್ನ ನೆಮ್ಮದಿಯೇ ಹಾಳಾಗುತ್ತಿತ್ತು. ಆದರೆ ನಾನು ಅಲ್ಲಿ ಸಂತೋಷವಾಗಿ ಇದ್ದೆ. ಏಕೆಂದರೆ ಜನ ನನ್ನನ್ನು ಇಷ್ಟಪಡುತ್ತಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ಅಪ್ಪ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ. ನನ್ನ ಬೇಕು ಬೇಡದ ಬಗ್ಗೆ ಗಮನ ಹರಿಸುತ್ತಿದ್ದ.

ಇತ್ತೀಚೆಗೆ ಕೆಲವು ದಿನಗಳಿಂದ ಅಪ್ಪ ಯಾವುದೋ ಸಮಸ್ಯೆಕ್ಕೊಳಗಾಗಿರುವಂತೆ ಕಾಣುತ್ತಿದ್ದ. ಹೊಸ ಸಂಗತಿಯೆಂದರೆ, ಅವನು ನನ್ನೊಂದಿಗೆ ಬಹಳ ಸಮಯದವರೆಗೆ ಮಾತಾಡತೊಡಗಿದ ಮತ್ತು ಎಂತೆಂಥ ಪ್ರಶ್ನೆಗಳನ್ನು ಕೇಳುತ್ತಿದ್ದನೆಂದರೆ ಅವುಗಳಿಗೆ ಉತ್ತರಿಸಲು ನಾನು ಹೆಚ್ಚಿನ ಸಮಯದವರೆಗೆ ಮಾತಾಡಬೇಕಾಗುತ್ತಿತ್ತು. ಅವನು ತನ್ನ ಅಭ್ಯಾಸದಂತೆ ಮಾತಿನ ನಡುವೆ ಬೆದರಿಕೆ ಸಹ ಹಾಕುತ್ತಿರಲಿಲ್ಲ. ಗಮನವಿಟ್ಟು ಮಾತು ಕೇಳಿಸಿಕೊಳ್ಳುತ್ತಿದ್ದ. ಮಾತಾಡುತ್ತ ಮಾತಾಡುತ್ತ ಸಾಕಾಗಿ ನಾನು ಜೋರಾಗಿ ಉಸಿರಾಡತೊಡಗುತ್ತಿದ್ದೆ. ಆದರೂ ನಾನು ಮಾತು ಪೂರ್ತಿ ಮಾಡುವುದನ್ನೇ ಅವನು ಎದುರು ನೋಡುತ್ತಿದ್ದ. ನಾನು ಹೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಿದ್ದರೂ ಸಹ ಅವನು ಅಷ್ಟೇ ಗಮನದಿಂದ ಕೇಳಿಸಿಕೊಳ್ಳುತ್ತಿದ್ದ. ಎಲ್ಲಿ ಅವನು ಗದರಿಸುತ್ತಾನೋ ಎಂದು ಯೋಚಿಸಿಯೇ ನನ್ನ ನಾಲಿಗೆ ನುಲಿದುಕೊಳ್ಳುತ್ತಿತ್ತು. ನಾನು ಮಾತಾಡದೆ ಚಡಪಡಿಸುತ್ತಿದ್ದರೂ ಅವನು ಮೌನದಿಂದ ನನ್ನ ಕಡೆ ನೋಡುತ್ತಿದ್ದ.

