Translated Story: ನೆರೆನಾಡ ನುಡಿಯೊಳಗಾಡಿ; ಮುಕುಂದ ಜೋಷಿ ಅನುವಾದಿಸಿದ ಹಿಂದಿ ಕಥೆ ‘ತಿರೀಛ’

‘Tirich’ Short Story of Uday Prakash : ಹಾಗೆ ನೋಡಿದರೆ ಮನುಷ್ಯ ಯಾವಾಗ ಓಡತೊಡಗುತ್ತಾನೋ ಆಗ ಅವನು ನೆಲದ ಮೇಲೆ ಕಾಲುಗಳ ಗುರುತು ಮಾತ್ರ ಇಡುವುದಿಲ್ಲ. ಪ್ರತಿ ಗುರುತಿನ ಜೊತೆಗೆ ಅಲ್ಲಿಯ ಮಣ್ಣಿನಲ್ಲಿ ತನ್ನ ವಾಸನೆಯನ್ನೂ ಬಿಟ್ಟಿರುತ್ತಾನೆ. ತಿರೀಛ ಈ ವಾಸನೆಯ ಸಹಾಯದಿಂದಲೇ ಅದು ಬೆನ್ನು ಹತ್ತುತ್ತದೆ.

Translated Story: ನೆರೆನಾಡ ನುಡಿಯೊಳಗಾಡಿ; ಮುಕುಂದ ಜೋಷಿ ಅನುವಾದಿಸಿದ ಹಿಂದಿ ಕಥೆ ‘ತಿರೀಛ’
ಲೇಖಕ ಉದಯ ಪ್ರಕಾಶ, ಅನುವಾದಕ ಮುಕುಂದ ಜೋಶಿ
Follow us
ಶ್ರೀದೇವಿ ಕಳಸದ
|

Updated on:Jun 17, 2022 | 12:35 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi :ತಿರೀಛ ತುಂಬ ಸಂಕೀರ್ಣವಾದ ಕಥೆ. ಕಥಾನಕವು ಹಲವು ಸ್ಥರಗಳಲ್ಲಿ ಹರಿಯುತ್ತದೆ. ಮಕ್ಕಳ ಮನಸ್ಸು, ತಂದೆಯ ವಾಸ್ತವ, ‘ತಿರೀಛ್’​ನ ಮಾಯಾವಿ ಶಕ್ತಿಗಳು, ಊರವರ ಭೋಳೇತನ, ಬೆಳೆದ ಮಗನ ಪತ್ತೆ ಕೆಲಸ… ಹೀಗೆ ವಿವಿಧ ಆಯಾಮಗಳಲ್ಲಿ ಸಾಗುವ ಕಥಾನಕವು, ಒಂದಕ್ಕೊಂದು ಬೆಸೆದುಕೊಳ್ಳುತ್ತ, ಬೆಸೆದದ್ದು ಬೇರೆಯಾಗುತ್ತ, ಮತ್ತೊಂದರೊಟ್ಟಿಗೆ ಬರೆಯುತ್ತ  ಸಾಗುತ್ತದೆ. ಛತ್ತೀಸ್​ಗಡ್ ಗ್ರಾಮೀಣ ಬದುಕಿನ ವಿವರಗಳು, ಹಳ್ಳಿಯ ಬದುಗಿರುವ ಚಂದಾಮಾಮಾ ಕತೆಯನ್ನು ಹೋಲುವ ನಿಗೂಢಕಣಿವೆ, ಹತ್ತಿರದ ಪೇಟೆಯೊಂದರ ಗಜಿಬಿಜಿಗೊಂಡ ಕಾಫ್ಖಾನ ಮಾದರಿಯ ಗುಮಾಸ್ತರು, ಕಲ್ಲು ಹೊಡೆದು ಕೊಲ್ಲಬಲ್ಲ ಪುಂಡಮಕ್ಕಳು, ಸರಳ ಸಜ್ಜನ ಶಾಲಾ ಮಾಸ್ತರನೊಬ್ಬನ ದುರಂತ ಹೀಗೆ ಭಿನ್ನ ಸ್ಥರದ ವಿವರಗಳು ಕತೆಗೆ ಲಭ್ಯವಾಗಿವೆ. ಈ ಕಥೆಯ ಚುಂಬಕ ಶಕ್ತಿ ಇರುವುದು ದೃಶ್ಯ ಶ್ರೀಮಂತಿಕೆಯಲ್ಲಲ್ಲ. ಅದಿರುವುದು ಅದರ ಮುಗ್ಧತೆಯಲ್ಲಿ’ ಎನ್ನುತ್ತಾರೆ ನಾಟಕಕಾರ ಪ್ರಸನ್ನ. ಈ ಕಥೆಯ ಕರ್ತೃ ಉದಯ ಪ್ರಕಾಶ ಮಧ್ಯಪ್ರದೇಶದ ಮೂಲದವರು. ಇವರು ಕವಿ, ಲೇಖಕ, ಅನುವಾದಕ ಮತ್ತು ಪತ್ರಕರ್ತ ಕೂಡ. ಇದನ್ನು ಅನುವಾದಿಸಿದವರು ಮರಾಠಿ, ಹಿಂದೀ, ಗುಜರಾತಿ, ಕನ್ನಡ ಸಾಹಿತ್ಯಕ್ಕೆ ಅನುವಾದದ ಮೂಲಕ ಗಮನಾರ್ಹ ಕೊಡುಗೆ ನೀಡಿದ ಮುಕುಂದ ಜೋಷಿ. ಬಾಗಲಕೋಟೆಯ ತೇರದಾಳ ಮೂಲ ಇವರದು.