ಮೂರು ದಿನಗಳ ನಂತರವೇ ನನ್ನ ನಾಲಿಗೆ ಸರಿಯಾಗಲು ಹಾಗೆಯೇ ಎದೆ ಮೇಲಿರುವ ಭಾರ ಕಡಿಮೆಯಾಗಲುತೊಡಗಿತು. ಎಲ್ಲರಂತೆ ನಾನೂ ಸ್ವಚ್ಛವಾಗಿ, ಸರಳವಾಗಿ ಮಾತಾಡುವ ದಿನಗಳ ಕನಸುಗಳನ್ನು ಕಾಣಲಾರಂಭಿಸಿದೆ. ಇದುವರೆಗೆ ಬೇರೆಯವರಿಗೆ ಹೇಳಲು ಸಾಧ್ಯವಾಗದಿರುವ ಮತ್ತು ಈಗ ಹೇಳಬೇಕೆಂದಿರುವ ವಿಷಯಗಳೆಲ್ಲವನ್ನು ಮನಸ್ಸಿನಲ್ಲಿ ಸಂಗ್ರಹಿಸಿತೊಡಗಿದೆ. ನಾಲ್ಕನೆಯ ದಿನ ಅಪ್ಪ ನನ್ನನ್ನು ಕರೆದು ಹತ್ತಿರ ಕೂರಿಸಿ ಒಂದಿಷ್ಟು ಹೊತ್ತಿನವರೆಗೆ ಕೆಲಸಕ್ಕೆ ಬಾರದಿರುವ ವಿಷಯಗಳನ್ನು ಹೇಳಿದ.

ನಾನು ಮೌನ ಧರಿಸಿಕೊಂಡು ಇನ್ನೇನು ಅವನು ಏನಾದರೂ ಕೇಳಬಹುದೆಂದು ಯೋಚಿಸಿ ಆ ಕ್ಷಣಗಳ ನಿರೀಕ್ಷೆಯಲ್ಲಿದ್ದಾಗ ಅಚಾನಕ್ಕಾಗಿ ಅವನು ಹೇಳಿದ ‘ನಾಳಿದ್ದು ನಿನ್ನ ಹೊಸ ತಾಯಿ ಬರುತ್ತಿದ್ದಾಳೆ’. ನನಗೆ ಸಂತೋಷವಾಯಿತು. ಅದನ್ನು ಅವನು ಗಮನಿಸಿದ. ಆಮೇಲೆ ಸ್ವಲ್ಪ ಚಿಂತೆಗೊಳಗಾಗಿ ಮೆಲ್ಲನೆ ಹೇಳಿದ. ‘ನೀನು ಮಾತಾಡುತ್ತಿರುವುದನ್ನು ನೋಡಿದರೆ ಅವಳಿಗೆ ಹುಚ್ಚು ಹಿಡಿದು ಸತ್ತೇ ಹೋಗುತ್ತಾಳೆ’. ಮಾರನೇ ದಿನ ಬೆಳಗ್ಗೆ ನನ್ನ ವಸ್ತುಗಳೆಲ್ಲವನ್ನು ಕಟ್ಟಲಾಗಿತ್ತು. ನಾನು ಏನಾದರೂ ಕೇಳುವುದಕ್ಕಿಂತ ಮೊದಲೇ ಅಪ್ಪ ನನ್ನ ಕೈಯನ್ನು ಹಿಡಿದುಕೊಂಡು ‘ನಡಿ’ ಎಂದ.

ಇದನ್ನೂ ಓದಿ : Translated Story: ನೆರೆನಾಡ ನುಡಿಯೊಳಗಾಡಿ; ನಾಗರೇಖಾ ಗಾಂವಕರ ಅನುವಾದಿಸಿದ ಚೆಕಾವ್ ಕಥೆ ‘ತುಂಟ ಹುಡುಗ’

*

ಪ್ರಯಾಣದ ಮಧ್ಯ ಅವನು ಏನನ್ನೂ ಹೇಳಲಿಲ್ಲ. ಆದರೆ ದಾರಿಯಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನು ವಿಚಾರಿಸಿದಕ್ಕೆ ‘ಇವನನ್ನು ಜಹಾಜ್ ಕರೆಸಿಕೊಂಡಿದ್ದಾನೆ’ ಎಂದು ಉತ್ತರಿಸಿದ. ಅನಂತರ ಅವರಿಬ್ಬರೂ ಜಹಾಜ್‌ನ ಬಗ್ಗೆ ಮಾತಾಡತೊಡಗಿದರು. ನನಗೂ ಸಹ ಜಹಾಜ್‌ನ ಬಗ್ಗೆ ಅಲ್ಪಸ್ವಲ್ಪ ನೆನಪಿತ್ತು. ನಾನು ಅಪ್ಪನ ಬಳಿ ಬಂದಂಥ ಸಂದರ್ಭದಲ್ಲಿ ಜಹಾಜ್ ಪೇಟೆಗಳಲ್ಲಿ, ಸಂತೆಗಳಲ್ಲಿ ಜೋಕರ್‌ನಂತೆ ನಕಲಿಗಳನ್ನು ಮಾಡಿ ಜೀವನ ಸಾಗಿಸಲು ಒಂದು ದಾರಿ ಹುಡುಕಿಕೊಂಡಿದ್ದ. ಅವನು ತನ್ನ ಬೆನ್ನಿನ ಹಿಂದೆ ಗುಲಾಬಿ ಬಣ್ಣದ ಪುಟ್ಟದಾದ ಹಾಯಿಪಟ ಕಟ್ಟಿಕೊಂಡಿರುತ್ತಿದ್ದ. ಇದರಿಂದಲೇ ಅವನನ್ನು ಜಹಾಜ್ ಎಂದು ಕರೆಯುತ್ತಿದ್ದಿರಬಹುದು ಅಥವಾ ಅವನು ತನ್ನ ಹೆಸರು ಜಹಾಜ್ ಎಂದಿದ್ದಕ್ಕೆ ಬೆನ್ನಿನ ಹಿಂದೆ ಹಾಯಿಪಟ ಕಟ್ಟಿಕೊಳ್ಳುತ್ತಿದ್ದರೂ ಇರಬಹುದು.

ಗಾಳಿ ಜೋರಾಗಿ ಬೀಸತೊಡಗಿದಾಗ ಗುಲಾಬಿ ಬಣ್ಣದ ಹಾಯಿಪಟ ಊದಿಕೊಳ್ಳುತ್ತಿತ್ತು. ಇಂಥ ಸಂದರ್ಭದಲ್ಲಿ ಹಾಯಿಪಟದ ಸಹಾಯದಿಂದಲೇ ತಾನು ಮುಂದೆ ಹೋಗುತ್ತಿದ್ದೆನೆಂಬ ಭ್ರಮೆಯನ್ನು ಜಹಾಜ್ ಹುಟ್ಟಿಸುತ್ತಿದ್ದ. ಬಿರುಗಾಳಿಯಲ್ಲಿ ಸಿಕ್ಕಿಕೊಂಡಿರುವ ಹಾಯಿಯ ನಕಲನ್ನು ಅವನು ಚೆನ್ನಾಗಿ ಮಾಡಿ ತೋರಿಸುತ್ತಿದ್ದ. ಗಾಳಿಯ ಆರ್ಭಟ, ಸಿಟ್ಟಾಗಿರುವ ಅಲೆಗಳ ಅಪ್ಪಳಿಸುವಿಕೆ, ಒಂದೇ ಸಮನೆ ತಿರುಗುತ್ತಿರುವ ಚಕ್ರತೀರ್ಥ, ಇವೆಲ್ಲವೂ ಸೇರಿ ನಿಜವಾಗಿಯೂ ಹಾಯಿಯನ್ನು ಮುಳುಗಿಸುವ ಹುನ್ನಾರು ನಡೆಸುತ್ತಿರುವಂತೆ ಭಾಸವಾಗುತ್ತಿತ್ತು. ಇದರ ಜತೆಜತೆಗೆ ಬಿರುಗಾಳಿಗೆ ಸಿಕ್ಕಿಕೊಂಡ, ಒಂದೇ ಸಮನೆ ಚಡಪಡಿಸುತ್ತಿರುವ ಹಾಯಿಪಟದ ಶಬ್ದವನ್ನು ಜಹಾಜ್ ತನ್ನ ಬಾಯಿಯಿಂದ ತೆಗೆಯುತ್ತಿದ್ದ. ಕೊನೆಗೆ ಹಾಯಿ ಮುಳುಗಿಯೇ ಹೋಗುತ್ತಿತ್ತು. ಈ ಆಟವು ಮಕ್ಕಳನ್ನೂ, ತುಸು ದೊಡ್ಡ ಹುಡುಗರನ್ನೂ ತುಂಬಾನೇ ರಂಜಿಸುತ್ತಿತ್ತು. ವೇಗವಾಗಿ ಗಾಳಿ ಬೀಸಿದಾಗ ಮಾತ್ರ ಅವನು ಇದೆಲ್ಲವನ್ನು ಮಾಡಿ ತೋರಿಸುತ್ತಿದ್ದ. ಗಾಳಿ ನಿಂತ ಕೂಡಲೇ ಪುಟಾಣಿ ಪ್ರೇಕ್ಷಕರು ಸಂತೋಷಗೊಂಡು ಇನ್ನಷ್ಟು ಜೋರಾಗಿ ಚೀರಾಡುತ್ತಿದ್ದರು.