ಕಥೆ : ತಿರೀಛ | ಹಿಂದಿ ಮೂಲ : ಉದಯ ಪ್ರಕಾಶ | ಕನ್ನಡಕ್ಕೆ : ಮುಕುಂದ ಜೋಷಿ | ಸೌಜನ್ಯ : ದೇಶಕಾಲ ಸಾಹಿತ್ಯ ಪತ್ರಿಕೆ

(ಭಾಗ 1)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಈ ಪ್ರಸಂಗದ ಸಂಬಂಧ ಅಪ್ಪನ ಜೊತೆಗಿದೆ. ನನ್ನ ಕನಸುಗಳ ಜೊತೆಗಿದೆ. ಮತ್ತು ಪಟ್ಟಣದ ಜೊತೆಗೂ. ಪಟ್ಟಣದ ಜೊತೆಗಿನ ಒಂದು ಹುಟ್ಟಾ ಹೆದರಿಕೆ ಇರುತ್ತದಲ್ಲಾ, ಅದರ ಜೊತೆಗೂ ಇದೆ.

ಅಪ್ಪನಿಗೆ ಆಗ ಐವತ್ತೈದು ವರ್ಷ. ಅಶಕ್ತ. ತೆಳ್ಳಗಿನ ಶರೀರ. ಗೋವಿನ ಜೋಳದ ಹಿಟ್ಟಿನ ಥರ ಬೆಳ್ಳಗಿನ ಕೂದಲು. ತಲೆಯ ಮೇಲೆ ಹಿಂಜಿದ ಹತ್ತಿ ಇಟ್ಟಂತೆ. ಅವರು ಮಾತನಾಡುವುದು ಕಡಿಮೆ. ಯೋಚಿಸುವುದು ಹೆಚ್ಚು. ಯಾವಾಗ ಮಾತನಾಡುತ್ತಿದ್ದರೋ ಆಗ ನಮಗೊಂದು ಸಮಾಧಾನದ ವಿಶ್ರಾಂತಿ. ಎಷ್ಟೋ ಹೊತ್ತಿನಿಂದ ಒತ್ತಿಟ್ಟ ಉಸಿರು ಹೊರಬಂದಂತೆ. ಜೊತೆಗೆ ನಮಗೊಂದು ನಮೂನೆಯ ಹೆದರಿಕೆ ಕೂಡಾ. ನಾವೆಲ್ಲ ಹುಡುಗರಿಗೆ ಅವರೊಂದು ರಹಸ್ಯವಾಗಿದ್ದರು. ನಮಗೆ ಗೊತ್ತಿತ್ತು, ಜಗತ್ತಿನ ಸಕಲ ಜ್ಞಾನದ ತಿಜೋರಿ ಅವರ ಕಡೆಗಿದೆ ಎಂದು. ನಮಗೆ ಗೊತ್ತಿತ್ತು, ಜಗತ್ತಿನ ಎಲ್ಲ ಭಾಷೆಗಳಲ್ಲೂ ಅವರು ಮಾತನಾಡಬಹುದೆಂದು. ಜಗತ್ತು ಅವರನ್ನು ಇಲ್ಲಿಗೆ ಬರಮಾಡಿತ್ತು. ಮತ್ತು ನಮ್ಮ ಹಾಗೆಯೇ ಹೆದರುತ್ತ ಹೆದರುತ್ತ ಅವರಿಗೆ ಗೌರವ ಸಲ್ಲಿಸುತ್ತಿತ್ತು.

ಅವರ ಮಕ್ಕಳೆಂದು ನಮಗೆಲ್ಲ ಅಭಿಮಾನ.

ಒಮ್ಮೊಮ್ಮೆ – ಇದು ಎಷ್ಟೋ ವರ್ಷಗಳಲ್ಲಿ ಒಮ್ಮೆ ಆಗುವಂಥದ್ದು – ಅವರು ನಮ್ಮನ್ನೆಲ್ಲ ಕರಕೊಂಡು ತಿರುಗಾಡಿಸಿ ಬರಲು ಹೊರಡುತ್ತಿದ್ದರು. ಸಂಜೆಗೆ. ಹೋಗುವ ಮೊದಲು ಬಾಯಿ ತುಂಬ ತಂಬಾಕು ಹಾಕಿಕೊಳ್ಳುತ್ತಿದ್ದರು. ಅದರಿಂದಾಗಿ ಅವರು ಮಾತನಾಡುತ್ತಿರಲಿಲ್ಲ. ಆ ಮೌನ ನಮಗೆಲ್ಲ ಬಹಳ ಗಂಭೀರ, ಗೌರವಶಾಲಿ, ವಿಸ್ಮಯಕಾರಕ, ತೂಕದ್ದು ಹಾಗೂ ಬಹಳ ವಿಶಾಲ ಅನ್ನಿಸುತ್ತಿತ್ತು. ತಂಗಿ ಅವರನ್ನು ಅಕಸ್ಮಾತ್ತಾಗಿ ಏನಾದರೂ ಕೇಳಬೇಕೆನ್ನುವಷ್ಟರಲ್ಲೇ ನಾನು ತತ್ ಕ್ಷಣ ಉತ್ತರಕೊಡುವ ಪ್ರಯತ್ನ ಮಾಡುತ್ತಿದ್ದೆ. ಅಪ್ಪನಿಗೆ ಮಾತನಾಡಲು ತೊಂದರೆಯಾಗದಿರಲೆಂದು.