‘ತಂಬಾಕು, ತಂಬಾಕು!’

ಜಹಾಜ್‌ನ ಹಾಗೆ ತಂಬಾಕು ಸೇದುವವರನ್ನು ನಾನು ನೋಡಿರಲಿಲ್ಲ. ತಂಬಾಕಿನಲ್ಲಿ ಎಷ್ಟೊಂದು ವಿಧಗಳಿವೆ ಮತ್ತು ಅದನ್ನು ಯಾವಯಾವ ರೀತಿ ಉಪಯೋಗಿಸಬಹುದು ಎಂಬುದೆಲ್ಲವನ್ನು ಅವನು ಅಭ್ಯಾಸ ಮಾಡಿಕೊಂಡಿದ್ದ. ಗಾಳಿ ಬೀಸದಿರುವಾಗ ಅವನು ಬಾಯಿಯಿಂದ ಹೊಗೆಯ ಅಲೆಗಳನ್ನು ಹೊರಹಾಕಿ ಎಂತೆಂಥ ಚಮತ್ಕಾರಗಳನ್ನು ತೋರಿಸುತ್ತಿದ್ದನೆಂದರೆ ಪ್ರೇಕ್ಷಕರಿಗೆ ತಮ್ಮ ಕಣ್ಣುಗಳನ್ನೇ ನಂಬುವುದು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಅವನು ಹೊಗೆಯ ಅಲೆಗಳನ್ನು ಹೊರಹಾಕಿ ನಾಲ್ಕಾರು ಹೆಜ್ಜೆ ಹಿಂದೆ ಸರಿದು ಕೊಳೆತು ಮಿದುವಾದ ಮಣ್ಣಿನಿಂದ ಮೂರ್ತಿ ರಚಿಸುವಂತೆ ನಟಿಸುತ್ತಿದ್ದ. ಹೊಗೆ ಯಾವುದಾದರೊಂದು ಮೂರ್ತಿಯ ರೂಪ ಧರಿಸಿ ಕೆಲವು ಕ್ಷಣಗಳವರೆಗೆ ಗಾಳಿಯಲ್ಲಿ ಅಲುಗಾಡದೆ ನಿಂತೇ ಇರುತ್ತಿತ್ತು. ಅವನು ಮಾಡುವ ಕೆಲವು ನಕಲಿಗಳು ಯಾವ ಮಟ್ಟಕ್ಕೆ ಇರುತ್ತಿದ್ದವೆಂದರೆ ಅವುಗಳನ್ನು ನೋಡುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ಸಣ್ಣ ಹುಡುಗರಿಗೆ ಅವಕಾಶವಿರಲಿಲ್ಲ. ಇಂಥ ಸಂದರ್ಭಗಳಲ್ಲಿ ಅವನು ಜನರಿಂದ ಸುತ್ತುವರೆದು ಮರೆಯಾಗಿ ನಿಲ್ಲುತ್ತಿದ್ದ. ದೂರದಿಂದ ನೋಡುವವರು ಹಾಯಿಪಟಗಳ ಹಾರಾಟದಿಂದ ಮತ್ತು ಪ್ರೇಕ್ಷಕರ ಚೀರಾಟದಿಂದ ಜಹಾಜ್ ನಕಲಿ ಮಾಡುತ್ತಿದ್ದಾನೆಂದು ತಿಳಿದುಕೊಳ್ಳುತ್ತಿದ್ದರು.

ಅಪ್ಪನ ಜತೆ ಇರಲು ನಾನು ಬಂದ ಮೊದಲನೆಯ ವರ್ಷದಲ್ಲೆ ಜಹಾಜ್‌ನ ಧ್ವನಿ ಪೆಟ್ಟಿಗೆ ಒಡೆದು ಹೋಗಿತ್ತು ಮತ್ತು ಅವನು ವಿಕಾರವಾಗಿ ಬೇರೆ ಕೆಮ್ಮುತ್ತಿದ್ದ. ಮೊದಲು ನಕಲಿ ಮಾಡುವಾಗ ಅವನು ಹೆಚ್ಚಾಗಿ ಮಾತಾಡುತ್ತಿದ್ದ. ಆದರೆ ಈಗ ಅವನು ಮಾತಾಡಲು ಪ್ರಾರಂಭಿಸಿದ ಕೂಡಲೇ ಕೆಮ್ಮಿನಿಂದಾಗಿ ಹೇಳಬೇಕಾಗಿರುವುದನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆ ಕೆಲವು ಸಂದರ್ಭದಲ್ಲಿ ಅವನು ಮಾತು ಪೂರ್ಣಗೊಳಿಸಲು ಹೆಚ್ಚು ಕಡಿಮೆ ನನ್ನಷ್ಟೆ ಸಮಯ ತೆಗೆದುಕೊಳ್ಳುತ್ತಿದ್ದ. ಅವನು ನಕಲಿ ಮಾಡುವುದನ್ನು ಮತ್ತು ನಮ್ಮೂರ ಕಡೆ ಬರುವುದನ್ನು ಸಹ ನಿಲ್ಲಿಸಿಬಿಟ್ಟಿದ್ದ. ಆರಂಭದ ಮೊದಲನೆಯ ವರ್ಷದ ನಂತರ ಅವನನ್ನು ನಾನು ನೋಡಿರಲಿಲ್ಲ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’

*

ನಮ್ಮ ರಸ್ತೆಯಲ್ಲಿ ದೊಡ್ಡ ಸರೋವರದ ಕಿನಾರೆಗಳಲ್ಲಿರುವ ಅನೇಕ ಊರುಗಳು ಹಾಗೂ ದಡಗಳು ಬಂದವು. ನಾವು ಭೇಟಿ ನೀಡಿದ ಎಲ್ಲಾ ಕಡೆಯೂ ಅಪ್ಪನನ್ನು ಬಲ್ಲವರು ಇದ್ದರು. ಅವರು ಕೇಳಲಿ ಕೇಳದಿರಲಿ ಅಪ್ಪ ಮಾತ್ರ ಎಲ್ಲರಿಗೂ ‘ಇವನನ್ನು ಜಹಾಜ್ ಕರೆಸಿಕೊಂಡಿದ್ದಾನೆ’ ಎಂದೇ ಹೇಳುತ್ತಿದ್ದ. ಅವನ ಮಾತಿನ ಅರ್ಥ ತಿಳಿಯದಿದ್ದರೂ ನಾನು ಕೇಳುವ ಗೋಜಿಗೆ ಹೋಗಲಿಲ್ಲ. ಅವನಿಂದ ದೂರವಿರಲು ನಾನು ಸಿದ್ಧನಿರಲಿಲ್ಲವಾದ್ದರಿಂದ ಅವನ ಬಗ್ಗೆಯೇ ಸಿಟ್ಟು ಬರತೊಡಗಿತ್ತು. ಅಪ್ಪ ಸಹ ಸಂತೋಷವಾಗಿರಲಿಲ್ಲ. ಅವನನ್ನು ನೋಡಿದರೆ ನಾಳೆಯ ದಿನ ಅವನು ಹೊಸ ಹೆಂಡತಿ ತರಲಿದ್ದಾನೆಂದು ಯಾರೂ ಹೇಳುವಂತಿರಲಿಲ್ಲ.