ಹಾಗೆ ನೋಡಿದರೆ ಈ ಕೆಲಸ ಬಹಳ ಕಠಿಣ ಹಾಗೂ ಆಹ್ವಾನಾತ್ಮಕವಾಗಿತ್ತು. ಕಾರಣ, ನನ್ನ ಉತ್ತರ ಒಂದು ವೇಳೆ ತಪ್ಪಿದರೆ ಆಗ ಅಪ್ಪ ಬಾಯಿ ಬಿಡಬೇಕು. ಇದರಿಂದ ಅವರಿಗೆ ತೊಂದರೆಯೇ ಆಗುತ್ತಿತ್ತು. ಒಂದು ಅಂದರೆ ಸೇವಿಸುತ್ತಿರುವ ತಂಬಾಕಿನ ರಸ ಉಗುಳಬೇಕು. ಇದಕ್ಕೂ ಮುಖ್ಯವಾದ ಇನ್ನೊಂದೆಂದರೆ ಅವರು ಯಾವ ಜಗತ್ತಿನಲ್ಲಿ ವಿಹರಿಸುತ್ತಿದ್ದರೋ ಅಲ್ಲಿಂದ ಅವರನ್ನು ಈ ಜಗತ್ತಿಗೆ ತರುವುದು ಒಂದು ಕ್ರಮಿಸಲಾಗದ ಅಂತರ ಅನ್ನಿಸುತ್ತಿತ್ತು.

ಹಾಗೆ ನೋಡಿದರೆ ತಂಗಿಯ ಪ್ರಶ್ನೆಗಳಲ್ಲಿ ಅಂಥದ್ದೇನೂ ವಿಶೇಷವಿರುತ್ತಿರಲಿಲ್ಲ. ಉದಾಹರಣಾರ್ಥ ಅವಳು ಕೇಳುವುದೆಂದರೆ ಎದುರಿನ ಆ ಒಣಗಿದ ಟೊಂಗೆಯ ಮೇಲೆ ಕುಳಿತ ಹಕ್ಕಿ ಯಾವುದೆಂದು. ನಾನು ಹೇಳುತ್ತಿದ್ದೆ – ಅದು ನೀಲಕಂಠ. ದಸರೆಯ ದಿನ ಅದನ್ನು ಅವಶ್ಯ ನೋಡಬೇಕು. ನನಗೆ ಎಲ್ಲ ಹಕ್ಕಿ-ಪಕ್ಕಿಗಳ ಒಂದಿಷ್ಟು ಪರಿಚಯವಿತ್ತು. ನನ್ನಿಡೀ ಪ್ರಯತ್ನ ಅಂದರೆ ಅಪ್ಪನಿಗೆ ವಿಶ್ರಾಂತಿ ಸಿಗಬೇಕು. ಮತ್ತವರು ತಮ್ಮ ಜಗತ್ತಿನಲ್ಲಿ ಯೋಚಿಸುತ್ತ, ವಿಹರಿಸುತ್ತ ಮುಳುಗಿರಬೇಕೆಂದು.

ನನ್ನ ಮತ್ತು ಅವ್ವಳ ಪ್ರಯತ್ನ ಇಷ್ಟೇ: ಅಪ್ಪ ತಮ್ಮ ಜಗತ್ತಿನಲ್ಲಿ ಸುಖವಾಗಿರಲಿ ಎಂದು. ಅಲ್ಲಿಂದ ಅವರನ್ನು ಯಾರೂ ಒತ್ತಾಯಪೂರ್ವಕ ಹೊರಗೆ ತರದಿರಲಿ ಎಂದು. ಆ ಜಗತ್ತು ನಮಗೆ ಬಹಳ ವಿಸ್ಮಯಕಾರಿ ಹಾಗೂ ರಹಸ್ಯಮಯವಾಗಿತ್ತು. ಅಲ್ಲಿದ್ದಾಗಲೇ ಅವರು ನಮ್ಮ ಬದುಕಿನ ಎಷ್ಟೆಲ್ಲ ಪೃಶ್ನೆಗಳಿಗೆ ಪರಿಹಾರ ನೀಡಿದ್ದರು. ಒಮ್ಮೆ ನನ್ನ ಫೀ ಕಟ್ಟುವ ಮಾತು ಬಂದಾಗ ನಮ್ಮ ಹತ್ತಿರವಿದ್ದ ಬೆಳ್ಳಿಯ ಗ್ಲಾಸು ಮಾಯವಾಗಿತ್ತು. ನಾವೆಲ್ಲ ವಾಟಗಾದಿಂದ ನೀರು ಕುಡಿಯುತ್ತಿದ್ದೆವು. ಎರಡು ದಿನಗಳವರೆಗೆ ಅಪ್ಪ ಏನೂ ಮಾತನಾಡಲಿಲ್ಲ. ಸುಮ್ಮನಾಗಿಬಿಟ್ಟಿದ್ದರು. ಅವ್ವಳಿಗೂ ಒಂದು ತರಹದ ಸಂಶಯ. ಅಪ್ಪ ಬಹುಶಃ ಫೀ ಕಟ್ಟುವ ಮಾತನ್ನು ಮರೆತಿರಬೇಕು ಇಲ್ಲಾ ಇದು ನನ್ನಿಂದಾಗದ ಕೆಲಸ ಎಂದುಕೊಂಡಿರಬೇಕು. ಆದರೆ ಮೂರನೆಯ ದಿವಸ ಬೆಳಗ್ಗೆ ಒಂದು ಪತ್ರ ಪಾಕೀಟಿನಲ್ಲಿಟ್ಟು ಪಟ್ಟಣದ ಡಾಕ್ಟರ್ ಪಂತರ ಕಡೆಗೆ ನನ್ನನ್ನು ಕಳಿಸಿದರು. ನನಗಾದ ಆಶ್ಚೆರ್ಯವೆಂದರೆ ಡಾಕ್ಟರರು ನನ್ನನ್ನು ಒಳಗೆ ಕರೆದುಕೊಂಡು ಹೋಗಿ, ಶರಬತ್ ಕೊಟ್ಟು ತಮ್ಮ ಮಗನನ್ನು ಕರೆದು ಪರಿಚಯಿಸಿದರು. ನಾನು ಹೊರಟಾಗ ನೂರುನೂರರ ಮೂರು ನೋಟುಗಳನ್ನು ನನ್ನ ಕೈಯಲ್ಲಿಟ್ಟರು.

ಇದನ್ನೂ ಓದಿ : Translated Story: ನೆರೆನಾಡ ನುಡಿಯೊಳಗಾಡಿ; ನಾಗರೇಖಾ ಗಾಂವಕರ ಅನುವಾದಿಸಿದ ಚೆಕಾವ್ ಕಥೆ ‘ತುಂಟ ಹುಡುಗ’

ನಮಗೆ ಅಪ್ಪನ ಬಗ್ಗೆ ಪ್ರೀತಿ, ಅಭಿಮಾನ. ಹೆದರಿಕೆ ಕೂಡ. ಅಪ್ಪನ ಇರುವಿಕೆಯೇ ನಮಗೊಂದು ಆಧಾರ. ನಾವೊಂದು ಭದ್ರವಾದ ಕೋಟೆಯಲ್ಲಿದ್ದಂತೆ. ಎಂಥ ಕೋಟೆಯೆಂದರೆ ನಾಲ್ಕೂ ಕಡೆಗೆ ಆಳವಾಗಿ ಕಡಿದ ಕಾಲುವೆಗಳು. ಎತ್ತರದ ಗುಮ್ಮಟ. ಬಿರುಸಾದ ಕೆಂಪು ಬಂಡೆಗಲ್ಲುಗಳಿಂದ ಕಟ್ಟಿದ ಗೋಡೆಗಳು.

ಹೊರಗಿನ ದಾಳಿಯಿಂದ ನಮ್ಮ ಕೋಟೆ ಅಭೇದ್ಯ.

ಅಪ್ಪ ತಾವೇ ಬಹಳ ಗಟ್ಟಿಯಾದ ಕೋಟೆಯಾಗಿದ್ದರು. ಅದರ ಒಡ್ಡುಗಳ ಮೇಲೆ ನಾವೆಲ್ಲ ನಿಶ್ಚಿಂತರಾಗಿ ಆಟ ಆಡುತ್ತಿದ್ದೆವು. ರಾತ್ರಿ ನಮಗೆ ಬಹಳ ಆಳವಾದ, ಇಂಪಾದ ನಿದ್ರೆ ಬರುತ್ತಿತ್ತು.

ಆದರೆ ಆ ದಿನ… ಸಂಜೆ ಅಪ್ಪ ತಿರುಗಾಡಿ ಮರಳಿ ಬಂದಾಗ ಅವರ ಮೊಣಕಾಲ ಕೆಳಗೆ ಪಟ್ಟೀ ಕಟ್ಟಲಾಗಿತ್ತು. ತುಸು ಹೊತ್ತಿನ ನಂತರ ಊರಿನ ಕೆಲವು ಜನ ಬಂದರು. ಆಗ ಗೊತ್ತಾಯಿತು. ಅಪ್ಪನಿಗೆ ಅಡವಿಯಲ್ಲಿ ಒಂದು ತಿರೀಛ (ವಿಷಾಹಾರಿ ಹಲ್ಲಿ. ನಾಲ್ಕು ಕಾಲುಳ್ಳ ಒಂದು ಪ್ರಾಣಿ.) ಕಚ್ಚಿದೆ ಎಂದು.

ತಿರೀಛ ಕಚ್ಚಿದರೆ ಆ ಮನುಷ್ಯ ಉಳಿಯುವುದೇ ಸಾಧ್ಯವಿಲ್ಲವೆಂದು ನಮಗೆಲ್ಲ ಗೊತ್ತಿತ್ತು. ರಾತ್ರಿ ಕಂದೀಲಿನ ಹೊಲಸಾದ, ಮಸಕಾದ ಬೆಳಕಿನಲ್ಲಿ ಊರಿನ ಇನ್ನೂ ಬಹಳಷ್ಟು ಜನ ನಮ್ಮ ಅಂಗಳದಲ್ಲಿ ಸೇರಿದ್ದರು. ಅಪ್ಪ ಅವರ ನಡುವೆ ನೆಲದ ಮೇಲೆ ಕುಳಿತಿದ್ದರು. ನಂತರ ಪಕ್ಕದ ಹಳ್ಳಿಯ ಚುಟುವಾ ಹಜಾಮ ಬಂದಿದ್ದ. ಆತ ಜೇಡರ ಬಲೆಗಳು ಮತ್ತು ಕುಳ್ಳದ ಬೂದಿಯಿಂದ ವಿಷ ಇಳಿಸುತ್ತಿದ್ದ.

ತಿರೀಛನ್ನು ನಾನು ಒಮ್ಮೆ ನೋಡಿದ್ದೆ.

ನಮ್ಮೂರಿನ ಕೆರೆಯ ದಂಡೆಯ ಮೇಲೆ ದೊಡ್ಡ ದೊಡ್ಡ ಬಂಡೆಗಲ್ಲುಗಳಿದ್ದುವು. ಮತ್ತು ಮಧ್ಯಾಹ್ನದ ಉರಿಉರಿ ಬಿಸಿಲಿನಲ್ಲಿ ಅವು ಇನ್ನೂ ಬಿಸಿ ಬಿಸಿ ಆಗುತ್ತಿದ್ದುವು. ಅವುಗಳಲ್ಲಿನ ಒಂದು ಬಂಡೆಗಲ್ಲಿನ ಸಂದಿಯಿಂದ ಹೊರಬಂದು ಅದು ನೀರು ಕುಡಿಯಲು ಕೆರೆಯ ಕಡೆಗೆ ಹೊರಟಿತ್ತು.

ನನ್ನ ಜೊತೆಗೆ ಗೆಳೆಯ ಥಾನೂ ಇದ್ದ. ಅವನೇ ಹೇಳಿದ್ದು – ಅದು ತಿರೀಛ. ಕಚ್ಚುವ ಹಾವಿಗಿಂತ ಅದರಲ್ಲಿ ನೂರು ಪಟ್ಟು ವಿಷ ಇರುತ್ತದೆ. ಹಾವು ಕಚ್ಚುವುದು ಅದರ ಮೇಲೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾಲು ಇಟ್ಟಾಗ. ಆದರೆ ತಿರೀಛದ ಮಾತೇ ಬೇರೆ. ದೃಷ್ಟಿ ಒಂದಾಗುತ್ತಲೇ ಅದು ಬೆನ್ನು ಹತ್ತುತ್ತದೆ. ಹಿಂದೆ ಹಿಂದೆ ಓಡತೊಡಗುತ್ತದೆ. ಅದರಿಂದ ಬಚಾವಾಗಲು ಎಂದೂ ನೇರವಾಗಿ, ಸರಳವಾಗಿ ಓಡಬಾರದು. ಅಡ್ಡತಿಡ್ಡ, ಚಕ್ಕರ ಹಾಕುತ್ತ ಸುತ್ತು ಸುತ್ತಾಗಿ ಓಡಬೇಕು ಇತ್ಯಾದಿ, ಇತ್ಯಾದಿ.

ಹಾಗೆ ನೋಡಿದರೆ ಮನುಷ್ಯ ಯಾವಾಗ ಓಡತೊಡಗುತ್ತಾನೋ ಆಗ ಅವನು ನೆಲದ ಮೇಲೆ ಕಾಲುಗಳ ಗುರುತು ಮಾತ್ರ ಇಡುವುದಿಲ್ಲ. ಪ್ರತಿ ಗುರುತಿನ ಜೊತೆಗೆ ಅಲ್ಲಿಯ ಮಣ್ಣಿನಲ್ಲಿ ತನ್ನ ವಾಸನೆಯನ್ನೂ ಬಿಟ್ಟಿರುತ್ತಾನೆ. ತಿರೀಛ ಈ ವಾಸನೆಯ ಸಹಾಯದಿಂದಲೇ ಅದು ಬೆನ್ನು ಹತ್ತುತ್ತದೆ. ಥಾನೂ ಹೇಳಿದ್ದೆಂದರೆ ತಿರೀಛಕ್ಕೆ ಕೈ ಕೊಡಬೇಕಾದರೆ ಮೊದಲು ಹತ್ತಿರ ಹತ್ತಿರ ಹೆಜ್ಜೆ ಇಟ್ಟು ದೂರ ದೂರ ನಡೆಯಬೇಕು. ನಂತರ ನಾಲ್ಕೈದು ಸಲ ದೊಡ್ಡದೊಡ್ಡದಾಗಿ ಜಿಗಿಯಬೇಕು. ತಿರೀಛ ಮೂಸುತ್ತ, ಓಡುತ್ತ ಬರುತ್ತದೆ. ಅಕ್ಕಪಕ್ಕದಲ್ಲಿ ಎಲ್ಲಿ ಹೆಜ್ಜೆಗಳ ಗುರುತಿದೆಯೋ ಅಲ್ಲಿ ಅದರ ಓಟ ಬಹಳ ಜೋರಾಗಿರುತ್ತದೆ. ಮತ್ತು ಎಲ್ಲಿಂದ ಮನುಷ್ಯ ಜಿಗಿದಿದ್ದಾನೆಯೋ, ಸುತ್ತಿಸುತ್ತಿ ಚಕ್ಕರ್ ಹಾಕಿದ್ದಾನೆಯೋ ಅಲ್ಲಿ ಅದು ಗೊಂದಲದಲ್ಲಿ ಬೀಳುತ್ತದೆ. ಮುಂದಿನ ಹೆಜ್ಜೆಗಳ ಗುರುತುಗಳು ಮತ್ತು ಅದರಲ್ಲಿ ಅಡಗಿದ ವಾಸನೆ ಸಿಗುವವರೆಗೆ ಅದು ಅಲ್ಲಿಇಲ್ಲಿ ಅಲೆದಾಡುತ್ತಿರುತ್ತದೆ.

ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ: ನಾ. ದಾಮೋದರ ಶೆಟ್ಟಿ ಅನುವಾದಿಸಿದ ಮಲಯಾಳಂ ಕಥೆ ‘ಕ್ಷೌರಿಕ’

ನಮಗೆ ತಿರೀಛದ ಬಗ್ಗೆ ಇನ್ನೂ ಎರಡು ಸಂಗತಿಗಳು ಗೊತ್ತಾಗಿದ್ದುವು. ಒಂದು, ಅದು ಮನುಷ್ಯನನ್ನು ಕಚ್ಚಿದಾಕ್ಷಣ ಅಲ್ಲಿಂದ ಓಡಿಹೋಗಿ ಯಾವುದಾದರೂ ಒಂದು ಸ್ಥಳದಲ್ಲಿ ಉಚ್ಚೆ ಹೊಯ್ದು, ನಂತರ ಅದರಲ್ಲಿ ಹೊರಳಾಡುತ್ತದೆ. ಒಂದು ವೇಳೆ ಅದು ಹೀಗೆ ಮಾಡಿಬಿಟ್ಟರೆ ಆ ಮನುಷ್ಯ ಉಳಿಯುವುದು ಸಾಧ್ಯವೇ ಇಲ್ಲ. ಇದರಿಂದ ಬಚಾವಾಗಬೇಕಿದ್ದರೆ ತಿರೀಛ ಉಚ್ಚೆಯಲ್ಲಿ ಹೊರಳಾಡುವ ಮೊದಲೇ ಯಾವುದಾದರೂ ನದಿ ಯಾ ಸರೋವರ ಅಥವಾ ಕೊಳದಲ್ಲಿ ಮುಳುಗಿ ಏಳಬೇಕು. ಅದಾಗದಿದ್ದರೆ ಅದು ಓಡಿಹೋಗಿ ಉಚ್ಚೆ ಹೊಯ್ಯುವ ಮೊದಲೇ ಅದನ್ನು ಕೊಲ್ಲಬೇಕು.

ಎರಡನೆಯ ಮಾತೆಂದರೆ… ತಿರೀಛ ಕಚ್ಚಲು ಬರುವುದು ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ. ಒಂದು ವೇಳೆ ಅದು ಕಂಡರೂ ಅದನ್ನು ನಿಟ್ಟಿಸಿ ನೋಡಬಾರದು. ಹಾಗೆ ನೋಡಿದಾಕ್ಷಣ ಅದಕ್ಕೆ ಮನುಷ್ಯನ ವಾಸನೆಯೂ ಗೊತ್ತಾಗಿ ಬಿಡುತ್ತದೆ. ಮತ್ತು ಮನುಷ್ಯನ ಬೆನ್ನು ಹತ್ತುತ್ತದೆ. ನಂತರ ಮಾತ್ರ ಮನುಷ್ಯ ಇಡೀ ಬ್ರಹ್ಮಾಂಡವನ್ನೇ ಸುತ್ತಿದರೂ ತಿರೀಛ ಹಿಂದೆ ಹಿಂದೆ ಬೆನ್ನು ಹತ್ತಿ ಬಂದೇ ಬರುತ್ತದೆ.

ನಾನು ಕೂಡ ಎಲ್ಲ ಹುಡುಗರಂತೆ ಆಗ ತಿರೀಛದಿಂದ ಬಹಳ ಹೆದರುತ್ತಿದ್ದೆ. ನನ್ನ ದುಃಸ್ವಪ್ನಗಳ ಎರಡು ಮಹಾ ಭಯಾನಕ ಪಾತ್ರಗಳೆಂದರೆ ಆನೆ ಮತ್ತು ತಿರೀಛ. ಆನೆ ಕೊನೆಗೂ ಓಡಿಓಡಿ ದಣಿಯತ್ತದೆ. ನಾನು ಗಿಡ ಹತ್ತಿಯೋ, ಅಲ್ಲಿ ಇಲ್ಲಿ ಓಡುತ್ತೋಡುತ್ತ ಜಿಗಿದಾಡುತ್ತಲೋ ಬಚಾವಾಗುತ್ತಿದ್ದೆ. ಆದರೆ ತಿರೀಛ? ಅದರೆದುರು ನಾನು ಯಾವುದೋ ಇಂದ್ರಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೆ. ನಾನು ಕನಸಿನಲ್ಲಿ ಎಲ್ಲಿಯಾದರೂ ಹೊರಟಾಗ ಅದು ಎದುರಾಗುತ್ತಿತ್ತು. ಆ ಸ್ಥಳ ನಿಶ್ಚಿತವಾಗಿರಲಿಲ್ಲ. ಅದು ಬಂಡೆಗಲ್ಲುಗಳ ಸಂದಿಗೊಂದಿಯಲ್ಲಿ ಅಥವಾ ಯಾವುದೋ ಗಿಡಗಂಟಿಗಳ ಹತ್ತಿರವೇ ಸಿಗಬೇಕು ಎಂಬ ನಿಯಮವೂ ಇರಲಿಲ್ಲ. ಅದು ನನಗೆ ಪೇಟೆಯಲ್ಲಿ, ಸಿನೆಮಾ ಥಿಯೇಟರಿನಲ್ಲಿ ಇಲ್ಲಾ ಯಾವುದೋ ಅಂಗಡಿಯಲ್ಲಿ ಎದುರಾಗಬಹುದಿತ್ತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’

ನಾನು ಕನಸಿನಲ್ಲಿ ಅದರ ಜೊತೆಗೆ ದೃಷ್ಟಿ ಒಂದಾಗಬಾರದೆಂದು ಬಹಳ ಪ್ರಯತ್ನ ಮಾಡುತ್ತಿದ್ದೆ. ಆದರೆ ಅದು ಎಷ್ಟೊಂದು ಪರಿಚಿತ ಕಣ್ಣುಗಳಿಂದ ನನ್ನನ್ನು ನೋಡುತ್ತಿತ್ತೆಂದರೆ ನನ್ನನ್ನು ನಾನು ತಡೆಹಿಡಿಯುವುದು ಸಾಧ್ಯವೇ ಆಗುತ್ತಿರಲಿಲ್ಲ. ಮತ್ತು ಅಬ್ಬಾ, ಕಣ್ಣುಗಳು ಒಂದಾದಾಕ್ಷಣ ಅದರ ನೋಟವೇ ಬದಲಾಗುತ್ತಿತ್ತು.

ಅದು ಬೆನ್ನಟ್ಟಿ ಬರುವುದು.

ನಾನು ಓಡುವುದು.

ನಾನು ಅಡ್ಡಾತಿಡ್ಡಾ, ಅಲ್ಲಿ ಇಲ್ಲಿ, ಸುತ್ತಾ ಮುತ್ತಾ ಚಕ್ಕರ ಹಾಕುತ್ತಿದ್ದೆ. ಬೇಗ ಬೇಗ ಹೆಜ್ಜೆಗಳನ್ನು ಹಾಕುತ್ತ ಜಿಗಿಯುತ್ತಿದ್ದೆ. ಹಾರುವ ಪ್ರಯತ್ನ ಮಾಡುತ್ತಿದ್ದೆ. ಯಾವುದಾದರೂ ಎತ್ತರದ ಸ್ಥಳ ಹತ್ತುತ್ತಿದ್ದೆ. ಆದರೆ ನನ್ನೆಲ್ಲ ಈ ಪ್ರಯತ್ನಗಳು ತಂತಾನೇ ವ್ಯರ್ಥವಾಗುತ್ತಿದ್ದುವು. ಕೊನೆಗೂ ಅದು – ಅದೆ, ಆ ತಿರೀಛ – ಮೋಸಹೋಗುತ್ತಿರಲಿಲ್ಲ. ನನಗದು ಬಹಳ ಅನುಭವಿ, ಚತುರ, ತಿಳುವಳಿಕೆಯುಳ್ಳದ್ದು ಮತ್ತು ಅದರ ಜೊತೆಗೇ ಬಹಳ ಅಪಾಯಕಾರಿ ಅನ್ನಿಸುತ್ತಿತ್ತು. ಬಹುಶಃ ಅದು ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬಹುದು. ಅದರ ಕಣ್ಣುಗಳಲ್ಲಿ ನನ್ನ ಪರಿಚಯದ ಹೊಳಪಿತ್ತು. ಅದಕ್ಕಾಗೇ ನನಗದು ನನ್ನ ಯಾವ ರೀತಿಯ ವೈರಿ ಅನಿಸುತ್ತಿತ್ತೆಂದರೆ ನನ್ನ ತಲೆಯಲ್ಲಿನ ಪ್ರತಿಯೊಂದು ವಿಚಾರಗಳನ್ನು ಅದು ತಿಳಿದುಕೊಂಡಿದೆ ಎಂದು.

ನನ್ನ ಅತ್ಯಂತ ಭಯಾನಕ, ಪೀಡಾದಾಯಕ, ಅಂಜಿಕೆ ಹುಟ್ಟಿಸುವ ಹಾಗೂ ಅಸ್ವಸ್ಥನನ್ನಾಗಿ ಮಾಡುವ ಕನಸು ಇದೇ ಆಗಿತ್ತು. ಓಡುತ್ತಾ ಓಡುತ್ತಾ ನನ್ನ ಇಡೀ ಶರೀರ ದಣಿದು ಹೈರಾಣಾಗುತ್ತಿತ್ತು. ಪಪ್ಪುಸ ಉಬ್ಬಿ ಬರುತ್ತಿದ್ದವು. ನಾನು ಬೆವರಿನಿಂದ ತೊಯ್ದು ನೀರಾಗಿರ್ತಿದ್ದೆ. ಜರ್ಜರಿತನಾಗುತ್ತಿದ್ದೆ. ಮತ್ತು ಆ ಹೊತ್ತಿಗೇನೇ ಅಂಜಿಕೆ ಹುಟ್ಟಿಸುವ …ನನ್ನನ್ನು ನಿಶ್ಚೇಷ್ಟನನ್ನಾಗಿ ಮಾಡುವ ಸಾವು ನನ್ನ ಹತ್ತಿರ …ಹತ್ತಿರ ಬರತೊಡಗುತ್ತಿತ್ತು. ನಾನು ಜೋರಾಗಿ ಚೀರುತ್ತಿದ್ದೆ. ಅಳುತ್ತಿದ್ದೆ. ಅಪ್ಪನನ್ನು, ಥಾನೂನನ್ನು, ಅವ್ವನನ್ನು ಕೂಗುತ್ತಿದ್ದೆ. ನಂತರ ನನಗೆ ಗೊತ್ತಾಗುತ್ತಿತ್ತು, ಇದೊಂದು ಕನಸೆಂದು.

ಆದರೆ ಇದೆಲ್ಲ ತಿಳಿದಿದ್ದರೂ ನನಗೆ ಚೆನ್ನಾಗಿ ಗೊತ್ತಿತ್ತು. ನಾನಿನ್ನು ಸಾವಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೆಂದು. ಸಾವಲ್ಲ. ತಿರೀಛದಿಂದ ನನ್ನ ಕೊಲೆ. ಇಂಥದ್ದರಲ್ಲಿ ಎಚ್ಚರಿರಬೇಕೆಂದು ನಾನು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೆ. ನನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಕನಸಿನಲ್ಲಿ ಕಣ್ಣು ತೆರೆಯುತ್ತಿದ್ದೆ. ಬೆಳಕನ್ನು ನೋಡುವ ಪ್ರಯತ್ನ ಮಾಡುತ್ತಿದ್ದೆ. ಜೋರು ಜೋರಾಗಿ ಮಾತನಾಡುತ್ತಿದ್ದೆ. ಕೆಲವೊಂದು ಸಲ ಸರಿಯಾದ ಹೊತ್ತಿಗೇನೆ ಎಚ್ಚರಾಗುವುದರಲ್ಲಿ ಸಫಲನಾಗುತ್ತಿದ್ದೆ.

ಅವ್ವ ಹೇಳುವುದೆಂದರೆ ನನಗೆ ಕನಸಿನಲ್ಲಿ ಚೀರುವ ಮತ್ತು ಬಡಬಡಿಸುವ ಅಭ್ಯಾಸ ಇದೆ ಎಂದು. ಬಹಳ ಸಲ ಕನಸಿನಲ್ಲಿ ನಾನು ಅಳುವುದನ್ನು ಅವಳು ನೋಡಿದ್ದಳು. ಇಂಥ ಹೊತ್ತಿನಲ್ಲಿ ನನ್ನನ್ನು ಎಬ್ಬಿಸಬೇಕಲ್ಲವೇ? ಇಲ್ಲ. ಅವಳು ಮಾಡುವುದೆಂದರೆ ನನ್ನ ಹಣೆಯನ್ನು ನೇವರಿಸಿ, ದುಪ್ಪಟ್ಟಿ ಹೊದಿಸಿ ನನ್ನನ್ನು ಪುನಃ ಆ ಮಹಾ ಭಯಾನಕ ಜಗತ್ತಿನಲ್ಲಿ ಏಕಾಕಿ ಬಿಟ್ಟುಬಿಡುತ್ತಿದ್ದಳು. ನನ್ನ ಸಾವು, ಅಲ್ಲ, ಸಾವಲ್ಲ, ಕೊಲೆಯಿಂದ ಬಚಾವಾಗುವ ದುರ್ಬಲಪ್ರಯತ್ನದಲ್ಲಿ ನಾನು ಚೀರುತ್ತಿದ್ದೆ. ಓಡುತ್ತಿದ್ದೆ.

(ಮುಕುಂದ ಜೋಷಿ ಫೋಟೋ ಸೌಜನ್ಯ : ಜಯಂತ ಕಾಯ್ಕಿಣಿ)

(ಭಾಗ 2)

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

Published On - 11:52 am, Fri, 17 June 22