ಕೊನೆಗೆ ನಾವು ಕೊಳೆಕೊಳೆಯಾದ ಒಂದು ಕುಗ್ರಾಮಕ್ಕೆ ತಲುಪಿದೆವು. ಇಲ್ಲಿನ ಜನ ಗಾಜಿನ ಕೆಲಸ ಮಾಡುತ್ತಿದ್ದರು. ಮನೆಗಳ ಸಂಖ್ಯೆಗಳು ಹೆಚ್ಚಾಗಿರಲಿಲ್ಲ, ಆದರೆ ಎಲ್ಲಾ ಮನೆಗಳಲ್ಲಿ ಗಾಜು ಕರಗಿಸುವ ಭಟ್ಟಿಗಳಿದ್ದವು. ಅದರ ಚಿಮಿಣಿಗಳು ಮನೆಗಳ ಛಾವಣಿಗಳಿಂದ ಹೊರ ಬಂದು ಸ್ವಲ್ಪ ಎತ್ತರಕ್ಕೆ ಹೋಗಿ ಹೊಗೆ ಕಾರುತ್ತಿದ್ದವು. ಗೋಡೆಗಳಲ್ಲದೆ ಬೀದಿಗಳಲ್ಲೂ ಹೊಗೆ ರಾರಾಜಿಸುತ್ತಿತ್ತು. ಜನರ ಬಟ್ಟೆ, ಬೀದಿನಾಯಿಗಳ, ಬೆಕ್ಕುಗಳ ಮೈ ಸಹ ಹೊಗೆಯಿಂದ ಕೊಳೆಯಾಗಿದ್ದವು. ಅಪ್ಪನನ್ನು ಬಲ್ಲವರು ಇಲ್ಲಿದ್ದರು. ಅವರಲ್ಲಿ ಒಬ್ಬ ನಮ್ಮನ್ನು ಊಟಕ್ಕೆ ಕೂರಿಸಿಕೊಂಡ. ಅಲ್ಲಿಯ ಯಾವುದೂ ನನಗೆ ಹಿಡಿಸಲಿಲ್ಲ. ಅಪ್ಪ ಕೆಲಕಾಲ ನನ್ನ ಮುಖವನ್ನೇ ನೋಡಿದ ಬಳಿಕ ಈ ಪ್ರಯಾಣದ ಮೊದಲ ಮಾತನ್ನಾಡಿದ.

‘ಇಲ್ಲಿಯ ಜನ ಮುದುಕರಾಗುವುದಿಲ್ಲ’.

ಅವನ ಮಾತು ಅರ್ಥವಾಗಲಿಲ್ಲ, ಬೀದಿಯಲ್ಲಿ ತಿರುಗಾಡುತ್ತಿರುವವರ ಕಡೆ ಗಮನ ಹರಿಸಿದೆ. ಅವರ ಪೈಕಿ ನಿಜವಾಗಿಯೂ ಯಾರೊಬ್ಬನೂ ಮುದುಕನಂತೆ ಕಾಣಲಿಲ್ಲ. ನಾನು ಯೋಚನೆಯಲ್ಲಿ ಮಗ್ನನಾಗಿರುವಾಗಲೇ ಅಪ್ಪ ಹೇಳಿದ. ‘ಹೊಗೆ ಅವರನ್ನು ನುಂಗಿ ಹಾಕತ್ತೆ’

‘ಹಾಗಿದ್ದರೆ ಅವರೇಕೆ ಇಲ್ಲಿದ್ದಾರೆ?’ ಕೇಳಬೇಕೆಂದು ಮನಸ್ಸಾಯಿತು. ಆದರೆ ಈ ಪ್ರಶ್ನೆ ಕೇಳುವುದರಿಂದ ಯಾವ ಲಾಭವೂ ಇಲ್ಲವೆಂದು ಮೌನವಾಗಿ ಅಪ್ಪನ ಕಡೆ ನೋಡತೊಡಗಿದೆ.

ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ: ನಾ. ದಾಮೋದರ ಶೆಟ್ಟಿ ಅನುವಾದಿಸಿದ ಮಲಯಾಳಂ ಕಥೆ ‘ಕ್ಷೌರಿಕ’

‘ಜಹಾಜ್ ಸಹ ಗಾಜಿನ ಕೆಲಸ ಮಾಡುತ್ತಾನೆ, ಅವನ ಮನೆ ಇಲ್ಲೇ ಇದೆ’ ಕೆಲವು ಸಮಯದ ನಂತರ ಅವನು ಹೇಳಿದ. ನಾನು ದಿಢೀರನೆ ಎದ್ದು ನಿಂತುಕೊಂಡೆ, ನನ್ನ ನಾಲಿಗೆ ನುಲಿದುಕೊಂಡಿತು. ಇಂಥ ಸಂದರ್ಭದಲ್ಲಿ ಮೌನವಾಗಿರಲು ಸಾಧ್ಯವಿರಲಿಲ್ಲ. ಹೊಗೆಯ ವಶದಲ್ಲಿರುವ ಇಂಥ ಕುಗ್ರಾಮದಲ್ಲಿ ಜಹಾಜ್‌ನಂತೆಯೇ ಯಾವಾಗಲೂ ಹೊಗೆಯುಗುಳುವ ಈ ಹಾದಿಬೀದಿಯಲ್ಲಿ ಆ ಜೋಕರ್ ಜತೆ ಇರುವುದೇ? ಇದನ್ನು ಕೇಳಲು ಎಷ್ಟೇ ಸಮಯ ತೆಗೆದುಕೊಳ್ಳಲಿ, ಕೇಳಿಯೇ ಕೇಳುತ್ತೇನೆ. ಅಪ್ಪ ಕೂರಲು ಹೇಳಿ, ಧೈರ್ಯ ತುಂಬುವಂತೆ ‘ಆದರೆ ಅವನು ಇಲ್ಲಿಂದ ವಲಸೆ ಹೋಗಿದ್ದಾನೆ’ ಎಂದ. ಈಗ ನನಗೆ ನಿಜವಾಗಿಯೂ ಸ್ವಲ್ಪ ನೆಮ್ಮದಿಯಾಯಿತು.

‘ಒಂದು ವೇಳೆ ಜಹಾಜ್ ಇಲ್ಲಿಲ್ಲದೆ ಬೇರೆ ಎಲ್ಲಾದರೂ ವಾಸವಾಗಿರಲಿ ಅವನೊಂದಿಗೆ ಇರಬಲ್ಲೆ’. ನನಗೆ ನಾನೇ ಹೇಳಿಕೊಳ್ಳುತ್ತಿರುವಾಗಲೇ ಅಪ್ಪ ಹೇಳಿದ ‘ಈಗವನು ಬೇರೆ ಕಡೆ ಇದ್ದಾನೆ’.

ಅವನು ಕೈಯಿಂದ ಸನ್ನೆ ಮಾಡುತ್ತ ‘ಶೀಷಾ ಘಾಟ್‌ನಲ್ಲಿದ್ದಾನೆ.’ ಎಂದ.

ಈ ಹೆಸರು ಕೇಳಿದ ಕೂಡಲೇ ನಾನು ಮತ್ತೊಮ್ಮೆ ಬೇಸರಗೊಂಡೆ, ಅಪ್ಪನಿಗೆ ತಿಳಿದಿದಿಯೋ ಇಲ್ಲವೋ ಗೊತ್ತಿಲ್ಲ. ಅವನ ಮನೆಗೆ ಬಂದ ಕೆಲವರಿಂದ ನಾನು ‘ಶೀಷಾ ಘಾಟ್’ನ ಬಗ್ಗೆ ಕೇಳಿ ತಿಳಿದುಕೊಂಡಿದ್ದೆ. ಈ ದೊಡ್ಡ ಸರೋವರದ ಅನೇಕ ದಡಗಳ ಪೈಕಿ ಅದೊಂದು ದಡವಾಗಿತ್ತು. ಎಲ್ಲಕ್ಕಿಂತ ಹೆಸರುವಾಸಿಯಾಗಿತ್ತು, ಹಾಗೆಯೇ ಅಷ್ಟೇ ಪಾಳು ಜಾಗವಾಗಿತ್ತು. ಸದ್ಯಕ್ಕೆ ಅದು ಬೀಬಿ ಹೆಸರಿನ ಒಬ್ಬ ಭೀಕರ ಮಹಿಳೆಯ ವಶದಲ್ಲಿತ್ತು. ಅವಳು ಒಬ್ಬ ದರೋಡೆಕೋರನದೋ ಬಂಡುಕೋರನದೋ ಪ್ರೇಯಸಿಯಾಗಿದ್ದಳು. ಅನಂತರ ಅವನು ಅವಳನ್ನೇ ಮದುವೆ ಮಾಡಿಕೊಂಡ. ಒಮ್ಮೆ ಅವನು ಹೆಂಡತಿಯನ್ನು ಭೇಟಿ ಮಾಡಲು ಬಂದಾಗ ಬೇಹುಗಾರರಿಗೆ ಸುಳಿವು ಸಿಕ್ಕಿ ಅವನನ್ನು ಸರ್ಕಾರದ ಜನರೇ ಮುಗಿಸಿದರು. ಅನಂತರ ಏನೇನೋ ಕಿತಾಪತಿ ನಡೆದು ‘ಶೀಷಾ ಘಾಟ್’ ಬೀಬಿಯ ವಶಕ್ಕೆ ಹೋಯಿತು. ಬೀಬಿಯ ಒಂದು ದೊಡ್ಡ ದೋಣಿ ಸರೋವರದಲ್ಲಿ ತೇಲುತ್ತಿರುತ್ತದೆ. ಅದರಲ್ಲೆ ಅವಳು ವಾಸಿಸಿದ್ದಳು. ಅವಳು ಬೇರೆ ಏನೇನೋ ವ್ಯಾಪಾರ ಸಹ ಮಾಡುತ್ತಿದ್ದಳು. ಹಾಗಾಗಿ ಅವಳನ್ನು ಭೇಟಿ ಮಾಡಲು ಬಂದವರಿಗೆ ಮಾತ್ರ ಅಲ್ಲಿ ಹೋಗಲು ಅವಕಾಶವಿತ್ತು. ಬೇರೆಯವರು ಅಲ್ಲಿ ಹೋಗಲು ಧೈರ್ಯ ಮಾಡುತ್ತಿರಲಿಲ್ಲ. ಬೀಬಿ ಹೆಸರು ಕೇಳಿಯೇ ಭಯ ಪಡುತ್ತಿದ್ದರು.

ಜಹಾಜ್ ‘ಷಾ ಘಾಟ್’ಗೆ ಹೇಗೆ ಹೋಗಿ ವಾಸ ಮಾಡತೊಡಗಿದ? ಬೀಬೀಯೊಂದಿಗೆ ಮುಖಾಮುಖಿಯಾಗುವ ಅವಕಾಶ ನನಗೂ ಸಿಗಬಹುದೇ? ಅವಳು ನನ್ನೊಂದಿಗೆ ಮಾತಾಡುವುದಿಲ್ಲವೇನು? ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೇನು? ನಾನು ಮಾತಾಡುವಾಗ ಕೋಪಗೊಂಡು ಅವಳಿಗೆ ಹುಚ್ಚು ಹಿಡಿಯುವುದಿಲ್ಲವೇ? ಇವೆಲ್ಲ ಪ್ರಶ್ನೆಗಳಿಗೆ ನನ್ನದೇ ಕಾಲ್ಪನಿಕ ಉತ್ತರಗಳನ್ನು ನಾನು ಹುಡುಕುವುದರಲ್ಲಿ ಎಷ್ಟೊಂದು ಮಗ್ನನಾಗಿದ್ದೆನೆಂದರೆ ಗಾಜುಗಳನ್ನು ತಯಾರಿಸುವ ಆ ಊರಿಂದ ಹೊರಟಿದ್ದು ನನ್ನ ಗಮನಕ್ಕೆ ಬರಲಿಲ್ಲ. ಅಪ್ಪನ ಮಾತು ಕಿವಿಗಳನ್ನು ಅಪ್ಪಳಿಸಿದಾಗ ಎಚ್ಚರಗೊಂಡೆ. ‘ತಲುಪಿಬಿಟ್ಟೆವು’.

*

(ಭಾಗ 2 ಓದಲು ಕ್ಲಿಕ್ ಮಾಡಿ)

ಇದನ್ನೂ ಓದಿ

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇತರೇ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada